ಭಾರತದ ಸದ್ದಿಲ್ಲದ ಡಿಜಿಟಲ್ ಕ್ರಾಂತಿ

ಚೀನಾದ ಬಿರುಸಿನ ಡಿಜಿಟಲೀಕರಣವು ಜಗತ್ತನ್ನು ವ್ಯಾಪಿಸುತ್ತಿದ್ದಂತೆ, ಏಷ್ಯಾದ ಇನ್ನೊಂದು ದೈತ್ಯಶಕ್ತಿಯಾದ ಭಾರತ ತನ್ನ ಹೊಸ ಡಿಜಿಟಲ್ ಪರಿವರ್ತನೆಯನ್ನು ಪ್ರದರ್ಶಿಸುತ್ತಿದೆ.

ನೀವು ಇಲ್ಲಿಯವರೆಗೆ ಕೇಳಿರದ ಬೃಹತ್ ಕ್ರಾಂತಿ ಇದಾಗಿರಬಹುದು. ಕಳೆದ ದಶಕದಲ್ಲಿ ಚೀನಾ ಕಂಡುಕೊಂಡ ಡಿಜಿಟಲ್ ಪ್ರಗತಿ, ಅಂತರ್ಜಾಲ ಪ್ರಾಬಲ್ಯ ಮತ್ತು ವಿನೂತನ ಆವಿಷ್ಕಾರಗಳಿಂದ ಜಗತ್ತು ರೂಪಾಂತರಗೊಳ್ಳುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಅಂತರರಾಷ್ಟ್ರೀಯ ಮಾಧ್ಯಮಗಳ ಗಮನಕ್ಕಿನ್ನು ಬಾರದಂತೆ, ಭಾರತ ಕೂಡ ತನ್ನ ಅಂತರ್ಜಾಲ ಬಳಕೆ ವಿಸ್ತರಣೆಯ ಮೂಲಕ ಸದ್ದಿಲ್ಲದೇ ಡಿಜಿಟಲ್ ಕ್ರಾಂತಿ ಮಾಡುತ್ತಿದೆ.

ಈ ದೆಸೆಯಲ್ಲಿ, ಕೆಳಗಿನ ಅಂಕಿಅಂಶಗಳು ಭಾರತ ಉಪಖಂಡದ ಸಾಧನೆ, ಯಾವ ಮಾನದಂಡಗಳಿಂದಲೂ ಮೇಲ್ಮಟ್ಟದಲ್ಲಿವೆ, ಮಾತ್ರವಲ್ಲ, ಕ್ಷಿಪ್ರಗತಿಯಲ್ಲಿ ಹೆಚ್ಚಾಗುತ್ತಿದೆಯೆಂದು ಹೇಳುತ್ತಿವೆ. ಮೊದಲನೆಯದಾಗಿ, 2009ರಲ್ಲಿ ಪರಿಚಯಿಸಲಾದ ರಾಷ್ಟ್ರೀಯ ಬಯೋಮೆಟ್ರಿಕ್ ಡಿಜಿಟಲ್ ಗುರುತಿನ ಕಾರ್ಯಕ್ರಮವಾದ ‘ಆಧಾರ್’ನಲ್ಲಿ ಸುಮಾರು 1.2 ಶತಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಎರಡನೆಯದಾಗಿ, ಭಾರತೀಯ ವಯಸ್ಕರಲ್ಲಿ 80 ಶೇಕಡಕ್ಕೂ ಹೆಚ್ಚು ಜನರು ಈಗ ಕನಿಷ್ಠ ಒಂದು ಡಿಜಿಟಲ್ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಇದು ಸಾಧ್ಯವಾಗಲು ಪ್ರಮುಖ ಕಾರಣ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಾರಂಭಿಸಿದ ‘ಜನಧನ್’ ಯೋಜನೆ. ಇವುಗಳಲ್ಲಿ ಬಹುಪಾಲು ಖಾತೆಗಳು, ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ಸಂಪರ್ಕಹೊಂದಿದೆ. 2016ರಲ್ಲಿ ಪ್ರಾರಂಭವಾದ ಈ ಯೋಜನೆ, ಅದೇ ವರ್ಷ ನವೆಂಬರ್‌ನಲ್ಲಿ 1.2 ಶತಕೋಟಿ ವಹಿವಾಟುಗಳನ್ನು ದಾಖಲಿಸಿದೆ. ಮತ್ತೊಂದು ಬೃಹತ್ ಡಿಜಿಟಲ್ ಮೂಲಸೌಕರ್ಯ, ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ), ಭಾರತದ 60 ದಶಲಕ್ಷ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಂದೇ ವೇದಿಕೆಯಲ್ಲಿ ಕ್ರೂಡೀಕರಿಸಿತು. ಈ ಯೋಜನೆ, ಸಂಕೀರ್ಣವಾಗಿದ್ದ ರಾಷ್ಟೀಯ ಮತ್ತು ಸ್ಥಳೀಯ ತೆರಿಗೆಗಳನ್ನು ಸರಳೀಕರಿಸಿತು.

ಈಗ, ಭಾರತದಲ್ಲಿ 450 ದಶಲಕ್ಷಕ್ಕಿಂತಲೂ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಕೆದಾರರಿದ್ದಾರೆ, ಇದು 2022ರ ವೇಳೆಗೆ ಸುಮಾರು 667 ದಶಲಕ್ಷಕ್ಕೇರುವ ನಿರೀಕ್ಷೆಯಿದೆ. ಪ್ರಸ್ತುತ, ಭಾರತ ವಿಶ್ವದಲ್ಲೇ ಅತಿ ಕಡಿಮೆ ಡೇಟಾವೆಚ್ಚವನ್ನು ಹೊಂದಿದೆ ಮತ್ತು ಅದರ ಲ್ಯಾಂಡ್ ಲೈನ್ ಡೌನ್‌ಲೋಡ್ ವೇಗವು ಏರುತ್ತಲೇ ಇದೆ. ಇದು, ಕೇವಲ ನಗರದ ಮಧ್ಯಮ ವರ್ಗದವರಿಗೆ ಲಾಭ ನೀಡಿಲ್ಲ. ಸಧ್ಯ, ಭಾರತದ 2,50,000 ಗ್ರಾಮ ಪಂಚಾಯತಿಗಳಲ್ಲಿ ಅರ್ಧದಷ್ಟು ಭಾಗ ಫೈಬರ್ ಆಪ್ಟಿಕ್ ನೆಟ್‌ವರ್ಕ್ಗಳಿಂದ ಸಂಪರ್ಕಗೊಂಡಿದೆ, ಉಳಿದ ಅರ್ಧಭಾಗ ಮುಂದಿನ ಎರಡು ವರ್ಷಗಳಲ್ಲಿ ಆನ್‌ಲೈನ್‌ಗೆ ಬರಲಿದೆ. ಇದರೊಂದಿಗೆ, ಬಡ ಗ್ರಾಮಸ್ಥರಿಗೆ ಡಿಜಿಟಲ್ ಸೇವೆಗಳಿಗೆ ಪ್ರವೇಶ ಒದಗಿಸುವ ಸಲುವಾಗಿ ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸಿಂಗಾಪುರದಲ್ಲಿ 2019ರ ಆರಂಭದಲ್ಲಿ ನಡೆದ, ಇನ್ಸೀಡ್ (INSED) ಆಯೋಜಿಸಿದ್ದ 4ನೇ ವಾರ್ಷಿಕ ಉದಯೋನ್ಮುಖ ಮಾರುಕಟ್ಟೆಗಳ ಸಮಾವೇಶದಲ್ಲಿ, ಭಾರತದ ಹೈ ಕಮಿಷನರ್, ಜಾವೇದ್ ಅಶ್ರಫ್, ಭಾರತದ ಡಿಜಿಟಲ್ ಪ್ರಗತಿಯನ್ನು ವಿವರಿಸಿದರು. ಅವರು ಹೇಳಿದಂತೆ, ‘ಇಂದು ಡಿಜಿಟಲ್ ತಂತ್ರಜ್ಞಾನ, ನಾವು ಬದುಕುವ, ಕೆಲಸ ಮಾಡುವ, ಸಂವಹನ ಮಾಡುವ ಮತ್ತು ನಮ್ಮನ್ನು ಮನರಂಜಿಸುವ ವಿಧಾನಗಳನ್ನು ಬದಲಾಯಿಸಿದೆ.’

 

ತ್ವರಿತಗತಿಯಲ್ಲಿ ಡಿಜಿಟಲೀಕರಣ

ಈ ಕ್ಷಿಪ್ರ ಡಿಜಿಟಲೀಕರಣದ ಪ್ರಭಾವ, ದೇಶದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಗಮನಾರ್ಹವಾಗಿದೆ. ಭಾರತ, ಕೇವಲ ಐದು ವರ್ಷಗಳಲ್ಲಿ ವಿಶ್ವ ಬ್ಯಾಂಕಿನ ವ್ಯಾಪಾರ ಸರಳೀಕರಣ ಶ್ರೇಯಾಂಕದಲ್ಲಿ 142ನೇ ಸ್ಥಾನದಿಂದ 63ನೇ ಸ್ಥಾನಕ್ಕೇರಿದೆ. ಅದಲ್ಲದೆ, ಜಾಗತಿಕ ನಾವಿನ್ಯ ಶ್ರೇಯಾಂಕದಲ್ಲಿ 81ರಿಂದ 52ನೇ ಸ್ಥಾನದಲ್ಲಿದೆ. ಈಗ, ಭಾರತ ವಿಶ್ವದ ಮೂರನೇ ಅತಿದೊಡ್ಡ ಹೊಸ ವ್ಯಾಪಾರ ಉತ್ತೇಜಕ ಪರಿಸರ ವ್ಯವಸ್ಥೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿ 8,000 ಹೊಸ ವ್ಯಾಪಾರಗಳನ್ನು ಮತ್ತು 2018ರಲ್ಲಿ ಎಂಟು ಯುನಿಕಾರ್ನ್(ಯುಎಸ್ ಡಾಲರ್ 1 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯಮಾಪನ ಪಡೆದಿರುವ ಹೊಸ ವ್ಯಾಪಾರ)ಗಳಿಸಿದೆ ಎಂದು ಅಶ್ರಫ್ ವಿವರಿಸಿದರು.

ಫ್ಲಿಪ್‌ಕಾರ್ಟ್ ಸಂಸ್ಥೆಯ ಮೂರು ಮಾಜಿ ಅಧಿಕಾರಿಗಳು ಪ್ರಾರಂಭಿಸಿದ ಬೆಂಗಳೂರು ಮೂಲದ ಬಿ2ಬಿ (ವ್ಯವಹಾರದಿಂದ ವ್ಯವಹಾರ) ವ್ಯವಹಾರದ ವೇದಿಕೆಯಾಗಿರುವ ಉಡಾನ್ ಸಂಸ್ಥೆ, 2018ರ ಸೆಪ್ಟೆಂಬರನಲ್ಲಿ, ಅಂದರೆ, ಆರಂಭಿಸಿದ ಕೇವಲ 26 ತಿಂಗಳಲ್ಲಿ, ಅತ್ಯಂತ ವೇಗವಾಗಿ ಯುನಿಕಾರ್ನ್ ಆಯಿತು. 2013ರಲ್ಲಿ, 19 ವರ್ಷದ ರಿತೇಶ್ ಅಗರ್ವಾಲ್ ಸ್ಥಾಪಿಸಿದ ಹೋಟೆಲ್ ಸಮೂಹ ಓಯೋ, ಚೀನಾದಲ್ಲಿ ತನ್ನ ಮೊದಲ ‘ಜಿಯುಡಿಯನ್’ ಅನ್ನು ತೆರೆದ ಎರಡು ವರ್ಷಗಳಲ್ಲಿ ಆ ದೇಶದ ಎರಡನೇ ಅತಿದೊಡ್ಡ ಹೋಟೆಲ್ ನೆಟ್‌ವರ್ಕ್ ಆಗಿ ಮಾರ್ಪಟ್ಟಿದೆ ಎಂದು ಘೋಷಿಸಿತು. ಓಯೋ ಹೂಡಿಕೆದಾರ ಸಾಫ್ಟ್ಬ್ಯಾಂಕ್ ಗ್ರೂಪ್‌ನ ಮಸಯೋಶಿ ಸನ್, ಓಯೋ ಸಂಸ್ಥೆಗಾಗಿ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ. ‘ಇದು ಅಮೆರಿಕಾ, ಬ್ರಿಟನ್ ಮತ್ತು ಆಗ್ನೇಯ ಏಷ್ಯಾದಲ್ಲಿಯೂ ವಿಸ್ತರಿಸುತ್ತಿದೆ. ಮಾತ್ರವಲ್ಲ, ಓಯೋ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಹೋಟೆಲ್ ನೆಟ್‌ವರ್ಕ್ ಆಗಲಿದೆ’ ಎಂದು ಜೂನ್‌ನಲ್ಲಿ ನಡೆದ ಷೇರುದಾರರ ಸಭೆಯಲ್ಲಿ, ಮಸಯೋಶಿ ಸನ್ ಹೇಳಿದರು.

ಇನ್ನು ಆರ್ಥಿಕ ತಂತ್ರಜ್ಞಾನಕ್ಷೇತ್ರದಲ್ಲಿ, 2019ರ ಎರಡನೇ ತ್ರೆಮಾಸಿಕದಲ್ಲಿ ಭಾರತ ಚೀನಾವನ್ನು ಸಾಹಸೋದ್ಯಮ ಬಂಡವಾಳ ಬೆಂಬಲಿತ ಒಪ್ಪಂದದ ಚಟುವಟಿಕೆಯಲ್ಲಿ ಹಿಂದಿಕ್ಕಿದೆ ಎಂದು ಮಾರುಕಟ್ಟೆ ಸಂಶೋಧನಾ ಸಮೂಹ ಸಿಬಿ ಇನ್ ಸೈಟ್ಸ್ ತಿಳಿಸಿವೆ. ಅಮೆರಿಕದ ಬ್ರಹತ್ ಉದ್ಯಮಗಳಾದ ಅಮೆಜಾನ್, ವಾಲ್‌ಮಾರ್ಟ್, ಗೂಗಲ್ ಮತ್ತು ವಾಟ್ಸಾಪ್ ತಮ್ಮದೇ ಆದ ವಿಧಾನಗಳಲ್ಲಿ ಬೃಹತ್ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಂತೆಯೇ, ಚೀನಾದ ಹೂಡಿಕೆದಾರರು 2018ರಲ್ಲಿ 3.5 ಶತಕೋಟಿ ಡಾಲರ್‌ಗಳನ್ನು ಭಾರತೀಯ ತಂತ್ರಜ್ಞಾನಕ್ಕೆ ಹೂಡಿದ್ದಾರೆ.

ಪ್ರಸ್ತುತ, ಅಭಿವೃದ್ಧಿ ಹೊಂದುತ್ತಿರುವ ಉದ್ಯಮಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಈ ಹಿಂದೆ, ಕೆಲಸ ಪಡೆಯಲು ಕೇವಲ ಬಾಯಿಮಾತನ್ನು ಅವಲಂಬಿಸಿದ್ದ ಕೊಳಾಯಿ ಕಾರ್ಮಿಕರು, ಕ್ಲೀನರ್‌ಗಳು ಮತ್ತು ವರ್ಣಚಿತ್ರಕಾರರಂತಹ ಉದ್ಯೋಗಿಗಳು ಈಗ ಆನ್‌ಲೈನ್ ಮೂಲಕ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇನ್ನು ಉತ್ಪಾದನ ಕ್ಷೇತ್ರದಲ್ಲಿ, ಮೊಬೈಲ್ ಫೋನ್ ತಯಾರಿಕ ಉದ್ಯಮ ಕಳೆದ ಐದು ವರ್ಷಗಳಲ್ಲಿ, ಅಂದರೆ, 2014ರಿಂದ 2019ರವರೆಗೆ, ಕಾರ್ಖಾನೆಗಳ ಸಂಖ್ಯೆ 2ರಿಂದ 127ಕ್ಕೆ ಏರಿಸುವ ಮೂಲಕ, ಸುಮಾರು 4 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. 

ಭಾರತೀಯ ಸಮಾಜದ ಮೇಲೆ ಇಲ್ಲಿಯವರೆಗೆ ಹೆಚ್ಚಿನ ಪ್ರಭಾವ ಬೀರುತ್ತಿದ್ದ ಲಿಂಗ ಮತ್ತು ಸಂಪತ್ತಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಮುಂದಿನ ವರ್ಷಗಳಲ್ಲಿ ಡಿಜಿಟಲೀಕರಣ, ವ್ಯವಹಾರ ಅವಕಾಶಗಳಲ್ಲಿ ಸಮಾನತೆ ಸಾಧಿಸಿ, ಮುಕ್ತತೆ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಅಶ್ರಫ್ ಇದನ್ನು ತಮ್ಮ ಇನ್ಸೀಡ್ ಸಮ್ಮೇಳನ ಭಾಷಣದಲ್ಲಿ ಒತ್ತಿಹೇಳಿದ್ದಾರೆ. ‘500 ದಶಲಕ್ಷ ಫಲಾನುಭವಿಗಳಿರುವ, ಬಡಜನರ ಆರೋಗ್ಯ ರಕ್ಷಣೆ ನೀಡುವ ಹೊಸ ‘ಸಾರ್ವತ್ರಿಕ ಆರೋಗ್ಯ ಯೋಜನೆ’ ಜಾರಿಗೆ ತರಲಾಗಿದೆ. ಇದರೊಂದಿಗೆ, ಮುದ್ರಾ ಯೋಜನೆಯ ಮೂಲಕ ಸೂಕ್ಷ್ಮ ಉದ್ಯಮಗಳಿಗೆ 200 ದಶಲಕ್ಷ ಸಾಲ ವಿತರಣೆಯಾಗುತ್ತಿದೆ. ಗಮನಾರ್ಹ ಅಂಶವೆಂದರೆ, ಇದರ ಫಲಾನುಭವಿಗಳಲ್ಲಿ ಶೇಕಡಾ 75 ಮಂದಿ ಮಹಿಳೆಯರು. ಮಾತ್ರವಲ್ಲ, ಡಿಜಿಟಲೀಕರಣದಿಂದಾಗಿ ಲಕ್ಷಾಂತರ ಭಾರತೀಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣಪಾವತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿದೆ’ ಎಂದು ಅಶ್ರಫ್ ಹೇಳಿದ್ದಾರೆ.

‘ಉದಾಹರಣೆಗೆ, ಅಡುಗೆ ಅನಿಲಕ್ಕಾಗಿ ನೀಡುವ ಸಬ್ಸಿಡಿ ಯೋಜನೆ. ಇದರಿಂದಾಗಿ, 70 ದಶಲಕ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಈ ಸಬ್ಸಿಡಿ ನೇರವಾಗಿ ಮಹಿಳೆಯರ ಖಾತೆಗಳಿಗೆ ಹರಿಯುತ್ತದೆ, ಅವರ ಗಂಡನ ಖಾತೆಗಲ್ಲ. ಡಿಜಿಟಲೀಕರಣದಿಂದಾಗಿ ಆಧಾರ್ ಮತ್ತು ಜನಧನ್ ಬ್ಯಾಂಕಿಂಗ್ ಖಾತೆಗಳನ್ನು ಆರೋಗ್ಯ ಮತ್ತು ಕಲ್ಯಾಣ ಯೋಜನೆಗಳೊಂದಿಗೆ ಜೋಡಿಸಲು ನಮಗೆ ಸಾಧ್ಯವಾಗಿದೆ’ ಎಂದು ಅಶ್ರಫ್ ಹೇಳಿದರು.

ಡಿಜಿಟಲೀಕರಣ, ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಈ ವಲಯ, ಇಂದಿಗೂ ಶೇಕಡಾ 50ರಷ್ಟು ಭಾರತೀಯರಿಗೆ ಜೀವನಾಧಾರ ಮತ್ತು ದೇಶದ ಜಿಡಿಪಿಯ ಸುಮಾರು 18 ಶೇಕಡ ಪಾಲನ್ನು ಹೊಂದಿದೆ. ‘ಸರ್ಕಾರದ ‘ಎಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ’ ರೈತರ ಆದಾಯ ಶೇಕಡಾ 15ರಷ್ಟು ಹೆಚ್ಚಿಸಲು ಸಹಾಯ ಮಾಡಿದೆ’ ಎಂದು ಸಲಹಾ ಸಂಸ್ಥೆ ಮೆಕಿನ್ಸೆ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಈಗ, ರೈತರು ಮುಕ್ತ ಪ್ರವೇಶದ ಡಿಜಿಟಲ್ ಭೂದಾಖಲೆಗಳನ್ನು ಉಪಯೋಗಿಸಿಕೊಂಡು, ಆನ್‌ಲೈನ್ ಬ್ಯಾಂಕಿಂಗ್ ಮೂಲಕ, ಬೆಳೆ ವಿಮೆ ಮತ್ತು ಅಗ್ಗದ ಸಾಲವನ್ನು ಪಡೆಯಬಹುದು. ಒಟ್ಟಾರೆ, 2025ರ ವೇಳೆಗೆ ಭಾರತೀಯ ಕೃಷಿಕ್ಷೇತ್ರದ ಡಿಜಿಟಲ್ ಆವಿಷ್ಕಾರಗಳು 65 ಶತಕೋಟಿ ಅಮೆರಿಕನ್ ಡಾಲರ್ ಆರ್ಥಿಕ ಮೌಲ್ಯವನ್ನು ಸೇರಿಸಬಹುದು.

ಅಶ್ರಫ್ ಹೇಳಿದಂತೆ, ‘ಒಂದು ಶತಕೋಟಿಗಿಂತ ಹೆಚ್ಚಿನ ಮೊಬೈಲ್ ಫೋನ್ ಗಳು, ಬಯೋಮೆಟ್ರಿಕ್ ಗುರುತು ಮತ್ತು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಭಾರತೀಯ ಆರ್ಥಿಕತೆ, ನಮಗೆ ಹೊಸ ಸಾಧ್ಯತೆ ಮತ್ತು ಸ್ಫೂರ್ತಿ ಕೊಟ್ಟು ವಿನೂತನ ಯೋಜನೆಗಳಿಗೆ ಸಿದ್ಧಗೊಳಿಸಿದೆ.’

ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ

ಭಾರತದಂತಹ ಅಧಿಕ ಜನಸಂಖ್ಯೆ ಮತ್ತು ವೈವಿಧ್ಯ ಇರುವ ದೇಶದಲ್ಲಿ ಯಾವುದೇ ಕ್ರಾಂತಿ, ವೆಚ್ಚ ಮತ್ತು ಪ್ರತಿರೋಧವಿಲ್ಲದೆ ನಡೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ, ನವೆಂಬರ್ 8, 2016ರ ನೋಟ್ ಬ್ಯಾನ್ ಆದೇಶ, ತೀವ್ರ ಪ್ರತಿಭಟನೆ ಮತ್ತು ನಿರಂತರ ಟೀಕೆಗಳ ನಡುವೆಯೂ, ಪರೋಕ್ಷವಾಗಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಕಾರಣವಾಯಿತು. ಆದರೆ, ಸಣ್ಣ ವ್ಯವಹಾರಗಳನ್ನು ಕೂಡ ಮಾಸಿಕ ಆನ್‌ಲೈನ್ ಪಾವತಿಗೆ ಸೀಮಿತಗೊಳಿಸಿದ್ದರಿಂದ, ಸಾವಿರಾರು ಉದ್ಯೋಗಗಳು ನಷ್ಟವಾಯಿತೆಂದು ಜಿಎಸ್‌ಟಿಯನ್ನು ದೂಷಿಸಲಾಯಿತು. ಅಲ್ಲದೆ, ಭಾರತೀಯರ ಡಿಜಿಟಲ್ ಗುರುತಿನ ಕಾರ್ಡನ್ನು ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡುವುದರಿಂದ ಉಂಟಾಗಬಹುದಾದ ಗೌಪ್ಯತೆ ಲೋಪದ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ಭಾರತವನ್ನು ಡಿಜಿಟಲೀಕರಣ ಮಾಡುವುದೆಂದರೆ, ಅಸಮರ್ಪಕ ಮೂಲಸೌಕರ್ಯ ಮತ್ತು ಸಾಂಪ್ರದಾಯಿಕ ಜೀವನ ವಿಧಾನಗಳೊಂದಿಗೆ ಹೋರಾಡುವುದು ಎಂದರ್ಥ. ಯಾಕೆಂದರೆ, ಇಂದಿಗೂ ಕೇವಲ ಶೇಕಡಾ 40ರಷ್ಟು ಜನರು ಮಾತ್ರ ಇಂಟರ್ನೆಟ್ ಚಂದಾದಾರಿಕೆ ಹೊಂದಿದ್ದಾರೆ. ಹೆಚ್ಚಿನ ಭಾರತೀಯರು ಈಗ ಆನ್‌ಲೈನ್ ಬ್ಯಾಂಕಿಂಗ್‌ಗೆ ಪ್ರವೇಶ ಹೊಂದಿದ್ದರೂ ಸಹ, ತಮ್ಮ ಚಿಲ್ಲರೆ ವಹಿವಾಟುಗಳಲ್ಲಿ ಶೇಕಡಾ 90ರಷ್ಟು ಹಣವನ್ನು ಇನ್ನೂ ನಗದು ರೂಪದಲ್ಲಿ ಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಅನೇಕರು ಇನ್ನು ಕೂಡ ಪಿನ್ ಸಂಖ್ಯೆ ಗೌಪ್ಯತೆ ಅಥವಾ ತಂತ್ರಜ್ಞಾನದ ಬಗ್ಗೆ ಅಪನಂಬಿಕೆ ಹೊಂದಿದ್ದಾರೆ.

ಪ್ರಧಾನಿ ಮೋದಿಯವರ ಮೊದಲ ಅವಧಿಯ ಕಾರ್ಯವೈಖರಿ ಗಮನಿಸಿದರೆ, ಎರಡನೇ ಅವಧಿಯ ಈ ಐದು ವರ್ಷಗಳಲ್ಲಿ ಭಾರತದ ಡಿಜಿಟಲೀಕರಣ ಚಾಲನೆಯಲ್ಲಿ ಯಾವುದೇ ಹಿನ್ನೆಡೆಯ ಸಾಧ್ಯತೆಯಿಲ್ಲ. 2019ರ ಮೇ ತಿಂಗಳ ಮರುಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಮೋದಿ, ತಮ್ಮ ಎರಡನೇ ಅವಧಿ ಮುಗಿಯುವ ಹೊತ್ತಿಗೆ ಭಾರತದ ಆರ್ಥಿಕತೆಯನ್ನು ಸುಮಾರು ಐದು ಟ್ರಿಲಿಯನ್ ಯುಎಸ್ ಡಾಲರ್ ನಷ್ಟು ದ್ವಿಗುಣಗೊಳಿಸುವ ಭರವಸೆ ನೀಡಿದ್ದಾರೆ. ಈ ಪಥದಲ್ಲಿ ಭಾರತ ಈಗಾಗಲೇ ಸಾಧಿಸಿದ ಪ್ರಮಾಣ ಮತ್ತು ವೇಗವನ್ನು ಗಮನಿಸಿದರೆ, ಇದೇನು ಅಸಾಧ್ಯವಲ್ಲವೆನಿಸುತ್ತದೆ.

ಮೂಲ: ಇನ್ಸೀಡ್  ಅನುವಾದ: ಡಾ.ಜ್ಯೋತಿ

Leave a Reply

Your email address will not be published.