ಭಾರತದ ಆರ್ಥಿಕತೆ ಏಳು ನಕಾಶೆಗಳಲ್ಲಿ ಮೋದಿಯವರ ಏಳು ವರ್ಷಗಳು

ನಿಖಿಲ್ ಇನಾಂದಾರ್

ಅಪರ್ಣಾ ಅಲ್ಲುರಿ, ಬಿಬಿಸಿ

ಅನುವಾದ: ಎಂ.ಕೆ.ಆನಂದರಾಜೇ ಅರಸ್

ಹೆಚ್ಚು ಉದ್ಯೋಗಗಳ ಸೃಷ್ಟಿ, ಅಭಿವೃದ್ಧಿ ಹಾಗೂ ವಿಧಾನ ವಿಳಂಬವನ್ನು ಕಡಿತಗೊಳಿಸುವ ಅದ್ಧೂರಿ ಭರವಸೆಗಳೊಂದಿಗೆ ನರೇಂದ್ರ ಮೋದಿ ಭಾರತ ರಾಜಕೀಯದ ಪ್ರಧಾನ ರಂಗಕ್ಕೆ 2014ರಲ್ಲಿ ಬಿರುಗಾಳಿಯಂತೆ ಪ್ರವೇಶಿಸಿದರು. 2014 ಹಾಗೂ 2019 ಲೋಕಸಭಾ ಚುನಾವಣೆಗಳಲ್ಲಿ ಅವರಿಗೆ ದೊರಕಿದ ಸ್ಪಷ್ಟ ಬಹುಮತ ದೊಡ್ಡ ಸುಧಾರಣೆಗಳ ಆಶಯವನ್ನು ಹೆಚ್ಚಿಸಿತು. ಆದರೆ ಪ್ರಧಾನ ಮಂತ್ರಿಯಾಗಿ ಅವರ ಅಧಿಕಾರವಧಿಯಲ್ಲಿ ಭಾರತದ ಆರ್ಥಿಕ ಸಾಧನೆ ನೀರಸವಾಗಿದೆ. ಈಗಾಗಲೇ ಸಪ್ಪೆಯಾಗಿದ್ದ ಅವರ ಕಾರ್ಯಕ್ಷಮತೆಯನ್ನು ಕೋವಿಡ್ ಪಿಡುಗು ಇನ್ನಷ್ಟು ಜರ್ಜರಿತಗೊಳಿಸಿದೆ. ಲೇಖನದಲ್ಲಿ ಪ್ರಸ್ತುತ ಪಡಿಸಿರುವ ಏಳು ನಕಾಶೆಗಳ ಮೂಲಕ ಮೋದಿಯವರ ಕಾರ್ಯಕ್ಷಮತೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ನಿಷ್ಕ್ರಿಯ ಪ್ರಗತಿ

ಮೋದಿಯವರು 2025ರಲ್ಲಿ ಐದು ಟ್ರಿಲಿಯನ್ ಡಾಲರ್ (ಯು.ಎಸ್..) ಜಿಡಿಪಿ ಸಾಧಿಸುವ ಗುರಿ ಇಟ್ಟಿದ್ದರು. ಈಗ ಅದನ್ನು ಹಣದುಬ್ಬರಕ್ಕೆ ಸರಿಪಡಿಸಿದ ನಂತರ ಪರಿಶೀಲಿಸುವುದಾದರೆ, ಅದು ಕನಸಾಗಿಯೇ ಉಳಿದಂತೆ ಕಾಣುತ್ತದೆ. ಕೋವಿಡ್ಗೂ ಮುನ್ನ ಮಾಡಿದ ಕೆಲವು ಸ್ವತಂತ್ರ ಅಂದಾಜುಗಳ ಪ್ರಕಾರ ಭಾರತದ ಜಿಡಿಪಿ 2025ರಲ್ಲಿ ಕೇವಲ 2.6 ಟ್ರಿಲಿಯನ್ ಯು.ಎಸ್. ಡಾಲರ್ಗಳಾಗುತ್ತದೆ. ಮೊತ್ತದಲ್ಲಿ ಸಹ 200 ರಿಂದ 300 ಯು.ಎಸ್.. ಡಾಲರ್ಗಳಷ್ಟು ಮೊತ್ತವನ್ನು ಕೋವಿಡ್ ಪಿಡುಗು ಮೊಟಕುಗೊಳಿಸುತ್ತದೆ. ಅರ್ಥಶಾಸ್ತ್ರಜ್ಞ ಅಜಿತ್ ರಾನಡೆಯವರ ಪ್ರಕಾರ ಜಾಗತಿಕ ತೈಲ ಬೆಲೆಗಳಿಂದ ಹೆಚ್ಚುತ್ತಿರುವ ಹಣದುಬ್ಬರ ಸಹ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.

ಇದಕ್ಕೆಲ್ಲಾ ಕೋವಿಡ್ ಒಂದೇ ಹೊಣೆಯಲ್ಲ

ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡಾಗ ಶೇಕಡ 7.8%ರಷ್ಟು ವಾರ್ಷಿಕವಾಗಿ ಬೆಳೆಯುತ್ತಿದ್ದ ದೇಶದ ಜಿಡಿಪಿ ಹಣಕಾಸು ವರ್ಷ 2019-20 ಕಡೆಯ ತ್ರೈಮಾಸಿಕದಲ್ಲಿ ಶೇಕಡ 3.1ಕ್ಕೆ ಕುಸಿದಿತ್ತು. 2016ರಲ್ಲಿ ಮೋದಿಯವರ ಅನಾಣ್ಯೀಕರಣ ಚಲಾವಣೆಯಲ್ಲಿದ್ದ ಶೇಕಡ 86ರಷ್ಟು ನಗದನ್ನು ಅಳಿಸಿಹಾಕಿತು. ಆತುರುತುರವಾಗಿ ಜಾರಿಮಾಡಿದ ಹೊಸ ತೆರಿಗೆ ಕೋಡ್ ಜಿ.ಎಸ್.ಟಿ. ಉದ್ದಿಮೆಗಳಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿತು. ಇದರಿಂದ ಹೊಸ ಸಮಸ್ಯೆ ತಲೆದೋರಿತು. ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ವ್ಯಾಸ್ ಅವರು, “2011-12 ನಂತರದ ವರ್ಷಗಳಲ್ಲಿ ದೇಶದಲ್ಲಿ ಹೂಡಿಕೆ ಕಡಿಮೆಯಾಗುತ್ತಿರುವುದು ಒಂದು ದೊಡ್ಡ ಸವಾಲಾಗಿದೆ. ಅಲ್ಲದೆ, 2016 ನಂತರದ ವರ್ಷಗಳಲ್ಲಿ ನಾವು ಹಲವಾರು ಆರ್ಥಿಕ ಅಘಾತಗಳನ್ನು ಸತತವಾಗಿ ಅನುಭವಿಸಿದೆವು. ಅನಾಣ್ಯೀಕರಣ, ಜಿ.ಎಸ್.ಟಿ. ಹಾಗೂ ಕೋವಿಡ್ ಹರಡುವಿಕೆ ನಿಯಂತ್ರಿಸಲು ಮಾಡುತ್ತಿದ್ದ ಲಾಕ್ಡೌನ್ಗಳು ಉದ್ಯೋಗಾವಕಾಶಗಳನ್ನು ಕಡಿಮೆ ಮಾಡಿತು,” ಎಂದು ಅಭಿಪ್ರಾಯಪಡುತ್ತಾರೆ. ತೀರಾ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ದೇಶದಲ್ಲಿನ ನಿರುದ್ಯೋಗ ಪ್ರಮಾಣ 2017-18ರಲ್ಲಿ ಶೇಕಡ 6.1ಕ್ಕೆ ಏರಿತು. ನಂತರ ಅದು ದ್ವಿಗುಣವಾಗಿದೆ ಎಂದು ಸಿ.ಎಮ್... ಮಾಡಿದ ಮನೆಮನೆ ಸಮೀಕ್ಷೆ ಹೇಳುತ್ತದೆ. 2021 ಆರಂಭದಿಂದ ಸುಮಾರು 25 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಮಧ್ಯಮ ವರ್ಗದ ಮೂರರ ಒಂದು ಭಾಗದಷ್ಟು ಜನಸಂಖ್ಯೆಯೂ ಸೇರಿದಂತೆ 75 ಮಿಲಿಯನ್ಗೂ ಹೆಚ್ಚಿನ ಜನರು ಬಡತನದ ಗೆರೆಯ ಕೆಳಗೆ ಹೋಗಿದ್ದು, ಇದು ಅರ್ಧ ದಶಕದ ಲಾಭಗಳನ್ನು ಅಳಿಸಿಹಾಕಿದೆ ಎಂದು ಪ್ಯೂ ರಿಸರ್ಚ ಸಂಸ್ಥೆಯ ಅಂದಾಜು ಅಂಕಿಅಂಶಗಳು ತಿಳಿಸುತ್ತವೆ. ದೇಶದ ಆರ್ಥಿಕತೆ ಪ್ರತಿವರ್ಷ 20 ಮಿಲಿಯನ್ ಉದ್ಯೋಗಗಳ ಸೃಷ್ಟಿಯನ್ನು ಬಯಸುತ್ತದೆ. ಆದರೆ ನಿಟ್ಟಿನಲ್ಲಿ ಸರ್ಕಾರದ ಸಾಧನೆ ಕಳಪೆಯಾಗಿದ್ದು ಕಳೆದ ದಶಕದಲ್ಲಿ ಪ್ರತಿ ವರ್ಷ 4.3 ಮಿಲಿಯನ್ ಉದ್ಯೋಗಗಳನ್ನು ಮಾತ್ರ ಅಧಿಕವಾಗಿ ಸೃಷ್ಟಿಸಲು ಸಾಧ್ಯವಾಗಿದೆ.

ಭಾರತ ಉತ್ಪಾದನೆ, ರಫ್ತಿನಲ್ಲೂ ಹಿಂದಿದೆ

ಮೋದಿಯವರ ಮೇಕ್ ಇನ್ ಇಂಡಿಯಾಆಂದೋಲನ ಕೆಂಪುಪಟ್ಟಿಯನ್ನು ತೆಗೆದು ಹಾಕುವ ಮೂಲಕ ಹಾಗೂ ರಫ್ತು ಗುಚ್ಛಗಳಿಗೆ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನ ಕ್ಷೇತ್ರದಲ್ಲಿ ಒಂದು ಮಹತ್ತರ ಶಕ್ತಿಯನ್ನಾಗಿ ಮಾಡಬೇಕಿತ್ತು. ಉತ್ಪಾದನ ಕ್ಷೇತ್ರವು ಜಿಡಿಪಿಯ ಶೇಕಡ 25ರಷ್ಟನ್ನು ನೀಡಬೇಕಿತ್ತು. ಆದರೆ ಅದು ಶೇಕಡ 15ರಲ್ಲೇ ನಿಶ್ಚಲವಾಗಿದೆ. ಇದಕ್ಕೂ ಹೆಚ್ಚಿನ ಆತಂಕದ್ದೇನೆಂದರೆ, ಸೆಂಟರ್ ಫಾರ್ ಎಕನಾಮಿಕ್ ಡ್ಯಾಟಾ ಹಾಗೂ ಅನಾಲಿಸಿಸ್ ಸಂಸ್ಥೆಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ, ಉತ್ಪಾದನಾ ಕ್ಷೇತ್ರದಲ್ಲಿನ ಉದ್ಯೋಗಗಳು ಶೇಕಡ 50ರಷ್ಟು ಕಡಿಮೆಯಾಗಿವೆ. ಮೋದಿಯವರ ಅಧಿಕಾರವಧಿಯಲ್ಲಿ ಭಾರತವು ಬಾಂಗ್ಲಾದೇಶದÀಂತಹ ಪ್ರತಿಸ್ಪರ್ಧಿಗಳಿಗೆ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ. ಬಾಂಗ್ಲಾ ದೇಶದ ಪ್ರಶಂಸನೀಯ ಪ್ರಗತಿ ರಫ್ತಿನ ಮೇಲೆ ಅವಲಂಬಿತವಾಗಿದ್ದು, ಅದು ಅಲ್ಲಿನ ಹೆಚ್ಚು ಕಾರ್ಮಿಕರು ಅಗತ್ಯವಿರುವ ಉಡುಪು ಉದ್ಯಮದ ಕೈಗಾರಿಕೆಯಿಂದ ಸದೃಢವಾಗಿದೆ. ಮೋದಿಯವರು ಅಮದು ಸುಂಕಗಳನ್ನು ಸಹ ಹೆಚ್ಚಿಸಿದ್ದು, ದೇಶವು ಇತ್ತೀಚಿನ ವರ್ಷಗಳಲ್ಲಿ ಸಂರಕ್ಷಣಾವಾದಿಯಾಗುತ್ತಿದೆ ಎಂಬ ಅಭಿಪ್ರಾಯಗಳಿವೆ. ಇಂತಹದೊಂದು ಬೆಳವಣಿಗೆ ಪ್ರಸಕ್ತ ಸರ್ಕಾರದ ಮಂತ್ರವಾದ `ಸ್ವಾವಲಂಬನೆಯೊಂದಿಗೆ ಹೊಂದಿಕೊಂಡು ಹೋಗುತ್ತದೆ.

ಬೆಳ್ಳಿರೇಖೆ

ಎಲ್ಲಾ ಕಾರ್ಮೋಡಗಳ ನಡುವೆ ದೇಶದ ಮೂಲಭೂತ ಸೌಕರ್ಯದ ನಿರ್ಮಾಣ ಕ್ಷೇತ್ರದ ಕಾರ್ಯಕ್ಷಮತೆ ಆಶಯ ಮೂಡಿಸುತ್ತದೆ. ಪ್ರಸ್ತುತ ಮೋದಿಯವರ ಸರ್ಕಾರವು ಪ್ರತಿ ದಿನ ಸರಾಸರಿ 36 ಕಿಲೋಮೀಟರ್ಗಳಷ್ಟು ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 8-11 ಕಿ.ಮೀ.ಗಳಷ್ಟು ಹೆದ್ದಾರಿಯನ್ನು ಪ್ರತಿದಿನ ಸರಾಸರಿಯಾಗಿ ನಿರ್ಮಾಣ ಮಾಡಲಾಗುತಿತ್ತು ಎಂದು ಫೀಡ್ಬ್ಯಾಕ್ ಇನ್ಫ್ರಾ ಸಂಸ್ಥೆಯ ಸಹಸಂಸ್ಥಾಪಿತರಾದ ವಿನಾಯಕ್ ಚಟರ್ಜಿಯವರು ಹೇಳುತ್ತಾರೆ. ಸೌರ ಹಾಗೂ ಪವನಶಕ್ತಿ ಅನುಸ್ಥಾಪಿತ ನವೀಕರಿಸಬಹುದಾದ ಸಾಮರ್ಥ್ಯವು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ. ಪ್ರಸ್ತುತ 100 ಗಿಗವ್ಯಾಟ್ಗಳಷ್ಟು ವಿದ್ಯುತ್ಶಕ್ತಿಯನ್ನು ಉತ್ಪಾದನೆ ಮಾಡಲಾಗುತಿದ್ದು, 2023ರಲ್ಲಿ 175 ಗಿಗವ್ಯಾಟ್ಗಳನ್ನು ಉತ್ಪಾದಿಸುವ ಗುರಿಯನ್ನು ತಲುಪುವುತ್ತ ವಿಶ್ವಾಸದಿಂದ ಹೆಜ್ಜೆ ಹಾಕುತ್ತಿದೆ.

ಮೋದಿಯವರ ಜನಪ್ರಿಯ ಯೋಜನೆಗಳಾದ ಲಕ್ಷಾಂತರ ಶೌಚಾಲಯಗಳ ನಿರ್ಮಾಣ, ಗೃಹ ಸಾಲ, ಕುಕಿಂಗ್ ಗ್ಯಾಸ್ಮೇಲಿನ ಸಬ್ಸಿಡಿ ಹಾಗೂ ಕೊಳವೆ ಮೂಲಕ ಕುಡಿಯುವ ನೀರೊದಗಿಸುವುದು ಇತ್ಯಾದಿ ಯೋಜನೆಗಳನ್ನು ಆರ್ಥಿಕ ತಜ್ಞರು ಸ್ವಾಗತಿಸಿದ್ದಾರೆ. ಆದರೆ ನೀರಿನ ಕೊರತೆಯಿಂದ ಹಲವಾರು ಶೌಚಾಲಯಗಳ ಉಪಯೋಗವಾಗುತ್ತಿಲ್ಲ ಹಾಗೂ ತೈಲದ ಬೆಲೆ ಹೆಚ್ಚಾಗಿದ್ದು ಅದರಿಂದ ಕುಕಿಂಗ್ ಗ್ಯಾಸ್ ಮೇಲಿನ ಸಹಾಯಧನದ ಪ್ರಯೋಜನ ದೊರಕಿದಂತಾಗುತ್ತಿಲ್ಲ. ಸರ್ಕಾರದ ವ್ಯಯ ಹೆಚ್ಚಾಗುತ್ತಿದ್ದು ಅದಕ್ಕೆ ಸಮನಾಗಿ ತೆರಿಗೆಗಳು ಅಥವಾ ರಫ್ತಿನಿಂದ ಅದಾಯ ಬಾರದಿರುವುದು ಅರ್ಥಶಾಸ್ತ್ರಜ್ಞರು ಹೆಚ್ಚಾಗುತ್ತಿರುವ ಹಣಕಾಸಿನ ಕೊರತೆಯ ಬಗ್ಗೆ ಚಿಂತಿಸುವಂತೆ ಮಾಡಿದೆ.

ಹೆಚ್ಚಿನ ಜನರು ಈಗ ಔಪಚಾರಿಕ ಆರ್ಥಿಕತೆಗೆ ಸೇರಿದ್ದಾರೆ

ಇದು ಮೋದಿಯವರ ಇನ್ನೊಂದು ದೊಡ್ಡ ಸಾಧನೆ. ಸರ್ಕಾರ ಬೆಂಬಲಿತ ಪಾವತಿ ವ್ಯವಸ್ಥೆಯಿಂದಾಗಿ ಈಗ ಭಾರತವು ಡಿಜಿಟಲ್ ಪಾವತಿಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಮೋದಿಯವರ ಜನ್ಧನ್ ಯೋಜನೆಯು ದೇಶದ ಕೋಟ್ಯಾಂತರ ಬ್ಯಾಂಕ್ ಖಾತೆ ಹೊಂದಿಲ್ಲದ ಬಡ ಜನರು ಔಪಚಾರಿಕ ಆರ್ಥಿಕತೆಯನ್ನು ಸರಳ ಬ್ಯಾಂಕ್ ಖಾತೆಯ ಮೂಲಕ ಸೇರಲು ಅವಕಾಶ ಮಾಡಿಕೊಟ್ಟಿದೆ. ಖಾತೆಗಳು ಹಾಗೂ ಠೇವಣಿಗಳು ಹೆಚ್ಚಾಗಿವೆ. ಆದರೂ ಖಾತೆಗಳ ಪೈಕಿ ಹಲವಾರು ಖಾತೆಗಳನ್ನು ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಆದರೆ ಅರ್ಥಶಾಸ್ತ್ರಜ್ಞರು ಇದು ಸರಿಯಾದ ದಿಕ್ಕಿನತ್ತ ಒಂದು ದೊಡ್ಡ ಹೆಜ್ಜೆ ಎಂದು ಹೇಳುತ್ತಾರೆ. ಏಕೆಂದರೆ ಇದು ಮಧ್ಯವರ್ತಿಗಳಿಲ್ಲದೆ ನೇರವಾಗಿ ಹಣಕಾಸಿನ ಪ್ರಯೋಜನಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅವಕಾಶ ಮಾಡಿಕೊಡುತ್ತದೆ.

ರೋಗ್ಯ ರಕ್ಷಣೆ ಮೇಲೆ ನಿರಾಶಾದಾಯಕ ವ್ಯಯ

ಹಿಂದಿನ ಸರ್ಕಾರಗಳಂತೆ, ಸರ್ಕಾರ ಸಹ ಆರೋಗ್ಯ ರಕ್ಷಣೆಯನ್ನು ನಿರ್ಲಕ್ಷಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತವು ಅತ್ಯಂತ ಕಡಿಮೆ ಮೊತ್ತವನ್ನು ಆರೋಗ್ಯ ರಕ್ಷಣೆಯ ಮೇಲೆ ವ್ಯಯಿಸುತ್ತಿರುವ ದೇಶಗಳಲ್ಲೊಂದಾಗಿದೆ ಎಂದು ಆರ್ಥಿಕ ತಜ್ಞ ರೀತಿಕಾ ಖೆರಾ ಹೇಳುತ್ತಾರೆ. ತಜ್ಞರ ಪ್ರಕಾರ ಭಾರತದಲ್ಲಿ ಪ್ರತಿಬಂಧನ ರಕ್ಷಣೆಗಿಂತ ತೃತೀಯ ರಕ್ಷಣೆ ಮೇಲೆ ಹೆಚ್ಚು ಹಣವನ್ನು ವಿನಿಯೋಗಿಸಲಾಗುತ್ತಿದೆ. ಇದು ಭಾರತವನ್ನು ಯು.ಎಸ್. ಮಾದರಿಯ ಆರೋಗ್ಯ ವ್ಯವಸ್ಥೆಯತ್ತ ತೆಗೆದುಕೊಂಡು ಹೋಗುತ್ತಿದೆ. ಅಂತಹದೊಂದು ವ್ಯವಸ್ಥೆಯು ದುಬಾರಿಯಾದದ್ದು ಹಾಗೂ ಫಲಿತಾಂಶ ಕೂಡ ಉತ್ತಮವಾದದ್ದಲ್ಲ, ಎಂದು ಖೆರಾ ವಾದಿಸುತ್ತಾರೆ. 2018ರಲ್ಲಿ ಪ್ರಾರಂಭಿಸಿದ ಮೋದಿಯವರ ಮಹತ್ವಾಕಾಂಕ್ಷೆಯ ಆರೋಗ್ಯ ವಿಮಾ ಯೋಜನೆಯನ್ನು ಕೋವಿಡ್ ಸಮಯದಲ್ಲಿ ಸಹ ಪೂರ್ಣವಾಗಿ ಬಳಸಿಕೊಂಡಿಲ್ಲ. “ಇದು ಬಹಳ ದಿನಗಳಿಂದ ಬರಬೇಕಾಗಿತ್ತು. ಆದರೆ ಅದಕ್ಕೆ ಹೆಚ್ಚಿನ ಸಂಪನ್ಮೂಲಗಳ ಅಗತ್ಯವಿದೆ,” ಎಂದು ಸಾರ್ವಜನಿಕ ಆರೋಗ್ಯ ತಜ್ಞ ಶ್ರೀನಾಥ್ ರೆಡ್ಡಿ ಹೇಳುತ್ತಾರೆ. ಭಾರತವು ಕೋವಿಡ್ ಅನ್ನು ಎಚ್ಚರಿಕೆಯ ಗಂಟೆಯಾಗಿ ಬಳಸಿಕೊಂಡು ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಸದೃಢಗೊಳಿಸಲು ಹೆಚ್ಚು ಹೂಡಿಕೆಯನ್ನು ಮಾಡಬೇಕು ಎಂದು ಸಹ ಶ್ರೀನಾಥ್ ಅಭಿಪ್ರಾಯಪಡುತ್ತಾರೆ.

ಹೆಚ್ಚಿನ ಜನಸಂಖ್ಯೆ ಇನ್ನೂ ಕೃಷಿ ವಲಯದಲ್ಲಿದೆ

ಭಾರತದ ದುಡಿಯುವ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಇನ್ನು ಕೃಷಿ ವಲಯದಲ್ಲಿದೆ. ಆದರೆ ದೇಶದ ಜಿಡಿಪಿಗೆ ಜನಸಂಖ್ಯೆಯ ಕೊಡುಗೆ ಅತ್ಯಲ್ಪವಾದದ್ದಾಗಿದೆ. ಭಾರತದ ಕೃಷಿ ವಲಯದಲ್ಲಿ ಸುಧಾರಣೆಗಳ ಅಗತ್ಯವಿದೆ ಎಂದು ಎಲ್ಲರೂ ಒಪ್ಪುತ್ತಾರೆ. ಕಳೆದ ವರ್ಷ ಪರಿಚಯಿಸಿದ ಮಾರುಕಟ್ಟೆ ಪರವಾದ ಕಾನೂನು, ತಿಂಗಳುಗಟ್ಟಲೆ ಪ್ರತಿಭಟಿಸುತ್ತಿರುವ ಕುಪಿತ ರೈತರಿಂದ ಈಗ ತೂಗುಯ್ಯಾಲೆಯಲ್ಲಿದೆ. ಕಾನೂನು ತಮ್ಮ ಆದಾಯವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ ಎಂದು ಕಾಯ್ದೆಯನ್ನು ವಿರೋಧಿಸುತ್ತಿರುವ ರೈತರು ಹೇಳುತ್ತಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದ ಮೋದಿ ಹಾಗೆ ತಾವು ಹೇಳಿದ್ದು ಸತ್ಯವಲ್ಲವೆಂದು ಈಗ ಹೇಳುತ್ತಾರೆ. ಪರಿಣಿತರ ಪ್ರಕಾರ ಅವ್ಯವಸ್ಥಿತ ವಿಧಾನಗಳಿಂದ ಹೆಚ್ಚಿನದನ್ನು ಸಾಧಿಸಲಾಗುವುದಿಲ್ಲ. ಆದರೆ ಇದರ ಬದಲು ಸರ್ಕಾರವು ಬೇಸಾಯವು ಕಡಿಮೆ ವೆಚ್ಚದಲ್ಲಾಗುವಂತೆಯೂ, ಲಾಭಾದಾಯಕವೂ ಆಗುವಂತೆ ಮಾಡಬೇಕು ಎಂದು ಆರ್ಥಶಾಸ್ತ್ರ ಪ್ರಾಧ್ಯಾಪಕ ಆರ್. ರಾಮಕುಮಾರ್ ಹೇಳುತ್ತಾರೆ.

ಅನಾಣ್ಯೀಕರಣ ಸರಬರಾಜು ಸರಪಳಿಗಳನ್ನು, ಕೆಲವನ್ನು ದುರಸ್ತಿ ಮಾಡಲು ಸಾಧ್ಯವಾಗದಂತೆ, ನಾಶಮಾಡಿತು. 2017ರಲ್ಲಿ ಪರಿಚಯಿಸಿದ ಜಿಎಸ್ಟಿ ತೆರಿಗೆ ಒಳಹರಿವುಗಳ ಬೆಲೆಯನ್ನು ಹೆಚ್ಚಿಸಿತು. ಆದರೆ ಸರ್ಕಾರವು ಲಾಕ್ಡೌನ್ ಸಂದರ್ಭದಲ್ಲಿ ಜನರ ನೋವುಗಳನ್ನು ದೂರಮಾಡಲು ಏನೂ ಮಾಡಲಿಲ್ಲ ಎಂದು ರಾಮ್ಕುಮಾರ್ ಅಭಿಪ್ರಾಯಪಡುತ್ತಾರೆ. ಅಜಿತ್ ರಾನಡೆಯವರ ಪ್ರಕಾರ, “ಪರಿಹಾರ ಕೃಷಿವಲಯದ ಹೊರಗಿದೆ. ಹೆಚ್ಚುವರಿ ಕಾರ್ಮಿಕರನ್ನು ಬೇರೆ ವಲಯಗಳಲ್ಲಿ ಸೇರಿಸಿಕೊಳ್ಳಲು ಸಾಧ್ಯವಾದಾಗ ಕೃಷಿವಲಯ ಚೆನ್ನಾಗಿ ಬೆಳೆಯುತ್ತದೆ.” ಆದರೆ ಇದನ್ನು ಸಾಧಿಸಬೇಕಾದರೆ ಈಗಾಗಲೇ ಕಳೆದ 16 ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಖಾಸಗಿ ಹೂಡಿಕೆಗೆ ಜೀವ ಬರಬೇಕು. ಬಹುಶಃ ಇದು ಮೋದಿ ಎದುರಿಸುತ್ತಿರುವ ಅತ್ಯಂತ ದೊಡ್ಡ ಆರ್ಥಿಕ ಸವಾಲಾಗಿದೆ.

Leave a Reply

Your email address will not be published.