ಭಾರತೀಯ ಸಮಾಜವೆಂಬ ಭ್ರಮೆ!

-ಪೃಥ್ವಿದತ್ತ ಚಂದ್ರಶೋಭಿ

ನಮ್ಮ ಸಮಾಜದ ಇತರ ಸದಸ್ಯರ ಮೇಲೆ ನಮಗಿರುವ ನಂಬಿಕೆಯನ್ನು ನಾವು ಜಾತಿಯ ಆಧಾರದ ಮೇಲೆ ತೀರ್ಮಾನಿಸುವುದಾದರೆ, ನಮ್ಮ ಸಾರ್ವಜನಿಕ ನೀತಿಯನ್ನು ರೂಪಿಸುವ ಬಹುಮುಖ್ಯ ಅಂಶಗಳಲ್ಲಿ ಜಾತಿಯೂ ಇರುವುದಾದರೆ ನಾವಿಂದು ಸರಿಯಾದ ಪಥದಲ್ಲಿ ಸಾಗುತ್ತಿಲ್ಲ.

ಸುಮಾರು ನಾಲ್ಕು ದಶಕಗಳ ಹಿಂದಿನ ನನ್ನ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳಬಯಸುತ್ತೇನೆ. ಮೈಸೂರಿನಲ್ಲಿ ವೀರಶೈವ ಮಠಾಧೀಶರ ಸಮ್ಮೇಳನವೊಂದನ್ನು ಸುತ್ತೂರು ಮಠದ ಆವರಣದಲ್ಲಿ ಆಯೋಜಿಸಲಾಗಿತ್ತು. ಹೀಗೆ ಜಾತಿಕೇಂದ್ರಿತ ಸಮ್ಮೇಳನವು ನಡೆಯುವುದು ಸರಿಯಲ್ಲ ಎಂದು ಮೈಸೂರಿನ ಪ್ರಜ್ಞಾವಂತ ನಾಗರಿಕರು ಪ್ರತಿಭಟನಾ ಮೆರವಣಿಗೆಯೊಂದನ್ನು ನಡೆಸಿದರು.

ಮೈಸೂರಿನಲ್ಲಿ ಇಂತಹ ಮೆರವಣಿಗೆಗಳು ಪ್ರಾರಂಭವಾಗುವುದು ರಾಮಸ್ವಾಮಿ ವೃತ್ತದಿಂದ. ನೂರಡಿ ರಸ್ತೆಯ ಒಂದು ತುದಿಯಲ್ಲಿರುವ ರಾಮಸ್ವಾಮಿ ವೃತ್ತದಿಂದ ಮತ್ತೊಂದು ತುದಿಯಲ್ಲಿರುವ ಸುತ್ತೂರು ಮಠದ ಆವರಣದವರಗೆ ನೂರಾರು ಜನರು ಮೌನವಾದ ಪ್ರತಿಭಟನೆಯೊಂದನ್ನು ನಡೆಸಿ ತಮ್ಮ ಮನೆಗಳಿಗೆ ಹೋದರು. ನನ್ನ ಸಾಮಾಜಿಕ ಸಂವೇದನೆಯನ್ನು ರೂಪಿಸಿದ ಕೆಲವು ದಟ್ಟ ಅನುಭವಗಳಲ್ಲಿ ಇದೂ ಒಂದಾಗಿರುವುದರಿAದ ನನ್ನ ಮನಸ್ಸಿನಲ್ಲಿ ಈ ಪ್ರತಿಭಟನಾ ಕಾರ್ಯಕ್ರಮ ಅಚ್ಚಳಿಯದೆ ಉಳಿದಿದೆ. ಜಾತಿ ಕೇಂದ್ರಿತ ಮನೋಭಾವವನ್ನು ಮೀರಬೇಕೆನ್ನುವ ಆಶಯ ಕೆಲವರಲ್ಲಾದರೂ ಆಳವಾಗಿ ರಕ್ತಗತವಾಗಿತ್ತು. ಅಂತಹ ಆಶಯಕ್ಕೆ ಸಾರ್ವಜನಿಕ ಅಭಿವ್ಯಕ್ತಿ ನೀಡಲು ಹಿಂಜರಿಯದ ದಿನಗಳೂ ಅವಾಗಿದ್ದವು.

ನಾಲ್ಕು ದಶಕಗಳ ನಂತರದಲ್ಲಿ ಜಾತಿ ಕೇಂದ್ರಿತ ಚಿಂತನೆಗಳು ಮತ್ತು ಸಂಘಟನಾ ಚಟುವಟಿಕೆಗಳು ಕಡಿಮೆಯಾಗಬೇಕಿತ್ತು. ಇಂತಹ ನಿರೀಕ್ಷೆ ಕೇವಲ ತಾರ್ಕಿಕವಾದುದೇನೊ. ತರ್ಕಸಮ್ಮತವಾದ ನಿರೀಕ್ಷೆಗಳು ವಾಸ್ತವದಲ್ಲಿ ಕಾರ್ಯಗತವಾಗಬೇಕು ಎಂದೇನೂ ಇಲ್ಲ. ಆದರೆ ಅಚ್ಚರಿಯ ವಿಷಯವೆಂದರೆ ಕರ್ನಾಟಕದ ಸಾರ್ವಜನಿಕ ಬದುಕಿನಲ್ಲಿ ಜಾತಿಯ ಪ್ರಭಾವ ಹೆಚ್ಚು ವ್ಯಾಪಕವಾಗಿದೆ ಮತ್ತು ಎಲ್ಲ ವಲಯಗಳನ್ನು ಆವರಿಸಿಕೊಂಡಿದೆ. ಇದಾವುದೂ ನಮಗೆ ಹೊಸ ಅನುಭವಗಳಾಗಿ ಉಳಿದಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ ನನ್ನಂತಹವರಿಗೂ ಸಹ ನಮ್ಮ ಎಲ್ಲ ವೃತ್ತಿ ಸಂಬAಧಗಳು ಜಾತಿ ಆಧಾರಿತವಾಗಿಯೆ ಇರಲಿ ಎನ್ನುವ ಒತ್ತಡ ಕಳೆದ ದಶಕದಲ್ಲಿ ಹೆಚ್ಚು ಅನುಭವಕ್ಕೆ ಬರುತ್ತಿದೆ. ನಮ್ಮ ನಡವಳಿಕೆಗಳು ಇಂತಹ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿದ್ದಾಗ, ನಮ್ಮ ಪಿತೃತ್ವವನ್ನು ಪ್ರಶ್ನಿಸುವ ಮಾತುಗಳನ್ನು ಹಲವಾರು ಬಾರಿ ಹಿರಿಯ ಪ್ರಾಧ್ಯಾಪಕರುಗಳ ಬಾಯಿಂದಲೆ ಕೇಳಿದ್ದೇನೆ.

ಜಾತಿ ಸಂಘಟನೆಗಳು ಯಾವುದೆ ಅಳುಕು-ಮುಲಾಜುಗಳಿಲ್ಲದೆ ಜಾತಿ ಆಧಾರಿತ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳುತ್ತಿವೆ. ನಾನು ಮೇಲೆ ಉದಾಹರಿಸಿದ ರೀತಿಯ ಕಾರ್ಯಕ್ರಮಗಳಲ್ಲಿ 70ರ ದಶಕದಲ್ಲಿ ಪಾಲ್ಗೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲಾದವರು ಇಂದು ತಮ್ಮ ಜಾತಿಸಂಘಗಳ ಕಾರ್ಯಕ್ರಮಗಳಲ್ಲಿ ಯಾವುದೆ ಹಿಂಜರಿಕೆಯಿಲ್ಲದೆ ಭಾಗವಹಿಸುತ್ತಾರೆ. ಮಿಗಿಲಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಜಾತಿ ಮತ್ತು ಧಾರ್ಮಿಕ ಸಮುದಾಯವೂ ತನ್ನ ಅಭಿವೃದ್ಧಿಗೆ ಪ್ರತ್ಯೇಕವಾದ ಅಭಿವೃದ್ಧಿ ಮಂಡಳಿಯನ್ನು ಸರ್ಕಾರವು ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿವೆ. ಹೀಗೆ ಜಾತಿಕೇಂದ್ರಿತ ಚಿಂತನೆ ಮತ್ತು ಸಂಘಟನೆಗಳು ಸರ್ವೆಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ ಇಂತಹ ಚಿಂತನೆ ಮತ್ತು ಕಾರ್ಯಕ್ರಮಗಳು ಸರಿಯಲ್ಲ ಎನ್ನುವುದನ್ನು ಸಾರ್ವಜನಿಕವಾಗಿ ಹೇಳುವ ಪ್ರಜ್ಞೆ ಮತ್ತು ನೈತಿಕಸ್ಥೆöÊರ್ಯಗಳೆರಡೂ ಇಂದು ಇಲ್ಲವಾಗಿರುವುದು ತುಂಬ ವ್ಯಾಕುಲದ ಸಂಗತಿ. ಅದಕ್ಕಾಗಿಯೆ ನಾನು ಮೇಲೆ ಪ್ರಸ್ತಾಪಿಸಿದ ಘಟನೆ ಮತ್ತೆ ಮತ್ತೆ ನೆನಪಾಗುತ್ತದೆ.

1950ರ ದಶಕದಲ್ಲಿ ಭಾರತೀಯ ಸಮಾಜವನ್ನು ಅಧ್ಯಯನ ಮಾಡುತ್ತಿದ್ದ ಸಮಾಜಶಾಸ್ತçಜ್ಞರು ಆಧುನಿಕೀಕರಣವಾದಂತೆ ಜಾತಿವ್ಯವಸ್ಥೆಯು ತನ್ನ ಅಡಿಪಾಯವನ್ನು ಕಳೆದುಕೊಳ್ಳುತ್ತದೆ ಎನ್ನುವ ವಾದವನ್ನು ಮಾಡಿದರು. ಈ ವೇಳೆಗೆ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯು ಶಿಥಿಲಗೊಂಡು, ಆಧುನಿಕ ಅರ್ಥವ್ಯವಸ್ಥೆ ಅಸ್ತಿತ್ವಕ್ಕೆ ಬರುತ್ತಿತ್ತು. ಜಾತಿಗಳೊಂದಿಗೆ ಹಾಸುಹೊಕ್ಕಾಗಿದ್ದ ವೃತ್ತಿಗಳು ತಮ್ಮ ಅಡಿಪಾಯವನ್ನು ಕಳೆದುಕೊಳ್ಳುತ್ತಿದ್ದವು. ಮಿಗಿಲಾಗಿ ಹೊಸದಾದ ಸಂಪರ್ಕ-ಸಾರಿಗೆ ವ್ಯವಸ್ಥೆಗಳು, ಶಾಲೆ-ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಜಾತಿಆಧಾರಿತ ನಡವಳಿಕೆಗಳನ್ನು ಅರ್ಥಹೀನಗೊಳಿಸಿದವು. ಜಾತಿ ಶಿಥಿಲಗೊಳ್ಳುತ್ತಿದೆ ಎನ್ನುವ ಅನಿಸಿಕೆ ಸಮಾಜಶಾಸ್ತçಜ್ಞರಲ್ಲಿ ಮೂಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಜಾತಿಯ ಪ್ರಭಾವ ಕಡಿಮೆಯಾದಂತೆ, ಭಾರತದಲ್ಲಿ ವರ್ಗ ಆಧಾರಿತ ಐಡೆಂಟಿಟಿಗಳು ರೂಪುಗೊಳ್ಳಬಹುದು ಎನ್ನುವ ನಿರೀಕ್ಷೆಯನ್ನು ಸಮಾಜಶಾಸ್ತçಜ್ಞರು ಹೊಂದಿದ್ದರು. ಅಂದರೆ ಜಾತಿಯ ಜೊತೆಗೆ ಗುರುತಿಸಿಕೊಳ್ಳುವುದಕ್ಕಿಂತಲೂ ತಮ್ಮ ವರ್ಗಗಳ ಜೊತೆಗೆ ಹೆಚ್ಚು ಹತ್ತಿರದ ಸಂಬAಧವನ್ನು ಹೊಂದುವ ವ್ಯಕ್ತಿಕೇಂದ್ರಿತ ಐಡೆಂಟಿಟಿಗಳು ಮೂಡಬಹುದು. ಈ ವ್ಯಕ್ತಿಗಳು ತಮ್ಮ ಸಂಸ್ಕöÈತಿ ಮತ್ತು ಧರ್ಮಗಳ ಜೊತೆಗೆ ಸಂಬAಧವನ್ನು ಉಳಿಸಿಕೊಂಡರೂ ಜಾತಿ ಅವರಿಗೆ ಅಷ್ಟು ಮುಖ್ಯವಾಗದೇನೊ ಎನ್ನುವ ನಿರೀಕ್ಷೆ ಸಮಾಜಶಾಸ್ತçಜ್ಞರಲ್ಲಿತ್ತು. ಹೀಗಾಗಿ ಪಾಶ್ಚಿಮಾತ್ಯ ಸಮಾಜಗಳಲ್ಲಿ ಆದಂತೆ ಇಲ್ಲಿ ಸಹ ವರ್ಗಗಳು ಮೂಡಬಹುದು ಮತ್ತು ತಮ್ಮ ಸಾಂಪ್ರದಾಯಿಕ ಐಡೆಂಟಿಟಿಗಳನ್ನು ಮೀರಿದ ಹೊಸ ವ್ಯಕ್ತಿಗಳು ಹುಟ್ಟುತ್ತಾರೆ ಎಂದು ಪ್ರತಿಪಾದಿಸಿದರು.

ಜೊತೆಗೆ 1950ರ ದಶಕದ ಹೊತ್ತಿಗೆ ಜಾತಿವಿನಾಶದ ರ‍್ಯಾಡಿಕಲ್ ಚಳವಳಿಗಳು ಭಾರತದಲ್ಲಿ ಕಂಡುಬAದಿದ್ದವು. ಡಾ.ಅಂಬೇಡ್ಕರ್ ಮತ್ತು ಡಾ.ಲೋಹಿಯಾ ಅವರು ಈ ವಾದಗಳ ಅತ್ಯಂತ ಪ್ರಖರ ಅವೃತ್ತಿಗಳನ್ನು ಭಾರತೀಯರ ಮುಂದಿಟ್ಟದ್ದರು. ಜಾತಿಪರವಾದ ವಾದಗಳನ್ನು ಮುಂದಿಡುವುದು ಲಜ್ಜೆಯ ವಿಷಯವೆನ್ನುವ ಅನಿಸಿಕೆ ಸ್ವಲ್ಪ ಮಟ್ಟಿಗಾದರೂ ನಮ್ಮ ಸಾರ್ವಜನಿಕ ಬದುಕಿನಲ್ಲಿತ್ತು ಎಂದರೆ ಅದು ಉತ್ಪೆçÃಕ್ಷೆಯೇನಲ್ಲ.

ಆದರೆ ಭಾರತೀಯ ಸಮಾಜಶಾಸ್ತçಜ್ಞರನ್ನೂ ದಿಗ್ಭçಮೆಗೊಳಿಸುವ ರೀತಿಯಲ್ಲಿ ಜಾತಿಯು ಭಾರತೀಯ ಸಮಾಜದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿತು. ಜಾತಿಯ ಆಚರಣೆಗಳು ಮತ್ತು ನಂಬಿಕೆಗಳಿಗೆ ಅಡಿಪಾಯವಾಗಿದ್ದ ಬಹುತೇಕ ಅಂಶಗಳು ಚಲಾವಣೆಯಲ್ಲಿ ಉಳಿಯಲಿಲ್ಲ. ಈ ಅಂಶ ಸ್ವಾತಂತ್ರೊ÷್ಯÃತ್ತರ ಭಾರತದ ಮಟ್ಟಿಗಂತೂ ನಿಜವೆ. ಆದರೂ ಜಾತಿ ಹೊಸರೂಪಗಳಲ್ಲಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸನ್ನು ಕಂಡಿತು. ಕಳೆದ ಎರಡು-ಮೂರು ದಶಕಗಳಲ್ಲಿ ಅದರ ಆಕರ್ಷಣೆ ಮತ್ತಷ್ಟು ಹೆಚ್ಚಿರುವಂತೆ ಕಂಡರೆ ನಮಗಾರಿಗೂ ಅಚ್ಚರಿಯಂತೂ ಆಗುತ್ತಿಲ್ಲ.

ಹೀಗೆ ಜಾತಿಯು ತನ್ನ ಪ್ರಸ್ತುತತೆಯನ್ನು ಕಂಡುಕೊಳ್ಳಲು ಅನುಕೂಲಕರವಾದ ಪ್ರಕ್ರಿಯೆಗಳಲ್ಲಿ ಮುಖ್ಯವಾದವುಗಳು ಪ್ರತಿನಿಧಿ ಪ್ರಜಾಪ್ರಭುತ್ವದ ಆಚರಣೆಗಳು. ಸ್ವಾತಂತ್ರ÷್ಯಪೂರ್ವದ ಚುನಾವಣೆಗಳಲ್ಲಿ ಮತ್ತು ರಾಜಕೀಯ ಸಂಸ್ಕöÈತಿಯಲ್ಲಿ ಜಾತಿ ಮತ್ತು ಧರ್ಮ ಕೇಂದ್ರಿತ ರಾಜಕಾರಣದ ಕೆಲವು ಕುರುಹುಗಳು ದೊರಕುತ್ತವೆ. ತಮ್ಮ ಜಾತಿ ಮತ್ತು ಧರ್ಮಗಳಿಗೆ ಸೇರಿದವರು ಮಾತ್ರ ನಂಬಿಕೆಗೆ ಅರ್ಹರು ಎನ್ನುವ ಬಗೆಯ ಚಿಂತನೆಗಳು ಸಾಮಾನ್ಯವಾಗಿಯೆ ಕಾಣಸಿಗುತ್ತವೆ. ಈ ಅಂಶವೆ ಸ್ವಾತಂತ್ರೊ÷್ಯÃತ್ತರ ಕಾಲದಲ್ಲಿಯೂ ಉಳಿದು, ಬೆಳೆದು ನಮ್ಮ ಸಾರ್ವಜನಿಕ ಬದುಕನ್ನು ರೂಪಿಸುತ್ತಿರುವ ಗ್ರಹಿಕೆಯಾಗಿಬಿಟ್ಟಿದೆ.

ನಮ್ಮ ಹಿತಾಸಕ್ತಿಗಳನ್ನು ನಮ್ಮ ಜಾತಿಯವರು ಮಾತ್ರ ಪ್ರತಿನಿಧಿಸಲು, ಸಂರಕ್ಷಿಸಲು ಸಾಧ್ಯ ಎನ್ನುವ ಗ್ರಹಿಕೆಯು ಅತ್ಯಂತ ನಕಾರಾತ್ಮಕ, ತಿರೋಗಾಮಿ ಮತ್ತು ಮನುಷ್ಯವಿರೋಧಿಯಾದುದು ಎನ್ನುವುದನ್ನು ಇಂದು ಹೇಳಬೇಕಾಗಿದೆ ಎನ್ನುವುದೆ ವಿಷಾದದ ಸಂಗತಿ. ಆದರೆ ಈ ಅಂಶವೆ ಇಂದಿನ ಜಾತಿ ರಾಜಕಾರಣದ ಕೇಂದ್ರದಲ್ಲಿ ಇರುವುದು. ಈ ನಂಬಿಕೆಯು ನಿಜವಾಗಿಯೂ ಆಳವಾಗಿ ಬೇರೂರಿದ್ದರೆ ಭಾರತೀಯ ಸಮಾಜವೆನ್ನುವುದು ಒಂದು ಭ್ರಮೆಯೆ ಸರಿ.

ಇಲ್ಲದಿದ್ದರೆ ಬ್ರಾಹ್ಮಣರು, ಲಿಂಗಾಯತರು ಮತ್ತಿತರರು ಸೇರಿದಂತೆ ಕರ್ನಾಟಕದ ಪ್ರಬಲ ಮತ್ತು ಪ್ರತಿಷ್ಠಿತ ಸಮುದಾಯಗಳು ತಮಗೆ ಮಾತ್ರ ಮೀಸಲಾಗಿರುವ ಅಭಿವೃದ್ಧಿ ಮಂಡಳಿಗಳು ಬೇಕು ಎಂದು ವಾದಿಸುತ್ತಿರಲಿಲ್ಲ. ನಮ್ಮ ರಾಜ್ಯದ ಎಲ್ಲ ಸಮುದಾಯಗಳಲ್ಲಿಯೂ ಬಡವರು ಮತ್ತು ವಿಶೇಷ ನೆರವಿನ ಅಗತ್ಯವಿರುವವರು ಇದ್ದಾರೆ. ಅವರ ಅಗತ್ಯಗಳನ್ನು ಪೂರೈಸಲು ನಾವು ರೂಪಿಸಬೇಕಾಗಿರುವ ನೀತಿಯೂ, ಅದನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳು – ಇವೆರಡೂ ಜಾತಿ ಕೇಂದ್ರಿತವಾಗಿಯೆ ಇರಬೇಕು ಎನ್ನುವುದು ಇಂದಿನ ರಾಜಕಾರಣದ ಚಾಲಕ ಶಕ್ತಿಯಾಗಿರುವ ನಂಬಿಕೆಯಾಗಿದೆ.

ಇಂತಹ ಚಿಂತನೆ ಎರಡು ರೀತಿಯಲ್ಲಿ ನಮ್ಮ ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ.

ಒಂದೆಡೆ, ನಮ್ಮ ಜಾತಿಕೇಂದ್ರಿತ ಭಾವನೆಗಳನ್ನು ಮೀರಿದ ಸಮಾಜದ ಪರಿಕಲ್ಪನೆಯೊಂದನ್ನು ರೂಡಿಸಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ, ಇಂತಹ ಜಾತಿಯನ್ನು ಮೀರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಮಗೆ ಆಗುವುದು ಸಹ ಇಡೀ ಸಮಾಜಕ್ಕೆ ಅನ್ವಯವಾಗುವ ರೀತಿಯ ಸಾರ್ವಜನಿಕ ನೀತಿಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದಾಗ. ಇಂದು ನಮ್ಮಲ್ಲಿ ಸಮಗ್ರ ಸಾರ್ವಜನಿಕ ಒಳಿತಿನ ಪರಿಕಲ್ಪನೆಗಳು ಉಳಿದಿವೆಯೆ? ಅಥವಾ ಕೇವಲ ಜಾತಿಕೇಂದ್ರಿತ ಕಾರ್ಯಕ್ರಮಗಳನ್ನು ಮಾಡುವ ಸಾಮರ್ಥ್ಯವನ್ನು ಮಾತ್ರ ಪೋಷಿಸುತ್ತಿದ್ದೇವೆಯೆ?

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ, ಇಂತಹ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಆಶಯವೆ ನಮ್ಮಲ್ಲಿ ಇರುವಂತೆ ಕಾಣುತ್ತಿಲ್ಲ. ಲಿಂಗಾಯತ ಅಥವಾ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗಳ ಸ್ಥಾಪನೆಯಾದಾಗ ಹಾಗೂ ಒಕ್ಕಲಿಗರಿಗೂ ಅಂತಹದೊOದು ಮಂಡಳಿಯು ಬೇಕು ಎನ್ನುವ ವಾದವನ್ನು ಮುಂದಿಟ್ಟಾಗ, ಇದನ್ನು ವಿರೋಧಿಸುವ ದನಿಗಳು ಮರೆಯಾಗಿಬಿಟ್ಟಿವೆ.

ಜಾತಿವಿನಾಶದ ಕೂಗು ಮತ್ತೊಮ್ಮೆ ಮೊಳಗಿದರೆ ಜಾತಿ ಮರೆಯಾಗ ಲಿದೆ ಎನ್ನುವ ಭ್ರಮೆಯೇನು ನನ್ನದಲ್ಲ. ಆದರೆ ಒಂದು ಸೀಮಿತವಾದ ಅಂಶವನ್ನು ನಾವೆಲ್ಲರೂ ಮನಗಾಣಬೇಕಾಗಿರುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ. ನಮ್ಮ ಸಮಾಜದ ಇತರ ಸದಸ್ಯರ ಮೇಲೆ ನಮಗಿರುವ ನಂಬಿಕೆಯನ್ನು ನಾವು ಜಾತಿಯ ಆಧಾರದ ಮೇಲೆ ತೀರ್ಮಾನಿಸುವುದಾದರೆ, ನಮ್ಮ ಸಾರ್ವಜನಿಕ ನೀತಿಯನ್ನು ರೂಪಿಸುವ ಬಹುಮುಖ್ಯ ಅಂಶಗಳಲ್ಲಿ ಜಾತಿಯೂ ಇರುವುದಾದರೆ ನಾವು ಸರಿಯಾದ ಪಥದಲ್ಲಿ ಇಂದು ಸಾಗುತ್ತಿಲ್ಲ ಎನ್ನುವುದರಲ್ಲಿ ಅನುಮಾನಗಳಿಲ್ಲ.

Leave a Reply

Your email address will not be published.