ಭತ್ತ ಬೇಸಾಯದ ಪರಿ

ಹಿಂದೆ ಬೇಸಾಯ ಬಹು ಶ್ರಮದ ಕೆಲಸ ಆಗಿದ್ದರೂ ಅದರಲ್ಲೊಂದು ಸುಖ ಇತ್ತು. ಈಗ ಎಲ್ಲಾ ಸುಲಭ; ಸುಖ ಮಾತ್ರ ಇಲ್ಲ!

ನಾನು ವಿವಾಹವಾಗಿ ಊರು ಬಿಟ್ಟ ಮೇಲೂ ನಮ್ಮೂರ ಬೆಟ್ಟ ಬೈಲು ಹಸಿರಿನಿಂದ ನಳನಳಿಸುತ್ತಿತ್ತು. ಮಳೆಗಾಲದಲ್ಲಿ ಹುಲ್ಲು ಪೊದೆಗಳು ಸೊಕ್ಕಿ ಬೆಳೆಯುತ್ತಿದ್ದುವು. ಮಳೆಗಾಲದ ಸಾಗುವಳಿ ಕೆಲಸ ಮುಗಿದ ಮೇಲೆ ಕಾಡಿನ ಸೊಪ್ಪನ್ನು ಕಡಿದು ಕೊಟ್ಯದ ನೆಲಕ್ಕೆ ಹಾಸುತ್ತಿದ್ದರು.

ಸೋಣ ತಿಂಗಳಲ್ಲಿ ಕೆಯ್ ಪಾಯಾಗು (ತೆನೆ ಬಿಡುವುದು)ತ್ತಿತ್ತು. ಸೋಣ ತಿಂಗಳ ಗೌರಿ ಹಬ್ಬ-ಚೌತಿಗೆ ಮನೆಗಳಿಗೆ ತೆನೆ ತುಂಬಿಸುತ್ತಿದ್ದರು. ಸೋಣ ತಿಂಗಳ ಕೊನೆಗೆ ಕೆಯ್ ಬಂಗಾರಬಣ್ಣ ತಳೆಯುತ್ತಿತ್ತು. ಬೆಟ್ಟಬೈಲುಗಳೆಲ್ಲ ಬಂಗಾರಬಣ್ಣದ ತೆನೆ ಭಾರದಿಂದ ನೆಲಕ್ಕೆ ಬಾಗುತ್ತಿತ್ತು. ಕನ್ಯಾ ಆರಂಭವಾಯಿತೆಂದರೆ ಕೊಯ್ಲಿನ ಕೆಲಸ. ನನಗೆ ಈಗಲೂ ನೆನಪಿದೆ. ಕೆಯ್ ಕೊಯ್ಯುವ ಆಳುಗಳಿಗೆ ಸುಮಾರು 11 ಗಂಟೆಯ ಹೊತ್ತಿಗೆ ಗದ್ದೆಯ ಬಳಿಗೆ ನಾನೇ ಗಂಜಿ ನೀರು ಕೊಂಡು ಹೋಗುತ್ತಿದ್ದುದು. 5ನೆಯ ತರಗತಿಯಲ್ಲಿರುವಾಗಲೇ ಈ ಕೆಲಸ ಶುರು ಮಾಡಿದ್ದೆ. ಬಡತನದ ಆ ಕಾಲದಲ್ಲಿ ಅವರು ಮನೆಯಲ್ಲಿ ಅರೆಹೊಟ್ಟೆ ಉಂಡು ಬರುತ್ತಿದ್ದರು. ಕೃಷಿ ಕಾರ್ಮಿಕರಿಗಾಗಿ ನಮ್ಮ ಮನೆಯಲ್ಲಿ ಗಂಜಿ ಬೆಂದ ಮೇಲೆ ಮಧ್ಯಾಹ್ನಕ್ಕೆ ಆಗುವಷ್ಟು ಅನ್ನ ಬಸಿದು ಉಳಿದ ಗಂಜಿಗೆ ಉಪ್ಪಿನಕಾಯಿ ಬೆರಸಿ ಒಂದು ಮಡಕೆಯಲ್ಲಿ ಹಾಕಿ ಅಮ್ಮ ನನ್ನ ಕೈಗೆ ಕೊಡುತ್ತಿದ್ದರು. ಆ ಮಡಕೆಯನ್ನು ನಾನು ನನ್ನ ಪುಟ್ಟ ಸೊಂಟದಲ್ಲಿ ಇಟ್ಟುಕೊಂಡು ಕೊಯ್ಲು ಮಾಡುವ ಗದ್ದೆಗಳಿಗೆ ಹೋಗಿ ಕೊಡುತ್ತಿದ್ದೆ,

ಎಲ್ಲಾ ರೈತರ ಮನೆಗಳಲ್ಲೂ ಈ ಕೆಲಸ ಮಕ್ಕಳ ಪಾಲಿಗೆ. ಕೃಷಿ ಕಾರ್ಮಿಕರು ಈ ಗಂಜಿಯ ಸ್ವಾದವನ್ನು ಅನುಭವಿಸುತ್ತಾ ಲೋಟದಲ್ಲಿ ಹುಯ್ದುಕೊಂಡು ತಿನ್ನುತ್ತಿದ್ದರು. ಅದಕ್ಕೊಂದು ರುಚಿ ಇತ್ತು. ಕೆಲವು ಸಲ ಅವರೊಂದಿಗೆ ನಾನೂ ಕುಡಿಯುವುದಿತ್ತು. ಇಲ್ಲಿ ಜಾತಿ ಭೇದ ಇಲ್ಲ.

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ಒಂದು ಬಾರಿ ನಾನು ಮಡಕೆಯನ್ನು ಸೊಂಟದ ಮೇಲಿಟ್ಟು ಗದ್ದೆಯ ಬದುವಿನ ಮೇಲೆ ನಡೆಯುತ್ತಾ ಮನೆ ಮುಂದಿನ ಬಾಕಿಮಾರು ದಾಟಿದೆ. ಅಲ್ಲಿಂದ ಕೆಳಭಾಗದ ಬೈಲುಗದ್ದೆಗೆ ಇಳಿಯಲು ಅರ್ಧಂಬರ್ಧ ಮೆಟ್ಟಲುಗಳಿದ್ದುವು. ನಾನು ಮೆಟ್ಟಲು ಇಳಿಯುವಾಗ ಮಡಕೆ ಸರ್ರಂತ ನನ್ನ ಸೊಂಟದಿಂದ ಜಾರಿ ದೊಪ್ಪಂತ ನೆಲದ ಮೇಲೆ ಬಿತ್ತು. ಅನ್ನದ ಅಗುಳು ಮಾತ್ರ ಹಸಿರು ನೆಲದ ಮೇಲೆ ಮುತ್ತು ಪಸರಿದಂತೆ ಕಾಣುತ್ತಿತ್ತು. ನಾನು ಜೋರಾಗಿ ಅತ್ತು ಬಿಟ್ಟಿದ್ದು ನೆನಪು. ಅತ್ತಿದ್ದು ಗಂಜಿ ಮಣ್ಣಿನಲ್ಲಿ ಸೇರಿತು ಎಂದಲ್ಲ. ಮಡಕೆ ಒಡೆಯಿತು, ಮನೆಯಲ್ಲಿ ಬೈತಾರೆ ಎಂದು. ಕೊಯ್ಲು ಮಾಡುತ್ತಿದ್ದ ಕೃಷಿ ಕಾರ್ಮಿಕರು ನನ್ನತ್ತ ತಲೆ ಎತ್ತಿ ನೋಡಿದರು. ‘ದಾನೆ ಮಗಾ? ನಿಧಾನ ಬರ್ರೆ ಆತಂತಾ/ಪೋ ಬೆಲ್ಲ ನೀರ್ ಪತೊಂದು ಬಲಾ?’ (ಏನು ಮಗಾ ನಿಧಾನ ಬರಲು ಆಗಲ್ಲವಾ? ಹೋಗು ಬೆಲ್ಲ ನೀರು ತಾ..) ಎಂದರು. ಮನೆಯಲ್ಲಿ ಗಂಜಿ ಉಳಿದಿರಲ್ಲ ಎಂದು ಅವರು ಬಲ್ಲರು. ಹೀಗಾಗಿ ಬೆಲ್ಲ ನೀರು ತರಲು ಕೃಷಿಯಾಳುಗಳಿಂದ ಆದೇಶ! ನಾನು ಪಾಲಿಸಿದೆ.

ಆ ದಿನಗಳಲ್ಲಿ ಕೃಷಿಯಾಳುಗಳ ಕೊರತೆ ಇತ್ತು. ಕೃಷಿ ಕಾರ್ಮಿಕರು ಬೀಡಿ ಕಾರ್ಮಿಕರಾಗಿ ಪರಿವರ್ತಿತರಾಗಿದ್ದರು. ವಯಸ್ಸಾದವರು ಮಾತ್ರ ಬೇಸಾಯದ ಕೆಲಸಗಳಿಗೆ ಬರುತ್ತಿದ್ದರು.

ಮಧ್ಯಾಹ್ನ ಊಟಕ್ಕೆ ಕೃಷಿಯಾಳುಗಳು ಮನೆಗೆ ಬರುತ್ತಿದ್ದರು. ಮಳೆಗಾಲ ಆದರೆ ಊಟಕ್ಕೆ ಗಂಜಿ ಮತ್ತು ನೀರುಪ್ಪಡ್ (ಉಪ್ಪುನೀರಲ್ಲಿ ಹಾಕಿಡುತ್ತಿದ್ದ ಮಾವು ಸೌತೆಕಾಯಿ, ಹೆಬ್ಬಲಸು ಇತ್ಯಾದಿ) ಪಲ್ಯ ಕೊಡುವುದಿತ್ತು.

ಅನ್ನ ಮಾಡಿದರೆ ಕುಡುತ್ತಸಾರ್ (ಕೋಣಗಳಿಗೆ ಬೇಯಿಸಿದ ಹುರುಳಿ ನೀರನ್ನು ಸಾರು ಮಾಡುವುದು) ಮಾಡುತ್ತಿದ್ದರು. ಅಥವಾ ಸೌತೆಕಾಯಿ ಸಾಂಬಾರ್ ಮಾಡುವುದಿತ್ತು.

ನಮ್ಮೂರಿನ ಮಹಿಳಾ ಕೃಷಿಕಾಮಿಕರಿಗೆ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ‘ಗಂಜಿತೆಲಿ’ ಕೊಡುತ್ತಿದ್ದ ಪರಿಸ್ಥಿತಿ ಬದಲಾಯಿತು. 11 ಗಂಟೆಯ ಹೊತ್ತಿಗೆ ಚಾ ತಿಂಡಿ ಸರಬರಾಜು ಮಾಡಬೇಕಾಯಿತು. ಈ ಬದಲಾವಣೆ 1975ರ ಹೊತ್ತಿಗೆ ಆಯಿತು. ಆ ದಿನಗಳಲ್ಲಿ ಕೃಷಿಯಾಳುಗಳ ಕೊರತೆ ಇತ್ತು. ಕೃಷಿ ಕಾರ್ಮಿಕರು ಬೀಡಿ ಕಾರ್ಮಿಕರಾಗಿ ಪರಿವರ್ತಿತರಾಗಿದ್ದರು. ವಯಸ್ಸಾದವರು ಮಾತ್ರ ಬೇಸಾಯದ ಕೆಲಸಗಳಿಗೆ ಬರುತ್ತಿದ್ದರು.

ಮಧ್ಯಾಹ್ನದ ಊಟಕ್ಕೆ ಸಾಧಾರಣ ಸಾರು ಪಲ್ಯ ಮಾಡುತ್ತಿದ್ದರು. ಮಳೆಗಾಲದ ಊಟದಲ್ಲಿ ಹುರುಳಿ ಸಾರ್ ಉಪ್ಪಿನಕಾಯಿ ನಡೆಯುತ್ತಿತ್ತು. ಕೆಲವು ವರ್ಷಗಳ ಹಿಂದೆ ಕೊಯ್ಲಿನ ಸಮಯದಲ್ಲಿ ಮೀನು ಪಲ್ಯ ಮಾಡಲು ಬೇಡಿಕೆ ಬಂತು.

ಎಣೆಲ್ ಬೆಳೆಯ ಕೊಯ್ಲು ಮುಗಿಯುವ ಹೊತ್ತಿಗೆ ದೀಪಾವಳಿ ಹಬ್ಬ ಬರುತ್ತಿತ್ತು. ನಮಗೆ ದೀಪಾವಳಿಯ ಹೊತ್ತಿಗೆ ಮನೆಯ ಅಂಗಳದಲ್ಲಿ ಭತ್ತದ ತುಪ್ಯೆ ರಚಿಸುತ್ತಿದ್ದರು. ಇದನ್ನು ‘ಸಿರಿ ತುಪ್ಯೆ’ ಎನ್ನುತ್ತಿದ್ದರು.

ಮನೆಯಲ್ಲಿ ತುಪ್ಯ ಹಾಕುವುದೆಂದರೆ ಸಂಭ್ರಮ ಸಡಗರ. ಊರಿನ ಹಿರಿಯರು ಆ ಸಡಗರದಲ್ಲಿ ಭಾಗಿಗಳಾಗುತ್ತಿದ್ದರು. ಆ ದಿನ ಮನೆಯಲ್ಲಿ ಪಾಯಸದ ಊಟವೂ ಇರುತ್ತಿತ್ತು. ರೈತನ ದುಡಿಮೆಯ ಫಲ ಅಲ್ಲವೆ?

ಬೇಸಗೆಯ ದಿನಗಳಲ್ಲಿ ತುಪ್ಯೆಯಿಂದ ಭತ್ತವನ್ನು ಇಳಿಸಿ, ಒಂದು ರಾತ್ರಿ ನೆನೆಹಾಕುತ್ತಿದ್ದೆವು. ಮರುದಿನ ಮುಂಜಾವದಲ್ಲಿ ಬೇಯಿಸಿ, ಸಂಜೆ ಮತ್ತು ಮರುದಿನ 12 ಗಂಟೆಯ ವರೆಗೆ ಒಣಗಿಸುತ್ತಿದ್ದೆವು. ಈ ಕೆಲಸವನ್ನು ಒಂದು ವರ್ಷ ನಾನೇ ಮಾಡಿದ್ದೆ, 1967-68ರಲ್ಲಿ. ಮುಂಜಾವದಲ್ಲಿ ಭತ್ತ ಬೇಯಿಸುವ ಕೆಲಸವನ್ನು ನಮ್ಮ ಅಜ್ಜಿ ಮಾಡುತ್ತಿದ್ದರು. ಉಳಿದ ಕೆಲಸ ಎಲ್ಲವನ್ನೂ ನಾನು ಮಾಡುತ್ತಿದ್ದೆ.

ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಅಂಗಳದಲ್ಲಿ ಒಣ ಹಾಕಿದ ಬೇಯಿಸಿದ ಭತ್ತವನ್ನು ಒಟ್ಟುಮಾಡಿ ಆಳುಗಳು ‘ಬರಕಲ’ಕ್ಕೆ (ಭತ್ತ ಕುಟ್ಟಲು ಮಾಡಿದ ಮಣ್ಣಿನಲ್ಲಿ ಹೂತ ಪಾಟ್ ರೀತಿಯ ಗುಂಡಿಗಳಿರುವ ಕಳ) ತರುತ್ತಿದ್ದರು. ಬರಕಲದ ಗುರಿ (ಗುಂಡಿಯಲ್ಲಿ) ಒಂದು ಗುಂಡಿಗೆ ಇಬ್ಬಿಬ್ಬರಂತೆ ಒನಕೆಯಲ್ಲಿ (ತುಳು ಉಜ್ಜೆರ್) ಮೆದುಪು (ಕುಟ್ಟಿ) ಭತ್ತವನ್ನು ಪಾಲೀಶ್ ಮಾಡಿ ಅಕ್ಕಿಯನ್ನಾಗಿಸುತ್ತಿದ್ದರು. ಒಂದು ಬಾರಿಗೆ ಒಂದು ಮುಡಿ ಅಕ್ಕಿಯನ್ನು ತಯಾರಿಸುತ್ತಿದ್ದೆವು. ಒಮ್ಮೊಮ್ಮೆ ಒನಕೆ ಜಾರಿ ಕಾಲಿನ ಹೆಬ್ಬೆರಳಿಗೆ ಪೆಟ್ಟಾಗುತ್ತಿತ್ತು. ಒನಕೆಯ ತುದಿಯಲ್ಲಿ ಕಬ್ಬ್ಬಿಣದ ಕವಚ ಇರುತ್ತದೆ. ಈ ಕವಚದೊಳಗೆ ಮೂರ್ನಾಲ್ಕು ಹಲ್ಲುಗಳು. ಈ ಸಾಧನದಿಂದ ಅಕ್ಕಿಯ (ಉಮಿ) ಹೊಟ್ಟು ಕಳೆದು, ಎರಡನೆಯ ಸುತ್ತಲ್ಲಿ ತೌಡು ಹೊರ ಬಿದ್ದು ಅಕ್ಕಿ ಸಿದ್ಧವಾಗುತ್ತಿತ್ತು.

ಸುಗ್ಗಿ ಬೆಳೆ ಮುಗಿದ ಮೇಲೆ ಮೆಣಸಿನಕಾಯಿ/ತರಕಾರಿ ಬೆಳೆಯುತ್ತಿದ್ದರು. ಸುಗ್ಗಿಯ ಬೇಸಾಯ ಮುಗಿದ ಮೇಲೆ ಮನೆಯಲ್ಲಿ ರಾಶಿಯಾದ ಭತ್ತವನ್ನು ತುಪ್ಯೆ/ಕಣಜ ಕಟ್ಟುತ್ತಿದ್ದರು. ತುಪ್ಯೆ ಹಾಕುವುದು ಸಂಭ್ರಮದ ಕೆಲಸ.

ಅಂದೇ ಸಂಜೆ ಆ ಅಕ್ಕಿಯ ಮುಡಿ ಕಟ್ಟುತ್ತಿದ್ದರು. ಬೈ ಹುಲ್ಲಿನ ದಾರ ಮಾಡಿ ಮುಡಿ ಕಟ್ಟುತ್ತಿದ್ದೆವು. ಈ ಮುಡಿಯನ್ನು ಕುತ್ತಟ್ಟ ದಲ್ಲಿ (ಅಡುಗೆ ಕೋಣೆಯ ಮೇಲಿನ ಅಟ್ಟ) ಪೇರಿಸಿಡುತ್ತಿದ್ದರು. ನಮ್ಮ ತಂದೆ ಕಟ್ಟಿದ ಮುಡಿ ನೋಡಲು ಬಹಳ ಚೆಂದ ಇತ್ತು. ಕೆಲವು ದಶಕಗಳಿಂದ ನಮ್ಮೂರಲ್ಲಿ ಯಾರೂ ಮುಡಿ ಕಟ್ಟುವುದಿಲ್ಲ. ಮಳೆಗಾಲಕ್ಕೆ ದಾಸ್ತಾನಿಡಲು ಅಟ್ಟವೂ ಉಳಿದಿಲ್ಲ; ಅಕ್ಕಿಯನ್ನು ಗೋಣಿಚೀಲದಲ್ಲಿ ತುಂಬಿಡುತ್ತಾರೆ.

ಒಂದು ಅಕ್ಕಿಮುಡಿಗೆ 42 ಸೇರು ಅಕ್ಕಿ. ಇವನ್ನು ಕಳಸೆಯಲ್ಲಿ ಅಳೆಯುತ್ತಿದ್ದೆವು. ಒಂದು ಮುಡಿಗೆ 14 ಸೇರು ಹಿಡಿಯುವ 3 ಕಲಸೆ ಅಕ್ಕಿ ಹಿಡಿಯುತ್ತಿತ್ತು. 10 ಸೇರು ಹಿಡಿಯುವ ಕಳಸೆಯೂ ಇದೆ. 10 ಸೇರು ಅಳೆದರೆ ಮತ್ತೆ ಎರಡು ಸೇರು ಸೇರಿಸಬೇಕಾಗುತ್ತಿತ್ತು. ಕಳಸೆ, ಸೇರು, ಬಲ್ಲ, ಪಾವು -ಭತ್ತ ಮತ್ತು ಅಕ್ಕಿ ಅಳೆಯುವ ಮಾಪನಗಳು.

ಸಾಮಾನ್ಯವಾಗಿ ತುಳುನಾಡಿನಲ್ಲಿ ಕುಚಲಕ್ಕಿ ಅನ್ನವನ್ನು ಉಣ್ಣುತ್ತಾರೆ. ಕುಚಲಕ್ಕಿಯನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದರು. ನಾನು ಹೈಸ್ಕೂಲು ಮುಗಿಸಿ 1967ರಿಂದ 69ರವರೆಗೆ, ನನ್ನ ವಿವಾಹ ಆಗುವವರೆಗೆ ಮನೆಯಲ್ಲಿ ಇದ್ದೆ.

ಅಂದಿನ ದಿನಗಳಲ್ಲಿ ಮಳೆಗಾಲದ ಬೆಳೆ ಎಣೆಲ್ ಭತ್ತದ ಕೊಯ್ಲು ಮುಗಿದ ಕೂಡಲೇ ಪರ್ಬ/ದೀಪಾವಳಿ ಬರುತ್ತಿತ್ತು. ಮತ್ತೆ ಸುಗ್ಗಿಯ ಉಳುಮೆ ನಾಟಿ ಆರಂಭವಾಗುತ್ತಿತ್ತು. ಸುಗ್ಗಿ ಬೆಳೆ ಮುಗಿದ ಮೇಲೆ ಮೆಣಸಿನಕಾಯಿ/ತರಕಾರಿ ಬೆಳೆಯುತ್ತಿದ್ದರು. ಸುಗ್ಗಿಯ ಬೇಸಾಯ ಮುಗಿದ ಮೇಲೆ ಮನೆಯಲ್ಲಿ ರಾಶಿಯಾದ ಭತ್ತವನ್ನು ತುಪ್ಯೆ/ಕಣಜ ಕಟ್ಟುತ್ತಿದ್ದರು. ತುಪ್ಯೆ ಹಾಕುವುದು ಸಂಭ್ರಮದ ಕೆಲಸ.

ಮುಂಜಾನೆ 5 ಗಂಟೆಗೆ ಎದ್ದು ನನ್ನ ಅಜ್ಜಿ ಹಂಡೆಯಲ್ಲಿ ತುಂಬಿದ ಭತ್ತವನ್ನು ಬೆಂಕಿ ಉರಿಸಿ ಬೇಯಿಸುತ್ತಿದ್ದರು. ಹಂಡೆಯ ಮೇಲ್ಭಾಗದಲ್ಲಿ ಇರುವ ಭತ್ತ ಬಿರಿದರೆ ಬೆಂಕಿ ಉರಿಸುವುದನ್ನು ನಿಲ್ಲಿಸುತ್ತಿದ್ದರು. ಮನೆಯ ಬೆಳಗಿನ ಉಪಾಹಾರ ಮುಗಿಸಿ ಹಂಡೆಯ ಭತ್ತವನ್ನು ತೆಗೆದು ಭತ್ತ ಒಣಹಾಕುವ ಅಂಗಳದಲ್ಲಿ ಒಂದು ಮೂಲೆಯಲ್ಲಿ ರಾಶಿ ಹಾಕಿ ಅದನ್ನು ಚಾಪೆಯಿಂದ ಮುಚ್ಚುತ್ತಿದ್ದರು. ಈ ಕೆಲಸವನ್ನು ಹೆಚ್ಚಾಗಿ ನಾನು ಮಾಡುತ್ತಿದ್ದೆ.

ಚಳಿಕಾಲದಲ್ಲಿ ಭತ್ತವನ್ನು ಕುಚಲಕ್ಕಿ ಮಾಡುವ ಕೆಲಸ ಇರುತ್ತಿತ್ತು. ಆ ದಿನಗಳು ಶ್ರಮದಾಯಕ ದಿನಗಳು. ಅಣ್ಣ ಅಥವಾ ತಂದೆ ಅಥವಾ ಕೆಲಸದವರು ತುಪೈಗೆ ತೂತುಮಾಡಿ ತೆಂಗಿನ ಕೊಂಬು (ಕಾಯಿ ಬಿಡುವ ಹೊರಕವಚ) ಸಿಕ್ಕಿಸುತ್ತಿದ್ದರು. ಅದರ ಮೂಲಕ ಸುರುವುತ್ತಿರುವ ಭತ್ತವನ್ನು ಒಂದು ಮುಡಿ ಅಕ್ಕಿಗೆ ಆಗುವಷ್ಟು ಹೆಡಿಗೆಗಳಲ್ಲಿ ಸಂಗ್ರಹಿಸಿ ನೀರು ತುಂಬಿದ ಕಪ್ಪರ್‍ಗೆ (ಅಗಲ ಬಾಯಿಯ ದೊಡ್ಡ ಮಣ್ಣಿನ ಹಂಡೆ-ಇದನ್ನು ಮಣ್ಣಿನಲ್ಲಿ ಹೂತಿಡುತ್ತಿದ್ದರು) ಸುರುವುತ್ತಿದ್ದರು. ಈ ಕಪ್ಪರ್ ಬಳಿ ಭತ್ತ ಬೇಯಿಸಲು ದೊಡ್ಡ ಒಲೆ ಇರುತ್ತಿತ್ತು. ಮರುದಿನ ಮಧ್ಯಾಹ್ನ ನೆನೆದ ಭತ್ತವನ್ನು ಒಲೆಯ ಮೇಲೆ ಇರುವ ತಾಮ್ರದ ದೊಡ್ಡ ಹಂಡೆಗೆ ತುಂಬುತ್ತಿದ್ದರು. ಈ ಹಂಡೆಯಲ್ಲಿ ಬೆಂದ ಭತ್ತದಲ್ಲಿ ಒಂದು ಮುಡಿ ಅಕ್ಕಿಯಾಗುತ್ತದೆ. ಮುಂಜಾನೆ 5 ಗಂಟೆಗೆ ಎದ್ದು ನನ್ನ ಅಜ್ಜಿ ಹಂಡೆಯಲ್ಲಿ ತುಂಬಿದ ಭತ್ತವನ್ನು ಬೆಂಕಿ ಉರಿಸಿ ಬೇಯಿಸುತ್ತಿದ್ದರು. ಹಂಡೆಯ ಮೇಲ್ಭಾಗದಲ್ಲಿ ಇರುವ ಭತ್ತ ಬಿರಿದರೆ ಬೆಂಕಿ ಉರಿಸುವುದನ್ನು ನಿಲ್ಲಿಸುತ್ತಿದ್ದರು. ಮನೆಯ ಬೆಳಗಿನ ಉಪಾಹಾರ ಮುಗಿಸಿ ಹಂಡೆಯ ಭತ್ತವನ್ನು ತೆಗೆದು ಭತ್ತ ಒಣಹಾಕುವ ಅಂಗಳದಲ್ಲಿ ಒಂದು ಮೂಲೆಯಲ್ಲಿ ರಾಶಿ ಹಾಕಿ ಅದನ್ನು ಚಾಪೆಯಿಂದ ಮುಚ್ಚುತ್ತಿದ್ದರು. ಈ ಕೆಲಸವನ್ನು ಹೆಚ್ಚಾಗಿ ನಾನು ಮಾಡುತ್ತಿದ್ದೆ.

ಸಂಜೆ 3 ಗಂಟೆಗೆ ಆ ಬೆಂದ ಭತ್ತವನ್ನು ಮೊರದಲ್ಲಿ ಅಂಗಳದಲ್ಲಿ ಪಸರಿಸುತ್ತಿದ್ದರು. ಮಂಗಳೂರಿನ ಅಗಲ ಮೊರದಲ್ಲಿ ಬೆಂದ ಭತ್ತವನ್ನು ಗೋರಿ ತೆಗೆದು ಆ ಮೊರವನ್ನು ನಮ್ಮ ಹೊಟ್ಟೆಗೆ ತಾಗಿ ಹಿಡಿದು (ಬ್ಯಾಲನ್ಸಗಾಗಿ) ಭತ್ತವನ್ನ್ನು ಗಾಳಿಗೆ ಹಾರಿಸಿ ಅಚ್ಚುಕಟ್ಟಾಗಿ ಭತ್ತ ಪಸರಿಸುವುದೂ ಒಂದು ಕಲೆ. ಎಲ್ಲರಿಗೂ ಒದಗಿಬರುವ ವಿದ್ಯೆ ಅಲ್ಲ. ನಾನದರಲ್ಲಿ ಪರಿಣತಳಿದ್ದೆ.

ಹೀಗೆ ಬೇಯಿಸಿದ ಭತ್ತವನ್ನು ಹರವಿದ ಅನಂತರ ಅದರ ಸುತ್ತ ಸಿಡಿದ ಭತ್ತವನ್ನು ನಾಜೂಕಾಗಿ ಅಂಚಿಗೆ ಗುಡಿಸುವುದು ಕೂಡಾ ಒಂದು ಕಲೆ. ನಮ್ಮ ಅಜ್ಜಿ ಹೇಳುತ್ತಿದ್ದರು, ‘ಪೊಣ್ಣು ತೂವರೆ ಬಯಿದಿನಾಲ್ ಜಾಲ್‍ಡ್ ಬಾರ್ ಆಜಿಡಿನ ಬಾರ್‍ದ ಅರು ಅಡಿಪುನ ಪೊರ್ಲು ತೂದು ಪೊಣ್ಣು ಕೇಂದೆರ್‍ಗೆ’ (ಅಂಗಳದಲ್ಲಿ ಭತ್ತವನ್ನು ಹರವಿ ಅದರ ಅಂಚು ಗುಡಿಸುವ ಚಂದ ನೋಡಿ ಹೆಣ್ಣು ಕೇಳಿದರಂತೆ).

ಬೇರೆ ಯಾರು ಮುಡಿ ಕಟ್ಟಿದರೂ ಅವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ. ತಂದೆ ಕಟ್ಟುತ್ತಿದ್ದ ಮುಡಿ ಬಹಳ ಆಕರ್ಷಕವಾಗಿರುತ್ತಿತ್ತು. ಹೀಗೆ ಕಟ್ಟಿದ ಮುಡಿಗಳನ್ನು ಮನೆಯ ಅಡುಗೆ ಕೋಣೆಯ ಕುತ್ತಟ್ಟದಲ್ಲಿ ಹಾಕಿ ಶೇಖರಿಸುತ್ತಿದ್ದರು. ಹಾಗೆ ಇಟ್ಟರೆ ಅಕ್ಕಿಯಲ್ಲಿ ಹುಳ ಬೀಳುತ್ತಿರಲಿಲ್ಲ, ಬೂಸಾ ಬರುತ್ತಿರಲಿಲ್ಲ.

ಮರುದಿನ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಭತ್ತ ಚೆನ್ನಾಗಿ ಒಣಗುತ್ತಿತ್ತು. ಅಂಗಳದ ಭತ್ತವನ್ನು ಗುಡಿಸಿ ಬರಕಲಕ್ಕೆ ಹಾಕಿ ಸುಮಾರು 6 ರಿಂದ ಎಂಟು ಮಂದಿ ಅದನ್ನು ಕುಟ್ಟಿ ಭತ್ತದಿಂದ ಅಕ್ಕಿಯನ್ನು, ಉಮಿಯನ್ನು, ತೌಡನ್ನು ಬೇರ್ಪಡಿಸುತ್ತಿದ್ದರು. ಸುಮಾರು 6 ಕುಳಿಗಳು ಇರುತ್ತಿದ್ದವು. ಈ ಪ್ರಕ್ರಿಯೆಯನ್ನು ತುಳು ಭಾಷೆಯಲ್ಲಿ ‘ಬಾರ್ ಮೆಪ್ಪುನು’ ಎನ್ನುತ್ತಿದ್ದರು. ಎರಡು ವರ್ಷ ಈ ಕೆಲಸವನ್ನು ನಾನೂ ಮಾಡಿದ್ದೆ. ಅಕ್ಕಿಯನ್ನು ಉಮಿ, ತೌಡಿನಿಂದ ಬೇರ್ಪಡಿಸಿ ಕಳಸೆಯಲ್ಲಿ ಅಳೆದು ಮುಡಿ ಅಕ್ಕಿಯನ್ನು ಮುಡಿ ಕಟ್ಟಲು ಇಡುತ್ತಿದ್ದರು.

ಮತ್ತದೇ ಪ್ರಕ್ರಿಯೆ. ಭತ್ತ ಕುಟ್ಟಿ ಮುಗಿದ ಮೇಲೆ ಮುನ್ನಾ ದಿನ ಕಪ್ಪರ್‍ನಲ್ಲಿ ನೆನಸಿದ ಭತ್ತವನ್ನು ಭತ್ತ ಬೇಯಿಸುವ ತಾಮ್ರದ ಹಂಡೆಗೆ ತುಂಬಿಸುವುದು, ತುಪ್ಯೆಯಿಂದ ಭತ್ತ ತೆಗೆದು ಮತ್ತೆ ಕಪ್ಪರ್ ನಲ್ಲಿ ನೆನೆಸುವುದು. ಸಂಜೆ 3-4 ಗಂಟೆಯ ಹೊತ್ತಿಗೆ ಬೆಂದ ಭತ್ತವನ್ನು ಅಂಗಳದಲ್ಲಿ ಹರಹುವುದು.

ಸಿದ್ಧವಾದ ಅಕ್ಕಿಯನ್ನು ಮುಡಿ ಕಟ್ಟುವ ಕೆಲಸ ಇರುತ್ತಿತ್ತು ಸಂಜೆಗೆ. ಮುಡಿಗೆ ಸುತ್ತಲು ಬೈಹುಲ್ಲಿನಿಂದಲೇ ಹಗ್ಗವನ್ನು ಸಿದ್ಧಪಡಿಸುತ್ತಿದ್ದರು. ಬಾಲ್ಯದಲ್ಲಿ ನಾನು ಹಗ್ಗ ಸುತ್ತುತ್ತಿದ್ದೆ. ತಂದೆ ಬೈಹುಲ್ಲಿನಿಂದ ಹಗ್ಗ ಬಿಡುತ್ತಿದ್ದರು. ಅದೆ ಹಗ್ಗದಿಂದ ಮುಡಿ ಕಟ್ಟುತ್ತಿದ್ದರು. ಮುಡಿ ಕಟ್ಟುವಾಗ ಹಗ್ಗ ಹಿಡಿದು ಕಟ್ಟುವವರ ಆದೇಶದಂತೆ ಸುತ್ತಬೇಕು. ಮುಡಿ ಕಟ್ಟವುದರಲ್ಲಿ ನಮ್ಮ ತಂದೆ ಸಿದ್ಧಹಸ್ತರು. ಬೇರೆ ಯಾರು ಮುಡಿ ಕಟ್ಟಿದರೂ ಅವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ. ತಂದೆ ಕಟ್ಟುತ್ತಿದ್ದ ಮುಡಿ ಬಹಳ ಆಕರ್ಷಕವಾಗಿರುತ್ತಿತ್ತು. ಹೀಗೆ ಕಟ್ಟಿದ ಮುಡಿಗಳನ್ನು ಮನೆಯ ಅಡುಗೆ ಕೋಣೆಯ ಕುತ್ತಟ್ಟದಲ್ಲಿ ಹಾಕಿ ಶೇಖರಿಸುತ್ತಿದ್ದರು. ಹಾಗೆ ಇಟ್ಟರೆ ಅಕ್ಕಿಯಲ್ಲಿ ಹುಳ ಬೀಳುತ್ತಿರಲಿಲ್ಲ, ಬೂಸಾ ಬರುತ್ತಿರಲಿಲ್ಲ.

ಎಳತ್ತೂರಿನಿಂದ ಕಿನ್ನಿಗೋಳಿಗೆ ಸುಮಾರು 3 ಕಿ.ಮೀ. ತಲೆಹೊರೆಯ ಮೂಲಕ ಅಕ್ಕಿಮುಡಿಯನ್ನು ಸಾಗಿಸುತ್ತಿದ್ದರು. ಬಂದ ಹಣದಿಂದ ಮನೆಗೆ ಸಾಮಾನು ಖರೀದಿಸುತ್ತಿದ್ದರು. ಕೆಲವೊಂದು ಮನೆಗಳ ಗಂಡುಮಕ್ಕಳು ಹೋಟೇಲಿನಲ್ಲಿ ದುಡಿದು ಹಣ ಉಳಿಸಿ ತಮ್ಮ ರೈತಮನೆಗಳಿಗೆ ಕಳುಹಿಸಿ ನೆರವಾಗುತ್ತಿದ್ದರು.

ಮರುದಿನ ಬೆಳಿಗ್ಗೆ ಮತ್ತೆ ಭತ್ತ ಬೇಯಿಸುವ ಕಾಯಕ. ಆಗ ಚಳಿ ಆರಂಭವಾಗುತ್ತಿದ್ದರಿಂದ ಮಕ್ಕಳೆಲ್ಲ ಭತ್ತ ಬೇಯಿಸುವ ಬೆಂಕಿಯಲ್ಲಿ ಚಳಿ ಕಾಯುಸುತ್ತಿದ್ದರು. ಇದು ತುಪ್ಯೆಯ ಭತ್ತ ಮುಗಿದು, ಸುಗ್ಗಿ, ಕೊಳಕೆಯ ಭತ್ತ ಮುಗಿಯುವವರೆಗೆ ನಿತ್ಯ ಕಾಯಕ.

ಇತ್ತೀಚಿನ ದಶಕಗಳಲ್ಲಿ ಭತ್ತ ಬೇಯಿಸಿ ಅಕ್ಕಿ ಮಾಡುವ ಕೆಲಸವನ್ನು ಯಾವ ರೈತನೂ ಮಾಡುವುದಿಲ್ಲ. ಗದ್ದೆಯಿಂದ ನೇರವಾಗಿ ಅಕ್ಕಿ ಮಿಲ್ ಗಳಿಗೆ ಸಾಗಿಸುತ್ತಾರೆ. ಕೆಲವರು ಮನೆಗೆ ತಂದು ಜೊಳ್ಳು ಬಿಡಿಸಿ ಕಳುಹಿಸುತ್ತಾರೆ.

ರೈತರು ತಾವು ಬೆಳೆದ ಅಕ್ಕಿಮುಡಿಯನ್ನು ಮಾರಿಯೇ ಜೀವನ ಸಾಗಿಸುತ್ತಿದ್ದರು. ಎಳತ್ತೂರಿನಿಂದ ಕಿನ್ನಿಗೋಳಿಗೆ ಸುಮಾರು 3 ಕಿ.ಮೀ. ತಲೆಹೊರೆಯ ಮೂಲಕ ಅಕ್ಕಿಮುಡಿಯನ್ನು ಸಾಗಿಸುತ್ತಿದ್ದರು. ಬಂದ ಹಣದಿಂದ ಮನೆಗೆ ಸಾಮಾನು ಖರೀದಿಸುತ್ತಿದ್ದರು. ಕೆಲವೊಂದು ಮನೆಗಳ ಗಂಡುಮಕ್ಕಳು ಹೋಟೇಲಿನಲ್ಲಿ ದುಡಿದು ಹಣ ಉಳಿಸಿ ತಮ್ಮ ರೈತಮನೆಗಳಿಗೆ ಕಳುಹಿಸಿ ನೆರವಾಗುತ್ತಿದ್ದರು. ಮುಂಬಯಿ ಹಣದ ಸಹಕಾರ ಇರುವವರು ಸ್ವಲಕಾಲ ದಾಸ್ತಾನು ಇಟ್ಟು ಬೆಳೆ ಹೆಚ್ಚಾಗುವ ದಿನಗಳಲ್ಲಿ ಅಕ್ಕಿಯನ್ನು ಮಾರುತ್ತಿದ್ದರು

ಕೆಲವರಿಗೆ ಮಳೆಗಾಲದಲ್ಲಿ ಅಕ್ಕಿ ಸಾಕಾಗುತ್ತಿರಲಿಲ್ಲ. ಆಗ ‘ಪೊಲಿಗೆ ಅಕ್ಕಿ’ ಪಡೆಯುತ್ತಿದ್ದರು. ಪೊಲಿಯ ರೀತಿ ಹೀಗೆ. ಈ ಮಳೆಗಾಲದಲ್ಲಿ ನಾನು ಒಂದು ಮುಡಿ ಅಕ್ಕಿಯನ್ನು ಉಳ್ಳವರಿಂದ ತಂದರೆ ಮುಂದೆ ಎಣೆಲ್ ಕೊಯ್ಲು ಆಗಿ ಭತ್ತವನ್ನು ಅಕ್ಕಿ ಮಾಡಿದ ಮೇಲೆ ಒಂದೂವರೆ ಮುಡಿಯನ್ನು ಮರಳಿಸಬೇಕು. ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ಇಂತಹ ಪದ್ಧತಿ ನಿಂತುಹೋಗಿತ್ತು. ಅಡವು ಇಡುವ ಪದ್ಧತಿ ಇತ್ತು.

ಅಣೆಕಟ್ಟಕ್ಕೆ ಹಲಗೆ ಇಡದೆ ಪಂಚಾಯತಿ ನಿದ್ದೆಯಲ್ಲಿ ಉಳಿಯಿತು. ಈ ಸಮಸ್ಯೆಗಳಿಂದ ಭತ್ತದ ಬೇಸಾಯದ ಮೇಲಿನ ಆಸಕ್ತಿ ಜನರಲ್ಲಿ ಕಡಿಮೆಯಾಯಿತು. ವ್ಯವಸಾಯ ಸೋತು ಹೋಯಿತು. ಈಗ ಬೈಲುಗದ್ದೆ ಆಟದ ಬಯಲಾಗಿದೆ. ಬೆಟ್ಟುಗದ್ದೆ ಕಾಡಾಗಿದೆ.

ಅನೇಕ ಬದಲಾವಣೆಗಳ ಜೊತೆಜೊತೆಗೆ ರೈತರ ಮನೆಗಳ ಸದಸ್ಯರು ಮುಂಬಯಿ ಸೇರಿದರು. ಆ ಕಾಲದಲ್ಲಿ ಕೃಷಿ ಕಾರ್ಮಿಕರ ಗಂಡುಮಕ್ಕಳನ್ನು ಮುಂಬಯಿಯ ಹೊಟೇಲಿಗೆ ಕೆಲಸಕ್ಕೆಂದು ಕರೆದುಕೊಂಡು ಹೋದವರು ರೈತರ ಮನೆಯ ಮುಂಬಯಿ ವಾಸಿಗಳು. ಅನೇಕರ ಗದ್ದೆಗಳು ‘ಪಾರ್ ಪಡಿಲ್’ ಬಿದ್ದು ಹುಲ್ಲು ಕಂಟಿ ಬೆಳೆಯಿತು. ಹರಿವ ನೀರಿಗೆ ಅಡ್ಡ ಕಟ್ಟ ಕಟ್ಟುವುದು ನಿಂತ ಮೇಲೆ ಬೈಲಿನಲ್ಲಿ ಅಂತರ್ಜಲ ಒರೆತ ಕಡಿಮೆಯಾಯಿತು. ಪಡ್ಡಲ್ಲ ಅಣೆಕಟ್ಟು ಎಳತ್ತೂರು ಗ್ರಾಮದ ಪಶ್ಚಿಮದ ಕೊನೆ. ಹೀಗಾಗಿ ಪೂರ್ವ ಭಾಗಕ್ಕೆ ಅಂತರ್ಜಲ ಕಡಿಮೆಯಾಯಿತು. ಅಣೆಕಟ್ಟಕ್ಕೆ ಹಲಗೆ ಇಡದೆ ಪಂಚಾಯತಿ ನಿದ್ದೆಯಲ್ಲಿ ಉಳಿಯಿತು. ಈ ಸಮಸ್ಯೆಗಳಿಂದ ಭತ್ತದ ಬೇಸಾಯದ ಮೇಲಿನ ಆಸಕ್ತಿ ಜನರಲ್ಲಿ ಕಡಿಮೆಯಾಯಿತು. ವ್ಯವಸಾಯ ಸೋತು ಹೋಯಿತು. ಈಗ ಬೈಲುಗದ್ದೆ ಆಟದ ಬಯಲಾಗಿದೆ. ಬೆಟ್ಟುಗದ್ದೆ ಕಾಡಾಗಿದೆ.

ಈಗ ಮಳೆಗಾಲದಲ್ಲಿ ಬೈಲುಗದ್ದೆಯಲ್ಲಿ ಮಾತ್ರ ಕೆಲವರು ಬೆಳೆ ತೆಗೆಯುತ್ತಾರೆ. ಹೆಚ್ಚಿನವರು ಒಂದೇ ಬೆಳೆ ತೆಗೆಯುತ್ತಾರೆ. ನಾಟಿ ಮಾಡಲು ಮತ್ತು ಕೊಯ್ಲು ಮಾಡಲು ಮಿಷನ್ ಬರುತ್ತದೆ. ಮೆಷಿನಿಗೆ ಚಾಪೆ ನೇಜಿ ಬೇಕು. ಮಿಷನ್ನಿನಲ್ಲಿ ಕೊಯ್ಲು ಮಾಡಿದರೆ ಬೈಹುಲ್ಲು ಪುಡಿಪುಡಿಯಾಗುತ್ತದೆ. ಹೀಗಾಗಿ ಬೈಹುಲ್ಲು ಸೂಡಿ ಕಟ್ಟಲಾಗದು.

ಹಿಂದೆ ಬೇಸಾಯ ಬಹು ಶ್ರಮದ ಕೆಲಸ ಆಗಿದ್ದರೂ ಅದರಲ್ಲೊಂದು ಸುಖ ಇತ್ತು. ಈಗ ಎಲ್ಲಾ ಸುಲಭ; ಸುಖ ಮಾತ್ರ ಇಲ್ಲ!

*ಲೇಖಕಿ ಮಂಗಳೂರು ಬಳಿಯ ಕಿನ್ನಿಗೋಳಿಯವರು, ಎಂ.ಎ., ಡಿ.ಲಿಟ್. ಪದವೀಧರರು. ಹಲವಾರು ಕತೆ, ಕವನ, ಕಾದಂಬರಿ ಪ್ರಕಟಗೊಂಡಿವೆ. ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ. ಪ್ರಸ್ತುತ ಬೆಂಗಳೂರು ನಿವಾಸಿ.

Leave a Reply

Your email address will not be published.