ಭಾರತದ ಪ್ರಜಾತಂತ್ರ ಎತ್ತ ಸಾಗುತ್ತಿದೆ?

ಆಂತರಿಕ ಟೀಕೆ ಅಥವಾ ವಿಮರ್ಶೆಯನ್ನು ಹೇಗೆ ಪರಿಗಣಿಸಬೇಕು? ಪ್ರಸಕ್ತ ಅಸ್ತಿತ್ವದಲ್ಲಿರುವ ಪ್ರಭುತ್ವವು ಪ್ರಜಾತಂತ್ರವನ್ನು ಭಾರತದಲ್ಲಿ ಹೇಗೆ ನಾಶಮಾಡಿದೆ?

ಸುಹಾಸ ಪಾಲಸಿಕಾರ್

ಮೂಲ: ಇಂಡಿಯನ್ ಎಕ್ಸ್ ಪ್ರೆಸ್

ಭಾರತದಲ್ಲಿ ಅತಿ ಗರಿಷ್ಠ ಜನತಂತ್ರವೆಂಬ ವಿವಾದವನ್ನು ನಾವೀಗ ಹಿಂದೆ ಬಿಟ್ಟು ಹೊಸ ಹಂತಕ್ಕೆ ಬಂದು ನಿಂತಿದ್ದೇವೆ. ಅತಿ ಕನಿಷ್ಠ ಜನತಂತ್ರವೆಂಬ ವಿವಾದ ಇದೀಗ ಪ್ರಾರಂಭವಾಗಿದೆ. ಭಾರತದ ಜನತಂತ್ರವನ್ನು ಅಂತರರಾಷ್ಟ್ರೀಯವಾಗಿ ನಕಾರಾತ್ಮಕವಾಗಿ ಅಂದಾಜು ಮಾಡಲಾಗಿದೆ. ಅಂತಹ ವಿಮರ್ಶೆಗಳಿಗೆ ಅತ್ಯಂತ ಸ್ಫೂರ್ತಿದಾಯಕವಾಗಿ ಪ್ರತಿಕ್ರಿಯೆ ನೀಡಿದ ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್‍ರವರ ಚತುರೋಕ್ತಿಗಳನ್ನು ಮೆಚ್ಚಲೇಬೇಕು. ಆದರೆ ಜನತಂತ್ರ ಅಥವಾ ಪ್ರಜಾತಂತ್ರವೆಂದರೆ ಅದು ಕೇವಲ ಚತುರ ಮಾರ್ನುಡಿಗಳಿಗೆ ಮಾತ್ರ ಸೀಮಿತವಾದುದೆ?

ಸಚಿವರ ಪ್ರತಿಕ್ರಿಯೆ ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರಭುತ್ವದ ಪರಿಗಣಿಸಲ್ಪಟ್ಟ ನಿಲುವೆಂಬಂತೆ ತೋರುತ್ತದೆ. ಹೊರಗಿನವರು ನಮ್ಮ ಪ್ರಜಾತಂತ್ರವನ್ನು ಮಾಪನ ಮಾಡುವ ವ್ಯವಹಾರದಲ್ಲಿ ತಲೆ ಹಾಕಬಾರದೆಂಬ ಸಚಿವರ ಮಾತು ಮೊಂಡುವಾದದಂತೆ ಕಂಡು ಬರುತ್ತದೆ. ಅವರ ಚತುರ ಮಾತುಗಳಿಗೆ ಆಧಾರವೆಂದರೆ ಮತದಾರರು ಬಹುಮತದಿಂದ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆದೇ ಪ್ರಜಾಪ್ರಭುತ್ವ.

ಅಮೆರಿಕದ ಫ್ರೀಡಂ ಹೌಸ್ ಅಥವಾ ಸ್ವೀಡನ್ ದೇಶದ ವಿ.ಡೆಮ್ ಮುಂತಾದ ಸಂಘಟನೆಗಳ ಶ್ರೇಣಿಕರಣ ಕಾರ್ಯವಿಧಾನಗಳು ವಿವಾದತೀತವಾದುದೇನಲ್ಲ. ಆದರೆ ನಿಮ್ಮ ದೇಶವನ್ನವರು ಕೆಳಗಿಳಿಸಿದರೆಂಬ ಕಾರಣದಿಂದ ಅವರಿಗೆ ಸವಾಲೆಸೆಯುವುದು ಸಣ್ಣತನವಾಗುತ್ತದೆ. ಅವರ ಮಿತಿಗಳೊಳಗೆ ಮಾಡಿದ ಅಂತಹ ಮೌಲ್ಯಮಾಪನ ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಮೊದಲನೆಯದಾಗಿ ಅವರು ವಿವಿಧ ರಾಷ್ಟ್ರಗಳೊಳಗಿನ ಹೋಲಿಕೆಗಳಿಗೆ ಮನ್ನಣೆ ನೀಡುತ್ತಾರೆ.

ಒಂದೇ ರೀತಿಯ ಮಾಪನಗಳನ್ನು ಎಲ್ಲಾ ದೇಶಗಳಿಗೂ ಅನ್ವಯಿಸುತ್ತಾರೆ. ಇನ್ನಿತರ ದೇಶಗಳೊಡನೆ ಹೋಲಿಸಿ ಒಂದು ದೇಶ ಎಲ್ಲಿ ನಿಲ್ಲುತ್ತದೆಂಬ ವೈಚಾರಿಕ ನಿಲುವನ್ನು ಮುಂದಿಡುತ್ತಾರೆ. ಇದರೊಂದಿಗೆ ಒಂದು ದೇಶವು ದೀರ್ಫ ಕಾಲಾವಧಿಯಲ್ಲಿ ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಸಹ ಹೇಳುತ್ತಾರೆ. ಆದ್ದರಿಂದ ಅವರ ಮಾಪನಗಳನ್ನು ಸಾರಾಸಗಟಾಗಿ ಬೂಟಾಟಿಕೆಯೆಂದು ತಿರಸ್ಕರಿಸುವುದು ಅಸಭ್ಯವಾದ ವರ್ತನೆ ಮಾತ್ರವಲ್ಲದೆ ವ್ಯಾಧಿ ಲಕ್ಷಣಗಳನ್ನೇ ಮರೆಮಾಚಿದಂತಾಗತ್ತದೆ.

ಇದೀಗ ನಾವು ಅಂತಹ ಅಂತರರಾಷ್ಟ್ರೀಯ ಮಾಪನಗಳನ್ನು ಪಕ್ಕಕ್ಕಿಟ್ಟು ನಮ್ಮ ದೇಶದೊಳಗೆ ಉದ್ಭವವಾಗಿರುವ ಎರಡು ಪ್ರಶ್ನೆಗಳ ಬಗ್ಗೆ ಗಮನ ನೀಡೋಣ. ಮೊದಲನೆಯದಾಗಿ ಆಂತರಿಕ ಟೀಕೆ ಅಥವಾ ವಿಮರ್ಶೆಯನ್ನು ಹೇಗೆ ಪರಿಗಣಿಸಬೇಕು? ಪ್ರಸಕ್ತ ಅಸ್ತಿತ್ವದಲ್ಲಿರುವ ಪ್ರಭುತ್ವವು ಪ್ರಜಾತಂತ್ರವನ್ನು ಭಾರತದಲ್ಲಿ ಹೇಗೆ ನಾಶಮಾಡಿದೆ?

ಎಲ್ಲಾ ರೀತಿಯ ಟೀಕೆ ಅಥವಾ ವಿಮರ್ಶೆಗಳಿಗೆ ಫ್ರೀಡಂ ಹೌಸ್ ಅಥವಾ ಅಂತಹ ಸಂಘಟನೆಗಳೇ ಕಾರಣವಲ್ಲ. ಈ ದೇಶದಲ್ಲಿ ಜನತಾಂತ್ರಿಕ ರಾಜಕೀಯ ಹೇಗೆ ದಾರಿ ತಪ್ಪಿದೆಯೆಂದು ತಿಳಿದುಕೊಳ್ಳಲು ಈ ಲೇಖಕನಿಗೆ ವಿ-ಡೆಮ್‍ನ ಸಾಕ್ಷಿ ಪುರಾವೆಗಳ ಅಗತ್ಯವಿಲ್ಲ. ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವಿಕೆ ಮತ್ತು ಅವರ ಬಂಧನ, ದೇಶದ್ರೋಹದ ಆಪಾದನೆಯ ಮೇಲೆ ದಾವ ಹಾಕುವುದು, ‘ಪ್ರಕ್ಷುಬ್ಧ ಪ್ರದೇಶ’ಗಳಲ್ಲಿ ಅಂತರ್ಜಾಲವನ್ನು ಕಡಿತಗೊಳಿಸುವುದು ಮುಂತಾದ ಕ್ರಮಗಳು ಎಲ್ಲೆಡೆಯಲ್ಲೂ ವ್ಯಾಪಕವಾಗಿ ವರದಿಯಾಗಿದೆ. ಸರ್ಕಾರವನ್ನು ಟೀಕಿಸುವವರ ವಿರುದ್ಧ ತನಿಖಾ ಸಂಸ್ಥೆಗಳನ್ನು ‘ಛೂ’ ಬಿಡಲಾಗುತ್ತಿದೆ.

‘ಸ್ವಯಂ ಘೋಷಿತ ಕಾನೂನು ಪಾಲಕರು’ ಜನರನ್ನು ಪೀಡಿಸುವ ಸಲುವಾಗಿ ಆಕ್ರಮಣಕಾರಿ ರೀತಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲು ಪ್ರಭುತ್ವವು ಅವಕಾಶ ಮಾಡಿಕೊಟ್ಟಿದೆ. ಕೆಲವು ಸಂದರ್ಭಗಳಲ್ಲಿ ಪಾಶವೀ ಆಕ್ರಮಣಕ್ಕೂ ಈ ‘ಸ್ವಯಂ ಘೋಷಿತ ಕಾನೂನು ಪಾಲಕರು’ ಮುಂದಾಗುತ್ತಿದ್ದಾರೆ. ಪ್ರಮುಖ ಕಾನೂನುಗಳಿಗೆ ಸವಾಲೆಸೆಯುವಂತಹ ಮೊಕದ್ದಮೆಗಳನ್ನು ನ್ಯಾಯಾಲಯವು ವಿವರಣೆಯನ್ನೇ ನೀಡದೆ ಮುಂದೂಡುತ್ತಿದೆ. ನೀತಿ ನಿರೂಪಣೆಯಲ್ಲಾಗಲೀ ಅಥವಾ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದರಲ್ಲಾಗಲೀ ಒಂದು ಮಹತ್ವಪೂರ್ಣ ತಿರುವು ಕಂಡುಬರುತ್ತಿದೆ. ಪ್ರಜಾಪ್ರಭುತ್ವವು ಆತ್ಮನಿರ್ಭರವೆಂಬ ವಿವರಣೆಗೆ ಒಂದು ಬೌದ್ಧಿಕವಾದ ಸವಾಲಾಗಿದೆ.

ಕೇವಲ ತಮ್ಮ ಟ್ವೀಟ್‍ಗಳಿಗಾಗಿ ಬಂಧನಕ್ಕೊಳಪಟ್ಟ ಕ್ರಿಯಾಶೀಲ ವ್ಯಕ್ತಿಗಳು, ಜಾಮೀನು ತಿರಸ್ಕರಿಸಲ್ಪಟ್ಟ ರಾಜಕೀಯ ಕಾರ್ಯಕರ್ತರು, ಮೂಲೆ ಗುಂಪಾಗಿರುವ ಅಲ್ಪಸಂಖ್ಯಾತ ಸಮುದಾಯಗಳು, ಹಾಗೂ ಎಫ್.ಐ.ಆರ್.ಗಳನ್ನು ಎದುರಿಸುತ್ತಿರುವ ಪತ್ರಕರ್ತರಿಗೆ ತಮ್ಮ ಅನುಭವಗಳನ್ನು ಸಾಬೀತುಪಡಿಸಲು ವಿ.ಡೆಮ್ ಅಥವಾ ಫ್ರೀಡಂ ಹೌಸ್‍ನ ವರದಿಯ ಅಗತ್ಯವಿಲ್ಲ. ಆದರೆ ಇದರಿಂದ ಪಾಠವೊಂದನ್ನು ಎಲ್ಲರೂ ಕಲಿಯಬೇಕಾಗಿದೆ. ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರವೆಂದು ಕಲ್ಪಿಸಿಕೊಳ್ಳುವುದು ಒಂದು ಪ್ರಮಾದವಾಗುತ್ತದೆ. ಆದ್ದರಿಂದ ಎಲ್ಲಾ ಜನರು ಇಲ್ಲಿ ಮುಕ್ತರಾಗಿಲ್ಲ ಹಾಗೂ ರಾಜಕೀಯವಾಗಿ ಸಮಾನರಲ್ಲವೆಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆ ರೀತಿ ಕಲ್ಪಿಸಿಕೊಂಡಲ್ಲಿ ಅದಕ್ಕಾಗಿ ಬಹು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಸಚಿವರ ಬುದ್ಧಿವಂತಿಕೆಯಿಂದಾಗಿ ಅಂತರರಾಷ್ಟ್ರೀಯ ಮೌಲ್ಯ ಮಾಪನದಲ್ಲಿ ಬದಲಾವಣೆಯಾದರೂ ಸಹ ಅದರಿಂದ ವಾಸ್ತವಿಕತೆ ಬದಲಾಗುವುದಿಲ್ಲ.

ಆದರೆ ಮುಂಬರುವ ವರ್ಷಗಳಲ್ಲಿ ಎರಡನೇ ಪ್ರಶ್ನೆಯೊಂದು ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ. ಪ್ರಜಾಪ್ರಭುತ್ವವನ್ನು ನಾವು ಹೇಗೆ ಅರ್ಥ ಮಾಡಿಕೊಂಡಿದ್ದೇವೆ? ಅಸ್ತಿತ್ವದಲ್ಲಿರುವ ರೂಢಿ ಆಚರಣೆಗಳನ್ನು ಕೈಬಿಡುವ ಪ್ರಭುತ್ವಗಳು ಪ್ರಸ್ತುತದಲ್ಲಿರುವ ಬೌದ್ಧಿಕ ವಿಚಾರಗಳನ್ನು ಮಾನ್ಯ ಮಾಡುವುದಿಲ್ಲ. ಈಗಾಗಲೇ ಸ್ಥಾಪಿತವಾಗಿರುವ ಜನತಾಂತ್ರಿಕ ಆಚರಣೆಗಳನ್ನು ಬುಡಮೇಲು ಮಾಡಲು ಪ್ರಭುತ್ವವು ಯತ್ನಿಸುತ್ತದೆ. ಮಾದರೀ ಪರಿವರ್ತನೆಯನ್ನು ತರುವುದಾಗಿ ಪ್ರಭುತ್ವವು ಘೋಷಿಸಿಕೊಳ್ಳುತ್ತದೆ. ಅದರ ಮೊಟ್ಟಮೊದಲ ತಂತ್ರವಾದ ಬೌದ್ಧಿಕ ಅಪ್ರಾಮಾಣಿಕತೆಗೆ ಮೊರೆಹೋಗುತ್ತದೆ. ಸ್ಥಳೀಯವಾದಕ್ಕೆ ಮೊರೆಹೋಗಿ ಮಹತ್ವಪೂರ್ಣ ವಿಚಾರಗಳನ್ನು ತಪ್ಪಾಗಿ ಅರ್ಥೈಸಿ ವಿಶಿಷ್ಠವಾದ ಅಥವಾ ರಾಷ್ಟ್ರೀಯವಾದವನ್ನು ಜನಪ್ರಿಯಗೊಳಿಸಲು ಪ್ರಭುತ್ವವು ಯತ್ನಿಸುತ್ತದೆ. ಭಾರತದ ಪ್ರಜಾಪ್ರಭುತ್ವದ ಬಗೆಗಿನ ಇತ್ತೀಚಿನ ಅಂತರರಾಷ್ಟ್ರೀಯ ವರದಿಗಳು ಪ್ರಭುತ್ವದ ಪೊಳ್ಳು ಬುದ್ಧಿಜೀವಿಗಳ ಕೈಗೆ ಒಂದು ಹೊಸ ಆಯುಧವನ್ನು ನೀಡಿದಂತಾಗಿದೆ. ಅದರ ಮೂಲಕ ಅವರು ಪ್ರಜಾಪ್ರಭುತ್ವದ ಪುನರ್ ವಿವರಣೆ ನೀಡಲು ಮುಂದಾಗುತ್ತಿದ್ದಾರೆ.

ಪ್ರಜಾಪ್ರಭುತ್ವವೆಂಬುದು ಒಂದು ಪಾಶ್ಚಿಮಾತ್ಯ ಪರಿಕಲ್ಪನೆ. ನಿಜವಾದ ಆಧ್ಯಾತ್ಮಿಕ ವಿಮೋಚನೆಗೆ ಅಥವಾ ಮೋಕ್ಷಕ್ಕೆ ಅದರ ಅಗತ್ಯ ಇಲ್ಲವೆಂದು ವಾದಿಸುವ ಕಾಲವೂ ಬರಬಹುದು. ಪ್ರಜಾಪ್ರಭುತ್ವಕ್ಕೆ ನಮ್ಮ ಸ್ವಂತದ್ದೇ ಆದ ಅರ್ಥವಿದೆಯೆಂದು ಅವರು ಘೋಷಿಸಬಹುದು.

ದೀನ ದಯಾಳ್ ಉಪಾಧ್ಯಾಯರ ವಿಚಾರಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದು ಮತ್ತು ಎಂ.ಎಸ್.ಗೋಲ್ವಾಲ್ಕರ್ ಅವರ ವಿಚಾರಗಳನ್ನು ಪುನರುಜ್ಜೀವನಗೊಳಿಸುತ್ತಿರುವುದು ಈ ದೆಶೆಯಲ್ಲಿ ಅವರಿಡುತ್ತಿರುವ ಮೊದಲ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವಕ್ಕೆ ಭಾರತೀಯತೆ ಮತ್ತು ಹಿಂದು ಲಕ್ಷಣವಿರಬೇಕೆಂಬುದು ಅವರ ವಾದವಾಗಿತ್ತು. ಆರ್.ಎಸ್.ಎಸ್. ನಾಯಕರಾದ ಮೋಹನ್ ಭಾಗವತ್‍ರ ಇತ್ತೀಚಿನ ಭಾಷಣಗಳನ್ನು ಎಚ್ಚರಿಕೆಯಿಂದ ಗಮನಿಸಿದರೆ ಇದು ನಿಜವೆನಿಸುತ್ತದೆ. ಪ್ರಜಾಪ್ರಭುತ್ವವನ್ನು ಹಿಂದೂ ಸಂಪ್ರದಾಯಕ್ಕನುಗುಣವಾಗಿ ಸಂಶೋಧಿಸಿ ಅನುಸರಿಸಲಾಯಿತೆಂದು ಅವರು ಹೇಳುತ್ತಾರೆ. ಪಾಶ್ಚಿಮಾತ್ಯ ಬೌದ್ಧಿಕ ಅಭಿವೃದ್ಧಿಗಳಾಗುವ ಮೊದಲೇ ಅಂತಹ ಪರಿಕಲ್ಪನೆಗಳು ಇಲ್ಲಿದ್ದವೆಂದು ಅವರು ವಾದಿಸುತ್ತಾರೆ. ಆದರೆ ಭಾರತದ ಜನತಾಂತ್ರಿಕ ರಾಜಕೀಯದ ಆಧಾರವಾದ ಎರಡು ಮಹತ್ವಪೂರ್ಣ ವಿಷಯಗಳನ್ನು ಅವರು ತಿರಸ್ಕರಿಸುತ್ತಾರೆ. ಅವುಗಳೆಂದರೆ ರಾಷ್ಟ್ರೀಯ ಬ್ರಿಟಿಷ್-ವಿರೋಧಿ ಚಳವಳಿ ಮತ್ತು ಭಾರತದ ಸಂವಿಧಾನ.

ಇಂತಹ ಸಂದರ್ಭದಲ್ಲಿ ಜನತಾಂತ್ರಿಕ ಮನಸ್ಸುಳ್ಳ ಸಹೃದಯ ಜನರು ಭಾರತದ ಜನತಂತ್ರವನ್ನು ಉಳಿಸಲು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈ ಸಂದರ್ಭದಲ್ಲಿ ಜನರು ನಾವೇಕೆ ಇಂತಹ ಪರಿಸ್ಥಿತಿಗೆ ಬಂದು ಮುಟ್ಟಿದ್ದೇವೆಂಬುದನ್ನು ಶಾಂತಚಿತ್ತದಿಂದ ಆಲೋಚಿಸಬೇಕು. ಮುಂದಿರುವ ಸೈದ್ಧಾಂತಿಕ ಸವಾಲನ್ನು ಎದುರಿಸಬೇಕು. ಪಾಶ್ಚಿಮಾತ್ಯ ಅಥವಾ ಪಾಶ್ಚಿಮಾತ್ಯೇತರ ಮಾದರಿಗಳಾಚೆಗೆ ಹೋಗಿ ಒಂದು ಸದೃಢ ಜನತಾಂತ್ರಿಕ ಮಾದರಿಯ ಅಗತ್ಯವನ್ನು ಮನಗಾಣಬೇಕು.

ಇದೀಗ ಜಾಗತೀಕರಣ ಮತ್ತು ಜನರ ಸಂಚಾರ ಒಂದು ದೈನಂದಿನ ರೂಢಿಯಾಗಿರುವುದರಿಂದ ಜನತಂತ್ರ ವ್ಯವಸ್ಥೆಗಳಿಗೆ ಯಾವುದು ಬಹುಸಂಖ್ಯಾತವೆನಿಸಿಕೊಳ್ಳುತ್ತದೆ ಹಾಗೂ ವಿಭಿನ್ನ ಅಸ್ಮಿತೆಗಳು ಪರಸ್ಪರ ಹೇಗೆ ತಮ್ಮನ್ನು ತಾವು ಸಂಪರ್ಕಿಸಿಕೊಳ್ಳುತ್ತವೆ ಎಂಬುದು ಕೇಂದ್ರ ವಿಷಯವಾಗುತ್ತದೆ. ಪ್ರಸಕ್ತ ಅಸ್ತಿತ್ವದಲ್ಲಿರುವ ಪ್ರಭುತ್ವದ ವಕ್ತಾರರÀಂತೆ ಉಗ್ರ ರಾಷ್ಟ್ರವಾದಿಗಳಾಗಬಾರದು. ಭಾರತದ ಸ್ವಾತಂತ್ರ್ಯ ಚಳವಳಿಯ ಅನುಭವದಿಂದ ಮತ್ತು ಸಂವಿಧಾನದ ಕನಸುಗಳು ಮತ್ತು ಪ್ರಯೋಗಗಳಿಂದ ನಾವು ಕಲಿಯಬೇಕಾಗಿದೆ.

ಮೂರನೆಯದಾಗಿ ಚುನಾವಣೆ ಮತ್ತು ಚುನಾವಣೇತರ ಅಗತ್ಯಗಳನ್ನು ನಾವು ಪಕ್ಕಕ್ಕಿಡಬೇಕಾಗಿದೆ. ಪ್ರಭುತ್ವಗಳೆಲ್ಲವೂ ಪ್ರಾರಂಭದಲ್ಲಿ ಚುನಾವಣ ವಿಜಯವನ್ನು ಮತ್ತು ಜನಮತವನ್ನು ಅತ್ಯಂತ ಮಹತ್ವಪೂರ್ಣವಾದುದೆಂದು ವರ್ಣಿಸುತ್ತವೆ. ಆದರೆ ಪ್ರಜಾಪ್ರಭುತ್ವದ ಬಿಕ್ಕಟ್ಟಿನ ಸಂದರ್ಭದಲ್ಲಿ ಉದಾರವಾದಿಗೂ ಮತ್ತು ಜನತಾಂತ್ರಿಕ ಮನಸ್ಸುಳ್ಳವನಿಗೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಜನರು ವಿವಿಧ ಗುಂಪುಗಳಾಗಿ, ವ್ಯಕ್ತಿಗಳಾಗಿ ಮತ್ತು ಧರ್ಮಗಳಾಗಿ ತಮ್ಮನ್ನು ತಾವು ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳಲು ಸಮರ್ಥರಾಗುವವರೆಗೂ ಜನರ ನಿಜವಾದ ಅಭಿಮತ ವ್ಯಕ್ತವಾಗುವುದಿಲ್ಲ. ಎಲ್ಲಿಯವರೆಗೆ ನಾಗರಿಕ ಸಮಾಜದ ವ್ಯಕ್ತಿಗಳಾನ್ನಾಗಲಿ ಅಥವಾ ಅಲ್ಪಸಂಖ್ಯಾತ ಸಮುದಾಯವನ್ನಾಗಲೀ ಬಲತ್ಕಾರದಿಂದ ಮೌನವಾಗಿರಿಸಲಾಗುವುದೋ ಅಲ್ಲಿಯವರೆಗೆ ನೈಜ ಪ್ರಜಾಪ್ರಭುತ್ವ ಅರಳುವುದಿಲ್ಲ.

ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವುದನ್ನು ಯಾವುದೇ ಹೆಸರಿನಿಂದ ಕರೆದರೂ ಸಹ ಅದು ಜನಸಮೂಹಕ್ಕೆ ದಮನಕಾರಿಯಾಗಿರುತ್ತದೆ.

ಜನರ ಹೆಸರಿನಲ್ಲೇ ಅದು ಜನತೆಗೆ ವಿರುದ್ಧವಾಗಿರುತ್ತದೆ.

*ಲೇಖಕರು ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಬೋಧಿಸುತ್ತಾರೆ; ‘ಸ್ಟಡೀಸ್ ಇನ್ ಇಂಡಿಯನ್ ಪಾಲಿಟಿಕ್ಸ್’ ಪತ್ರಿಕೆಯ ಮುಖ್ಯ ಸಂಪಾದಕರು.

Leave a Reply

Your email address will not be published.