ಭಾರಿಘಾಟ್ ಅವರ ಎರಡು ನಾಟಕಗಳು ತೊಡಕಾಗದ ಪ್ರತಿಮಾನಿಷ್ಠ ಭಾಷೆ

-ರಾಜೇಂದ್ರ ಚೆನ್ನಿ

ಸಮಕಾಲೀನ ಜಗತ್ತಿನ ಬಹು ಭಾಗಗಳು, ರಾಷ್ಟ್ರಗಳು ಹಿಂಸೆ ಹಾಗೂ ಆತ್ಮವಿನಾಶದ ದಾರಿಯಲ್ಲಿ ಅತಿ ಉತ್ಸಾಹದಿಂದ ಸಾಗುತ್ತಿರುವ ಈ ಕಾಲದಲ್ಲಿ ಅಶ್ವತ್ಥಾಮನೂ ನಮ್ಮ ಸಮಕಾಲೀನನಾಗಿ ಕಾಣವುದು ನಾಟಕದ ಶಕ್ತಿಯೂ ಹೌದು. ನಮ್ಮ ಚರಿತ್ರೆಯ ದೌರ್ಭಾಗ್ಯವೂ ಹೌದು.

ಸಹಗಮನ ಮತ್ತು ಸಾಯುವನೇ ಚಿರಂಜೀವಿ

(ಎರಡು ನಾಟಕಗಳು)

ಶಶಿಧರ ಭಾರಿಘಾಟ್

ಮುದ್ರಣ: 2021 ಪುಟ: 112 ಬೆಲೆ: ರೂ.90

ಅಂಕುರ ಪ್ರಕಾಶನ

ನಂ.656, 2ನೇ ಮೇನ್, 11ನೇ ಬ್ಲಾಕ್

ನಾಗರಬಾವಿ 2ನೇ ಹಂತ, ಬೆಂಗಳೂರು-560072

ಶಶಿಧರ ಭಾರಿಘಾಟ್ ಅವರು ಬಹಳ ಹಿಂದೆಯೆ ಬರೆದು ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಎರಡು ನಾಟಕಗಳು ‘ಸಹಗಮನ’, ‘ಸಾಯುವನೇ ಚಿರಂಜೀವಿ’, ಒಂದೇ ಸಂಗ್ರಹದಲ್ಲಿ ಪ್ರಕಟವಾಗಿರುವುದು ಕನ್ನಡ ರಂಗಭೂಮಿಯ ಮಹತ್ವದ ಘಟನೆಯಾಗಿವೆ. ಸಾಹಿತ್ಯ ಕೃತಿ ಮತ್ತು ರಂಗಕೃತಿ ಎನ್ನುವ ದ್ವಂದ್ವ ಪರಿಕಲ್ಪನೆಗಳಿಂದಾಗಿ ನಮ್ಮ ನಾಟಕ ವಿಮರ್ಶೆಯು ಸ್ವಲ್ಪ ಊನವಾಗಿದೆಯೆಂದು ನನಗೆ ಅನಿಸಿದೆ. ನಾಟಕದಲ್ಲಿ ರಂಗಕ್ರಿಯೆ, ಮಾತು, ಅಭಿನಯ ಇವೆಲ್ಲವೂ ಬಿಡಿಸಲಾಗದ ಅವಿನಾ ಸಂಗತಿಗಳು. ಮಾತು ಯಾವಾಗ ಕ್ರಿಯೆ ಅಥವಾ ಕ್ರಿಯೆಯೇ ಯಾವಾಗ ಮಾತು ಎಂದು ಹೇಳಲಾಗದು.

ಭಾರಿಘಾಟ್ ಅವರ ನಾಟಕಗಳ ಮಹತ್ವವಿರುವುದು ಬದುಕಿನ ಮೂಲ ಸ್ವರೂಪ ಮತ್ತು ಆಯಾ ಕಾಲದ ಯುಗಧರ್ಮ ಹಾಗೂ ಚರಿತ್ರೆಗಳಿಂದ ಉಂಟಾಗುವ ಹಿಂಸೆಯನ್ನು ಅವು ಶೋಧಿಸುವ ಸಂಕೀರ್ಣ ಮತ್ತು ಗಂಭೀರವಾದ ಕ್ರಮದಲ್ಲಿದೆ. ಈ ಎರಡು ನಾಟಕಗಳಲ್ಲಿ ಅವರು ಮಹಾಭಾರತದ ಕತೆಗಳಿಗೆ ಮರಳುತ್ತಾರೆ. ಒಂದು ಅರ್ಥದಲ್ಲಿ ಇಡೀ ಆಧುನಿಕ ಭಾರತೀಯ ಸಾಹಿತ್ಯವೆ ಗತಕಾಲದ ಸಾಹಿತ್ಯದ ಪುನರ್ ವಿಮರ್ಶೆ ಮತ್ತು ಪುನರ್ ರಚನೆಯಾಗಿದೆ. ‘ಶೂದ್ರತಪಸ್ವಿ’ ನಾಟಕದ ಬಗೆಗಿನ ಮಾಸ್ತಿ ಜೊತೆಗಿನ ಚರ್ಚೆಯಲ್ಲಿ ಕುವೆಂಪು ಇದನ್ನು ಸಮರ್ಥವಾಗಿ ವಿವರಿಸಿದ್ದಾರೆ.

ಪಶ್ಚಿಮದ ಹಲವು ದೇಶಗಳಲ್ಲಿ ಗತಕಾಲದ ಪುರಾಣಗಳು ಇಂದಿನ ಬದುಕಿನೊಂದಿಗೆ ಸಂಬಂಧ ಕಳೆದುಕೊಂಡಿವೆ. ಭಾರತದಲ್ಲಿ ಅವು ಜೀವಂತವಾದ ಸ್ಮøತಿಗಳಾಗಿವೆ. ಎರಡನೆಯ ಕಾರಣವೆಂದರೆ ಈ ಪುರಾಣಗಳ ಜೊತೆಗೆ ಒಂದು ನೋಟಕ್ರಮ, ನಂಬಿಕೆ ಹೆಣೆದುಕೊಂಡಿರುತ್ತವೆ. ಅವುಗಳನ್ನು ಪ್ರಶ್ನಿಸಬೇಕೆನ್ನುವ ಇಂದಿನ ಬರಹಗಾರ ಆ ಪುರಾಣಗಳ, ಮಹಾಕಾವ್ಯಗಳ ವಸ್ತುವನ್ನು ಪುನರ್ ರಚಿಸುವುದು ಅನಿವಾರ್ಯ. ಕುವೆಂಪು ವಿವರಿಸಿದ ಈ ಉದ್ದೇಶಗಳು ಭಾರಿಘಾಟ್ ಅವರ ಈ ನಾಟಕಗಳಿಗೂ ಇವೆ.

‘ಸಹಗಮನ’ ನಾಟಕದ ಕೇಂದ್ರ ಪ್ರಜ್ಞೆ ಮಾದ್ರಿ. ಸ್ವತಃ ಕ್ಷತ್ರಿಯ ರಾಜಕುಟುಂಬದವಳಾದ ಅವಳಿಗೆ ಪಾಂಡುವನ್ನು ಮದುವೆಯಾದ ಮೇಲೆ ಈ ವಂಶದ ವಿಚಿತ್ರವಾದ ಜನ್ಮರಹಸ್ಯಗಳು ಪದರ ಪದರವಾಗಿ ಬಿಚ್ಚಿಕೊಳ್ಳತೊಡಗುತ್ತವೆ. ಈ ರಹಸ್ಯಗಳಲ್ಲಿ ಭಾಗಿಗಳಾಗಿರುವ ವಂಶದ ಸೊಸೆಯರು ಒಬ್ಬರಾದ ಮೇಲೆ ಒಬ್ಬರು ಈ ಮುಚ್ಚಿದ ಬಾಗಿಲುಗಳನ್ನು ತೆರೆಯುತ್ತಾರೆ. ಮತ್ಸ್ಯಗಂಧಿ-ಯೋಜನಗಂಧಿ-ಸತ್ಯವತಿ, ಕುಂತಿ, ಗಾಂಧಾರಿ ಮತ್ತು ರಂಗದ ಮೇಲೆ ಬಾರದ ಅಂಬೆ ಅಂಬಾಲಿಕೆಯರು, ವಿಧುರನ ತಾಯಿಯಾದ ದಾಸಿ. ನಾಟಕದ ಶಕ್ತಿಯಿರುವುದು ಬೇಟೆಗೆ ಹೋದ ಪಾಂಡುವಿನಿಂದಾಗಿ ಒಬ್ಬಂಟಿಯಾಗಿರುವ ಮಾದ್ರಿ ಒಬ್ಬಂಟಿಯಲ್ಲ; ಸಹವೂ ಅಲ್ಲದ ಗಮನವೂ ದೊರೆಯದ ಸ್ತ್ರೀ ಪರಂಪರೆಯಲ್ಲಿ ಒಬ್ಬಳು ಎನ್ನುವುದನ್ನು ಬಿಂಬಿಸುವುದರಲ್ಲಿದೆ.

ಮಾದ್ರಿ ಅತ್ಯಂತ ಸೃಜನಶೀಲೆ ಮತ್ತು “ಆಧುನಿಕ” ಚಿಂತನೆಯುಳ್ಳವಳು. ಅಂದರೆ ಕ್ಷತ್ರಿಯ ಅಹಂಕಾರ ಹಾಗೂ ವಂಶದ ಹಿರಿಮೆಯಲ್ಲಿ ಕಳೆದುಹೋದ ಸ್ತ್ರೀಪರಂಪರೆಯ ವಾರಸುದಾರೆ. ಇತರರು ಹೇಳುವ ಕತೆಗಳನ್ನು ತನ್ನ ಕುಂಚದಲ್ಲಿ ಗ್ರಹಿಸಿ ಚಿತ್ರಿಸಬಲ್ಲಳು. ಕಲೆಗಾರನಿಗೆ ಇರುವ ದರ್ಶನ ಪ್ರತಿಭೆಯೂ ಅವಳಿಗಿದೆ. ಪಾಂಡುವಿನ ದುಡುಕಿನಿಂದಾಗಿ ವಿಧವೆಯಾದ ಅವಳು ಈಗ ಸಹಗಮನ ಮಾಡಬೇಕಿದೆ. ಅದೇ ವಂಶದ ಪಾರಮ್ಯವನ್ನು ಬೆಳಗುವುದಕ್ಕಾಗಿ ಮುಂದಿನ ಯುಗಗಳಲ್ಲಿ ಸ್ತ್ರೀಯರ ಸ್ವಾತಂತ್ರ್ಯ, ಲೈಂಗಿಕ ಅಧಿಕಾರ ಮತ್ತು ಆಸ್ತಿಗಳನ್ನು ನಿಯಂತ್ರಿಸುವ ಕರಾಳ ಪದ್ಧತಿಯಾಗಿ ಬೆಳೆದ ಸತೀ ಪದ್ಧತಿಯ ಮೊದಲ ಬಲಿಪಶು ಅವಳಾಗುತ್ತಾಳೆ. ಹಾಗೆಂದ ಮಾತ್ರಕ್ಕೆ ಇದು ಕಪ್ಪು ಬಿಳಿ ಮಾದರಿಯ ಸ್ತ್ರೀವಾದದ ದ್ಯೋತಕವೂ ಅಲ್ಲ.

ಸತ್ಯವತಿಯಿಂದ ಕುಂತಿಯವರೆಗೆ ಈ ಸ್ತ್ರೀಯರು ವಂಶ ರಾಜಕೀಯದ, ಕ್ಷಾತ್ರವರ್ಗದ ಸಿದ್ಧಾಂತಗಳ ಸಹಭಾಗಿಗಳೇ ಆಗಿದ್ದಾರೆಯೆ? ಅವಳ ಸಹಗಮನಕ್ಕೆ ಅವರೂ ಕಾರಣರಲ್ಲವೆ? ಇಂಥ ಸಂಶಯಗಳು ಮಾದ್ರಿಯ ಮನಸ್ಸಲ್ಲಿ ಮಾತ್ರವಲ್ಲ ಪ್ರೇಕ್ಷಕರ ಮನಸ್ಸನ್ನೂ ಬಾಧಿಸುತ್ತವೆ. ಐದು ಮಂತ್ರಗಳಲ್ಲಿ ಮೊದಲ ಮಂತ್ರದಿಂದ ತಾನು ಪಡೆದ ಮಗುವಿನ ಹೆಸರನ್ನೂ ಹೇಳದ ಕುಂತಿಯೂ ಇದ್ದಾಳಲ್ಲವೆ?

“ಸಾಯುವನೇ ಜಿರಂಜೀವಿ” ಕೂಡ ಇಂಥದೇ ತೀವ್ರವಾದ ಪ್ರಶ್ನೆಗಳಿಂದ ಕಿಕ್ಕಿರಿದ ನಾಟಕವಾಗಿದೆ. ಕುರುಕ್ಷೇತ್ರದ ಯುದ್ಧ ಮುಗಿದಿದೆ. ತೊಡೆ ಮುರಿದುಕೊಂಡು ಸಾವಿಗೆ ದುರ್ಯೋಧನ ಕಾಯುತ್ತಿದ್ದಾನೆ. ತನ್ನ ಬಾಳಿನ ಅರ್ಥ, ಉದ್ದೇಶಗಳೇ ಅರ್ಥವಾಗಿರದ ಅಶ್ವತ್ಥಾಮ ಈಗ ಹತವಾಗಿ ಹೋಗಿರುವ ಕುರುಸೇನೆಯ ಸೇನಾಧಿಪತಿ ಪಟ್ಟವನ್ನು ಕಟ್ಟಿಕೊಂಡು ಹಿಂಸೆ ಹಾಗೂ ಸರ್ವನಾಶದ ಆತ್ಮಘಾತುಕ ಹುಚ್ಚಿನಲ್ಲಿ ಹೊರಡುತ್ತಾನೆ. ಹಿಂಸೆಯ ಅಂಧಃತಮಸ್ಸಿನಲ್ಲಿ ಅವನಿಗೆ ಏನೂ ಕಾಣದು. ಸರ್ವನಾಶದ ಮೂಲಕ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಟ್ಟಿಕೊಳ್ಳುವ ಹುಚ್ಚಿನಲ್ಲಿ ಅವನಿದ್ದಾನೆ.

ನಾಟಕದ ಹರಹು ಹೇಗಿದೆಯೆಂದರೆ ಅದರಲ್ಲಿ ತಂದೆ ದ್ರೋಣನ ಬಡತನ, ಅವಮಾನದ ಅನುಭವ, ಪ್ರಭುತ್ವದ ಸೇವೆಯ ದೈನ್ಯ ಇವೆಲ್ಲವೂ ಸ್ಫುಟವಾಗಿ ಬಂದಿವೆ. ಸ್ವತಃ ಅಶ್ವತ್ಥಾಮ ತಾಯಿಯನ್ನು ಕಳೆದುಕೊಂಡು ತಂದೆಯನ್ನೇ ತಾಯಿಯಾಗಿ ನೋಡಿದವನು. ದ್ರೋಣರು ಯುದ್ಧದಲ್ಲಿ ಮಾನಸಿಕವಾಗಿ ತಟಸ್ಥನಾಗುವುದು ಅಶ್ವತ್ಥಾಮನಿಗೆ ಒಪ್ಪಿಗೆ ಇಲ್ಲ. ಅವನ ನಿಷ್ಠೆಯ ವ್ಯಾಖ್ಯಾನವೇ ಬೇರೆ ಇದೆ. ಭೀಷ್ಮನಿಂದ ಶುರುವಾಗಿ ಪ್ರತಿಯೊಬ್ಬ ಸೇನಾನಿಯು ಅತ್ಯಂತ ಸವಾಲಿನ ಸಂದರ್ಭದಲ್ಲಿ ನಿಷ್ಕ್ರಿಯನಾಗಿದ್ದು ಒಂದು ತಂತ್ರವೇ ಎನ್ನುವ ಸಂಶಯವು ಅವನನ್ನು ಭಾದಿಸಿದೆ.

ಹೀಗೆ ಒಂದು ಮಗ್ಗಲಿನಿಂದ ಇಡೀ ನಾಟಕವು ಗಂಭೀರವಾದ ತಾತ್ವಿಕ ಹುಡುಕಾಟವಾಗಿದೆ. ಆದರೆ ತಾತ್ವಿಕತೆಗೂ ಇತಿಹಾಸದ ವಾಸ್ತವಗಳಿಗೂ ನೇರವಾದ ಸಂಬಂಧವಿದೆ. ಹೀಗಾಗಿ ಹಿಂಸೆ ಹಾಗೂ ವಿನಾಶಗಳು ಪರಿಕಲ್ಪನೆಗಳಲ್ಲ. ಮನುಷ್ಯ ಕುಲದ ಚಾರಿತ್ರಿಕ ದೈವವನ್ನೇ ಬದಲಾಯಿಸುವ ಶಕ್ತಿಗಳು ಅವು. ನಾಟಕದ ಅತ್ಯಂತ ವಿಷಾದಪೂರ್ಣ ಸಾಲುಗಳಲ್ಲಿ ಹೇಳುವುದಿಲ್ಲ. ಮನುಷ್ಯ ನಾಗರಿಕತೆಯನ್ನು ಕಟ್ಟಲು ಲಕ್ಷಾನುಲಕ್ಷ ವರ್ಷಗಳು ಬೇಕು. ಆದರೆ ಮುಗಿಸಲು ಕುರುಕ್ಷೇತ್ರವೇ 18 ದಿನಗಳಲ್ಲಿ ಮುಗಿಯಲಿಲ್ಲವೆ? ಎಂದು ಕೇಳಲಾಗುತ್ತದೆ. ಹೀಗಾಗಿ ಅಶ್ವತ್ಥಾಮನ ವೈಯಕ್ತಿಕ ಜೀವನವು ಹಿಂಸೆ ಹಾಗೂ ಅಧಿಕಾರಗಳ ಜೊತೆಗೆ ಬೆಸುಗೆಗೊಂಡಿದೆ. ಅವನಿಗೆ ಸಾವೂ ಇಲ್ಲ; ಬಿಡುಗಡೆಯೂ ಇಲ್ಲ.

ನಾಟಕದ ಇನ್ನೊಂದು ಎಳೆಯೆಂದರೆ ನಟನ ಕತೆ. ನಟ ಹಾಗೂ ಪಾತ್ರದ ಸಂಬಂಧವು ಅನೇಕ ನಾಟಕಗಳ ವಸ್ತುವಾಗಿದೆ. ಪ್ರಾಯಶಃ ಪಿರಾಂಡೆಲೋನ ನಾಟಕಗಳಿಂದಾಗಿ ಈ ವಸ್ತು ಆಧುನಿಕ ನಾಟಕ ಪರಂಪರೆಗಳಲ್ಲಿ ಒಂದು ತಾತ್ವಿಕ ಶೋಧನೆಯಾಗಿ ಬಂದಿದೆ. ‘ಹಯವದನ’ ದಲ್ಲಿ ಇದೇ ವಸ್ತುವನ್ನು ಟoತಿ mimeಣiಛಿ ಶೈಲಿಯಲ್ಲಿ ಬಳಸಿಕೊಳ್ಳಲಾಗಿದೆ. ಭಾರಿಘಾಟ್‍ರ ಈ ನಾಟಕದಲ್ಲಿ ನಟನ ಬದುಕು, ಅಸ್ತಿತ್ವಗಳು ಅಶ್ವತ್ಥಾಮನ ಬದುಕಿನಷ್ಟೇ ಗೋಜಲು ಗೋಜಲಾಗಿವೆ. ವ್ಯತ್ಯಾಸವೆಂದರೆ ಅವರ ಕಾರ್ಯಕ್ಷೇತ್ರಗಳು ಬೇರೆ. ಇಲ್ಲಿ ಹೋಲಿಕೆಯ ಪ್ರಶ್ನೆ ಇಲ್ಲ.

ನಟನಲ್ಲಿದ್ದಂತೆ ಎಲ್ಲ ಮನುಷ್ಯರ ಅಂತರಾಳದಲ್ಲಿ ಒಬ್ಬ ಅಶ್ವತ್ಥಾಮನಿ ದ್ದಾನೆ. ಅಶ್ವತ್ಥಾಮನು ಒಂದು ಸಾಮ್ರಾಜ್ಯವನ್ನು ನಾಶಮಾಡಿದರೆ ನಟನೊಳಗಿನ ಅಶ್ವತ್ಥಾಮ ಒಂದು ಕುಟುಂಬವನ್ನು ನಾಶಮಾಡುತ್ತಾನೆ.  ಅಶ್ವತ್ಥಾಮನಿಗೆ ಸಾವಿಲ್ಲ. ನಟನಿಗೆ ನೇಣುಗಂಬವಿದೆ. ನಾನು ಈ ನಾಟಕದ ರಂಗಪ್ರದರ್ಶನವನ್ನು ನೋಡಿಲ್ಲ. ಓದುವಾಗ ನಟನ ಕತೆಯ ಪ್ರವೇಶವು ಸ್ವಲ್ಪ ಹಠಾತ್ತಾಗಿ ಆಗುತ್ತಿದೆ ಎನ್ನಿಸಿತು. ಅಲ್ಲದೆ ಅವನ ಕಥಾನಕವೂ ದೀರ್ಘವೇ ಆಗಿದೆ. ಈ ನಾಟಕವು ಏಕವ್ಯಕ್ತಿ ಪ್ರದರ್ಶನಕ್ಕಾಗಿ ಬರೆದಿರುವುದರಿಂದಾಗಿ ಈ ಎರಡೂ ಎಳೆಗಳು ಸೇರಿಕೊಳ್ಳುವುದು ರಂಗದ ಮೇಲೆ ಹೆಚ್ಚು ಪ್ರಭಾವಿಯಾಗಿ ಬರುತ್ತದೆ. ಕವತ್ತಾರ್ ಅವರ ಅಭಿನಯದ ಪ್ರದರ್ಶನಗಳು ಈಗಾಗಲೇ ಕನ್ನಡ ರಂಗಭೂಮಿಯ ದಂತಕತೆಗಳಾಗಿಬಿಟ್ಟಿವೆ.

ಭಾರತೀಯ ಆಧುನಿಕ ನಾಟಕದ ಆಚಾರ್ಯ ಕೃತಿಯೆಂದು ಕರೆಯಲಾಗುವ ‘ಅಂಧಯುಗ’ ನಾಟಕವನ್ನು ಅದರ ಕಾವ್ಯಾತ್ಮಕ ಸಂಕೀರ್ಣ ಭಾಷೆಯಿಂದಾಗಿ ರಂಗದ ಮೇಲೆ ತರುವುದು ಕಷ್ಟವೆಂದು ಬಹಳ ವರ್ಷಗಳ ಕಾಲ ಪ್ರಯತ್ನಗಳೇ ಆಗಲಿಲ್ಲ, ಆದರೆ ಆನಂತರ ಸತ್ಯದೇವ ದುಬೆ ಮತ್ತು ಇಬ್ರಾಹಿಂ ಅಲ್ಕಾಜಿಯವರ ನಿರ್ದೇಶನದಲ್ಲಿ ಅದು ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಗಿಬಿಟ್ಟಿತು.

ಕನ್ನಡ ರಂಗಭೂಮಿ ಹಾಗೂ ಪ್ರೇಕ್ಷಕವರ್ಗದ ಉತ್ತಮ ಅಭಿರುಚಿಯ ಫಲವೇ ಇರಬಹುದು.

ಭಾರಿಘಾಟ್‍ರ ಶ್ರೀಮಂತ ಪ್ರತಿಮಾನಿಷ್ಠ ಭಾಷೆ ತೊಡಕೇ ಆಗಲಿಲ್ಲ. ನಾಟಕದ ಭಾಷೆಯು ಯಾವುದೇ ಸಮಾಜಾಯಶಿ ಮಾಡಿಕೊಳ್ಳಬಾರದು ಎನ್ನುವುದು ನನ್ನ ಪೂರ್ವಗ್ರಹ. ನಾಟಕಕಾರನ ಅನೇಕ ಜವಾಬ್ದಾರಿಗಳಲ್ಲಿ ಸಮುದಾಯದ ಭಾಷೆಯ ಸಾಮಥ್ರ್ಯವನ್ನು ಹಿಗ್ಗಿಸುವ ಮೂಲಕ ಸಮುದಾಯದ ಪ್ರಜ್ಞೆಯನ್ನು ವಿಸ್ತರಿಸುವುದೂ ಒಂದಾಗಿದೆ. ಶಶಿಧರ ಭಾರಿಘಾಟ್‍ರ ಈ ನಾಟಕಗಳ ಭಾಷೆ ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತದೆ. ಈ ನಾಟಕದ ಅನೇಕ ಸಾಲುಗಳು ವರ್ಷಗಳ ಹಿಂದೆ ಪ್ರದರ್ಶನ ನೋಡಿದವರಿಗೂ ನೆನಪಿರುವಷ್ಟು ಪ್ರಭಾವಿಯಾಗಿವೆ. ಸಮಕಾಲೀನ ಜಗತ್ತಿನ ಬಹು ಭಾಗಗಳು, ರಾಷ್ಟ್ರಗಳು ಹಿಂಸೆ ಹಾಗೂ ಆತ್ಮವಿನಾಶದ ದಾರಿಯಲ್ಲಿ ಅತಿ ಉತ್ಸಾಹದಿಂದ

ಸಾಗುತ್ತಿರುವ ಈ ಕಾಲದಲ್ಲಿ ಅಶ್ವತ್ಥಾಮನೂ ನಮ್ಮ ಸಮಕಾಲೀನನಾಗಿ ಕಾಣವುದು ನಾಟಕದ ಶಕ್ತಿಯೂ ಹೌದು. ನಮ್ಮ ಚರಿತ್ರೆಯ ದೌರ್ಭಾಗ್ಯವೂ ಹೌದು.

Leave a Reply

Your email address will not be published.