ಭಾರತೀಯ ಸಮಾಜದ ಮರುಸಂಘಟನೆಯ ಪ್ರಶ್ನೆಗಳು

ನಾರಾಯಣಮೂರ್ತಿ ಅವರು ಹೇಳುವ ಭಾರತೀಯ ಸಂಸ್ಕೃತಿ ಯಾವುದು? ಅದರ ಸ್ವರೂಪ ಹೇಗಿದೆ? ಆ ಸಂಸ್ಕೃತಿಯನ್ನು ವಿವರಿಸುವ ಮಾಪನಗಳು ಯಾವುವು? ನಮಗೆ ಗೊತ್ತಿಲ್ಲ. ಆದರೆ ನಮ್ಮ ತಿಳಿವಳಿಕೆಯ ಪ್ರಕಾರ ನಮ್ಮ ದೇಶದಲ್ಲಿ ಅನೇಕ ಬಗೆಯ ಸಂಸ್ಕೃತಿಗಳಿವೆ. ಅವು ಪ್ರತಿಯೊಂದೂ ಸ್ವಾಯತ್ತವಾಗಿವೆ, ಪರಸ್ಪರ ವಿಭಿನ್ನವೂ ಆಗಿವೆ ಮತ್ತು ವಿಶಿಷ್ಟವೂ ಆಗಿವೆ.

– ರಾಜಾರಾಮ ತೋಳ್ಪಾಡಿ, – ನಿತ್ಯಾನಂದ ಬಿ ಶೆಟ್ಟಿ

ಪ್ರತಿಷ್ಠಿತ ಉದ್ಯಮಿಯಾಗಿರುವ ಎನ್.ಆರ್.ನಾರಾಯಣ ಮೂರ್ತಿಯವರ ಮಾತುಗಳ ಹಿಂದಿನ ಪ್ರಾಮಾಣಿಕ ಕಾಳಜಿಯ ಬಗ್ಗೆ ನಮಗೆ ಗೌರವವಿದೆ. ಇದೇ ಮಾದರಿಯ ಮಾತುಗಳನ್ನು ನಮ್ಮ ದೈನಂದಿನ ಮಾತು-ಕತೆಗಳಲ್ಲಿ ಈ ಹಿಂದೆಯೂ ಅನೇಕರು ಆಡಿದ್ದಿದೆ. ಹಾಗಾಗಿ ನಾರಾಯಣಮೂರ್ತಿಯವರ ಮಾತುಗಳಲ್ಲಿ ಬೆಕ್ಕಸ ಬೆರಗಾಗುವಂತಹ ಅಂಶಗಳೇನೂ ಇಲ್ಲ. ಆದರೆ ಈ ಮಾತುಗಳನ್ನು ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಆಸಕ್ತಿಯಿಂದ ಬೆರೆಯುವ ಓರ್ವ ಉದ್ಯಮಿ ಆಡಿರುವುದರಿಂದ ಇವುಗಳಿಗೆ ಹೆಚ್ಚಿನ ತೂಕ ಬಂದಿದೆ ಮತ್ತು ಚರ್ಚೆಗೆ ಮುಕ್ತವಾಗಿದೆ.

ನಾರಾಯಣಮೂರ್ತಿಯವರು ಆಡಿರುವ ಮಾತುಗಳಲ್ಲಿ ಖೇದವೂ ಇದೆ, ಹಾಗೆಯೇ ಒಳಿತಿನ ಹಂಬಲವೂ ಇದೆ.  ಇವೆಲ್ಲವೂ ಸರಿಯೇ. ಆದರೆ ಅವರ ಮಾತುಗಳು ಸಂಕೀರ್ಣವಾದ ವಿದ್ಯಮಾನದ ಆಳ-ಅಗಲಗಳನ್ನು ಅರಿಯದೆ ಆಡಿದ ಸರಳ ಮಾತುಗಳೂ ಆಗಿವೆ ಎಂಬುದನ್ನು ಇಲ್ಲಿ ವಿಶೇಷವಾಗಿ ಒತ್ತಿ ಹೇಳಬೇಕಾಗಿದೆ.

ನಾರಾಯಣಮೂರ್ತಿಯವರ ಪ್ರಕಾರ ‘ಭಾರತೀಯ ಸಂಸ್ಕೃತಿ’ ಎಂಬ ಒಂದು ಸಿದ್ಧವಸ್ತು ಇದೆ. ಅದು ಈ ದೇಶದ ಜನರಲ್ಲಿ ಪ್ರಾಮಾಣಿಕತೆ, ಅರ್ಹತೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಸೋತುಹೋಗಿದೆ. ನಮ್ಮ ದೇಶದ ವೈಜ್ಞಾನಿಕ ಸಂಶೋಧನೆ ಇನ್ನೂ ಬಾಲ್ಯಾವಸ್ಥೆಯಲ್ಲೇ ಇದೆ. ಇಲ್ಲಿಯ ಜನರಿಗೆ ದೇಶದ ಬಗ್ಗೆ ಹೆಮ್ಮೆ ಇಲ್ಲದೆ ನಿರ್ಲಕ್ಷ್ಯವೇ ತುಂಬಿಕೊಂಡಿದೆ. ಇವೆಲ್ಲವೂ ಸರಿಹೋಗಲು ಸುಮಾರು ಮೂರು ಸಾವಿರ ವರ್ಷಗಳು ಬೇಕಾಗಬಹುದು.

ಈಗ ಇಲ್ಲಿಯ ಪ್ರತಿಯೊಂದು ಅಂಶವನ್ನೂ ಎತ್ತಿಕೊಂಡು ಇವುಗಳಲ್ಲಿ ಇರುವ ಸಮಸ್ಯೆಗಳನ್ನು ಕುರಿತು ವಿಚಾರ ಮಾಡೋಣ.

ನಾರಾಯಣಮೂರ್ತಿಗಳು ಹೇಳುವ ಭಾರತೀಯ ಸಂಸ್ಕೃತಿ ಯಾವುದು? ಅದರ ಸ್ವರೂಪ ಹೇಗಿದೆ? ಆ ಸಂಸ್ಕೃತಿಯನ್ನು ವಿವರಿಸುವ ಮಾಪನಗಳು ಯಾವುವು? ನಮಗೆ ಗೊತ್ತಿಲ್ಲ. ಆದರೆ ನಮ್ಮ ತಿಳಿವಳಿಕೆಯ ಪ್ರಕಾರ ಈ ನಮ್ಮ ದೇಶದಲ್ಲಿ ಅನೇಕ ಬಗೆಯ ಸಂಸ್ಕೃತಿಗಳಿವೆ. ಅವು ಪ್ರತಿಯೊಂದೂ ಸ್ವಾಯತ್ತವಾಗಿವೆ, ಪರಸ್ಪರ ವಿಭಿನ್ನವೂ ಆಗಿವೆ ಮತ್ತು ವಿಶಿಷ್ಟವೂ ಆಗಿವೆ. ಈ ದೇಶದ ಪ್ರಶ್ನೆ ಬಂದಾಗ ಅವೆಲ್ಲವೂ ಒಟ್ಟಾಗಿಯೂ ನಿಂತಿವೆ. ಆದರೆ ಅವು ಪರಸ್ಪರ ವಿರುದ್ಧ ಸ್ಥಾನಗಳಲ್ಲಿ ನಿಂತು ಒಂದನ್ನೊಂದು ದುರುಗುಟ್ಟಿಕೊಂಡು ನೋಡುವಂತಹ ಸಾಮಾಜಿಕ ಸನ್ನಿವೇಶವನ್ನು ನಾವು ನಿರ್ಮಿಸಿದ್ದೇವೆಯೇ ಹೊರತು ಆಯಾ ಸಂಸ್ಕೃತಿಯನ್ನು ಹೊಂದಿರುವ ಜನರ ನಡುವೆ ಯಾವುದೇ ಬಗೆಯ ಜನ್ಮಜಾತ ದ್ವೇಷಾಸೂಯೆ ಇತ್ಯಾದಿಗಳು ಇಲ್ಲ. 

ಪಶ್ಚಿಮ ಮತ್ತು ಪೂರ್ವಗಳ ಸಂಸ್ಕೃತಿಯನ್ನು ಹೀಗೆ ಸರಳವಾಗಿ ಭಾವಿಸಿ ಮುಖಾಮುಖಿ ಮಾಡುವುದು ಸಮಸ್ಯಾತ್ಮಕವಾದ ಮತ್ತು ಅಷ್ಟೇ ಜನಪ್ರಿಯವಾದ ಬೈನರಿಯಾಗಿದೆ.

ನಾವು ಯಾವುದೇ ಸಂಸ್ಕೃತಿಯನ್ನು ಮೌಲ್ಯಮಾಪನ ಮಾಡುವಾಗ ಅದನ್ನು ಆಯಾ ಸಂಸ್ಕೃತಿಯ ಚೌಕಟ್ಟಿನೊಳಗಿನಿಂದಲೇ ಮಾಡಬೇಕು. ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ಮತ್ತು ಮೌಲ್ಯಮಾಪನ ಯಾವತ್ತೂ ಸಮಸ್ಯಾತ್ಮಕವೇ. ಹಾಗಿರುವಾಗ ಯಾವ ಅರ್ಥದಲ್ಲೂ ಮತ್ತು ಯಾವ ನೆಲೆಯಲ್ಲೂ ಸಮಾನ ಬಿಂದುಗಳಲ್ಲಿ ನಿಂತಿರದ ಭಾರತದ ಮತ್ತು ಯುರೋಪ್‍ನ ಸಂಸ್ಕೃತಿಗಳನ್ನು ನಾವು ಸಮಾನ ಪಾತಳಿಗೆ ತಂದು ‘ಇದು ಶ್ರೇಷ್ಠ’ ಮತ್ತು ‘ಇದು ಕನಿಷ್ಠ’ ಎಂದು ಹೇಳುವುದು ಬೀಸುಮಾತು (ಸ್ವೀಪಿಂಗ್ ಸ್ಟೇಟ್‍ಮೆಂಟ್) ಆಗುತ್ತದೆ. ಪಶ್ಚಿಮ ಮತ್ತು ಪೂರ್ವಗಳ ಸಂಸ್ಕೃತಿಯನ್ನು ಹೀಗೆ ಸರಳವಾಗಿ ಭಾವಿಸಿ ಮುಖಾಮುಖಿ ಮಾಡುವುದು ಸಮಸ್ಯಾತ್ಮಕವಾದ ಮತ್ತು ಅಷ್ಟೇ ಜನಪ್ರಿಯವಾದ ಬೈನರಿಯಾಗಿದೆ.

ಇವುಗಳ ಜೊತೆಗೆ ನಾವು ಮರೆಯಬಾರದ ಇನ್ನೊಂದು ಸಂಗತಿ ಇದೆ. ಅದೇನೆಂದರೆ ಭಾರತದ ಸಂಸ್ಕೃತಿಗಳ ಬಗ್ಗೆ ನಾವು ಯಾವುದೇ ಬಗೆಯ ಮೌಲ್ಯಮಾಪನಾತ್ಮಕವಾದ ಮಾತುಗಳನ್ನು ಆಡುವಾಗ ಅಥವಾ ನಮ್ಮ ತೀರ್ಮಾನಗಳನ್ನು ಕೊಡುವಾಗ ಕಳೆದ ಮುನ್ನೂರು ವರ್ಷಗಳಿಂದ ನಮ್ಮಲ್ಲಿ ವಸಾಹತುಶಾಹಿ ಉಂಟುಮಾಡಿದ ಆಳವಾದ ಗಾಯಗಳನ್ನು, ತಂದ ಬದಲಾವಣೆಗಳನ್ನು, ಪಲ್ಲಟಗೊಳಿಸಿದ ನಮ್ಮ ಬದುಕಿನ ಮತ್ತು ಯೋಚನೆಯ ಕ್ರಮಗಳನ್ನು, ನಮ್ಮಲ್ಲಿ ಮೂಡಿಸಿದ ಬೌದ್ಧಿಕ ಸ್ವ-ಹೀನತಾ ಮನೋಭಾವವನ್ನು ಮತ್ತು ತರ-ತಮದ ಮನಸ್ಥಿತಿಯನ್ನು ನಾವು ಯಾಕೆ ಗಮನಿಸುವುದಿಲ್ಲ? ವಸಾಹತುಶಾಹಿಯಿಂದಾಗಿ ನಮ್ಮಲ್ಲಿ ಉದ್ಭವಿಸಿದ ಹೊಸ ಸವಾಲು ಮತ್ತು ಸಮಸ್ಯೆಗಳನ್ನು ನಾವು ಗಣನೆಗೇ ತೆಗೆದುಕೊಳ್ಳದೇ ಪೂರ್ವ ಮತ್ತು ಪಶ್ಚಿಮ ದೇಶಗಳ ಸಂಸ್ಕೃತಿಯ ಲಕ್ಷಣ ಮತ್ತು ಅವಲಕ್ಷಣಗಳ ಬಗ್ಗೆ ಮಾತಾಡುವುದು ಸಮಸ್ಯಾತ್ಮಕ.

ವಸ್ತುಸ್ಥಿತಿ ಹೀಗಿರುವಾಗ ನಾರಾಯಣಮೂರ್ತಿಯವರ ಪ್ರಕಾರ ಯಾವ ಭಾರತೀಯ ಸಂಸ್ಕೃತಿ ನಮ್ಮಲ್ಲಿ ಯಾವ ಬಗೆಯ ಅರ್ಹತೆಯನ್ನು ಕಿರಿದುಗೊಳಿಸಿದೆ? ನಮ್ಮ ಪ್ರಾಮಾಣಿಕತೆಯನ್ನು ನಷ್ಟಗೊಳಿಸಿದೆ ಮತ್ತು ನಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಸೋತಿದೆ? ಈ ಸಂಕೀರ್ಣತೆ ಮತ್ತು ಬಹುರೂಪತೆಯನ್ನು ನಾವು ಗಮನಿಸದೆ ನಮ್ಮ ಸಂಸ್ಕೃತಿ ಪಶ್ಚಿಮದ ಸಂಸ್ಕೃತಿಯ ಜೊತೆಗಿನ ದ್ವಂದ್ವ ಯುದ್ಧದಲ್ಲಿ ಸೋತುಹೋಯಿತು ಎಂದು ಪಂದ್ಯದ ಫಲಿತಾಂಶವನ್ನು ಘೋಷಿಸುವುದು ಹೇಗೆ? 

ದೇಶೀ ವಿಜ್ಞಾನದಲ್ಲಿ ಯಶಸ್ಸನ್ನು ಸಾಧಿಸುವುದು ದೇಶೀ ಉದ್ಯಮಿಗಳ ಕಾಪೆರ್ರೇಟ್ ಬಂಡವಾಳಶಾಹೀ ಹಿತಾಸಕ್ತಿಗೆ ಬಹಳ ಮುಖ್ಯವಾದುದು. ಆದ್ದರಿಂದಲೇ ನಾರಾಯಣಮೂರ್ತಿಯವರಿಗೆ ಭಾರತೀಯ ವಿಜ್ಞಾನದ ಶೈಶವಾವಸ್ಥೆ ಬಹಳ ದೊಡ್ಡ ಸಮಸ್ಯೆಯಾಗಿ ಕಂಡು ಬರುತ್ತದೆ.

ಇನ್ನು ಭಾರತೀಯ ವಿಜ್ಞಾನ ಶೋಚನೀಯ ಸ್ಥಾನದಲ್ಲಿರುವುದನ್ನು ನಾರಾಯಣಮೂರ್ತಿಯವರು ಪ್ರಸ್ತಾವಿಸಿದ್ದಾರೆ. ಪಶ್ಚಿಮದ ವಿಜ್ಞಾನದ ಸಾಧನೆಗಳ ಬಗ್ಗೆ ನಾರಾಯಣಮೂರ್ತಿಯವರು ಪುಳಕಿತಗೊಂಡಿದ್ದಾರೆ. ಆದರೆ ಪಶ್ಚಿಮದಲ್ಲಿ ವಿಜ್ಞಾನ ಸಾಧಿಸಿದ ಅಪಾರ ಪ್ರಮಾಣದ ಸಾಧನೆಗಳ ಜೊತೆಗೆ; ಅಲ್ಲಿ ವಿಜ್ಞಾನದಿಂದಲೇ ಉಂಟಾಗಿರುವ ಬಿಕ್ಕಟ್ಟಿನ ಬಗೆಗೂ ನಾವು ಮಾತಾಡಬೇಕಲ್ಲವೇ? ಹಾಗೆಯೇ ಪಶ್ಚಿಮದ ವೈಜ್ಞಾನಿಕ ಸಾಧನೆಯ ಬಗ್ಗೆ ಹೆಮ್ಮೆ ಪಡುವಾಗ ಅಲ್ಲಿ ಆ ವಿಜ್ಞಾನವನ್ನು ಕೈ ಹಿಡಿದು ಮುನ್ನಡೆಸಿದ್ದು ಆಧುನಿಕ ಬಂಡವಾಳಶಾಹೀ ಹಿತಾಸಕ್ತಿ ಎನ್ನುವುದನ್ನು ಮರೆಯಲು ಸಾಧ್ಯವಾಗುತ್ತದೆಯೇ?

ವಿಜ್ಞಾನದಲ್ಲಿ ನಮ್ಮ ದೇಶ ಸೋತಿದೆ ಎಂದು ನಾರಾಯಣಮೂರ್ತಿಯವರು ಹೇಳುತ್ತಾರೆ. ಹಾಗಾದರೆ ಭಾರತದ ಸಮಾಜವಿಜ್ಞಾನದ ಕ್ಷೇತ್ರದಲ್ಲಿ ಏನಾಗಿದೆ? ದೇಶೀ ವಿಜ್ಞಾನದಲ್ಲಿ ಯಶಸ್ಸನ್ನು ಸಾಧಿಸುವುದು ದೇಶೀ ಉದ್ಯಮಿಗಳ ಕಾಪೆರ್ರೇಟ್ ಬಂಡವಾಳಶಾಹೀ ಹಿತಾಸಕ್ತಿಗೆ ಬಹÀಳ ಮುಖ್ಯವಾದುದು. ಆದ್ದರಿಂದಲೇ ನಾರಾಯಣಮೂರ್ತಿಯವರಿಗೆ ಭಾರತೀಯ ವಿಜ್ಞಾನದ ಶೈಶವಾವಸ್ಥೆ ಬಹಳ ದೊಡ್ಡ ಸಮಸ್ಯೆಯಾಗಿ ಕಂಡು ಬರುತ್ತದೆ.

ನಾವು ಜಗತ್ತಿನ ಒಟ್ಟೂ ಜ್ಞಾನದ ಬಗ್ಗೆ ಕಾಳಜಿಯಿಂದ ಮಾತಾಡುವವರು ಆಗಿದ್ದರೆ; ನಾವು ಎಲ್ಲ ಬೌದ್ಧಿಕ ಶಿಸ್ತುಗಳ ಜ್ಞಾನದ ಬಗ್ಗೆ ಮಾತಾಡಬೇಕು. ಆದರೆ ನಮ್ಮ ಅನೇಕ ಉದ್ಯಮಿಗಳು ಸಮಾಜವಿಜ್ಞಾನದ ಬಗ್ಗೆ ಮಾತೇ ಆಡುವುದಿಲ್ಲ. ಈ ಮೌನದ ಅರ್ಥವೇನು? ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರ ಜ್ಞಾನವೇ? ಸಮಾಜ ವಿಜ್ಞಾನದಲ್ಲಿ ಏನೂ ಜ್ಞಾನವಿಲ್ಲವೇ? ಭಾರತದ ಸಾಮಾಜಿಕ ವಿಜ್ಞಾನಗಳ ಹೀನಾಯ ಸ್ಥಿತಿಯ ಬಗ್ಗೆ ನಾರಾಯಣಮೂರ್ತಿಯವರಿಗೆ ಯಾಕೆ ಕಸಿವಿಸಿ ಆಗುವುದಿಲ್ಲ?

ಇನ್ನು ಅರ್ಹತೆ, ಪ್ರಾಮಾಣಿಕತೆ ಮತ್ತು ಸ್ಪರ್ಧಾತ್ಮಕ ಮನೋಭಾವಗಳ ಕುರಿತಂತೆ ಅವರ ಟೀಕೆ. ಇವುಗಳೆಲ್ಲ ಮೇಲಿಂದ ಕಾಣಿಸುವಷ್ಟು ಸರಳವಾದ ಸಂಗತಿಗಳಲ್ಲ. ಅರ್ಹತೆ, ಪ್ರಾಮಾಣಿಕತೆ ಮತ್ತು ಸ್ಪರ್ಧಾತ್ಮಕತೆಗಳು ಒತ್ತೊತ್ತಾಗಿ ನಿಂತಿರುವುದು ಅಥವ ಇವುಗಳನ್ನು ಒತ್ತಟ್ಟಿಗೆ ತರುವುದು ಖಾಸಗೀಕರಣದ ಕೇಂದ್ರೀಕೃತ ವ್ಯವಸ್ಥೆ. ಸಮಾಜ ಮತ್ತು ಸಂಸ್ಕೃತಿಗಳ ಉಸಾಬರಿಗೆ ಹೋಗದೆ ಅವುಗಳಿಂದ ಹೊರಬರುವ ವ್ಯಕ್ತಿಗಳ ನರಮಂಡಲವನ್ನು ಹಿಡಿಯುವ ಕೆಲಸವನ್ನು ಖಾಸಗೀಕರಣ ಮಾಡುತ್ತದೆ. ಖಾಸಗೀಕರಣ ಪ್ರತ್ಯ-ಪ್ರತ್ಯೇಕ ವ್ಯಕ್ತಿಯನ್ನು ಅಪೇಕ್ಷೆ ಪಡುತ್ತದೆಯೇ ಹೊರತು ಸಮುದಾಯವನ್ನಲ್ಲ. ನಾರಾಯಣಮೂರ್ತಿಯವರು ತಮ್ಮ  ಮಾತುಗಳಲ್ಲಿ ಜನರಿಗೆ ಅರ್ಹತೆ, ಪ್ರಾಮಾಣಿಕತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಇರಬೇಕು ಎಂಬುದನ್ನು ಆಗ್ರಹಿಸುತ್ತಾರೆಯೇ ಹೊರತು ಜನರಿಗೆ ಪ್ರಶ್ನೆ ಮಾಡುವ ಮನೋಭಾವವೂ ಇರಬೇಕು ಎಂಬುದನ್ನು ಪ್ರಸ್ತಾವಿಸುವುದಿಲ್ಲ. ಯಾಕೆಂದರೆ ಖಾಸಗೀಕರಣಕ್ಕೆ ಅಥವಾ ಅದರ ರಾಜಕೀಯ ಮುಂದುವರಿಕೆಯಾಗಿರುವ ಕೇಂದ್ರೀಕರಣಕ್ಕೆ ಪ್ರಶ್ನೆ ಮಾಡುವುದೆಂದರೆ ದ್ರೋಹ ಬಗೆಯುವ ಕೆಲಸವೇ ಆಗಿದೆ.

ಮೂರ್ತಿಯವರು ಹೇಳುವ ಈ ಮೌಲ್ಯಗಳು ನಾವೆಲ್ಲರೂ ಏಕಕಂಠದಲ್ಲಿ ಹಾಡಿಹೊಗಳಬೇಕಾದ ಮೌಲ್ಯಗಳೇನು ಅಲ್ಲ.

ಇನ್ನು ನಾರಾಯಣಮೂರ್ತಿಯವರು ಹೇಳಿದ ಸೋಲು-ಗೆಲುವಿನ ವಿಷಯದ ಬಗ್ಗೆ ಬರೋಣ. ಸೋಲು-ಗೆಲುವುಗಳು ಕಾಪೆರ್ರೇಟ್ ಜಗತ್ತಿನ ಮೌಲ್ಯಮಾಪನಗಳು. ಸ್ಪರ್ಧೆಯಲ್ಲಿ ಮಾತ್ರ ಸೋಲು-ಗೆಲುವು ಇರುತ್ತದೆ. ಈ ಸ್ಪರ್ಧೆ ಎಂಬ ಪರಿಕಲ್ಪನೆಯೇ ಬಂಡವಾಳಶಾಹೀ ಸಮಾಜದ ಮುಖ್ಯ ಲಕ್ಷಣ. ಹಾಗಾಗಿ ನಮ್ಮ ಪ್ರಕಾರ ಇದು ಗೆಲ್ಲುವ ಅಥವಾ ಸೋಲುವ ಪ್ರಶ್ನೆಯಲ್ಲ. ಬದಲಾಗಿ ಎಷ್ಟರಮಟ್ಟಿಗೆ ನಮ್ಮನ್ನು ನಾವು ಯಥಾರ್ಥತೆಯಲ್ಲಿ (ಅಥೆಂಟಿಕ್) ನಿರ್ವಚಿಸಿಕೊಂಡಿದ್ದೇವೆ? ಮತ್ತು ಪ್ರತಿನಿಧಿಸಿಕೊಂಡಿದ್ದೇವೆ? ನಾವು ನಮ್ಮನ್ನು ಯಥಾರ್ಥವಾಗಿ ಪ್ರತಿನಿಧಿಸಿಕೊಳ್ಳದಿರುವುದರಿಂದಲೇ ನಮ್ಮ ಕಡೆಯಿಂದ ಬಹಳ ದೊಡ್ಡ ವೈಫಲ್ಯ ಸಂಭವಿಸಿದೆ. ಹಾಗಾಗಿ ನಾವು ಆಳವಾದ ಒಂದು ಬೌದ್ಧಿಕ ಬಿಕ್ಕಟ್ಟಿನಲ್ಲಿದ್ದೇವೆ (ಕ್ರೈಸಿಸ್). 

ನಾರಾಯಣ ಮೂರ್ತಿಯವರು ಬಲವಾಗಿ ಪ್ರತಿಪಾದಿಸಿರುವ ಈ ಮೌಲ್ಯಗಳು ಪಶ್ಚಿಮದ ಮೌಲ್ಯಗಳು. ಬಹಳ ನಿರ್ದಿಷ್ಟವಾಗಿ ಎನ್‍ಲೈಟನ್‍ಮೆಂಟ್ (ಜ್ಞಾನಪರ್ವ) ಕಾಲದ ಮೌಲ್ಯಗಳು ಮತ್ತು ಔದ್ಯೋಗಿಕ ಕ್ರಾಂತಿಯಿಂದ ತಮ್ಮ ಪ್ರಭಾವಳಿಯನ್ನು ಉಜ್ವಲಗೊಳಿಸಿಕೊಂಡಂತಹ ಮೌಲ್ಯಗಳು. ಮೂರ್ತಿಯವರು ಹೇಳುವ ಈ ಮೌಲ್ಯಗಳು ನಾವೆಲ್ಲರೂ ಏಕಕಂಠದಲ್ಲಿ ಹಾಡಿಹೊಗಳಬೇಕಾದ ಮೌಲ್ಯಗಳೇನು ಅಲ್ಲ. ದೇಶಾಭಿಮಾನದ ಪ್ರಶ್ನೆ ಬಹಳ ದೊಡ್ಡ ಪ್ರಶ್ನೆ. ಅದಕ್ಕೆ ನಿಂತ ನಿಲುವಿನಲ್ಲಿ ಒಂದು ವಾಕ್ಯದ ಉತ್ತರ ಕೊಡಲು ಸಾಧ್ಯವಾಗಲ್ಲ. ಅನ್ನ ಬೆಳೆವ ರೈತನಿಂದ ತೊಡಗಿ, ಮೀನು ಹಿಡಿವ-ಮಾರುವ ಬೆಸ್ತನವರೆಗೆ, ಗಡಿ ಕಾಯುವ ಯೋಧನಿಂದ ತೊಡಗಿ, ಉದ್ಯಮದಲ್ಲಿ ತೊಡಗಿರುವ ಉದ್ಯಮಿಯವರೆಗೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಬುದ್ಧಿಜೀವಿಯಿಂದ ಹಿಡಿದು ಸಂಸದೀಯ ರಾಜಕಾರಣವನ್ನು ನಡೆಸುವ ರಾಜಕಾರಣಿಯವರೆಗೆ ಪ್ರತಿಯೊಬ್ಬರೂ  ಅವರದ್ದೇ ಆದ ನೆಲೆಯಲ್ಲಿ ದೇಶದ ಕೆಲಸಗಳನ್ನು ಮಾಡುವವರೇ ಆಗಿದ್ದಾರೆ. ಇದಕ್ಕೆ ಯಾರೂ ಯಾರಿಗೂ ಸರ್ಟಿಫಿಕೇಟ್ ಕೊಡಬೇಕಾದ ಅಗತ್ಯವೂ ಇಲ್ಲ.

ದೇಶಪ್ರೇಮವೂ ಸೇರಿಕೊಂಡಂತೆ ನಾವು ಎದುರಿಸುತ್ತಿರುವ ಈ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕಾದರೆ ನಾರಾಯಣಮೂರ್ತಿಯವರೂ ಒಳಗೊಂಡಂತೆ ಸುದೀರ್ಘವಾದ ಮತ್ತು ಸಂವಾದಶೀಲವಾದ ಭಾರತೀಯ ಸಮಾಜದ ಮರುಸಂಘಟನೆಯ ಕುರಿತು ನಾವು ಯೋಚಿಸಬೇಕಾಗಿದೆ.

*ರಾಜಾರಾಮ ತೋಳ್ಪಾಡಿಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರು. ನಿತ್ಯಾನಂದ ಬಿ.ಶೆಟ್ಟಿಯವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಇಬ್ಬರೂ ಕಳೆದ ಒಂದು ವರ್ಷದಿಂದ ಸಾರ್ವಜನಿಕ ವಲಯದ ಅನೇಕ ವಿಷಯಗಳ ಬಗ್ಗೆ ಜೊತೆಯಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.                        

Leave a Reply

Your email address will not be published.