ಮಂಜಿನ ಟೋಪಿ ಹೊತ್ತ ಮೌಂಟ್ ಕೀನ್ಯಾ

ಈ ಬೆಟ್ಟದ ಸುತ್ತಲಿನ ಪ್ರದೇಶ ಹೇಗಿರುತ್ತದೆ ಎಂದರೆ, ಯಾರೋ ಆಗ ತಾನೆ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ ಎನ್ನಿಸುತ್ತದೆ.

ಬೆಳಗಿನ ಜಾವ ಸರಿಯಾಗಿ 6 ಘಂಟೆಗೆ ಸುಮಾರು ನಾಲ್ಕು ಕುಟುಂಬಗಳು ಒಂದೆಡೆ ಸೇರಿ ಕಾರನ್ನು ಹತ್ತಿದೆವು. ಕಾರು ಒಂದೇ ವೇಗದಲ್ಲಿ ಓಡುತ್ತಿತ್ತು. ಎಷ್ಟು ದೂರ ಸಾಗಿದರೂ ಬೆಟ್ಟಗುಡ್ಡಗಳ ಶ್ರೇಣಿಗಳು, ಮೋಡ ಕವಿದ ವಾತಾವರಣ, ಎಲ್ಲೆಲ್ಲೂ ಹಚ್ಚ ಹಸಿರು, ನಡುವೆ ಚಹಾ ಮತ್ತು ಕಾಫಿ ತೋಟಗಳು, ತುಂತುರು ಮಳೆ. ನಾವು ಪ್ರಯಾಣಿಸುತ್ತಿದ್ದುದು ಕೀನ್ಯಾ ದೇಶದ ನೈರೋಬಿಯಿಂದ ಮೌಂಟ್ ಕೀನ್ಯಾದ ಕಡೆಗೆ. ಆಫ್ರಿಕಾ ಎಂದ ಕೂಡಲೇ ಅಲ್ಲಿ ಸರಿಯಾಗಿ ಮಳೆ ಬೆಳೆ ಇಲ್ಲ, ಬರೀ ಬಂಜರು ಭೂಮಿ, ಜನರು ತೀರಾ ಬಡವರು -ಹೀಗೆಲ್ಲಾ ಕಲ್ಪನೆ ಇಟ್ಟುಕೊಂಡಿರುವವರು ಯಾರಾದರೂ ಇದ್ದಲ್ಲಿ ಅದನ್ನು ಮರೆತುಬಿಡಿ.

ಮೌಂಟ್ ಕೀನ್ಯಾದ ಸುತ್ತಲಿನ ಪ್ರದೇಶ ಹೇಗಿರುತ್ತದೆ ಎಂದರೆ, ಯಾರೋ ಆಗ ತಾನೆ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ ಎನ್ನಿಸುತ್ತದೆ. ಧೋ ಎಂದು ಸುರಿಯುವ ಮಳೆಗೆ ಹಕ್ಕಿಗಳು 

ಮೌಂಟ್ ಕೀನ್ಯಾ

ಇದು ಕೀನ್ಯಾದ ಅತೀ ಎತ್ತರದ ಪರ್ವತವಾಗಿದ್ದು ಸುಮಾರು 5199 ಮೀಟರ್ ಎತ್ತರವಿದೆ. ಆಫ್ರಿಕಾದಲ್ಲಿ ಕಿಲಿಮಂಜಾರೊವಿನ ನಂತರ ಎರಡನೆಯ ಅತಿ ಎತ್ತರದ ಪರ್ವತವಾಗಿದೆ. ಪರ್ವತ ಕೇಂದ್ರದ ಸುತ್ತ ಸುಮಾರು 276 ಚದರ ಮೈಲಿಯಷ್ಟು ಪ್ರದೇಶವನ್ನು, ರಾಷ್ಟ್ರೀಯ ಉದ್ಯಾನವನ ಎಂದು ಗುರುತಿಸಲಾಗಿದೆ. ಈ ಉದ್ಯಾನವನಕ್ಕೆ ಪ್ರತಿ ವರ್ಷ 16,000 ಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಪರ್ವತದಲ್ಲಿ 11 ಕ್ಕೂ ಹೆಚ್ಚು ಹಿಮನದಿಗಳಿದ್ದು, ಅರಣ್ಯದ ಇಳಿಜಾರುಗಳು ಕೀನ್ಯಾದ ಹೆಚ್ಚಿನ ಭಾಗಕ್ಕೆ ನೀರಿನ ಮುಖ್ಯ ಮೂಲವಾಗಿದೆ.

ಕೂಡ ಗೂಡು ಸೇರಿ ಬೆಚ್ಚಗೆ ಮುದುಡಿ ಮಲಗಿರುತ್ತವೆ. ಅದೃಷ್ಟವಶಾತ್ ಲೈಕಿಪಿಯಾ ರಾಜ್ಯದ ನಾನ್ಯೂಕಿ ಪಟ್ಟಣ ತಲುಪುವಷ್ಟರಲ್ಲಿ ಮಳೆಯು ನಿಂತಿತ್ತು. ನಾನ್ಯೂಕಿ ಪಟ್ಟಣವನ್ನು 1907ರಲ್ಲಿ ಕೀನ್ಯಾದ ಆರಂಭದ ದಿನಗಳಲ್ಲಿ ಬ್ರಿಟೀಷ್ ವಸಾಹತುಗಾರರು ಪ್ರಾರಂಭಿಸಿದರು. ಅವರ ವಂಶಸ್ಥರು ಇನ್ನೂ ಈ ಪಟ್ಟಣದಲ್ಲಿ ಮತ್ತು ಅದರ ಸುತ್ತಲೂ ವಾಸಿಸುತ್ತಿದ್ದಾರೆ. ಈ ಪ್ರದೇಶವು ಆಟದ ಉದ್ಯಾನವನಗಳಿಗೆ, ರಾಂಚ್ಗಳಿಗೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಹೆಸರುವಾಸಿಯಾಗಿದೆ. ಸಮಭಾಜಕ ವೃತ್ತವು ಈ ಪಟ್ಟಣದ ಮೂಲಕವೇ ದಕ್ಷಿಣಕ್ಕೆ ಹಾದು ಹೋಗುತ್ತದೆ. ಕೀನ್ಯಾ ದೇಶದಲ್ಲಿನ ಅತ್ಯಂತ ಪ್ರಸಿದ್ಧ ಹೆಗ್ಗುರುತಾದ ಮೌಂಟ್ ಕೀನ್ಯಾವನ್ನು ಏರಲು ಪ್ರಯತ್ನಿಸುವ ಜನರಿಗೆ ತಳಹದಿ ಇದಾಗಿದೆ.

ಮೂಲತಃ ನಮ್ಮ ಮುಂಬೈನವರೆ ನಡೆಸುತ್ತಿರುವ ಸ್ಪೈಸ್ ಲಾಂಜ್ ಹೋಟೆಲ್‍ನಲ್ಲಿ ಮಧ್ಯಾಹ್ನದ ಉಪಾಹಾರ ಮುಗಿಸಿ, ಸುಮಾರು 20 ಕಿ.ಮೀ. ದೂರವಿದ್ದ ಮೌಂಟ್ ಕೀನ್ಯಾ ವನ್ಯಜೀವಿ ಸಂರಕ್ಷಣೆಯ ಮುಖ್ಯ ದ್ವಾರದ ಬಳಿ ಬಂದೆವು. ಅಲ್ಲಿ ಮೌಂಟ್ ಕೀನ್ಯಾ ಪ್ರ್ರಾಣಿಗಳ ಅನಾಥಾಶ್ರಮಕ್ಕೆ ಪ್ರವೇಶ ಧನ ನೀಡಿ ಒಳಗೆ ಹೋದೆವು. ಅನಾಥಾಶ್ರಮದ ಬಾಗಿಲು ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿನ ಪ್ರಾಣಿಗಳ ಆಹಾರಕ್ಕಾಗಿ ಕೆಲವು ತರಕಾರಿಗಳನ್ನು ಬೆಳೆದಿರುವುದನ್ನು ನೋಡಬಹುದು. ಮೌಂಟ್ ಕೀನ್ಯಾ ವನ್ಯಜೀವಿ ಸಂರಕ್ಷಣೆಯನ್ನು 1967ರಲ್ಲಿ ಹಾಲಿವುಡ್ ನಟ ವಿಲಿಯಮ್ ಹೋಲ್ಡೆನ್, ಜ್ಯೂಲಿಯನ್ ಮ್ಯಾಕ್ ಕಿಯಾಂಡ್, ಐರಿಸ್ ಮತ್ತು ಡಾನ್ ಹಂಟ್ ಸ್ಥಾಪಿಸಿದರು. ಇದು ಮೌಂಟ್ ಕೀನ್ಯಾ ಗೇಮ್ ರಾಂಚ್ ಆಗಿ ಜೀವನವನ್ನು ಪ್ರಾರಂಭಿಸಿತು. ಅನಾಥ, ಗಾಯಗೊಂಡ, ನಿರ್ಲಕ್ಷಿತ ಕಾಡುಪ್ರಾಣಿಗಳನ್ನು ಇಲ್ಲಿಗೆ ತಂದು ಪೋಷಿಸಲಾಗಿದೆ.

ಈ ಅನಾಥಾಶ್ರಮಕ್ಕೆ ತನ್ನದೇ ಆದ ಭಿನ್ನತೆಯಿದೆ. ಇಲ್ಲಿ ಪ್ರಾಣಿಪಕ್ಷಿಗಳನ್ನು ಕಬ್ಬಿಣದ ಸರಳುಗಳ ಪಂಜರದೊಳಗೆ ಬಂಧಿಸದೇ ಸಹಜ ಪರಿಸರವನ್ನು ಸೃಷ್ಟಿಸಲಾಗಿದೆ. ಉದಾಹರಣೆಗೆ, ಬೊಂಗೊ, ಉಷ್ಟ್ರಪಕ್ಷಿ, ಲಾಮಾ, ಮುಳ್ಳುಹಂದಿ, ನೀರಾನೆ ಮುಂತಾದವು. ಅವುಗಳ ಜೊತೆ ಪ್ರವಾಸಿಗರು ಸ್ವಚ್ಛಂದವಾಗಿ ವಿಹರಿಸಬಹುದು. ಚಿರತೆಯನ್ನು ಬಹಳ ಹತ್ತಿರದಿಂದ ನೋಡಬಹುದು. ಈ ಅಪಾಯಕಾರಿ ಪ್ರಾಣಿಗಳಿಗೂ ತನ್ನದೇ ಆದ ನೈಜ ನೆಲೆಯಂತೆ ಗುಹೆಗಳನ್ನು ಸೃಷ್ಟಿಸಿದ್ದಾರೆ.

ಈ ಅನಾಥಾಶ್ರಮ ಕೇವಲ ಪ್ರಾಣಿ ಪಕ್ಷಿಗಳ ವೀಕ್ಷಣೆಗೆ ಮಾತ್ರ ಸೀಮಿತವಲ್ಲ. ಈ ಮುಗ್ಧ ಜೀವಿಗಳ ಬಗ್ಗೆ ಮಾನವನಲ್ಲಿ ಅರಿವನ್ನು ಮೂಡಿಸುವ ಹಾಗೂ ಅವುಗಳ ಕ್ರಿಯಾಶೀಲತೆ ಬಗ್ಗೆ ಪ್ರದರ್ಶನಗಳನ್ನು ಏರ್ಪಡಿಸುವ ಹಲವು ಕಾರ್ಯಕ್ರಮಗಳೂ ಇವೆ. ಇದಲ್ಲದೆ ಪ್ರಾಣಿಪಕ್ಷಿಗಳಿಗೆ ಪ್ರವಾಸಿಗರು ಖುದ್ದು ಆಹಾರವನ್ನು ಉಣಬಡಿಸಬಹುದು. ಅನಾಥಾಶ್ರಮದ ಸುತ್ತಲೂ ಮೌಂಟ್ ಕೀನ್ಯಾ ರಾಷ್ಟ್ರೀಯ ಉದ್ಯಾನವನವಿದ್ದು ಸಫಾರಿಗೆ ಹೋಗಬಹುದು.

ಮರುದಿನ ನಾನ್ಯೂಕಿಯಿಂದ ಸುಮಾರು 50 ಕಿ.ಮೀ. ದೂರವಿರುವ ಗಾರೆ ಡಾರೆ ಅರಣ್ಯಕ್ಕೆ ಹೊರಟೆವು. ನಮ್ಮ ಕಾರುಗಳು ಸುಮಾರು 45 ಕಿಲೋ ಮೀಟರ್ ಚಲಿಸಿ, ನಂತರ ಮುಖ್ಯ ರಸ್ತೆಯನ್ನು ಬಿಟ್ಟು ಸ್ವಲ್ಪ ಅಡ್ಡ ರಸ್ತೆಯನ್ನು ಹಿಡಿದೆವು. ಅಲ್ಲಿ ನಮ್ಮನ್ನು ದೈತ್ಯ ದೂಳು ಆವರಿಸಿತು. ಸುಮಾರು 10 ನಿಮಿಷಗಳಲ್ಲಿ ನಾವು ಅಲ್ಲಿಗೆ ತಲುಪುವ ಬದಲು ಸುಮಾರು 1.30 ಘಂಟೆ ಹೆಚ್ಚು ಕಾಲ ತೆಗೆದುಕೊಂಡಿತು. ಕಾಡಿನಲ್ಲಿನ ಮಣ್ಣಿನ ರಸ್ತೆಗಳು ಬೆಟ್ಟಗುಡ್ಡ, ಇಳಿಜಾರು  ಪ್ರದೇಶಗಳಲ್ಲಿ ನಿಧಾನವಾಗಿ ಚಲಿಸುತ್ತಾ ಅಂತೂ ಕೊನೆಗೆ ಅರಣ್ಯದ ಮುಖ್ಯ ಆಕರ್ಷಣೆಯಾದ ಅಲುಗಾಡುವ ಸೇತುವೆ (ಕನೋಪಿ) ಇರುವ ಸ್ಥಳಕ್ಕೆ ಬಂದೆವು. 10 ಮೀಟರ್ ಎತ್ತರ ಮತ್ತು 500 ಮೀಟರ್ ಉದ್ದವಿರುವ ಇದು ಪೂರ್ವ ಆಫ್ರಿಕಾದಲ್ಲೇ ಅತ್ಯಂತ ಉದ್ದ ಮತ್ತು ಎತ್ತರವಾದ ಮೇಲಾವರಣವಾಗಿದೆ. ನಾವು ನಡೆಯುವಾಗ ಕೆಳಗೆ ಹರಿಯುವ ನದಿಯನ್ನು ನೋಡಿ ಆನಂದಿಸಬಹುದು. ವನ್ಯಜೀವಿಗಳನ್ನು ವೀಕ್ಷಿಸಬಹುದು. ಆನೆಗಳು ಮತ್ತು ಕಾಡೆಮ್ಮೆಗಳು ಆಗಾಗ್ಗೆ ಇಲ್ಲಿ ನೀರು ಕುಡಿಯಲು ಮತ್ತು ವಿಶ್ರಮಿಸಲು ಬರುತ್ತವೆ.

ಗಾರೆ ಡಾರೆ ಅರಣ್ಯವು ಉತ್ತರ ಕೀನ್ಯಾದ ಒಂದು ಗುಪ್ತರತ್ನವೆಂದು ಹೇಳಬಹುದು. ಇದು ಮೌಂಟ್ ಕೀನ್ಯಾದ ಉತ್ತರ ತಪ್ಪಲಿನಲ್ಲಿ ಮೇರು ಪಟ್ಟಣದಿಂದ 45 ಕಿಲೋ ಮೀಟರ್ ದೂರದಲ್ಲಿದ್ದು, ಉತ್ತರ ಕೀನ್ಯಾದ ಮೇರು ಮತ್ತು ಲೈಕಿಪಿಯಾ ಎರಡು ರಾಜ್ಯಗಳಿಗೂ ಹೊಂದಿಕೊಂಡಿದೆ. ಲೈವಾ ಮತ್ತು ಬೋರಾನಾಗಳ ಗಡಿಯುದ್ದಕ್ಕೂ ಅರಣ್ಯವು ಚಾಚಿಕೊಂಡಿದೆ. ಈ ಅರಣ್ಯದ ವಿಸ್ತೀರ್ಣ ಸುಮಾರು 5,545 ಹೆಕ್ಟೇರ್‍ಗಳು. ಗಾರೆ ಡಾರೆ ಈ ಎರಡು ಮಸಾಯಿ ಭಾಷೆಯ ಪದಗಳು. “ಗಾರೆ” ಎಂದರೆ ‘ನೀರು’, “ಡಾರೆ” ಎಂದರೆ ‘ಆಡುಗಳು’. ಮಸಾಯಿ ಭಾಷೆಯಲ್ಲಿ “ಆಡುಗಳು ನೀರನ್ನು ಕುಡಿಯುವ ಸ್ಥಳ” ಎಂದರ್ಥ.

ಈ ಅರಣ್ಯ ಪ್ರದೇಶದಲ್ಲಿ ಮೇರು, ಮಸಾಯಿ, ಬೊರಾನಾ ಮತ್ತು ಕಿಕುಯು ಸಮುದಾಯಗಳು ಇವೆ. ಈ ಅರಣ್ಯವು ವಿವಿಧ ಜಾತಿಯ ಸ್ಥಳೀಯ ಸಸ್ಯಗಳನ್ನು ಹೊಂದಿವೆ. ಅವುಗಳಲ್ಲಿ ಕೆಲವು ಗಿಡಮೂಲಿಕೆಗಳನ್ನು ಆರೋಗ್ಯ ಸಮಸ್ಯೆ ನಿವಾರಣೆಗೆ ಉಪಯೋಗಿಸುತ್ತಾರೆ. ಪ್ರಬಲ ಜಾತಿಯ ಮರಗಳೆಂದರೆ, ಜುನಿಪೆರಸ್ ಪ್ರೊಸೆರಾ ಮತ್ತು ಒಲಿಯಾ ಎರಿಕಾನಾ. ಈ ಅರಣ್ಯವನ್ನು ಸಂರಕ್ಷಿಸಲು ಕೀನ್ಯಾ ಅರಣ್ಯ ಸೇವೆ ಮತ್ತು ಗಾರೆ ಡಾರೆ ಅರಣ್ಯ ಟ್ರಸ್ಟ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅರಣ್ಯವು ಇತರ ಕಾಡು ಪ್ರಾಣಿಗಳು, ಹಕ್ಕಿಗಳು ಮತ್ತು ಕೀಟಗಳಿಗೆ ಆವಾಸಸ್ಥಾನವಾಗಿದೆ. ಈ ಅರಣ್ಯದಲ್ಲಿಯೇ ಒಂದು ಸುಂದರ ಜಲಪಾತವೂ ಇದೆ.

ಇದು ನಿಜವಾಗಿಯೂ ಅನನ್ಯವಾದ ನೈಸರ್ಗಿಕ ಸೌಂದರ್ಯದ ಒಂದು ಕಾಡು. ಸಾಹಸಿಗಳಿಗೆ, ಪರಿಸರ ಪ್ರೇಮಿಗಳಿಗೆ ಇದೊಂದು ಪರಿಪೂರ್ಣ ಸ್ಥಳವಾಗಿದೆ.

*ಮೂಲತಃ ಮಂಡ್ಯ ಜಿಲ್ಲೆಯ ಸೂನಗಹಳ್ಳಿ ಗ್ರಾಮದ ಲೇಖಕಿ ಜೈವಿಕ ತಂತ್ರಜ್ಞಾನದ ಪದವೀಧರರು; ಜರ್ಮನಿಯಲ್ಲಿ ಪಿ.ಎಚ್.ಡಿ. ಮಾಡಿ ಕೀನ್ಯಾ ದೇಶದ ನೈರೋಬಿಯಲ್ಲಿ ನೆಲೆಸಿದ್ದಾರೆ. 

Leave a Reply

Your email address will not be published.