ಸುಲಭ ಲಂಚ-ಸಕಾಲ ಸೇವೆ

ಪ್ರತಿಯೊಂದು ಸರ್ಕಾರಿ ಕೆಲಸಕ್ಕೆ ನೀಡಬೇಕಾದ ಲಂಚವನ್ನು ಆನ್‍ಲೈನ್ ಮೂಲಕವೇ ಪಾವತಿಸಲು ಅನುಕೂಲ ಮಾಡಿ ‘ಸಕಾಲ’ ಯೋಜನೆಯನ್ನು ಯಶಸ್ವಿ ಮಾಡಬಾರದೇಕೆ?

ಸುಲಭ ಲಂಚ-ಸಕಾಲ ಸೇವೆ

‘ಸಕಾಲ’ ಸೇವಾ ಯೋಜನೆಯನ್ನು ಸಗೌರವದೊಂದಿಗೆ ಸಂಸ್ಕಾರ ಮಾಡುವ ‘ಕಾಲ’ ಬಂದಿದೆಯೆಂದು ನಿಮಗೆ ಅನಿಸಿರಬಹುದು. ವರ್ಷದಿಂದ ವರ್ಷಕ್ಕೆ ಭ್ರಷ್ಟಾಚಾರದ ಸ್ವರೂಪ, ಪ್ರಮಾಣ ಮತ್ತು ಪರಿಣಾಮಗಳು ಹೆಚ್ಚುತ್ತಲೇ ಹೋಗುತ್ತಿವೆ. ಕಳೆದ 20 ವರ್ಷಗಳಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ರಾಜ್ಯ ಸರ್ಕಾರಗಳೂ ಹಿಂದಿನ ಸರ್ಕಾರದ ಹೋಲಿಕೆಯಲ್ಲಿ ಹೆಚ್ಚಿನ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪವಿದೆ. ರಾಜ್ಯ ಮಟ್ಟದಲ್ಲಿ ನಡೆಯುವ ಈ ಭ್ರಷ್ಟಾಚಾರದಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 20 ರಿಂದ 25 ಸಾವಿರ ಕೋಟಿ ರೂಪಾಯಿಗಳ ನಷ್ಟ ಆಗುತ್ತಿರಬಹುದೆಂದು ಎಣಿಸಲಾಗಿದೆ. ಆದರೆ ಈ ಬೃಹತ್ ಭ್ರಷ್ಟಾಚಾರ ಸಾಮಾನ್ಯ ಜನರ ಜೀವನವನ್ನು ಋಣಾತ್ಮಕವಾಗಿ ಪರಿಣಾಮ ಮಾಡದಿರಬಹುದು. ಆದರೆ ಪಂಚಾಯಿತಿ, ತಾಲ್ಲೂಕು ಕಛೇರಿ, ಜಿಲ್ಲಾಸ್ಪತ್ರೆ, ಸಾರಿಗೆ ಇಲಾಖೆ ಅಥವಾ ಆರಕ್ಷಕ ಠಾಣೆಗಳಲ್ಲಿ ನಡೆಯುವ ಭ್ರಷ್ಟಾಚಾರವು ಜನರ ಬವಣೆಯನ್ನು ತಾರಕಕ್ಕೆ ಏರಿಸಿದೆ. ಇದನ್ನು ಹೋಗಲಾಡಿಸಲೆಂದೇ ಬಿಜೆಪಿ ಸರ್ಕಾರದ ಸಮಯದಲ್ಲಿ ‘ಸಕಾಲ’ ಸೇವಾ ಯೋಜನೆಯನ್ನು ಪ್ರಾರಂಭ ಮಾಡಲಾಗಿತ್ತು. ಇದರಂತೆ ಸೇವೆ ಬಯಸಿದ ಅರ್ಜಿಯನ್ನು 24 ಅಥವಾ 48 ಗಂಟೆಗಳಲ್ಲಿ ವಿಲೇವಾರಿ ಮಾಡಿ, ಸೇವೆಯನ್ನು ಖಾತ್ರಿಗೊಳಿಸಬೇಕಾಗಿತ್ತು. ಬಿಜೆಪಿ ಸರ್ಕಾರದ ‘ಸಕಾಲ’ ಕಾಲಾಧೀನವಾಗಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿಯೇ ಯಾವುದೇ ಸುದ್ದಿ ಮಾಡದ ಸಕಾಲ, ಈಗಿನ ಕುಮಾರಸ್ವಾಮಿ ಸರ್ಕಾರದಲ್ಲಿ ಮರೀಚಿಕೆಯಾಗಿದೆ. ಹಾಗಾದರೆ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಬೇಡವೇ? ಸಮಯಕ್ಕೆ ಸರಿಯಾಗಿ ಇವರ ಸೇವಾ ಖಾತ್ರಿಗೆ ನಾವು ಪ್ರಯತ್ನಿಸಬಾರದೇ?

ಮೊದಲಿಗೆ ನಾವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಸರ್ಕಾರಿ ಸೇವೆಯನ್ನು ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ನೌಕರರು ತೆಗೆದುಕೊಳ್ಳುವ ಯಾವುದೇ ಅಧಿಕೃತ ಹಾಗೂ ಆನ್‍ಲೈನ್ ಮೊತ್ತಕ್ಕೆ ಕಾಯ್ದೆಯ ನಿಯಂತ್ರಣ ಇಲ್ಲವೆಂದು ತಿದ್ದುಪಡಿ ಮಾಡಬೇಕಾಗುತ್ತದೆ. ನಂತರದಲ್ಲಿ ಪ್ರತಿಯೊಂದು ಇಲಾಖೆಯ ಅಂತರ್ಜಾಲ ತಾಣದಲ್ಲಿಯೇ ಅರ್ಜಿ-ಕೋರಿಕೆ-ಪರವಾನಗಿ-ಮತ್ತಿತರ ಸೇವೆಗಳನ್ನು ಪಡೆಯುವ ಮತ್ತು ಸೇವೆ ನೀಡುವವರ ಸಂಪೂರ್ಣ ವಿವರ ನೀಡಬೇಕಾಗುತ್ತದೆ. ಈ ನೌಕರರ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಸೂಚಿತ ಶುಲ್ಕ-ಲಂಚದ ಪ್ರಮಾಣವನ್ನೂ ನಮೂದಿಸಬೇಕಾಗುತ್ತದೆ. ಇದನ್ನು ಮತ್ತಷ್ಟು ಸುಲಭವಾಗಿಸಲು ಮೊಬೈಲ್ ಆಪ್ ಮತ್ತು ಪೇಮೆಂಟ್ ಗೇಟ್‍ವೇಗಳನ್ನು ತೆರೆಯಬಹುದು. ಕೋರಿದ ಸೇವೆ ಮತ್ತು ನೀಡಿದ ಲಂಚವನ್ನು ಒಂದುಗೂಡಿಸುವ ತಂತ್ರಾಂಶವನ್ನೂ ಬೆಳವಣಿಗೆ ಮಾಡಬಹುದು. ಈ ಮೂಲಕ ಆನ್‍ಲೈನ್‍ನಲ್ಲಿಯೇ ಇನ್ಸ್‍ಟೆಂಟ್ ಪಾವತಿ ಮಾಡಿ ಕೆಲವೇ ಕ್ಷಣಗಳಲ್ಲಿ ಸೇವೆಯನ್ನು ಪಡೆಯಬಹುದು.

ಈ ಆನ್‍ಲೈನ್ ಲಂಚ ಕಾನೂನುಬದ್ಧವಾಗಿವೆ ಎಂದು ತಿದ್ದುಪಡಿ ಮಾಡಿದ ನಂತರದಲ್ಲಿ ಅಧಿಕಾರಿ-ನೌಕರರು ಈ ಲಂಚದ ಆದಾಯವನ್ನು ಘೋಷಣೆ ಮಾಡಲು ಅವಕಾಶವಿದ್ದು ಲಂಚದ ಶೇ.30 ಭಾಗ ಸರ್ಕಾರಕ್ಕೆ ಆದಾಯ ತೆರಿಗೆ ರೂಪದಲ್ಲಿ ಸಲ್ಲುತ್ತದೆ. ಸರ್ಕಾರ ಬೇಕಿದ್ದರೆ ಜಿಎಸ್‍ಟಿ ಶುಲ್ಕ ಕೂಡ ವಿಧಿಸಿ ತೆರಿಗೆ ಸಂಗ್ರಹ ಹೆಚ್ಚಿಸಿಕೊಳ್ಳಬಹುದು. ‘ಲಂಚಮುಕ್ತ ಕರ್ನಾಟಕ’ದ ಬದಲು ‘ಸುಲಭ ಲಂಚ – ಸಕಾಲ ಸೇವೆ’ಯ ಹೊಸ ಯುಗವನ್ನು ಕರ್ನಾಟಕದಲ್ಲಿ ಪ್ರಾರಂಭಿಸಬಹುದು. ಕರ್ನಾಟಕದ ಈ ಯಶಸ್ವಿ ಪ್ರಯೋಗದ ನಂತರ ಬೇರೆ ರಾಜ್ಯಗಳೂ ಇದನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕ ಆಡಳಿತದ ವಿಷಯದಲ್ಲಿನ ಅತ್ಯಂತ ವಿನೂತನ ಮತ್ತು ಕ್ರಾಂತಿಕಾರಿಕ ಬದಲಾವಣೆಯೆಂದು ಹೆಸರು ಮಾಡಬಹುದು. ಬಯಲಾದ ಲಂಚ – ಬದಲಾದ ಭಾರತ’ ಎಂದು ಸಂಶೋಧಕರು ಪಿಹೆಚ್‍ಡಿ ಪ್ರಬಂಧ ಮಂಡಿಸಬಹುದು.

Leave a Reply

Your email address will not be published.