ಭಾರತೀಯ ಸಿನಿಮಾ ದಿಗಂತ ವಿಸ್ತರಿಸಿದ ರಿತುಪರ್ಣೊ ಘೋಷ್

ಬೆಂಗಾಳಿ ನಟ, ನಿರ್ದೇಶಕ ರಿತುಪರ್ಣೊ ಘೋಷ್ ಮೃತರಾಗಿ ಇದೇ ಮೇ 30ಕ್ಕೆ ಆರು ವರ್ಷಗಳು ತುಂಬುತ್ತವೆ. ಅವರ ಸಿನಿಮಾಗಳನ್ನು ನೆನಪು ಮಾಡಿಕೊಳ್ಳುತ್ತ, ಅವರಿಗೊಂದು ನುಡಿ ನಮಸ್ಕಾರ ಹೇಳಲು ಈ ಟಿಪ್ಪಣಿ.

ರಿತುಪರ್ಣೊ ಘೋಷ್ (1963-2013) ಭಾರತೀಯ ಸಿನಿಮಾದ ಮಹಾ ಪ್ರತಿಭೆ; ಬೆಂಗಾಳಿ ಚಿತ್ರರಂಗ ಭಾರತೀಯ ಸಿನಿಮಾಕ್ಕೆ ಕೊಟ್ಟ ಮಹತ್ವದ ಕೊಡುಗೆ. ಅವರು ನಿರ್ದೇಶಕರಷ್ಟೇ ಅಲ್ಲ ನಟ ಹಾಗೂ ಚಿತ್ರ ಕಥೆಗಾರ. ರಿತುಪರ್ಣೊ ಸುಮಾರು ಎರಡು ದಶಕಗಳ ಕಾಲ ಅತ್ಯಂತ ಕ್ರಿಯಾಶೀಲರಾಗಿ ಸಿನಿಮಾವನ್ನೇ ಉಸಿರಾಗಿಸಿಕೊಂಡು ಬದುಕಿದವರು. ಸಿನಿಮಾ ನಿರ್ಮಾಣದ ತಂತ್ರಗಳನ್ನೆಲ್ಲ ಅರಗಿಸಿಕೊಂಡು ಅದರ ಹೊಸ ಹೊಸ ಸಾಧ್ಯತೆಗಳನ್ನು ತಮ್ಮ ಸಿನಿಮಾಗಳಲ್ಲಿ ಪ್ರಯೋಗಿಸಿದವರು. ಸತ್ಯಜಿತ್ ರೇ ಅವರಿಂದ ಪ್ರಭಾವಿತರಾಗಿದ್ದರೂ ಅವರ ಜಾಡಿನಲ್ಲಿ ನಡೆಯಲಿಲ್ಲ. ಪರ್ಯಾಯ ಹಾಗೂ ಕಮರ್ಷಿಯಲ್ ಸಿನಿಮಾ ಅಂಶ ಗಳನ್ನು ಸಮೀಕರಣಗೊಳಿಸಿ ತಮ್ಮದೇ ಆದ ಅಭಿವ್ಯಕ್ತಿ ಮಾರ್ಗವನ್ನು ಹುಡುಕಿಕೊಂಡರು. ಅವರ ಕೆಲವು ಸಿನಿಮಾಗಳು ಪರ್ಯಾಯ ಸಿನಿಮಾದ ಮುಂದುವರಿದ ಭಾಗದಂತಿದ್ದವು. ಕೆಲ ವಿಮರ್ಶಕರು ಅವರ ಸಿನಿಮಾಗಳನ್ನು ಕಮರ್ಷಿಯಲ್ ಸೂತ್ರಕ್ಕೆ ಒಗ್ಗಿಕೊಂಡ ಅದ್ಧೂರಿ ಕಲಾತ್ಮಕ ಸಿನಿಮಾಗಳು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರ ಬಹುತೇಕ ಸಿನಿಮಾಗಳು ದೃಶ್ಯ ಶ್ರೀಮಂತಿಕೆಯಿಂದ ಗಮನ ಸೆಳೆಯುತ್ತವೆ. ಈ ಕಾರಣಗಳಿಂದ ರಿತುಪರ್ಣೊ ಅವರ ಸಮಕಾಲೀನರಿಗಿಂತ ಭಿನ್ನವಾಗುತ್ತಾರೆ.

ಅವರ ಸಿನಿಮಾಗಳಂತೆ ಅವರ ವೈಯಕ್ತಿಕ ಬದುಕು ವಿಶಿಷ್ಟ. ಮೊದಲ ಸಲ ನೋಡಿದವರು ಅವರು ಹೆಣ್ಣೊ, ಗಂಡೊ ಎಂದು ಥಟ್ಟನೆ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತಿತ್ತು. ತಮ್ಮೊಳಗಿನ ಹೆಣ್ತನವನ್ನು ಅದುಮಿಟ್ಟುಕೊಳ್ಳಲಾಗದೆ ಚಡಪಡಿಸಿದ ರಿತುಪರ್ಣೊ ತಾನೊಬ್ಬ ಗೇ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ನಾನು ಹೆಣ್ಣಲ್ಲ. ಹೆಣ್ಣಾಗಲು ಬಯಸುವುದಿಲ್ಲ. ನನ್ನ ಒಳಗೆ ಸುಪ್ತವಾಗಿರುವ ಹೆಣ್ತತನವನ್ನು ಉಪೇಕ್ಷಿಸುವುದಿಲ್ಲ ಎಂದು ಹೇಳಿಕೊಂಡೇ ಬಂದ ಅವರು ಕೊನೆಕೊನೆಗೆ ಹೆಣ್ಣಾಗಲು ಚಡಪಡಿಸಿದರು. ಅದಕ್ಕಾಗಿ ಹಲವು ಚಿಕಿತ್ಸೆಗೆ ಒಳಗಾದರು. ಮಧುಮೇಹ, ರಕ್ತದೊತ್ತಡ ಹಾಗೂ ಒಂದರ ಹಿಂದೆ ಒಂದರಂತೆ ಮಾಡಿಸಿಕೊಂಡ ಶಸ್ತ್ರ ಚಿಕಿತ್ಸೆಗಳಿಂದ ಹಣ್ಣಾದರು. ಕೊನೆಗೆ ಅವೇ ಅವರ ಜೀವಕ್ಕೆ ಎರವಾದವು. ಹಠಾತ್ ಹೃದಯಾಘಾತಕ್ಕೆ ಒಳಗಾದರು. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಅವರ ಬದುಕು ಕೊನೆಗೊಂಡಿತು. ಒಂದಕ್ಕಿಂತ ಒಂದು ಅತ್ಯುತ್ತಮ ಎನ್ನಬಹುದಾದ ಸಿನಿಮಾಗಳನ್ನು ನೀಡುತ್ತ ಬಂಗಾಳ ರಾಜ್ಯದ ಗಡಿಯನ್ನು ದಾಟಿ ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿ ಮರೆಯಾದರು.

ಅವರು ಇನ್ನಷ್ಟು ಕಾಲ ಬದುಕಿದ್ದರೆ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದರೇನೊ. ‘ಹಿರೇರ್ ಆಂಗ್ತಿ’ (1992) ಭಾರತೀಯ ಸಿನಿಮಾ ದಿಗಂತ ವಿಸ್ತರಿಸಿದ ರಿತುಪರ್ಣೊ ಘೋಷ್ಅವರ ನಿರ್ದೇಶನದ ಮೊದಲ ಸಿನಿಮಾ. ‘ಉನಿಷೆ ಎಪ್ರಿಲ್’ ಎರಡನೆ ಚಿತ್ರ. 1995ರಲ್ಲಿ ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಆನಂತರ ರಿತುಪರ್ಣೊ ಹಿಂದಿರುಗಿ ನೋಡಲಿಲ್ಲ. 12 ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ವಿಶ್ವದ ಹಲವು ಪ್ರಮುಖ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತ್ತ ಸಿನಿಮಾ ಜಗತ್ತಿನ ಗಮನ ಸೆಳೆದರು. ಅವರು ಬದುಕಿದ್ದು 49 ವರ್ಷಗಳಷ್ಟೇ. ಎರಡು ದಶಕಗಳ ವೃತ್ತಿ ಜೀವನದಲ್ಲಿ 24 ಸಿನಿಮಾಗಳನ್ನು ನಿರ್ದೇಶಿಸಿದರು. ಅವುಗಳಲ್ಲಿ ಎರಡು ಹಿಂದಿ ಮತ್ತು ಎರಡು ಇಂಗ್ಲಿಷ್ ಸಿನಿಮಾಗಳು. ಉಳಿದವು ಬೆಂಗಾಳಿ ಭಾಷೆಯವು.

ಸಾಂಸ್ಕೃತಿಕ ಉದಾರೀಕರಣಕ್ಕೆ ತೆರೆದುಕೊಂಡ ಸುಶಿಕ್ಷಿತ ಮತ್ತು ಮೇಲ್ವರ್ಗದ ಜನರು ಹಾಗೂ ಕುಟುಂಬಗಳ ಬದುಕಿನ ಪಲ್ಲಟಗಳನ್ನು ತಮ್ಮ ಸಿನಿಮಾಗಳಲ್ಲಿ ಹೇಳುವ ಮೂಲಕವೇ ಅವರು ಗಮನ ಸೆಳೆದರು. ಅವರ ಸಮಕಾಲೀನ ನಿರ್ದೇಶಕರಿಗಿಂತ ತಾನು ಭಿನ್ನ ಎಂದು ಸಿನಿಮಾಗಳ ಮೂಲಕ ಸಾಬೀತು ಪಡಿಸಿದರು. ಸತ್ಯಜಿತ್ ರೇ ಅವರಂತೆ ಭಾರತೀಯ ಸಮಾಜದ ಕಟು ವಾಸ್ತವಗಳನ್ನು ಅಷ್ಟಾಗಿ ಹೇಳಲಿಲ್ಲ. ಹೇಳಿದರೂ ಅವು ಬೇರೆಯದೇ ಆಯಾಮವನ್ನು ಪಡೆದವು.

ಬೆಂಗಾಳಿ ಭಾಷೆಯ ಪರ್ಯಾಯ ಸಿನಿಮಾಗಳಲ್ಲಿ ನಿರ್ದೇಶಕನ ಬುದ್ದಿ ಹೆಚ್ಚು ಕೆಲಸ ಮಾಡಿದೆ. ರಿತುಪರ್ಣೊರ ಸಿನಿಮಾಗಳಲ್ಲಿ ಈ ಬೌದ್ಧಿಕತೆ ಎದ್ದು ಕಂಡರೂ ಭಾವ ತೀವ್ರತೆ ಹಾಗೂ ಬದುಕಿನ ಸೂಕ್ಷ್ಮಗಳಿಂದಾಗಿ ಸಿನಿಮಾಗಳಿಗೆ ವಿಭಿನ್ನ ಹೊಸತನ ದಕ್ಕಿದೆ. ಹೀಗಾಗಿ ಅವರ ಸಿನಿಮಾಗಳು ಭಾರತೀಯ ಸಿನಿಮಾಗಳ ರಾಶಿಯಲ್ಲಿ ಸ್ವಯಂ ಪ್ರಭೆಯಿಂದ ಮಿನುಗುವ ನಕ್ಷತ್ರಗಳಂತೆ ತೋರುತ್ತವೆ. ಭಾರತೀಯ ನೋಡುಗರಲ್ಲಿ ಹೆಚ್ಚಿನವರು ಸಿನಿಮಾಗಳಿಂದ ಮನರಂಜನೆಯನ್ನು ಬಯಸುತ್ತಾರೆ. ಈ ವರ್ಗದವರಿಗೂ ರಿತುಪರ್ಣೊ ಅವರ ಕೆಲ ಸಿನಿಮಾಗಳು ಇಷ್ಟವಾಗುತ್ತವೆ.

ನಾನು ಕಂಡಂತೆ ರಿತು

ಕೆಲ ವರ್ಷಗಳ ಹಿಂದೆ ಪಣಜಿ ಚಿತ್ರೋತ್ಸವದಲ್ಲಿ ಅವರ ಸಿನಿಮಾ ಪ್ರದರ್ಶನ, ಪತ್ರಿಕಾಗೋಷ್ಠಿ ಹಾಗೂ ಪ್ರತಿನಿಧಿಗಳ ಜೊತೆಗಿನ ಸಂವಾದಗಳಲ್ಲಿ ಕಾಣಿಸಿಕೊಂಡಿದ್ದ ಘೋಷ್ ಹೆಂಗಸರ ಉಡುಪು, ಆಭರಣಗಳನ್ನು ಧರಿಸಿ ಅತ್ಯಾಧುನಿಕ ಮಹಿಳೆಯಂತೆ ಕಂಗೊಳಿಸಿದ್ದರು. ಅವರ ಬಾಹ್ಯರೂಪ, ನಡವಳಿಕೆ ಗೇ ಗಳಿಗೆ ಮಾದರಿಯಾಗಿತ್ತು. ಅವರ ಸಿನಿಮಾಗಳನ್ನು ಹಾಗೂ ಬದುಕನ್ನು ಆರಾಧಿಸುತ್ತಿದ್ದ ದೊಡ್ಡ ಸಂಖ್ಯೆಯ ಅಭಿಮಾನಿಗಳು ಅವರಿಗಿದ್ದರು. ಅವರ ಸುತ್ತ, ಅವರಂತೆ ವೇಷ ಧರಿಸಿದ ಗುಂಪೊಂದು ಸದಾ ಹಿಂಬಾಲಿಸುತ್ತಿತ್ತು. ಅವರ ಧ್ವನಿಯಲ್ಲಿ ಹೆಣ್ಣು ಗಂಡಿನ ಮಿಶ್ರಣವಿತ್ತು. ಇದು ಕೆಲ ನಿಮಿಷಗಳ ಅವಧಿಯಲ್ಲಿ ನನಗೆ ಕಂಡ ರಿತುಪರ್ಣೊ ಘೋಷ್.

ಅವರ ಸಿನಿಮಾಗಳ ಪೈಕಿ ನನಗೆ ಹೆಚ್ಚು ಇಷ್ಟವಾದ ಸಿನಿಮಾ ‘ಚಿತ್ರಾಂಗದಾ’ (2012). ಮಹಾಭಾರತದಲ್ಲಿ ಬರುವ ಬಬ್ರುವಾಹನನ ತಾಯಿ ಚಿತ್ರಾಂಗದೆ ಇಲ್ಲಿ ಒಂದು ರೂಪಕವಷ್ಟೆ. ಈ ನೃತ್ಯ ರೂಪಕದ ನಿರ್ದೇಶಕ ಹಾಗೂ ಕೊರಿಯೊಗ್ರಾಫರ್ ರುದ್ರೊ ಚಟರ್ಜಿ (ರಿತು ಪರ್ಣೊ) ಚಿತ್ರಾಂಗದಾ ಪಾತ್ರಧಾರಿ; ತಾಲೀಮಿನ ಸಮಯದಲ್ಲಿ ತಾನೇ ಚಿತ್ರಾಂಗದೆ ಎಂದು ಭ್ರಮಿಸಿ ಪಾತ್ರದಲ್ಲಿ ಲೀನವಾಗಿಬಿಡುತ್ತಾನೆ. ನೃತ್ಯ ರೂಪಕಕ್ಕೆ ನೆರವು ನೀಡಲು ಬಂದ ಪಾರ್ಥೊ ಎಂಬ ಸುಂದರ ಪುರುಷನಲ್ಲಿ ಆಕರ್ಷಿತನಾಗುತ್ತಾನೆ. ಇಬ್ಬರೂ ಗೇ ಗಳು. ಅವರ ನಡುವೆ ಲೈಂಗಿಕ ಸಂಬಂಧ ಬೆಳೆಯುತ್ತದೆ. ಪಾರ್ಥೊ ಹೆಣ್ಣು ಹಾಗೂ ಗಂಡನ್ನು ಕಾಮಿಸಬಲ್ಲವನು. ರುದ್ರನ ತಂದೆ ಮತ್ತು ತಾಯಿ ಸಂಪ್ರದಾಯಸ್ಥರು. ಮಗ ಇಂಜಿನಿಯರ್ ಆಗಬೇಕೆಂದು ಅವರು ಬಯಸುತ್ತಾರೆ. ಮಗ ಹೆಣ್ಣಿನಂತೆ ಬದುಕುವುದು ಅವರಿಗೆ ಇಷ್ಟವಿಲ್ಲ.

ರುದ್ರನಿಗೆ ತನ್ನೊಳಗಿನ ಹೆಣ್ಣಾಗುವ ಬಯಕೆಯನ್ನು ಬಚ್ಚಿಟ್ಟುಕೊಳ್ಳಲಾಗದೆ ಚಡಪಡಿಸುತ್ತಾನೆ. ಹೆಣ್ಣಾಗಲು ಹಲವು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾನೆ. ತನ್ನ ಹಾಗೂ ಪಾರ್ಥೊ ನಡುವಿನ ಸಂಬಂಧಕ್ಕೆ ಕುಟುಂಬದ ಸ್ವರೂಪ ನೀಡಲು ಬಯಸುತ್ತಾನೆ. ಮಗುವೊಂದನ್ನು ದತ್ತು ಪಡೆದು ಬೆಳೆಸುವ ಕನಸು ಕಾಣುತ್ತಾನೆ. ಪಾರ್ಥೊ ಅದಕ್ಕೆ ಸಮ್ಮತಿಸುವುದಿಲ್ಲ. ಪಾರ್ಥೊ ತನ್ನ ಪ್ರೇಯಸಿಯಿಂದ ಮಗುವೊಂದನ್ನು ಪಡೆದ ವಿಷಯ ತಿಳಿದು ರುದ್ರ ಹತಾಶನಾಗುತ್ತಾನೆ. ಈ ಸಿನಿಮಾದ ಕಥೆ ರಿತುಪರ್ಣೊ ಅವರ ವೈಯಕ್ತಿಕ ಬದುಕಿನಂತೆಯೇ ಇದೆ. ಸಲಿಂಗಕಾಮ ನಮ್ಮ ದೇಶದಲ್ಲಿ ಈಗ ಕಾನೂನುಬಾಹಿರ ಅಲ್ಲ. ಆದರೆ ನಮ್ಮ ಸಮಾಜ ಅದನ್ನು ಮುಕ್ತವಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಒಪ್ಪಿಕೊಂಡ ಮನಃಸ್ಥಿತಿಯವರು ಲಕ್ಷಾಂತರ ಜನ ಇರಬಹುದು. ಆದರೆ ಇಂಥದ್ದೆಲ್ಲ ನಮ್ಮ ಕುಟುಂಬದಲ್ಲಿ ಘಟಿಸುವುದು ಬೇಡ ಎಂದೇ ಬಯಸುತ್ತಾರೆ.

ಸಲಿಂಗಕಾಮ ಕುರಿತು ಯೋಚಿಸುವುದಕ್ಕೂ ಅನೇಕರು ಇಷ್ಟಪಡುವುದಿಲ್ಲ. ರಿತುಪರ್ಣೊ ಇಂತಹ ಕುಟುಂಬ ಪರಿಸರದಲ್ಲಿ ಬೆಳೆದವರು ಮತ್ತು ಬದುಕಿದವರು. ಹೀಗಾಗಿಯೇ ಚಿತ್ರಾಂಗದಾ ನೃತ್ಯ ರೂಪಕದ ಕಥಾನಕ ಬಳಸಿಕೊಂಡು ಹೆಣ್ಣಾಗಲು ಬಯಸುವ ಗಂಡಿನ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ತೆರೆಯ ಮೇಲೆ ಹೇಳಿಕೊಂಡಿದ್ದಾರೆ.

ರಿತುಪರ್ಣೊರ ಇನ್ನೊಂದು ಸಿನಿಮಾ ಅಬೊಹಮಾನ್(2009), ಪ್ರತಿಭಾವಂತ, ಮಧ್ಯ ವಯಸ್ಸಿನ ಸಿನಿಮಾ ನಿರ್ದೇಶಕನೊಬ್ಬ ತನ್ನ ಚಿತ್ರದ ನಾಯಕಿಯಲ್ಲಿ ಅನುರಕ್ತನಾಗಿ ಹೆಂಡತಿ ಹಾಗೂ ಮಗನಿಂದ ಉಪೇಕ್ಷೆಗೆ ಒಳಗಾಗುವ ಕಥಾನಕ. ಈ ಚಿತ್ರ ಬೆಂಗಾಳಿ ಚಿತ್ರರಂಗದ ಪ್ರಮುಖ ನಿರ್ದೇಶಕರೊಬ್ಬರ ವೈಯಕ್ತಿಕ ಬದುಕನ್ನು ಕುರಿತದ್ದು ಎಂಬ ಮಾತು ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಕೇಳಿ ಬಂದಿತ್ತು. ರಿತುಪರ್ಣೊ ಈ ಮಾತುಗಳನ್ನು ಸಮರ್ಥಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ಸಿನಿಮಾ ರಂಗದಲ್ಲಿ ಇಂತಹ ಸಂಬಂಧಗಳು ಹೊಸದಲ್ಲ. ಆದರೆ ಅದನ್ನು ಸಿನಿಮಾದ ಚೌಕಟ್ಟಿನಲ್ಲಿ ಹೇಳುವ ಪರಿ ಹೆಚ್ಚು ಇಷ್ಟವಾಗುತ್ತದೆ.

ನಿರ್ದೇಶಕರಗುವ ಮೊದಲು..

ಸತ್ಯಜಿತ್ ರೇ ಅವರನ್ನು ತಮ್ಮ ಮಾನಸ ಗುರು ಎಂದೇ ರಿತುಪರ್ಣೊ ಭಾವಿಸಿದ್ದರು. ಬೆಂಗಾಳಿ ಚಿತ್ರರಂಗದ ಮಿತಾಖ್ ಕಝ್ಮಿ ಅವರಿಂದಲೂ ಪ್ರಭಾವಿತರಾಗಿದ್ದರು. ಜಾಧವ್‍ಪುರ್ ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ಪದವೀಧರರಾಗಿದ್ದ ರಿತು ಪರ್ಣೊ ಸಿನಿಮಾರಂಗಕ್ಕೆ ಬರುವ ಮೊದಲು ಜಾಹೀರಾತು ಚಿತ್ರ ತಯಾರಿಸುವ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದರು. ಹಿಂದಿ ಮತ್ತು ಇಂಗ್ಲಿಷ್‍ನಲ್ಲಿರುತ್ತಿದ್ದ ಮಾಹಿತಿಗಳನ್ನು ಬೆಂಗಾಳಿ ಭಾಷೆಗೆ ಅನುವಾದಿಸುತ್ತಿದ್ದರು. ಕೆಲವೇ ಪದಗಳಲ್ಲಿ ಆಕರ್ಷಕ ಘೋಷಣೆಗಳನ್ನು ಬರೆಯುವುದರಲ್ಲೂ ಪರಿಣತಿ ಪಡೆದಿದ್ದರು.

1997ರಿಂದ 2004ರವರೆಗೆ ಅವರು ಆನಂದಲೋಕ ಎಂಬ ಸಿನಿಮಾ ಮ್ಯಾಗಜೀನ್‍ನ ಸಂಪಾದಕರೂ ಆಗಿದ್ದರು. ಸಿನಿಮಾ ನಿರ್ದೇಶನ ಆರಂಭಿಸಿದ ನಂತರ ಅವರು ಬಿಡುವೇ ಇಲ್ಲದ ವ್ಯಕ್ತಿಯಾಗಿ ಬದಲಾದರು. ‘ಸತ್ಯಾನ್ವೇಷಿ’ (2013) ಅವರ ಕೊನೆಯ ಸಿನಿಮಾ. ಅದು ಬಿಡುಗಡೆಯಾಗುವುದನ್ನು ಅವರು ಕಾಣಲಿಲ್ಲ.

‘ಶೋಭೊ ಚೆರಿತ್ರೊ ಕಾಲ್ಪನಿಕ್’, ‘ದಹನ್’, ‘ಅರೇಕ್ತಿ ಪ್ರ್ರಿಮೇರ್ ಗಾಲ್ಪೊ’, ‘ಅಂತರ್‍ಮಹಲ್’, ‘ನಾಕಾದುಬಿ’, ‘ಅಸುಖ್’ ಇತ್ಯಾದಿ ಚಿತ್ರಗಳು ಬದಲಾವಣೆಗೆ ತೆರೆದುಕೊಂಡ ಭಾರತೀಯ ಸಮಾಜದ ಸಮುದಾಯ ಹಾಗೂ ವ್ಯಕ್ತಿಗತ ನೆಲೆಗಳಲ್ಲಿ ಆಗುವ ಸೂಕ್ಷ್ಮ ಪಲ್ಲಟಗಳನ್ನು ಗುರುತಿಸುವ ಗಂಭೀರ ಪ್ರಯತ್ನಗಳಾಗಿ ಗಮನ ಸೆಳೆಯುತ್ತವೆ.

ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಭಾರತೀಯ ಸಿನಿಮಾದ ಪರಿಧಿಯನ್ನು ವಿಸ್ತರಿಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಹಳೆಯದು ಮತ್ತು ಹಳಬರನ್ನು ಪಕ್ಕಕ್ಕೆ ಸರಿಸಿ ಹೊಸದು ಮತ್ತು ಹೊಸಬರು ಮುನ್ನೆಲೆಗೆ ಬರುತ್ತಿದ್ದಾರೆ. ಈ ವೇಗದ ಬೆಳವಣಿಗೆಯ ನಡುವೆಯೂ ಭಾರತೀಯ ಸಿನಿಮಾ ದಿಗಂತವನ್ನು ವಿಸ್ತರಿ ಸಿದ ಪ್ರತಿಭಾವಂತ ರಿತುಪರ್ಣೊರನ್ನು ಮತ್ತು ಅವರ ಸಿನಿಮಾಗಳನ್ನು ನೆನಪು ಮಾಡಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಗೌರವ.

Leave a Reply

Your email address will not be published.