ಭಾರತಕ್ಕೆ ಸಂಸತ್ತು ಯಾಕಾದರೂ ಬೇಕು?

ಮನೀಷ್ ತಿವಾರಿ

ಆಡಳಿತ ಪಕ್ಷದವರಲ್ಲದ, ಹಿರಿಯ ಸಂಸದರೊಬ್ಬರು ಅತಿ ಪ್ರಸ್ತುತ ಮತ್ತು ಪ್ರಚೋದಕ ಪ್ರಶ್ನೆಯೊಂದನ್ನು ಕೇಳಿದರು: ಭಾರತಕ್ಕೆ ಒಂದು ಸಂಸತ್ತು ಅಗತ್ಯವಿದೆಯೇ?

ಅನುವಾದ: ನಾ ದಿವಾಕರ

ಕಳೆದ ಹಲವು ದಶಕಗಳಲ್ಲಿ ಭಾರತದ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಹತ್ತನೆಯ ಪರಿಚ್ಛೇದದಲ್ಲಿ ಸೂಚಿತವಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅನುಸರಿಸುವ ನಿಟ್ಟಿನಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದ್ದು, ಸದನಗಳಲ್ಲಿನ ತಮ್ಮ ವರ್ತನೆಯಿಂದ ಮತ್ತು ಅಸಾಂವಿಧಾನಿಕ ನಡತೆಯಿಂದ ಕಾಯ್ದೆಯ ಮೂಲ ಆಶಯಗಳನ್ನೇ ಮಣ್ಣುಪಾಲು ಮಾಡಿದ್ದಾರೆ.

1980ರವರೆಗೂ ಭಾರತದ ಸಂಸತ್ತು ತನ್ನದೇ ಆದ ಒಂದು ಘನತೆವೆತ್ತ ಹಿರಿಮೆಯನ್ನು ಕಾಪಾಡಿಕೊಂಡು ಬಂದಿತ್ತು. ಆಗಾಗ್ಗೆ ನಡೆಯುತ್ತಿದ್ದ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, ಎರಡೂ ಸದನಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು, ವಾದಗಳು ಮತ್ತು ಜನಪರ ಶಾಸನಗಳ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ನಡೆಯುತ್ತಿದ್ದ ವಾಗ್ವಾದಗಳು ಉನ್ನತ ಮಟ್ಟದ್ದಾಗಿರುತ್ತಿದ್ದುದೇ ಅಲ್ಲದೆ, ಸಂಸತ್ತಿನ ಘನತೆಯನ್ನು ಕಾಪಾಡುವಂತಿರುತ್ತಿದ್ದವು. ಓರ್ವ ಸಂಸದರಿಗೆ ತಾವು ಸದನದ ಕಲಾಪದಲ್ಲಿ ಚಲಾಯಿಸುವ ಮತದ ಮೌಲ್ಯದ ಅರಿವು ಇತ್ತು. ಹಾಗಾಗಿ ದೇಶಕ್ಕೆ ಉಪಯುಕ್ತವಾಗುವಂತಹ ಶಾಸನಗಳನ್ನು ಚರ್ಚೆಗೊಳಪಡಿಸುವಾಗ ತಪ್ಪದೇ ಹಾಜರಿದ್ದು ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು. ಅಗತ್ಯ ಬಿದ್ದಲ್ಲಿ ತಮ್ಮದೇ ಸರ್ಕಾರದ ಉತ್ತರದಾಯಿತ್ವವನ್ನು ಸಹ ಪ್ರಶ್ನಿಸುತ್ತಿದ್ದ ಸಂದರ್ಭಗಳಿದ್ದವು. ಇದಕ್ಕೆ ಅತ್ಯುತ್ತಮ ನಿದರ್ಶನ ಎಂದರೆ, 1950 ಸಂದರ್ಭದಲ್ಲಿ ನೆಹರೂ ಸರ್ಕಾರಕ್ಕೆ ಮಗ್ಗುಲ ಮುಳ್ಳಿನಂತಿದ್ದ ಫಿರೋಜ್ ಗಾಂಧಿ.

ಆದರೆ 1985ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಎಲ್ಲವೂ ಬದಲಾಗಿಹೋಯಿತು. ಕಾಯ್ದೆಯ ಉದ್ದೇಶಗಳು ಮತ್ತು ಕಾರಣಗಳನ್ನು ಬಹಳ ಸ್ಪಷ್ಟವಾಗಿ ಹೀಗೆ ಹೇಳಲಾಗಿದೆ: “ರಾಜಕೀಯ ಪಕ್ಷಾಂತರದ ಪಿಡುಗು ರಾಜಕೀಯವಾಗಿ ಚಿಂತೆಗೀಡುಮಾಡುವ ವಿಚಾರವಾಗಿದೆ. ಇದನ್ನು ಕೂಡಲೇ ತಡೆಗಟ್ಟದೆ ಹೋದರೆ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಬುನಾದಿಯನ್ನು ಮತ್ತು ಅದು ಪ್ರತಿಪಾದಿಸುವ ತತ್ವಗಳನ್ನೇ ಶಿಥಿಲಗೊಳಿಸಿಬಿಡುತ್ತದೆ.

ಆದರೆ, ಕಾನೂನು ಜಾರಿಯಾಗಿ 35 ವರ್ಷಗಳು ಕಳೆದ ನಂತರ, ಪಕ್ಷಾಂತರದ ಪಿಡುಗು ವ್ಯಕ್ತಿಗತ ನೆಲೆಯಿಂದ ಸಾಮೂಹಿಕ ನೆಲೆಗೆ ಬದಲಾಗಿದೆ. ರಾಜಕೀಯ ನೈತಿಕತೆಯನ್ನು ಬೆಳೆಸುವ ಒಂದು ಕಾನೂನಾತ್ಮಕ ಅಸ್ತ್ರ ಎಂದು ಪರಿಗಣಿಸಲಾಗಿದ್ದ ಒಂದು ಶಾಸನ ಇಂದು ನಮ್ಮ ಶಾಸನಸಭೆಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಂತಃಸತ್ವವನ್ನೇ ತೊಡೆದುಹಾಕುವ ಮಾರ್ಗವಾಗಿ ಪರಿಣಮಿಸಿದೆ. ಶಾಸಕರು ಮತ್ತು ಸಂಸದರಿಗೆ ತಮ್ಮ ವ್ಯಕ್ತಿಗತ ಪ್ರಜ್ಞೆಗೆ ಅನುಸಾರವಾಗಿ ಮತ ಚಲಾಯಿಸುವ ಹಕ್ಕನ್ನೂ ಕಸಿದುಕೊಳ್ಳುವಂತಹ ಒಂದು ನಿರಂಕುಶ ಪದ್ಧತಿಗೆ ಇದು ನಾಂದಿ ಹಾಡಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ವಿವೇಕ ಮತ್ತು ವಿವೇಚನೆಯನ್ನು ಬಳಸಲು ಅವಕಾಶ ನೀಡದೆ, ತಾವು ಪ್ರತಿನಿಧಿಸುವ ಕ್ಷೇತ್ರದ ಹಿತಾಸಕ್ತಿಗಳನ್ನೂ ಕಡೆಗಣಿಸುವಂತೆ ಮಾಡಿದೆ.

ಇಂದು ಒಬ್ಬ ವ್ಯಕ್ತಿಗೆ ಚುನಾವಣೆಯಲ್ಲಿ ತಮ್ಮ ಚಿಹ್ನೆಯ ಮೇಲೆ ಸ್ಪರ್ಧಿಸಲು ಟಿಕೆಟ್ ನೀಡುವ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಮನಸು ಮತ್ತು ವ್ಯಕ್ತಿತ್ವದ ಮೇಲೆ ಸಂಪೂರ್ಣ ಆಧಿಪತ್ಯ ಸಾಧಿಸುತ್ತದೆ. ತಾವು ಆಯ್ಕೆ ಮಾಡಬೇಕಾದ ಅಭ್ಯರ್ಥಿಗೆ ತಮ್ಮ ಅಮೂಲ್ಯ ಮತ ಚಲಾಯಿಸಲು ಚುನಾವಣೆಗಳ ಸಂದರ್ಭದಲ್ಲಿ ಝಳಝಳ ಬಿಸಿಲನ್ನೂ ಲೆಕ್ಕಿಸದೆ, ಮಳೆಯನ್ನೂ ಲೆಕ್ಕಿಸದೆ, ಸಾಲುಗಟ್ಟಿ ನಿಲ್ಲುವ ಭಾರತದ ಸಾಮಾನ್ಯ ಪ್ರಜೆ ಇಂದು ಕೇವಲ ನೆಪಮಾತ್ರವಾಗಿ ಉಳಿದಿರುವುದು ದುರಂತ.

ಭಾರತದ ಸಂವಿಧಾನ ಕರ್ತೃಗಳು ಸಾರ್ವತ್ರಿಕ ಮತದಾನ ವ್ಯವಸ್ಥೆಯನ್ನು ಅನುಮೋದಿಸಿದ ಸಂದರ್ಭದಲ್ಲಿ ಖಂಡಿತವಾಗಿಯೂ ಇಂತಹ ಪರಿಸ್ಥಿತಿಯನ್ನು ಊಹಿಸಿರಲಿಕ್ಕಿಲ್ಲ. ಚುನಾವಣಾ ಆಯ್ಕೆಯನ್ನು ಒಬ್ಬ ಆಯ್ಕೆದಾರನು ಚಲಾಯಿಸುವ ಆದರೆ ಶಾಸನಾತ್ಮಕ ಅಧಿಕಾರವನ್ನು ಒಂದು ರಾಜಕೀಯ ಪಕ್ಷವು ವಶಪಡಿಸಿಕೊಳ್ಳುವ ಪರಿಸ್ಥಿತಿಯನ್ನು ನಿರೀಕ್ಷಿಸಿರಲಿಕ್ಕಿಲ್ಲ. ಇದನ್ನು ಹೊರತಾಗಿ ನೋಡಿದರೂ, ಸಂವಿಧಾನದ 10ನೆಯ ಪರಿಚ್ಛೇದವನ್ನು ಜಾರಿಗೊಳಿಸಿದ್ದು ಸಂವಿಧಾನದ ಮೂಲ ತತ್ವಗಳಿಗೆ ವ್ಯತಿರಿಕ್ತವಾದದ್ದಲ್ಲವಾದರೂ ಅದು ಮೂಲ ಸಂಹಿತೆಗಳನ್ನು ಅತಿಕ್ರಮಿಸಿದ ಒಂದು ಕ್ರಮವಾಗಿಯೇ ಉಳಿಯಲಿದೆ.

ಆದ್ದರಿಂದಲೇ ಸರ್ಕಾರವು ಶಾಸನಸಭೆಯ ವ್ಯವಹಾರಗಳನ್ನು ಚರ್ಚೆ ಮಾಡಲು ತಾನು ಕಾರ್ಯ ನಿರ್ವಹಿಸುವ ದಿನದಂದು ಸದನವು, ಮಧ್ಯಾಹ್ನ 2 ಗಂಟೆಗೆ ನೆರೆದಾಗ, ಹಾಜರಾತಿಯೇ ಇರುವುದಿಲ್ಲ. ಭಾರತದ ಸರ್ಕಾರದ ಯಾರೋ ಒಬ್ಬರು ಜಂಟಿ ಕಾರ್ಯದರ್ಶಿಯು ಸಿದ್ಧಪಡಿಸಿದ ಒಂದು ಶಾಸನ ಅಥವಾ ಮಸೂದೆಯನ್ನು ಯಾಂತ್ರಿಕವಾಗಿ, ಯಾವುದೇ ಚರ್ಚೆ ಇಲ್ಲದೆ, ವಿರೋಧ ಇಲ್ಲದೆ, ಪಕ್ಷದ ಅಣತಿಯಂತೆ, ಸದನದಲ್ಲಿ ಅಂಗೀಕಾರವಾಗುತ್ತದೆ ಎನ್ನುವ ವಾಸ್ತವವನ್ನು ಪ್ರತಿಯೊಬ್ಬ ಸಂಸದನೂ ಅರಿತೇ ಇರುತ್ತಾನೆ. ಯಾವುದೇ ಮಸೂದೆಯೂ ಸಂಸದೀಯ ಸ್ಥಾಯಿ ಸಮಿತಿಗೆ ವಹಿಸಲಾಗುವುದಿಲ್ಲ. ಸಂಸದೀಯ ಸ್ಥಾಯಿ ಸಮಿತಿಗಳನ್ನೂ ಸಹ ಸಂಬಂಧಪಟ್ಟವರೇ ಹೊಸಕಿಹಾಕಿರುತ್ತಾರೆ. ದೇಶಕ್ಕಾಗಿ ಉತ್ತಮ ಶಾಸನಗಳನ್ನು ಜಾರಿಗೊಳಿಸುವ ಒಂದು ಪ್ರೇರಣೆ ಸಂಸದರಿಗೆ ಯಾವುದೇ ರೀತಿಯಿಂದಲೂ ದೊರೆಯುವುದಿಲ್ಲ.

ಆದರೆ ಇದೊಂದೇ ಸಮಸ್ಯೆಯಲ್ಲ. ಸದನದಲ್ಲೂ ಸಹ ಸಂಸತ್ ಸದಸ್ಯರ ವರ್ತನೆ ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಹಾಳುಗೆಡಹುವಂತಾಗಿದೆ. ಚಿಂತನೆಗಳ, ಆಲೋಚನೆಗಳ ಕರ್ಮಭೂಮಿ ಎಂದೇ ಭಾವಿಸಲಾಗಿದ್ದ ಒಂದು ವೇದಿಕೆ ಆಡಳಿತಾರೂಢ ಪಕ್ಷದ ಹಠಮಾರಿ ಧೋರಣೆ ಮತ್ತು ವಿರೋಧ ಪಕ್ಷಗಳ ಪ್ರತಿರೋಧದ ಸಾಮಥ್ರ್ಯದ ನಡುವಿನ ಪೈಪೋಟಿ ನಡೆಸುವ ಅಖಾಡ ಆಗಿ ಪರಿಣಮಿಸಿದ್ದು, ಪರಿಸ್ಥಿತಿ ಮೂವತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಿದಂತೆ ಕಾಣುತ್ತಿದೆ.

ಮಂಡಿಸಲಾದ ಮಸೂದೆಗಳನ್ನು ರಾತ್ರಿಯಿಡೀ ನಿದ್ದೆಗೆಟ್ಟು ಓದಿ, ಅಧ್ಯಯನ ಮಾಡುವ ಆಸಕ್ತಿಯನ್ನೇ ಕಳೆದುಕೊಂಡಿರುವ ಸಂಸದರು ಸಂಸತ್ ಕಲಾಪವನ್ನು ಪ್ರಕ್ಷುಬ್ಧಗೊಳಿಸುವ ನಿಟ್ಟಿನಲ್ಲೇ ಹೆಚ್ಚು ಉತ್ತೇಜನ ಪಡೆಯುತ್ತಾರೆ. ಒಂದು ಅರ್ಧ ಗಂಟೆಯ ಕಿರುಚಾಟವೇ ಎಲ್ಲವನ್ನೂ ನಿರ್ಧರಿಸುತ್ತದೆ. ಒಮ್ಮೆ ಸದನವನ್ನು ಮುಂದೂಡಿದರೆ, ಮುಂದಿನ ಮುಂದೂಡಿಕೆಯ ದಿನಾಂಕವನ್ನು ಪಡೆಯುವ ಪ್ರಯತ್ನದಲ್ಲಿ ತೊಡಗುವ ಸಂಸದರು, ಸಂಬಂಧಪಟ್ಟ ಸಚಿವರ ಶೋಧದಲ್ಲಿ ತೊಡಗಿರುತ್ತಾರೆ. ಅಂತಿಮವಾಗಿ ಕಲಾಪ ನಡೆದ ದಿನವನ್ನು ರಾತ್ರಿ ಯಾವುದೋ ಒಬ್ಬ ಉದ್ಯಮಿಯ ಔತಣಕೂಟದ ಮೂಲಕ ಮುಕ್ತಾಯಗೊಳಿಸುತ್ತಾರೆ. ಉದ್ಯಮಿಯು ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಂಪರ್ಕಕ್ಕಾಗಿಯೇ ಕಾಯುತ್ತಿರುವವರಾಗಿರುತ್ತಾರೆ. ಇದು ಕಳೆದ ಮೂವತ್ತು ವರ್ಷಗಳಿಂದ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಕಂಡುಬರುತ್ತಿರುವ ಪರಿಸ್ಥಿತಿ. ವಿಧಾನಸಭೆಗಳು ಇನ್ನೂ ಹದಗೆಟ್ಟುಹೋಗಿವೆ. ವರ್ಷದಲ್ಲಿ ಒಂದು ತಿಂಗಳ ಕಾಲವೂ ಅಧಿವೇಶನವನ್ನು ನಡೆಸುತ್ತಿಲ್ಲ.

ಇದರ ಪರಿಣಾಮ, ಶಾಸನ ಸಭೆಗಳಲ್ಲಿ ಒಬ್ಬ ಶಾಸಕ ಅಥವಾ ಸಂಸದ ಏನು ಮಾಡುತ್ತಾರೋ ಅದು ಅವರ ಮರು ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ನೂತನ ಕಾನೂನುಗಳನ್ನು ರಚಿಸುವಲ್ಲಿ ತಮ್ಮದೇನೂ ಪಾತ್ರವೇ ಇರುವುದಿಲ್ಲ ಎಂದು ಅರಿತಿರುವ ಮತದಾರರು ಶಾಸನಗಳ ಒಳಿತು ಕೆಡಕುಗಳ ಬಗ್ಗೆ ಚಿಂತಿಸುವುದೂ ಇಲ್ಲ. ತಮ್ಮ ಕ್ಷೇತ್ರದ ಸಾರ್ವಜನಿಕ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ, ಒಬ್ಬ ಶಾಸಕನನ್ನು ಅಥವಾ ಸಂಸದರನ್ನು ತಮ್ಮ ಮತ್ತು ಕಾರ್ಯಾಂಗದ ನಡುವಿನ ಮಧ್ಯವರ್ತಿ ಎಂದೇ ಮತದಾರರು ಭಾವಿಸುವಂತಾಗಿದೆ. ಇತರರಿಗೆ ಕೇವಲ ಕೆಲವು ಶಿಫಾರಸುಗಳು, ವರ್ಗಾವಣೆ, ನೇಮಕಾತಿ ಮುಂತಾದ ವಿಚಾರಗಳಲ್ಲಿ ಸಂಸದರ ಪ್ರಭಾವವನ್ನು ಬಳಸುವುದೇ ಮುಖ್ಯವಾಗುತ್ತದೆ. ಸ್ಥಳೀಯ ಅಭಿವೃದ್ಧಿ ಯೋಜನೆಗಳಲ್ಲಿ ತಮ್ಮ ನಿಕಟವರ್ತಿಗಳಿಗೆ ಗುತ್ತಿಗೆ ನೀಡುವ ನಿಟ್ಟಿನಲ್ಲಿ ಸಂಸದರ ಅಥವಾ ಶಾಸಕರ ಪ್ರಭಾವವನ್ನು ಬಳಸುವ ನಿಟ್ಟಿನಲ್ಲಿ ಜನತೆಯೂ ವ್ಯವಸ್ಥೆಯ ಬಗ್ಗೆ ಮೌನ ಸಮ್ಮತಿ ವ್ಯಕ್ತಪಡಿಸುವಂತಾಗಿರುತ್ತಾರೆ.

ಇಲ್ಲಿ ಕೇಳಬೇಕಾಗಿರುವ ಗಂಭೀರ ಪ್ರಶ್ನೆ ಎಂದರೆ: ಇಂತಹ ವಿಧಾನಸಭೆಗಳು ಅಥವಾ ಸಂಸತ್ತು ಭಾರತಕ್ಕೆ ಅಗತ್ಯವಿದೆಯೇ? ಪ್ರತಿವರ್ಷವೂ ಚುನಾವಣೆಗಳಿಗಾಗಿ ಕೋಟ್ಯಂತರ ರೂಗಳನ್ನು ಖರ್ಚು ಮಾಡುವುದು ಯಾವ ಪುರುಷಾರ್ಥಕ್ಕಾಗಿ? ಭಾರತ ನೇರವಾಗಿ ಚುನಾಯಿತವಾದ ಕಾರ್ಯಾಂಗ ಮತ್ತು ನ್ಯಾಯಾಂಗವೂ ವ್ಯವಸ್ಥೆಯನ್ನು ನಿರ್ವಹಿಸುವ ಮೂಲಕವೂ ಆಡಳಿತ ನಡೆಸಬಹುದು. ಶಾಸಕಾಂಗವು ಸರ್ಕಾರದ ಉತ್ತರದಾಯಿತ್ವವನ್ನು ಪ್ರಶ್ನಿಸುವಲ್ಲಿ ಅಥವಾ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇತ್ತೀಚಿನ ಉದಾಹರಣೆ ಎಂದರೆ, ಸಂಸತ್ತು ಮೂರು ತಿಂಗಳ ಕಾಲ ಕಾರ್ಯನಿರ್ವಹಿಲಾಗದೆ ಪ್ರಕ್ಷುಬ್ಧವಾಗಿದೆ. ಪೆಗಾಸಸ್ ವಿಚಾರವನ್ನು ಯಾವುದೇ ಕಾರಣಕ್ಕೂ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಪಟ್ಟುಹಿಡಿದಿದೆ. ಮತ್ತೊಂದೆಡೆ ವಿರೋಧ ಪಕ್ಷಗಳೂ ಹಠ ಹಿಡಿದು ಕುಳಿತಿವೆ. ಇಲ್ಲಿ ಒಂದು ಸಮಾನ ಒಪ್ಪಂದ ಸಾಧ್ಯವಾಗುತ್ತಿಲ್ಲ. ಆದರೂ ಭಾರತದ ಭವಿಷ್ಯವನ್ನು ನಿರ್ಧರಿಸುವಂತಹ ಕೆಲವು ಶಾಸನಗಳನ್ನು ಯಾವುದೇ ಚರ್ಚೆಗಳಿಲ್ಲದೆ ಅನುಮೋದಿಸಲಾಗಿದೆ.

ಶಾಸಕಾಂಗ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಾರಂಭಿಕ ಹೆಜ್ಜೆಯಾಗಿ, ನಾವು ಸಂವಿಧಾನದ ಹತ್ತನೆ ಪರಿಚ್ಚೇದ ನಿಯಮಗಳನ್ನು ಸಡಿಲಗೊಳಿಸಬೇಕಿದೆ. 2010ರಲ್ಲಿ ನಾನು ಸಂಸತ್ತಿನಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದೆ, ಮತ್ತೊಮ್ಮೆ 2019ರಲ್ಲೂ ಮಂಡಿಸಿದ್ದೆ. ವಿಶ್ವಾಸ ಮತದ ಮಂಡನೆ, ಅವಿಶ್ವಾಸ ಮತದ ಮಂಡನೆ, ಸದನದ ಮುಂದೂಡಿಕೆ, ಹಣಕಾಸು ಮಸೂದೆಗಳು ಅಥವಾ ಇತರ ಹಣಕಾಸು ವಿಚಾರಗಳಲ್ಲಿ ಮಾತ್ರವೇ ಪಕ್ಷದ ಆದೇಶವನ್ನು ಉಲ್ಲಂಘಿಸಿದರೆ, ಸಂಸದರನ್ನು ಅಥವಾ ಶಾಸಕರನ್ನು ಅನರ್ಹಗೊಳಿಸುವ ನಿಯಮವನ್ನು ಜಾರಿಗೊಳಿಸುವುದು ನನ್ನ ಆಗ್ರಹವಾಗಿತ್ತು. ಉಳಿದಂತೆ ಶಾಸನ ಸಭೆಯ ಅವಕಾಶವನ್ನು ಮುಕ್ತಗೊಳಿಸಬೇಕು. ಪಾರದರ್ಶಕ ನಿಯಮಪಾಲನೆಯ ನಿಬಂಧನೆಗಳ ಮೂಲಕ ರೀತಿ ಸದನವನ್ನು ಸ್ಥಗಿತಗೊಳಿಸುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕಿದೆ. ಕೆಲಸವೇ ಮಾಡದ ಶಾಸನಸಭೆಗಳು ದೇಶಕ್ಕೆ ಅನುಪಯುಕ್ತವಾಗುತ್ತದೆ.

ಮೂಲ: ಇಂಡಿಯನ್ ಎಕ್ಸ್ಪ್ರೆಸ್

Leave a Reply

Your email address will not be published.