ಮಂದಸ್ಮಿತ ಮುಖ ಮತ್ತು ಸಮತೆಯ ಸುಖ

-ಬರಗೂರು ರಾಮಚಂದ್ರಪ್ಪ

ನಿರಾಶೆಯಲ್ಲೂ ನಿರೀಕ್ಷೆ ಇಟ್ಟುಕೊಳ್ಳದೆ ಹೋದರೆ ಹತಾಶೆಗೆ ತಲುಪುತ್ತೇವೆಂಬ ಎಚ್ಚರದಲ್ಲೇ ಆಶಾವಾದದ ಬೇರುಗಳಿಗೆ ನೀರೆರೆದುಕೊಂಡು ಬಂದವನು ನಾನು. ಹೀಗಾಗಿ ನಾವು ತಡೆಯಲಾಗದ ಕ್ಯಾಲೆಂಡರ್ ಹೊಸ ವರ್ಷವು ಹನ್ನೆರಡು ತಿಂಗಳಿಗೊಮ್ಮೆ ಬರುವ ಯಾಂತ್ರಿಕ ತಿರುವಿನಲ್ಲೂ ತಾತ್ವಿಕ ತಿರುವೊಂದು ಬಂದೀತೇನೋ ಎಂದು ನಾನು ನಿರೀಕ್ಷಿಸುತ್ತೇನೆ. ನಿರೀಕ್ಷೆಗಳೆಲ್ಲ ನಿಜವೇ ಆಗುತ್ತವೆಯೆಂಬ ನಂಬಿಕೆ ಇಲ್ಲದಿರಬಹುದು. ಆದರೆ, ನಿರೀಕ್ಷೆ ಮತ್ತು ನಂಬಿಕೆಗಳಿಗೆ ನೀರುಣಿಸಿ ಬದುಕಿಸಿಕೊಳ್ಳದಿದ್ದರೆ ನಾವು ಬದುಕುವುದೇ ಕಷ್ಟವಾಗಬಹುದು. ಆದ್ದರಿಂದ ಇಲ್ಲೀವರೆಗೆ ಎದುರಾದ ದುಷ್ಟ ದಿನಗಳು ಮತ್ತೆ ಬಾರದೇ ಇರಲಿ ಎಂದು ನಿರೀಕ್ಷಿಸುವುದು, ಒಳ್ಳೆಯದೇನಾದರೂ ಸಂಭವಿಸಿದ್ದರೆ, ಅದು ಮತ್ತಷ್ಟು ವಿಸ್ತಾರವಾಗಲಿ ಎಂದು ಆಶಿಸುವುದು, ಒಮ್ಮೆಮ್ಮೆ ಯಾಂತ್ರಿಕ ಅನ್ನಿಸಿದರೂ ನನ್ನ ಆಸೆ-ನಿರೀಕ್ಷೆಗಳು ಬತ್ತಿ ಹೋಗಿಲ್ಲ.

ಹಾಗೆ ನೋಡಿದರೆ, ನನ್ನ ಆಸೆ-ನಿರೀಕ್ಷೆಗಳು ಸ್ವಂತಕ್ಕೆ ಸಂಬಂಧಿಸಿಲ್ಲ. ನಾವು ಬದುಕುತ್ತಿರುವ ಸಮಾಜಕ್ಕೆ ಸಂಬಂಧಿಸಿವೆ. ನಾನು ಬದುಕುತ್ತಿರುವ ಸಮಾಜ ಚೆನ್ನಾಗಿದ್ದರೆ, ಅದರಲ್ಲಿ ನಾನೂ ಚೆನ್ನಾಗಿರುತ್ತೇನಲ್ಲವೆ? ನಾವು ಕಟ್ಟಿಕೊಂಡು ಬಂದ ಸಮತೆ, ಮಮತೆಗಳ ಮನೆಗೆ ಬೆಂಕಿ ಬೀಳಬಾರದಲ್ಲವೇ? ಉರಿಯುವ ಬೀದಿಬಾಯಿಗಳಲ್ಲಿ ಅಂತಃಕರಣ ಆಹುತಿಯಾಗಬಾರದಲ್ಲವೇ? ನಂಜು ತುಂಬಿದ ನಾಲಗೆಗಳು ಮನುಷ್ಯತ್ವವನ್ನು ವಿಷಮಯ ಮಾಡಿ ಮಸಣಕ್ಕೆ ನೂಕಬಾರದಲ್ಲವೇ? ಹೀಗೆ ನಾನು ‘ಅಲ್ಲವೇ?’ ಎಂದು ನನ್ನ ಅಂತರಾಳದಿಂದ ಕರುಳು ಹುರಿಗಟ್ಟಿ ಕೇಳುತ್ತಿರುವ ಪ್ರಶ್ನೆಗಳೇ ನಿರೀಕ್ಷೆಯ ನಕ್ಷೆ ಬರೆಯುತ್ತವೆ. ಆ ನಕ್ಷೆಯಲ್ಲಿ ಮಂದಸ್ಮಿತ ಮುಖ ಮತ್ತು ಸಮತೆಯ ಸುಖ ರಚಿತವಾಗಲಿ ಎಂದು ಹಾರೈಸುತ್ತೇನೆ.

ಯಾಕೆ ಹೀಗನ್ನಿಸುತ್ತದೆ? ಯಾಕೆ ಆತಂಕವಾಗುತ್ತಿದೆ? ಯಾಕೆ ನಿರೀಕ್ಷೆಯ ನಕ್ಷೆ ಬಿಡಿಸುವಾಗ ಅಂತರಂಗದಲ್ಲಿ ಅಲೆಗಳಬ್ಬರ ಮಾರ್ದನಿಸುತ್ತದೆ? ಬಹಿರಂಗದಲ್ಲಿ ಅಬ್ಬರವೇ ಅನುದಿನದ ಆದರ್ಶವಾಗುತ್ತಿರುವುದು ಕಾರಣವೇ? ಹೌದು; ಇಂದು ಅಬ್ಬರಿಸುವವರೇ ಅಧಿನಾಯಕರು! ಸುಳ್ಳು ಸಾಮ್ರಾಟರೇ ಸಿಂಹಾಸನಾಧೀಶರು! ಸತ್ಯದ ತಲೆಯೊಡೆದು ಸುಳ್ಳು ಸೂಜಿಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮಾತುಗಾರರೇ ಬಹುಪಾಲ ರಾಜಕೀಯ ವಕ್ತಾರರು! ಇದಕ್ಕೆ ಅಪವಾದಗಳು ಇಲ್ಲ ಎಂದಲ್ಲ. ಈ ಸಲ್ಲದ ಅಬ್ಬರಾಧೀಶರ ಹೊರತಾದ ನಾಯಕರೂ ಕೆಲವರಿದ್ದಾರೆ. ಆದರೆ ಅವರ ನಾಲಗೆ ನಾಚಿ ನೆಲ ಸೇರಿದ ಸನ್ನಿವೇಶವನ್ನು ನಾವು ನೋಡುತ್ತೇವೆ. ಸಮೂಹಸನ್ನಿಯನ್ನು ಸೃಷ್ಟಿಸಿ, ವಿಸ್ತರಿಸಿ, ಓಟು ಸೆಳೆಯುವ ಶಕ್ತಿ ಸಾಮಥ್ರ್ಯಗಳೇ ನಾಯಕತ್ವದ ಗುಣ ಎನ್ನಿಸಿಕೊಳ್ಳುವುದು ಪ್ರಜಾಪ್ರಭುತ್ವದ ಒಂದು ಅಣಕು ವೇಷವಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ನಾಲಗೆಯು ಅಗತ್ಯಕ್ಕಿಂತ ಹೆಚ್ಚು ಉದ್ದವಾಗಬಾರದು, ಉಡಾಳವಾಗಬಾರದು; ಕಿವಿ ಮತ್ತು ಕಣ್ಣುಗಳನ್ನು ಸಮಪ್ರಜ್ಞೆಯಲ್ಲಿ ಕಾಯ್ದುಕೊಳ್ಳುವುದು ಪ್ರಜಾಪ್ರಭುತ್ವದ ಆದ್ಯತೆಯಾಗಬೇಕು. ನೋಡುವ ನೋಟ ನೆಟ್ಟಗಿದ್ದರೆ, ಕೇಳುವ ಕಿವಿಗೆ ತಾಳ್ಮೆಯಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯ ಉಳಿಯುತ್ತದೆ; ಬೆಳೆಯುತ್ತದೆ; ಕಿವಿ, ಕಣ್ಣುಗಳನ್ನು ಮುಚ್ಚಿ ನಾಲಗೆಯೊಂದನ್ನೇ ಉದ್ದ ಮಾಡಿ ಮೆರೆದರೆ ಮೌಲ್ಯ ಮುಕ್ಕಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ಪಂಚೇಂದ್ರಿಯಗಳ ಸೂಕ್ಷ್ಮ ಸಂವೇದನೆಯು ರಾಜಕಾರಣದ ಅಂತಃಕರಣವಾಗಬೇಕು. ವಾಸನೆಯ ವ್ಯತ್ಯಾಸವನ್ನು ಗುರುತಿಸುವ ನಾಸಿಕ, ನ್ಯಾಯ ನಿಯಂತ್ರಿತ ನಾಲಗೆ, ಕರುಳು ತುಂಬಿಕೊಂಡ ಕಣ್ಣು, ಸದಾ ಶುದ್ಧಾತ್ಮ ತೆರೆದ ಕಿವಿ, ಭೇದಭಾವವಿಲ್ಲದೆ ಸ್ಪರ್ಶಿಸುವ ಚರ್ಮ- ಇಂಥ ಪಂಚೇಂದ್ರಿಯಗಳೇ ಪ್ರಜಾಪ್ರಭುತ್ವದ ಪ್ರಾಣ ಪ್ರತೀಕ. ಈ ಪ್ರಾಣ ಪ್ರತೀಕಕ್ಕೆ ತಾಣವೇ ಇಲ್ಲದ ಸನ್ನಿ-ವೇಶಗಳು ವಿಜೃಂಭಿಸುತ್ತಿರುವುದನ್ನು ಕಂಡು ಕೊಂಡ ಹಾಯುತ್ತಿರುವ ಹೃದಯಗಳಲ್ಲಿ ಹತಾಶೆ ಹುಟ್ಟದೆ ಇರಲಿ ಎಂಬುದು ನನ್ನ ಅಪೇಕ್ಷೆ-ನಿರೀಕ್ಷೆ.

ಈ ನಿರೀಕ್ಷೆ ನಿಜವಾಗಬೇಕಾದರೆ ನಿಜದ ಜನಚಳವಳಿಗಳು ಬೆಳೆಯಬೇಕು. ಚಳವಳಿಗಳಿಗೂ ಪಂಚೇಂದ್ರಿಯ ಪ್ರಜ್ಞೆಯ ಪ್ರಜಾಸತ್ತಾತ್ಮಕ ಅಂತರಾತ್ಮ ಬೇಕು. ಈ ನಿರೀಕ್ಷೆಯ ನೆಲೆಯಲ್ಲಿ ನಿಂತ ನಾನು ಚಳವಳಿಗಳನ್ನು ಖಂಡಿತ ಸಿನಿಕತನದಿಂದ ನೋಡುವುದಿಲ್ಲ. ಕೆಲವು ಕೊರತೆಗಳೂ ವ್ಯಕ್ತಿ ಕೇಂದ್ರಿತ ವಾಂಛೆಗಳೂ ಅಲ್ಲಲ್ಲೇ ಕಂಡುಬಂದರೂ ಅವುಗಳನ್ನು ಮೀರಿದ ಚಳವಳಿ ಪ್ರಜ್ಞೆಯೂ ನಮ್ಮಲ್ಲಿದೆ. ಸೋಲುಗಳನ್ನು ಲೆಕ್ಕಿಸದೆ ಸಿದ್ಧಾಂತ ಬದ್ಧತೆಯಲ್ಲಿ ಜೀವ ಹಿಡಿದುಕೊಂಡಿರುವ ಎಡಪಕ್ಷಗಳು, ಈಗ ದೆಹಲಿ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ನಡೆಯುತ್ತಿರುವ ರೈತ ಚಳವಳಿ- ಮುಂತಾದ ಉದಾಹರಣೆಗಳು ನನ್ನಂಥವರ ನಿರೀಕ್ಷೆಯ ಉಸಿರನ್ನು ಇನ್ನೂ ಉಳಿಸಿವೆ.

ಇದೇ ಸಂದರ್ಭದಲ್ಲಿ ಚಳವಳಿ ಪ್ರಜ್ಞೆಯ ಪಕ್ಷ ಹಾಗೂ ಸಂಘಟನೆಗಳು ಹಿಂದಿನ ವರ್ಷಗಳ ಅನುಭವದಿಂದ ಕಲಿಯಬೇಕಾದ ಪಾಠವೊಂದಿದೆ ಎಂದು ಭಾವಿಸುತ್ತೇನೆ. ತಾವು ನಂಬಿದ ಸಿದ್ಧಾಂತವನ್ನು ಅದರ ಆಶಯಕ್ಕೆ ಬದಲಾಗಿ ಅಕ್ಷರಕ್ಕೆ ಸೀಮಿತಗೊಳಿಸಿಕೊಂಡರೆ ಅಪ್ರಸ್ತುತವಾಗುವ ಅಪಾಯವನ್ನು ಮನಗಾಣಬೇಕು. ಸೈದ್ಧಾಂತಿಕ ಸೃಜನಶೀಲತೆ ಇಂದಿನ ಅಗತ್ಯ; ಸೈದ್ಧಾಂತಿಕ ಅನುಸಂಧಾನದಿಂದ ಇದು ಸಾಧ್ಯ. ನಾವು ನಂಬಿದ ಸಿದ್ಧಾಂತದ ಮೂಲ ಆಶಯಗಳನ್ನು ಉಳಿಸಿಕೊಂಡು ಗುರಿ ತಲುಪಲು ಬೇಕಾದ ಅನುಸಂಧಾನವನ್ನು ಸಾಧಿಸುವ ‘ವೈಚಾರಿಕ ಒಕ್ಕೂಟ ಮನೋಧರ್ಮ’ವೊಂದು ಇಂದು ನಮ್ಮದಾಗಬೇಕಾಗಿದೆ.

ನನ್ನ ಮಾತಿನ ಅರ್ಥ ಹೀಗಿದೆ: ನಾವು ಗಾಂಧಿ, ಅಂಬೇಡ್ಕರ್, ಮಾಕ್ರ್ಸ್ ಮುತಾಂದವರನ್ನು ಪರಸ್ಪರ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಕೊಳ್ಳದೆ ಅಂತಿಮ ಗುರಿಯಿಂದ ಸಮಾನತೆ ಮತ್ತು ಸಹಿಷ್ಣುತೆಯ ಸಮಾಜ ಸ್ಥಾಪನೆಗೆ ಪರಸ್ಪರ ಪೂರಕವಾಗಿಸಿಕೊಳ್ಳಬೇಕು. ಸೈದ್ಧಾಂತಿಕವಾದ ಭಿನ್ನ ನೆಲೆಗಳು ಅಕಡೆಮಿಕ್ ಚರ್ಚೆಯ ಭಾಗವಾಗುವುದಕ್ಕೂ, ಚಳವಳಿಯ ಕ್ರಿಯಾತ್ಮಕ ಒಕ್ಕೂಟವಾಗುವುದಕ್ಕೂ ಅಗತ್ಯ ಅಂತರವನ್ನು ನಿರ್ವಹಿಸಿಕೊಳ್ಳಬೇಕು. ಇಂದು ಪ್ರತಿಗಾಮಿ ಶಕ್ತಿಗಳಲ್ಲಿ ಒಗ್ಗಟ್ಟು,

ಪ್ರಗತಿಗಾಮಿ ಶಕ್ತಿಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವ ವಾಸ್ತವವನ್ನು ಮನಗಂಡು ಪ್ರಗತಿಪರ ಚಳವಳಿಗಳ ಕಾರ್ಯತಂತ್ರ ರೂಪುಗೊಳ್ಳಬೇಕು. ಪ್ರಗತಿಪರರಲ್ಲಿ ಸೈದ್ಧಾಂತಿಕ ಒಕ್ಕೂಟ ಪ್ರಜ್ಞೆ ರೂಪುಗೊಳ್ಳದಿದ್ದರೆ, ಪ್ರಜಾಪ್ರಭುತ್ವದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಪ್ರಜಾಸತ್ತಾತ್ಮಕ ಸಮತೆ ಮತ್ತು ಮಮತೆಗಳು ಉಳಿದು ಬೆಳೆದು ಭರವಸೆಯ ಬೇರು ಬಲವಾಗಲಿ. ಇದು ನನ್ನ ನಿರೀಕ್ಷೆ.

Leave a Reply

Your email address will not be published.