ಭಾರತದ ಭ್ರಷ್ಟ ಆರೋಗ್ಯ ವ್ಯವಸ್ಥೆಯ ಬುನಾದಿ

ಮೂಲ: ಋತುಪ್ರಿಯ ಪ್ರಾಚೀನ್ ಕುಮಾರ್ ಘೋಡಾಜ್‍ಕರ್

ಆರೋಗ್ಯ ಕ್ಷೇತ್ರದ ಭ್ರಷ್ಟಾಚಾರ ಕುರಿತು ಸಮಗ್ರ ಮಾಹಿತಿ ಹೊಂದಿರುವ ‘ಹೀಲರ್ಸ್ ಆರ್ ಪ್ರಿಡೇಟರ್ಸ್’ ಕೃತಿಯನ್ನು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿದೆ. ಅಮರ್ತ್ಯಸೇನ್ ಮುನ್ನುಡಿ ಬರೆದಿರುವ ಈ ಪುಸ್ತಕದ ಸಂಪಾದಕರು ಸಮಿರನ್ ನಂದಿ, ಕೇಶವ ದೇವರಾಜು ಮತ್ತು ಸಂಜಯ್ ನಾಗ್ರಾಲ್. ಸಮಾಜಮುಖಿ ಮುಖ್ಯಚರ್ಚೆಗೆ ಪೂರಕವಾಗಿ ಈ ಪುಸ್ತಕದಿಂದ ಆಯ್ದ ಲೇಖನದ ಸಂಗ್ರಹಾನುವಾದವನ್ನು ಇಲ್ಲಿ ನೀಡಿದ್ದೇವೆ.

ಇಂದಿನ ದಿನಗಳಲ್ಲಿ ಆರೋಗ್ಯ ವ್ಯವಸ್ಥೆಯ ಭ್ರಷ್ಟಾಚಾರ ಎಂಬುದು ಜಾಗತಿಕ ವಿದ್ಯಮಾನ. ಆಯಾ ದೇಶದ ಆರೋಗ್ಯ ವ್ಯವಸ್ಥೆ ಚಾರಿತ್ರಿಕವಾಗಿ ಎಂಥ ಹಿನ್ನೆಲೆಯನ್ನು, ಸಾಮಾಜಿಕ ಸಂದರ್ಭವನ್ನು ಹೊಂದಿದೆ ಎನ್ನುವುದಕ್ಕೆ ಅನುಗುಣವಾಗಿ ಭ್ರಷ್ಟತೆಯ ಸ್ವಭಾವ, ವ್ಯಾಪಕತೆ, ಕಾರಣಗಳು ಪರಿಣಾಮಗಳು ಹೆಚ್ಚೋ ಕಮ್ಮಿಯೋ ಆಗಬಹುದು ಅಷ್ಟೇ. ಒಂದು ಸಮಾಜದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆ ಮತ್ತು ಆ ಸಮಾಜದ ಮೇಲಾಗುವ ಅಂತರರಾಷ್ಟ್ರೀಯ ಆರ್ಥಿಕತೆಯ ಪ್ರಭಾವ ಇವುಗಳು ಅಲ್ಲಿ ಸಾಂಸ್ಥಿಕ ರಚನೆಗಳು ಹೇಗೆ ರೂಪುಗೊಂಡಿವೆ ಎಂಬುದನ್ನು ನಿರ್ಧರಿಸಿರುತ್ತವೆ. ವೃತ್ತಿಪರ ವರ್ಗಗಳು ಜನಸಮುದಾಯದ ಇತರ ವಿಭಾಗಗಳೊಂದಿಗೆ ಎಂಥ ಸಂಬಂಧ ಬೆಳೆಸಿಕೊಳ್ಳುತ್ತವೆ, ಎಂಥ ಸಾಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ ಇವೆಲ್ಲವನ್ನೂ ಈ ಮೇಲೆ ಹೇಳಿದ ಅಂಶಗಳು ನಿರ್ಧರಿಸುತ್ತವೆ ಮತ್ತು ಒಂದು ವಿಶಾಲ ಸಂಕಥನದ ಒಳಗೆ ಮಾತ್ರ ಇದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ.

ಅದೇನೇ ಇರಲಿ ಪ್ರತಿಯೊಂದು ವೃತ್ತಿಪರ ಕ್ಷೇತ್ರಕ್ಕೂ, ಸೇವಾ ವಿಭಾಗಕ್ಕೂ ತನ್ನದೇ ಆದ ವಿಶಿಷ್ಟ ಸಾಂಸ್ಥಿಕ ರಚನೆಯಿರುತ್ತದೆ, ಸಾಂಸ್ಕೃತಿ ಇರುತ್ತದೆ. ಈ ಅಧ್ಯಾಯವು ಸಾಮಾಜಿಕ ರಾಜಕೀಯ, ಸಾಂಸ್ಥಿಕ ರಚನೆಯ ಹಿನ್ನಲೆಯಲ್ಲಿ ಈ ದೇಶದ ಆರೋಗ್ಯ ವ್ಯವಸ್ಥೆ ಬೆಳೆದದ್ದು ಹೇಗೆ, ಅದರಲ್ಲಿ ಭ್ರಷ್ಟಾಚಾರ ಬೇರುಗಳು ಹರಡಿಕೊಂಡದ್ದು ಹೇಗೆ ಎಂಬುದನ್ನು ಪರೀಕ್ಷೆಗೆ ಒಳಪಡಿಸಲಿದೆ.

ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಎಂಬುದು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಒಂದು ಜಾಗತಿಕ ನಾಗರಿಕ ಸಮಾಜದ ಸಂಘಟನೆ. ಅದು ಭ್ರಷ್ಟಾಚಾರವನ್ನು, “ಯಾರೇ ಆಗಲಿ ತಮ್ಮಲ್ಲಿ ಇರಿಸಲ್ಪಟ್ಟ ಅಧಿಕಾರವನ್ನು ಖಾಸಗಿ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವುದು” ಎಂದು ವ್ಯಾಖ್ಯಾನ ಮಾಡುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವವರ ಅಧಿಕಾರ ಎರಡು ರೀತಿಯದ್ದು. ಎಂಥ ಆರೋಗ್ಯ ಸಂಬಂಧಿ ಜ್ಞಾನವು ನಿಜಕ್ಕೂ ತಜ್ಞ, ನ್ಯಾಯಯುತ, ಸರಿಯಾದ ತಿಳುವಳಿಕೆ ಎಂಬುದನ್ನು ನಿರ್ಣಯಿಸಿ ಅದನ್ನು ರೋಗಿಗಳಿಗೆ, ಸಮುದಾಯಗಳಿಗೆ, ಸರ್ಕಾರಕ್ಕೆ ಅನ್ವಯಿಸುವುದು ಮೊದಲನೆಯ ಅಧಿಕಾರ. ತಾನು ನೀಡಿದ ಸೇವೆಗೆ ಸೂಕ್ತ ಸಂಭಾವನೆಯನ್ನು ಪಡೆದುಕೊಳ್ಳುವುದು ಎರಡನೆಯ ಅಧಿಕಾರ. ಆರೋಗ್ಯ ಸೇವೆಯಲ್ಲಿ ಅಡಕವಾಗಿರುವ ಈ ರೀತಿಯ ಎರಡು ರೀತಿಯ ಅಧಿಕಾರವೇ ಅದರೊಳಗಿನ  ದುರ್ವ್ಯವಹಾರಗಳಿಗೆ ಕಾರಣವಾಗಿದೆ. ತಪ್ಪಾದ ಚಿಕಿತ್ಸೆ ಎಂದರೆ ಅವೈಚಾರಿಕವಾದ ಅಥವಾ ನಿರ್ಲಕ್ಷ್ಯದಿಂದ ಕೂಡಿದ ಚಿಕಿತ್ಸೆಯನ್ನು ಒಂದು ರೀತಿಯ ಭ್ರಷ್ಟತೆ ಎಂದು ಪರಿಗಣಿಸಿದರೆ, ಹಣಕಾಸಿಗೆ ಸಂಬಂಧಿಸಿದ ಅವ್ಯವಹಾರ ಇನ್ನೊಂದು ರೀತಿಯ ಭ್ರಷ್ಟತೆ.

ಆರೋಗ್ಯ ಕ್ಷೇತ್ರದ ವೈಶಿಷ್ಟ್ಯಗಳು

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ‘ಬೇಕಾದರೆ ಕೊಂಡುಕೊಳ್ಳುವುದು ಇಲ್ಲವಾದರೆ ಬಿಡುವುದು” ಎಂಬ ಸಾಂಪ್ರದಾಯಿಕ ತರ್ಕವೊಂದಿದೆ. ಆದರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಮಾರಾಟಗಾರ-ಬಳಕೆದಾರರ ನಡುವಿನ ಸ್ವಾತಂತ್ರ್ಯ ಸರಳವಲ್ಲ. ಇಲ್ಲಿ ಅನೇಕ ಬಾರಿ ಬಳಕೆದಾರ ಅಥವಾ ರೋಗಿಗೆ ಒಂದು ಸೇವೆಯನ್ನು ಕೊಂಡುಕೊಳ್ಳದೆ ಇರಬಲ್ಲೆ ಎಂಬಂಥ ಅವಕಾಶವಿರುವುದಿಲ್ಲ. ಅದು ಜೀವನ್ಮರಣದ ಪ್ರಶ್ನೆಯಾಗಿರಬಹುದು. ಅದೇ ರೀತಿ ಬೇರೆ ವಸ್ತುಗಳ ಸಂದರ್ಭದಲ್ಲಿ ಮಾಡುವಂತೆ ನನಗಿಂಥದೇ ಸೇವೆ ಅಥವಾ ಉತ್ಪನ್ನ ಬೇಕು ಎಂದೂ ಆತ/ಆಕೆ ಹೇಳುವಂತಿಲ್ಲ. ಅದನ್ನು ನಿರ್ಧರಿಸುವುದು ಆ ಸೇವೆಯನ್ನು ಒದಗಿಸುವ ವೈದ್ಯನೇ, ಇದಲ್ಲದೆ ಈ ವೈದ್ಯನಾದರೋ ಇನ್ನೊಬ್ಬ ಸರಬರಾಜುದಾರ ಎಂದರೆ ಔಷಧಿ ಉದ್ಯಮ ಅಥವಾ ವೈದ್ಯಕೀಯ ಸಾಮಾಗ್ರಿಗಳ ಉದ್ಯಮ ಮತ್ತು ರೋಗಿಯ ನಡುವಿನ ಮಧ್ಯಮವರ್ತಿಯಾಗಿರುತ್ತಾನೆ ಎಂಬುದು ಸಮಸ್ಯೆಯ ಇನ್ನೊಂದು ಆಯಾಮ. ಆದ್ದರಿಂದಲೇ ಆರೋಗ್ಯ ಕ್ಷೇತ್ರದಲ್ಲಿ ಸೇವೆಗಳನ್ನು ಪೂರೈಸುವವರು ಅತ್ಯುನ್ನತ ಮಟ್ಟದ ವೃತ್ತಿಪರತೆಯನ್ನು, ನೀತಿಯನ್ನು, ನೈತಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಎಲ್ಲ ಚಿಕಿತ್ಸಾ ಪದ್ಧತಿಗಳೂ ಇದನ್ನು ಗುರುತಿಸಿ ತಮ್ಮದೇ ಆದ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ. ಸಾಂಪ್ರದಾಯಿಕ ಜನಪದ ವೈದ್ಯರಿಂದ ಹಿಡಿದು ಆಧುನಿಕ ವೈದ್ಯಕೀಯದ ವೃತ್ತಿನಿರತರವರೆಗೂ ಎಲ್ಲರೂ ವೃತ್ತಿ ನೀತಿ ಸಂಹಿತೆಯನ್ನು ರೋಪಿಸಿಕೊಂಡಿದ್ದು ಅವು ಸಾಂಸ್ಕತಿಕ ಆಚರಣೆಗಳಾಗಿಬಿಟ್ಟಿವೆ.

ಆರೋಗ್ಯ ಕ್ಷೇತ್ರದ ಮಾರುಕಟ್ಟೆ ಸದಾ ವಿಸ್ತರಿಸುತ್ತಿರುವಂಥದ್ದಲ್ಲ. ಹೀಗಾಗಿ ಇರುವ ಗ್ರಾಹಕರನ್ನೇ ಹೆಚ್ಚಾಗಿ ಹಿಂಡುವ ಪ್ರವೃತ್ತಿ ಬರುತ್ತದೆ. ಇದರಲ್ಲಿ ಗ್ರಾಹಕರಿಗೆ ಜ್ಞಾನದ ಕೊರತೆ ಬೇರೆ ಇರುತ್ತದೆ. ಆರೋಗ್ಯ ಸೇವೆಗಳು ಹೆಚ್ಚು ಸಂಕೀರ್ಣವಾಗುತ್ತಿವೆ ಸಹ. ಆದ್ದರಿಂದ ಇದರ ನಿಯಂತ್ರಣ ಸುಲಭವಲ್ಲ. ಹಿಂದೆ ಔಷಧಗಳನ್ನು ನೈಸರ್ಗಿಕವಾಗಿ ಸ್ಥಳೀಯವಾಗಿ ಸಿಗುವ ಪದಾರ್ಥಗಳಿಂದ ತಯಾರಿಸಿಕೊಳ್ಳಲಾಗುತ್ತಿತ್ತು. ಆಗ ಎಷ್ಟೋ ಕಡೆ ವೈದ್ಯರು ಉಚಿತವಾಗಿ ಸೇವೆ ನೀಡುತ್ತಿದ್ದರು. ಅಥವಾ ರೋಗಿಗಳು ತೋಚಿದಷ್ಟು ಕೊಡುತ್ತಿದ್ದರು. ಶ್ರೀಮಂತರಿಂದ ಹೆಚ್ಚಾಗಿ ವಸೂಲಿ ಮಾಡಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇತ್ತು. ಪ್ರಭುತ್ವದ ನೆರವು, ದಾನ-ಧರ್ಮದ ಮೂಲಗಳೂ ದೊರಕುತ್ತಿದ್ದವು.

ಮಾನ್ಯತೆ ನೀಡುವ ಸಂಸ್ಥೆಗಳು, ವಿಮಾ ಕಂಪನಿಗಳು ಕೂಡಾ ಈ ಕ್ಷೇತ್ರದೊಳಗೆ ನುಸುಳಿಕೊಂಡಿದ್ದಾರೆ. ಅಮೆರಿಕಾದಲ್ಲಿ 1950/60 ರಲ್ಲಿ ಪ್ರವೇಶಿಸಿದ ಈ ಪಾತ್ರಧಾರಿಗಳು 21ನೆಯ ಶತಮಾನದಲ್ಲಿ ಭಾರತಕ್ಕೂ ಮುಗಿಬಿದ್ದಿದ್ದಾರೆ. ಪಾತ್ರಧಾರಿಗಳು ಹೆಚ್ಚಿದಂತೆ ಸೇವೆ ತುಟ್ಟಿಯಾಗುತ್ತದೆ ಹಾಗೂ ಲಂಚಗುಳಿತನಕ್ಕೆ ಹೊಸ ಮಾರ್ಗಗಳು ತೆರೆಯಲ್ಪಡುತ್ತವೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಸರ್ಕಾರಗಳು ಆರೋಗ್ಯ ಸೇವೆಯಲ್ಲಿ ಗಣನೀಯ ಪಾತ್ರವನ್ನು ವಹಿಸಲಾರಂಭಿಸಿದವು. ಬೇರೆ ಬೇರೆ ಸಮಾಜದಲ್ಲಿ ಈ ಪಾತ್ರ ವಿಭಿನ್ನವಾಗಿದೆ. ಆದರೆ 1980ರ ನಂತರ ಸಮಾಜ ಕಲ್ಯಾಣ ಸೇವೆಗಳಲ್ಲಿ ಸರ್ಕಾರದ ಪಾತ್ರ ಕುಗ್ಗುತ್ತಿದೆ ಮತ್ತು ವಾಣಿಜ್ಯ ಹಿತಾಸಕ್ತಿಯ ಶಕ್ತಿಗಳೇ ರಾಜ್ಯದ ನೀತಿಗಳನ್ನು ನಿರ್ದೇಶಿಸುವಷ್ಟು ಪ್ರಬಲವಾಗುತ್ತಿವೆ. ಮಾರುಕಟ್ಟೆ ತತ್ವಗಳಿಗೆ ಅನುಗುಣವಾಗಿ ಹೊಸ ಸಾಂಸ್ಥಿಕ ರಚನೆಗಳನ್ನು ರೂಪಿಸಲಾಗುತ್ತಿದೆ. ಅನೇಕ ಬಾರಿ ಇವು ಆರೋಗ್ಯ ಕ್ಷೇತ್ರದಲ್ಲಿರಬೇಕಾದ ಸೇವಾ ಧೋರಣೆಗೆ ವ್ಯತಿರಿಕ್ತವಾಗಿವೆ. ಇದಲ್ಲದೆ ಮಾನ್ಯತೆ ನೀಡುವ ಸಂಸ್ಥೆಗಳು, ವಿಮಾ ಕಂಪನಿಗಳು ಕೂಡಾ ಈ ಕ್ಷೇತ್ರದೊಳಗೆ ನುಸುಳಿಕೊಂಡಿದ್ದಾರೆ. ಅಮೆರಿಕಾದಲ್ಲಿ 1950/60 ರಲ್ಲಿ ಪ್ರವೇಶಿಸಿದ ಈ ಪಾತ್ರಧಾರಿಗಳು 21ನೆಯ ಶತಮಾನದಲ್ಲಿ ಭಾರತಕ್ಕೂ ಮುಗಿಬಿದ್ದಿದ್ದಾರೆ. ಪಾತ್ರಧಾರಿಗಳು ಹೆಚ್ಚಿದಂತೆ ಸೇವೆ ತುಟ್ಟಿಯಾಗುತ್ತದೆ ಹಾಗೂ ಲಂಚಗುಳಿತನಕ್ಕೆ ಹೊಸ ಮಾರ್ಗಗಳು ತೆರೆಯಲ್ಪಡುತ್ತವೆ. ಇವರೆಲ್ಲರ ಶಕ್ತಿ, ಹಿತಾಸಕ್ತಿಗಳು ವಿಭಿನ್ನವಾಗಿದ್ದು ಇವರ ಮಧ್ಯದ ಮೇಲಾಟದಲ್ಲಿಯೇ ಆರೋಗ್ಯ ಸೇವೆಯ ರಚನೆ ಮತ್ತು ಸಂಸ್ಕತಿ ರೂಪುಗೊಳ್ಳುತ್ತದೆ.

ಈ ಅಧ್ಯಾಯದಲ್ಲಿ ನಾವು ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿನ ಭ್ರಷ್ಟಾಚಾರ ಹೇಗೆ ಒಂದಕ್ಕೊಂದು ಬೆಸೆದುಕೊಂಡಿವೆ ಮತ್ತು ಇದು ಹೇಗೆ ವಸಾಹತುಶಾಹಿ ಕಾಲದ ವ್ಯವಸ್ಥೆಯ ಮುಂದುವರಿಕೆ ಎಂಬುದನ್ನು ಚರ್ಚಿಸಲಿದ್ದೇವೆ. ಎರಡನೆಯದಾಗಿ ಆರೋಗ್ಯ ಸೇವೆಯು ಹೇಗೆ ಆಧುನಿಕ ವೈದ್ಯ ಪದ್ಧತಿಯ ಮೇಲೆ ಅವಲಂಬಿತವಾಗಿದ್ದು ವೈದ್ಯ- ಆಸ್ಪತ್ರೆ ಕೇಂದ್ರಿತವಾಗಿದೆ ಎಂಬುದನ್ನೂ ಈ ಅಧ್ಯಾಯ ಚರ್ಚಿಸಲಿದೆ. ವಸಾಹತುಶಾಹಿ ಕಾಲದಲ್ಲೂ ಮತ್ತು ಸ್ವಾತಂತ್ರ್ಯ ಬಂದ ಹೊಸತರಲ್ಲಿಯೂ ಸರ್ಕಾರದ ಧನಸಹಾಯ ಅಸಮರ್ಪಕವಾಗಿದ್ದು, ವಸಾಹತುಶಾಹಿ ಶೋಷಣೆಯಿಂದ ಬಡವರಾಗಿದ್ದ ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲವಾಗಿದ್ದರಿಂದ, ಆರೋಗ್ಯ ಸೇವೆ ಎಂಬುದು ಶ್ರೀಮಂತರು ಮಾತ್ರ ಕೊಳ್ಳಬಹುದಾದ ಸರಕಾಯಿತು. ಮೂರನೆಯದಾಗಿ ಕೈಗೆ ದಕ್ಕದ ತಿಳುವಳಿಕೆಯ ಮೇಲೆ ಆಧಾರಿತವಾಗಿದ್ದ ಈ ವ್ಯವಸ್ಥೆಯಲ್ಲಿ ಉತ್ತರದಾಯಿತ್ವವೂ ಇರಲಿಲ್ಲ. ಅದರ ಮೇಲೆ ನಿಯಂತ್ರಣವೂ ಇರಲಿಲ್ಲ. ನಾಲ್ಕನೆಯದಾಗಿ ಈ ವ್ಯವಸ್ಥೆಯ ಹಿಂದೆ ಕೆಲಸ ಮಾಡುತ್ತಿರುವುದು ಒಂದು ಜೈವಿಕ-ವೈದ್ಯಕೀಯ ಶಕ್ತಿ ಕೂಟ. ಎಂದರೆ ಇದರ ಹಿಂದೆ ಬಹುದೊಡ್ಡ ಖಾಸಗಿ ಉದ್ದಿಮೆಗಳಿವೆ. ಅದರಲ್ಲಿ ಔಷಧ ತಯಾರಕರು, ತಪಾಸಣಾ ಸಲಕರಣೆಗಳ ಉತ್ಪಾದಕರು, ಬೃಹತ್ ಆಸ್ಪತ್ರೆಗಳು, ವಿಮಾ ಕಂಪನಿಗಳು ಇರುವ ಬಲಿಷ್ಠರ ಕೂಟವಿದೆ. ಇವುಗಳಿಂದಾಗಿ ಚಿಕಿತ್ಸೆ ದುಬಾರಿಯಾಗಿದೆ, ವ್ಯಾಪಾರವಾಗಿದೆ. ಈ ಶಕ್ತಿ ಕೂಟವೇ ಇಂದು ಆರೋಗ್ಯ ಕ್ಷೇತ್ರದ ವೃತ್ತಿನಿರತರನ್ನು, ಅಧಿಕಾರಿಗಳನ್ನು ನೀತಿ ನಿರೂಪಕರನ್ನು ಭ್ರಷ್ಟಗೊಳಿಸಿದೆ. ಐದನೆಯದಾಗಿ ಜನತೆಯಲ್ಲೇ ಅಡಕವಾಗಿದ್ದ ಕೆಲವೊಂದು ಆರೋಗ್ಯ ಜ್ಞಾನವನ್ನು ತುಚ್ಛೀಕರಿಸಿದ್ದರಿಂದ, ಜನರು ಆಧುನಿಕ ತಜ್ಞ ವೈದ್ಯರ ಮೇಲೆ ಅವಲಂಬಿತರಾಗುವಂತಾಯಿತು. ಹೀಗೆ ದಕ್ಕಿದ ಅಧಿಕಾರವನ್ನು ಮೊದಲು ವೈದ್ಯರು, ನಂತರ ಇತರರು ಸಹ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಯಿತು.

ಒಟ್ಟಾರೆ ಈ ರಾಚನಿಕ ಅಂಶಗಳಿಂದಾದ ಪರಿಣಾಮವೆಂದರೆ ಆರೋಗ್ಯ ಸೇವಾ ವೃತ್ತಿಪರರು ಅಪೇಕ್ಷಿತ ನೈತಿಕ ನೆಲೆಗಳಿಂದ ದೂರ ಸರಿಯುವಂಥ ಸನ್ನಿವೇಶ ಉಂಟಾಗಿದೆ. ಇದರಿಂದಾಗಿ ಸಮಾಜವು ಇವರನ್ನು ಸಂಶಯದಿಂದ ನೋಡುವಂತಾಗಿದೆ. ಇದರೊಂದಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳೂ ಸಹ ಇದೇ ರೀತಿಯಲ್ಲಿ ವ್ಯಾಪಾರೀ.

ಕರಣಕ್ಕೂ, ಅವೈಚಾರಿಕ ಚಿಕಿತ್ಸೆಗಳಿಗೂ ಎಡೆಮಾಡಿಕೊಟ್ಟಿವೆ. 19ನೆಯ ಶತಮಾನದ ವಸಾಹತುಶಾಹಿ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಸಾಮಾಜಿಕ-ರಾಜಕೀಯ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿ ಈ ರಾಚನಿಕ ಪ್ರಕ್ರಿಯೆ ವಿಕಸಿತವಾಗಿದೆ. ಈ ಅವಧಿಯಲ್ಲಿ ಮೂರು ಬಾರಿ ಆಡಳಿತ ಸಾಂಸ್ಥಿಕ ರಚನೆಯಲ್ಲಿ ಬದಲಾವಣೆಗಳು ಕಂಡು ಬಂದಿವೆ. 1919 ಮತ್ತು 1935ರಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾದೇಶಿಕ ಸರ್ಕಾರಗಳು ಅಸ್ತಿತ್ವಕ್ಕೆ ಬಂದು ಆರೋಗ್ಯ ಸೇವೆ ವಿಸ್ತಾರಗೊಂಡಾಗ ಮೊದಲನೆಯ ಬಾರಿ, 1947ರಲ್ಲಿ ಸ್ವಾತಂತ್ರ್ಯ ಬಂದಾಗ ಎರಡನೆಯ ಬಾರಿ ಮತ್ತು 1990 ರಲ್ಲಿ ಉದಾರೀಕರಣ ಮತ್ತು ಜಾಗತೀಕರಣಗಳು ಜಾರಿಗೊಂಡಾಗ ಮೂರನೆಯ ಬಾರಿ ಇಂಥ ಪಲ್ಲಟಗಳು ಕಂಡು ಬಂದಿವೆ.

ಮತ್ತೊಂದು ಗಮನಾರ್ಹವಾದ ಸಂಗತಿಯೆಂದರೆ ಪ್ರತಿಬಾರಿ ಇಂಥ ಬದಲಾವಣೆಗಳು ಜರುಗಿದಾಗಲೂ ಆರೋಗ್ಯ ಸೇವೆಯನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಳ್ಳಲು ಸಾಧ್ಯವಿತ್ತು. ಆದರೆ ಪ್ರತಿಬಾರಿ ಮಾಡಿಕೊಂಡ ಆಯ್ಕೆಯ ಮಾದರಿಗಳ ಒಟ್ಟು ಪರಿಣಾಮವಾಗಿ ಇಂದು ಆರೋಗ್ಯ ಸೇವೆಯಲ್ಲಿ ಭ್ರಷ್ಟತೆ ಕಾಣಿಸಿಕೊಂಡಿದೆ.

ಆರೋಗ್ಯ ಸೇವಾವ್ಯವಸ್ಥೆಯ ರಚನೆ ಮತ್ತು ಪರಿಣಾಮ

1947ರಲ್ಲಿ ಸ್ವಾತಂತ್ರ್ಯ ಬಂದಾಗ ನಾವು ಆಯ್ಕೆ ಮಾಡಿಕೊಂಡ ಆರೋಗ್ಯ ಸೇವೆಯ ನೀಲನಕ್ಷೆಯು ಬ್ರಿಟಿಷ್ ಇಂಡಿಯಾ ಸರ್ಕಾರ ನೇಮಿಸಿದ್ದ ಭೋರೆ ಸಮಿತಿಯ ವರದಿಯನ್ನು ಆಧರಿಸಿತ್ತು. ಅದಕ್ಕೆ ಮುನ್ನ ಸುಮಾರು ನೂರು ವರ್ಷಗಳ ಕಾಲ ದೊಡ್ಡ ನಗರಗಳಲ್ಲಿ ಒಂದಿಷ್ಟು ನಾಗರಿಕ ಆರೋಗ್ಯ ಸೇವೆಯನ್ನು ಕಲ್ಪಿಸಲಾಗಿತ್ತು. ನಾವು ಅದನ್ನು ಪರೀಕ್ಷಿಸೋಣ.

ವಸಾಹತುಶಾಹಿ ಪರಂಪರೆ

ಮೊದಲಿಗೆ ಬ್ರಿಟಿಷ್ ಅಧಿಕಾರಿಗಳಿಗೆ ಮತ್ತು ಸೈನ್ಯಕ್ಕೆ ಎಂದು ಆಧುನಿಕ ವೈದ್ಯ ಪದ್ಧತಿಯನ್ನು ನಮ್ಮ ದೇಶದಲ್ಲಿ ಪರಿಚಯಿಸಲಾಯಿತು. 1857ರ ನಂತರ ಇದನ್ನು ಒಂದು ಮಟ್ಟಿಗೆ ಜನಸಾಮಾನ್ಯರಿಗೂ ವಿಸ್ತರಿಸಲಾಯಿತು. ಅಲ್ಲಿಯವರೆಗೂ ನಮ್ಮಲ್ಲಿದ್ದ ಆರೋಗ್ಯ ವ್ಯವಸ್ಥೆ ಮೇಲಿನಿಂದ ಹೇರಿದ್ದಲ್ಲ. ಬುಡಮಟ್ಟದಿಂದ ಅರಳಿಕೊಂಡಿದ್ದಂತಹುದು. ವಿಕೇಂದ್ರಿತವಾದಂಥ ದ್ದು ಮತ್ತು ವ್ಯಾಪಾರಿ ಹಿತಾಸಕ್ತಿ ರಹಿತವಾದದ್ದು. ಇದರ ಜಾಗದಲ್ಲಿ ಹೊಸದಾಗಿ ಬಂದಂಥ ಆರೋಗ್ಯ ಸೇವೆಯು ಮೇಲಿನಿಂದ ಹೇರಲ್ಪಟ್ಟ, ಕೇಂದ್ರೀಕೃತವಾದ, ವಾಣಿಜ್ಯ ಸರಕುಗಳಿಂದ ಕೂಡಿದ ವ್ಯವಸ್ಥೆಯಾಗಿತ್ತು.

1820-30ರಿಂದಲೇ ಮೆಡಿಕಲ್ ಕಾಲೇಜುಗಳು ಆರಂಭಗೊಂಡಿದ್ದು, ಅದರಿಂದ ಹೊರಬಂದ ಭಾರತೀಯ ವೈದ್ಯರು ಬ್ರಿಟಿಷ್ ವೈದ್ಯರಿಗೆ ಸಹಾಯಕರಾಗಿದ್ದರು. 1857ರ ನಂತರ ಮತ್ತು 1919ರಲ್ಲಿ ಚುನಾಯಿತ ಸ್ಥಳೀಯ ಸರ್ಕಾರಗಳು ಬಂದ ನಂತರ ದೇಶೀಯರಿಗೂ ಆರೋಗ್ಯ ಸೇವೆ ದೊರಕುವಂತೆ ಅದನ್ನು ಬಲಪಡಿಸಲಾಯಿತು. ಇದು ಹಳ್ಳಿಗಾಡಿಗೂ ತಲುಪಲಾರಂಭಿಸಿತು. 1940ರ ವೇಳೆಗೆ ಭಾರತದಲ್ಲಿ 47,000 ಜನ ಆಧುನಿಕ ವೈದ್ಯರಿದ್ದರು. ಅದರಲ್ಲಿ ಸುಮಾರು 13,000 ಮಂದಿ ಸರ್ಕಾರಿ ವೈದ್ಯರಾಗಿದ್ದರೆ ಉಳಿದ ಮೂರನೇ ಎರಡು ಭಾಗ ಖಾಸಗಿ ಪ್ರಾಕ್ಟೀಸ್‍ನಲ್ಲಿ ತೊಡಗಿಕೊಂಡಿದ್ದರು. ಅಂದು ಶುರುವಾಗಿದ್ದ 7650 ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ಸರ್ಕಾರದಿಂದ ನಡೆಯುತ್ತಿದ್ದವು. ಉಳಿದವು ಮಿಶಿನರಿ ಸಂಸ್ಥೆಗಳಿಂದ, ಪರೋಪಕಾರಿ ಧರ್ಮಿಷ್ಟರಿಂದ ಆರಂಭವಾಗಿದ್ದವು. ಇದರಲ್ಲಿ ಒಂದು ರೀತಿಯ  ವೃತ್ತಿನಿರತರ ಆಚಾರ-ವಿಚಾರ ಮತ್ತು ಶ್ರೇಣೀಕರಣ ಆರಂಭವಾಗಿತ್ತು.

ಭಾರತೀಯ ಪದವೀಧರರು ಸಹಾಯಕ ಸರ್ಜನ್‍ಗಳಾಗುತ್ತಿದ್ದರು ಮತ್ತು ಎಲ್ ಎಮ್ ಪಿ ಗಳು ಅವರ ಕೆಳಗೆ ಸಬ್ ಅಸಿಸ್ಟೆಂಟ್ ಸರ್ಜನ್‍ಗಳಾಗುತ್ತಿದ್ದರು. ಸರ್ಕಾರ ತಾನೇ ಆಸ್ಪತ್ರೆ ತೆರೆಯುವ ಬದಲು ಹಳ್ಳಿಗಳಲ್ಲಿ ಪ್ರಾಕ್ಟೀಸ್ ಶುರು ಮಾಡುವವರಿಗೆ ಸಬ್ಸಿಡಿ ಕೊಡುವುದು, ಆಸ್ಪತ್ರೆಗಳಲ್ಲಿ ಗೌರವ ವೈದ್ಯರು ಎಂದು ಖಾಸಗಿ ವೈದ್ಯರನ್ನು ಸೇರಿಸಿಕೊಳ್ಳುವುದು,

ಅಂದೂ ಸಹ ಪ್ರಾದೇಶಿಕ ಸರ್ಕಾರಗಳಿಗೆ ಹಣಕಾಸು ಮತ್ತು ವೈದ್ಯರ ಲಭ್ಯತೆ ಸವಾಲೇ ಆಗಿತ್ತು. ಅವರು ಖರ್ಚು ತಗ್ಗಿಸಲೆಂದು ಆಸ್ಪತ್ರೆಗಳ ಸಂಖ್ಯೆಯನ್ನು ಮಿತಗೊಳಿಸಿಕೊಂಡಿದ್ದರು. ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಹೊಸ ವಿಧಾನಗಳನ್ನು ಹುಡುಕಿಕೊಂಡಿದ್ದರು. ಇದರಿಂದಾಗಿಯೇ ಎಲ್ ಎಂ ಪಿ ವೈದ್ಯರುಗಳ (ಲೈಸೆನ್ಸ್ದ್ ಮೆಡಿಕಲ್ ಪ್ರಾಕ್ಟೀಶನರ್ಸ್) ಶ್ರೇಣಿ ಸೃಷ್ಟಿಯಾಯಿತು. ಬ್ರಿಟಿಷ್ ವೈದ್ಯರು ಸಿವಿಲ್ ಸರ್ಜನ್‍ಗಳಾದರೆ, ಭಾರತೀಯ ಪದವೀಧರರು ಸಹಾಯಕ ಸರ್ಜನ್‍ಗಳಾಗುತ್ತಿದ್ದರು ಮತ್ತು ಎಲ್ ಎಮ್ ಪಿ ಗಳು ಅವರ ಕೆಳಗೆ ಸಬ್ ಅಸಿಸ್ಟೆಂಟ್ ಸರ್ಜನ್‍ಗಳಾಗುತ್ತಿದ್ದರು. ಸರ್ಕಾರ ತಾನೇ ಆಸ್ಪತ್ರೆ ತೆರೆಯುವ ಬದಲು ಹಳ್ಳಿಗಳಲ್ಲಿ ಪ್ರಾಕ್ಟೀಸ್ ಶುರು ಮಾಡುವವರಿಗೆ ಸಬ್ಸಿಡಿ ಕೊಡುವುದು, ಆಸ್ಪತ್ರೆಗಳಲ್ಲಿ ಗೌರವ ವೈದ್ಯರು ಎಂದು ಖಾಸಗಿ ವೈದ್ಯರನ್ನು ಸೇರಿಸಿಕೊಳ್ಳುವುದು, ಸರ್ಕಾರಿ ವೈದ್ಯರನ್ನು ಖಾಸಗಿ ಪ್ರಾಕ್ಟೀಸ್ ಮಡಿಕೊಳ್ಳಲು ಬಿಡುವುದು ಮೊದಲಾದವು ಕೂಡ ಸರ್ಕಾರದ ವೆಚ್ಚವನ್ನು ತಗ್ಗಿಸಿಕೊಳ್ಳುವ ಉಪಾಯಗಳೇ ಆಗಿದ್ದವು. ಭಾರತೀಯ ವೈದ್ಯ ಪದ್ಧತಿಗಳನ್ನು ಉತ್ತೇಜಿಸುವುದು ಸಹ ಇದೇ ಉಳಿತಾಯ ಯೋಜನೆಯ ಭಾಗವೇ ಆಗಿತ್ತು.

ಒಟ್ಟಿನಲ್ಲಿ ಇಷ್ಟೊಂದು ರೀತಿಯ ವೈದ್ಯರುಗಳಿಂದಾಗಿ ಒಂದು ಶ್ರೇಣೀಕೃತ ಪದ್ಧತಿ ಅಸ್ತಿತ್ವಕ್ಕೆ ಬಂದಿತ್ತು. ಇವರ ಮಧ್ಯೆ ಅಸೂಯೆ, ಸ್ಪರ್ಧೆಗಳೂ ಕಾಣಿಸಿಕೊಂಡವು. ಸರ್ಕಾರದ ಪೂರ್ಣಾವಧಿ ವೈದ್ಯರಿಗಿಂತ ಗೌರವ ವೈದ್ಯರ ಆದಾಯವೇ ಹೆಚ್ಚಿರುತ್ತಿತ್ತು. ಅವರು ಸರ್ಕಾರಿ ಆಸ್ಪತ್ರೆಗಳಿಂದ ರೋಗಿಗಳನ್ನು ತಮ್ಮ ಚಿಕಿತ್ಸಾಲಯಕ್ಕೆ ಸೆಳೆದುಕೊಳ್ಳುತ್ತಿದ್ದರು. ಸಂಬಳ ಪಡೆಯುವ ವೈದ್ಯನಿಗಿಂತ ಇವರ ಪರಿಸ್ಥಿತಿಯೇ ಚೆನ್ನಾಗಿರುತ್ತಿತ್ತು. ಇವರ ಉಲ್ಲಂಘನೆಗಳನ್ನು ನಿಯಂತ್ರಣ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ ಕ್ರಮೇಣ ಸಂಬಳ ಪಡೆಯುತ್ತಿದ್ದ ವೈದ್ಯರೂ ಸಹ ಅಡ್ಡದಾರಿ ಹಿಡಿಯಲಾರಂಭಿಸಿದರು. ಇನ್ನೊಂದು ಕಡೆ ಎಲ್ ಎಂ ಪಿಗಳು ತಮ್ಮ ಸ್ಥಾನಮಾನವನ್ನು ಉತ್ತಮಪಡಿಸಿಕೊಳ್ಳಲು ಸದಾ ಹೆಣಗಾಡುತ್ತಿದ್ದರು. ಅವರಲ್ಲಿ ಅಸಮಧಾನ ಹೆಪ್ಪುಗಟ್ಟಿರುತ್ತಿತ್ತು. ಒಟ್ಟಿನಲ್ಲಿ ಸರ್ಕಾರಿ ವೈದ್ಯನಿಗೆ ಚಿಕಿತ್ಸೆಗೆಂದು ಹಣ ತೆರುವುದು ಸರ್ವೇಸಾಮಾನ್ಯವಾಗತೊಡಗಿತು. ವಿದೇಶಿ ಸರ್ಕಾರದಿಂದ ರಚಿತವಾದ ವ್ಯವಸ್ಥೆಗೂ ದೇಶಿಯರಿಗೂ ನಡುವೆ ಕಂದರವೇರ್ಪಟ್ಟಿತ್ತು. ಮಧ್ಯವರ್ತಿಗಳ ಸಹಾಯವಿಲ್ಲದೆ ಜನಸಾಮಾನ್ಯ ರಿಗೆ ಸರ್ಕಾರದ ಸವಲತ್ತುಗಳು ದೊರಕುತ್ತಿರಲಿಲ್ಲ. ಸರ್ಕಾರಿ ಸೇವೆಯು ಬೇಡಿಕೆಯನ್ನು ಸೃಷ್ಟಿಸಿತ್ತು. ಆದರೆ ಅದಕ್ಕೆ ತಕ್ಕಂತೆ ಸೇವೆ ನೀಡುವ ಶಕ್ತಿ ಅದಕ್ಕೆ ಇರಲಿಲ್ಲ. ಭೋರೆ ಸಮಿತಿ ಹೇಳುವಂತೆ ವೈದ್ಯನೊಬ್ಬ ಒಂದು ಘಂಟೆಯಲ್ಲಿ 75 ರೋಗಿಗಳನ್ನು ನೋಡಬೇಕಿತ್ತು. ಹೀಗಾಗಿ ಬೆಲೆ ತೆತ್ತು ದುಡ್ಡಿದ್ದವರು ವೈದ್ಯರ ಸೇವೆಯನ್ನು ಕೊಂಡುಕೊಳ್ಳಲಾರಂಭಿಸಿದರು.

ಸ್ವಾತಂತ್ರೋತ್ತರ ಯೋಜನೆ -ಜನರ ತಿಳಿವಳಿಕೆಯಿಂದ ದೂರ

ಹತ್ತೊಂಬತ್ತನೆಯ ಶತಮಾನದ ಆದಿ ಭಾಗದವರೆಗೂ ಭಾರತೀಯ ವೈದ್ಯ ಪದ್ಧತಿಗಳಿಗೆ ಸರ್ಕಾರದ ಬೆಂಬಲವಿತ್ತು. 1835ರ ಮೆಕಾಲೆ ನಿರ್ಣಯದ ನಂತರ ಆಲೋಪತಿ ಅಥವಾ ಆಧುನಿಕ ವೈದ್ಯ ಪದ್ಧತಿಗೆ ಸಕ್ರಿಯ ಬೆಂಬಲ ದಕ್ಕಿದರೆ ಭಾರತೀಯ ವೈದ್ಯ ಪದ್ಧತಿಗಳಿಗೆ ಅಲ್ಲಿಯವರೆಗೂ ಇದ್ದ ನೆರವೂ ತಪ್ಪಿಹೋಯಿತು. ಭಾರತೀಯ ವೈದ್ಯ ಪದ್ಧತಿಯ ಜನ ತಮ್ಮನ್ನೇ ಸಂಘಟಿಸಿಕೊಂಡು ಪ್ರತಿರೋಧಕ್ಕಿಳಿದರು ನಿಜ. ಆದರೆ ಅವರೂ ಆಧುನಿಕ ಶಿಕ್ಷಣ ಕ್ರಮ, ಔಷಧ ಪದ್ಧತಿಗಳಿಗೆ ಮೊರೆಹೋಗಲಾರಂಭಿಸಿದರು. ಇದಲ್ಲದೆ ವತ್ತಿಪರತೆಯ ಮಾನದಂಡಗಳು ಮೆಡಿಕಲ್ ಕೌನ್ಸಿಲ್‍ನ ಶಿಫಾರಸುಗಳಂತೆ ರೂಪಿಸಲ್ಪಟ್ಟಿದ್ದರಿಂದ ಈ ಪದ್ಧತಿಗಳಿಗೆ ಹಿಂದಿದ್ದ ಮಾನ್ಯತೆ ತಪ್ಪಿಹೋಗಿ ಜನತೆಗೆ ಹತ್ತಿರವಿದ್ದ ಜ್ಞಾನಪ್ರಕಾರವೊಂದು ನಷ್ಟವಾದಂತಾಯಿತು. 

ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಆರ್ಥಿಕ ಸ್ಥಾನಮಾನ ಏನೇ ಇರಲಿ ಆರೋಗ್ಯ ಸೌಲಭ್ಯ ಎಲ್ಲರಿಗೂ ಸಿಗಬಹುದು ಎಂಬ ಆಶಾವಾದ ಪ್ರಚಲಿತವಾಗಿತ್ತು. ಭಾರತದ ರಾಷ್ಟ್ರೀಯ ಚಳವಳಿಯ ಒತ್ತಡದಡಿಯಲ್ಲಿ ಬ್ರಿಟಿಷ್ ಸರ್ಕಾರವು ಒಂದು ಜನಪರ ಆರೋಗ್ಯ ಸೇವೆಯ ಮಾದರಿ ಯನ್ನು ಸಿದ್ಧಪಡಿಸಲು ಭೋರೆ ಸಮಿತಿಯನ್ನು ನೇಮಿಸಿತು. ಸಮಿತಿಯು ಭಾರತಕ್ಕೆ ಅಗತ್ಯವಾದ ಆರೋಗ್ಯ ಸೇವಾ ಮಾದರಿಯನ್ನು ರೂಪಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿತು. ಸಂಪನ್ಮೂಲಗಳ ಕೊರತೆ, ಆಧು ನಿಕ ವೈದ್ಯ ಪದ್ಧತಿಯ ವೈದ್ಯರ ಅಭಾವ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ರಿಲ್ಲದೇ ಇರುವ ಪರಿಸ್ಥಿತಿ, ಭಾರತೀಯ ವೈದ್ಯ ಪದ್ಧತಿಯ ಚಿಕಿತ್ಸಕರಿ ಗೆ ಜನತೆಯಲ್ಲಿದ್ದ ಅಂಗೀಕಾರ ಇವೆಲ್ಲವನ್ನೂ ಸಮಿತಿ ಗಮನಿಸಿತು. ಸಮಿತಿಯು ಆಳವಾದ ತರಬೇತಿ ಇರುವ ವೈದ್ಯರನ್ನು ಮಾತ್ರ ಮಾನ್ಯ ಮಾಡಬೇಕು, ವೈದ್ಯಕೀಯ ಕಾಲೇಜುಗಳಲ್ಲಿ ಖಾಸಗಿ ವೈದ್ಯರು ಚಿಕಿತ್ಸೆ ನೀಡಬಹುದು ಮತ್ತು ಪಾಠ ಮಾಡಬಹುದು, ಇದರಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಚಿಕಿತ್ಸಕರಿಗೆ ಸ್ಥಾನವಿಲ್ಲ ಎಂದು ತೀರ್ಮಾನಿಸಿತು. ಸಮಿತಿಯ ಸದಸ್ಯರಲ್ಲಿ ಕೆಲವರಿಗೆ ಭಿನ್ನಾಭಿಪ್ರಾಯವಿದ್ದು ಅದನ್ನು ದಾಖಲಿಸಿದರೂ ಉಪಯೋಗವಾಗಲಿಲ್ಲ. ಭಾರತದ ರಾಷ್ಟ್ರೀಯ ಕಾಂಗ್ರೆಸ್‍ನ ಆರೋಗ್ಯ ಉಪಸಮಿತಿಯು ಆರಂಭದಲ್ಲಿ ಪ್ರತಿ ಹಳ್ಳಿಯಿಂದ ಒಬ್ಬ ತರುಣನಿಗೆ ಆರೋಗ್ಯ ಕಾರ್ಯಕರ್ತನಾಗಿ ತರಬೇತಿ ನೀಡಬೇಕೆಂದು, ನಂತರ ಅವರಲ್ಲಿನ ಪ್ರತಿಭಾವಂತರನ್ನು ವೈದ್ಯಕೀಯ ಪದವಿಗೆ ಸೇರಿಸಿ ಕೊಳ್ಳಬೇಕೆಂದು ನೀಡಿದ ಸಲಹೆಯೂ ವ್ಯರ್ಥವಾಯಿತು. ಹೀಗಾಗಿ ಮೇಲಿನಿಂದ ಅವತರಿಸಿದ ಜ್ಞಾನ ಮತ್ತು ಸೇವೆಯ ರಚನೆಯೊಂದು ಇದೇ “ಅತ್ಯುತ್ತಮ ವ್ಯವಸ್ಥೆ” ಎಂದು ಭಾರತೀಯರ ಮೇಲೆ ಹೇರಲ್ಪಟ್ಟಿತು.

ಮೊದಲ ಹತ್ತಿಪ್ಪತ್ತು ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಾದರೂ ಸಹ ಕಾಲಕ್ರಮೇಣ ಖಾಸಗಿ ಕಾಲೇಜುಗಳು ಹೆಚ್ಚಾದವೇ ಹೊರತು ಸರ್ಕಾರಿ ಕಾಲೇಜುಗಳು ಅವಶ್ಯಕ ಪ್ರಮಾಣದಲ್ಲಿ ಶುರುವಾಗಲೇ ಇಲ್ಲ. 1950ರಲ್ಲಿ 27 ಸರ್ಕಾರಿ ಕಾಲೇಜುಗಳಿದ್ದರೆ ಖಾಸಗಿ ಕಾಲೇಜಿದ್ದದ್ದು ಒಂದೇ ಒಂದು.

ಭೋರೆ ಸಮಿತಿಯು ತಾನೊಂದು ‘ಆದರ್ಶ ಮಾದರಿಯ ನೀಲಿನಕ್ಷೆ’ಯನ್ನು ಸಿದ್ಧಪಡಿಸುತ್ತಿರುವುದಾಗಿಯೂ, ಹಣಕಾಸಿನ ಕೊರತೆಯ ಸಮಸ್ಯೆಯ ಬಗ್ಗೆ ತಲೆಕಡಿಸಿಕೊಳ್ಳದೆ ಆ ಪ್ರಶ್ನೆಯನ್ನು ಭವಿಷ್ಯದ ಸರ್ಕಾರಗಳಿಗೆ ಬಿಡುವುದಾಗಿಯೂ ಹೇಳಿಕೊಂಡಿತ್ತು. ಆದ ರೆ ಭೋರೆ ಸಮಿತಿ ಶಿಫಾóರಸ್ಸು ಮಾಡಿದಂತೆ ಬಜೆಟ್‍ನ ಶೇಕಡಾ 15 ಭಾಗವನ್ನು ಸರ್ಕಾರಗಳು ಎಂದೂ ಖಚಿತ ಪಡಿಸಲಿಲ್ಲ. ಅಷ್ಟೇಕೆ ಶೇಕಡಾ 5ನ್ನೂ ದಾಟಲಿಲ್ಲ. ಭೋರೆ ಸಮಿತಿಯು ಬಹುದೊಡ್ಡ ಸಂಖ್ಯೆಯಲ್ಲಿ ವೈದ್ಯಕೀಯ ಪದವೀಧರರನ್ನು ಸಿದ್ಧಗೊಳಿಸಲು ಒತ್ತು ನೀಡಿತ್ತು. ಮೊದಲ ಹತ್ತಿಪ್ಪತ್ತು ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಾದರೂ ಸಹ ಕಾಲಕ್ರಮೇಣ ಖಾಸಗಿ ಕಾಲೇಜುಗಳು ಹೆಚ್ಚಾದವೇ ಹೊರತು ಸರ್ಕಾರಿ ಕಾಲೇಜುಗಳು ಅವಶ್ಯಕ ಪ್ರಮಾಣದಲ್ಲಿ ಶುರುವಾಗಲೇ ಇಲ್ಲ. 1950ರಲ್ಲಿ 27 ಸರ್ಕಾರಿ ಕಾಲೇಜುಗಳಿದ್ದರೆ ಖಾಸಗಿ ಕಾಲೇಜಿದ್ದದ್ದು ಒಂದೇ ಒಂದು. 1970 ರಲ್ಲಿ 89 ಸರ್ಕಾರಿ ಕಾಲೇಜುಗಳೂ, 10 ಖಾಸಗಿ ಕಾಲೇಜುಗಳೂ ಇದ್ದವು. ಆದರೆ 1980ರ ದಶಕದಿಂದ ಚಿತ್ರ ಸಂಪೂರ್ಣ ಬದಲಾಗುತ್ತಾ ಹೋಯಿತು. ಕಡೆಗೆ 2014ರಲ್ಲಿ 176 ಸರ್ಕಾರಿ ಕಾಲೇಜುಗಳಿದ್ದರೆ, ಖಾಸಗಿ  ಕ್ಷೇತ್ರದಲ್ಲಿ 209 ಕಾಲೇಜುಗಳಾದವು!.

ಮೊದಲ ಮೂರು ಪಂಚವಾರ್ಷಿಕ ಯೋಜನೆಗಳಲ್ಲೂ ಸಾಮಾನ್ಯ ಆರೋಗ್ಯ ಸೌಲಭ್ಯಗಳಿಗೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಿಕ್ಕ ಹಣ ಪ್ರತ್ಯೇಕವಾಗಿ ಆರೋಗ್ಯ ಬಜೆಟ್‍ನ ಕಾಲು, ಕಾಲು ಭಾಗಗಳಷ್ಟೇ. ಇದರಿಂದ ವೈದ್ಯರ ಸಂಖ್ಯೆಯನ್ನು ವೇಗವಾಗಿ ಏರಿಸಿ, ಅವರನ್ನು ಸರ್ಕಾರಿ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದಲ್ಲದೆ ಕಾಲೇಜುಗಳಿಂದ ಹೊರಬಂದ ವೈದ್ಯರನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ಸರಿಯಾದ ಯೋಜನೆಯೇ ಇರಲಿಲ್ಲ. ರಾಜ್ಯ ಸರ್ಕಾರಗಳು ಸಹ ಭೋರೆ ಸಮಿತಿಯು ಹೇಳಿದಮಟ್ಟಿಗೂ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನಿಗದಿ ಮಡಲಿಲ್ಲ. ಈ ವೈದ್ಯರೆಲ್ಲಾ ಖಾಸಗಿ ಪ್ರಾಕ್ಟೀಸ್‍ಗೆ ಹೊರಳಿಕೊಂಡರು ಮತ್ತು ಖಾಸಗಿ ವಲಯ ವಿಸ್ತಾರವಾಗುತ್ತಾ ಹೋಯಿತು.

ಭೋರೆ ಸಮಿತಿಯಲ್ಲಿದ್ದ ಅನೇಕ ಸದಸ್ಯರುಗಳೇ ಖಾಸಗಿ ಪ್ರಾಕ್ಟೀಸ್‍ನಲ್ಲಿ ತೊಡಗಿಕೊಂಡಿದ್ದವರು. ಆದ್ದರಿಂದಲೇ ಸಮಿತಿಯು ಖಾಸಗಿ ವಲಯದ ಬಗ್ಗೆ ಚಕಾರ ಎತ್ತಲಿಲ್ಲ. ವೈದ್ಯ ಪದವೀಧರರು ಹೆಚ್ಚಾದಾಗ ಏನು ಮಾಡಬೇಕೆಂದೂ ಅದು ಹೇಳಲಿಲ್ಲ. ಸಾರ್ವಜನಿಕ ವಲಯ ವಿಸ್ತಾರವಾದರೆ ಖಾಸಗಿ ವಲಯ ಕುಗ್ಗುತ್ತದೆ ಎಂಬ ಸದಾಶಯವನ್ನು ವ್ಯಕ್ತಪಡಿಸಿ ಸುಮ್ಮನಾಯಿತು! ಆದರೆ ಖಾಸಗಿ ವೈದ್ಯರ ಸಂಖ್ಯೆ ಹೆಚ್ಚಾದಂತೆ ಅವರ ಲಾಬಿ ಪ್ರಬಲವಾಯಿತು. ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಘಟನೆಯನ್ನು ತಮ್ಮ ಕೈವಶ ಮಾಡಿಕೊಂಡರು. ಅಷ್ಟೇ ಅಲ್ಲ ವೈದ್ಯ ವೃತ್ತಿಯ ಸ್ವಯಂ ನಿಯಂತ್ರಣದ ಹೊಣೆ ಹೊತ್ತ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮೇಲೂ ತಮ್ಮ ಪ್ರಭಾವವನ್ನು ಬೀರಿದರು. ಈ ಸಂಸ್ಥೆಯನ್ನು ಹೊರತು ಪಡಿಸಿ ಆರೋಗ್ಯ ಸೇವೆಯ ನಿಯಂತ್ರಣಕ್ಕೆ ಇನ್ನಾವ ವೇದಿಕೆಯೂ ತಲೆ ಎತ್ತದಂತೆ ನೋಡಿಕೊಂಡರು. ಇದರಿಂದಾಗಿ ವೃತ್ತಿನಿರತರ ನೀತಿ ಸಂಹಿತೆಯ ಉಲ್ಲಂಘನೆಯು ಯಾವ ಲಂಗು ಲಗಾಮೂ ಇಲ್ಲದಂತೆ ಹೆಚ್ಚಾಗುವ ಪರಿಸ್ಥಿತಿ ಸೃಷ್ಟಿಯಾಯಿತು. 

ಮರೀಚಿಕೆ

ಜನತೆಗೆ ಆರೋಗ್ಯ ಸೌಲಭ್ಯವನ್ನು ಒದಗಿಸಬೇಕೆಂಬ ಮಾದರಿ ವಾಸ್ತವದಲ್ಲಿ ಕಾರ್ಯಸಾಧುವಾಗಲೇ ಇಲ್ಲ ಎಂಬುದು ಬಹುಚರ್ಚಿತ ವಿಷಯ. ಅನೇಕ ತೃತೀಯ ಜಗತ್ತಿನ ರಾಷ್ಟ್ರಗಳು ಸ್ವಾತಂತ್ರ್ಯ ಗಳಿಸಿ ಮೂರು ದಶಕಗಳಾದರೂ ತಮ್ಮ ಜನತೆಗೆ ಸೂಕ್ತ ಆರೋಗ್ಯ ಸೌಲಭ್ಯವನ್ನು ಒದಗಿಸಲು ವಿಫಲರಾದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯೂನಿಸೆಫ್ ಸಂಸ್ಥೆಗಳು ಈ ಸವಾಲನ್ನು ಎದುರಿಸಬೇಕೆಂದು 1977ರಲ್ಲಿ ಅಲ್ಮಾ ಆಟಾದಲ್ಲಿ ಸಮ್ಮೇಳನವನ್ನು ಸಂಘಟಿಸಿದವು. ಅಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳ ಮೂಲಕ ‘ಸರ್ವರಿಗೂ ಆರೋಗ್ಯ’ ಎಂಬುದನ್ನು ಖಾತ್ರಿಪಡಿಸಬೇಕೆಂದು ಘೋಷಿಸಲಾಯಿತು. ವೈದ್ಯರು ಮತ್ತು ಆಸ್ಪತ್ರೆ ಕೇಂದ್ರಿತ ಆರೋಗ್ಯ ಸೇವೆಗಳ ಮೂಲಕ ಎಲ್ಲರಿಗೂ ಆರೋಗ್ಯವನ್ನು ಖಾತ್ರಿಪಡಿಸುವುದು ಕೈಗೆಟುಕದ ಸಂಗತಿ, ಆದ್ದರಿಂದ ಪ್ರಾಥಮಿಕ ಆರೋಗ್ಯ ಸೇವೆಯನ್ನು ಎಲ್ಲರ ಮನೆಬಾಗಿಲಿಗೆ ತಲುಪಿಸಲು ಯತ್ನಿಸಬೇಕು ಎಂದು ಹೇಳಲಾಯಿತು. ಇದಕ್ಕಾಗಿ ದಾದಿಯರು, ವೈದ್ಯೇತರ ಸಿಬ್ಬಂದಿ, ಸೂಕ್ತ ತರಬೇತಿಯೊಂದಿಗೆ ಸಾಂಪ್ರದಾಯಿಕ ಚಿಕಿತ್ಸಕರು ಎಲ್ಲರನ್ನೂ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಇದಲ್ಲದೆ ಈ ಗುರಿಗೆ ಪೂರಕವಾಗಿ ಸಮರ್ಪಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ನೈರ್ಮಲ್ಯ ಹಾಗೂ ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು ಎಂದು ಹೇಳಲಾಯಿತು. ಆದರೆ ಇಲ್ಲಿಯವರೆಗೂ ಈ ತೀರ್ಮಾನಗಳಿಂದಾಗಿ ವೈದ್ಯ-ಆಸ್ಪತ್ರೆ ಕೇಂದ್ರಿತ ಆರೋಗ್ಯ ವ್ಯವಸ್ಥೆ ಬದಲಾಗಿಲ್ಲ ಮತ್ತು ಜೈವಿಕವೈದ್ಯಕೀಯ ಉದ್ಯಮ ಕೂಟಕ್ಕೆ ಯಾವ ಹಿನ್ನಡೆಯೂ ಆಗಿಲ್ಲ!

ಕೆಳದರ್ಜೆಯ ಸೌಲಭ್ಯಗಳು

ಬಜೆಟ್‍ನಲ್ಲಿ ವಿನಿಯೋಗಿಸಿದ ಅತಿ ಕಡಿಮೆ ಹಣದಿಂದಾಗಿ ಸಾರ್ವಜನಿಕ ಸಂಸ್ಥೆಗಳು ಸೊರಗಿದವು. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ನೀಡಿದ ಹಣ ಶೇಕಡಾ3.4. ಅದರಲ್ಲಿ ಕಾಲು ಭಾಗ ಮಾತ್ರ ಆಸ್ಪತ್ರೆ-ಚಿಕಿತ್ಸಾಲಯಗಳಿಗೆ ಹರಿದು ಬಂದದ್ದು. ಇದರಿಂದಾಗಿ ಎರಡನೆಯ ಹಂತದ(ಸೆಕೆಂಡರಿ) ಮತ್ತು ಮೇಲಿನ ಹಂತದ(ಟರ್ಶಿಯರಿ) ಆಸ್ಪತ್ರೆಗಳಲ್ಲಿ ಔಷಧಗಳು ಮತ್ತು ತಪಾಸಣಾ ಸಲಕರಣೆಗಳ ಕೊರತೆ ವಿಪರೀತವಾಗಿತ್ತು. ಕಟ್ಟಡದಂಥ ಮೂಲ ಸೌಕರ್ಯಗಳು ಕೂಡ ಅಸಮರ್ಪಕ. ನಿಗದಿಯಾದ ವೈದ್ಯರ ಸಂಖ್ಯೆಯೇ ಕಡಿಮೆ. ವೈದ್ಯ, ದಾದಿ ಅನುಪಾತವೂ ಕಡಿಮೆ. ಸರ್ಕಾರಿ ಸಂಸ್ಥೆಗಳು ಹೀಗೆ ನಡೆದುಕೊಂಡು ಹೋದವು.

1990ರ ದಶಕದಲ್ಲಿ ಜಾರಿಯಾದ ಆರ್ಥಿಕ ಸುಧಾರಣೆಗಳ ನಂತರ ಇರುವ ಹಣವೂ ಹೆಚ್ಚಾಗಿ ಸಾಮಾನ್ಯ ಆರೋಗ್ಯ ಕಾರ್ಯಕ್ರಮಗಳಿಂದ ತಾಂತ್ರಿಕತೆ ಕೇಂದ್ರಿತ ಕಾರ್ಯಕ್ರಮಗಳತ್ತ ಹೊರಳಿಕೊಂಡಿತು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಕಾರ್ಯಕ್ರಮದಿಂದ ಸ್ವಲ್ಪ ಮೂಲ ಸೌಕರ್ಯ ಸುಧಾರಿಸಿದರೂ, ಅದಕ್ಕಾಗಿ ವಾಗ್ದಾನ ಮಾಡಿದ್ದ ಪೂರಾ ಹಣ ಬಿಡುಗಡೆಯಾಗದೆ ಅದೂ ಸೊರಗಿಹೊಯಿತು.

ಇಂತಹ ಪರಿಸ್ಥಿತಿಯಿಂದಾಗಿ ಉತ್ತರದಾಯಿತ್ವ ಕಡಿಮೆ ಆಯಿತು. ನೀಡ ಬೇಕಾದ ಸೂಕ್ತ ಚಿಕಿತ್ಸೆಯಲ್ಲಿ ರಾಜಿಮಾಡಿಕೊಳ್ಳುವುದು ಇದೆಲ್ಲ ಮಾಮೂಲಾಯಿತು. ಇದನ್ನು ಪ್ರಶ್ನಿಸಬಹುದಾದಂಥ ಸಮಾಜದ ಬಲಾಢ್ಯ ಜನ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಕ್ಷೇತ್ರಕ್ಕೆ ಮೊರೆಹೊಕ್ಕಿದ್ದರಿಂದ ಸಾರ್ವಜನಿಕ ವಲಯದ ಲೋಪದೋಷಗಳನ್ನು ಪ್ರಶ್ನಿಸಬಲ್ಲವರೇ ಇಲ್ಲ ಎಂಬಂತಾಯಿತು. ಅಷ್ಟೇಕೆ ಸೌಲಭ್ಯಕ್ಕಾಗಿ ಆಗ್ರಹಿಸಬಲ್ಲ ಸಂಘಟಿತ ಜನ ಇರುವ ಇಎಸ್‍ಐ ಮತ್ತು ಸಿಜಿಎಚ್‍ಎಸ್ ನಂಥ ಸಂಸ್ಥೆಗಳೂ ಖಾಸಗಿ ಸೇವೆಗಳನ್ನು ಪಡೆದುಕೊಳ್ಳಲಾರಂಭಿಸಿವೆ. ಬಡವರಿಗೆ ಮತ್ತು ಶ್ರೀಮಂತರಿಗೆ ಬೇರೆ ಬೇರೆ ಸೌಲಭ್ಯಗಳು ಸಿಗುತ್ತವೆ ಎನ್ನುವಂಥ ಸಾಮಾಜಿಕ ಪರಿಸ್ಥಿತಿಯೇ ಖಂಡನಾರ್ಹ. ಅದೇನೇ ಇರಲಿ ಸಾರ್ವಜನಿಕ ವಲಯದಲ್ಲಿನ ದೋಷಗಳನ್ನು ನಿವಾರಿಸುವಲ್ಲಿ, ಅಲ್ಲಿ ಸೇವೆ ಪಡೆಯುವವರು ತೀರಾ ದುರ್ಬಲ ಜನ ಎಂದಾದಾಗ ಭ್ರಷ್ಟತೆಯನ್ನು ನಿಗ್ರಹಿಸುವುದು ಕಷ್ಟವಾಗುತ್ತದೆ.

ಸಂಪನ್ಮೂಲಗಳಿಲ್ಲದ ಸಂಸ್ಥೆ ಮತ್ತು ಕಾಲೇಜುಗಳಲ್ಲಿ ಕಲಿತ ವೈದ್ಯರು ಗುಣಮಟ್ಟದಲ್ಲಿ ರಾಜಿಯಾಗುವುದನ್ನು ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ. ಆರೋಗ್ಯ ಸೇವೆಯ ವೈಶಿಷ್ಟ್ಯ ಎಂದರೆ ಚಿಕಿತ್ಸೆಯ ಆಯ್ಕೆಯಲ್ಲಿ ವೈದ್ಯನಿಗೆ ದೊಡ್ಡ ಪಾತ್ರವಿದೆ. ಯಾವುದು ವೈಜ್ಞಾನಿಕವಾಗಿ ಸರಿಯೋ ಅಂಥ ಆಯ್ಕೆಯನ್ನು ಬಿಡುವುದು, ಇನ್ನೊಂದನ್ನು ಆಯ್ಕೆ ಮಾಡಿಕೊಳ್ಲುವುದು ಇವೆಲ್ಲಾ ಭ್ರಷ್ಟತೆ ಆರಂಭವಾಗಲು ಎಡೆಮಾಡಿಕೊಡುತ್ತವೆ.

ವೈದ್ಯರಿಂದ ಮಿತಿಮೀರಿದ ನಿರೀಕ್ಷೆ

ಆಸ್ಪತ್ರೆಗಳಲ್ಲಿ ವೈದ್ಯರು ಅವಧಿ ಮೀರಿ ದುಡಿಯಬೇಕಾಗುತ್ತದೆ. ಎಷ್ಟೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರೇ ವೈದ್ಯರಿರುತ್ತಾರೆ. ರೋಗಿಗಳ ಹೊರೆ, ಅಗತ್ಯ ಪರಿಕರಗಳ ಕೊರತೆ ಎಲ್ಲಾ ಸೇರಿ ನೈತಿಕ ವಾಗಿ ಶುದ್ಧವಾದ ಚಿಕಿತ್ಸಾ ವಿಧಾನಗಳಲ್ಲಿ ರಾಜಿಯಾಗುವ ಪ್ರವೃತ್ತಿ ಶುರುವಾಗುತ್ತದೆ. ಅದೇನೇ ಇರಲಿ ವೈದ್ಯರ ಕುರಿತಾದ ನಿರೀಕ್ಷೆಗಳು ಮಾತ್ರ ವಿಪರೀತವಾಗಿರುತ್ತವೆ.

ವೈದ್ಯ ವಿದ್ಯಾರ್ಥಿಯು ಕಲಿಯುವಾಗ ಅಮೆರಿಕಾ ಯುರೋಪುಗಳ ಗುಣಮಟ್ಟದ ಪಠ್ಯಕ್ರಮವನ್ನೇ ಓದಿರುತ್ತಾನೆ. ಆದರೆ ಕೆಲಸಮಾಡುವಾಗ ಅವನಿಗೆ ಮೂಲಭೂತ ಸೌಕರ್ಯವೂ ಸಿಗುವುದಿಲ್ಲ. ಇದರಿಂದ ಆತ್ಮವಿಶ್ವಾಸದ ಕೊರತೆ ಅವನನ್ನು ಕಾಡುತ್ತದೆ. ಅವರು ತೀರಾ ಮುಂದುವರೆದ ಡಯಾಗ್ನಾಸ್ಟಿಕ್ ಉಪಕರಣಗಳ ಮೇಲೆ ಮತ್ತು ಔಷಧಗಳ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಈ ಸೌಲಭ್ಯಗಳಿರುವುದಿಲ್ಲ. ಸಾಲದ್ದಕ್ಕೆ ಆಡಳಿತದ ಬಗ್ಗೆ ಏನೂ ತಿಳುವಳಿಕೆಯಿಲ್ಲದ ವೈದ್ಯರು ಕೆಲಸಕ್ಕೆ ಸೇರಿದಾಗ ಅಂತಹ ಜವಾಬ್ದಾರಿಗಳನ್ನು ಸಹ ನಿರ್ವಹಿಸಬೇಕಾದದ್ದು ಕಡ್ಡಾಯವಾಗುತ್ತದೆ.

ಸಾಮಾಜಿಕವಾಗಿ ಬಹುತೇಕ ವೈದ್ಯರು-ವೃತ್ತಿಪರರು ಸಮಾಜದ ಒಂದು ಶ್ರೇಣಿಗೆ ಸೇರಿದ್ದರೆ, ರೋಗಿಗಳು ಇನ್ನೊಂದು ಶ್ರೇಣಿಗೆ ಸೇರಿರುತ್ತಾರೆ. ಎಲ್ಲ ವರ್ಗಗಳಿಗೂ ಸೇರಿದ ರೋಗಿಗಳ ಬಗ್ಗೆ ಸಂವೇದನೆಯಿಂದ ವರ್ತಿಸುವಂತೆ ಮತ್ತು ಅವರ ಕುರಿತಾದ ನಿರ್ಧಾರಗಳನ್ನು ವೃತ್ತಿ ನೈತಿಕ ತೆಗೆ ಅನುಗುಣವಾಗಿ ತೆಗೆದುಕೊಳ್ಳುವಂತೆ ಕಲಿಸಬಲ್ಲ ಶಿಕ್ಷಣ ಲಭ್ಯವಿಲ್ಲ.

ನಮಗೆ ವೈದ್ಯಕೀಯ ತಂತ್ರಜ್ಞಾನದ ಮೇಲೆ ಅತಿಯಾದ ಅವಲಂಬನೆ ಇದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉದ್ದಿಮೆಗಳು ತಮ್ಮ ಸರಕಿನ ಬಗ್ಗೆ ಉತ್ಪ್ರೇಕ್ಷಿತ ಚಿತ್ರಣವನ್ನು ಸೃಷ್ಟಿಸಿವೆ.

ಇದಲ್ಲದೆ ರಾಜಕೀಯ ಮತ್ತು ಅಧಿಕಾರಶಾಹಿ ಹಸ್ತಕ್ಷೇಪದಿಂದಾಗಿ ವೈದ್ಯರಿಗೆ ತಮ್ಮ ವೃತ್ತಿ ಕೌಶಲ್ಯಕ್ಕೆ, ಜ್ಞಾನಕ್ಕೆ ಸೂಕ್ತ ಮೌಲ್ಯ ಸಿಗುತ್ತಿಲ್ಲ ಎಂಬ ಕೊರಗು ಉಂಟಾಗುತ್ತದೆ. ತಾವು ಉತ್ತರದಾಯಿತ್ವವನ್ನು ಹೊಂದಿರಬೇಕಾದದ್ದು ನಾಯಕ ಶಿಖಾಮಣಿಗಳಿಗೆ ಹೊರತು ರೋಗಿಗಳಿಗಲ್ಲ ಎಂದು ವೈದ್ಯರು ಭಾವಿಸುತ್ತಿದ್ದಾರೆ. ನೇಮಕಾತಿ, ಬಡ್ತಿ, ವರ್ಗಾವಣೆ ಎಲ್ಲ ಕಡೆ ಲಂಚಗುಳಿತನ ತಾಂಡವವಾಡುತ್ತಿದೆ.

ಇದಲ್ಲದೆ ವೈದ್ಯರಿಗೆ ತಾವು ಮೇಲಿನ ಅಂತಸ್ತಿಗೆ ಏರಬೇಕೆಂಬ ಆಕಾಂಕ್ಷೆ ದಟ್ಟವಾಗುತ್ತಿದೆ. ಬಹುತೇಕ ಮಧ್ಯಮವರ್ಗದಿಂದ ಬಂದ ಈ ಜನ ಹೊಸ ತಾಂತ್ರಿಕ ಸಲಕರಣೆಗಳನ್ನು ಉಪಯೋಗಿಸಬೇಕೆಂಬ ಆಸೆಯಿಂದಲೂ ಹೊರದೇಶಗಳಿಗೆ ಹೋಗಬೇಕು ಅಥವಾ ಖಾಸಗಿ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಬೇಕು ಎಂದು ಹಂಬಲಿಸುತ್ತಾರೆ.

ತಂತ್ರಜ್ಞಾನವನ್ನು ವಿರೋಧಿಸದೆ, ಅಗತ್ಯವಿದ್ದೆಡೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಬೇಕು ಎಂಬ ನಿಲುವಿಗೆ ಬದ್ಧರಾದರೂ ಸಹ ನಮಗೆ ವೈದ್ಯಕೀಯ ತಂತ್ರಜ್ಞಾನದ ಮೇಲೆ ಅತಿಯಾದ ಅವಲಂಬನೆ ಇದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉದ್ದಿಮೆಗಳು ತಮ್ಮ ಸರಕಿನ ಬಗ್ಗೆ ಉತ್ಪ್ರೇಕ್ಷಿತ ಚಿತ್ರಣವನ್ನು ಸೃಷ್ಟಿಸಿವೆ. ಇದು ಆರೋಗ್ಯ ಕ್ಷೇತ್ರದ ಚಹರೆಯನ್ನೇ ಬದಲಿಸಿದೆ. ಭ್ರಷ್ಟರಲ್ಲದ ವೈದ್ಯರೂ ಸಹ ದುಬಾರಿ ಚಿಕಿತ್ಸೆ ತಪ್ಪಿಸಲಾದರೂ ಒಂದಿಷ್ಟು ಪರೀಕ್ಷೆಗಳನ್ನು ಮಾಡಿಸೋಣ ಎಂದು ಪ್ರಯೋಗಾಲಯಗಳ ಬಲೆಗೆ ಬೀಳುತ್ತಿದ್ದಾರೆ. ಇನ್ನು ಅನೈತಿಕ ಮಾರ್ಗಗಳಿಗೆ ತೆರೆದುಕೊಂಡವರಂತೂ ಭ್ರಷ್ಟತೆಯ ದೊಡ್ಡ ಜಾಲವನ್ನೇ ಪ್ರಯೋಗಾಲಯಗಳ ಲಾಬಿಯೊಂದಿಗೆ ಸೇರಿ ಸೃಷ್ಟಿಸಿಕೊಂಡಿದ್ದಾರೆ. ಇದೆಲ್ಲಾ ಆರೋಗ್ಯ ಸೇವೆಗಳ ಭ್ರಷ್ಟತೆಗೆ ಪೂರಕವಾದ ಅಂಶಗಳು.

ಖಾಸಗಿ ಕ್ಷೇತ್ರದ ಪ್ರಭಾವ – ವೈದ್ಯಕೀಯ ಮತ್ತು ಉದ್ದಿಮೆಯ ಕೂಟ

ನಮ್ಮ ದೇಶದ ಅಭಿವೃದ್ಧಿ ಮಾದರಿಯು ಸ್ಥಳೀಯವಾಗಿ ಪ್ರಸ್ತುತವಾಗುವಂಥ ಔಷಧ ತಯಾರಿಕೆ ಹಾಗೂ ವೈದ್ಯಕೀಯ ಸಲಕರಣೆಗಳ ತಯಾರಿಕೆಯ ಕಾರ್ಖಾನೆಗಳನ್ನು ಬೆಳೆಸಲಿಲ್ಲ. ಹಿಂದೆ ಸ್ವಲ್ಪ ಮಟ್ಟಿಗೆ ಕೆಲಸ ಮಾಡುತ್ತಿದ್ದ ಇಂಡಿಯನ್ ಡ್ರಗ್ಸ್ ಅಂಡ್  ಫಾರ್ಮಸಿಟಿಕಲ್ಸ್ ಲಿಮಿಟೆಡ್, ಹಿಂದೂಸ್ತಾನ್ ಆಂಟಿಬಯಾಟಿಕ್ಸ್ ಮತ್ತು ಹ್ಯಾಫಕೈನ್ ಇನ್ಸ್ಟಿಟ್ಯೂಟ್‍ಗಳು ಈಗ ಪ್ರಭಾವಶಾಲಿಯಾಗಿಲ್ಲ. ಔಷಧ ಮತ್ತು ವೈದ್ಯಕೀಯ ಸಲಕರಣೆ ಕೈಗಾರಿಕೆಗಳ ಮೇಲೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಯಾವ ನಿಯಂತ್ರಣವೂ ಇಲ್ಲ, ಏಕೆಂದರೆ ಅವು ರಾಸಾಯನಿಕ ಹಾಗೂ ಕೈಗಾರಿಕಾ ಇಲಾಖೆಗಳ ಕೆಳಕ್ಕೆ ತಳ್ಳಲ್ಪಟ್ಟಿವೆ. 1970ರ ಪೇಟೆಂಟ್ಸ್ ಕಾಯಿದೆಯಿಂದಾಗಿ ನಮ್ಮ ದೇಶದಲ್ಲಿ ಔಷಧಿಗಳನ್ನು ಅಗ್ಗವಾಗಿ ತಯಾರಿ ಸುವುದು ಸಾಧ್ಯ, ಆದರೆ ಲಾಭೋದ್ದೇಶ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಇತರ ಸಚಿವಾಲಯಗಳು ಒತ್ತು ಕೊಡುವುದರಿಂದ ಇದರ ಬಗ್ಗೆ ಗಮನವಿಲ್ಲ. ಹೆಚ್ಚಿನ ವ್ಯಾಪಾರ ಮತ್ತು ಲಾಭದ ಮೇಲೆ ಕಣ್ಣಿಟ್ಟಿರುವ ಸೇವಾ ಉದ್ಯಮದವರು ನೈತಿಕತೆಯ ಪ್ರಶ್ನೆಗಳನ್ನು ಗಾಳಿಗೆ ತೂರಿದ್ದಾರೆ. 

ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಉದ್ದಿಮೆ, ವಿಮಾ ಕಂಪನಿಗಳು ಮತ್ತು ಬೃಹತ್ ಆಸ್ಪತ್ರೆಗಳ ಜಾಲ ಇವು ಅಂತರರಾಷ್ಟ್ರೀಯ ಹಣಕಾಸು ಕೂಟಗಳ ಜೊತೆ ಕೈ ಸೇರಿಸಿವೆ. ಜಾಗತಿಕ ಮಾರುಕಟ್ಟೆ ಏಳು ಲಕ್ಷ ಕೋಟಿ ಅಮೆರಿಕನ್ ಡಾಲರ್ ಗಾತ್ರದ್ದು! ಭಾರತದಲ್ಲಿ ಇಂದಿಗೂ ಅನೇಕ ಜನ ತಮ್ಮ ಜೇಬಿನಿಂದಲೇ ನೇರವಾಗಿ ಆರೋಗ್ಯ ವೆಚ್ಚಕ್ಕೆ ಹಣ ಸಂದಾಯ ಮಾಡುತ್ತಾರೆ. ಇದರಲ್ಲಿ ದೊಡ್ಡ ಭಾಗ ಹೋಗುವುದು ಔಷಧ ಮತ್ತು ಪ್ರಯೋಗಾಲಯ ಪರೀಕ್ಷೆಗಳಿಗೆ. ಶೇಕಡಾ 25ರಷ್ಟು ಮಂದಿಗೆ ಯಾವ ಚಿಕಿತ್ಸೆಯೂ ಸಿಗುತ್ತಿಲ್ಲ!

ಇಂಥ ಸಂದರ್ಭದಲ್ಲಿ ಬಡವರ ನೆರವಿಗೆ ಅಗತ್ಯ ಎಂಬ ನೆಪದಲ್ಲಿ ವಿಮಾ ಕಂಪನಿಗಳು ತಲೆ ಎತ್ತುತ್ತಿವೆ. ಆದರೆ ಭಾರತದಲ್ಲಿಯೂ ಹೆಚ್ಚೆಂದರೆ ಕಾಲು ಭಾಗ ಜನ ಮಾತ್ರ ವಿಮೆಯ ಕೆಳಗೆ ಬರುತ್ತಾರೆ. ಇನ್ನೊಂದು ಕಡೆ ಸರ್ಕಾರಗಳು ಆರೋಗ್ಯ ವೆಚ್ಚಕ್ಕೆ ಸಬ್ಸಿಡಿ ನೀಡುತ್ತೇವೆ, ಅದಕ್ಕಾಗಿ ಸಾಮಾಜಿಕ ವಿಮೆ ಮಾಡುತ್ತೇವೆ ಎಂಬ ಹೆಸರಿನಲ್ಲಿ ಖಾಸಗಿಯವರ ಜೇಬನ್ನೇ ತುಂಬುತ್ತಿವೆ. ವಿಮಾ ಕಂಪನಿಗಳು ಸಹ ತಮ್ಮದೇ ಅನುಕೂಲಕ್ಕಾಗಿ ದೊಡ್ಡ ಆಸ್ಪತ್ರೆಗಳನ್ನು ಬೆಂಬಲಿಸುತ್ತಿವೆ. ಕೆಲವೇ ಆಸ್ಪತ್ರೆಗಳೊಂದಿಗೆ ವ್ಯವಹರಿಸುವುದು ಅವರಿಗೆ ಸುಲಭ. ಇಂಥ ಆಸ್ಪತ್ರೆಗಳಲ್ಲಿ ವೈದ್ಯರು ಮಧ್ಯವರ್ತಿಗಳಾಗಿ ಅತಿಯಾದ ಚಿಕಿತ್ಸೆ, ಅನಗತ್ಯ ಚಿಕಿತ್ಸೆಯಂಥ ಭ್ರಷ್ಟ ಅಭ್ಯಾಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ವ್ಯಾಪಾರೀಕರಣಕ್ಕೊಳಗಾದ ವೃತ್ತಿಪರರು

ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಮೂರನೇ ಎರಡು ಭಾಗ ವೈದ್ಯರು ನಗರಗಳಲ್ಲಿ ಖಾಸಗಿ ವೈದ್ಯರಾಗಿದ್ದರು, ಕೆಲವರು ಮಾತ್ರ ಖಾಸಗಿ ಆಸ್ಪತ್ರೆಯಲ್ಲಿದ್ದರೆ, ಉಳಿದವರು ಕುಟುಂಬ ವೈದ್ಯರಾಗಿದ್ದರು. ಖಾಸಗಿ ಆಸ್ಪತ್ರೆಯ ಒಡೆಯರೂ ವೈದ್ಯರೇ ಆಗಿದ್ದರು. ವೈದ್ಯರಿಗೂ ರೋಗಿಗಳಿಗೂ ನಡುವೆ ಆತ್ಮೀಯ ಸಂಬಂಧ ಸಾಧ್ಯವಿತ್ತು.

ಆದರೆ 1980ರ ದಶಕದ ನಂತರ ಚಿಕಿತ್ಸಾಲಯಗಳು ಕಡಿಮೆಯಾಗಿ ಖಾಸಗಿ ನರ್ಸಿಂಗ್‍ಹೋಂ ಮತ್ತು ಆಸ್ಪತ್ರೆ ಹೆಚ್ಚಾದವು. ಕ್ರಮೇಣ ವೈದ್ಯರಲ್ಲದೆ ಉದ್ದಿಮೆದಾರರೇ ಒಡೆಯರಾದ ಕಾರ್ಪೋರೇಟ್ ಆಸ್ಪತ್ರೆಗಳು ತಲೆ ಎತ್ತಿ ಇದರಲ್ಲಿ ವೈದ್ಯರು ಕೇವಲ ಕೆಲಸಗಾರರಾದರು. ಆಸ್ಪತ್ರೆಗಳು ಲಾಭದ ದೃಷ್ಟಿಯಿಂದ ವೈದ್ಯರ ಮೇಲೆ ನಿಬಂಧನೆಗಳನ್ನು ಹೇರಲಾರಂಭಿಸಿದವು. ತಜ್ಞರು ಆಸ್ಪತ್ರೆ ಸಲಹೆಗಾರರಾದರು. ರೋಗಿಗಳೊಂದಿಗಿನ ಸಂಬಂಧವು ಮಾರಾಟಗಾರ-ಗ್ರಾಹಕ ಸಂಬಂಧದಂತಾಯಿತು. ಕಾರ್ಪೋರೇಟ್ ಆಸ್ಪತ್ರೆಗಳು ರೋಗಿಗಳಿಗೆ ಅನುಕೂಲಕರವಾದ ಸೇವೆಯನ್ನು ನೀಡುವುದನ್ನು ತಮ್ಮ ಗುರಿಯಾಗಿಸಿಕೊಂಡಿಲ್ಲ. ಅವು ಐಷಾರಾಮಿ ಜೀವನಶೈಲಿಯನ್ನು ಒದಗಿಸುತ್ತವೆ. ಇಂಥ ಕಡೆ ಆ ಪಾಟಿ ವೆಚ್ಚವನ್ನೂ ಸರಿದೂಗಿಸಲು ಭ್ರಷ್ಟ ಆಚರಣೆಗಳು ಶುರುವಾಗುತ್ತವೆ.

ಇದಕ್ಕಾಗಿ ಆಸ್ಪತ್ರೆಗಳು ವೈದ್ಯರಿಗೆ ನೀನು ಇಷ್ಟು ಆಪರೇಷನ್ ಮಾಡಲೇಬೇಕು, ಇಷ್ಟು ಜನರನ್ನು ಐಸಿಯು(ತೀವ್ರ ನಿಗಾ ಘಟಕ)ಗೆ ತಳ್ಳಲೇಬೇಕು ಎಂದು ಗುರಿ(ಟಾರ್ಗೆಟ್) ನಿಗದಿ ಮಾಡಲಾರಂಭಿಸುತ್ತವೆ. ಇಲ್ಲದ ಕಾಯಿಲೆಗಳನ್ನು ಹುಡುಕುವುದು, ಸಲ್ಲದ ಪರೀಕ್ಷೆ-ತಪಾಸಣೆ ಮಾಡಿಸುವುದು ಶುರುವಾಗುತ್ತದೆ. ಜೊತೆಗೆ ಸಣ್ಣ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಕಮಿಶನ್ ಕೊಟ್ಟು ಅಲ್ಲಿಂದ ರೋಗಿಗಳನ್ನು ಹಿಡಿದುಕೊಂಡು ಬರುವ ಬೇಟೆಯೂ ಅಗತ್ಯವಾಗುತ್ತದೆ. ದೊಡ್ಡ ಆಸ್ಪತ್ರೆಗಳು ನೀಡುವ ದುಬಾರಿ ಸೌಲಭ್ಯಗಳನ್ನು ನೀಡಲಾಗದೆ ಸಣ್ಣ ಆಸ್ಪತ್ರೆಗಳು ಮುಚ್ಚಿಹೋಗಲಾರಂಭಿಸುತ್ತವೆ. ಸಣ್ಣ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ನೀತಿಬದ್ಧ ವೈದ್ಯರು ಈಗ ಮೇಲ್ಮಟ್ಟದ ಜೀವನಶೈಲಿಯನ್ನು ಬಯಸುತ್ತಾ ಭ್ರಷ್ಟತೆಯೊಂದಿಗೆ ರಾಜಿಯಾಗುತ್ತಾರೆ. ಅನಗತ್ಯ ಎಂಆರ್ ಐ ಮತ್ತು ಸಿಟಿ ಸ್ಕ್ಯಾನ್‍ಗಳು, ಅನವಶ್ಯಕ ಗರ್ಭಕೋಶ ತೆಗೆಯುವ ಶಸ್ತ್ರ ಚಿಕಿತ್ಸೆಗಳು, ಹೃದಯದ ಸ್ಟೆಂಟ್‍ಗಳು, ಬೈಪಾಸ್ ಸರ್ಜರಿಗಳು ಸಾಮಾನ್ಯವಾಗಿ ಬಿಡುತ್ತವೆ. ರೋಗದ ಬಗ್ಗೆ ಅನವಶ್ಯಕ ಭಯ ಉಂಟುಮಾಡುವುದು, ಅಗತ್ಯವಿಲ್ಲದಿದ್ದರೂ ರೋಗಿಯನ್ನು ಆಸ್ಪತ್ರೆಯಲ್ಲಿ ಉಳಿಸಿಕೊಳ್ಳುವುದು ಇಂಥ ಕೆಟ್ಟ ಪದ್ಧತಿಗಳು ತಲೆ ಎತ್ತುವುದು ಹೀಗೇ. ಆರೋಗ್ಯವಂತನಿಗೆ ಜೀವನಪರ್ಯಂತ ರೋಗಿ ಪಟ್ಟ ಕಟ್ಟುವುದು ಸಹ ಹೀಗೆಯೇ.

ಭ್ರಷ್ಟತೆಗೆ ವಿವಿಧ ಜಾಲಗಳಿರುತ್ತವೆ. ಸಣ್ಣ ಆಸ್ಪತ್ರೆ, ವೈದ್ಯ, ಪ್ರಯೋಗಾಲಯ, ರೇಡಿಯಾಲಜಿ ಕೇಂದ್ರಗಳು ಎಲ್ಲರಿಗೂ ಕಮೀಷನ್ ಕೊಡುವ ಪದ್ಧತಿ ಬರುತ್ತದೆ. ಇದರಿಂದ ಚಿಕಿತ್ಸೆ ಇನ್ನಷ್ಟು ದುಬಾರಿ. ಔಷಧಿ ಅಂಗಡಿಯವನು, ಉಪಕರಣಗಳ ಅಂಗಡಿಯವನು, ಹೋಲ್‍ಸೇಲ್ ವ್ಯಾಪಾರಿ, ಆಸ್ಪತ್ರೆಗಳು ಎಲ್ಲರೂ ಕಮೀಷನ್ ಬಲೆಗೆ ಸಿಕ್ಕಿ ಬೀಳುತ್ತಾರೆ.

ವೈದ್ಯಕೀಯ ಶಿಕ್ಷಣ

ವೈದ್ಯಕೀಯ ಶಿಕ್ಷಣವನ್ನು ಖಾಸಗಿಯವರಿಗೆ ಹೆಚ್ಚು ಹೆಚ್ಚು ಒಪ್ಪಿಸುವುದರಿಂದ ಸಮಸ್ಯೆ ವಿಪರೀತ ಬಿಗಡಾಯಿಸಿತು. ವೈದ್ಯರ ಕೊರತೆ ಇದೆ ಎಂದು ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಲಾಯಿತು. ಇದರಿಂದ ಮಧ್ಯಮ ವರ್ಗದವರಿಗೆ ನಮ್ಮ ಹುಡುಗರು ವೈದ್ಯರಾಗುತ್ತಾರೆ ಎಂಬ ಸಂತೋಷ. ವೈದ್ಯರ ಸಂಖ್ಯೆ ಹೆಚ್ಚಾಯಿತು ನಿಜ. ಆದರೆ ವೈದ್ಯರು ಹಳ್ಳಿಗಳಿಗೆ ಹೋಗಲಿಲ್ಲ. ನಗರಗಳಲ್ಲಿ ಕಿಕ್ಕಿರಿದರು. ಅಲ್ಲದೆ ವಿದೇಶಗಳಿಗೆ ಹೋಗುವ ವೈದ್ಯರ ಸಂಖ್ಯೆಯೂ ಹೆಚ್ಚಾಯಿತು. ಹಾಗೆ ಹೊರಗೆ ಹೋದವರು ಇಲ್ಲಿರುವ ವೈದ್ಯರಿಗೆ ಆದಾಯದ ಅಪೇಕ್ಷೆಗೆ, ತಂತ್ರಜ್ಞಾನದ ಉಪಯೋಗಕ್ಕೆ ಮಾದರಿಯಾಗಿ ಬಿಡುತ್ತಾರೆ ಬೇರೆ.

ಹೀಗೆ ಆರೋಗ್ಯ ಉದ್ದಿಮೆ ಹೆಚ್ಚು ಲಾಭವನ್ನು ಅಪೇಕ್ಷಿಸಿದಂತೆ, ರೋಗಿಗಳು ಅತ್ಯುತ್ತಮ ಫಲಿತಾಂಶವನ್ನು ನಿರೀಕ್ಷಿಸಲಾರಂಭಿಸುತ್ತಾರೆ ಮತ್ತು ಅವರು ಯಾವುದೇ ವೈಫಲ್ಯವನ್ನು ಒಪ್ಪಲು ಸಿದ್ಧರಿರುವುದಿಲ್ಲ. ವೈದ್ಯರ ದುರ್ನಡತೆಯಿಂದಾಗಿ ಅವರ ಬಗ್ಗೆ ಇದ್ದ ಸದಭಿಪ್ರಾಯ, ನಂಬಿಕೆ ನಾಶವಾಗುತ್ತಿದೆ. ಇದರಿಂದಾಗಿ ಅನೇಕ ಬಾರಿ ವೈದ್ಯನ ಮೇಲೆ, ಆರೋಗ್ಯ ಸೇವೆಗಳ ಕೆಲಸಗಾರರ ಮೇಲೆ ದಾಳಿಗಳು, ಹಲ್ಲೆಗಳು ಹೆಚ್ಚುತ್ತಿವೆ. ಚಿಕಿತ್ಸೆ ವಿಫಲವಾದರೆ ಅದಕ್ಕೆ ವೈದ್ಯರೇ ಕಾರಣ ಎನ್ನುವಂತಾಗಿದೆ. 

ದುರ್ಬಲವಾದ ನಿಯಂತ್ರಣ

ಒಟ್ಟಿನಲ್ಲಿ ವ್ಯಾಪಕವಾದ ಆರೋಗ್ಯ ಸೇವೆಯಲ್ಲಿನ ಭ್ರಷ್ಟತೆಗೆ ಕಾರಣಗಳನ್ನು ಹೀಗೆಂದು ಪಟ್ಟಿ ಮಾಡಬಹುದು: ಅತಾರ್ಕಿಕವಾದ ವೈದ್ಯಕೀಯ ಚಿಕಿತ್ಸೆ, ಕೈಗೆಟುಕದ ವೈದ್ಯರು-ತಜ್ಞರು, ವೃತ್ತಿ ಸಂಬಂಧಿ ಅರ್ಹತೆಯ ಬಗ್ಗೆ ಸರಿಯಾದ ನಿಯಂತ್ರಣ ಇಲ್ಲದಿರುವುದು, ವಿವಿಧ ಸೇವೆಗಳಿಗೆ ಹಾಗೂ ಸರಕುಗಳಿಗೆ ದರ ನಿಗದಿ ಮಾಡುವಲ್ಲಿ ಇರುವ ವೈಫಲ್ಯ, ವೈದ್ಯಕೀಯ-ಉದ್ದಿಮೆ-ವಿಮಾಕಂಪನಿಗಳ ಕೂಟದ ಪ್ರಭಾವ ಇತ್ಯಾದಿ. ಇಡಿಯ ಆರೋಗ್ಯ ಸೇವೆಯು ರೋಗಿಗಳಿಗೆ, ಜನಸಾಮಾನ್ಯ ರಿಗೆ ಉತ್ತರದಾಯಿತ್ವವನ್ನು ಹೊಂದದೆ ಇರುವುದು ಮತ್ತು ರೋಗಿಗಳ ಮನಸ್ಸಿನಲ್ಲಿ ಉಂಟಾಗುತ್ತಿರುವ ಹತಾಶೆ ಇವುಗಳಿಂದಾಗಿ ಹಲ್ಲೆ ಮತ್ತು ಹಿಂಸೆಯ ಪ್ರಕರಣಗಳು ಹೆಚ್ಚುತ್ತಿವೆ. ಆರೋಗ್ಯಕ್ಕಾಗಿ ಬಡವರು ಹೊಲಮನೆ ಮಾರಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಬಡವರು ಇಂಥ ಚಿಕಿತ್ಸೆಯ ಗೋಜೇ ಬೇಡವೆಂದು ಆರೋಗ್ಯ ಸೇವೆಗಳಿಂದ ದೂರ ಉಳಿಯುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಸೇವೆಗಳು ಹೆಚ್ಚು ಹಣ ಹೂಡಿ ಜನರನ್ನು ಸೆಳೆಯುತ್ತಿಲ್ಲ. ಅಂಥ ಸಂಸ್ಥೆಗಳನ್ನು ಉಳಿಸಬೇಕು, ಬಲಪಡಿಸಬೇಕೆಂಬ ರಾಜಕೀಯ ಇಚ್ಛಾಶಕ್ತಿ ಆಳುವವರಿಗಿಲ್ಲ. ಆದರೆ ಬಲಿಷ್ಠವಾದ ಖಾಸಗಿ ವಲಯ ಮಾತ್ರ ರಾಜ ಕಾರಣಿಗಳನ್ನು, ಅಧಿಕಾರಿಗಳನ್ನು, ತಜ್ಞ ಗುಂಪುಗಳನ್ನು ಎಂದರೆ ಒಟ್ಟಾರೆ ಪ್ರಭುತ್ವದ ನೀತಿಗಳನ್ನು ರೂಪಿಸುವ ಶಕ್ತಿ ಇರುವವರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾಗಿದೆ.

ಆರೋಗ್ಯ ನೀತಿಗಳನ್ನು ರೂಪಿಸುವಲ್ಲಿ ಭ್ರಷ್ಟತೆ

ಭ್ರಷ್ಟತೆ ಇರುವುದು ಬರಿಯ ಚಿಕಿತ್ಸಾ ವಲಯದಲ್ಲಲ್ಲ. ಅದು ನೀತಿಗಳನ್ನು ರೂಪಿಸುವ ವಲಯಕ್ಕೆ ವ್ಯಾಪಿಸಿಕೊಂಡಿದೆ. ಅಧಿಕಾರ ವಲಯಗಳಲ್ಲಾಗುವ ಭ್ರಷ್ಟತೆಯ ಪರಿಣಾಮ ಜನತೆಯ ಮೇಲೆ ವ್ಯಾಪಕವಾದದ್ದು. ಅಧಿಕಾರಸ್ತರು ಯಾವುದೇ ನೀತಿಯನ್ನು ಯಾವ ಕಾರಣ ಕ್ಕಾಗಿ ರೂಪಿಸಿದರು ಎಂಬುದು ಎಲ್ಲರಿಗೂ ಗೊತ್ತಾಗುವಂತೆ ಪಾರದರ್ಶಕತೆ ಇರುವುದಿಲ್ಲ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನಿರ್ಧಾರಗಳನ್ನು ಇವರು ತೆಗೆದುಕೊಳ್ಳುತ್ತಾರಾದರೂ ಅದರ ಹಿಂದೆ ಗಾಢವಾದ ಅಧ್ಯಯನ, ವೈಜ್ಞಾನಿಕ ಸಂಶೋಧನೆಯ ಆಧಾರ ಇರುವುದಿಲ್ಲ. ಉದಾಹರಣೆಗೆ ವ್ಯಾಕ್ಸಿನೇಷನ್ ತೆಗೆದುಕೊಳ್ಳಿ. ಅನೇಕ ಹೊಸ ವ್ಯಾಕ್ಸೀನುಗಳು ವಿಶೇಷವಾಗಿ ಮಕ್ಕಳಿಗೆ ಎಂದು ನಿಗದಿಪಡಿಸಲಾಗುತ್ತಿವೆ. ಇವು ಎಷ್ಟು ಅವಶ್ಯಕ, ಅದನ್ನು ನಿರ್ಧರಿಸಿದ್ದು ಹೇಗೆ ಎಂಬುದು ಪ್ರಶ್ನಾರ್ಹ. ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವವರಿಗೆ ಮತ್ತು ತತ್ಸಂಬಂಧಿ ಉದ್ಯಮಗಳಿಗೆ ನಂಟಿರುತ್ತದೆ. ಇದು ಲಂಚಗುಳಿತನಕ್ಕೆ ಫಲವತ್ತಾದ ನೆಲವನ್ನು ಒದಗಿಸುತ್ತದೆ.

ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿ ಸುವುದು, ಸಾರ್ವಜನಿಕ-ಖಾಸಗಿ ಪಾಲುದಾ ರಿಕೆ, ಗುತ್ತಿಗೆ ಆಧಾರದ ನೇಮಕಾತಿ, ಬಳಕೆಗಾಗಿ ದರ ನಿಗದಿ ಮಾಡುವುದು ಇವೆಲ್ಲಾ ಭ್ರಷ್ಟಾಚಾರಕ್ಕೆ ಹೊಸ ಹೊಸ ಹಾದಿಗಳನ್ನು ಸೃಷ್ಟಿಸುತ್ತಿವೆ. ಇಲ್ಲೆಲ್ಲಾ ಸರ್ಕಾರಿ ವೈದ್ಯರು ಮತ್ತು ಅಧಿಕಾರಿಗಳಿಗೆ ಕೈ ಬೆಚ್ಚಗೆ ಮಾಡಿಕೊಳ್ಳಲು ಅವಕಾಶ ಉಂಟಾಗುತ್ತಿವೆ. ಇದು ಕೆಳಮಟ್ಟದ ಕೆಲಸಗಾರರ ಮೇಲೂ ಪರಿಣಾಮ ಬೀರುತ್ತಿದೆ. ಅವರಿಗೆ ದೊಡ್ಡಮಟ್ಟದ ಭ್ರಷ್ಟಾಚಾರದಲ್ಲಿ ಪಾಲಿಲ್ಲದಿದ್ದರೂ, ಅವರು ರೋಗಿಗಳ ಮೇಲೆ ವಿಳಂಬನೀತಿಯ ಮೂಲಕ ಒತ್ತಡ ಹೇರುತ್ತಾ, ಬೆದರಿಸುತ್ತಾ ಹಣ ವಸೂಲಿ ಮಾಡುವ ದಾರಿ ಹುಡುಕುತ್ತಾರೆ. 

ವೃತ್ತಿಯ ಬಿಕ್ಕಟ್ಟು

ಇಂಥ ಸಂದರ್ಭದಲ್ಲಿ ವೈದ್ಯನು ತಾನು ಕೆಲಸ ಮಾಡುತ್ತಿರುವ ವ್ಯವಸ್ಥೆಗೆ ಪರಕೀಯನಾಗುತ್ತಾ ಹೋಗುತ್ತಾನೆ. ಏಕೆಂದರೆ ರೋಗಿಗಳು ಆತನ ಮೇಲೆ ನಂಬಿಕೆ ಕಳೆದುಕೊಂಡು ಹಲ್ಲೆ ಮಾಡುವುದು, ಆತನ ಬಗ್ಗೆ ಸಮಾಜಕ್ಕಿದ್ದ ಮೊದಲಿನ ಗೌರವ ನಷ್ಟವಾಗಿರುವುದು ಇದೆಲ್ಲಾ ಒಂದು ರೀತಿಯ ಸಮಸ್ಯೆಯಾದರೆ, ಇನ್ನೊಂದು ಕಡೆ ಅವನು ಈಗ ಆಸ್ಪತ್ರೆಯಲ್ಲಿ ದುಡಿಮೆಗಾರ ಅಷ್ಟೇ. ಅವನು ದುಡಿದು ಕಾರ್ಪೋರೇಟ್ ಸಂಸ್ಥೆಗಳ, ಶೇರುದಾರರ, ಹೂಡಿಕೆದಾರರ ಲಾಭವನ್ನು ಹೆಚ್ಚಿಸಬೇಕು. ಈ ಮೊದಲು ಅವನಿಗೆ ರೋಗಿಯ ಹಿತದ ಕುರಿತು ಇರುತ್ತಿದ್ದ ಕಳಕಳಿ ಈಗ ಕಳೆದುಹೋಗುತ್ತಿದೆ. ಏಕೆಂದರೆ ಅವನು ಅದನ್ನು ಉಳಿಸಿಕೊಂಡು ಕೆಲಸ ಮಾಡುವುದು ಕಷ್ಟ. ಆರೋಗ್ಯ ವ್ಯವಸ್ಥೆ ಮತ್ತು ವೈದ್ಯರ ನಡುವೆಯೂ ಕಂದರ ಏರ್ಪಟ್ಟಿದೆ. ಇದು ಯುರೋಪು-ಅಮೆರಿಕಾದಲ್ಲಿ ಹುಟ್ಟಿ ಈಗ ಜಗತ್ತಿನಾದ್ಯಂತ ವ್ಯಾಪಿಸಿರುವ ಆರೋಗ್ಯ ಸೇವಾ ಮಾದರಿಯ ದೌರ್ಬಲ್ಯ, ಇತಿ-ಮಿತಿ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಇದು ಅನೇಕ ವೈದ್ಯರಿಗೆ ಮನವರಿಕೆ ಆಗಿದೆ. ಕೆಲವರು ವ್ಯವಸ್ಥೆಯೊಂದಿಗೆ ರಾಜಿಯಾಗಿ ಹಣ ಮಾಡುತ್ತಿದ್ದಾರೆ ನಿಜ. ಆದರೆ ಇನ್ನೂ ಕೆಲವರು ‘ನಾನಂತೂ ವೈಯುಕ್ತಿಕವಾಗಿ ಭ್ರಷ್ಟನಾಗುವುದಿಲ್ಲ’ ಎಂಬ ನಿಲುವಿನೊಂದಿಗೆ ಹೇಗೋ ಕಷ್ಟಪಟ್ಟು ಏಗುತ್ತಿದ್ದಾರೆ.

ಈಗ ಕಣ್ಣಿಗೆ ರಾಚುವಂತಿವೆ. ಸಂಪನ್ಮೂಲಗಳ ಅಭಾವವಿರುವ ಆಸ್ಪತ್ರೆಗಳಲ್ಲಾಗಲೀ, ಲಾಭವೇ ಏಕೈಕ ಉದ್ದೇಶವಿರುವ ಸಂಸ್ಥೆಗಳಲ್ಲಾಗಲೀ ಮೇಲ್ವಿಚಾರಣೆ, ನಿಯಂತ್ರಣ, ದಾಖಲೆಗಳನ್ನು ಸರಿಯಾಗಿ ಇರಿಸುವುದು, ಸಮಾನ ಸ್ಕಂದರಿಂದ ಕೆಲಸಕಾರ್ಯಗಳ ನಿರ್ವಹಣೆಯ ವಿಮರ್ಶೆ ಮಾಡಿಸುವುದು ಮುಂತಾದ ಗುಣಮಟ್ಟವನ್ನು ಕಾಪಾಡಲು ನಡೆಸಬೇಕಾದ ಚಟುವಟಿಕೆಗಳೆಲ್ಲಾ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆ. 

ಎಲ್ಲ ವೃತ್ತಿಗಳಿಗೂ ನಿಯಂತ್ರಣ ಎಂಬುದು ಅಗತ್ಯ. ಆದರೆ ಅಂಥ ಪರಿಣಾಮಕಾರಿ ನಿಯಂತ್ರಣಗಳಿಲ್ಲದಿರುವುದರಿಂದ ವೈದ್ಯವೃತ್ತಿ ಇಂಥ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಬಲವಾದ ನಿಯಂತ್ರಣ ಬೇಕು ಎನ್ನುವುದು ಮುಖ್ಯ ಕಳಕಳಿಯಾಗಬೇಕು. ನಿಯಂತ್ರಣದ ನಿಯಮಗಳು ಆಸ್ಪತ್ರೆಯನ್ನೂ, ವೈದ್ಯರನ್ನೂ ರಕ್ಷಿಸುವ ಧ್ಯೇಯವನ್ನು ತೊರೆದು ನಿಜಕ್ಕೂ ರೋಗಿ ಕೇಂದ್ರಿತವಾಗಬೇಕು. ವೃತ್ತಿ ನಿರತರ ಹಿತಾಸಕ್ತಿಗೂ ವೈದ್ಯರ ಹಿತಾಸಕ್ತಿಗೂ ನಡುವೆ ಒಂದು ಸಮತೋಲನ ಬೇಕು. ಮೆಡಿಕಲ್ ಕೌನ್ಸಿಲ್ ಇಂಡಿಯಾ ಎಂಬ ಸಂಸ್ಥೆ ಸೂಕ್ತ ನಿಯಂತ್ರಕನಾಗುವಲ್ಲಿ ಸೋತಿರುವುದರಿಂದ, ತಮ್ಮ ಮೇಲೆ ನಿಯಂತ್ರಣವಿರಬಾರದೆಂಬ ವೈದ್ಯರ ಧೋರಣೆಯಿಂದ, ರೋಗಿಗಳ ದೂರನ್ನು ಕೇಳಿ ಸರಿಪಡಿಸುವಲ್ಲಿ ಆಗಿರುವ ವೈಫಲ್ಯದಿಂದ ಆಗಿರುವ ಪರಿಣಾಮಗಳು ಈಗ ಕಣ್ಣಿಗೆ ರಾಚುವಂತಿವೆ. ಸಂಪನ್ಮೂಲಗಳ ಅಭಾವವಿರುವ ಆಸ್ಪತ್ರೆಗಳಲ್ಲಾಗಲೀ, ಲಾಭವೇ ಏಕೈಕ ಉದ್ದೇಶವಿರುವ ಸಂಸ್ಥೆಗಳಲ್ಲಾಗಲೀ ಮೇಲ್ವಿಚಾರಣೆ, ನಿಯಂತ್ರಣ, ದಾಖಲೆಗಳನ್ನು ಸರಿಯಾಗಿ ಇರಿಸುವುದು, ಸಮಾನ ಸ್ಕಂದರಿಂದ ಕೆಲಸಕಾರ್ಯಗಳ ನಿರ್ವಹಣೆಯ ವಿಮರ್ಶೆ ಮಾಡಿಸುವುದು ಮುಂತಾದ ಗುಣಮಟ್ಟವನ್ನು ಕಾಪಾಡಲು ನಡೆಸಬೇಕಾದ ಚಟುವಟಿಕೆಗಳೆಲ್ಲಾ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ಚಿಕಿತ್ಸಾ ಕ್ರಮಗಳಲ್ಲಿನ ಲೋಪದೋಷಗಳು ಸಹ ಸರಿಪಡಿಸದೆ ಉಳಿಯುತ್ತವೆ.

ಔಷಧಿ ಅಥವಾ ತಪಾಸಣಾ ಕ್ರಮವನ್ನು ನಿಗದಿ ಪಡಿಸಿ ಬರೆಯುವ ವೈದ್ಯನಿಗೂ, ಅಂಥ ಸರಕು ಅಥವಾ ಸೇವೆಗಳನ್ನು ಪೂರೈಸುವವರಿಗೂ ನಡುವೆ ಯಾವುದೇ ಸಂಪರ್ಕ ಬರದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ಯೋಚಿಸಬೇಕು. ತಮಿಳುನಾಡಿನಲ್ಲಿ ಇದನ್ನು ಬಗೆಹರಿಸಲು ತಮಿಳುನಾಡು ಮೆಡಿಕಲ್ ಸರ್ವಿಸ್ ಕಾರ್ಪೋರೇಶನ್ ಲಿಮಿಟೆಡ್ ಎಂಬ ಸಾಂಸ್ಥಿಕ ರಚನೆಯನ್ನು ಮಾಡಿಕೊಂಡಿದ್ದಾರೆ. ಸಾಂಸ್ಥಿಕ ರಚನೆಗಳಿಲ್ಲದಿದ್ದರೆ ಪಾರದರ್ಶಕ ನೀತಿಗಳಾದರೂ ಇರಬೇಕಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಶಾಹಿ, ವೈದ್ಯ ಆಡಳಿತಗಾರರು ನೀತಿಗಳನ್ನು ರೂಪಿಸಲು ಬಿಟ್ಟರೆ ಭ್ರಷ್ಟಾಚಾರ ಪ್ರವೇಶಿಸುತ್ತದೆ.

ಹೀಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ, ಪರಿಣಾಮಕಾರಿಯಾದ ತರ್ಕ ಬದ್ಧವಾದ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನ ಮಾಡಬೇಕಿದೆ. 1978ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಅಲ್ಮಾ ಆಟಾದಲ್ಲಿ ನಡೆಸಿದ್ದ ಸಮಾವೇಶವು ತೀರ್ಮಾನಿಸಿದ್ದ ‘ಎಲ್ಲರಿಗೂ ಆರೋಗ್ಯ’ ಎಂಬ ನಿಲುವಿನತ್ತ ಮತ್ತೆ ಗಮನ ಹರಿಸಬೇಕು. ಸ್ಥಳೀಯ ಸಂದರ್ಭಗಳಿಗನುಗುಣವಾಗಿ ಪರಿಹಾರಗಳನ್ನು ರೂಪಿಸಲು ವೈದ್ಯರುಗಳೇ ಒಂದಾಗಿ ಬಿಲಾಸ್‍ಪುರದಲ್ಲಿ ಸಂಘಟಿಸಿದ ಜನಸ್ವಾಸ್ಥ್ಯ ಸಹಯೋಗ, ರಾಜ್‍ಹರಾದ ಶಹೀದ್ ಆಸ್ಪತ್ರೆ, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಕೈಗೊಂಡ ಯೋಜನೆಗಳು, ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುಜ್ಜೀವನಕ್ಕಾಗಿ ಇರುವ ಸಂಸ್ಥೆಯೊಂದು ವಿವಿಧ ಚಿಕಿತ್ಸಾ ಪದ್ಧತಿಗಳನ್ನು ಸಮನ್ವಯಗೊಳಿಸಲು ಮಾಡಿರುವ ಪ್ರಯತ್ನ ಇವೆಲ್ಲಾ ಆಸಕ್ತಿದಾಯಕ, ಅಧ್ಯಯನಯೋಗ್ಯ ಮಾದರಿಗಳು.

ನಿಯಂತ್ರಣದ ಪ್ರಯತ್ನಗಳು

ಭಾರತದಷ್ಟು ನಿಯಂತ್ರಣಕ್ಕೆ ಒಳಗಾಗದ ಬೃಹತ್ ಆರೋಗ್ಯ ವ್ಯವಸ್ಥೆ ಜಗತ್ತಿನಲ್ಲೇ ಇಲ್ಲ. 1934ರಿಂದಲೇ ಮೆಡಿಕಲ್ ಕೌನ್ಸಿಲ್ ಇಂಡಿಯಾ ಇದಕ್ಕೆ ಜವಾಬ್ದಾರಿ ಎಂದಾಗಿತ್ತು. ಅದರ ಜವಾಬ್ದಾರಿಯು ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಗುಣಮಟ್ಟವನ್ನು, ನೈತಿಕತೆಯನ್ನು ಕಾಪಾಡುವುದು ಎಂದೇ ನಿಗದಿಯಾಗಿದೆ. ಸ್ವಾತಂತ್ರ್ಯಾನಂತರ ಕೆಲವೊಂದು ಕಾನೂನುಗಳೂ ರೂಪಿತವಾಗಿವೆ. 1949ರ ಬಾಂಬೆ ನರ್ಸಿಂಗ್ ಹೋಂ ಆಕ್ಟ್, ಅದೇ ರೀತಿ 1953ರ ದೆಹಲಿಯ ಕಾಯಿದೆ, 1986ರ ಗ್ರಾಹಕ ರಕ್ಷಣಾ ಕಾಯಿದೆ ಹಾಗೂ 2010ರ ಚಿಕಿತ್ಸಾ ಸಂಸ್ಥೆಗಳ ಕಾಯಿದೆ ಇವುಗಳನ್ನು ಹೆಸರಿಸಬಹುದು. ಆದರೆ ಇವುಗಳು ನೋಂದಣಿ ಮತ್ತು ಪರವಾನಿಗೆ ನೀಡುವ ಪ್ರಕ್ರಿಯೆಯ ಮೂಲಕ ಇವತ್ತು ಪ್ರಚಲಿತವಿರುವ ಮುಖ್ಯವಾಹಿನಿಯ ಶಿಕ್ಷಣ ಹಾಗೂ ಚಿಕಿತ್ಸಾ ಸಂಸ್ಥೆಗಳಿಗೆ ಅಧಿಕೃತತೆಯ ಮೊಹರು ಒತ್ತುವುದನ್ನು ಬಿಟ್ಟರೆ, ವಾಸ್ತವದಲ್ಲಿ ವೃತ್ತಿ ನೈತಿಕತೆಯನ್ನು ಸ್ಥಾಪಿಸುವಲ್ಲಿ ಯಾವ ಗಮನಾರ್ಹ ಸಾಧನೆಯನ್ನೂ ಮಾಡಿಲ್ಲ. ಕಾನೂನು ಕಟ್ಟಳೆಗಳ ಮೂಲಕ ರೋಗಿಗಳಿಗೆ ಸಿಗುವ ಪರಿಹಾರ ಕಡಿಮೆ. ಆದರೆ ಇವುಗಳ ಒತ್ತಡದಿಂದ ವೈದ್ಯರು ಅಗತ್ಯ ಚಿಕಿತ್ಸಾ ತೀರ್ಮಾನಗಳನ್ನು ಮಾಡಲು ಹಿಂಜರೆಯುವುದನ್ನು ಹಾಗೂ ವೈದ್ಯ-ರೋಗಿ ಸಂಬಂಧ ಹಾಳಾಗಿರುವುದನ್ನು ನಾವು ಗಮನಿಸಬಹುದು.

ಆಗಬೇಕಾದದ್ದು

ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಇದೇ ಚರ್ಚೆಯ ಫಲಶೃತಿಯಾಗಿ ಆಗಬೇಕಾದ ಕೆಲಸಗಳನ್ನು ಹೀಗೆ ಪಟ್ಟಿ ಮಾಡಬಹುದು. ಮೊದಲನೆಯದಾಗಿ ಆರೋಗ್ಯ ಸೇವಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಮೇಲಿನಿಂದ ಹೇರದೆ ಕೆಳಗಿನಿಂದ ವಿಕಸಿತವಾಗುವಂತೆ ನೋಡಿಕೊಳ್ಳಬೇಕು. ಅಗ್ಗವಾದ ತಂತ್ರಜ್ಞಾನಗಳನ್ನು ಜಾರಿಗೆ ತಂದು ಚಿಕಿತ್ಸೆಯ ವ್ಯಾಪಾರೀಕರಣವನ್ನು ತಡೆಗಟ್ಟಬೇಕು. ವೈದ್ಯಕೀಯ ಸಂಸ್ಥೆಗಳನ್ನು ಸರ್ಕಾರದ ಹಣದಿಂದ ಹಾಗೂ ಸೇವಾ ಸಂಸ್ಥೆಗಳಿಂದ ನಡೆಸಲುಒತ್ತು ನೀಡಬೇಕು. ಶಿಸ್ತನ್ನು, ನೈತಿಕತೆಯನ್ನು ಉಲ್ಲಂಘಿಸಲಾಗದಂತೆ ಸೂಕ್ತ ನಿಯಂತ್ರಣ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲುಒತ್ತು ನೀಡಬೇಕು. ಇದಕ್ಕೆ ಸಮಾಜದ ದೃಷ್ಟಿಕೋನದಲ್ಲೂ ಒಂದು ಮುಖ್ಯ ಬದಲಾವಣೆ ಬರಬೇಕು. ಅದೆಂದರೆ ಆರೋಗ್ಯವು ಲಾಭದಾಯಕ ಉದ್ದಿಮೆ ಅಲ್ಲ; ಅದು ಸೇವಾಕ್ಷೇತ್ರ ಎಂಬುದು ಸ್ಥಾಪಿತವಾಗಬೇಕು. ಆದರೆ ಹೀಗಾಗಲು ಆರೋಗ್ಯ ಉದ್ಯಮದಲ್ಲಿರುವ ಕಾರ್ಪೋರೇಟ್ ಸಂಸ್ಥೆಗಳು, ಔಷಧ ಮತ್ತು ಉಪಕರಣಗಳ ಲಾಬಿ, ವಿಮಾಕಂಪನಿಗಳು ಎಲ್ಲಾ ಸೇರಿದ ಹಿತಾಸಕ್ತಿ ಕೂಟ ಬಿಡುತ್ತದೆಯೇ ಎಂಬುದು ಮುಖ್ಯಪ್ರಶ್ನೆ. ಎಲ್ಲರೂ ಇಂಥ ಬದಲಾವಣೆಯಲ್ಲಿಯೇ ವಾಸ್ತವದಲ್ಲಿ ತಮ್ಮ ಸ್ವಂತ ಹಿತಾಸಕ್ತಿಯೂ ಅಡಕವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆಯೇ ಅಥವಾ ಇದಕ್ಕೊಂದು ಬೃಹತ್ ಸಾಮಾಜಿಕ ಚಳುವಳಿಯೇ ಅಗತ್ಯವಾಗುತ್ತದೆಯೇ

ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳ ಮಧ್ಯದ ಅಸಮತೋಲನ, ವಿಪರೀತವಾದ ಖಾಸಗೀಕರಣ, ನಿಯಂತ್ರಣಕ್ಕೊಳಪಡದ ಆರೋಗ್ಯ ಕ್ಷೇತ್ರ ಇವೆಲ್ಲವೂ ಒಂದು ಚಾರಿತ್ರಿಕ ಪ್ರಕ್ರಿಯೆಯ ಬಳುವಳಿಯಾಗಿ ಬಂದಿವೆ. ಅದೇರೀತಿ ಜನತೆಯ ಸಬಲೀಕರಣಕ್ಕೆ ಕಾರಣವಾಗಬಹುದಾದ ಜ್ಞಾನದಿಂದ ಜನರನ್ನು ವಂಚಿತರನ್ನಾಗಿಸುವ ರಾಜಕೀಯವನ್ನು ನಾವು ಗಮನಿಸಬೇಕು. ಜನರಿಂದ ಪರಕೀಯವಾಗಿರುವ ಈ ವ್ಯವಸ್ಥೆಯ ಮೇಲೇಯೇ ಜನ ಅವಲಂಬಿತರಾಗಿದ್ದಾರೆ ಎಂಬುದು ಒಂದು ವಿರೋಧಾಭಾಸ. ಈ ವೃತ್ತಿಪರ ವ್ಯವಸ್ಥೆ ಮತ್ತು ಜನತೆಯ ಮಧ್ಯದ ಕಂದರವನ್ನು ಮುಚ್ಚುವುದು ಹೇಗೆ ಎಂಬುದು ಮೊದಲ ಪ್ರಶ್ನೆ.

ಎರಡನೆಯದಾಗಿ ಭೋರೆ ಸಮಿತಿಯ ಅಭಿಪ್ರಾಯದಂತೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನುಖಾತ್ರಿಪಡಿಸಲು ಸಾರ್ವಜನಿಕ ವೆಚ್ಚದ ಶೇಕಡಾ 15ನ್ನು ಆರೋಗ್ಯಕ್ಕೆ ಮೀಸಲಿಡಬೇಕು. ಇದು ಸರ್ಕಾರದಿಂದ, ದಾನದಿಂದ ಬರಬೇಕು. ಇದನ್ನು ಅಗ್ಗವಾದ ತಂತ್ರಜ್ಞಾನವಿರುವ, ಅತಿ ಚಿಕಿತ್ಸೆಯಿಲ್ಲದ ಮಾದರಿಗೆ ವಿನಿಯೋಗಿಸಬೇಕು. ಇದರಲ್ಲಿ ಮುಖ್ಯಪಾತ್ರ ಸಾರ್ವಜನಿಕ ಕ್ಷೇತ್ರದ್ದೋ, ಖಾಸಗಿಯವರದ್ದೋ ಎಂಬುದನ್ನು ನಾವು ಉತ್ತರಿಸಿಕೊಳ್ಳಬೇಕು.

ಮೂರನೆಯದಾಗಿ ನಿಯಂತ್ರಣದ ಪ್ರಶ್ನೆ. ವೃತ್ತಿಪರರು ತಾವೇ ಸೂಕ್ತವಾದ ಸ್ವಯಂ ನಿಯಂತ್ರಣವನ್ನು ಮಾಡಿಕೊಳ್ಳುತ್ತಾರೋ ಅಥವಾ ಹೊರಗಿನಿಂದ ಇದನ್ನು ಖಾತ್ರಿ ಪಡಿಸಬೇಕೋ ಎಂಬುದನ್ನು ನಿರ್ಧರಿಸಬೇಕು.

ಇವುಗಳನ್ನು ನಾವು ಹೇಗೆ ಉತ್ತರಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಭವಿಷ್ಯದ ಆರೋಗ್ಯ ವ್ಯವಸ್ಥೆ ನಿಂತಿದೆ. ಆರೋಗ್ಯದ ಉದ್ದಿಮೆಯ ಲಾಬಿಯ ಹಿಡಿತ ಎಷ್ಟೇ ಬಿಗಿಯಾಗಿದ್ದರೂ ಆಶಾವಾದಕ್ಕೆ ಕಾರಣವಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳಿಗಿಂತ ಜೀವನಶೈಲಿಯ ವ್ಯಾಧಿಗಳೇ ಮುಖ್ಯವಾಗುತ್ತಿರುವ ಈ ಹೊತ್ತಿನಲ್ಲಿ ಆಸ್ಪತ್ರೆ ಕೇಂದ್ರಿತ ಚಿಕಿತ್ಸೆಗಿಂತ ಸ್ವಯಂ ನೆರವು ಮುಖ್ಯ ಎಂಬುದನ್ನು ಎಲ್ಲರೂ ಗುರುತಿಸುತ್ತಿದ್ದಾರೆ. ಪರ್ಯಾಯ ವೈದ್ಯಕೀಯ ಪದ್ಧತಿಗಳ ಮೇಲೂ ಆಸಕ್ತಿ ಕೆರಳುತ್ತಿದೆ. ಇದಲ್ಲದೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಮೇಲಿನ ಹತೋಟಿಯನ್ನು ಜನತೆ ಮತ್ತೆ ಸ್ಥಾಪಿಸಿಕೊಳ್ಳಬೇಕು. ಅಮೆರಿಕಾ-ಯುರೋಪಿನಿಂದ ಆಮದಾದ ವಿಪರೀತ ಕೇಂದ್ರೀಯತೆಯ ಆರೋಗ್ಯ ವ್ಯವಸ್ಥೆಯ ಜಾಗದಲ್ಲಿ ಬುಡಮಟ್ಟದಿಂದ ವಿಕಾಸವಾಗುವ, ಎಲ್ಲ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಬಲ್ಲ ಮಾದರಿಯನ್ನು ಸ್ಥಾಪಿಸುವ ಮೂಲಕ ನಾವು ಬೇರೂರಿರುವ ಭ್ರಷ್ಟತೆಯನ್ನುಎದುರಿಸಲು ಸಾಧ್ಯ.

Leave a Reply

Your email address will not be published.