ಭೂಲೋಕದಿಂದ ಗುಳೆ ಹೊರಟ ದೇವತೆಗಳು!

ದೀರ್ಘ ಕಾಲದ ಬಳಿಕ ಮೌನ ಮುರಿದ ಭಗವಂತನು ಬಾಯ್ಬಿಟ್ಟು… ದೇವಾನುದೇವತೆಗಳ ಜೊತೆಗೆ ಗೊಳೋ ಎಂದು ಅಳಲು ಶುರು ಮಾಡಿದ! ಹಾಗಾದರೆ ದೇವಲೋಕದಲ್ಲಿ ಆಗಿದ್ದಾದರೂ ಏನು?

ಜಗನ್ನಿಯಾಮಕನು ಒಮ್ಮೆ ಸ್ವರ್ಗದಲ್ಲಿ ಮೀಟಿಂಗ್ ಏರ್ಪಡಿಸಿದ. ಎಲ್ಲ ಅಲ್ಪಸಂಖ್ಯಾತ ದೇವರು, ಗ್ರಾಮೀಣ ದೇವರು ಹಾಗೂ ಬುಡಕಟ್ಟು ದೇವರುಗಳಿಗೂ ಕಡ್ಡಾಯ ಹಾಜರಿರಬೇಕೆಂದು ಬುಲಾವ್ ಕಳಿಸಲಾಗಿತ್ತು.

ಇಡೀ ಸ್ವರ್ಗದಲ್ಲಿ ಪಾರಿಜಾತದ ಪರಿಮಳವನ್ನೂ ಮೀರಿಸುತ್ತಿದ್ದ ಸ್ಯಾನಿಟೈಜರ್‌ನ ಆಲ್ಕೋಹಾಲ್ ವಾಸನೆಯಿಂದಾಗಿ ಈ ಸಭೆ ಕೊರೊನಾ ಕುರಿತಾದ್ದು ಎಂದು ದೇವತೆಗಳು ಸುಲಭವಾಗಿ ಊಹಿಸಬಹುದಾಗಿತ್ತು. ಕಾಫೀ, ಟೀ, ಲಿಂಬೂಸೋಡ, ಅಮೃತಗಳ ವಿತರಣೆಯೊಡನೆ ಸಭೆ ಪ್ರಾರಂಭವಾಯ್ತು.

ಸಕಲ ದೇವಾಧಿದೇವತೆಗಳ ಸಮ್ಮುಖದಲ್ಲಿ ಭಗವಂತನು ಮೀಟಿಂಗಿಗೆ ಚಾಲನೆ ನೀಡಿದ. ಔಪಚಾರಿಕ ಮಾತುಗಳು ಮುಗಿದೊಡನೆ ನೇರವಾಗಿ ಪಾಯಿಂಟಿಗೆ ಬಂದ ಭಗವಂತ, ‘ನನ್ನ ಸಹೋದ್ಯೋಗಿಗಳೇ, ಪ್ರತಿರೂಪಗಳೇ ಮತ್ತು ರೂಪಾಂತರಗಳೇ…, ಕೊರೊನಾ ದೆಸೆಯಿಂದಾಗಿ ನಮ್ಮ ಭಕ್ತರನ್ನು ಹೊಂದಿರುವ ಏಕೈಕ ಗ್ರಹವಾದ ಭೂಲೋಕಕ್ಕೆ ಭಾರಿ ಸಂಚಕಾರ ಬಂದೊದಗಿರುವುದು ನಿಮಗೆಲ್ಲ ತಿಳಿದ ವಿಷಯವೇ ಆಗಿದೆ. ತೀವ್ರತರ ಅಪಾಯದಲ್ಲಿರುವ ನಮ್ಮ ಭಕ್ತಾದಿಗಳನ್ನು ರಕ್ಷಿಸಬೇಕಾಗಿರುವುದು ನಮ್ಮ ಧರ್ಮ. ಹೀಗಾಗಿ ಈ ಕುರಿತು ಎಲ್ಲ ಸಲಹೆ ಸೂಚನೆಗಳಿಗೆ ಸ್ವಾಗತ’ ಎಂದು ನುಡಿದ.

ಕೂಡಲೇ ಎಲ್ಲರಿಗಿಂತ ಮುಂದಾಗಿ ಮೇಲೆದ್ದ, ಕ್ಯಾಸುಯಾಲಿಟೀಸ್ ವಿಭಾಗದ ಮುಖ್ಯಸ್ಥ ಯಮಧರ್ಮರಾಯ ಸಭೆಗೆ ಕೈ ಮುಗಿದು,

‘ಪ್ರಭೂ ನಾನಂತೂ ಸೋತು ಸುಣ್ಣವಾಗಿದ್ದೀನಿ. ಕೊರೊನಾ ಶುರುವಾದ ದಿನದಿಂದ ನಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಬಿಡುವೇ ಇಲ್ಲದಂತಾಗಿದೆ. ಲಾಕ್‌ಡೌನ್ ಪೀರಿಯಡ್‌ನಲ್ಲಿ ಕೊರೊನಾ ಸಾವುಗಳನ್ನು ಲೆಕ್ಕಾ ಹಾಕಿ ಹಾಕೀ ಬಸವಳಿದು ಹೋದೆವು. ಈಗ ಅಂಕಿಸಂಖ್ಯೆ ನಿರ್ಬಂಧವಿಲ್ಲದೆ ಭಾರತದಿಂದ ವರದಿಯಾಗುತ್ತಿರುವ ಅಪಘಾತಗಳಿಂದ ವಲಸಿಗರ ಕ್ಯೂ ಹೆಚ್ಚಾಗಿದೆ. ನನ್ನ ಅಸಿಸ್ಟೆಂಟಾದ ಚಿತ್ರಗುಪ್ತನಂತೂ 15 ದಿನ ಕ್ಯಾಷುಯಲ್ ಲೀವ್ ಕೊಡಿ ಇಲ್ಲವಾದರೆ ರಾಜೀನಾಮೆ ಎಸೆದು ಹೋಗುತ್ತೇನೆ. ಸೆಟ್ಸ್ ಮೆಂಟಿಗೆ ರೆಡಿಯಾಗಿ ಎಂದು ಬೆದರಿಕೆ ಹಾಕುತ್ತಿದ್ದಾನೆ’ ಎಂದು ಅವಲತ್ತುಕೊಂಡ.

ಯಮನ ಕಂಪ್ಲೇಟ್ಸು ಅನುಕಂಪದಿಂದ ಕೇಳಿಸಿಕೊಂಡ ಭಗವಂತ ಮುಂದೆ ಯಾರಾದರೂ ಮಾತಾಡುವಂತೆ ಸೂಚಿಸಿದ.

ಆಮೇಲೆ ಎದ್ದು ನಿಂತ ದೇವತೆಗಳ ಕಮಿಟಿ ಮುಖ್ಯಸ್ಥನಾದ ಇಂದ್ರನು,

‘ಸ್ವಾಮೀ.. ದಯವಿಟ್ಟು ಯಮನ ದೂರುಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಡಿ. ನಮ್ಮ ಸರ್ವಿಸ್ ಎಕ್ಸ್ಪೀರಿಯನ್ಸಿನಲ್ಲೇ ಮೊದಲ ಬಾರಿಗೆ ನಾವು ಈ ರೀತಿಯ ಹಾಲಿಡೇ ಅನುಭವಿಸುತ್ತಿದ್ದೇವೆ. ದೇವತೆಗಳ ತವರೂರೆಂದೇ ಹೆಸರುವಾಸಿಯಾದ ಭಾರತದಲ್ಲಿ ಎಲ್ಲ ದೇವಾಲಯ, ಪ್ರಾರ್ಥನಾ ಸ್ಥಳಗಳನ್ನೂ ಮುಚ್ಚಲಾಗಿರುವುದರಿಂದ ನಮಗೆ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ದಿವಾಳಿಯೆದ್ದವನ ವ್ಯಾಪಾರ ಹೆಚ್ಚು, ನೀತಿಗೆಟ್ಟವನ ಆಚಾರ ಹೆಚ್ಚು ಎಂಬ ಗಾದೆಯಂತೆ ದೊಡ್ಡ ದೊಡ್ಡ ಭ್ರಷ್ಟ ಖೂಳ ಮನುಷ್ಯರೆಲ್ಲಾ ಮಾಡುವುದೆಲ್ಲಾ ಮಾಡಿ ಕೊನೆಗೆ ತಿರುಪತಿಗೆ ವಜ್ರ ಕಿರೀಟವನ್ನೋ, ವಿನಾಯಕನಿಗೆ ಬೆಣ್ಣೆ ಅಲಂಕಾರವನ್ನೋ ಮಾಡಿಸಿಬಿಡುತ್ತಿದ್ದರು. ಧರ್ಮಗುರುಗಳು, ಸಾಧುಸಂತರಂತೂ ತಾವು ಮಾಡುವ ಅನಾಚಾರಕ್ಕೆ ಎಲ್ಲಾ ದೈವೇಚ್ಛೆ ಎಂಬ ಟ್ಯಾಗ್‌ಲೈನ್ ಹಾಕುತ್ತಿದ್ದರು. ಈಗವರ ಸಮಸ್ಯೆಯೇ ಇಲ್ಲ. ಹೀಗಾಗಿ ಮೊದಲ ಬಾರಿಗೆ ಅಚಾನಕ್ಕಾಗಿ ಪ್ರಾಪ್ತವಾಗಿರುವ ದೇವತೆಗಳ ಉಲ್ಲಾಸಕ್ಕೆ ಚ್ಯುತಿ ತರಬಾರದು’ ಎಂದು ವಿನಮ್ರವಾಗಿ ಪ್ರಾರ್ಥಿಸಿದ.

ನಂತರ ಎದ್ದು ನಿಂತ ವಾಯುದೇವನು, ‘ಓಹ್ ಮೈ ಗಾಡ್! ನಾನು ಹೇಳಬೇಕಿದ್ದ ಮ್ಯಾಟರ್ ಇಂದ್ರ ಹೇಳಿಬಿಟ್ಟರು. ಈ ಭೂಲೋಕದ ಜನರು ವಾಹನಗಳಿಂದ, ಕಾರ್ಖಾನೆಗಳಿಂದ ವಿಷಾನಿಲಗಳಿಂದ ನನ್ನ ಆರೋಗ್ಯವನ್ನೇ ಕೆಡಿಸಿಬಿಟ್ಟಿದ್ದರು. ಅಲ್ಪಸ್ವಲ್ಪ ಒಳ್ಳೆಯ ಗಾಳಿ ನೀಡಲು ನನಗೆ ಹೆಲ್ಪು ಮಾಡುತ್ತಿದ್ದ ಅರಣ್ಯಗಳನ್ನೂ ಧ್ವಂಸಗೊಳಿಸುತ್ತಿದ್ದರು. ಈ ಮನುಷ್ಯರ ದೆಸೆಯಿಂದ ಸುಮಾರು 40 ವರ್ಷಗಳಿಂದ ನನಗೆ ಪ್ರಾಪ್ತವಾಗಿದ್ದ ಅಸ್ತಮಾ ಖಾಯಿಲೆ ವಾಸಿಯಾಗಲು ಈ ಕೊರೊನಾ ಬರಬೇಕಾಯ್ತು ನೋಡಿ. ಈಗಲೇ ನಾನು ಸ್ವಲ್ಪ ಆರಾಮಾಗಿ ಉಸಿರಾಡುತ್ತಿರುವುದು…’ ಎಂದು ಕರುಣಾಜನಕವಾಗಿ ತನ್ನ ಪರಿಸ್ಥಿತಿಯನ್ನು ವಿವರಿಸಿದ. ಜೊತೆಗೆ ಭಾರತ ಸೇರಿದಂತೆ ವಿಶ್ವಾದ್ಯಂತ ವಾಯುಮಾಲಿನ್ಯ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದನ್ನು ಅಂಕಿಅಂಶಗಳ ಸಮೇತ ಸಭೆಯ ಮುಂದಿಟ್ಟ.

ಮುಂದಿನ ಸರತಿಯಲ್ಲಿ ಬ್ರಹ್ಮ ಮತ್ತು ಸರಸ್ವತಿ ದಂಪತಿ ಜಂಟಿಯಾಗಿ ತಮ್ಮ ಅಹವಾಲು ಸಲ್ಲಿಸಲು ಮುಂದಾದರು:

‘ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಬಂಧಿತರಾಗಿದ್ದ ಜನರು ಹಗಲೂ ರಾತ್ರಿ ಸೃಷ್ಟಿಕಾರ್ಯದಲ್ಲಿ ತೊಡಗಿದ್ದರಿಂದ ನನ್ನ ವರ್ಕ್ ಪ್ರೆಶರ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದರ ಪರಿಣಾಮವನ್ನು ಮುಂದಿನ ಒಂಬತ್ತು ತಿಂಗಳ ನಂತರ ನಿರೀಕ್ಷಿಸಿ’ ಎಂದು ಬ್ರಹ್ಮ ದೇವನು ಹೂಂಕರಿಸಿದ. ಸರಸ್ವತಿ ಮಾತೆ ‘ಶಾಲಾಕಾಲೇಜುಗಳು, ವಿದ್ಯಾಸಂಸ್ಥೆಗಳು, ತರಬೇತಿ ಕೇಂದ್ರಗಳು ನನ್ನ ಹೆಸರು ಹೇಳಿಕೊಂಡು ನಡೆಸುತ್ತಿದ್ದ ದೋ ನಂಬರ್ ದಂಧೆಗೆ ಕಡಿವಾಣ ಬಿದ್ದಿದೆ. ಚಿಲ್ಟಾರಿಗಳು ಪರೀಕ್ಷೆಗಳ ಆತಂಕವಿಲ್ಲದೆ ಹಾಯಾಗಿದ್ದಾರೆ. ಪ್ರತಿ ಪುಟಾಣಿ ಮಕ್ಕಳ ಪೋಷಕರೇ ಶಿಕ್ಷಕರಾಗಿ ಮಾರ್ಪಡುತ್ತಿರುವುದರಿಂದ ನನ್ನ ಕೆಲಸ ಎಷ್ಟೋ ಪಟ್ಟು ಕಡಿಮೆಯಾಗಿದೆ’ ಎಂದು ನಿಟ್ಟುಸಿರಿಟ್ಟು ಕುಳಿತುಕೊಂಡಳು.

ದೇವವೈದ್ಯರಾದ ಅಶ್ವಿನಿ ದೇವತೆಗಳು ಮಾತನಾಡಿ,

‘ಭಗವಂತಾ…ಹಾಸ್ಪಿಟಲ್ಸ್ ಮುಚ್ಚಿರಿವುದರಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಚಿಕಿತ್ಸೆ ಇಲ್ಲದೆ ಜನ ಸಾಯುತ್ತಿಲ್ಲ. ಬದಲಾಗಿ ಚಿಕಿತ್ಸೆಯಿಂದ ಸಾಯುತ್ತಿದ್ದ ಜನರೆಲ್ಲಾ ಈಗ ಆರಾಮಾಗಿದ್ದಾರೆ. ಯಾವ ಜನರೂ ಈಗ ಡಾಕ್ಟ್ರು, ಆಸ್ಪತ್ರೆ, ನರ್ಸು, ಮೆಡಿಸಿನ್ಸು ಮುಂತಾದವನ್ನು ನಂಬುತ್ತಲೇ ಇಲ್ಲ. ಹೀಗೆ ಮುಂದುವರೆಯುತ್ತಾ ಹೋದರೆ ನಮಗಾಗಲೀ, ಧನ್ವಂತರಿಗಾಗಲೀ ಕೆಲಸವೇ ಇರುವುದಿಲ್ಲ’ ಎಂದು ಏಕಕಂಠದಲ್ಲಿ ನುಡಿದರು

ದೇವಾನುದೇವತೆಗಳ ಅಹವಾಲು ಕೇಳಿದ ಭಗವಂತನು ನಿಟ್ಟುಸಿರು ಬಿಟ್ಟ. ನಂತರ ನಿಧಾನವಾಗಿ ಎದ್ದು ನಿಂತು ಕರುಣಾಜನಕ ಸ್ವರದಲ್ಲಿ,

‘ಅಜರಾಮರ ದೇವತೆಗಳೇ, ನಿಮ್ಮೆಲ್ಲರ ಪರಿಸ್ಥಿತಿಯನ್ನು ನೋಡಿ ನನಗೆ ದುಃಖವಾಗುತ್ತಿದೆ. ಆದರೂ ಸಹ ನಮ್ಮ ಭಕ್ತಾದಿಗಳ ಯೋಗಕ್ಷೇಮ ನಮ್ಮ ಯೋಗಕ್ಷೇಮಕ್ಕಿಂತಲೂ ಹೆಚ್ಚೆಂಬುದನ್ನು ನಾವು ಮರೆಯಬಾರದು. ಹಾಗಾಗಿ ತಾವೆಲ್ಲರೂ ಈಗಲೇ ಛದ್ಮವೇಷಧಾರಿಗಳಾಗಿ ತಮ್ಮ ರೂಪಗಳನ್ನು ಮರೆಸಿಕೊಂಡು ಭೂಲೋಕಕ್ಕೆ ಭೇಟಿ ನೀಡಬೇಕು. ಅಲ್ಲಿ ನೋವಿನಿಂದ ನರಳುತ್ತಿರುವವರಿಗೆ ಸಾಂತ್ವನ ಹೇಳಬೇಕು. ಯಾವುದೇ ಕಾರಣಕ್ಕೂ ಯಾವ ದೇವತೆಗಳೂ ಈ ಆಜ್ಞೆ ಮೀರುವಂತಿಲ್ಲ’ ಎಂದು ತಕ್ಷಣವೇ ಲಿಖಿತ ಆದೇಶವನ್ನು ಹೊರಡಿಸಿ ಎಲ್ಲ ದೇವತೆಗಳಿಗೂ ಇಮೇಲ್ ಮಾಡಲು ಹೇಳಿದ.

ದೇವತೆಗಳು ಕಳವಳದಿಂದ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದಂತೆಯೇ, ಭಗವಂತನು ಎಲ್ಲರಿಗೂ ಕೈಬೀಸುತ್ತಾ ಹ್ಯಾಪಿಜರ್ನಿ ಎಂದು ಹೇಳಿ ಬೀಳ್ಕೊಟ್ಟ.

ಕೆಲವು ದಿನಗಳ ನಂತರ…

ಎಂದಿನಂತೆ ಜಗನ್ನಿಯಾಮಕನು ಸ್ವರ್ಗದ ಲಾಲ್‌ಬಾಗ್ ಎಂದೇ ಹೆಸರಾದ ನಂದನವನದಲ್ಲಿದ್ದ ಅಮೃತದ ಕಾರಂಜಿಯೊಂದರ ಬಳಿ ನ್ಯೂಸ್‌ಪೇಪರ್ ಓದುತ್ತಾ ಬೆಳಗಿನ ಬಿಸಿಲಿನಲ್ಲಿ ವಿಶ್ರಮಿಸುತ್ತಿದ್ದ.

ಅಷ್ಟರಲ್ಲಿ ಗೇಟಿನ ಬಳಿ ಭೀಕರವಾದ ಆಕ್ರಂದನದ ಸದ್ದು ಕೇಳಿಬಂತು. ದಶದಿಕ್ಕುಗಳಿಂದ ಚೀರಾಟ, ರೋದನೆಗಳು ಕೇಳಿಬರಲು ಶುರುವಾಯ್ತು. ತಕ್ಷಣವೇ ತನ್ನ ಸೆಕ್ಯುರಿಟಿ ಕಮ್ ಬಾಡಿಗಾರ್ಡುಗಳನ್ನು ಅದೇನು ಸದ್ದು ನೋಡಿ ಬನ್ನಿ ಎಂದು ಕಳುಹಿಸಿದ.

ಕೆಲವೇ ಕ್ಷಣಗಳಲ್ಲಿ ಅವರು ವ್ಯಕ್ತಿಯೊಬ್ಬನನ್ನು ಒಳಗೆ ಕರೆತಂದರು. ಮಸಿಹಿಡಿದಿದ್ದ ಮುಖದ, ಕ್ಷೀಣಕಾಯದ ಆ ವ್ಯಕ್ತಿ ಒಳಬರುತ್ತಲೇ ಶಿರಸಾಷ್ಟಾಂಗವೆರಗಿ ಗೊಳೋ ಎಂದು ಹೃದಯವಿದ್ರಾವಕವಾಗಿ ಅಳಲು ಪ್ರಾರಂಭಿಸಿದ.

ಭಗವಂತನು ಎಂದಿನಂತೆ ತನ್ನ ಅಸೀಮ ಕರುಣೆಯಿಂದ ಅವನನ್ನು ಎಬ್ಬಿಸಿ, ಗೋಳಿಗೆ ಕಾರಣ ಕೇಳಲಾಗಿ ಆತ ಬಿಕ್ಕುತ್ತಲೇ, ‘ಸ್ವಾಮೀ, ಗುರುತು ಸಿಕ್ಕಲಿಲ್ಲವೆ? ನಾನು ವಾಯುದೇವ’ ಎಂದು ನಿಟ್ಟುಸಿರು ಬಿಟ್ಟ.

ಅವಾಕ್ಕಾದ ಭಗವಂತನು ಈ ದುಸ್ಥಿತಿಗೆ ಕಾರಣವೇನೆಂದು ವಿಚಾರಿಸಲಾಗಿ ಅನಿಲನು ತನ್ನ ಕರುಣಾಜನಕ ಕಥೆಯನ್ನು ಬಿಡಿಸಿಟ್ಟ,

‘ಭಗವಂತಾ, ಏನು ಹೇಳಲಿ ಭೂಲೋಕದ ಜನರ ದುಷ್ಟತನವನ್ನು? ಎಲ್ಲೆಡೆ ಶುದ್ಧಾತ್ಮನಾಗಿ ಪಸರಿಸುತ್ತಿದ್ದ ನನ್ನ ಸಂಚಾರಕ್ಕೆ ಕಾಡುಗಳನ್ನು ನಾಶಪಡಿಸುವ ಮೂಲಕ ಸಂಚಕಾರ ತಂದರು. ನಂತರ ವಿಷಗಾಳಿಯನ್ನು ವಾತಾವರಣದಲ್ಲಿ ತುಂಬಿ ನನಗೇ ಉಸಿರುಗಟ್ಟಿಸಿದರು… ಈಗ ನನ್ನನ್ನು ಸಿಲಿಂಡರುಗಳಲ್ಲಿ ತುಂಬಿ ಕೊರೊನಾ ಪೀಡಿತ ರೋಗಿಗಳಿಗೆ ಮಾರಲು ಹೊರಟಿದ್ದಾರೆ. ಅಲ್ಲಿಂದ ತಪ್ಪಿಸಿ ಕೊಂಡು ಬರುವಷ್ಟರಲ್ಲಿ ಸಾಕೋಸಾಕಾಯ್ತು’ ಎಂದು ಮತ್ತೆ ಗೋಳಾಡತೊಡಗಿದ.

ಪವನನ ಗೋಳಾಟ ಮುಗಿಯುತ್ತಲೇ ದ್ವಾರಪಾಲಕರು ಮತ್ತಿಬ್ಬರನ್ನು ಎಳೆದು ತಂದರು. ಅವರು ಇಬ್ಬರು ಇದ್ದಿದ್ದರಿಂದಲೇ ಭಗವಂತನಿಗೆ ಅವರು ಅಶ್ವಿನಿ ದೇವತೆಗಳಿರಬೇಕೆಂದು ಊಹಿಸಲು ಸುಲಭವಾಯ್ತು. ಅವರಂತೂ, ‘ನಮಗೆ ಬರಬಾರದ ರೋಗ ಬಂದು ಸತ್ತರೂ ಪರವಾಗಿಲ್ಲ ನಾವಿನ್ನು ಭೂಲೋಕಕ್ಕೆ ಕಾಲಿಡುವುದಿಲ್ಲ’ ಎಂದು ಚೀರಾಡತೊಡಗಿದರು. ಕಾರಣ ಕೇಳಿದ ಭಗವಂತ.

‘ಅಯ್ಯೋ ಪರಮಾತ್ಮ, ನಿನ್ನಾಜ್ಞೆಯಂತೆ ನಾವು ವೈದ್ಯರ ಶರೀರದ ಒಳಹೊಕ್ಕು ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಶುರುಮಾಡಿದೆವು. ಆದರೆ ಈ ಮಾನವರು ಸೈತಾನರಾಗಿಬಿಟ್ಟಿದ್ದಾರೆ. ವೈದ್ಯರ ಮೇಲೆ ಉಗುಳುವವರು ಎಷ್ಟೋ ಜನ. ಹಲ್ಲೆ ಮಾಡುವವರು ಹಲವು ಜನ. ನಿಂದಿಸುವವರು ಬಹಳ ಜನ. ಈ ಭೂಲೋಕದ ಸಹವಾಸವೇ ಬೇಡ’ ಎಂದು ಊಳಿಟ್ಟರು.

ವರುಣ ದೇವನಂತೂ ದೂರದಿಂದಲೇ ಸ್ಯಾನಿಟೈಜರ್ ಪರಿಮಳವನ್ನು ಬೀರುತ್ತಾ ಆಗಮಿಸಿದ. ‘ದೇವರೇ, ನನ್ನ ಜನ್ಮವನ್ನು ತೊಳೆದು ಜಾಲಾಡಿಬಿಟ್ಟರು. ಅಲ್ಪಸ್ವಲ್ಪ ಶುದ್ಧವಾಗಿದ್ದ ನನ್ನನ್ನು ಬಳಸಿಕೊಂಡು, ಕೈ, ಕಾಲು, ಮುಖ ಮತ್ತಿತರ ಅಂಗಾಂಗಗಳನ್ನು ಜನ ತೊಳೆದಿದ್ದೂ ತೊಳೆದಿದ್ದೇ. ಈ ಕೊರೊನಾ ಸ್ವಲ್ಪ ಕಾಲ ಮುಂದುವರೆದರೆ ಸಪ್ತ ಮಹಾ ಸಮುದ್ರಗಳಲ್ಲಿ, ನದಿಗಳಲ್ಲಿ, ಸರೋವರ ತಟಾಕಗಳಲ್ಲಿ, ಹಳ್ಳಗುಂಡಿಗಳಲ್ಲಿರುವ ನೀರಿನ ಸ್ಟಾಕು ಯಾವುದಕ್ಕೂ ಸಾಕಾಗುವುದಿಲ್ಲ’ ಎಂದು ಬೊಬ್ಬಿರಿಯತೊಡಗಿದ.

ಕೊನೆಗೆ ಬಂದವನು ಯಮಧರ್ಮರಾಜ.

ಬಂದವನೇ ತನ್ನ ಕೋಣ ಮತ್ತು ಪಾಶವನ್ನು ಭಗವಂತನ ಸುಪರ್ದಿಗೆ ಒಪ್ಪಿಸಿ ತಾನು ಈ ಕೂಡಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದು ತಕ್ಷಣವೇ ತನ್ನನ್ನು ಸೇವೆಯಿಂದ ವಿಮುಕ್ತಿಗೊಳಿಸಬೇಕೆಂದು ಕೇಳಿಕೊಂಡ.

ಮುಖದಲ್ಲಿ ನೀರಿಳಿಯುತ್ತಿದ್ದ ಭಗವಂತನು, ‘ಸರಿ ಯಮ… ಹೇಳಿ ಹೋಗು ಕಾರಣ, ಹೋಗುವಾ ಮೊದಲು’ ಎಂದು ಆಜ್ಞಾಪಿಸಿದ.

ಯಮನು, ‘ಭಗವಂತಾ, ಭೂಮಿಯಲ್ಲಿ ನನಗಿನ್ನೇನು ಕೆಲಸ? ಅಲ್ಲಿನ ರಾಜಕಾರಣಿಗಳು ಹೆಚ್ಚು ಜನ ಸಾಯುವಂತಹ ತೀರ್ಮಾನಗಳನ್ನು ಕ್ಷಣಕ್ಕೊಮ್ಮೆ ಕೈಗೊಳ್ಳುತ್ತಿದ್ದಾರೆ. ಅಲ್ಲಿನ ಆಸ್ಪತ್ರೆಗಳ ವ್ಯವಸ್ಥೆ ನಮ್ಮ ನರಕವನ್ನೂ ಮೀರಿಸುವಂತಿದೆ. ಅಲ್ಲಿನ ಕಾಳಸಂತೆಕೋರರು ನಮ್ಮ ಭಟರಾದ ಯಮಧೂತರನ್ನು ಚಿತ್ರಹಿಂಸೆ ಕೊಟ್ಟು ಸಾಯಿಸಿಬಿಟ್ಟರು. ನಮ್ಮ ಕೆಲಸವನ್ನು ಅವರೇ ಚೆನ್ನಾಗಿ ನಿರ್ವಹಿಸುತ್ತಿರುವಾಗ ಯಾವ ಸೌಭಾಗ್ಯಕ್ಕೆ ನಾವಲ್ಲಿರಬೇಕು’ ಎಂದು ಅವಲತ್ತುಕೊಂಡ.

ಭಗವಂತನು ಸುದೀರ್ಘ ಮೌನವನ್ನು ತಾಳಿದ. ಹಿಂದೆಯೇ ಸಾಲುಸಾಲಾಗಿ ಬರಲಾರಂಭಿಸಿದ ಗಾಯಗೊಂಡಿದ್ದ ದೇವತೆಗಳ ಗಣವು ಭಗವಂತನನ್ನು ಸ್ತುತಿಸುತ್ತಾ ಪರಿಹಾರಕ್ಕಾಗಿ ಪ್ರಾರ್ಥಿಸತೊಡಗಿದರು.

ದೀರ್ಘ ಕಾಲದ ಬಳಿಕ ಮೌನ ಮುರಿದ ಭಗವಂತನು ಬಾಯ್ಬಿಟ್ಟು…

ತಾನೂ ಸಹ ಗೊಳೋ ಎಂದು ಅಳಲು ಶುರು ಮಾಡಿದ!

Leave a Reply

Your email address will not be published.