ಮಕ್ಕಳೊಂದಿಗಿನ ಸಂವಹನ ಭವಿಷ್ಯದ ಆಶಾಕಿರಣ

ಮಕ್ಕಳನ್ನು ಅರ್ಥಮಾಡಿಕೊಳ್ಳಲು ಅಪ್ಪ, ಅಮ್ಮ ಮೊದಲಿಗೆ ಉತ್ತಮ ಕೇಳುಗರಾಗಬೇಕು. ಮಕ್ಕಳು ಹೇಳುವುದನ್ನು ನಿಧಾನವಾಗಿ ಕೇಳಿಸಿಕೊಂಡು ಅದಕ್ಕೆ ಸ್ಪಂದಿಸಬೇಕು.

ಯಾವುದೇ ಉತ್ತಮ ಸಂಬಂಧದಲ್ಲಿ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿ ಅಪ್ಪ, ಅಮ್ಮ ಮತ್ತು ಮಕ್ಕಳ ನಡುವೆ ಅತ್ಯಂತ ಉತ್ತಮ ಸಂವಹನವಿರಬೇಕು. ಇದು ಹೇಳಿದಷ್ಟು ಸುಲಭವಿಲ್ಲ, ಒಂದು ಸಂಕೀರ್ಣ ವಿಷಯ. ಇದಕ್ಕೆ ಕಾರಣ ಅಪ್ಪ, ಅಮ್ಮ ತಾವು ಮಕ್ಕಳ ಮ್ಯಾನೇಜರ್‍ಗಳಂತೆ ಎಂದು ತಿಳಿಯುವುದು. ಅವರು ಮಕ್ಕಳಿಗೆ ನೀತಿನಿಯಮಗಳನ್ನು ಹೇರುತ್ತಾರೆ. ಅವರಿಗೆ ಅದು ಮಾಡಬೇಡ, ಇದು ಮಾಡು, ಹಾಗೆ ಆಡಬೇಡ, ಹೀಗೆ ಆಡು ಹೀಗೆ ಸದಾಕಾಲ ಹೇಳುತ್ತಲೇ ಇರುತ್ತಾರೆ. ಇಂದಿನ ಆಧುನಿಕ ಜೀವನದ ಒತ್ತಡದಡಿ ಸಿಲುಕಿ ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುವುದಿಲ್ಲ. ಅವರು ಹೇಗೆ ಬೆಳೆಯುತ್ತಿದ್ದಾರೆ, ಅವರ ಭಾವನೆಗಳೇನು, ಅವರಿಗೇನು ಬೇಕು, ಅವರು ಶಾಲೆಯಲ್ಲಿ ಅಥವಾ ಆಟವಾಡುವಾಗ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಹೋಗುವುದಿಲ್ಲ.

ಮಕ್ಕಳಿಗೆ ಸರಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡುವುದು ಸರಿ. ಆದರೆ ಇದು ಚಿಕ್ಕಮಕ್ಕಳಿಗೆ ಸರಿ. ಅವರು ಬೆಳೆದ ಹಾಗೆ ನಿಯಮನಿಬಂಧನೆಗಳನ್ನು ಹೇರಬಾರದು. ಅವರಿಗೆ ಅನುಕೂಲಗಳನ್ನು ಒದಗಿಸಬೇಕು. ಅವರೊಡನೆ ಹೆಚ್ಚು ಸಮಯ ಕಳೆಯಬೇಕು. ಅವರಿಗೆ ಅವರ ಬಗ್ಗೆಯೇ ಏನನ್ನಿಸುತ್ತದೆ, ಶಾಲೆ, ಓದು, ಸ್ನೇಹಿತರು, ಅವರ ಹವ್ಯಾಸಗಳು ಮತ್ತು ಆಸಕ್ತಿಗಳ ಬಗ್ಗೆ ಚರ್ಚಿಸಬೇಕು. ಅನೇಕ ಮನೆಗಳಲ್ಲಿ ಮಗು ಶಾಲೆಗೆ ಹೋಗುವಾಗ ಅಪ್ಪ ಮಲಗಿರುತ್ತಾರೆ ಮತ್ತು ಅವರು ಮನೆಗೆ ಬರುವ ವೇಳೆಗೆ ಮಗು ಮಲಗಿರುತ್ತದೆ. ಅವರಿಬ್ಬರು ಭೇಟಿಯಾಗುವುದೇ ಅಪರೂಪ. ರಜೆ ದೊರೆತರೂ ಅದು ಸ್ನೇಹಿತರು ಅಥವಾ ಬಂಧುಗಳ ಮನೆಗೆ ಭೇಟಿ ನೀಡುವುದರಲ್ಲೇ ಕಳೆಯುತ್ತದೆ.

ಹೀಗಾದರೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರುವುದು ಹೇಗೆ? ಅವರ ನಡುವೆ ಸಂವಹನ ಏರ್ಪಡುವುದು ಹೇಗೆ? ಆದರೂ ಎಲ್ಲರೂ ಒಟ್ಟಾಗಿ ಟಿವಿ ನೋಡುತ್ತಾರೆ. ಅದರಲ್ಲೂ ಧಾರಾವಾಹಿಗಳನ್ನು ನೋಡುತ್ತಾರೆ.

ಪ್ರಾಮಾಣಿಕವಾಗಿ ಎಷ್ಟು ಜನ ಅಪ್ಪ, ಅಮ್ಮ ತಮ್ಮ ಮಕ್ಕಳೊಡನೆ ಗುಣಮಟ್ಟದ ಕಾಲ ಕಳೆಯುತ್ತಾರೆ ಹೇಳಿ? ಮನೆಯಲ್ಲಿ ಎಲ್ಲರೂ ಬೇರೆ ಬೇರೆ ಸಮಯದಲ್ಲಿ ಊಟ ಮಾಡುತ್ತಾರೆ. ಅದೂ ಕೆಲವೊಮ್ಮೆ ಕೆಲವರು ರೂಮುಗಳಲ್ಲಿಯೇ ಊಟ ಮಾಡುತ್ತಾರೆ. ಒಟ್ಟಿಗೇ ಕುಳಿತು ಊಟ ಮಾಡುವುದೇ ಇಲ್ಲ. ಹೀಗಾದರೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರುವುದು ಹೇಗೆ? ಅವರ ನಡುವೆ ಸಂವಹನ ಏರ್ಪಡುವುದು ಹೇಗೆ? ಆದರೂ ಎಲ್ಲರೂ ಒಟ್ಟಾಗಿ ಟಿವಿ ನೋಡುತ್ತಾರೆ. ಅದರಲ್ಲೂ ಧಾರಾವಾಹಿಗಳನ್ನು ನೋಡುತ್ತಾರೆ. ಇತ್ತೀಚೆಗೆ ಬರುತ್ತಿರುವ ಧಾರಾವಾಹಿಗಳ ಬಗ್ಗೆ ಹೇಳುವುದೇ ಬೇಡ. ಮೋಸ, ವಂಚನೆ, ಕುಹಕ, ಮಾತ್ಸರ್ಯಗಳಿಂದಲೇ ಧಾರಾವಾಹಿಗಳ ಸಂಚಿಕೆಗಳು ತುಂಬಿರುತ್ತವೆ. ಉತ್ತಮ ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಧಾರಾವಾಹಿಗಳು ಅಪರೂಪವಾಗಿಬಿಟ್ಟಿವೆ.

ಅಪ್ಪ, ಅಮ್ಮ ತಮ್ಮ ಮಕ್ಕಳೊಂದಿಗೆ ಆತ್ಮೀಯರಾಗಿದ್ದರೆ ಸಾಕು. ಅವರ ನಡುವಿನ ಸಂವಹನ ಉತ್ತಮವಾಗಿರುತ್ತದೆ. ಮಕ್ಕಳು ಅವರನ್ನು ತಮ್ಮ ಸ್ನೇಹಿತರಂತೆ ಕಾಣಬೇಕು. ಮಕ್ಕಳು ಎಂದಿಗೂ ಅಪ್ಪ, ಅಮ್ಮನೊಡನೆ ಮಾತನಾಡಲು ಹಿಂಜರಿಕೆಪಡಬಾರದು. ಅಪ್ಪ, ಅಮ್ಮ ಇಬ್ಬರಿಂದ ಸಲಹೆಯನ್ನು ಕೇಳಬೇಕು. ಗೊತ್ತಾಗದ ಪ್ರಶ್ನೆಗಳಿಗೆ ಉತ್ತರವನ್ನು ಕೇಳಬೇಕು. ಅಪ್ಪ, ಅಮ್ಮ ಮಕ್ಕಳೊಡನೆ ಅವರಿಗೆ ತಿಳಿದಿರುವ ವಿಷಯಗಳ ಬಗ್ಗೆ ಅಂದರೆ ಟಿವಿಯಲ್ಲಿ ಕಾರ್ಟೂನ್ ಷೋ, ಆಟಪಾಠ, ನೈತಿಕ ವಿಷಯಗಳ ಚರ್ಚೆ ಮಾಡಬೇಕು.

ಹೀಗೆ ಮಾಡಿದಾಗ ಅವರ ಮತ್ತು ಮಕ್ಕಳ ನಡುವೆ ಒಂದು ಬಾಂಧವ್ಯ ಬೆಳೆಯುತ್ತದೆ. ಅವರಿಗೆ ತಮ್ಮ ಮಕ್ಕಳು ಹೇಗೆ ಆಲೋಚಿಸುತ್ತಿದ್ದಾರೆ, ಅವರಿಗೆ ಏನೆಲ್ಲಾ ವಿಷಯಗಳು ಗೊತ್ತಿವೆ ಎಂಬುದು ತಿಳಿಯುತ್ತದೆ. ಮಕ್ಕಳ ಮನಸ್ಸಿನ ಬಗ್ಗೆ ಒಳನೋಟ ದೊರಕುತ್ತದೆ. ಅಪ್ಪ, ಅಮ್ಮ ಇಬ್ಬರಿಗೂ ಮಕ್ಕಳಿಗೂ ಅನೇಕ ವಿಷಯಗಳು ತಿಳಿಯುತ್ತವೆ ಮತ್ತು ಅವರು ಅಪ್ಪ, ಅಮ್ಮ ಇಬ್ಬರನ್ನೇ ತಮ್ಮ ರೋಲ್‍ಮಾಡೆಲ್‍ಗಳನ್ನಾಗಿ ಮಾಡಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಅಪ್ಪ, ಅಮ್ಮ ತಮಗೆ ತಿಳಿದಿರುವ ಜ್ಞಾನವನ್ನು ಮಕ್ಕಳಿಗೆ ತಿಳಿಸಬಹುದು. ಅವರ ಅನುಭವಗಳನ್ನು ಹಂಚಿಕೊಳ್ಳಬಹುದು.

ಅಪ್ಪ, ಅಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿದರೆ ಮತ್ತು ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡರೆ ಮಕ್ಕಳಿಗೆ ಮಾಹಿತಿಯನ್ನು ತಿಳಿದುಕೊಳ್ಳಲು ಹೊರಗಿನ ಮೂಲಗಳ ಅವಶ್ಯಕತೆಯೇ ಇರುವುದಿಲ್ಲ. ಅವರ ಸಮಸ್ಯೆಗಳಿಗೆ ಉತ್ತರವೂ ಸುಲಭವಾಗಿ ಸಿಗುತ್ತದೆ.

ಇಂದು ಸಮಯ ಬಹುಬೇಗ ಬದಲಾಗುತ್ತಿದೆ. ಹಾಗೆಯೇ ಬದುಕಿನ ಮೌಲ್ಯಗಳು ತೀವ್ರಗತಿಯಲ್ಲಿ ಬದಲಾಗುತ್ತಿವೆ. ಮಕ್ಕಳು ಹೆಚ್ಚು ವಿದ್ಯಾವಂತ ಮತ್ತು ಅತ್ಯಾಧುನಿಕ ಸಮಾಜದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಮಾಹಿತಿ ಅಪಾರವಾಗಿ ಸಿಗುತ್ತಿದೆ. ಪತ್ರಿಕೆಗಳು, ಟಿವಿ ಮತ್ತು ಇಂಟರ್‍ನೆಟ್‍ಗಳ ಮೂಲಕ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯುತ್ತಿದ್ದಾರೆ. ಅಪ್ಪ, ಅಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿದರೆ ಮತ್ತು ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡರೆ ಮಕ್ಕಳಿಗೆ ಮಾಹಿತಿಯನ್ನು ತಿಳಿದುಕೊಳ್ಳಲು ಹೊರಗಿನ ಮೂಲಗಳ ಅವಶ್ಯಕತೆಯೇ ಇರುವುದಿಲ್ಲ. ಅವರ ಸಮಸ್ಯೆಗಳಿಗೆ ಉತ್ತರವೂ ಸುಲಭವಾಗಿ ಸಿಗುತ್ತದೆ.

ಕೇವಲ ಮುಕ್ತ ಮತ್ತ ನಿಯಮಿತ ಸಂವಹನದಿಂದ ಮಾತ್ರ ಅಪ್ಪ, ಅಮ್ಮ ತಮ್ಮ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯ. ಮಕ್ಕಳು ಅಪ್ಪ, ಅಮ್ಮ ತಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಅಥವಾ ತಮಗೆ ಸಾಕಷ್ಟು ಗಮನ ನೀಡುತ್ತಿಲ್ಲ ಎಂದು ಅರ್ಥಮಾಡಿಕೊಂಡಾಗ ಮಾತ್ರ ತಮ್ಮ ವಿಷಯಗಳನ್ನು ಹೇಳಿಕೊಳ್ಳಲು ಹೊರಗಿನ ಮೂಲಗಳನ್ನು ಹುಡುಕುತ್ತಾರೆ. ನಿಧಾನವಾಗಿ ಅವರಿಂದ ದೂರಾಗತೊಡಗುತ್ತಾರೆ. ಈ ದೂರ ಹೆಚ್ಚುತ್ತಲೇ ಹೋಗುತ್ತದೆ. ಆಗ ಅಪ್ಪ, ಅಮ್ಮ ಇಬ್ಬರಿಗೂ ಮಕ್ಕಳ ವಿಷಯಗಳು ತಿಳಿಯುವುದೇ ಇಲ್ಲ. ಮಕ್ಕಳು ತಮಗೆ ಬೇಕಾದ ಅವಕಾಶಗಳನ್ನು ಪಡೆದುಕೊಂಡಿರುತ್ತಾರೆ. ಅವರು ಅಪ್ಪ, ಅಮ್ಮ ಇಬ್ಬರನ್ನು ಬಿಟ್ಟು ಬದುಕುವ ಹಂತವನ್ನು ತಲುಪಿರುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಪರಿಸ್ಥಿತಿಯೇ ಇದೆ.

ಅಪ್ಪ, ಅಮ್ಮ ಯಾವಾಗಲೂ ‘ಎಲ್ಲವೂ ನಮಗೆ ಗೊತ್ತಿದೆ’ ಅಥವಾ ಮಕ್ಕಳಿಂದ ಏನಾದರೂ ತಪ್ಪಾದರೆ ‘ನಾವು ಮೊದಲೇ ಹೀಗಾಗುತ್ತದೆ’ ಎಂದು ಹೇಳಿದ್ದೆವಲ್ಲಾ ಎಂದು ಹೇಳಬಾರದು. ಇದರಿಂದ ಮಕ್ಕಳೊಂದಿಗಿನ ಸಂವಹನದಲ್ಲಿ ಕಷ್ಟಗಳು ಎದುರಾಗಬಹುದು.

ಕೆಲವೊಮ್ಮೆ ಅಪ್ಪ, ಅಮ್ಮ ಅವರ ವರ್ತನೆಗಳಿಂದ ಅವರು ಏನನ್ನು ಹೇಳಲು ಬಯಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅವರಿಗೆ ಏನು ಬೇಕು ಎಂಬುದನ್ನು ನಿರ್ಣಯಿಸಬೇಕಾಗುತ್ತದೆ.

ಮಕ್ಕಳ ವಿಷಯಕ್ಕೆ ಬಂದಾಗ ಸಂವಹನ ಎಂಬುದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವುದೇ ಹೆಚ್ಚು. ಮಕ್ಕಳು ಏನನ್ನು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವುದೇ ಅಲ್ಲ, ಅವರ ಅಭಿಪ್ರಾಯ ಅಥವಾ ಮನೋಧರ್ಮಕ್ಕೆ ಇರುವ ನಿಜವಾದ ಕಾರಣಗಳನ್ನು ತಂದೆತಾಯಿಗಳು ಅರ್ಥಮಾಡಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಸಂವಹನ ಅಷ್ಟು ಚೆನ್ನಾಗಿ ಇರುವುದಿಲ್ಲ. ಅವರಿಗೆ ಹಲವಾರು ವಿಷಯಗಳನ್ನು ಅಭಿವ್ಯಕ್ತಿಗೊಳಿಸಲು ಬಾರದು. ಅವರಿಗೆ ನೈಜ ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ. ಹೆಚ್ಚಿನ ಪದಸಂಪತ್ತೂ ಅವರಲ್ಲಿ ಇರುವುದಿಲ್ಲ. ಕೆಲವೊಮ್ಮೆ ಅಪ್ಪ, ಅಮ್ಮ ಅವರ ವರ್ತನೆಗಳಿಂದ ಅವರು ಏನನ್ನು ಹೇಳಲು ಬಯಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅವರಿಗೆ ಏನು ಬೇಕು ಎಂಬುದನ್ನು ನಿರ್ಣಯಿಸಬೇಕಾಗುತ್ತದೆ.

ಮಕ್ಕಳು ಕೆಲಸಗಳನ್ನು ಮಾಡಲು ತಮ್ಮದೇ ಆದ ವಿಧಾನಗಳನ್ನು ಕಂಡುಕೊಂಡಿರುತ್ತಾರೆ. ಅದು ಅವರಿಗೆ ಅರ್ಥವಾಗುತ್ತದೆ. ಆ ವಿಧಾನಗಳಿಂದ ಮಕ್ಕಳು ಕೆಲಸ ಚೆನ್ನಾಗಿ ಮಾಡುತ್ತಿದ್ದರೆ ಅಪ್ಪ, ಅಮ್ಮ ತಮ್ಮ ವಿಧಾನಗಳನ್ನು ಅವರ ಮೇಲೆ ಹೇರಬಾರದು. ತಮ್ಮ ವಿಧಾನಗಳೇ ಸರಿ ಎಂದು ವಾದಿಸಬಾರದು. ಏನಾದರೂ ಸರಿಯಾದ ವಿಧಾನಗಳನ್ನು ಹೇಳಿಕೊಡಬೇಕಾದರೆ ಜಾಣ್ಮೆಯಿಂದ ಅವರ ಮನವೊಲಿಸಿ ಹೇಳಿಕೊಡಬೇಕಾಗುತ್ತದೆ. ಅವರ ಮೇಲೆ ಜೋರು ಮಾಡಬಾರದು ಅಥವಾ ಹೇಳಿದಂತೆಯೇ ಕೇಳಬೇಕು ಎಂದು ಒತ್ತಾಯಿಸಬಾರದು.

ಮಕ್ಕಳನ್ನು ಅರ್ಥಮಾಡಿಕೊಳ್ಳಲು ಅಪ್ಪ, ಅಮ್ಮ ಮೊದಲಿಗೆ ಉತ್ತಮ ಕೇಳುಗರಾಗಬೇಕು. ಮಕ್ಕಳು ಹೇಳುವುದನ್ನು ನಿಧಾನವಾಗಿ ಕೇಳಿಸಿಕೊಂಡು ಅದಕ್ಕೆ ಸ್ಪಂದಿಸಬೇಕು. ಉತ್ತಮ ಕೇಳುವಿಕೆಗೆ ಸಿದ್ಧ ಉದಾಹರಣೆ ಎಂದರೆ ಫ್ಯಾಮಿಲಿ ಡಾಕ್ಟರ್. ಅವರು ರೋಗಿಗಳ ಮಾತುಗಳನ್ನು ಹೇಗೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ. ರೋಗಿಗಳು ಹೇಳುವ ವಿಷಯ ಆರೋಗ್ಯದ್ದೇ ಆಗಿರಬಹುದು ಅಥವಾ ವೈಯಕ್ತಿಕ ವಿಷಯವಾಗಿರಬಹುದು. ಅವರು ಹೇಗೆ ಪೂರ್ಣ ಗಮನವಿಟ್ಟು ಕೇಳಿಸಿಕೊಳ್ಳುತ್ತಾರೆ ನೋಡಿ. ಈ ವಿಷಯಗಳನ್ನು ಹೀಗೆ ಕೇಳಿಸಿಕೊಳ್ಳುವುದರಿಂದ ಡಾಕ್ಟರಿಗೆ ಏನು ಚಿಕಿತ್ಸೆ ನೀಡಬೇಕು ಎಂಬುದು ಅರ್ಥವಾಗುತ್ತದೆ. ಅಷ್ಟೇ ಅಲ್ಲ, ರೋಗಿಗಳು ತನ್ನ ಆಲೋಚನೆಗಳನ್ನು ಹೊರಹಾಕಿ ನಿರಾಳವಾಗುತ್ತಾರೆ.

ಮಕ್ಕಳನ್ನು ಎತ್ತಿ ಮುದ್ದಾಡಲು ಅಥವಾ ಅವರು ಹೇಳುವ ವಿಷಯಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಕಾರ್ಯಭಾರದ ಒತ್ತಡ ಮತ್ತು ಆಧುನಿಕ ಜೀವನಶೈಲಿ ಅವರನ್ನು ಹೈರಾಣಾಗಿಸಿದೆ.

ಕೆಲವೊಮ್ಮೆ ಡಾಕ್ಟರ್ ರೋಗಿಗಳ ವಿಷಯಗಳನ್ನು ಸುಮ್ಮನೇ ಕೇಳಿಸಿಕೊಂಡರೆ ಸಾಕು. ಅದು ಚಿಕಿತ್ಸೆಯ ಪರಿಣಾಮವನ್ನುಂಟುಮಾಡುತ್ತದೆ. ಹಾಗೆಯೇ ಅಪ್ಪ, ಅಮ್ಮ ತಮ್ಮ ಮಕ್ಕಳ ಮಾತುಗಳನ್ನು ಪೂರ್ಣ ಗಮನವಿಟ್ಟು ಕೇಳಿಸಿಕೊಳ್ಳಬೇಕು. ಇದರಿಂದ ಅವರು ಮಕ್ಕಳಿಗೆ ಹತ್ತಿರವಾಗುತ್ತಾರೆ. ಅವರ ಭಾವನೆಗಳು ಚೆನ್ನಾಗಿ ಅರ್ಥವಾಗುತ್ತವೆ ಅವರಿಗೆ ಅಪ್ಪ, ಅಮ್ಮ ತಮ್ಮನ್ನು ಉದಾಸೀನ ಮಾಡುತ್ತಿದ್ದಾರೆ ಎಂದು ಅನ್ನಿಸಿಬಾರದು. ಹಾಗೆ ಅವರನ್ನು ನೋಡಿಕೊಳ್ಳಬೇಕು. ಅವರಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕು.

ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು ಕಷ್ಟವೇನಲ್ಲ, ಸುಲಭ. ಅದನ್ನು ರೂಢಿಮಾಡಿಕೊಳ್ಳಬೇಕಷ್ಟೇ. ಮಕ್ಕಳು ತಪ್ಪು ಮಾಡಿದಾಗಲಷ್ಟೇ ಅಲ್ಲ, ಬೇರೆ ಸಮಯದಲ್ಲೂ ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡು ಅರ್ಥಪೂರ್ಣ ಸಂವಹನ ನಡೆಸಬೇಕು. ಮಕ್ಕಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅವರ ಭಾವನೆಗಳನ್ನು ಗೌರವಿಸಬೇಕು. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯ.

ಉದ್ಯೋಗಸ್ಥ ಪೋಷಕರು

ಮಹಾನಗರಗಳಲ್ಲಿನ ಬದುಕು ಇಂದು ದುಸ್ತರವಾಗುತ್ತಿದೆ. ಪತಿಪತ್ನಿಯರಿಬ್ಬರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಹೀಗಾದಾಗ ಅವರು ಮಕ್ಕಳಿಗೆ ಹೆಚ್ಚು ಸಮಯ ಕೊಡಲು ಆಗುವುದಿಲ್ಲ. ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಿಗೆ ದಣಿದಿರುತ್ತಾರೆ. ಮಕ್ಕಳನ್ನು ಎತ್ತಿ ಮುದ್ದಾಡಲು ಅಥವಾ ಅವರು ಹೇಳುವ ವಿಷಯಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದಿಲ್ಲ. ಕಾರ್ಯಭಾರದ ಒತ್ತಡ ಮತ್ತು ಆಧುನಿಕ ಜೀವನಶೈಲಿ ಅವರನ್ನು ಹೈರಾಣಾಗಿಸಿದೆ. ಇಂದು ಮಹಿಳೆಯರಿಗೂ ಉನ್ನತ ವಿದ್ಯಾಭ್ಯಾಸದ ಅವಕಾಶಗಳು ಹೆಚ್ಚಿವೆ. ಅವರಿಗೂ ಉದ್ಯೋಗದಲ್ಲಿ ಮುಂದುವರೆಯುವ ಆಸೆಆಕಾಂಕ್ಷೆಗಳು ಹೆಚ್ಚಾಗಿವೆ. ಅವರು ತಮ್ಮದೇ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಮಕ್ಕಳಿಗೆ ಹೆಚ್ಚು ಸಮಯ ನೀಡುವುದಿಲ್ಲ. ಪೋಷಕರಿಬ್ಬರಿಗೂ ಅವರರವರ ವಿಷಯಗಳೇ ಮುಖ್ಯವಾಗಿ ಮಕ್ಕಳ ಹೆಚ್ಚಿನ ಜವಾಬ್ದಾರಿ ಎನಿಸತೊಡಗುತ್ತದೆ.

ಆಫೀಸಲ್ಲಿ ಕೆಲಸ, ಮನೆಯಲ್ಲೂ ಕೆಲಸ, ಜೊತೆಗೆ ಮಕ್ಕಳು- ಇದನ್ನೆಲ್ಲಾ ನಿಭಾಯಿಸುವುದು ಅವರಿಗೆ ದೊಡ್ಡ ಸವಾಲಾಗಿದೆ. ಹಾಗಂತ ಅವರು ಮಕ್ಕಳನ್ನು ಉಪೇಕ್ಷೆ ಮಾಡಲಾಗದು. ಏನೇ ವಿಷಯಗಳಿದ್ದರೂ ಅವರು ಮಕ್ಕಳಿಗೆ ಸಮಯ ಕೊಡಬೇಕು. ಅವರೊಂದಿಗೆ ಕಾಲ ಕಳೆಯಬೇಕು. ಆಟವಾಡಬೇಕು. ಅವರ ವಿದ್ಯಾಭ್ಯಾಸಕ್ಕೆ ಗಮನ ನೀಡಬೇಕು. ಅವರು ಹೇಗೆ ಓದುತ್ತಿದ್ದಾರೆ ಎಂದು ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು. ಒಮ್ಮೊಮ್ಮೆ ಅಪ್ಪ, ಅಮ್ಮ ಮಕ್ಕಳಿಗೆ ಸಾಕಷ್ಟು ಆಟದ ಸಾಮಾನುಗಳನ್ನು ತಂದುಕೊಟ್ಟು ಆಟವಾಡಿಕೊಳ್ಳಲು ಹೇಳುತ್ತಾರೆ. ಜೊತೆಗೆ ಅವರು ಕೇಳಿದ್ದೆಲ್ಲವನ್ನೂ ಕೊಡಿಸುತ್ತಾರೆ. ಹೀಗೆ ಮಾಡಿದರೆ ಮಕ್ಕಳಿಗೆ ಬೇಸರ ಮೂಡುವುದಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ಇವ್ಯಾವುದೂ ಅಪ್ಪ, ಅಮ್ಮ ಮಕ್ಕಳೊಡನೆ ಕಳೆಯುವ ಸಮಯಕ್ಕೆ, ಅವರ ಪ್ರೀತಿಗೆ ಸಮವಾಗುವುದಿಲ್ಲ ಎಂಬುದನ್ನು ಅರಿಯಬೇಕು. ಅಟಿಕೆಗಳು ಅಪ್ಪ, ಅಮ್ಮನ ಸ್ಥಾನವನ್ನೆಂದಿಗೂ ಗಳಿಸುವುದಿಲ್ಲ.

ಕಾರ್ಟೂನ್, ಗೇಮ್ಸ್‍ಗಳಿಗಿಂತ ಉತ್ತಮವಾದ ಕಾರ್ಯಕ್ರಮಗಳನ್ನು ತೋರಿಸಬೇಕು. ಮಾರುಕಟ್ಟೆಯಲ್ಲಿ ಮಕ್ಕಳಿಗೆಂದೇ ಸಿದ್ಧಪಡಿಸಲಾದ ಅನೇಕ ಉತ್ತಮ ಸಿಡಿಗಳು ದೊರಕುತ್ತವೆ. ಅವುಗಳನ್ನು ತಂದು ತೋರಿಸಬಹುದು. ರೈಮ್ಸ್‍ಗಳನ್ನು ಕಲಿಸಬಹುದು. ಆಸಕ್ತಿ ಕೆರಳಿಸುವ ಕಥೆಗಳನ್ನು ಹೇಳಿ ಅವರ ಮನಸ್ಸನ್ನು ರಂಜಿಸಬಹುದು.

ಅಪ್ಪ, ಅಮ್ಮ ಗಮನ ಕೊಡದೇ ಹೋದಾಗ ಮಕ್ಕಳು ಕೆಟ್ಟ ಸಹವಾಸಕ್ಕೆ ಬೀಳುವ ಸಂಭವವೇ ಹೆಚ್ಚು. ಆದ್ದರಿಂದ ಅವರು ಮಕ್ಕಳು ಯಾರೊಂದಿಗೆ ಬೆರೆಯುತ್ತಿದ್ದಾರೆ ಎಂಬುದರ ಮೇಲೆ ಕಣ್ಣಿಡಬೇಕು. ಅವರಿಗೆ ಬೆಂಬಲ ಮತ್ತು ಮಾರ್ಗದರ್ಶನ ಮಾಡಬೇಕು. ಇದು ಮೊದಲೇ ಟಿವಿ ಮತ್ತು ಕಂಪ್ಯೂಟರ್‍ಗಳ ಕಾಲ. ಅವರು ಅವುಗಳಲ್ಲೇ ಮುಳುಗುತ್ತಾರೆ. ಸದಾ ಕಾರ್ಟೂನ್ ಮತ್ತು ಗೇಮ್ಸ್‍ಗಳಲ್ಲಿ ಮುಳುಗದಂತೆ ನೋಡಿಕೊಳ್ಳಬೇಕು. ಅವರೊಂದಿಗೆ ಮಾತನಾಡಿ ಅವರ ಬೇಸರ ನೀಗಬೇಕು. ಅವರಿಗೆ ಕಾರ್ಟೂನ್, ಗೇಮ್ಸ್‍ಗಳಿಗಿಂತ ಉತ್ತಮವಾದ ಕಾರ್ಯಕ್ರಮಗಳನ್ನು ತೋರಿಸಬೇಕು. ಮಾರುಕಟ್ಟೆಯಲ್ಲಿ ಮಕ್ಕಳಿಗೆಂದೇ ಸಿದ್ಧಪಡಿಸಲಾದ ಅನೇಕ ಉತ್ತಮ ಸಿಡಿಗಳು ದೊರಕುತ್ತವೆ. ಅವುಗಳನ್ನು ತಂದು ತೋರಿಸಬಹುದು. ರೈಮ್ಸ್‍ಗಳನ್ನು ಕಲಿಸಬಹುದು. ಆಸಕ್ತಿ ಕೆರಳಿಸುವ ಕಥೆಗಳನ್ನು ಹೇಳಿ ಅವರ ಮನಸ್ಸನ್ನು ರಂಜಿಸಬಹುದು.

ಸಮಯದ ಅಭಾವವಿದ್ದರೂ ಉದ್ಯೋಗಸ್ಥ ಅಪ್ಪ, ಅಮ್ಮ ಮಕ್ಕಳೊಂದಿಗೆ ಪ್ರಯತ್ನಪೂರ್ವಕವಾಗಿ ಆದಷ್ಟು ಹೊತ್ತನ್ನು ಕಳೆಯಬೇಕು. ಆಟವಾಡಿ, ಕಥೆ ಹೇಳಿ ಅವರನ್ನು ಸಂತೋಷಪಡಿಸಬೇಕು. ಅವರಿಗೆ ಸಾಕಷ್ಟು ಗಮನ ನೀಡಬೇಕು. ಅವರಿಗೆ ಪಾಠ ಹೇಳಿಕೊಡಬೇಕು ಮತ್ತು ಹೋಂವರ್ಕ್ ಮಾಡಿಸಬೇಕು. ಇಂದು ಅನೇಕ ಕಛೇರಿಗಳಲ್ಲಿ ಮಹಿಳೆಯರಿಗೆ ಮನೆಯಿಂದ ಕೆಲಸ ಮಾಡುವ ಅವಕಾಶವೂ ಇದೆ. ಇದನ್ನು ಉಪಯೋಗಿಸಿಕೊಂಡು ತಾಯಂದಿರು ಮನೆಯಲ್ಲಿ ಕೆಲಸ ಮಾಡಿ ಮಕ್ಕಳನ್ನು ನೋಡಿಕೊಳ್ಳಬಹುದು. ಇದರಿಂದ ಮಕ್ಕಳಿಗೂ ಬೇಸರವಾಗುವುದಿಲ್ಲ ಮತ್ತು ಅಪ್ಪ, ಅಮ್ಮ ತಮ್ಮೊಂದಿಗೆ ಸದಾ ಇದ್ದಾರೆ ಎಂಬ ಭಾವನೆ ಉಂಟಾಗುತ್ತದೆ.

ಅಮ್ಮನಂತೆ ಅಪ್ಪನೂ ಆಗಾಗ ಸಮಯ ಮಾಡಿಕೊಂಡು ಮಕ್ಕಳೊಂದಿಗೆ ಬೆರೆಯಬೇಕು. ಅವರನ್ನು ಪಾರ್ಕಿಗೆ ಅಥವಾ ಪಿಕ್‍ನಿಕ್‍ಗೆ ಕರೆದೊಯ್ಯಬೇಕು. ಮಕ್ಕಳೊಂದಿಗೆ ಊಟಮಾಡಬೇಕು. ರಜಾದಿನಗಳಲ್ಲಿ ಅವರಿಗಿಷ್ಟವಾದ ಚಟುವಟಿಕೆಗಳಲ್ಲಿ ತೊಡಗಿ ತೃಪ್ತಿಪಡಿಸಬೇಕು. ಸ್ನೇಹಿತರಂತೆ ಅವರೊಡನೆ ಇರಬೇಕು. ಇದರಿಂದ ಅವರಿಬ್ಬರ ನಡುವೆ ಉತ್ತಮ ಮತ್ತು ಸದೃಢ ಏರ್ಪಡುತ್ತದೆ.

ಮಾಧ್ಯಮಗಳ ಪ್ರಭಾವ

ಇಂದು ಪ್ರತಿಯೊಬ್ಬರಿಗೂ ಮುದ್ರಣ ಮಾಧ್ಯಮ, ಟಿವಿ ಮತ್ತು ಇಂಟರ್ನೆಟ್‍ಗಳ ಮೂಲಕ ಮಾಹಿತಿ ಅಪಾರವಾಗಿ ದೊರಕುತ್ತಿದೆ. ಇದರ ಪರಿಣಾಮವಾಗಿ ಎಲ್ಲರೂ ಮಾಧ್ಯಮಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಖ್ಯಾತನಾಮರು ಅದರಲ್ಲೂ ಚಿತ್ರನಟ-ನಟಿಯರು ಮತ್ತು ಕ್ರಿಕೆಟ್ ಆಟಗಾರರು ಹದಿಹರೆಯದ ಹುಡುಗರ ಮತ್ತು ಹುಡುಗಿಯರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್, ಐಶ್ವರ್ಯಾ ರೈ, ಶಾರುಖ್ ಖಾನ್, ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ಧೋನಿ, ರಣಬೀರ್ ಕಪೂರ್, ದೀಪಿಕಾ ಪಡುಕೋಣೆ ಮತ್ತಿತ್ತರ ಖ್ಯಾತನಾಮರು ಅನೇಕ ಗ್ರಾಹಕವಸ್ತುಗಳ ಕಂಪನಿಗಳಿಗೆ ರೂಪದರ್ಶಿಗಳಾಗಿರುವುದು ಯುವಜನತೆ ಆ ವಸ್ತುಗಳನ್ನೇ ಬಳಸುವಂತಾಗಿದೆ. ಹದಿಹರೆಯದವರಿಗೆ ಅವರೇ ಇಂದಿನ ಆದರ್ಶಗಳು. ಅವರನ್ನೇ ಅನೇಕ ವಿಷಯಗಳಲ್ಲಿ ಸಾವಿರಾರು ಯುವಕಯುವತಿಯರು ಅನುಸರಿಸುತ್ತಿದ್ದಾರೆ. ಅವರಂತೆಯೇ ಉಡುಗೆ ತೊಡುತ್ತಾರೆ, ಮಾತನಾಡುತ್ತಾರೆ, ನಡೆಯುತ್ತಾರೆ, ಹೇರ್‍ಸ್ಟೈಲ್ ಮಾಡುತ್ತಾರೆ ಮತ್ತು ಅವರು ಪ್ರಚಾರ ಮಾಡುವ ಮೊಬೈಲ್ ಫೋನ್, ಬೈಕ್, ವಾಚ್, ಚಪ್ಪಲಿಗಳನ್ನು ಬಳಸುತ್ತಾರೆ.

ಹದಿಹರೆಯದವರು ಇಂತಹ ವಿಷಯಗಳಿಂದ ಬಹುಬೇಗ ಪ್ರಭಾವಿತರಾಗುತ್ತಾರೆ. ಟಿವಿಯಲ್ಲಿ ಬರುವ ನೂರಾರು ಜಾಹೀರಾತುಗಳ ಗ್ರಾಹಕರು ಅವರೇ. ಅವುಗಳ ಸಂದೇಶಗಳನ್ನು ಬೇಗ ಗ್ರಹಿಸುತ್ತಾರೆ. ದೈಹಿಕವಾಗಿ ತಾವೂ ಜಾಹೀರಾತುಗಳಲ್ಲಿ ಬರುವ ಚಿತ್ರನಟ-ನಟಿಯರಂತೆ ಮತ್ತು ರೂಪದರ್ಶಿಗಳಂತೆ ಕಾಣಬೇಕು. ಜಾಹೀರಾತುಗಳಲ್ಲಿ ಪುರುಷರನ್ನು ದೈಹಿಕವಾಗಿ ಸದೃಢವಾಗಿ ತೋರಿಸುತ್ತಾರೆ ಮತ್ತು ಸ್ತ್ರೀಯರನ್ನು ಸುಂದರವಾಗಿ, ತೆಳ್ಳಗೆ ಮತ್ತು ಬೆಳ್ಳಗೆ ಇರುವಂತೆ ತೋರಿಸುತ್ತಾರೆ. ಅವರನ್ನು ನೋಡಿದ ಮಕ್ಕಳು ತಾವು ಅವರಂತೆ ಸುಂದರಾಂಗರಾಗಬೇಕು ಎಂದು ಬಯಸುತ್ತಾರೆ. ಹೀಗೆ ಅವರ ಪ್ರಭಾವಕ್ಕೆ ನಿಧಾನವಾಗಿ ಒಳಗಾಗುತ್ತಾರೆ. ಮಕ್ಕಳು ಅವರಂತಿರಲು ಆಹಾರ ಪಥ್ಯ, ಉಪವಾಸ, ಕಸರತ್ತು, ಸ್ಟೀರಾಯ್ಡ್‍ಗಳನ್ನು ತೆಗೆದುಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಅವರೇ ಅವರ ರೋಲ್‍ಮಾಡೆಲ್‍ಗಳಾಗಿರುತ್ತಾರೆ.

ಹದಿಹರೆಯಕ್ಕೆ ಬಂದ ಮಕ್ಕಳು ಸಿನೆಮಾ ತಾರೆಗಳನ್ನೇ ಹೆಚ್ಚು ಆರಾಧಿಸತೊಡಗಿದಾಗ ಅಪ್ಪ, ಅಮ್ಮ ಅವರಿಗೆ ಚಲನಚಿತ್ರಗಳು ಮತ್ತು ನಿಜಜೀವನದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಅರ್ಥಮಾಡಿಸಬೇಕು.

ಹರೆಯಕ್ಕೆ ಬಂದ ಪ್ರತಿಯೊಬ್ಬರಿಗೂ ತಾವು ಸಿನೆಮಾ ತಾರೆಗಳಂತೆ ಇತರರಿಗೆ ಕಾಣಬೇಕು ಎನ್ನುವ ಹಂಬಲ. ಆದರೆ ಟಿವಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಇರುವ ಎಲ್ಲಾ ತಾರೆಗಳಂತೆ ಹದಿಹರೆಯದವರು ಇರುವುದು ಅಸಾಧ್ಯ. ಅವರಂತೆ ಸ್ಟೈಲ್ ಮಾಡಬಹುದಷ್ಟೇ. ಹದಿಹರೆಯಕ್ಕೆ ಬಂದ ಮಕ್ಕಳು ಸಿನೆಮಾ ತಾರೆಗಳನ್ನೇ ಹೆಚ್ಚು ಆರಾಧಿಸತೊಡಗಿದಾಗ ಅಪ್ಪ, ಅಮ್ಮ ಅವರಿಗೆ ಚಲನಚಿತ್ರಗಳು ಮತ್ತು ನಿಜಜೀವನದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಅರ್ಥಮಾಡಿಸಬೇಕು. ಚಲನಚಿತ್ರಗಳು ಮತ್ತು ಟಿವಿಯಲ್ಲಿ ಕಂಡುಬರುವುದು ನಿಜವಲ್ಲ ಎಂದು ಮನದಟ್ಟು ಮಾಡಿಸಬೇಕು. ತೆರೆಯ ಮೇಲೆ ಕಾಣುವುದೆಲ್ಲಾ ಗ್ಲಾಮರ್ ಮಾತ್ರ, ಅದೇ ಸತ್ಯವಲ್ಲ ಎಂದು ಹೇಳಬೇಕು.

ತಮ್ಮ ಮಕ್ಕಳು ಯಾರಿಗೂ ಕಡಿಮೆಯಿಲ್ಲ. ಪ್ರತಿಯೊಬ್ಬರಲ್ಲೂ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಚಿತ್ರನಟ, ನಟಿಯರು ಮತ್ತು ರೂಪದರ್ಶಿಗಳಿಗೆ ಅಭಿನಯ, ರೂಪ ವಿಶೇಷತೆ ಹಾಗೆಯೇ ಪ್ರತಿ ಹುಡುಗ ಮತ್ತು ಹುಡುಗಿಯರಲ್ಲಿಯೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಅದು ಕೇವಲ ದೈಹಿಕ ಸೌಷ್ಟವ ಮತ್ತು ಸುಂದರ ರೂಪವೇ ಆಗಿರಬೇಕಿಲ್ಲ ಎಂದು ತಿಳಿಹೇಳಬೇಕು. ಎಲ್ಲರೂ ಸ್ವಾಭಾವಿಕವಾಗಿರಬೇಕು, ಹಾಗೆಲ್ಲಾ ಇತರರನ್ನು ಅನುಕರಣೆ ಮಾಡಬಾರದು. ಪ್ರತಿಯೊಬ್ಬರು ತಮ್ಮಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಅರ್ಥಮಾಡಿಸಬೇಕು. ಹೀಗೆ ಅವರ ಮನವೊಲಿಸಿ ಚಲನಚಿತ್ರ ತಾರೆಯರ ಪ್ರಭಾವ ಅವರ ಮೇಲೆ ಹೆಚ್ಚಾಗದಂತೆ ಜಾಗ್ರತೆಯನ್ನು ವಹಿಸಬೇಕು.

ಇಂದು ಟಿವಿ ಮಾಧ್ಯಮ ಅಗಾಧವಾಗಿ ಬೆಳೆದಿವೆ. ನೂರಾರು ಚಾನೆಲ್‍ಗಳು ಮನೆಯೊಳಗಿನ ಟಿವಿಯಲ್ಲಿಯೇ 24 ಗಂಟೆಗಳು ಪ್ರಸಾರವಾಗುತ್ತಿವೆ. ಅವುಗಳಿಂದ ಮಕ್ಕಳು ಪ್ರಭಾವಿತರಾಗುವುದು ಸಹಜ. ಟಿವಿ ನೋಡುವುದರಿಂದ ಉಂಟಾಗುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಅವರಿಗೆ ವಿವರಿಸಿ ಹೇಳಬೇಕು. ಜೀವನದಲ್ಲಿ ಸುಂದರ ರೂಪ ಮತ್ತು ಲಾವಣ್ಯಕ್ಕಿಂತ ಉತ್ತಮ ಶಿಕ್ಷಣ ಮತ್ತು ನಡತೆ ಮುಖ್ಯ ಎಂದು ಅರ್ಥಮಾಡಿಸಬೇಕು. ಉತ್ತಮ ಮೌಲ್ಯಗಳನ್ನು ಪಾಲಿಸಿ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಹೇಳಬೇಕು.

*ಲೇಖಕಿ ಪ್ರಖ್ಯಾತ ಆಯುರ್ವೇದ ವೈದ್ಯರು, ವೈದ್ಯಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು.

Leave a Reply

Your email address will not be published.