ಭಾಷಣ ಘೋಷಣೆಗಳಾಚೆ ಪಶ್ಚಿಮಘಟ್ಟದ ಕಾಡು-ಪಾಡು

ಒಂದು ವಿಧಾನ ಸೌಧ ಅಥವಾ ಮೈಸೂರು ಅರಮನೆ ಬಿದ್ದುಹೋದರೆ ಅಂತಹ ನೂರಾರು ಸೌಧ, ಅರಮನೆಗಳನ್ನು ಅದಕ್ಕಿಂತ ಭವ್ಯವಾಗಿ ನಿರ್ಮಿಸಬಹುದು, ಆದರೆ ಒಂದು ನದೀಮೂಲ ಅಳಿದುಹೋದರೆ ಅದನ್ನು ಮರುಸ್ಥಾಪಿಸಲು ನಮ್ಮಲ್ಲಿ ಯಾವುದೇ ವಿಜ್ಞಾನ, ತಂತ್ರಗಾರಿಕೆ ಇಲ್ಲ.

ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ ಅಂದರೆ ಅದು ಪಶ್ಚಿಮ ಘಟ್ಟ ಮತ್ತು ಅಲ್ಲಿನ ನದೀ ಮೂಲ, ಮಳೆಕಾಡು. ಪಶ್ಚಿಮ ಘಟ್ಟಕ್ಕೆ ಏನಾದರೂ ಸಮಸ್ಯೆ ಆದರೆ ಅದು ಇಡೀ ದಕ್ಷಿಣ ಭಾರತದ ಜನಜೀವನದ ಮೇಲೆ ದುಷ್ಪರಿಣಾಮ ಬೀರಬಹುದು. ಇಂದು ನಮ್ಮ ಸರಕಾರಗಳು, ರಾಜಕಾರಣಿಗಳು ‘ಅಭಿವೃದ್ದಿ’ ಎಂಬ ನೆಪದಲ್ಲಿ ತಮ್ಮ ಧನ ಖಜಾನೆ ತುಂಬುವ ಹಿತದೃಷ್ಟಿಯಿಂದ ಅಸಂಬದ್ಧ, ಪರಿಸರ ವಿನಾಶಕ ಯೋಜನೆಗಳನ್ನು ಜಾರಿಗೆ ತಂದು ಪಶ್ಚಿಮ ಘಟ್ಟದ ನೆಮ್ಮದಿಗೆ ಮಾರಣಾಂತಿಕ ಏಟು ನೀಡುತ್ತಿದ್ದಾರೆ. ಒಂದು ಕಡೆ ಸರಕಾರ ಪಶ್ಚಿಮ ಘಟ್ಟ ಉಳಿಸಿ, ಕಾಡು ಉಳಿಸಿ ಅಂತ ಕೇವಲ ಬೊಗಳೆ ಭಾಷಣ, ಘೋಷಣೆಗಳನ್ನು ಮಾಡುತ್ತಾ ಇನ್ನೊಂದು ಕಡೆ ಅದೇ ಸರಕಾರದ ರಾಜಕಾರಣಿಗಳು ಪಶ್ಚಿಮ ಘಟ್ಟವನ್ನು ನಾಶ ಮಾಡುವ ಮಾಫಿಯಾಗಳಿಗೆ ಅಗೋಚರವಾಗಿ ಅಡವಿ ನಾಶಕ್ಕೆ ಪರವಾನಗಿ ನೀಡುತ್ತಾ ತಮ್ಮ ದ್ವಿಮುಖ ನೀತಿಯನ್ನು ಅನುಸರಿಸುತ್ತಾರೆ.

ಈಗಾಗಲೇ ಸಾಕಷ್ಟು ಅಡವಿ, ಪರ್ವತಗಳನ್ನು ಕತ್ತರಿಸಿ, ನದೀಮೂಲಗಳನ್ನು ನಾಶಮಾಡಿ ಅವೈಜ್ಞಾನಿಕ ಯೋಜನೆಗಳನ್ನು ಮಾಡಿರುವುದಕ್ಕೆ ಇತ್ತೀಚೆಗಿನ ಪ್ರಾಕೃತಿಕ ದುರಂತಗಳು ಸಾಕ್ಷಿಗಳಾಗುತ್ತಿವೆ. ಜಲಸ್ಫೋಟ, ಪ್ರವಾಹ, ಸುನಾಮಿ, ಚಂಡಮಾರುತ, ಬರಗಾಲ… ಇವೆಲ್ಲವೂ ಮಾನವನಿರ್ಮಿತ ದುರಂತಗಳೇ ಹೊರತು ನಿಸರ್ಗ ನಿರ್ಮಿತ ಅಲ್ಲ. ನದಿ ತಿರುವು ಎಂಬ ಅಸಮರ್ಪಕವಾದ ‘ಎತ್ತಿನಹೊಳೆ ಯೋಜನೆ’ಯನ್ನು ಕಾರ್ಯರೂಪಕ್ಕೆ ತಂದು ನೀರಾವರಿ ಎಂಬ ನೆಪದಲ್ಲಿ ರಾಜಕಾರಣಿಗಳು ತಮ್ಮ ಧನದಾಸೆಗಾಗಿ ನೇತ್ರಾವತಿ, ಶರಾವತಿ, ಅಘನಾಶಿನಿ ಎಂಬ ರಾಜ್ಯದ ಪ್ರಮುಖ ನದಿಗಳನ್ನೆ ನಾಶ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಇಡೀ ರಾಜ್ಯವೇ ಬರಗಾಲದ ಕರಾಳ ಛಾಯೆಯಲ್ಲಿ ಬರಡು ಭೂಮಿ ಆಗುತ್ತಿದೆ.

ಆನೆ ದಾಳಿ, ಚಿರತೆ ದಾಳಿ ಅಂತ ಒಂದಷ್ಟು ಸುದ್ದಿಗಳಾಗುತ್ತಲೇ ಇರುತ್ತವೆ. ನಿಜವಾಗಿಯೂ ಇದು ಆನೆದಾಳಿ, ಚಿರತೆ ದಾಳಿಯಲ್ಲ. ಕಾಡಿನ ಮೇಲೆ ಮನುಜರ ದಾಳಿ… ಇದು ಎಲ್ಲಿಯೂ ಸುದ್ಧಿ ಆಗುವುದಿಲ್ಲ. ಯಾಕೆಂದರೆ ಈ ಅಡವಿ ದಾಳಿಯ ಹಿಂದೆ ಇರುವುದೇ ರಾಜಕಾರಣಿಗಳು ಅಥವಾ ಅವರ ಕೃಪಾ ಪೋಷಿತ  ತಂಡ. ಪಶ್ಚಿಮ ಘಟ್ಟದ ಆನೆಗಳ, ಹುಲಿಗಳ ಆವಾಸ ತಾಣ ಎಲ್ಲಾ ನಾಶವಾಗಿ ಅವುಗಳಿಗೆ ಬೇಕಾಗುವ ಆಹಾರಗಳನ್ನು ಮನುಜ ಸಾಮ್ರಾಜ್ಯ ತಿಂದು ಮುಗಿಸಿದರೆ ಆನೆ,ಹುಲಿಗಳು ಊರಿಗೆ ಬಾರದೆ ಇನ್ನೆಲ್ಲಿ ವಿಧಾನಸೌಧದ ಕಡೆ ಹೋಗಬೇಕಾ ? ಅರಣ್ಯ ಕಾಯಿದೆ, ವನ್ಯಜೀವಿ ಕಾಯಿದೆ, ಮೀಸಲು ಅರಣ್ಯ ಕಾಯಿದೆ ಎಲ್ಲಾ ಕೇವಲ ಇಲಾಖೆಯ ಕಡತಗಳಲ್ಲಿ ಬೆಚ್ಚನೆ ಮಲಗಿವೆ, ಪಶ್ಚಿಮ ಘಟ್ಟದ ಗಿರಿ,ಅಡವಿ,ಕಾನನ, ಕಣಿವೆ ಎಲ್ಲವೂ ಕಾಡುಕಳ್ಳರಿಗೆ ಸದಾ ಬಾಗಿಲು ತೆರೆದಿಟ್ಟಿದೆ. ಹೀಗಿರುವಾಗ ಪಶ್ಚಿಮ ಘಟ್ಟದ ನೋವಿಗೆ ಸ್ಪಂದಿಸುವವರು ಯಾರು ?

ನದೀ ಮೂಲ ಮತ್ತು ಅಡವಿಯನ್ನು ರಕ್ಷಣೆ ಮಾಡುವುದು ಬಿಟ್ಟು ಸೂಕ್ಷ್ಮ ಜೀವ ವೈವಿದ್ಯ ಪ್ರದೇಶಗಳಿಗೆ ದೌರ್ಜನ್ಯದಿಂದ ಅವುಗಳ ಧಾರಣಾ ಶಕ್ತಿಗೂ ಮೀರಿ ಅರ್ಥವಿಲ್ಲದ ಯೋಜನೆಗಳನ್ನು ಮಾಡುತ್ತಾ ನಮ್ಮನ್ನಾಳುವ ರಾಜಕೀಯ ವ್ಯವಸ್ಥೆಯೇ ದುರಂತಗಳಿಗೆ ಆಮಂತ್ರಣ ನೀಡಿ ಆಹ್ವಾನಿಸುತ್ತಿದೆ. ಒಂದು ವಿಧಾನಸೌಧ ಅಥವಾ ಮೈಸೂರು ಅರಮನೆ ಬಿದ್ದು ಹೋದರೆ ಅಂತಹ ನೂರಾರು ಸೌಧ, ಅರಮನೆಗಳನ್ನು ಅದಕ್ಕಿಂತ ಭವ್ಯವಾಗಿ ನಿರ್ಮಿಸಬಹುದು ಆದರೆ ಒಂದು ನದೀಮೂಲ ಅಳಿದು ಹೋದರೆ ಮತ್ತೆ ಅದನ್ನು ಮರುಸ್ಥಾಪಿಸಲು ನಮ್ಮಲ್ಲಿ ಯಾವುದೇ ವಿಜ್ಞಾನ, ತಂತ್ರಗಾರಿಕೆ ಇಲ್ಲ. ಟೆಕ್ನಾಲಜಿಯಿಂದ ಏನನ್ನೂ ಸಾಧಿಸಬಹುದೆಂಬ ಅಹಂ ನಮ್ಮಲ್ಲಿರುವ ಕಾರಣ ನಾವು ಪ್ರಕೃತಿಗೆ ವಿಶೇಷ ಸ್ಥಾನಮಾನ, ಗೌರವ, ಕಾಳಜಿ ನೀಡುತ್ತಿಲ್ಲ. ಇಂದು ಮಂಗಳ ಗ್ರಹ, ಚಂದ್ರಲೋಕವನ್ನು ಸರ್ವೇ ಮಾಡಿರುವ ಮಾನವ ಯುದ್ಧ, ರಕ್ಷಣೆ ಎಂದು ಅಣುಬಾಂಬುಗಳನ್ನು ತಯಾರಿಸಿಟ್ಟ ಮಾನವ, ಮೊನ್ನೆ ಕೇವಲ ಒಂದು ಕಣ್ಣಿಗೆ ಕಾಣದ ಕೋರೋನ ವೈರಸ್‌ನಿಂದ ಮುಖಕ್ಕೆ ಮಾಸ್ಕ್ ಹಾಕಿ ಹೇಡಿಯಂತೆ ಬಿಲ ಸೇರಿಕೊಂಡಿದ್ದು ಯಾಕೆ? ಈಗ ವಿಜ್ಞಾನ, ತಂತ್ರಗಾರಿಕೆ ಎಂಬ ಅಹಂಕಾರ ಎಲ್ಲಿ ಹೋಯಿತು? ನಿಸರ್ಗದ ಅಗಾಧ ಶಕ್ತಿ ಎದುರು ಮಾನವ ಏನೂ ಅಲ್ಲ. ಈ ಪ್ರಕೃತಿಯಿಂದ ನಾವೆಷ್ಟು ಉಪಯುಕ್ತತೆಯನ್ನು ಪಡೆದುಕೊಂಡಿದ್ದೇವೆ, ಪ್ರಕೃತಿ ನಾಶವಾದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಪ್ರತಿಯೊಬ್ಬರೂ ಅರಿತು ನಿಸರ್ಗ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಾತ್ರಧಾರಿಗಳಾಗಬೇಕೆಂಬ ಪ್ರಮುಖ ವಿಚಾರವನ್ನು ಮುಂದಿನ ಪೀಳಿಗೆಗೆ ಕಲಿಸುವ ಅನಿವಾರ್ಯತೆ ನಮ್ಮ ಮುಂದಿದೆ.

*ಲೇಖಕರು ಪ್ರಸಿದ್ಧ ಚಿತ್ರಕಲಾವಿದರು ಹಾಗೂ ಪರಿಸರ ಪ್ರೇಮಿ.

Leave a Reply

Your email address will not be published.