ಭಗವಂತ ಕೊರೊನಾ ಅವತಾರ ಏಕೆ ಎತ್ತಿರಬಾರದು?

ಕುವೆಂಪು 1935ರಷ್ಟು ಹಿಂದೆ ಯುವಕಯುವತಿಯರಿಗೆ ಕೊಟ್ಟಿದ್ದ ಕರೆ ಈಗ ನಿಜವಾಗುತ್ತಿದೆ. ಗುಡಿ ಚರ್ಚು ಮಸೀದಿಗಳ ಬಾಗಿಲು ಮುಚ್ಚುತ್ತಿವೆ. ಬರಿದಾಗುತ್ತಿದ್ದ ಹಳ್ಳಿಗಳು ಮತ್ತೆ ತುಂಬಿಕೊಂಡು ವ್ಯವಸಾಯ ಪುನಶ್ಚೇತನಗೊಳ್ಳುತ್ತಿದೆ. ದೇವರ, ಧರ್ಮದ ಹೆಸರಿನಲ್ಲಿ ಹರಡುತ್ತಿದ್ದ ಮೌಢ್ಯತೆಯ ಮಾರಿ ವಿಜ್ಞಾನ ದೀವಿಗೆಯ ಬೆಳಕಿನಲ್ಲಿ ಬಯಲಾಗುತ್ತಿದೆ.

ಸಮಾಜಮುಖಿ ತನ್ನ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳ ಸಂಯುಕ್ತ ಮುಖ್ಯ ಚರ್ಚೆಯ ವಿಷಯಗಳಾಗಿ ಆಯ್ದುಕೊಂಡಿರುವ ‘ಕೊರೊನಾ ನಂತರದ ಯುಗದ ಗುಣಲಕ್ಷಣಗಳೇನು?’ ಮತ್ತು ‘ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ?’ ಎಂಬ ಪರಸ್ಪರ ಪೂರಕ ವಿಷಯಗಳು ಬಹುಶಃ ಒಂದು ಆಕಸ್ಮಿಕ ಇರಬಹುದು. ಆದರೆ ಇಲ್ಲಿಯ ಲೇಖನಗಳು ಎಷ್ಟು ಜವಾಬ್ದಾರಿಯುತ ಮತ್ತು ಪೂರಕ ಚಿಂತನ ಸಾಮಾಗ್ರಿಗಳನ್ನು ಹುಟ್ಟುಹಾಕುತ್ತಿವೆಯೆಂದರೆ, ಪತ್ರಿಕೆಯ ಪರಿಣಿತ ಪ್ರಬುದ್ಧತೆಗೆ ಸಾಕ್ಷಿಯಾಗುವಂತಿದೆ. ಮುಖ್ಯಚರ್ಚೆ ಮಾತ್ರವಲ್ಲದೆ ಇನ್ನಿತರ ಅಂಕಣಗಳೂ ಚರ್ಚೆಗೆ ಹೊಂದಿಕೊಂಡಂತೆಯೇ ದುಡಿಯುತ್ತಿರುವುದು ನಮ್ಮ ಮುಂದಿನ ದಿನಗಳ ಭೂಮಿಯ ಜೀವನಶೈಲಿಯನ್ನೇ ಬದಲಿಸಬೇಕಾದ ಅನಿವಾರ್ಯತೆಗೆ ನಾಂದಿ ಹಾಡುವಂತಿವೆ.

ಹಾಗಾದರೆ ಈ ಶೈಲಿಯ ಸ್ವರೂಪವೇನು? ಈ ಪ್ರಶ್ನೆಯ ಉತ್ತರಕ್ಕಾಗಿ ತಡಕಾಡಬೇಕಾದ ಪ್ರಮೇಯ ಸ್ವಲ್ಪವೂ ಇಲ್ಲ. ಜಗತ್ತಿನೆಲ್ಲಾ ಮತಾಚಾರ್ಯರು ಈ ಕುರಿತು ತಮ್ಮ ಚಿಂತನೆಗಳನ್ನು ಪದೇ ಪದೇ ಹಂಚಿಕೊಂಡಿದ್ದಾರೆ. ಸಮಸ್ಯೆ ಎಂದರೆ ಆ ಯಾರ ಮಾತುಗಳನ್ನೂ ನಾವು ಯಾರೂ ಕೇಳಿಯೇ ಇಲ್ಲ ಎಂಬುದು. ಆಧುನಿಕರಾದ ನಾವು ಮಾತ್ರವಲ್ಲ, ಆ ಮಹಾಪುರುಷರ ಸಮಕಾಲೀನ ಜಗತ್ತು ಕೂಡಾ ತಕ್ಕ ಪ್ರಮಣದಲ್ಲಿ ಸ್ಪಂದಿಸಿಲ್ಲ ಎಂಬುದನ್ನು ಇತಿಹಾಸ ಕೂಗಿ ಕೂಗಿ ಹೇಳುತ್ತಿರುವುದು. ನಮಗೆ ತೀರ ಹತ್ತಿರವಾದ ಗಾಂಧೀಜಿ, ಅಂಬೇಡ್ಕರ್, ಕುವೆಂಪು ಅಂಥವರ ಕಥೆ ಕೂಡಾ ಇದಕ್ಕೆ ಹೊರತಾಗಿಲ್ಲ.

ಕರ್ನಾಟಕದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸುರಂಥವರೇ ನಮ್ಮ ದಿನನಿತ್ಯದ ಮಾತುಗಳ ಚರ್ವಿತಚರ್ವಣವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಬ್ರಾಹ್ಮಣ, ವೀರಶೈವ, ಒಕ್ಕಲಿಗ, ಕೋಮುಗಳ ತಲಾ ಮೂರ್ನಾಲ್ಕು ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಅವರಲ್ಲಿ ಯಾರೊಬ್ಬರೂ ತಮ್ಮ ತಮ್ಮ ಮತಾಚಾರ್ಯರ ಸರ್ವಮಾನ್ಯ ಜೀವನ ಸಂದೇಶ(ಉದಾ: ಕಳಬೇಡ ಕೊಲಬೇಡ)ವನ್ನು ಕಾರ್ಯಗತಗೊಳಿಸುವ ಯಾವ ಕೆಲಸವನ್ನೂ ಮಾಡಲಿಲ್ಲ. ಕುವೆಂಪು ಅಂಥ ಸರ್ವತೋಮುಖ ಸಮರ್ಥ ಚಿಂತಕನನ್ನು ಬೆನ್ನಿಗಿಟ್ಟುಕೊಂಡು ರಾಜ್ಯಭಾರ ಮಾಡಿದ ಯಾವ ನಾಯಕನೂ ಅವರ ಹೆಸರನ್ನು ಹೇಳಲೂ ಸರಿಯಾಗಿ ಕಲಿಯಲಿಲ್ಲ.

ಕುವೆಂಪು ಅವರ ಜನ್ಮೋತ್ಸವವನ್ನು ರಾಜ್ಯೀಕರಣಗೊಳಿಸುವ ಅನವಶ್ಯಕ ಸಂಪ್ರದಾಯ ಸೃಷ್ಟಿಸಿ ನಾಡಿಗೆ ಹೊರೆಯಾದದ್ದೇ ಒಂದು ದೊಡ್ಡ ಸಾಧನೆ ಎಂಬಂತೆ ಬೀಗುವವರಿದ್ದಾರೆ. ಇದನ್ನೆಲ್ಲ ಅಳಿಸಿಹಾಕಿ ಸರಿಯಾದ ದಾರಿ ತೋರಿಸಲು ಈ ಕೊರೊನಾ ಕ್ರಿಮಿ ಅವತರಿಸಿದೆ ಎಂದಾದರೆ ಅದಕ್ಕೆ ಹೃತ್ಪೂರ್ವಕ ಸ್ವಾಗತವನ್ನು ನಾನು ಕೋರುತ್ತೇನೆ. ಯಾಕೆಂದರೆ ಇನ್ನು ಕೆಲವೇ ದಿನಗಳಲ್ಲಿ ಸರ್ವನಾಶವಾಗುತ್ತಿದ್ದ ಭೂಮಿಯನ್ನು ಅದು ತುಸು ರಕ್ಷಿಸುತ್ತಿದೆ. ಆಮೆ, ಹಂದಿ ಮೀನುಗಳ ಅವತಾರವೆತ್ತಿರುವ ಭಗವಂತ ಕೊರೊನಾವತಾರ ಏಕೆ ಎತ್ತಿರಬಾರದು?

*

ಕುಡಿದವರೂ ಕುಡಿಯದವರೂ ಇಬ್ಬರೂ ಒಟ್ಟಿಗೆ ಒಂದೇ ರೀತಿಯಲ್ಲಿ ವರ್ತಿಸುತ್ತಿದ್ದ ಈ ಜಗತ್ತಿನ ಈ ಹೊತ್ತಿಗೆ ಸರಿಯಾಗಿ ಕೊರೊನಾ ವೈರಸ್ ವಕ್ಕರಿಸಿರುವುದನ್ನು ಕಂಡು ಭೂಮಿ ಕೊಂಚ ನಿಟ್ಟುಸಿರು ಬಿಡುವಂತಾಗಿರುವುದು ಬಹುಶಃ ಕಾಕತಾಳೀಯವಲ್ಲ. ಜಗತ್ತಿನ ಮಾನವ ಬದುಕಿನ ಮೇಲುವರ್ಗದ ಶ್ರೀಮಂತ ಹುನ್ನಾರಗಳು ಮಧ್ಯಮವರ್ಗದ ಮೂರ್ಖತನದ ದುರಾಸೆಗಳನ್ನು ಹುಟ್ಟಿಸಿ ಮತ್ತು ಅವನ್ನೇ ಬಂಡವಾಳ ಮಾಡಿಕೊಂಡು ಅಸಂಖ್ಯ ತಳಸಮುದಾಯಗಳನ್ನು ಇಡಿಯಾಗಿ ಮಹಿಳಾ ಲೋಕವನ್ನು ಒಳಗೊಂಡಂತೆ ಹಿಂಡಿ ಹಿಪ್ಪೆ ಮಾಡುತ್ತಿದ್ದ ಹೊತ್ತಿಗೆ ಸರಿಯಾಗಿ ಕೋವಿಡ್19 ಅಟಕಾಯಿಸಿಕೊಂಡಿರುವುದನ್ನು ಕಂಡು ಪ್ರಕೃತಿ ಏದುಸಿರು ಕೊಂಚ ನಿಲ್ಲಿಸಿ ಚೇತರಿಕೆ ಕಾಣುತ್ತಿರುವುದು ಪ್ರಾಯಶಃ ಕಾಕತಾಳೀಯವಲ್ಲ. ಐನ್‌ಸ್ಟೆöÊನ್, ರಸೆಲ್, ಹಾಕಿಂಗ್‌ರಂಥ ಮಹಾವಿಜ್ಞಾನಿಗಳು, ಎಳೆಯ ತಲೆಮಾರಿನ ಕುದಿಹಕ್ಕೆ ಸ್ಪಂದಿಸಿದ ಪ್ರತಿನಿಧಿಯಂತೆ ಸಿಡಿದೆದ್ದು, ಜಗದ್ವಾಪಿ ಕೇಳುವಂತೆ ‘ನಿಮಗೆಷ್ಟು ಧೈರ್ಯ?’ ಎಂದು ಕಿರಿಚಿದ ಗ್ರೇಟಾ ಥನ್‌ಬರ್ಗ್ ಳ ಅಸಹನೆಯ ಗುಡುಗು ಕೂಡಾ ಕಾಕತಾಳೀಯ ಅಲ್ಲ. ಈ ವೈರಾಣು ಮನುಷ್ಯ ನಿರ್ಮಿತವಿರಲಿ ಅಥವಾ ಪ್ರಕೃತಿ ಸೃಷ್ಟಿಯಿರಲಿ ಒಟ್ಟಾರೆಯಾಗಿ ಭೂಮಿಯನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿದ್ದ ಮಾನುಷ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಇದು ಅನಿವಾರ್ಯವಾಗಿತ್ತು.

ಕಾಕತಾಳೀಯ ಏನೆಂದರೆ ಕೈಲಾದಷ್ಟು ಕೆಲಸ ಮಾಡಿ ಮುಗಿಸಿ ಇನ್ನುಳಿದದ್ದು ‘ನಿಮ್ಮಿಷ್ಟ’ ಎಂಬಂತೆ ಮಲಗಿ ನಿದ್ರಿಸುತ್ತಿದ್ದ ಬುದ್ಧ, ಮಹಾವೀರ, ಸಾಕ್ರೆಟಿಸ್, ಬಸವರಂಥ ಪುಣ್ಯಾತ್ಮರನ್ನು ತಮತಮಗೆ ತೋಚಿದಂತೆ ಕತೆ ಹೇಳುತ್ತ ಅಸಹಾಯಕರಂತೆ ಎಳೆದು ತಂದು ಅಖಾಡಕ್ಕಿಳಿಸುತ್ತಿರುವುದು. ವೈಜ್ಞಾನಿಕ ವಿವೇಕ ಹೊರತಾಗಿ ಇಲ್ಲಿ ಬೇರೆ ಯಾವುದೂ ಕೆಲಸ ಮಾಡುವುದಿಲ್ಲ ಎಂಬ ಎಚ್ಚರಿಕೆ ಇಲ್ಲಿಗೆ ಪ್ರಸ್ತುತ. ಆ ವಿವೇಕ ನಮ್ಮ ವೈದ್ಯಕೀಯ ರಂಗದಲ್ಲಿ, ರಕ್ಷಣಾ ಕ್ಷೇತ್ರದಲ್ಲಿ, ಸಾರ್ವಜನಿಕ ಸ್ವಚ್ಛತಾ ವಿಭಾಗದಲ್ಲಿ ಮೈದುಂಬಿ ಬಂದಂತೆ ಕೆಲಸ ಮಾಡತೊಡಗಿದೆ. ಆ ವಿವೇಕಕ್ಕೆ ಆದಷ್ಟು ದೂರ ದೂರ ನಿಂತು ಬೆಂಬಲಪೂರ್ವಕ ಕೃತಜ್ಞತೆ ಸೂಚಿಸುವುದರ ಜತೆಗೆ ಕೈಲಾದ ಪರಿಹಾರ ಮಾರ್ಗಗಳನ್ನು ಹುಡುಕುವುದರ ಹೊರತಾಗಿ ಬೇರೆ ದಾರಿಗಳಿಲ್ಲ. ಇದರ ಜತೆಗೆ ಭೌತಿಕವಾಗಿ ದೂರ ದೂರ ಇದ್ದು, ಮಾನಸಿಕವಾಗಿ ಹತ್ತಿರ ಹತ್ತಿರ ಎನ್ನಿಸುವ ಹೊಸ ಸಾಂಸ್ಕೃತಿಕ ಕಲೆಯನ್ನು ನಾವು ಸಾಧಿಸಬೇಕಾಗಿದೆ. ಇಂಥ ವಿಷಯಗಳಲ್ಲಿ ನಿರಕ್ಷರ ಕುಕ್ಷಿಗಳಾದ ನಮ್ಮ ರಾಜಕಾರಣಿಗಳು ಸರ್ವಜ್ಞರಂತೆ ವರ್ತಿಸುವುದರ ಬದಲು ತಜ್ಞರ ಅಭಿಪ್ರಾಯಕ್ಕೆ ಬೆಲೆತೆತ್ತು ವರ್ತಿಸುವದು ಲೇಸು.

*

ಭೂಮಿ ಈಗಾಗಲೇ ಇಂಥ ಎಷ್ಟೋ ಸಮಸ್ಯೆಗಳನ್ನು ಕಂಡಿದೆ ಮತ್ತು ಪರಿಹಾರಗಳನ್ನು ಕಂಡುಕೊಂಡಿದೆ. ಆ ಯಾವುದಕ್ಕೂ ಇದು ದೊಡ್ಡದೇನೂ ಅಲ್ಲ. ಹಿಂದೆಂದಿಗಿಂತಲೂ ಈಗ ವೈಜ್ಞಾನಿಕ ಪ್ರಗತಿ ಮತ್ತು ವಿವೇಕ ಹೆಚ್ಚಿರುವುದರಿಂದ ಅದರ ಉಪಯೋಗವನ್ನು ಉದಾರವಾಗಿ ಪಡೆದುಕೊಂಡು ಇನ್ನು ಮುಂದಾದರೂ- ಜ್ಞಾನದ ಹೊರತಾಗಿ- ಕೊಂಚ ಕೃಪಣ ಜೀವನ ನಡೆಸುವುದನ್ನು ಮರ್ಯಾದೆಯಾಗಿ ಕಲಿಯಬೇಕಾಗಿದೆ. ಇಲ್ಲವಾದಲ್ಲಿ ಕೊರೊನಾ ವೈರಸ್ಸಿನಂಥ ಕ್ರಿಮಿಕೀಟಗಳಿಂದ ಮರ್ಯಾದೆ ಕೆಟ್ಟು ಕಲಿಯಬೇಕಾಗುತ್ತದೆ. ಇಲ್ಲಿಯ ಎರಡನೆಯ ಮರ್ಯಾದೆಗೇಡಿನ ವಿಷಯಕ್ಕೆ ನಾನು ತಯಾರಿಲ್ಲ. ನೀವು ಹೇಗೋ ನನಗೆ ಗೊತ್ತಿಲ್ಲ. ಏಕೆಂದರೆ ಕೊರೊನಾ ಕಾಲದಲ್ಲಿ ಹೇಗೋ ಕೊರೊನಾ ಪೂರ್ವದಲ್ಲಿಯೂ ಹಾಗೆಯೆ ನನ್ನ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆಯೂ ಆಗಿರಲಿಲ್ಲ. ಹಾಗೆಯೇ ಅದು ಸರಾಗವಾಗಿ ಮುಂದುವರಿಯುತ್ತದೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಅದರ ಸ್ವರೂಪವನ್ನು ಕೆಲವು ಮಾತುಗಳಲ್ಲಿ ಇಲ್ಲಿ ಬರೆದುಕೊಂಡರೆ ತಾವು ತಪ್ಪು ತಿಳಿಯುದಿಲ್ಲ ಎಂದು ಭಾವಿಸುತ್ತೇನೆ.

ನನ್ನ ಅನಿಸಿಕೆಯಲ್ಲಿ ಈ ಅನಂತ ಸುಂದರ ಭೂಮಿಯ ಮೇಲೆ ಪರಸ್ಪರ ಹೊಂದಿಕೊಂಡು ಆನಂದವಾಗಿ ಬದುಕುವುದಕ್ಕೆ ಇಷ್ಟೊಂದು ಸಂಪತ್ತಿನ ಸೃಷ್ಟಿ ಮತ್ತು ಈ ಎಲ್ಲ ಬಗೆಯ ಜ್ಞಾನದ ಆಧಿಕ್ಯ ಖಂಡಿತ ಬೇಕಾಗಿಲ್ಲ. ಮನುಷ್ಯನಿಗೆ ಜನ್ಮಜಾತವಾಗಿ ಬಂದಿರುವ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುತ್ತಿರುವ ಶಕ್ತಿ ‘ಜ್ಞಾನ’ದ ಹೆಸರಲ್ಲಿ ಮಾರಾಟದ ವಸ್ತುವಾಗಿ ಪರಿಣಾಮಗೊಂಡದ್ದು ಭೂಮಿಯ ದುರ್ದೈವವೋ ಏನೋ. ಮಾನುಷ ಜ್ಞಾನದ ಅನಂತ ಶಕ್ತಿಯಂತಿರುವ ‘ಆಧ್ಯಾತ್ಮ’ ವ್ಯಕ್ತಿತ್ವ ವಿಕಾಸದ ವೈಯಕ್ತೀಕರಣವಾಗುವುದರ ಬದಲು ಪೈಪೋಟಿಗೆ ಬಿದ್ದಂತೆ ಸಂತೆಯ ಸರಕಾಗುತ್ತಿರುವುದು ಅದರ ಘನತೆಯನ್ನೆ ಹಾಳುಗೆಡವಿಬಿಟ್ಟಿದೆ. ಈ ಎಲ್ಲವೂ ಕೂಡಿಕೊಂಡೆ ಈ ಕೊರೊನಾ ಪಿಡುಗನ್ನು ಸೃಷ್ಟಿಸಿರುವುದು. ಈಗಲೂ ಕಾಲ ಮಿಂಚಿಲ್ಲ. ಪರಿಹಾರ ನಮ್ಮ ಕೈಯಲ್ಲಿಯೇ ಇದೆ. ಬೇಕಾದರೆ ಮುಂದೆ ನೋಡಿ;

1.ಕುವೆಂಪು 1935ರಷ್ಟು ಹಿಂದೆ ಯುವಕಯುವತಿಯರಿಗೆ ಕೊಟ್ಟಿದ್ದ ಕರೆ ಈಗ ನಿಜವಾಗುತ್ತಿದೆ. ಗುಡಿ ಚರ್ಚು ಮಸೀದಿಗಳ ಬಾಗಿಲು ಮುಚ್ಚುತ್ತಿವೆ. ಬರಿದಾಗುತ್ತಿದ್ದ ಹಳ್ಳಿಗಳು ಮತ್ತೆ ತುಂಬಿಕೊಂಡು ವ್ಯವಸಾಯ ಪುನಶ್ಚೇತನಗೊಳ್ಳುತ್ತಿದೆ. ಇಡೀ ಜಗತ್ತು ಬಡತನದಿಂದ ತುಂಬಿತುಳುಕುತ್ತಿದ್ದ ಕೊಳೆಗೇರಿಯನ್ನು ಪುನಾರಚಿಸುವುದಕ್ಕೆ ಅಣಿಯಾಗುತ್ತಿದೆ. ದೇವರ, ಧರ್ಮದ ಹೆಸರಿನಲ್ಲಿ ಹರಡುತ್ತಿದ್ದ ಮೌಢ್ಯತೆಯ ಮೂಲ ವಿಜ್ಞಾನ ದೀವಿಗೆಯ ಬೆಳಕಿನಲ್ಲಿ ಬಯಲಾಗುತ್ತಿದೆ. ಇದು ಶಾಶ್ವತವಾಗುವಂತಾದರೆ ಮನುಷ್ಯ ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡಂತಾಗುತ್ತದೆ.

2.ಮನೆಯ ಹೊರಗಡೆಯ ಕೆಲಸ ‘ಅಲ್ಪ’ಕ್ಕೆ ಇಳಿಯುವಂತಾದರೆ ಮನೆ ಮತ್ತು ಮನಸ್ಸಿನೊಳಗಣ ಕೆಲಸ ಭೂಮಕ್ಕೇರುವುದರಲ್ಲಿ ಅನುಮಾನವಿಲ್ಲ. ಆದರೆ ಅದು ವೈದಿಕ ರೀತಿಯ ಧ್ಯಾನ, ಯೋಗ, ಪ್ರಾಣಾಯಾಮಗಳ ಮೂಲಕ ಸಾರ್ವಜನಿಕ ಮತ್ತು ಸಾರ್ವಕಾಲಿಕವಾಗಲಾರದು. ಅಂಥದನ್ನು ಅಲ್ಪಕ್ಕಿಳಿಸಿಕೊಂಡು ಜಗತ್ತಿನೆಲ್ಲ ಜ್ಞಾನ ಮತ್ತು ಮಹಾಪುರುಷರ ಸಾಧನೆ ಸಿದ್ಧಿಗಳನ್ನು ಕುರಿತು ಅಧ್ಯಯನ ಮಾಡುವುದರ ಮೂಲಕ ಹುಟ್ಟನ್ನು ಖಂಡಿತವಾಗಿಯೂ ಭೂಮಕ್ಕೇರಿಸಿಕೊಂಡು ಸಾರ್ಥಕಗೊಳ್ಳಬಹುದು. ಇದನ್ನು ಸಾಧಿಸುವುದಕ್ಕೂ ಬಹುಶಃ ಒಂದು ಜನ್ಮ ಸಾಲದು.

3.ಇನ್ನುಳಿದದ್ದು ಭೂಮಿಗೆ ಅತ್ಯಂತ ಪ್ರಿಯವಾದ ಸರಳ ಜೀವನ. ಈ ಮೇಲಿನೆರಡು ಈಡೇರುತ್ತಿದ್ದಂತೆಯೇ ಈ ಮೂರನೆಯದು ತನಗೆ ತಾನೇ ಅನುಷ್ಠಾನಗೊಳ್ಳಲು ಆರಂಭವಾಗುತ್ತದೆ. ಜಗತ್ತಿನೆಲ್ಲ ಮಹಾವಿಜ್ಞಾನಿಗಳ ಕಡೆಗೆ ಒಂದು ಸಲ ಕಣ್ಣೆತ್ತಿ ನೋಡಿ. ಆಗ ನಿಮಗೆ ತಿಳಿಯುತ್ತದೆ, ಜ್ಞಾನದಾಹ ಹೆಚ್ಚುತ್ತಿದ್ದಂತೆಯೆ ಲೌಕಿಕ ಸುಖಸಾಧನೆಯ ಮೂಲವಾದ ಸಂಪತ್ತಿಗೆ ಆರ್ಜನೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಅಕ್ಕಪಕ್ಕದವರ ವಿಷಯದಲ್ಲಿ ಪ್ರೀತಿ ಸಹಾನುಭೂತಿಗಳು ವೃದ್ಧಿಯಾಗುತ್ತವೆ. ಕೊರೊನಾ ಕಾರಣದ ದೈಹಿಕ ಅಂತರ ಮಾನಸಿಕ ಸಾಮೀಪ್ಯವಾಗಿ ಪರಿಣಾಮಗೊಂಡು ಅಭೂತಪೂರ್ವ ಶಾಂತಿ-ಸುಭಿಕ್ಷಗಳು ನೆಲೆನಿಂತು ಭೂಕೈಲಾಸ ಕರತಲಾಮಲಕವಾಗುವುದರಲ್ಲಿ ನನಗಂತೂ ಅನುಮಾನವಿಲ್ಲ. ಯಾಕಂದರೆ ಕಳೆದ ಅರವತ್ತು ವರ್ಷಗಳಿಂದ ಅಂಥದೊಂದು ಬದುಕನ್ನು ಸಕುಟುಂಬಿಯಾಗಿ ನಾನು ಸಾಕ್ಷಾತ್ಕರಿಸಿಕೊಂಡಿದ್ದೇನೆ.

ನನಗೀಗ 81 ವರ್ಷ. ದೇವರನ್ನು ನಂಬಿಲ್ಲದ ನಾನು ದೈವ ಸ್ವರೂಪಿ ಪ್ರಕೃತಿಯನ್ನು ನಂಬಿ ಸಮೃದ್ಧವಾಗಿ ಬದುಕಿದ್ದೇನೆ. ಮೈಸೂರಿನ ಮಗನ ಮನೆಯಲ್ಲಿಯೇ ಆಗಲಿ, ಬೆಂಗಳೂರಿನ ಮಗಳ ಮನೆಯಲ್ಲಿಯೇ ಆಗಲಿ ಪುಸ್ತಕಗಳು ಕಣ್ಣಿಗೆ ಕಟ್ಟಿ ನಿಲ್ಲುತ್ತವೆ. ಮಕ್ಕಳಿಗೆ ಹೆಚ್ಚು-ಕಮ್ಮಿಯಾದ ಬಟ್ಟೆಗಳು ಮೈ ಮುಚ್ಚುತ್ತವೆ. ಓಡಾಡಲು ಮರ‍್ನಾಲ್ಕು ಸೈಕಲ್ಲುಗಳಿವೆ. ಬೆಳಿಗ್ಗೆ ಐದು ಗಂಟೆಯಿಂದ 2 ಗಂಟೆ ಗಿಡಮರಗಳಿಗೆ ನೀರು ನಿಡಿ ನೋಡಿ ಮನೆಗೆ ಬಂದರೆ ಉಳಿದಂತೆ ಸ್ವಯಂ ಗೃಹಬಂಧಿ. ತಲೆಗೆ ಎಣ್ಣೆ, ಮೈಗೆ ಸಾಬೂನು, ಹಲ್ಲಿಗೆ ಪೇಸ್ಟು ಬಳಸಿಲ್ಲ. ಮುಖಕ್ಕೆ ಕ್ರೀಮು ಇತ್ಯಾದಿಯಾದ ಯಾವುದನ್ನೂ ದಶಕಗಳಿಂದ ಬಳಸಿಲ್ಲ. ಆ ಜಾಗವನ್ನು ಲೋಳೆಸರ, ಬೇವು, ತುಂಬೆ, ರೋಜಾಲ ಮುಂತಾದ ಸೊಪ್ಪಿನ ರಸಗಳು ತುಂಬಿವೆ. ಜೊತೆಗೆ ಮರ‍್ನಾಲ್ಕು ಲೀಟರಿನಷ್ಟು ನೀರಿನ ಸ್ನಾನ. ಇದು ಎಲ್ಲರಿಗೂ ಮಾನ್ಯ ಎಂದರೆ ಭೂಮಿಯ ಆರೋಗ್ಯವನ್ನು ನೀವೇ ಊಹಿಸಿಕೊಳ್ಳಿ.

ಇನ್ನು ಆಹಾರಕ್ಕೆ ಬಂದರೆ ಬೆಳಿಗ್ಗೆ 100 ಗ್ರಾಂ ಕುಸುಬಲಕ್ಕಿ, ಮಧ್ಯಾಹ್ನ 100 ಗ್ರಾಂ ರಾಗಿ, ಸಂಜೆ 100 ಗ್ರಾಂ ಗೋಧಿ ಮತ್ತು ಇವುಗಳಿಗೆ ಹೊಂದಿಕೊಳ್ಳುವಂತೆ ಮಜ್ಜಿಗೆ, ತರಕಾರಿ ಪರಿಕಾರಗಳು. ಒಂದು ಗುಳಿಗೆಯನ್ನೂ ನುಂಗದಂತೆ ಆರೋಗ್ಯವನ್ನು ಉನ್ನತಮಟ್ಟದಲ್ಲಿಟ್ಟಿವೆ. ನನ್ನ ಖರ್ಚೆಂದರೆ ಸೈಕಲ್ ರಿಪೇರಿಯೊಂದೆ. ಎಲ್ಲ ಸೇರಿ ದಿನವೊಂದಕ್ಕೆ ಎಷ್ಟು ಖರ್ಚಾಗಬಹುದೆಂದು ನೀವೇ ಲೆಕ್ಕ ಹಾಕಿ. ಗಾಂಧೀಜಿಯವರ ಮನಸಿನಲ್ಲಿ ಈ ಬಗೆಯ ಒಂದು ಸರಳ ಜೀವನದ ಕಲ್ಪನೆಯಿತ್ತೊ ಇಲ್ಲವೊ ನಾನು ಕಾಣೆ. ಆದರಿದು ಕೊರೊನಾ ಕಾಲಕ್ಕೆ ಮಾತ್ರವಲ್ಲ, ಎಲ್ಲ ಕಾಲದ ಎಲ್ಲ ಪ್ರದೇಶಕ್ಕೂ ಪ್ರಯೋಗ ಸಾಧ್ಯ.

ಓದಿ ಬರೆಯುವುದರ ಜತೆಗೆ ಗಟ್ಟಿಮುಟ್ಟಾದ ಕೆಲಸಗಳನ್ನು ಮಾಡಿಕೊಂಡು ವೈಜ್ಞಾನಿಕ ಆಧ್ಯಾತ್ಮಿಯಾಗಿ ಅತ್ಯಂತ ಸುಖದ ಜೀವನವನ್ನು ಸಕುಟುಂಬಿಯಾಗಿ ಅನುಭವಿಸುತ್ತಾ ಹಾಯಾಗಿದ್ದೇನೆ. ಇನ್ನೊಂದು ಐವತ್ತು ರೂಗಳನ್ನು ಹೆಚ್ಚು ಮಾಡಿಕೊಂಡಾದರೂ ಚಿಂತೆಯಿಲ್ಲ., ಯಾಕೆ ನೀವು ಕೂಡ ನನ್ನ ಜತೆ ಸೇರಬಾರದು? ಕೊರೊನಾ ಕೂಡ ಒಂದು ಜೀವಿ. ಅದನ್ನೂ ಬದುಕಲು ಬಿಟ್ಟು ಅದರ ತಂಟೆಗೆ ನೀವು ಹೋಗದೆ ನಮ್ಮ ತಂಟೆಗೆ ಅದು ಬಾರದಂತೆ ಎಚ್ಚರವಹಿಸಿ ಬದುಕಿದರಾಯ್ತು ಅಷ್ಟೆ. ಇದಕ್ಕೆ ಪೂರಕವಾಗಿ ನನ್ನ ‘ಜವನಕ್ಕ’ ಮತ್ತು ‘ಕಡಿವಾಣ’ ಕಾದಂಬರಿಗಳನ್ನು ಓದಿ ನೋಡಿ. ದೂರದಿಂದಲೆ ನಮಸ್ತೆ.

*ಲೇಖಕರು ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರು; ಸಾಹಿತ್ಯ ವಿಮರ್ಶಕರು ಹಾಗೂ ಸೃಜನಶೀಲ ಬರಹಗಾರರು. ವೈಚಾರಿಕತೆ ಅವರ ಚಟುವಟಿಕೆಗಳ ಕೇಂದ್ರಬಿಂದು.

Leave a Reply

Your email address will not be published.