ಭಾಷಾ ಅಜಗಜಾಂತರ…!

-ಯಶಸ್ವಿ ದೇವಾಡಿಗ

ನಮ್ಮ ಸೈನ್ಯ ಅಂದ್ರೆ, ಮಾಮೂಲಿ ಜಡೆಗಳ ಸೈನ್ಯ ಮಾತ್ರ ಅಲ್ಲ. ಹಲವು ಭಾಷೆಗಳ ಸಮ್ಮಿಲನ ಅಂದರೆ ತಪ್ಪಿಲ್ಲ. ಆದರೆ ಇಲ್ಲಿ ಮಾತನಾಡುವಾಗ ಕೂಡ ಮಜವಾದ ಘಟನೆಗಳು ಸಂಭವಿಸದೇ ಇರುತ್ತಾ ಇರಲಿಲ್ಲ. ಎಷ್ಟೋ ವರ್ಷಗಳ ನಂತರ ಮನೆಗೆ ಗೆಳತಿ ಬಂದಿದ್ಲು. ನಾವು ಮಲೆನಾಡ ಜನ. ಆದರೆ ಮೂಲ ಮಾತ್ರ ಕರಾವಳಿ ಜನ. ಹೋಯ್ಕ್ ಬರ್ಕ್ ಅಂತ ಮಾತಾಡಲಿಲ್ಲ ಅಂದ್ರೆ ಕುಂದಾಪುರ ಜನ ಆಗಿ ಎಂತ ಪ್ರಯೋಜನ ಹೇಳಿ ಕಾಂಬ? ಇರಲಿ. ಹುಟ್ಟಿ ಬೆಳಿದಿದ್ದು ಘಟ್ಟದ ಮೇಲೆ ಆದ್ರೂ ಅದೇನೋ ಅಂತ್ರಲ್ಲ ಊಟಕ್ಕೆ ಉಪ್ಪಿನಕಾಯಿ ಇಲ್ಲದೇ ಊಟ ಸೇರುದಿಲ್ಲ ಅಂದಂಗೆ, ಊಟಕ್ಕೆ ಮೀನು ಇಲ್ಲದೇ ಆತ್ತÀ ನಮಗೆ..! ಹೇಳಿ ಕೇಳಿ ಕರಾವಳಿ ಜನ ನೋಡಿ.

ಆದ್ರೂ ಈ ಏಜುಕೇಶನ್ ಅಂತ ವಿಚಾರಕ್ಕೆ ಬಂದ್ರೆ ಅರ್ಧ ಕರ್ನಾಟಕ ಸುತ್ತಾಡಿ, ಅಂತೂ ಇಂತೂ ಪದವಿ ಮುಗಿಸಿದ್ದಾಯ್ತು. ಆದ್ರೆ ಈ ಸಣ್ಣ ಜರ್ನಿಯಲ್ಲಿ ಗೆಳತಿಯರು ಅಂದ್ರೆ ಉತ್ತರಕರ್ನಾಟಕದ ಬ್ಯಾಡಗಿ ಹೆಣೈಕ್ಳು. ಅಂದ್ರ ಇಲ್ಲಿ ಹೇಳುದ ಏನಂದ್ರ ಆಕಿ ನನ್ನ ರೂಮೇಟ್ ಆದ ಸಲುವಾಗಿ ನನ್ನ ಬೆಸ್ಟ್ ಫ್ರೆಂಡ್ ಆಗಿ ಬಿಟ್ಲು ನೋಡ್ರೀಪಾ. ಹಂಗಾರೆ ಆಕಿ ನಮ್ಮನಿಗೆ ನಾನು ಆಕಿ ಮನಿಗೆ ಹೋಗಲೇ ಬೇಕಲ್ಲ ಮತ’. ಬರ್ತಾ ಬರ್ತಾ ಮನೆಮಗಳು ಆದಳು ನನ್ನ ಗೆಳತಿ.

ಗೃಹಪ್ರವೇಶದ ಸಮಯ. ಅಚ್ಚುಕಟ್ಟಾದ ಗಿಡ್ಡ ಹುಡುಗಿ ಮನೆಗೆ ಕಾಲು ಹಾಕುತ್ತಲೇ, ‘ಅರೇ..! ಪುಟ್ಟ ಅದೇನೋ ಪರ್ಶಿ, ಹಂಗೈತಿ..!’ ಎಂದು ನನ್ನ ತಮ್ಮನ ನೋಡಿ ಅಂದ್ಲು.  ನನ್ನ ದೊಡಮ್ಮ.  ‘ಇಲ್ಲಿ ಯಾರು ಪರ್ಶೀಯನ್ ಇದಾರೆ. ಅಲ ಈ ಹುಡುಗಿಗೇ ನನ್ನ ಮೊಮ್ಮಗ ಹಾಗ ಕಾಣಿಸ್ತಾ ಇದಾನ?’ ಅಂತ ಅನುಮಾನ ಶುರುವಾಯ್ತು. ಕೇಳಿಯೇ ಬಿಡೋಣ ಅಂತ ಎದ್ದು ಬಿಟ್ಟರು. ‘ಅಲ್ಲ ಹೆಣ ನಿಂಗ್ ನನ್ನ ಮೊಮ್ಮಗ ಹೆಂಗ ಕಾಣಿಸ್ತ? ಪರ್ಶಿಯನ್ ತರ ಇದ್ನಾ ಅವನು! ಯಬ್ಯೆ!’ ಅಂದು ಬಿಟ್ರು. ನನ್ನ ಗೆಳತಿ ಮಂಕು ಬಡಿದವರ ಹಾಗೇ ನಿಂತು ಬಿಟ್ಲು. ‘ಅಲ..! ನಾನು ಪರ್ಶೀ ಬಗ್ಗೆ ಒಳ್ಳೆ ಮಾತಾಡದ್ರ ನಂಗೆ ಹೆಣ ಅಂತ ಕರಿತಾರಲ?  ಅಂತದ್ದು ಏನು ತಪ್ಪು ಮಾತಾಡಿದ್ನಿ?’  ಅಂತ ನನ್ನ ಕಡೆ ಗೆಳತಿ ತಿರುಗಿ ನೋಡಿದ್ಲು.

ಉತ್ತರ ಹೇಳಬೇಕು ಅನ್ನೊ ಅಷ್ಟರಲ್ಲಿ ‘ಮಾಯಾ..! ಮಾಯಾ..! ಅಲ ನನ್ನ ಕವಳಚೀಲ ಮಾಯ್ಕು ಆಯ್ತೆ? ಇಟ್ಟಲ್ಲಿ ಇಪ್ಪುದಿಲ್ಲ ಯಾರ ಹೊತ್ತಕಂಡ ಹೋತ್ರ ಏನೋ..! ಹೆಣ ನೀ ಎಲ್ಲಾದರೂ ಕಂಡ್ಯಾ?’ ಎನ್ನುತ್ತಾ ಮತ್ತೆ ನನ್ನ ಗೆಳತಿಗೆ ಕೇಳಿದ್ರು ನನ್ನ ತಂದೆ. ಈಕೀ ಆಗಲೇ ಬ್ಯಾಸರ ಮಾಡಕೊಂಡು ಪ್ಯಾಚು ಮೋರೆ ಹಾಕೊಂಡಿದ್ಲು. ಇನ್ನು ಅಪ್ಪನೂ ಹೆಣ ಅಂದ್ರೆ ಏನು ಅನಕ್ಕೋಬೇಡ! ಸರಸರನೆ ರೂಮಿಗೆ ಸೇರ್ಕೋಬಿಟ್ಟಳು ನನ್ನ ಗೆಳತಿ.

ಪಾಪ ಎಷ್ಟು ಬೇಜಾರು ಮಾಡಕೊಂಡ್ಲೋ ಅಂತ ರೂಮಿಗೆ ಹೋದೆ. ‘ಅಲ್ಲ ಕಣೆ ನಿಮ್ಮನಿ ಒಳಗೆ ಬರುವಾಗಲೇ ಹೆಣ ಅಂತ ನನ್ನ ಕರೆದ್ರು. ಮತ್ತ ನಿಮ್ಮ ತಂದೆ ಮಾಯಾ ಮಾಯಾ ಅಂತ ಒಂದೇ ಸಮನೆ ಅರಚಕ್ಕೋತಾ ಬಂದ್ರಲಾ.. ನಾವೇನು ಮ್ಯಾಜಿಕ್ ಮಾಡಿ ಮಾಯಾ ಮಾಡ್ತಿವೇನು? ಅದು ಕವಳನಾ, ದನಕ್ಕೆ ಹಾಕೋದು ಮನೆ ಒಳಕ್ಕೆ ಹೆಂಗ ತರ್ತಾರ ಅಂತಿನಿ.. ನೀನೇ ಹೇಳ್’ ಎಂದು ಪ್ರಶ್ನೆಯ ಸುರಿಮಳೆ ಸುರಿಸಿದಳು.

‘ಅಲ್ಲವ್ವ ಗೆಳತಿ… ನಿಮ್ಮ ಭಾಷಿ ಒಳಗ ಪರ್ಶೀ ಅಂದ್ರೆ ಬಟ್ಟೆ ಅಂತ ನಮ್ಮ ದೊಡಮ್ಮಾಗೆ ಗೊತ್ತಿಲ್ಲ. ಹಂಗ ನಮ್ಮ ಭಾಷಿ ಒಳಗ ಹೆಣ ಅಂದರೆ ಹೆಣ್ಣು ಅಷ್ಟೆ’ ಅಂದೆ. ‘ಹಂಗಾರೆ ಮಾಯಾ..ಅಂದ್ರ?’ ಮತ್ತೆ ಪ್ರಶ್ನೆ ಕೇಳಿದಳು. ಅದಿಕ್ಕೆ ನಮ್ಮ ಭಾಷೆಯಲ್ಲಿ ಅತ್ತೆ ಅಂತ ಅರ್ಥ ಅಂದೆ. ಆದರು ಸಮಾಧಾನ ಆಗದೇ, ‘ನೀ ಎಷ್ಟೇ ಹೇಳು ಕವಳ ಅನ್ನೋದು ಅದನ್ನ ನಂಗ ಕೇಳೋದು ಏನು ಇತ್ತು, ಕವಳ ಎಲ್ಲಾದರೂ ಮನೆಯಲ್ಲಿ ಇಡ್ತಾರೇನು?’ ಎನ್ನುತ್ತಾ ಸಿಟ್ಟು ಮಾಡಕೊಂಡುಬಿಟ್ಲು. ‘ಕವಳ ಅಂದ್ರೆ ತಾಂಬೂಲ ಕಣವ್ವ..!’  ಎಂದು ಹೇಳೋ ಅಷ್ಟ್ರಲ್ಲಿ ಮುನಿಸಿನಿಂದ ಅಲ್ಲಿಂದ ಹೊರ ನಡೆದಿದ್ದಳು. ಈ ಅಜಗಜಾಂತರ ನಡುವೆ ದೊಡ್ಡಮ್ಮನ ಮನಸಿನಲ್ಲಿ ಮಾತ್ರ ಮೊಮ್ಮಗ ಪರ್ಶೀಯನ್ ಆಗೇ ಉಳಿದು ಬಿಟ್ಟ.

Leave a Reply

Your email address will not be published.