ಮಕ್ಕಳು ಬೆಳೆಯುವ ಪರಿ ತಂದೆಯೊಬ್ಬನ ಆತಂಕಗಳು

ಸಾಮಾಜಿಕ, ಆರ್ಥಿಕ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇತ್ತೀಚೆಗೆ ಆಗಿರುವ ಅಗಾಧ ಬದಲಾವಣೆಗಳ ಮಧ್ಯೆ ನಮ್ಮ ಮಕ್ಕಳ ಬೆಳವಣಿಗೆಯನ್ನು ಗ್ರಹಿಸುವುದು ಹೇಗೆ? ಸರಿ-ತಪ್ಪು ನಿರ್ಧರಿಸುವವರು ಯಾರು? ನಾವು ಬೆಳೆದ ಮಾನದಂಡಗಳಿಂದ ಅವರನ್ನು ಅಳೆಯುವುದು ಸರಿಯೇ?

ಇದು ಪೋಷಕರೇ ವಿದ್ಯಾರ್ಥಿಗಳಾಗುವ ಕಾಲ!

ಮಗುವೊಂದರ ಬೆಳವಣಿಗೆಯಲ್ಲಿ ವಂಶವಾಹಿ ಹಾಗೂ ಪರಿಸರ ಎರಡೂ ಪ್ರಭಾವಿಸುತ್ತವೆ/ನಿರ್ಧರಿಸುತ್ತವೆ ಎನ್ನಲಾಗುತ್ತದೆ. ವಂಶವಾಹಿಯಿಂದ ಬಂದ ಗುಣ ಅವಗುಣಗಳು ನಮ್ಮ ಹಿಡಿತದಲ್ಲಿಲ್ಲ. ಆದರೆ ವಂಶವಾಹಿಯಿಂದ ಬರುವ ಅವಗುಣಗಳನ್ನು ಸ್ವಪ್ರಯತ್ನದಿಂದ ಸಾಧ್ಯವಿದ್ದಷ್ಟು ಸರಿಪಡಿಸಬಹುದೆನ್ನುತ್ತಾರೆ ಪಂಡಿತರು. ಮಕ್ಕಳ ಬೆಳವಣಿಗೆಯ ಹಂತದಲ್ಲಿನ ಪರಿಸರ ಅವರನ್ನು ಹೆಚ್ಚು ಪ್ರಭಾವಿಸುತ್ತದೆ ಎಂಬುದು ನಿರ್ವಿವಾದ. ಅಂತಹ ಪೂರಕ ಪರಿಸರವನ್ನು ಪೋಷಕರು ಸಾಧ್ಯವಿದ್ದಷ್ಟು ಗುಣಾತ್ಮಕವಾಗಿ ಹೇಗೆ ನಿರ್ಮಿಸಬೇಕೆಂಬುದೇ ನಿಜವಾದ ಸವಾಲು.

ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಆಲೋಚನೆಯೇ ನಮಗೆ ಇತ್ತೀಚೆಗಿನದು ಅಥವಾ ಹೊಸತು. ಐವತ್ತರ ಗಡಿ ದಾಟಿರುವ ನಮ್ಮನ್ನು, ನಮ್ಮ ತಂದೆತಾಯಂದಿರು ಹೀಗೇ ಬೆಳೆಸಬೇಕೆಂದು ಪ್ರಜ್ಞಾಪೂರ್ವಕವಾಗಿ ಬೆಳೆಸಲಿಲ್ಲ. ನಾವು ಆಡುತ್ತಾ, ಓಡುತ್ತಾ… ಹತ್ತರಲ್ಲಿ ಹನ್ನೊಂದನೆಯವರಾಗಿ, ಹಾಗೇ ಬೆಳೆದುಬಿಟ್ಟೆವು. ನಾವು ಬೆಳೆದ ಪರಿಸರದಲ್ಲಿ ಸಿಟಿಸಿ (ಕಂಪ್ಯೂಟರ್-ಇಂಟರ್ನೆಟ್ ಸೇರಿದಂತೆ, ಟಿವಿ, ಸೆಲ್‍ಫೋನ್) ಹಾವಳಿಯಿರಲಿಲ್ಲ. ಬದಲಾಗಿ ನಮ್ಮನ್ನು ಬೆಳೆಸಿದ್ದು ಹಿರಿಯರ ಪ್ರೀತಿ, ಗೆಳೆಯರೊಂದಿಗಿನ ಆಟ-ಗುದ್ದಾಟ, ಗುರುಗಳ ಪಾಠ ಹಾಗೂ ಮಾರ್ಗದರ್ಶನ. ಆದರೆ ಇಂದು ಇದೆಲ್ಲದರ ಜವಾಬ್ದಾರಿಯನ್ನೂ/ ಪಾತ್ರವನ್ನೂ ಹೆಚ್ಚಾಗಿ ಈ ಸಿಟಿಸಿ ತೆಗೆದುಕೊಂಡಂತೆ ಕಾಣುತ್ತಿದೆ.

ಅಪ್ಪನೋ ಅಮ್ಮನೋ ಬೈದು ಹೊಡೆದರೆಂದು ಅಳುತ್ತಾ ನಿಂತಿರುತ್ತಿದ್ದ ನಮ್ಮನ್ನು ಅಜ್ಜಿ ಬಂದು ತಬ್ಬಿ ಅವರನ್ನೂ ಬೈದು, ನಮ್ಮನ್ನು ಸಂತೈಸುತ್ತಿದ್ದಳು. ಸಂಜೆ ಕೆರೆಯ ಏರಿಯ ಮೇಲೆ ಅಜ್ಜನ ಜೊತೆ ಹೆಜ್ಜೆಹಾಕುತ್ತಾ, ಅಜ್ಜನ ಇತಿಹಾಸ, ಊರಿನ ಇತಿಹಾಸ, ಪರಿಸರ ಎಲ್ಲವನ್ನೂ ತಿಳಿಯುತ್ತಿದ್ದೆವು. ಹಬ್ಬ, ಜಾತ್ರೆಗಳಿಗೆ ಬರುತ್ತಿದ್ದ ನೆಂಟರಿಷ್ಟರಿಂದ ಬಂಧುತ್ವದ ಅರ್ಥ ತಿಳಿಯುತ್ತಿತ್ತು. ಗೆಳೆಯರೊಂದಿಗಿನ ಆಟ-ಗುದ್ದಾಟಗಳಿಂದ ಸ್ನೇಹದ ಅರಿವಾಗುತ್ತಿತ್ತು. ಗುರುಗಳು ಚೆನ್ನಾಗಿ ಓದುವೆ, ಮಾತನಾಡುವೆಯೆಂದು ಬೆನ್ನು ತಟ್ಟಿದಾಗ ಮಾರ್ಗದರ್ಶನದ ಮಹತ್ವ ತಿಳಿಯುತ್ತಿತ್ತು. ಊರ ಹಬ್ಬ, ಜಾತ್ರೆ, ಉತ್ಸವಗಳಿಂದ ಸಮುದಾಯದ ಮಹತ್ವ ತಿಳಿದಿದ್ದೆವು. ಕೋಪದಲ್ಲಿ ಅಣ್ಣನನ್ನು ಏಕವಚನದಲ್ಲಿ ಕರೆದಾಗ ಅಪ್ಪ ಕೊಟ್ಟ ಒದೆತ ಸರಿ-ತಪ್ಪುಗಳ ಪಾಠ ಕಲಿಸಿತ್ತು. ನಾವು ಬೆಳೆದ ಪರಿಸರವನ್ನು ಯಾರೂ ನಮಗಾಗಿ ಪ್ರಜ್ಞಾಪೂರ್ವಕವಾಗಿ ಹೀಗಿರಬೇಕೆಂದು ನಿರ್ಮಿಸಿರಲಿಲ್ಲ, ನಿಯಂತ್ರಿಸುತ್ತಿರಲೂ ಇಲ್ಲ. ಆದರೆ ಈಗ?

ಪ್ರೀತಿ, ಸ್ನೇಹ, ನಿಸರ್ಗ, ಸಹಬಾಳ್ವೆ ನಮ್ಮನ್ನು ನಿರ್ಮಿಸಿದ್ದರೆ, ಕಂಪ್ಯೂಟರ್, ಇಂಟರ್‍ನೆಟ್, ಟೆಲಿವಿಷನ್, ಸೆಲ್‍ಫೋನ್, ಸಾಮಾಜಿಕ ಮಾಧ್ಯಮಗಳು ನಮ್ಮ ಮಕ್ಕಳನ್ನು ಪ್ರಭಾವಿಸುತ್ತಿವೆ. ನೈಜ ಪರಿಸರಗಳು ನಮ್ಮನ್ನು ರೂಪಿಸಿದ್ದರೆ, ಕಲ್ಪಿತ ಜಗತ್ತು (ಸಿಟಿಸಿ) ಅವರನ್ನು ರೂಪಿಸುತ್ತಿವೆ.

ಚಿತ್ರಣ ಪೂರ್ಣ ಬದಲಾಗಿದೆ. ಒಟ್ಟು ಕುಟುಂಬದ ಬದಲಾಗಿ ಸಣ್ಣ ಸಂಸಾರಗಳು ಹೆಚ್ಚಾಗಿವೆ, ಹಳ್ಳಿಯಿಂದ ನಗರಕ್ಕೆ ವಲಸೆ ಹೆಚ್ಚಿದೆ. ನಮ್ಮ ಬಾಲ್ಯವನ್ನು ನೆನೆದಾಗ ಸಮುದಾಯ ಮತ್ತು ನಿಸರ್ಗದ ಮಧ್ಯೆ ನಮ್ಮ ಬದುಕಿನ ಚಿತ್ರಣ ಗೋಚರಿಸುತ್ತದೆ. ಇಂದು ನನ್ನ ಮಕ್ಕಳು ನಗರಗಳ ಬೆಳವಣಿಗೆಯ ನಾಗಾಲೋಟದಲ್ಲಿ ಒಬ್ಬಂಟಿಯಾಗಿ ಕಾಣುತ್ತಾರೆ; ಕಾಂಕ್ರೀಟ್ ಕಟ್ಟಡಗಳು, ವಾಹನ ದಟ್ಟಣೆ, ಜನಸಂದಣಿಯ ಮಧ್ಯೆ ಅವರ ಭಾವನೆಗಳು ಕಳೆದುಹೋಗಿವೆ.

ಮಕ್ಕಳು ಬೆಳಗ್ಗೆ ಎದ್ದ ಕೂಡಲೇ ತಯಾರಾಗಿ ಶಾಲೆಗೆ ಹೊರಡುತ್ತಾರೆ. ಸಂಜೆ ಇತರೆ ಕಲಿಕೆಗಳು, ನಂತರ ಓದು, ಪರೀಕ್ಷಗಳು… ಇವುಗಳಲ್ಲೇ ದಿನ, ವಾರ, ತಿಂಗಳು, ವರ್ಷಗಳು ಉರುಳುತ್ತವೆ. ನಮ್ಮ ಕೆಲಸ ಮತ್ತು ನಗರ ಜೀವನದ ಒತ್ತಡಗಳಲ್ಲಿ ನಾವು ಗಮನ ಹರಿಸುವ ಮೊದಲೇ ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಒಟ್ಟು ಕುಟುಂಬ, ಗ್ರಾಮೀಣ ಬದುಕು, ಸಂತೆ, ಜಾತ್ರೆ ಹಬ್ಬಗಳು ನಮ್ಮನ್ನು ಪ್ರಭಾವಿಸಿದ್ದರೆ; ನಗರ, ವಾಹನದಟ್ಟಣೆ, ಮಾಲ್‍ಗಳು, ಹೊಸಬಗೆಯ ಚಿತ್ರಮಂದಿರಗಳು ಹೊಸ ಪೀಳಿಗೆಯನ್ನು ರೂಪಿಸುತ್ತಿವೆ. ಪ್ರೀತಿ, ಸ್ನೇಹ, ನಿಸರ್ಗ, ಸಹಬಾಳ್ವೆ ನಮ್ಮನ್ನು ನಿರ್ಮಿಸಿದ್ದರೆ, ಕಂಪ್ಯೂಟರ್, ಇಂಟರ್‍ನೆಟ್, ಟೆಲಿವಿಷನ್, ಸೆಲ್‍ಫೋನ್, ಸಾಮಾಜಿಕ ಮಾಧ್ಯಮಗಳು ನಮ್ಮ ಮಕ್ಕಳನ್ನು ಪ್ರಭಾವಿಸುತ್ತಿವೆ. ನೈಜ ಪರಿಸರಗಳು ನಮ್ಮನ್ನು ರೂಪಿಸಿದ್ದರೆ, ಕಲ್ಪಿತ ಜಗತ್ತು (ಸಿಟಿಸಿ) ಅವರನ್ನು ರೂಪಿಸುತ್ತಿವೆ. ಅಮ್ಮ ಮಾಡುತ್ತಿದ್ದ ತಿಂಡಿಗಳು, ಚಕ್ಕುಲಿ, ಕೋಡುಬಳೆ, ರವೆಉಂಡೆಗಳು ನಮಗೆ ದಕ್ಕಿದ್ದರೆ, ಪಾನಿಪುರಿ, ಚುರುಮುರಿ, ಪಿಜ್ಜಾ, ಬರ್ಗರ್‍ಗಳು ಅವರ ಹೊಟ್ಟೆಯನ್ನು ತುಂಬುತ್ತಿವೆ.

ಇಷ್ಟೆಲ್ಲ ಹೇಳುವಾಗ ನಾವು ಬೆಳೆದ ಪರಿಸರದಲ್ಲಿ ಎಲ್ಲವೂ ಸರಿ ಇತ್ತು, ಈಗ ಯಾವುದೂ ಸರಿಯಿಲ್ಲವೆಂದಲ್ಲ.

ಬದಲಾಗುತ್ತಿರುವ ಅರ್ಥವ್ಯವಸ್ಥೆಯಲ್ಲಿ ಸಾವಿರದಲ್ಲಿ ಒಬ್ಬ ಯಶಸ್ವೀ ಕೈಗಾರಿಕೋದ್ಯಮಿಯೋ, ವ್ಯಾಪಾರಿಯೋ ಆಗಬಹುದು. ಕೆಲವರು ಯಶಸ್ವೀ ವೃತ್ತಿಪರರಾಗಬಹುದು. ಆದರೆ ಬಹುಪಾಲು ಜನರು ಕೆಲಸಗಾರರಾಗಬೇಕಾಗುತ್ತದೆ. ಈ ಕೆಲಸಗಾರರ ಜೀವನಮಟ್ಟವು ಪಡೆಯುವ ಸಂಬಳ ಅವಲಂಬಿಸಿರುತ್ತದೆ. ತಂತ್ರಜ್ಞಾನ ಬೆಳೆಯುತ್ತಿರುವ ಗತಿ, ರೀತಿ ಗಮನಿಸಿದರೆ ಯಾವುದೇ ಒಂದು ಕೌಶಲ, ಪ್ರಾವೀಣ್ಯ ನಮಗೆ ಜೀವನಪೂರ್ತಿ ಆರ್ಥಿಕವಾಗಿ ಆಸರೆಯಾಗುತ್ತದೆ ಎಂದು ಹೇಳಲಾಗದು.

ಇಂತಹ ಸ್ಥಿತಿಯಲ್ಲಿ ಇಂದಿನ ಪೋಷಕರ ಮುಂದಿರುವ ಪ್ರಶ್ನೆಗಳು ಹಲವು. ನಮ್ಮ ಮಕ್ಕಳನ್ನು ಹೇಗೆ ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಿಸುವುದು? ವಿಶ್ವವೇ ಒಂದು ಕಾರ್ಯಕ್ಷೇತ್ರವಾದಾಗ, ಮುಂದಿನ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು ಅವಶ್ಯವಾದ ಕೌಶಲ ಮತ್ತು ಗುಣಗಳನ್ನು ಬೆಳೆಸುವುದು ಹೇಗೆ? ಅವರ ಬೆಳವಣಿಗೆಯತ್ತ ನಮ್ಮ ಹೆಚ್ಚಿನ ಗಮನ, ಮಾರ್ಗದರ್ಶನ ಬೇಕೆ? ಹೊರಸಂಗತಿಗಳು ಹೆಚ್ಚಾಗಿ ಪ್ರಭಾವಿಸುತ್ತಿರುವಾಗ, ಬರಿಯ ಮಾರ್ಗದರ್ಶನ, ಹಿತವಚಗಳಷ್ಟೇ ಸಾಕೆ?

ಪ್ರಪಂಚ ಬದಲಾಗುತ್ತಿರುವ ಪರಿಯನ್ನು ಅರ್ಥೈಸಿಕೊಳ್ಳಲು, ಹೊಂದಿಕೊಳ್ಳಲು ಪೋಷಕರೇ ಹೆಣಗುತ್ತಿರುವಾಗ, ಮಕ್ಕಳಿಗೆ ಮಾರ್ಗದರ್ಶನ ನೀಡುವುದೆಂತು? ಈ ವಿಷಯದಲ್ಲಿ ಪೋಷಕರೇ ವಿದ್ಯಾರ್ಥಿಗಳಾಗುವ ಕಾಲ ಇದು!

*ಲೇಖಕರು ಪಿರಿಯಾಪಟ್ಟಣ ಬಳಿಯ ರಾವಂದೂರು ಗ್ರಾಮದವರು. ಇತಿಹಾಸದಲ್ಲಿ ಎಂ.ಎ., ಎಂ.ಫಿಲ್. ಮಾಡಿ ಸ್ವತಂತ್ರ ವ್ಯವಹಾರದಲ್ಲಿ ನಿರತರು; ಕಲೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ, ಮೈಸೂರಿನಲ್ಲಿ ವಾಸ.

Leave a Reply

Your email address will not be published.