ಭ್ರಷ್ಟಾಚಾರ ಕಡಿವಾಣಕ್ಕೆ ಉಪಾಯ

– ಟಿ.ವಿದ್ಯಾಧರ

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಆಯೋಗವೇ ಪ್ರಚಾರ ಮಾಡಬೇಕು ಹಾಗೂ ಪ್ರಚಾರದ ಖರ್ಚನ್ನು ಅಭ್ಯರ್ಥಿಗಳೇ ಭರಿಸಬೇಕು

ಜನ ಸಾಮಾನ್ಯರಿಗೆ ಭ್ರಷ್ಟಾಚಾರದ ಕಾಟ ಹೆಚ್ಚಾಗಿ ಪೊಲೀಸ ರಿಂದ, ಸರ್ಕಾರಿ ನೌಕರರಿಂದ ಆಗಿರುತ್ತದೆ. ಯಾಕಂದರೆ ಆರಂಭದಲ್ಲಿ ಈ ನೌಕರರಿಗೆ ಸಂಬಳ ತುಂಬ ಕಡಿಮೆ ಇತ್ತು. ಆದರೆ ಬರಬರುತ್ತಾ ಅತಿದೊಡ್ಡ ಹುದ್ದೆಯಲ್ಲಿರುವವರೂ ಭ್ರಷ್ಟಾಚಾರದಲ್ಲಿ ತೊಡಗಿದರು. ಸಾಲದ್ದಕ್ಕೆ ಹೆಚ್ಚಿನವರು ಭ್ರಷ್ಟಾಚಾರ ಮಾರ್ಗವೇ ಉತ್ತಮ ಎಂಬ ನಂಬಿಕೆಯಿಂದ ರಾಜಕೀಯಕ್ಕೆ ಧುಮುಕುತ್ತಾರೆ.

ಸರಸ್ವತಿಯನ್ನು ಒಲಿಸಿಕೊಳ್ಳಲಾಗದವರು ಶಾಲೆ, ಕಾಲೇಜಿನಲ್ಲೇ ನಾಯಕರಾಗಿ ಮುಂದೆ ರಾಜಕೀಯ ಸೇರುತ್ತಾರೆ. ಇದು ಈಗಿನ ಪರಿಸ್ಥಿತಿ. ಈ ತರಹದ ವ್ಯವಸ್ಥೆಯಿಂದ ರಾಜಕಾರಣ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಇದು ಇಡೀ ಭಾರತದ ತುಂಬ ಹರಡಿವೆ, ಅರ್ಬುದ ರೋಗದಂತೆ. ಇದರ ಪರಿಹಾರಕ್ಕೆ ಯಾರೂ ಗಂಭೀರವಾದ ಚಿಂತನೆ ಮಾಡುತ್ತಿಲ್ಲ.

ಇದಕ್ಕೆ ನಾನು ಸೂಚಿಸುವ ಪರಿಹಾರ ಹೀಗಿದೆ: ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಆಯೋಗವೇ ಪ್ರಚಾರ ಮಾಡಬೇಕು ಹಾಗೂ ಪ್ರಚಾರದ ಖರ್ಚನ್ನು ಅಭ್ಯರ್ಥಿಗಳೇ ಭರಿಸಬೇಕು.

ಈ ಕಲ್ಪನೆಯನ್ನು ಕಾರ್ಯಗತಗೊಳಿಸಲು ಈ ಕೆಳಗಿನ ಹೆಜ್ಜೆಗಳ ಅಗತ್ಯವಿದೆ. ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರಗಳ ಜೊತೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗತ ಪ್ರಣಾಳಿಕೆ ಸಲ್ಲಿಸಬೇಕು. ಜೊತೆಗೆ ಮತದಾರರು ತನ್ನನ್ನೇ ಏಕೆ ಗೆಲ್ಲಿಸಬೇಕು ಎಂಬುದಕ್ಕೆ ಸಮರ್ಥ ನೆಗಳನ್ನು ನೀಡಬೇಕು. ಹಾಗೆಯೇ ವಿವಿಧ ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತ, ಧೋರಣೆ, ಭರವಸೆಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು. ಇವೆಲ್ಲಾ ಮಾಹಿತಿಗಳನ್ನು ಆಧರಿಸಿ ಆಯೋಗ ಪ್ರಚಾರ ಅಯೋಜಿಸಬೇಕು. ಚುನಾವಣಾ ಆಯೋಗ ಎಲ್ಲ ಅಭ್ಯರ್ಥಿಗಳ ಪರವಾಗಿ ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಬೇಕು.

ಆಯಾ ಪ್ರದೇಶದ ಮೈದಾನ, ಉದ್ಯಾನವನ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಆಡಿಯೋ-ವೀಡಿಯೊಗಳ ಮೂಲಕ ಅಭ್ಯರ್ಥಿಗಳ ಭರವಸೆಗಳನ್ನು ಮತದಾರರಿಗೆ ತಲುಪಿಸಬಹುದು. ಸ್ಪರ್ಧಿಗಳಿಗೆ ಇದರ ಹೊರತಾಗಿ ಬೇರೆ ಯಾವುದೇ ರೀತಿಯ ಪ್ರಚಾರಕ್ಕೆ ಅವಕಾಶವಿರಕೂಡದು. ಅಷ್ಟಕ್ಕೂ ಈ ನಿಯಮ ಉಲ್ಲಂಘಿಸಿ ಹಣ ಹಂಚಿದರೆ, ಪ್ರಚಾರ ನಡೆಸಿದರೆ ಅಂಥ ಸ್ಪರ್ಧಾಳುಗಳ ಮೇಲೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸದಂತೆ ಆಜೀವ ನಿರ್ಬಂಧ ಹೇರಬೇಕು.

ಇನ್ನು, ಚುನಾವಣಾ ಆಯೋಗ ಅಭ್ಯರ್ಥಿಗಳ ಪರವಾಗಿ ನಡೆಸುವ ವ್ಯಚ್ಚವನ್ನು ಯಾರು ಹೊರಬೇಕು ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೂ ಸರಳ ಉತ್ತರವಿದೆ. ಈ ಖರ್ಚಿಗಾಗಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಹಂತದಲ್ಲೇ ನಿಗದಿತ ಮೊತ್ತ ಸಂಗ್ರಹಿಸಬೇಕು. ಉದಾಹರಣೆಗೆ ನಗರ ಪಾಲಿಕೆಗೆ ಸ್ಪರ್ಧಿಸುವವರಿಂದ 5 ಲಕ್ಷ, ವಿಧಾನಸಭೆ ಹುರಿ ಯಾಳುವಿನಿಂದ 10 ಲಕ್ಷ ಮತ್ತು ಲೋಕಸಭೆ ಅಭ್ಯರ್ಥಿಯಿಂದ 20 ಲಕ್ಷ ರೂಪಾಯಿ ಪ್ರಚಾರ ಶುಲ್ಕ ನಿಗದಿಪಡಿಸಬಹುದು.

ಈ ರೀತಿಯ ವ್ಯವಸ್ಥೆ ಜಾರಿಯಾದರೆ ಸಾಮಾನ್ಯ ಜನರು, ಸಮಾಜ ಸೇವಕರು, ಸಾಹಿತಿಗಳು, ಕಲಾವಿದರು, ಹೋರಾಟಗಾರರು, ಬುದ್ಧಿಜೀವಿಗಳು… ಹೀಗೆ ಎಲ್ಲಾ ವರ್ಗದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಾಗುತ್ತದೆ.

Leave a Reply

Your email address will not be published.