ಭಾರತೀಯ ಮನಸ್ಸಿನ ಹಂಬಲ ಮೊನಚಾಗುವುದಲ್ಲ, ಅರಳುವುದು!

ಒಂದು ಮಟ್ಟದಲ್ಲಿ ಮೂರ್ತಿಯವರು ಸತ್ಯವನ್ನೇ ಹೇಳಿದ್ದಾರೆ ಎಂದು ನಾನು ಒಪ್ಪುವೆ. ಆದರೆ ಈ ಸತ್ಯವು ‘ವ್ಯಾವಹಾರಿಕ ಸತ್ಯ! ವ್ಯಾವಹಾರಿಕ ಸತ್ಯವನ್ನೇ ಪಾರಮಾರ್ಥಿಕ ಸತ್ಯವೆಂದು ಬಿಂಬಿಸಲು ಮೂರ್ತಿಯವರು ಯತ್ನಿಸುತ್ತಿದ್ದಾರೆ. ಇದು ಸಮಸ್ಯಾತ್ಮಕ.

– ಲಕ್ಷ್ಮೀಶ ತೋಳ್ಪಾಡಿ 

ನಾರಾಯಣಮೂರ್ತಿಯವರು ನಮ್ಮ ದೇಶದ ಸದ್ಯದ ಪರಿಸ್ಥಿತಿಯ ಬಗೆಗೆ -ಮುಖ್ಯವಾಗಿ ವೈಜ್ಞಾನಿಕ ಸಂಶೋಧನೆಯ ಕ್ಷೇತ್ರದಲ್ಲಿ- ಮತ್ತು ಸರ್ಕಾರೀ ವಲಯದ ನಮ್ಮ ಅಧಿಕಾರೀವರ್ಗದ ಸಂವೇದನಾ ದಾರಿದ್ರ್ಯದ ಬಗೆಗೆ- ಒಟ್ಟು ನಮ್ಮ ಜನರ ಮಾನಸಿಕತೆಯ ಬಗ್ಗೆ ತೀರಾ ನಿರಾಶೆಯನ್ನು ಉಂಟುಮಾಡುವಂಥ ಕೆಲವು ಮಾತುಗಳನ್ನಾಡಿದ್ದಾರೆಂದು ವರದಿಯಾಗಿದೆ. ಒಂದು ಬದಿಯಲ್ಲಿ ಇನ್ನೇನು ಭಾರತ ವಿಶ್ವಗುರುವಾಗುವ ಹೊತ್ತು ಬಂದೇ ಬಿಟ್ಟಿತೆಂಬಂತೆ ಭ್ರಾಮಕ ಅಲೆತೇಲಾಟವನ್ನು ತೇಲಿಬಿಡುತ್ತಿರುವ ಹೊತ್ತಿನಲ್ಲಿ ಇನ್ಫೋಸಿಸ್ ಸ್ಥಾಪಕರ ಈ ಹೇಳಿಕೆ ಹೊರಬಿದ್ದಿದೆ! ಒಳ್ಳೆಯದೇ. ‘ದೊಡ್ಡ ದೊಡ್ಡ ಮಾತಿನ ಬಲೂನು ಹಿಗ್ಗುವಾಗೆಲ್ಲ ನಿಜದ ಸೂಜಿಮೊನೆ ತಾಗಿಸುವುದು’ ಅಗತ್ಯ.

ಸಮಾಜದಲ್ಲಿ ದೊಡ್ಡ ಮನುಷ್ಯರೆನಿಸಿಕೊಂಡವರು ಇಂಥ ಅಪ್ರಿಯ ಸತ್ಯಗಳನ್ನು ಎತ್ತಿ ಆಡಬೇಕು. ಆಡಿ ಜನಸಾಮಾನ್ಯರು ತಮ್ಮದೇ ವಿವೇಚನೆ ಬೆಳೆಸಿಕೊಳ್ಳುವುದಕ್ಕೆ ನೆರವಾಗಬೇಕು ಮತ್ತು ತಾವು ಜನಪ್ರಿಯತೆಯ ಹಿಂದೆ ಹೋಗುವವರಲ್ಲ ಎಂದು ತೋರಿಸಬೇಕು. ಈತ್ತೀಚೆಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದ ಅಭಿಜಿತ್ ಬ್ಯಾನರ್ಜಿಯವರು ತಾವು ಭಾರತದಲ್ಲೇ ಇರುತ್ತಿದ್ದರೆ ತಮಗೆ ನೊಬೆಲ್ ಪಡೆಯಲಾಗುತ್ತಿರಲಿಲ್ಲವೆಂದು ಇಲ್ಲಿನ ಅವ್ಯವಸ್ಥೆಯ ಬಗೆಗೆ ಸೂಚಕವಾದ ಒಂದು ಮಾತು ಹೇಳಿದ್ದಾರೆ. ಈ ಮಾತು ಒಟ್ಟೂ ನಮ್ಮ ವ್ಯವಸ್ಥೆಯ ಬಗ್ಗೆ ಮುಖ್ಯವಾಗಿ ಶಿಕ್ಷಣ ವ್ಯವಸ್ಥೆಯ ಬಗ್ಗೆ- ನಾರಾಯಣಮೂರ್ತಿಯವರ ಹೇಳಿಕೆಯನ್ನು ಹೌದು ಹೌದೆನ್ನುತ್ತಿದೆ.

ಈ ಕಟುವಾಸ್ತವವನ್ನು ನಾವು ಎದುರಿಸಲೇಬೇಕು. ನಮ್ಮ ಅನುದಿನದ ಅನುಭವದಲ್ಲಿ ಬಂದೆರಗುವ, ನಮ್ಮನ್ನು ಕುಗ್ಗಿಸುವ ಸತ್ಯಗಳನ್ನು ಮರೆಮಾಚಿ ನಾವು ಸಾಧಿಸುವುದಾದರೂ ಏನು? ಆದುದರಿಂದ ಒಂದು ಮಟ್ಟದಲ್ಲಿ ಮೂರ್ತಿಯವರು ಸತ್ಯವನ್ನೇ ಹೇಳಿದ್ದಾರೆ ಎಂದು ನಾನು ಒಪ್ಪುವೆ, ಆದರೆ ಈ ಸತ್ಯವು ‘ವ್ಯಾವಹಾರಿಕ ಸತ್ಯ’! ವ್ಯಾವಹಾರಿಕ ಸತ್ಯವನ್ನೇ ಪಾರಮಾರ್ಥಿಕ ಸತ್ಯವೆಂದು ಬಿಂಬಿಸಲು ಮೂರ್ತಿಯವರು ಯತ್ನಿಸುತ್ತಿದ್ದಾರೆ. ಇದು ಸಮಸ್ಯಾತ್ಮಕ.

ನಮ್ಮನ್ನು ಕ್ರಿಯಾಶೀಲರನ್ನಾಗಿಸುವುದಕ್ಕೆ, ಸ್ಪರ್ಧಾತ್ಮಕವಾಗಿ ಚಿಂತಿಸಿ ಮುಂದುವರೆಯುವ ಉತ್ಸಾಹಿಗಳನ್ನಾಗಿಸುವುದಕ್ಕೆ, ಹೆಚ್ಚು ಹೆಚ್ಚು ಅರ್ಹರಾಗುತ್ತ ಹೋಗುವಂತೆ ಮಾಡುವುದಕ್ಕೆ ಭಾರತೀಯ ಸಂಸ್ಕೃತಿ ವಿಫಲವಾಗಿದೆ ಎಂದು ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಎರಡು-ಮೂರು ಸಾವಿರ ವರ್ಷಗಳಿಂದಲೂ ಭಾರತೀಯ ಸಂಸ್ಕೃತಿಯು ಇಂಥ ವಿಪರಿಣಾಮವನ್ನು ಬೇರುಮಟ್ಟದಲ್ಲಿ ಬೀರುತ್ತ ಬಂದಿದೆಯಾಗಿ ಇಂಥ ಮಾನಸಿಕತೆಯನ್ನು ಸರಿಪಡಿಸಲು ಅಂದರೆ ಸದ್ಯದ ಪಶ್ಚಿಮದ ಮಾದರಿಯಲ್ಲಿ ಹೊಸದಾಗಿ ರೂಪಿಸಲು ಇನ್ನು ಎರಡು-ಮೂರು ಸಾವಿರ ವರ್ಷಗಳಾದರೂ ಬೇಕು ಎಂದು ಕೂಡ ಹೇಳಿದ್ದಾರೆ!

ಇವೆಲ್ಲ ಬೀಸು ಹೇಳಿಕೆಗಳು. ಸದ್ಯೋಭವಿಷ್ಯದಲ್ಲಿ ಈ ಮಾನಸಿಕತೆ ಸುಧಾರಿಸುವಂಥದ್ದಲ್ಲ ಎಂಬ ಕಡುನಿರಾಶೆಯಿಂದ ಬಂದ ಮಾತುಗಳು. ಅವರೇ ಹೇಳುವ ಸ್ಪರ್ಧಾತ್ಮಕತೆ, ಕಾರ್ಯೋತ್ಸಾಹ, ಅರ್ಹತೆ ಗಳಿಸಿಕೊಳ್ಳುವ ಧೋರಣೆಗೆ ವಿರುದ್ಧವಾದ ಮಾತುಗಳು! ಇವೆಲ್ಲದಕ್ಕಿಂತ ಹೆಚ್ಚಾಗಿ ಸಂಸ್ಕೃತಿಯ ಕುರಿತು ಸಮಗ್ರ ಅನುಸಂಧಾನವಿಲ್ಲದ ಕೆಲವು ಪೂರ್ವಗ್ರಹಗಳಿಂದ ಬಳಲುತ್ತಿರುವ ಚಿಂತನೆಗಳು. ಏಕೆಂದರೆ-

ಈ ಸಾಮಥ್ರ್ಯವು ಪ್ರಕಟವಾಗುವುದು ಬಹುಕೆಟ್ಟ ಕಾಲ ಎಂದು ನಾವು ಭಾವಿಸುವ ಕಾಲದಲ್ಲಿಯೇ- ಎಂಬುದು! ಅಂದರೆ ಒಂದು crisis ಹೊತ್ತಿನಲ್ಲಿಯೇ, ಮೌಲ್ಯಗಳು ಪತನಗೊಳ್ಳುತ್ತಿರುವ ಸಂದರ್ಭದಲ್ಲಿಯೇ, ನಮ್ಮೊಳಗಿನ ಅಗೋಚರ ಸತ್ತ್ವಗಳು ಪ್ರಕಟಗೊಳ್ಳುವವು- ಎಂಬುದು!

ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಗ್ರಹಿಕೆ ಎಂದರೆ ತನ್ನನ್ನು ತಾನು ಪುನರುಜ್ಜೀವನ ಮಾಡಿಕೊಳ್ಳುವ, ಹಳಿ ತಪ್ಪಿದ್ದು ಮರಳಿ ಹಳಿಯಲ್ಲಿ ಬಂದು ನಿಲ್ಲುವ; ಮತ್ತೆ ಹೊಸದಾಗುವ; ಸಾಮಥ್ರ್ಯವು ಈ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ ಎಂಬುದು. ಈ ಸಾಮಥ್ರ್ಯವು ಪ್ರಕಟವಾಗುವುದು ಬಹುಕೆಟ್ಟ ಕಾಲ ಎಂದು ನಾವು ಭಾವಿಸುವ ಕಾಲದಲ್ಲಿಯೇ- ಎಂಬುದು! ಅಂದರೆ ಒಂದು crisis ಹೊತ್ತಿನಲ್ಲಿಯೇ, ಮೌಲ್ಯಗಳು ಪತನಗೊಳ್ಳುತ್ತಿರುವ ಸಂದರ್ಭದಲ್ಲಿಯೇ, ನಮ್ಮೊಳಗಿನ ಅಗೋಚರ ಸತ್ತ್ವಗಳು ಪ್ರಕಟಗೊಳ್ಳುವವು- ಎಂಬುದು!

ಧರ್ಮದ ಗ್ಲಾನಿಯಾದಾಗಲೆಲ್ಲ ಅದನ್ನು ಮತ್ತೆ ಮೇಲೆತ್ತಲು ಕಾಲಕಾಲಕ್ಕೆ ನಾ ಬರುವೆನೆಂದು ಗೀತೆಯಲ್ಲಿ ಕೃಷ್ಣನು ಹೇಳಿದ ಮಾತೆಂದಲ್ಲ, ಗೀತೆಗೂ ಪೂರ್ವದ ಉಪನಿಷತ್ತಿನಲ್ಲಿ- ನಚಿಕೇತನ ಪ್ರಕರಣದಲ್ಲಿ ಈ ಚಿತ್ರ ಇನ್ನಷ್ಟು ಸ್ಫುಟವಾಗಿದೆ. ತನ್ನ ತಂದೆಯೇ ಯಜ್ಞದಲ್ಲಿ ದಾನಾರ್ಹವಲ್ಲದ ಹಸುಗಳನ್ನು ದಾನ ನೀಡುತ್ತಿರುವ ಹೊತ್ತಿನಲ್ಲಿ, ಅಂದರೆ ಕರ್ಮಕಾಂಡವು ಅಷ್ಟು ಪೂರ್ವಕಾಲದಲ್ಲಿಯೇ ಅರ್ಥವನ್ನು ಕಳಕೊಂಡ ಹೊತ್ತಿನಲ್ಲಿ, ಮಗನಾದ ಇನ್ನೂ ಬಾಲಕನಾದ, ನಚಿಕೇತನಲ್ಲಿ ‘ಶ್ರದ್ಧೆ’ಯ ಆವೇಶವೊಂದು ಉಂಟಾಯಿತು- ಎನ್ನುವುದು ಉಪನಿಷತ್ತಿನ ಮಾತು. ಹಾಗೆ ಒಳಗಿನಿಂದಲೇ ಎಚ್ಚರಗೊಂಡ ನಚಿಕೇತ, ‘ನನ್ನನ್ನು ಯಾರಿಗೆ ಕೊಡುವೆ’ ಎಂದು ತಂದೆಯನ್ನು ಕೇಳಿದನಂತೆ. ತನ್ನನ್ನು ಯಾರಿಗೆ ಕೊಡುವೆನೆನ್ನುವ ಮಾತು ತೀರ ಹೊಸ ಮಾತು! ‘ಶ್ರದ್ಧೆ’ ಎಚ್ಚರಗೊಂಡಾಗ ನುಡಿಗಟ್ಟು ಬದಲಾಗುವುದು! ಅದು ನೀನು ತಪ್ಪು ಮಾಡುತ್ತಿರುವೆನೆಂದು ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವ ಮಾತಿಗಿಂತ ಹೆಚ್ಚಾಗಿ, ಈ ವಿಪರ್ಯಾಸವನ್ನು ನಾನು ನೋಡಲಾರೆನೆಂದು, ಇದು ತನಗೆ ಜೀವನ್ಮರಣ ಪ್ರಶ್ನೆಯಾಗಿದೆ ಎಂದು, ನಿನ್ನ ಮಾದರಿಯನ್ನು ಅನುಸರಿಸಲಾರೆನಾಗಿ ನನ್ನದೇ ಮಾದರಿಯೊಂದನ್ನು ಕಂಡುಕೊಳ್ಳಬೇಕಾಗಿದೆ ಎಂದು, ಆ ಮಾದರಿಯು ನನ್ನೊಳಗಿನಿಂದಲೇ ಮೂಡಿ ಬರಬೇಕಿದೆ- ಎಂಬೆಲ್ಲ ಅರ್ಥಗಳನ್ನು ಸೂಚಿಸುತ್ತದೆ. ತಂದೆಯ ಅವನತಿಯನ್ನು ಕಾಣಲಾಗದ ಮಗನ ಚಿತ್ರವಿದು. ಅಂಥ ತಂದೆಯ ಒಳಗಿನಿಂದಲೇ ಇಂಥ ಮಗನು ಮೂಡಿ ಬರುವನೆಂದು ಸೂಚಿಸುವ ಚಿತ್ರವಿದು!

ಈ ಬಗೆಯ ಹಿಂದಣ ಕಥೆಗಳ ಮಾತಿರಲಿ. ಬ್ರಿಟಿಷ್ ಭಾರತದಲ್ಲಿ -ಅಂದರೆ ಗುಲಾಮೀ ಭಾರತದಲ್ಲಿ- ಎಷ್ಟು ಜನ ಆತ್ಮಜ್ಞಾನಿಗಳು ಮೂಡಿಬಂದರು! ಪರಮಹಂಸ ರಾಮಕೃಷ್ಣರು, ನಾರಾಯಣಗುರುಗಳು, ವಿವೇಕಾನಂದ, ರಮಣ ಮತ್ತು ಗಾಂಧಿ ಕೂಡ. ಇನ್ನೂ ನಮಗೆ ತಿಳಿಯದ ಅಸಂಖ್ಯ ಜ್ಞಾನಿಗಳು! ಬ್ರಿಟಿಷ್ ದಾಸ್ಯವೇನೋ ದಾರುಣವಾದದ್ದೇ. ಆದರೆ ಅಂಥ ದಾರುಣ ಸನ್ನಿವೇಗಳು ಇಂಥ ಅಸಾಧಾರಣ ವ್ಯಕ್ತಿಗಳು ಪ್ರಕಟವಾಗುವುದಕ್ಕೆ ಅಡ್ಡಿಯಾಗಲಿಲ್ಲ! ಇದೊಂದು ಆಶ್ಚರ್ಯ! ಇಂದಿಗೂ -ತಮ್ಮ ಕಾಲವನ್ನೂ ಮೀರಿ- ಈ ಮಹಾವ್ಯಕ್ತಿಗಳು ಜಗತ್ತಿನಾದ್ಯಂತ ಇನ್ನೂ ಪ್ರಭಾವ ಬೀರುತ್ತಿರುವುದು ಸುಳ್ಳಲ್ಲವಲ್ಲ! ಮೂರ್ತಿಯವರ ಮಾತನ್ನೇ ಇನ್ನೊಮ್ಮೆ ಹೇಳುವುದಾದರೆ ಇನ್ನು ಎರಡು-ಮೂರು ಸಾವಿರ ವರ್ಷಗಳ ತನಕವೂ ಇವರ ಪ್ರಭಾವ ಮುಂದುವರೆಯಬಹುದು!

ತಾತ್ತ್ವಿಕವಾಗಿ ಮೂರ್ತಿಯವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅಸಾಧ್ಯ. ಏಕೆಂದರೆ ಈ ಕೆಳಗಿನ ಮಾತುಗಳನ್ನು ಮೂರ್ತಿಯವರು ಆಳವಾಗಿ, ಸಹಾನುಭೂತಿಯಿಂದ ನೋಡಲಾರರು. ಆ ಮಾತುಗಳೆಂದರೆ-

ಇನ್ನೊಂದು ಮಾದರಿಯನ್ನು ಅನುಸರಿಸುವುದರಿಂದ ಅಲ್ಲ, ಈ ಬದುಕಿನಲ್ಲಿಯೇ ಇರುವ ಅಂದರೆ ನಮ್ಮಲ್ಲಿಯೇ ಇರುವ ದ್ವಂದ್ವಗಳನ್ನು ಆಳವಾಗಿ ಅರಿಯುವುದರಿಂದ ನಮ್ಮೊಳಗಿನ ‘ಸತ್ಯ’ದ ಅರಿವಾಗುವುದು. ಉದಾ: ಬದುಕು-ಸಾವುಗಳೆಂಬ ದ್ವಂದ್ವದಲ್ಲಿ ಸಾವಿನ ಪ್ರಶ್ನೆಯು ತನ್ನನ್ನು ತೀವ್ರವಾಗಿ ಬಾಣದಂತೆ ನಾಟಿದ್ದರಿಂದ, ಆ ಪ್ರಶ್ನೆಯ ಮೂಲಕ ತನ್ನನ್ನು ತಾನು ಶೋಧಿಸಿಕೊಳ್ಳಲು ಅನುವಾಗಿ ಸಿದ್ಧಾರ್ಥನು ಬುದ್ಧನಾದನು. ಅವನು ಯಾವ ಮಾದರಿಯನ್ನೂ ಅನುಸರಿಸಲಿಲ್ಲ. ವೇದಗಳ ಮಾದರಿಯನ್ನೂ ಕೂಡ.

ಸೌಕರ್ಯಗಳ ಆಮಿಷಕ್ಕೆ ಒಳಗಾಗದಷ್ಟು ಎಚ್ಚರವಿರಬೇಕು. ಈ ಸೂಕ್ಷ್ಮಗ್ರಾಹಿ ಕೆಲಸವನ್ನು ಗಾಂಧೀಜಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಮಾಡಿದ್ದಾರೆ. ಮೂರ್ತಿಯವರು ಈಗಾಗಲೇ ಈ ಕೃತಿಯನ್ನು ಓದಿರದಿದ್ದರೆ ದಯವಿಟ್ಟು ಓದಿ ಪರಿಶೀಲಿಸಬೇಕು ಮತ್ತು ಪಶ್ಚಿಮದ ನಾಗರಿಕತೆಗೆ ಇರುವ ಕರಾಳ ಇತಿಹಾಸವನ್ನೂ ಬಿಚ್ಚುಮನದಿಂದ ನೋಡಬೇಕು.

ತನ್ನ ಅರಿವು ತನ್ನಲ್ಲೇ ಇದೆ. ಅಡಗಿದೆ. ಅಥವಾ ಅಡಗಿರುವಂತಿದೆ. ಅದು ತನ್ನದೇ ಆದುದರಿಂದ ಅದನ್ನು ಪಡೆಯಲೇಬೇಕಿದೆ. ಅದಕ್ಕೆ ಕಾಲ-ದೇಶಗಳ ಯಾವ ವೈಪರೀತ್ಯವೂ ಅಡ್ಡಿಯಲ್ಲ. ಅಡ್ಡಿಯಾಗುವುದಾದರೆ ಕಾಲ, ದೇಶಗಳ ಪ್ರಭಾವಕ್ಕೆ ಸಿಕ್ಕಿ ತೀರ ಬಹಿರ್ಮುಖವಾದ ತಾನೇ ಅಡ್ಡಿ ತನಗೆ!

ಬಹಿರ್ಮುಖವಾದ ನಾಗರಿಕತೆ ಆಕ್ರಮಣಕಾರಿಯಾಗುವುದು ಸಹಜವಾಗಿದೆ. ಆದುದರಿಂದ ನಾಗರಿಕತೆಗಳನ್ನು ವಿಮರ್ಶೆಗೆ ಒಳಪಡಿಸಲೇಬೇಕು. ವಿಮರ್ಶಿಸಬೇಕಾದರೆ ಅದು ಒದಗಿಸುವ ಸವಲತ್ತುಗಳ ಹಿಂದೆ ಇರುವ ನಿಜವಾದ ಉದ್ದೇಶವೇನೆಂದು ಅರಿಯುವ ಸೂಕ್ಷ್ಮತೆ ಬೇಕು. ಆ ಸೌಕರ್ಯಗಳ ಆಮಿಷಕ್ಕೆ ಒಳಗಾಗದಷ್ಟು ಎಚ್ಚರವಿರಬೇಕು. ಈ ಸೂಕ್ಷ್ಮಗ್ರಾಹಿ ಕೆಲಸವನ್ನು ಗಾಂಧೀಜಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಮಾಡಿದ್ದಾರೆ. ಮೂರ್ತಿಯವರು ಈಗಾಗಲೇ ಈ ಕೃತಿಯನ್ನು ಓದಿರದಿದ್ದರೆ ದಯವಿಟ್ಟು ಓದಿ ಪರಿಶೀಲಿಸಬೇಕು ಮತ್ತು ಪಶ್ಚಿಮದ ನಾಗರಿಕತೆಗೆ ಇರುವ ಕರಾಳ ಇತಿಹಾಸವನ್ನೂ ಬಿಚ್ಚುಮನದಿಂದ ನೋಡಬೇಕು.

ಭಾರತೀಯ ಪರಂಪರೆಯ ಸಾರವನ್ನು ಈ ಎರಡು ಪದಗಳಲ್ಲಿ ಸಂಗ್ರಹಿಸಬಹುದು. ‘ಮೊನಚಾಗುವುದಲ್ಲ’-‘ಅರಳುವುದು’- ಎಂಬೆರಡು ಪದಗಳು. ಮೊನಚಾಗುವುದೆಂದರೆ- ತಾನು ಲೋಕದ ಕೇಂದ್ರವಾಗಬೇಕೆಂಬ ಒಳಗುದಿ. ಈಗ ಯಾರು ಲೋಕದ ಕೇಂದ್ರವೆಂಬಂತೆ ತಾನು ಭಾವಿಸಿದ್ದೇನೋ ಅವರಂತಾಗಬೇಕೆಂಬ ಸಾಧನೆ, ಹಟಸಾಧನೆ. ಹಾಗಾಗಲು ಸಾಧ್ಯವಾಗದಿದ್ದರೆ ಕೀಳರಿಮೆಯ ಅನುಭವ, ತನ್ನಲ್ಲಿಯೇ ತಾನು ಗುಲಾಮ! ಈ ಸಾಧನೆಯ ಹಾದಿಯಲ್ಲಿ ಭಿನ್ನವಾದ; ಅನ್ಯವಾದ ಯಾವುದನ್ನೂ ಗಮನಿಸದ, ಕಣ್ಣು ಕಪ್ಪಡಿ ಕಟ್ಟಿದ ಕುದುರೆಯಂಥ ನಡಿಗೆ. ಒಂದು ಬಗೆಯ ಮತಾಂಧತೆಯಿಂದ ಹುಟ್ಟಿಕೊಳ್ಳುವ ಬುದ್ಧಿ-ವಾಕ್-ಸ್ನಾಯುಗಳ ಬಲ. ಈ ಬಲಗಳಿಗೆ ತಾನೇ ಮಾರುಹೋದ ಅಂತರಂಗ!

ಮೊನಚಾಗುವುದೆಂದರೆ ಇದು. ನಾರಾಯಣಮೂರ್ತಿಯವರೆಂದರೇನು? ಹೆಚ್ಚಿನ ಎಲ್ಲರೂ ಮೆಚ್ಚುವುದು ಈ ಮಾದರಿಯನ್ನೇ. ಅಷ್ಟು ಆಕರ್ಷಕ! ಆದರೆ ಭಾರತೀಯ ಮನಸ್ಸು ಈ ಸಾಧ್ಯತೆಯನ್ನು ಒಪ್ಪಿಯೂ ನೇತಿ, ನೇತಿ, ಇದಲ್ಲ, ಹೀಗಲ್ಲ ಎಂದು ಬಹು ಹಿಂದಿನಿಂದಲೇ ಹೇಳುತ್ತ ಬಂದಿದೆ. ಇದೇ ನೇತಿವಾದ ಮೊನಚಾಗುವುದಲ್ಲ ಎಂದೊಪ್ಪಿದರೆ ಮತ್ತೇನು ಸಾಧ್ಯತೆ ಉಳಿಯುತ್ತದೆ? ಆ ಸಾಧ್ಯತೆಯನ್ನು ‘ಅರಳುವುದು’ ಎನ್ನಬಹುದು. ಹೂ ಅರಳಿದಂತೆ. ಡಿ.ವಿ.ಜಿ. ಹೇಳಿದಂತೆ ವನಸುಮದೊಲೆÉನ್ನ ಜೀವನವು ವಿಕಸಿಸುವಂತೆ. ಉದ್ಯಾನದಲ್ಲಿ ನೆಟ್ಟು ಬೆಳೆಸಿದ ಗುಲಾಬಿಯಂತೆಯೂ ಅಲ್ಲ, ಕಾಡಿನ ಹೂವಿನಂತೆ.

ಹೂ ಅರಳುವುದನ್ನು ಒಂದು ಸಾಧನೆ ಎನ್ನಬಹುದೇ? ಪ್ರಕೃತಿಯಲ್ಲಿ ಎಲ್ಲದರಂತೇ ಇರುವ ಮನುಷ್ಯ ಜೀವ ತಾನು ಬದುಕುವುದನ್ನು ಸಾಧನೆ ಎಂದುಕೊಳ್ಳುವುದೇಕೆ? ಎಲ್ಲೋ ಏನೋ ತಪ್ಪಾಗಿದೆ. ಗುರಿಯೊಂದು ನಮ್ಮ ಕಣ್ಣ ಮುಂದಿರಬೇಕೆನ್ನುವುದು ಎಷ್ಟು ನಿಜವೋ, ಕಣ್ಣ ಮುಂದೇ ಗುರಿಯಿದ್ದಾಗ ಅಥವಾ ಕಣ್ಣೆದುರಿನದೇ ಗುರಿಯಾಗಿರುವಾಗ ವಿಚಿತ್ರವೆಂಬಂತೆ- ಸಂಕೋಚವೊಂದು ಸಂಭವಿಸುವುದು! ಬದುಕು ಮೊನಚಾಗುತ್ತ ಹೋಗುವುದು. ಅರಳುವುದಾದರೋ ಒಂದು ಸಹಜವ್ಯಾಪಾರ. ಇನ್ನೊಬ್ಬರು ನೋಡಲೆಂದು ಹೂ ಅರಳುವುದಿಲ್ಲ! ಹಾಗೆಯೇ ನಮಗೆ ಹೂವನ್ನು ನೋಡಲು ಸಾಧ್ಯವಾದರೆ ನಾವೂ ಅರಳಿಕೊಂಡಂತೆಯೇ. ಗುರಿ ಎನ್ನುವ ಪದವನ್ನೇ ಬಳಸಿದರೆ, ಆಗ ನಮಗೆ ನಾವೇ ಗುರಿಯಾಗುವೆವು. ಮೊನಚಾಗುವುದಲ್ಲ- ಎಂದ ಮೇಲೆ ನಮಗೆ ನಾವೇ ಗುರಿಯಾಗುವ ಸಾಧ್ಯತೆಯನ್ನು ಭಾರತೀಯ ಮನಸ್ಸು ಸೂಚಿಸುವುದು. ‘ಸಾಧಾರಣೀಕರಣ’ವೇ ಭಾರತೀಯತೆ!

ನಾರಾಯಯಣಮೂರ್ತಿಯವರು ಮೊನಚಿನತ್ತ ಅಪಾರ ಮೆಚ್ಚುಗೆಯಿಂದ ನೋಡುತ್ತಿದ್ದಾರೆ ಎಂದು ನನಗನ್ನಿಸುವುದು. ಏನು ಮಾಡೋಣ!

*ಲೇಖಕರು ದಕ್ಷಿಣ ಕನ್ನಡದ ಶಾಂತಿಗೋಡಿನವರು, ಕೃಷಿಕರು; ವೇದ, ಉಪನಿಷತ್, ಮಹಾಕಾವ್ಯ, ಪರಿಸರ, ಸೌಂದರ್ಯ, ಭಾರತೀಯ ಸಂಸ್ಕೃತಿ ಕುರಿತಂತೆ ಆಳವಾದ ಅಧ್ಯಯನ ನಡೆಸಿರುವ ಪ್ರಸಿದ್ಧ ವಿದ್ವಾಂಸರು, ಚಿಂತಕರು.

Leave a Reply

Your email address will not be published.