ಭಾರತದಲ್ಲಿ ಕೋವಿಡ್ ನಿರ್ವಹಣೆ ಅಸಹಾಯಕತೆಯೇ ಸಮರ್ಥನೆಯಾದಾಗ…

ಸರ್ಕಾರದ ಕೈಗಳಿಗೆ ರಕ್ತ ಅಂಟಿಕೊಂಡಿದೆ. ಲೇಡಿ ಮ್ಯಾಕ್‍ಬೆತ್‍ಮಾತುಗಳು ನೆನಪಿಗೆ ಬರುತ್ತವೆ, “ಇಲ್ಲಿ ರಕ್ತದ ವಾಸನೆ ಇನ್ನೂ ಇದೆ. ಅರೇಬಿಯಾದ ಎಲ್ಲಾ ಸುಗಂಧ ದ್ರವ್ಯಗಳು ಪುಟ್ಟ ಕೈಯನ್ನು ಶುದ್ಧಗೊಳಿಸುವುದಿಲ್ಲ.”

ಎಂ.ಕೆ.ಆನಂದರಾಜೇ ಅರಸ್

ಏಪ್ರಿಲ್ 23-24, ಶುಕ್ರವಾರ ರಾತ್ರಿ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ 20 ಕೋವಿಡ್ ರೋಗಿಗಳು ವಿಧಿವಶರಾಗುತ್ತಾರೆ. ಕೆಲವರು ಆಮ್ಲಜನಕದ ಅಭಾವದಿಂದ ಮೃತಪಟ್ಟರೆ, ಕೆಲವರ ಸಾವು ಬೇರೆ ಆರೋಗ್ಯ ತೊಡಕುಗಳಿಂದಾಗಿರುತ್ತದೆ. ಹಾಗೇ ಅವರು ಮೃತರಾಗುವಾಗ ಅವರ ಸಂಬಂಧಿಗಳು, ಹಿತೈಷಿಗಳು ಹಾಗೂ ಆಸ್ಪತ್ರೆಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳು ನಿಸ್ಸಹಾಯಕರಾಗಿದ್ದರು. ಊಹಿಸಿಕೊಳ್ಳಿ! ನೀವು ಅಲ್ಲಿ ವೈದ್ಯರಾಗಿದ್ದೀರಾ. ನಿಮ್ಮ ಕಣ್ಮುಂದೆಯೇ ರೋಗಿಗಳು ಸಾಯುತ್ತಿದ್ದಾರೆ. ಆಮ್ಲಜನಕ ನೀಡಿದರೆ ಅವರು ಬದುಕಿಕೊಳ್ಳುತ್ತಾರೆ. ಆದರೆ ನಿಮ್ಮ ಆಸ್ಪತ್ರೆಯಲ್ಲಿರುವ ಆಮ್ಲಜನಕದ ಸಿಲಿಂಡರುಗಳೆಲ್ಲಾ ಖಾಲಿಯಾಗಿವೆ. ನಿಮ್ಮೆಲ್ಲಾ ಪರಿಣತಿ, ಅನುಭವ, ವಿದ್ಯೆ ನಿಷ್ಪ್ರಯೋಜಕವಾಗಿವೆ. ನೀವು ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತಿದ್ದೀರಾ.  ಕುಂಭ ಮೇಳದಲ್ಲಿ ಲಕ್ಷೋಪಲಕ್ಷ ಭಕ್ತಾದಿಗಳಿಂದ ಸಂತೃಪ್ತರಾಗಿದ್ದ ದೇವತೆಗಳು, ಪಶ್ಚಿಮ ಬಂಗಾಳದಲ್ಲಿ ಪ್ರವಾಹೋಪಾದಿಯಲ್ಲಿ ಜನರನ್ನು ಆಕರ್ಷಿಸಿದ ರಾಜಕೀಯ ನೇತಾರರ್ಯಾರೂ ಅವರ ಸಹಾಯಕ್ಕೆ ಬರುತ್ತಿಲ್ಲ. ಇದೊಂದು ‘ಮೇಕ್ ಇನ್ ಇಂಡಿಯಾ’ ಸೃಷ್ಟಿ. ನಮ್ಮ ಅವ್ಯವಸ್ಥೆ, ಅಲಕ್ಷ್ಯ, ಅದಕ್ಷತೆ, ದುರಾಸೆ, ಸ್ವಾರ್ಥ, ಕಪಟತೆ, ದೂರದೃಷ್ಟಿಯ ಅಭಾವ ಇಂತಹದೊಂದು ಸ್ಥಿತಿಗೆ ಕಾರಣವಾಯಿತು.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ಡಾ. ಡಿ. ಕೆ. ಬಲುಜಾ ಹೇಳುತ್ತಾರೆ, “ದೆಹಲಿ ಸರ್ಕಾರ ನಮಗೆ 3.6 ಮೆಟ್ರಿಕ್ ಟನ್ ಆಮ್ಲಜನಕ ನೀಡುವುದಾಗಿ ಹೇಳಿತ್ತು. ನಮಗೆ ಹೆಚ್ಚು ಅವಶ್ಯಕತೆಯಿದ್ದರೂ ನಾವು ಅಷ್ಟರಲ್ಲೇ ನಿಭಾಯಿಸಲು ಒಪ್ಪಿಕೊಂಡಿದ್ದೆವು. ಕಳೆದ ರಾತ್ರಿ ಟ್ಯಾಂಕರ್ ಬರಲಿಲ್ಲ. ನಾವು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೂರೈಕೆದಾರರಿಗೆ ಹಲವಾರು ಕರೆಗಳನ್ನು ಮಾಡಿದೆವು. ನಮ್ಮಲ್ಲಿದ್ದ ಆಮ್ಲಜನಕ ಖಾಲಿಯಾಯಿತು. ಏಳು ಗಂಟೆಗಳ ವಿಳಂಬದ ನಂತರ ನಮಗೆ 1,000 ಲೀಟರ್ ಆಮ್ಲಜನಕ ದೊರೆಯಿತು. ಆದರೆ ಅಷ್ಟರಲ್ಲಿ ನಿರ್ಣಾಯಕ ಘಟಕದಲ್ಲಿದ್ದ ರೋಗಿಗಳಿಗೆ ತೊಂದರೆಯಾಗಿತ್ತು. ಇದು ಮಧ್ಯರಾತ್ರಿಯ ನಂತರ ಘಟಿಸಿತು. ಆಮ್ಲಜನಕದ ಕೊರತೆಯಲ್ಲದೇ, ಇತರ ಆರೋಗ್ಯ ತೊಡಕುಗಳಿಂದ ಸಹ ಕೆಲವು ಸಾವುಗಳು ಸಂಭವಿಸಿದವು.”

ಮುಂದುವರೆದು ಬಲುಜಾ ಹೇಳುತ್ತಾರೆ, “ಆಮ್ಲಜನಕದ ಒತ್ತಡ ನಿಶ್ಚಿತವಾಗಿಯೂ ಕಡಿಮೆಯಾಗಿತ್ತು. ಸಾಮಾನ್ಯ ರೋಗಿ ನಿಭಾಯಿಸಿಕೊಳ್ಳಬಹುದು. ಆದರೆ ಹೆಚ್ಚಿನ ಅವಶ್ಯಕತೆಯಿದ್ದವರಿಗೆ ಆಮ್ಲಜನಕದ ಕೊರತೆಯನ್ನು ನಿಭಾಯಿಸಲು ಆಗುತ್ತಿರಲಿಲ್ಲ.’

ಸರ್ಕಾರದ ಕೈಗಳಿಗೆ ರಕ್ತ ಅಂಟಿಕೊಂಡಿದೆ. ಲೇಡಿ ಮ್ಯಾಕ್‍ಬೆತ್‍ಳ ಮಾತುಗಳು ನೆನಪಿಗೆ ಬರುತ್ತವೆ, “ಇಲ್ಲಿ ರಕ್ತದ ವಾಸನೆ ಇನ್ನೂ ಇದೆ. ಅರೇಬಿಯಾದ ಎಲ್ಲಾ ಸುಗಂಧ ದ್ರವ್ಯಗಳು ಈ ಪುಟ್ಟ ಕೈಯನ್ನು ಶುದ್ಧಗೊಳಿಸುವುದಿಲ್ಲ.”

ವ್ಯವಸ್ಥೆಯ ಈ ವಿಫಲತೆಗೆ ಯಾರನ್ನು ದೂಷಿಸಬಹುದು? ಯಾರ ಮೇಲೆ ಮೊಕದ್ದಮೆ ಹೂಡಬೇಕು? ರಿಪಬ್ಲಿಕ್ ಸುದ್ದಿವಾಹಿನಿಯೂ ಸೇರಿದಂತೆ ಕೆಲವು ಮಾಧ್ಯಮಗಳು, ರೈತರ ಪ್ರತಿಭಟನೆಯಿಂದ ಸಂಚಾರಕ್ಕೆ ಅಡಚಣೆಯಾಗಿ, ಆಮ್ಲಜನಕ ಟ್ಯಾಂಕರ್‍ಗಳ ಪೂರೈಕೆ ವಿಳಂಬವಾಗುತ್ತಿದೆ ಎಂದು ರೈತರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದವು.  ಆದರೆ ಟ್ಯಾಂಕರ್‍ಗಳ ಮಾರ್ಗದಲ್ಲಿ ಯಾವ ಅಡಚಣೆಗಳು ಇರಲಿಲ್ಲ.  ರೈತರನ್ನು ದೂರಿ ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಷ್‍ಟ್ಯಾಗ್‍ಗಳನ್ನು ಬಳಸಲಾಗುತಿತ್ತು. ಇದೊಂದು ಪಿತೂರಿ ಸಿದ್ಧಾಂತವಾಗಿತ್ತು.

ಕೋವಿಡ್-19 ವೈರಾಣುವಿನಿಂದ ಮೃತಪಟ್ಟರೆ ಅದಕ್ಕೊಂದು ಸಮಜಾಯಿಷಿ ನೀಡಬಹುದು. ಆದರೆ ಆಮ್ಲಜನಕವಿಲ್ಲದೆ ಮೃತಪಟ್ಟರೆ ಅದಕ್ಕೇನು ಸಮರ್ಥನೆಯಿದೆ? ಸರ್ಕಾರ ಇದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ. ಭಾರತದ ಆರೋಗ್ಯ ವ್ಯವಸ್ಥೆ ಒಂಭತ್ತು ಪಿನ್‍ಗಳಂತೆ ಕುಸಿದು ಬಿದ್ದಿತ್ತು.

ಆಮ್ಲಜನಕದ ಕೊರತೆಗೆ ಕಾರಣವೇನು? ನಟಿ ಕಂಗನಾ ರೌನತ್ ಸೇರಿದಂತೆ ಹಲವರು ಈ ಪರಿಸ್ಥಿತಿಗೆ ರಾಜ್ಯ ಸರ್ಕಾರಗಳನ್ನು ದೂಷಿಸಿದರು. ಪಿಎಂ-ಕೇರ್ಸ್ ನಿಧಿಯಿಂದ ಆಮ್ಲಜನಕ ಘಟಕಗಳನ್ನು ನಿರ್ಮಿಸಲು ರಾಜ್ಯ ಸರ್ಕಾರಗಳಿಗೆ ಹಣ ಹಂಚಿಕೆಯಾಗಿತ್ತೆಂದು, ಆದರೆ ರಾಜ್ಯ ಸರ್ಕಾರಗಳು ಆ ಕೆಲಸ ಮಾಡಲಿಲ್ಲವೆಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು.

ಮಾಧ್ಯಮ ಜಾಲತಾಣ ಸ್ಕ್ರೋಲ್ ವರದಿಯೊಂದರ ಪ್ರಕಾರ ಇವೆಲ್ಲಾ ಶುದ್ಧ ಸುಳ್ಳುಗಳು. ರಾಜ್ಯ ಸರ್ಕಾರಗಳಿಗೆ ಪಿಎಂ-ಕೇರ್ಸ್ ನಿಧಿಯಿಂದ ಯಾವುದೇ ಹಣವೂ ಹಂಚಿಕೆಯಾಗಿರಲಿಲ್ಲ. ನೂರೈವತ್ತು ಪಿಎಸ್‍ಎ ಆಮ್ಲಜನಕ ಘಟಕಗಳನ್ನು ನಿರ್ಮಿಸುವುದಾಗಿ ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಹೇಳಿದ್ದರು. ಕೇಂದ್ರ ಆರೋಗ್ಯ ಸಚಿವಾಲಯದಡಿ ಬರುವ ದಿ ಸೆಂಟ್ರಲ್ ಮೆಡಿಕಲ್ ಸರ್ವೀಸಸ್ ಸೊಸೈಟಿಗೆ ಆಮ್ಲಜನಕ ಘಟಕಗಳನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಗಿತ್ತು. ಈ ಸಂಸ್ಥೆಯು 2020ರ ಅಕ್ಟೋಬರ್ 21 ರಂದು ದೇಶದ 14 ರಾಜ್ಯಗಳಲ್ಲಿ ಆಮ್ಲಜನಕ ಘಟಕಗಳನ್ನು ನಿರ್ಮಿಸಲು ಟೆಂಡರ್ ಆಹ್ವಾನಿಸಿತ್ತು. ನಂತರ 150 ಘಟಕಗಳಿಗೆ ಹೆಚ್ಚುವರಿಯಾಗಿ 12 ಘಟಕಗಳನ್ನು ಸೇರಿಸಲಾಯಿತು. ಕೋವಿಡ್ ಪಿಡುಗು ಆರಂಭವಾದ ಎಂಟು ತಿಂಗಳುಗಳ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ ಈ ಕೇಂದ್ರ ಸಂಸ್ಥೆ ಎಂಟು ತಿಂಗಳುಗಳ ಅಮೂಲ್ಯ ಸಮಯವನ್ನು ಪೆÇೀಲು ಮಾಡಿತು. ಈ ಟೆಂಡರ್‍ನಲ್ಲಿ ಆಯ್ಕೆ ಮಾಡಲಾದ ಪೂರೈಕೆದಾರರು ಆಮ್ಲಜನಕ ಘಟಕಗಳನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ನಿರ್ಮಿಸಲು ಜವಾಬ್ದಾರರಾಗಿದ್ದರು. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರವು ಜಿಲ್ಲಾ ಆಸ್ಪತ್ರೆಗಳು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಬೇಕಾದ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ವಿಳಂಬಕ್ಕೆ ಕೇಂದ್ರವು ಸಂಪೂರ್ಣವಾಗಿ ಕಾರಣವಾಗಿತ್ತು.

ಟೆಂಡರ್‍ನ ನಿಯಮಗಳ ಪ್ರಕಾರ ಆಯ್ಕೆಗೊಂಡ ಪೂರೈಕೆದಾರರು 45 ದಿನಗಳೊಳಗೆ ಘಟಕಗಳ ಅನುಸ್ಥಾಪನೆಯನ್ನು ಮುಗಿಸಬೇಕಾಗಿತ್ತು. ಆದರೆ ಟೆಂಡರ್ ಆಹ್ವಾನಿಸಿದ ನಾಲ್ಕು ತಿಂಗಳುಗಳ ನಂತರವೂ ಸಹ 162 ಪಿಎಸ್‍ಎ ಆಮ್ಲಜನಕ ಘಟಕಗಳ ಪೈಕಿ ಕೇವಲ 33 ಘಟಕಗಳ ಅನುಸ್ಥಾಪನೆ ಮಾತ್ರ ಮಾಡಲಾಗಿತ್ತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಸಮರಕ್ಕೆ ಕಾರಣವಾಯಿತು. ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಆಮ್ಲಜನಕ ಘಟಕಗಳ ಅನುಸ್ಥಾಪನೆ  ವಿಳಂಬವಾಗಿದೆಯೆಂದು ಬಿಜೆಪಿ ವಕ್ತಾರರು ಹೇಳಿಕೆ ನೀಡಲಾರಂಭಿಸಿದರು. 162 ಆಮ್ಲಜನಕ ಘಟಕಗಳ ಪೈಕಿ, 14 ಘಟಕಗಳನ್ನು ಉತ್ತರ ಪ್ರದೇಶಕ್ಕೆ ನೀಡಲಾಗಿತ್ತು. ಮಾಧ್ಯಮ ಜಾಲತಾಣವೊಂದು ಈ ಬಗ್ಗೆ ತನಿಖೆ ಮಾಡಿದಾಗ ಉತ್ತರ ಪ್ರದೇಶದ ಯಾವುದೇ ಜಿಲ್ಲಾ ಆಸ್ಪತ್ರೆಯಲ್ಲೂ ಯೋಜಿತ ಆಮ್ಲಜನಕ ಘಟಕಗಳ ಅನುಸ್ಥಾಪನೆಯಾಗಿರಲಿಲ್ಲ.

ನಿಷ್ಕ್ರಿಯ, ಜಡ್ದುಗಟ್ಟಿದ ವ್ಯವಸ್ಥೆ ಕಾರಣವಲ್ಲವೇ?

ನನ್ನ ತಾಯಿಯನ್ನು ಕೊಂದರು

ಏಪ್ರಿಲ್ 27ರಂದು ದೆಹಲಿಯ ಸರ್ದಾರ್ ವಲ್ಲಭಾಯಿ ಪಟೇಲ್ ಕೋವಿಡ್ ಕೇರ್ ಸೆಂಟರ್ ಎದುರಿನ ಪಾದಚಾರಿ ರಸ್ತೆಯಲ್ಲಿ 28ರ ಹರೆಯದ ಮುಕುಲ್ ವ್ಯಾಸ್ ಅಳುತ್ತಾ ಕುಳಿತಿದ್ದಾರೆ. ಬೆಳಿಗ್ಗೆ ಅವರ ತಾಯಿಯನ್ನು ಅಲ್ಲಿ ಚಿಕಿತ್ಸೆಗಾಗಿ ಕರೆತಂದಿದ್ದರು. ಆದರೆ ಅವರನ್ನು ಆಸ್ಪತ್ರೆಯ ಒಳಗೆ ಕರೆದೊಯ್ಯಲು ಹಲವು ಕಾರಣಗಳಿಂದ ವಿಳಂಬವಾಗುತ್ತದೆ. ನಾಲ್ಕು ಘಂಟೆಗಳ ನಂತರ ಆಕೆ ತಾವು ಬಂದಿದ್ದ  ಆಟೋದಲ್ಲಿಯೇ ಪ್ರಾಣ ಬಿಡುತ್ತಾರೆ.

“ಅವರು ನನ್ನ ತಾಯಿಯನ್ನು ಕೊಂದರು. ಅವರನ್ನು ಈಗ ಎಲ್ಲಿಗೆ ತೆಗೆದುಕೊಂಡು ಹೋಗಲಿ. ನಾನು ಇಲ್ಲಿ ನಿಂತು ಗಂಟೆಗಳ ಕಾಲ ಕಾದೆ. ಅವರು ನನಗೆ ಆಸ್ಪತ್ರೆ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಧಿವಿಧಾನಗಳನ್ನು ಪೂರ್ಣಗೊಳಿಸುವಂತೆ ಕೇಳುತ್ತಿದ್ದರು. ಮೆಸೇಜ್, ವಾಟ್ಸ್‍ಅಪ್…ನಾನು ಕಿರುಚುತ್ತಿದ್ದೆ ಹಾಗೂ ಸಹಾಯಕ್ಕಾಗಿ ಅಳುತ್ತಿದ್ದೆ. ಆದರೆ ಯಾರೊಬ್ಬರು ಬರಲಿಲ್ಲ. ಈಗ ನನ್ನ ತಾಯಿ ಗತಿಸಿದ್ದಾರೆ.” ಮುಕುಲ್‍ನ ಆಕ್ರಂದನವನ್ನು ಕೇಳುವವರ್ಯಾರು?

ಅದೇ ದಿನಾಂಕದಂದು ದೆಹಲಿಯ ಮತ್ತೊಂದು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಕೋವಿಡ್‍ನಿಂದ ಮೃತಪಡುತ್ತಾರೆ. ರೊಚ್ಚಿಗೆದ್ದ ಸಂಬಂಧಿಕರಿಂದ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಕಿಯರ ಮೇಲೆ ಹಲ್ಲೆಯಾಗುತ್ತದೆ. ಇದಕ್ಕೆ ಕಾರಣ ಮೃತಪಟ್ಟ ವ್ಯಕ್ತಿಗೆ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಹಾಸಿಗೆ ಸಿಗದಿದ್ದ ಕಾರಣ ಆಕೆ ಸಾಯುತ್ತಾರೆ.

ಇವು ಕೆಲವು ಉದಾಹರಣೆಗಳು. ಇಂತಹ ನೂರಾರು ಪ್ರಕರಣಗಳು ದೇಶಾದಾದ್ಯಂತ ಇಂದು ಪ್ರತಿದಿನ ಘಟಿಸುತ್ತಿವೆ. ಅಸಹಾಯಕತೆಯೇ ಸಮರ್ಥನೆಯಾದಾಗ ಯಾರನ್ನು ಪ್ರಶ್ನಿಸುವುದು, ಯಾರ ಮೇಲೆ ಜವಾಬ್ದಾರಿ ಹೊರಿಸುವುದು.

ನೇತಾರರಿಗೆ ಬಸ್ಕಿ ಹೊಡೆಸುವವರು ಯಾರು?

ಮೊದಲನೇ ಅಲೆಯಲ್ಲಿ ಸಮರ್ಥ ನಿರ್ವಹಣೆಗಾಗಿ ಜಾಗತಿಕ ಮಟ್ಟದಲ್ಲಿ ಬೆನ್ನು ತಟ್ಟಿಸಿಕೊಂಡಿದ್ದ ಭಾರತ ಕೋವಿಡ್‍ನ ಎರಡನೇ ಅಲೆಯಲ್ಲಿ ತನ್ನ ಅದಕ್ಷತೆಗಾಗಿ ಪ್ರಪಂಚದ ಮುಂದೆ ತಲೆ ತಗ್ಗಿಸಿದೆ. ಲಾಕ್‍ಡೌನ್ ಸಮಯದಲ್ಲಿ ಪೋಲಿಸರು ನಿಯಮ ಉಲ್ಲಂಘಿಸಿದವರನ್ನು ಹಿಡಿದು ಅವರಿಗೆ ದಂಡನೆಯಾಗಿ ಕಿವಿ ಹಿಡಿದು ಬಸ್ಕಿ ಹೊಡೆಸುತ್ತಿದ್ದನ್ನು ನೀವು ನೋಡಿರುತ್ತಿರಿ. ಬೇಜವಾಬ್ದಾರಿ ನೇತಾರರಿಗೆ ಬಸ್ಕಿ ಹೊಡೆಸುವವರು ಯಾರು?

ಸಾಮಾನ್ಯ ಜನರು ಸಹ ಇಂದಿನ ಪರಿಸ್ಥಿತಿಗೆ ಜವಾಬ್ದಾರರು. ಕೋವಿಡ್ ಮೊದಲನೇ ಅಲೆಯ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ಜನರು ಎಚ್ಚರಿಕೆ ಕ್ರಮಗಳನ್ನು, ಕೋವಿಡ್ ಸೂಕ್ತ ವರ್ತನೆಯನ್ನು ಪಾಲಿಸುವುದನ್ನು ಕಡಿಮೆ ಮಾಡಿದರು. ಜಾತ್ರೆ, ಮದುವೆ ಮುಂತಾದ ಸಮಾರಂಭಗಳಲ್ಲಿ ಸಾವಿರಾರು ಜನ ಯಾವುದೇ ಎಚ್ಚರಿಕೆಯಿಲ್ಲದೇ ಪರಸ್ಪರ ಬೆರೆಯಲು ಶುರು ಮಾಡಿದರು. ಈ ಕಾರಣದಿಂದಲೇ ಕೋವಿಡ್ ಇಂದು ವ್ಯಾಪಕವಾಗಿ ಹರಡಿ ದೇಶದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಚೇತರಿಸಿಕೊಳ್ಳುತ್ತಿದ್ದ ನಮ್ಮ ಅರ್ಥಿಕ ವ್ಯವಸ್ಥೆ ಮತ್ತೆ ಕುಂಟುವಂತೆ ಮಾಡಿದೆ.

ಜಾಗತಿಕ ಮಾಧ್ಯಮಗಳು ಯಾವುದೇ ಮುಲಾಜಿಲ್ಲದೇ ಭಾರತದ ಆರೋಗ್ಯ ವವಸ್ಥೆಯ ವ್ಯಾಪಕ ವಿಫಲತೆಯನ್ನು ಎತ್ತಿ ತೋರಿಸುತ್ತಿವೆ. ಯು.ಎಸ್.ಎ. ಮೂಲದ ಮಾಧ್ಯಮ ಸಿಎನ್‍ಎನ್ ಜಾಲತಾಣದಲ್ಲಿ ಡ್ರೋನ್‍ನಿಂದ ತೆಗೆದ ದೆಹಲಿಯ ಚಿತಾಗಾರವೊಂದರ ಚಿತ್ರವಿತ್ತು. ಆ ಚಿತಾಗಾರದ ತುಂಬಾ ಮೃತದೇಹಗಳ ಅಂತಿಮ ಸಂಸ್ಕಾರ ನಡೆಯುತ್ತಿದ್ದ ದೃಶ್ಯವದು. ಒಮ್ಮೆ ನೋಡಿದರೆ ನಮ್ಮ ಸ್ಮೃತಿ ಪಟಲದಲ್ಲಿ ಉಳಿದುಬಿಡುವಂತಹ ಮನಕಲಕುವ ದೃಶ್ಯ.

ಮುಳುವಾದ ಅಲಕ್ಷ್ಯ

ಏಪ್ರಿಲ್ 20ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ಭಾರತದ ಪ್ರಧಾನ ಮಂತ್ರಿಗಳು ಜನರಿಗೆ ಕೋವಿಡ್-19 ನಿಯಂತ್ರಿಸಲು ಕೋವಿಡ್ ಸೂಕ್ತ ವರ್ತನೆಯ ಪ್ರಾಮುಖ್ಯತೆಯ ಬಗ್ಗೆ ಪ್ರಸ್ತಾಪಿಸುತ್ತ ದೈಹಿಕ ಅಂತರ ಇಡಬೇಕು ಎಂದು ಹೇಳುತ್ತಾರೆ. ಆದರೆ ಹಾಗೇ ಸಂದೇಶ ನೀಡಿದ ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದಲ್ಲಿ ಬೃಹತ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸುತ್ತಾ, ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಎಂದೂ ಜನ ಸೇರಿರಲಿಲ್ಲವೆಂದು ಎದೆಯುಬ್ಬಿಸಿ ಹೇಳುತ್ತಾರೆ. ಆ ಚುನಾವಣಾ ರ್ಯಾಲಿಯಲ್ಲಿದ್ದವರ್ಯಾರೂ ಸಾಮಾಜಿಕ ಅಂತರವನ್ನು ಪಾಲಿಸುತ್ತಿರಲಿಲ್ಲವೆಂದು ಇಲ್ಲಿ ಒತ್ತಿ ಹೇಳುವ ಅಗತ್ಯವಲ್ಲ. ನಮ್ಮ ನೇತಾರರ ಈ ಕಪಟತೆಯೇ ಇಂದು ಭಾರತದ ಆರೋಗ್ಯ ವ್ಯವಸ್ಥೆ ಹಿಂದೆಂದೂ ಎದುರಿಸದ ಅತ್ಯಂತ ದಾರುಣವಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದಕ್ಕೆ ಕಾರಣವಾಗಿದೆ.

ಏಪ್ರಿಲ್ ತಿಂಗಳ ಮಧ್ಯದಲ್ಲಿ ಪ್ರತಿ ದಿನ 20 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತಿತ್ತು. ಆದರೆ ದೇಶಾದಾದ್ಯಂತ ಆ ಸಂದರ್ಭದಲ್ಲಿ ಕೋವಿಡ್ ಸಕಾರಾತ್ಮಕತೆ ಪ್ರಮಾಣ ಶೇ.15 ರಷ್ಟಿತ್ತು. ದೆಹಲಿಯಲ್ಲಿ ಶೇ. 30ಕ್ಕಿಂತ ಹೆಚ್ಚಾಗಿತ್ತು. ಅಂದರೆ ಪರೀಕ್ಷೆ ಮಾಡುತ್ತಿದ್ದ ಜನರ ಸಂಖ್ಯೆ ಹಾಗೂ ಸೋಂಕಿತರಾಗಿದ್ದವರ ಸಂಖ್ಯೆಯ ಮಧ್ಯೆ ಅಜಗಜಾಂತರವಿತ್ತು. 

ಕೋವಿಡ್ ಎರಡನೇ ಅಲೆ ಬರುವುದು ನಿಶ್ಚಯವಾಗಿತ್ತು. ಇದನ್ನು ನಿಭಾಯಿಸಲು ವ್ಯವಸ್ಥೆ ಸಮರೋಪಾದಿಯಲ್ಲಿ ಸಜ್ಜಾಗಬೇಕಾಗಿತ್ತು. ಜನವರಿ ತಿಂಗಳಿನಿಂದಲೇ ಮಹಾರಾಷ್ಟ್ರ ಸರ್ಕಾರ ಎರಡನೇ ಅಲೆ ಬರಬಹುದೆಂದು ಎಚ್ಚರಿಸಿತ್ತು. ಈಗಾಗಲೇ ಯೂರೋಪ್ ದೇಶಗಳಲ್ಲಿ ಮೂರನೇ ಹಾಗೂ ನಾಲ್ಕನೇ ಅಲೆಗಳು ಬಂದಿವೆ. ಕೋವಿಡ್‍ನ ವಿವಿಧ ರೂಪಾಂತರಗಳು ಹಾಗೂ ಕೋವಿಡ್‍ಗೆ ನಾವು ಕಳೆದ ಬಾರಿ ಸೋಂಕಿಗೊಳಗಾದಾಗ ನಮ್ಮ ದೇಹದಲ್ಲಿ ಸೃಷ್ಟಿಯಾದ ಪ್ರತಿಕಾಯಗಳು ಕೇವಲ ಐದಾರು ತಿಂಗಳುಗಳಲ್ಲಿ ತಟಸ್ಥವಾಗುತ್ತಿರುವುದು ಸಹ ಎರಡನೇ ಅಲೆಗೆ ಕಾರಣವಾಗಿದೆ.

ನ್ಯಾಯಲಯಗಳಿಂದ ಛೀಮಾರಿ

ಕೋವಿಡ್19 ಎರಡನೇ ಅಲೆ ಸುನಾಮಿಯಾಗಿ ಬದಲಾಗುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳು ಹೆಚ್ಚಾದವು. ನ್ಯಾಯಾಲಯಗಳು ಹಾಕಿರುವ ಛೀಮಾರಿ ಸರ್ಕಾರಕ್ಕೂ, ಚುನಾವಣಾ ಆಯೋಗಕ್ಕೂ ಕಪಾಳಮೋಕ್ಷವಾಗಿದೆ. ಮದ್ರಾಸ್ ಉಚ್ಚ ನ್ಯಾಯಲಯವು ಕೋವಿಡ್‍ನಂತಹ ಗಂಭೀರ ಸನ್ನಿವೇಶದಲ್ಲಿ ಚುನಾವಣಾ ರ್ಯಾಲಿಗಳಿಗೆ ಅನುವು ಮಾಡಿಕೊಟ್ಟ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆಗಡುಕರೆಂದು ಮೊಕದ್ದಮೆ ಯಾಕೆ ಹೂಡಬಾರದೆಂದು ಪ್ರಶ್ನಿಸಿತು.

ಕೋವಿಡ್ ಮೊದಲನೇ ಅಲೆಯಲ್ಲಿ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣಕ್ಕಿದ್ದ ಉತ್ಸುಕ ಪ್ರತಿಕ್ರಿಯೆ 2021ರ ಏಪ್ರಿಲ್ 20ರಂದು ಮಾಡಿದ ಭಾಷಣಕ್ಕಿರಲಿಲ್ಲ. ಮಾತು ಹಾಗೂ ಆಚಾರ ಎರಡು ಬೇರೆ ಎಂಬುದು ಈಗಾಗಲೇ ಜನರಿಗೆ ಅರ್ಥವಾದಂತಿತ್ತು. ಕೇಂದ್ರ ಸರ್ಕಾರ ಕೋವಿಡ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಬುದ್ಧಿಶಕ್ತಿ  ಉಪಯೋಗಿಸಲಿಲ್ಲ. ಸಾರ್ವಜನಿಕರು ಕೋವಿಡ್ ಶಿಸ್ತು ಪಾಲಿಸಲಿಲ್ಲ. ಚುನಾವಣಾ ರ್ಯಾಲಿಗಳು ಹಾಗೂ ಕುಂಭಮೇಳಕ್ಕೆ ನಿಯಂತ್ರಣ ಹಾಕಿದ್ದರೆ ಕೋವಿಡ್ ಎರಡನೇ ಅಲೆ ಇಷ್ಟು ಶೀಘ್ರವಾಗಿ ಈ ಮಟ್ಟ ತಲುಪುತ್ತಿರಲಿಲ್ಲ.

ಕೇಂದ್ರ ಹಾಗೂ ರಾಜ್ಯ ಮಟ್ಟಗಳಲ್ಲಿ, ಎಲ್ಲಾ ಪಕ್ಷಗಳು ಸೇರಿದಂತೆ, ನಾಯಕತ್ವ ವಿಫಲವಾಗಿವೆ. ಕೋವಿಡ್‍ನ ಈ ಪರಿಸ್ಥಿತಿಯಲ್ಲಿ ನಾವು ಸಿಲುಕಿಕೊಂಡಿರುವುದು ಇರುಳು ಕಂಡ ಭಾವಿಯಲ್ಲಿ ಹಗಲು ಬಿದ್ದಂತಾಗಿದೆ. ಕಳೆದ ವರ್ಷವಷ್ಟೇ ಕೋವಿಡ್‍ನ ಭೀಕರ ಪರಿಣಾಮದ ಬಗ್ಗೆ ನಮ್ಮ ಅನುಭವವಾಗಿತ್ತು. ಆದರೂ ನಾವು ಎಚ್ಚೆತ್ತುಕೊಳ್ಳಲಿಲ್ಲ.

ಈ ಸಂದರ್ಭದಲ್ಲಿ ಸ್ಪೇನಿಷ್ ತತ್ವಜ್ಞಾನಿ ಜಾರ್ಜ್ ಸಂತಯಾನನ ಮಾತುಗಳು ನೆನಪಿಗೆ ಬರುತ್ತದೆ, “ಯಾರು ಇತಿಹಾಸವನ್ನು ಮರೆಯುತ್ತಾರೋ, ಅವರು ಅದನ್ನು ಪುನರಾವರ್ತಿಸಲು ಶಾಪಗ್ರಸ್ಥರಾಗಿರುತ್ತಾರೆ.”

ಲಸಿಕೆ – ತಿರುಗು ಮುರುಗು ಹೇಳಿಕೆಗಳು

ಕೋವಿಡ್ ಲಸಿಕೆಯ ಬೆಲೆಯನ್ನು ನಿರ್ಣಯಿಸುವಲ್ಲಿ ಹಾಗೂ ಲಸಿಕೆಯನ್ನು ವೇಗವಾಗಿ ಜನರಿಗೆ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾದ ಹಾಗೂ ಪರಿಣಾಮಕಾರಿಯಾದ ನಿಲುವು ತೆಗೆದುಕೊಂಡಿಲ್ಲ. ಇದರಿಂದ ಲಸಿಕೆಯಡಿ ಹೆಚ್ಚು ಜನಸಂಖ್ಯೆಯನ್ನು ತರುವುದು ತಡವಾಗಲಿದೆ ಹಾಗೂ ಲಸಿಕೆ ತಯಾರಕ ಕಂಪನಿಗಳು ತಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವ ದಾರಿಗಳನ್ನು ಹುಡುಕುತ್ತಿವೆ.

ಒಂದು ಲಸಿಕೆ ಸೀಸೆಗೆ 150 ರೂಪಾಯಿ ನಿಗದಿ ಪಡಿಸಿದರೂ ಲಾಭ ಸಾಧ್ಯವೆಂದು ಹೇಳಿದ್ದ ಸೀರಮ್ ಸಂಸ್ಥೆಯ ಅದರ್ ಪೂನಾವಾಲ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‍ಗೆ 400 ರೂಪಾಯಿ ಬೆಲೆಯನ್ನು (ಏಪ್ರಿಲ್ 28ರಂದು ಈ ಬೆಲೆಯನ್ನು 300 ರೂಪಾಯಿಗಳಿಗೆ ಇಳಿಸಲಾಯಿತು), ಖಾಸಗಿ ಸಂಸ್ಥೆಗಳಿಗೆ 600 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ರೂ. 150 ರೂಪಾಯಿಗಳಿಗೆ ಒದಗಿಸುತ್ತಿದ್ದಾರೆ.

ಭಾರತ್ ಬಯೋಟೆಕ್ ಸಂಸ್ಥೆಯು ತನ್ನ ಕೋವ್ಯಾಕ್ಸಿನ್ ಲಸಿಕೆಗೆ ರಾಜ್ಯ ಸರ್ಕಾರಗಳಿಗೆ 600 ರೂಪಾಯಿಯನ್ನು ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳಿಗೆ 1,200 ರೂಪಾಯಿಗಳನ್ನು ನಿಗದಿ ಮಾಡಿದೆ. ಕಳೆದ ವರ್ಷ ಆ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಎಳ್ಳ ಒಂದು ಕೋವಿಡ್ ಲಸಿಕೆ ಸೀಸೆಗೆ ಒಂದು ನೀರಿನ ಬಾಟಲಿನ ಬೆಲೆಗಿಂತ ಹೆಚ್ಚಾಗುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ.

ಲಸಿಕೆಗೆ ಸಂಬಂಧಿಸಿದಂತೆ ಆರ್ಥಿಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿರುವುದು ಹಾಗೂ ಲಸಿಕೆ ತಯಾರಕರು ಹೆಚ್ಚಿನ ಮೊತ್ತಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಮಾರಲು ಅವಕಾಶ ಮಾಡಿಕೊಟ್ಟಿರುವುದು ವಿವೇಚಿತ ನಿರ್ಧಾರಗಳಲ್ಲ.

2020ರ ಅಕ್ಟೋಬರ್ 20ರಂದು ಮೋದಿ ದೇಶವನ್ನುದ್ದೇಶಿಸುತ್ತಾ, “ದೇಶದಲ್ಲಿ, ನಾವು ಕೋವಿಡ್-19 ಲಸಿಕೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಅದು ಬಂದಾಗ ಅದನ್ನು ದೇಶದ ಪ್ರತಿಯೊಂದು ಮನೆಗೂ ಆದಷ್ಟು ಬೇಗನೇ ತಲುಪಿಸುವ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ,” ಎಂದು ಹೇಳಿದರು. ಬಿಹಾರ ಚುನಾವಣೆ ಸಂದರ್ಭದಲ್ಲಿ, 2020ರ ಅಕ್ಟೋಬರ್ 26ರಂದು ಮೋದಿಯವರು ಆ ರಾಜ್ಯದ ಎಲ್ಲಾ ಜನರಿಗೂ ಉಚಿತ ಲಸಿಕೆ ಒದಗಿಸುವುದಾಗಿ ಭರವಸೆ ನೀಡಿದರು. ನಂತರ ಆ ಹೇಳಿಕೆಯನ್ನು ಸ್ಪಷ್ಟೀಕರಿಸುತ್ತಾ, ಕೇಂದ್ರ ಮಂತ್ರಿಯೊಬ್ಬರು ದೇಶದ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ಒದಗಿಸುವುದಾಗಿ ಹೇಳಿದರು. ಇತ್ತೀಚಿಗೆ ಉಚಿತ ಲಸಿಕೆ ನೀಡುವುದಾಗಿ ಪಶ್ಚಿಮ ಬಂಗಾಳದಲ್ಲಿ ಹೇಳಲಾಗಿದೆ. ಲಸಿಕೆಗೆ ಸಂಬಂಧಿಸಿದಂತೆ ಮೋದಿ ಹಾಗೂ ಕೇಂದ್ರ ಮಂತ್ರಿಗಳು ನೀಡಿದ ಹೇಳಿಕೆಗಳು ರಾಜಕೀಯ ಲೇಪದಿಂದ ಕೂಡಿರಬಾರದಾಗಿತ್ತು.

ಈ ಎಲ್ಲಾ ನಿದರ್ಶನಗಳು ಕೇಂದ್ರ ಸರ್ಕಾರದ ಆಲೋಚನೆಗಳಲ್ಲಿ ಯಾವುದೇ ಸ್ಪಷ್ಟತೆಯಿಲ್ಲ ಹಾಗೂ ಉದಾತ್ತ ಗುರಿಗಳಿಲ್ಲ ಎಂಬುದನ್ನು ಬಯಲು ಮಾಡುತ್ತವೆ. ಕಳೆದ ವರ್ಷ ಯು.ಎಸ್.ಎ. ನಲ್ಲಿ ಲಸಿಕೆ ಕಂಡು ಹಿಡಿಯುವ ಕಸರತ್ತು ಆರಂಭವಾಗುತ್ತಿದ್ದಂತೆ ಟ್ರಂಪ್ ಅವರು ‘ಆಪರೇಷನ್ ವಾರ್ಪ್ ಸ್ಪೀಡ್ ವ್ಯಾಕ್ಸಿನ್ ಪುಶ್’ ಯೋಜನೆಯಡಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು (ಸುಮಾರು 18 ಬಿಲಿಯನ್ ಯು.ಎಸ್.ಎ. ಡಾಲರ್‍ಗಳು) ಲಸಿಕೆ ತಯಾರಿಕೆ, ಹಂಚಿಕೆ, ಇತ್ಯಾದಿ ಕಾರ್ಯಗಳಿಗೆ ಮೀಸಲಿಡುತ್ತಾರೆ. ಅದರಿಂದ ಇಂದು ಯು.ಎಸ್.ಎ. ಅತ್ಯಂತ ವೇಗವಾಗಿ ಲಸಿಕೆಗಳನ್ನು ತನ್ನ ಜನಸಂಖ್ಯೆಗೆ ನೀಡಲು ಸಾಧ್ಯವಾಗಿದೆ. ಭಾರತದ ಜನಸಂಖ್ಯೆ ಸುಮಾರು 140 ಕೋಟಿಯಿದ್ದು, ಇವರಲ್ಲಿ ಲಸಿಕೆ ಪಡೆಯಲು ಅರ್ಹತೆಯಿರುವ 18ಕ್ಕೂ ಹೆಚ್ಚಿನ ವಯೋಮಾನದವರು ಸುಮಾರು 80 ರಿಂದ 90 ಕೋಟಿಯಿದ್ದಾರೆ. ಇವರಿಗೆಲ್ಲಾ ಎರಡು ಡೋಸ್‍ಗಳು ಬೇಕೆಂದರೆ ಸುಮರು 160 ಕೋಟಿಯಿಂದ 180 ಕೋಟಿ ಲಸಿಕೆ ಸೀಸೆಗಳು ಬೇಕಾಗುತ್ತವೆ.

ಕೋವಿಡ್-19 ತನ್ನ ಗರಿಷ್ಠ ಮಟ್ಟ ತಲುಪಲು ಇನ್ನೂ ಹಲವು ದಿನಗಳಾಗುತ್ತವೆ. ಅಲ್ಲಿಯವರೆಗೆ, ಮುಂದಿನ ದಿನಗಳಲ್ಲಿ ತೀವ್ರ ನಿಗಾ ಘಟಕದ ಅವಶ್ಯಕತೆಯಿರುವವರ ಸಂಖ್ಯೆ ದಿನಕ್ಕೆ ಸುಮಾರು ಒಂದು ಲಕ್ಷದಂತೆ ಹೆಚ್ಚುವರಿಯಾಗುತ್ತ ಹೋಗುತ್ತದೆ. ಅವರಿಗೆ ಚಿಕಿತ್ಸೆ ನೀಡಲು, ಶುಶ್ರೂಷೆ ಮಾಡಲು ಅಷ್ಟೇ ಪ್ರಮಾಣದಲ್ಲಿ ವೈದ್ಯರು, ನರ್ಸ್‍ಗಳು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ಅವಶ್ಯಕತೆಯಿರುತ್ತದೆ. ಇಡೀ ದೇಶದಲ್ಲಿ ಪ್ರಸ್ತುತ 95 ಸಾವಿರ ತೀವ್ರನಿಗಾ ಘಟಕದ ಹಾಸಿಗೆಗಳಿವೆ. ಅಂದರೆ ಮುಂಬರುವ ದಿನಗಳಲ್ಲಿ ವೈದ್ಯಕೀಯ ಮೂಲಭೂತ ವ್ಯವಸ್ಥೆಗೆ ಸಂಬಂಧಿಸಿದಂತೆ ಉಂಟಾಗುವ ಸರಬರಾಜು ಹಾಗೂ ಬೇಡಿಕೆಯ ನಡುವೆ ಇರುವ ಅಗಾಧ ಅಂತರ ಭಯ ಹುಟ್ಟಿಸುತ್ತದೆ.  ಇಷ್ಟೆಲ್ಲಾ ಸೌಕರ್ಯಗಳನ್ನು ಕೆಲವೇ ದಿನಗಳಲ್ಲಿ ಒದಗಿಸಲು, ಸೃಷ್ಟಿಸಲು ಸಾಧ್ಯವಿಲ್ಲ. ನಾವು ಕರಾಳ ದಿನಗಳತ್ತ ಸಾಗುತ್ತಿದ್ದೇವೆ.

ಲಸಿಕಾಕರಣ ಕೋವಿಡ್ ವಿರುದ್ಧ ನಮಗಿರುವ ಏಕೈಕ ಅಸ್ತ್ರವಾಗಿದೆ. ಕೋವಿಡ್-19ನ ವಿವಿಧ ಲಸಿಕೆಗಳ ಸಾಮರ್ಥ್ಯದ ಬಗ್ಗೆ ಪ್ರಪಂಚದ ವಿವಿಧೆಡೆಯಿಂದ ಬರುತ್ತಿರುವ ಸಂಶೋಧನಾ ವರದಿಗಳು ಉತ್ತೇಜನಕಾರಿಯಾಗಿವೆ. ಮಾಡರ್ನ ಹಾಗೂ ಫೈಜರ್ ಲಸಿಕೆಗಳು ಕೋವಿಡ್ ಸೋಂಕಿನಿಂದ ಹಿರಿಯ ನಾಗರಿಕರು ಆಸ್ಪತ್ರೆಗೆ ಸೇರುವುದನ್ನು ಶೇಕಡ 95ರಷ್ಟು ತಡೆಯುತ್ತವೆ ಎಂದು ಕಂಡುಬಂದಿದೆ. ಈ ಸುದ್ದಿ ಈಗಿರುವ ಕಾರ್ಮೋಡದಲ್ಲಿ ಬೆಳ್ಳಿರೇಖೆಯಂತಾಗಿದೆ.

ಈ ಕಾರಣದಿಂದ ಲಸಿಕಾಕರಣಕ್ಕೆ ನಾವು ಹೆಚ್ಚು ಒತ್ತು ನೀಡಬೇಕಾಗಿದೆ. ಭಾರತದಲ್ಲಿ ಸದ್ಯದ ಲಸಿಕೆಯ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದರೆ ಈ ವರ್ಷದ ಅಂತ್ಯದೊಳಗೆ ನಮ್ಮ ಉದ್ದೇಶಿತ ಜನಸಂಖ್ಯೆಯ ಶೇಕಡ 50ರಷ್ಟು ಜನಸಂಖ್ಯೆಗೆ ಸಹ ಲಸಿಕೆ ಒದಗಿಸಲು ಸಾಧ್ಯವಿಲ್ಲ. ರಷಿಯಾದ ಸ್ಪುಟ್ನಿಕ್, ಫೈಜರ್, ಮಾಡರ್ನ ಇತ್ಯಾದಿ ಲಸಿಕೆಗಳು ಸಹ ಲಭ್ಯವಾದಲ್ಲಿ ಇಡೀ ಜನಸಂಖ್ಯೆಯನ್ನು ಲಸಿಕೆಯಡಿ ತರುವ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ಈ ಎಲ್ಲಾ ಲೆಕ್ಕಾಚಾರಗಳು ಮೊದಲೇ ಎಕೇ ಬರಲಿಲ್ಲ? ಕೇಂದ್ರ ಸರ್ಕಾರ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಲಸಿಕೆಯ ಖರೀದಿ ಹಾಗೂ ಹಂಚಿಕೆಗಾಗಿ ಮೀಸಲಿಟ್ಟು, ಎಲ್ಲಾ ಲಸಿಕೆಗಳನ್ನು ತಾನೇ ಖುದ್ದು ಖರೀದಿಸಿ, ಎಲ್ಲಾ ವರ್ಗಗಳ ಜನರಿಗೂ ಯಾವುದೇ ತಾರತಮ್ಯವಿಲ್ಲದೆ ಉಚಿತವಾಗಿ ಒದಗಿಸುವ ನಿರ್ಧಾರ ತೆಗೆದುಕೊಂಡಿದ್ದರೆ, ಹೆಚ್ಚು ಜನರನ್ನು ಲಸಿಕೆಯ ವ್ಯಾಪ್ತಿಗೆ ಬೇಗನೆ ತರುವುದು ಸುಲಭವಾಗುತಿತ್ತು. ಆಗ ಕೋವಿಡ್ ವಿರುದ್ಧದ ನಮ್ಮ ಹೋರಾಟಕ್ಕೆ ಭೀಮಬಲ ಬರುತಿತ್ತು.

Leave a Reply

Your email address will not be published.