ಮಕ್ಕಳ ಬಹುಮುಖ ಬೆಳವಣಿಗೆ ಯಾರ ಹೊಣೆ?

ತಂತ್ರಜ್ಞಾನ ಅಷ್ಟು ಉಪಯುಕ್ತವಾಗಿದ್ದರೆ ಕಂಪ್ಯೂಟರ್ ಕ್ರಾಂತಿಯ ರೂವಾರಿ ಸ್ಟೀವ್ ಜಾಬ್ ಮತ್ತು ಸಿಲಿಕಾನ್ ವ್ಯಾಲಿಯ ಪಾಲಕರು ತಮ್ಮ ಮಕ್ಕಳನ್ನು ‘ಟೆಕ್’ ಇಲ್ಲದ ಶಾಲೆಗೆ ಯಾಕೆ ಕಳುಹಿಸಿದರು? ಅವರ ಮನೆಯಲ್ಲೂ ಟೆಕ್ ಬಳಕೆಯೇ ಇರಲಿಲ್ಲ. ಈ ಮಹಾನೀಯರ ಮಕ್ಕಳಿಗೆ ಯಾವುದು ಕೆಟ್ಟದ್ದೋ ಅದು ನಮ್ಮ ಮಕ್ಕಳಿಗೆ ಒಳ್ಳೆಯದೇ?

ನಮ್ಮ ಮಕ್ಕಳ ಬಹುಮುಖ ಬೆಳವಣಿಗೆಗೆ ಮತ್ತು ಮಾನಸಿಕ ಆರೋಗ್ಯಕ್ಕೆ ಹೊಣೆಗಾರರು ನಾವು ಹೌದೇ ಅಥವಾ ಅಲ್ಲವೇ ಎಂಬ ಪ್ರಶ್ನೆ ನಮ್ಮ ಮುಂದೆ ಒಂದು ಪೆಡಂಭೂತವಾಗಿ ನಿಂತಿದೆ. ಹಿಂದಿನ ಕಾಲದಿಂದಲೂ ಮಕ್ಕಳ ಪಾಲನೆ ಫೋಷಣೆ ಮೊಟ್ಟಮೊದಲು ತಂದೆ ತಾಯಿಯರದ್ದು, ಆಮೇಲೆ ಸಮುದಾಯ ಮತ್ತು ಶಾಲೆಗಳಲ್ಲಿ ಎಂದು ನಾವು ತಿಳಿದಿದ್ದೆವು. ಆದರೆ ವಸ್ತುಗಳ ಅಂತರ್ಜಾಲ (ಐಒಟಿ- ಇಂಟರನೆಟ್ ಆಫ್ ಥಿಂಗ್ಸ್), ಕೃತಕ ಬುದ್ಧಿಮತ್ತೆ (ಎಐ- ಆರ್ಟಿಫಿಸಿಯಲ್ ಇಂಟೆಲಿಜೆನ್ಸ್) ಎಂಬ ದೈತ್ಯಶಕ್ತಿಗಳು ನಮ್ಮನ್ನು ತಿಳಿಯದಂತೆ ನುಂಗುತ್ತಿವೆ.

ಮಕ್ಕಳ ಲಾಲನೆ ಪಾಲನೆಯ ಮುಖ್ಯಾಂಶಗಳು

ಇತ್ತೀಚೆಗಿನ ಕೆಲವು ದಶಕಗಳಲ್ಲಿ ಮನಶಾಸ್ತ್ರಜ್ಞರು ಮಕ್ಕಳ ಬೆಳವಣಿಗೆಯ ಮೇಲೆ ಬಹಳಷ್ಟು ಕೆಲಸ ಮಾಡಿದ್ದಾರೆ. ಮೊದಲಿನ ತಿಳಿವಳಿಕೆ ಪ್ರಕಾರ ಹುಟ್ಟಿದ ಮಗು ಮಣ್ಣಿನ ಮುದ್ದೆಯಂತೆ ಎಂದು ಭಾವಿಸಲಾಗಿತ್ತು. ಬಹಳಷ್ಟು ವಯಸ್ಕರು ಈಗಲೂ ಇದೇ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಈಗ ಮಕ್ಕಳನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡ ನಂತರ ಈ ನಂಬಿಕೆ ಬದಲಾಗಿದೆ. ಮಕ್ಕಳು ಹುಟ್ಟುವಾಗಲೇ ‘ತೊಟ್ಟಿಲ ವಿಜ್ಞಾನಿ’ಗಳು ಎಂದು ಪರಿಗಣಿಸಲಾಗುತ್ತದೆ.

ಹುಟ್ಟಿದ ಮಗು ಬೆಳಕನ್ನು ಕಂಡು ಅದರ ಕಡೆ ತಿರುಗಿ ನೋಡುತ್ತದೆ. ತಾಯಿಯ ಮುಖ ಬೇರೆ, ಮುಖವಾಡ ಬೇರೆ ಎಂದು ತಿಳಿಯುತ್ತದೆ. ತಾಯಿಯ ನಗುವನ್ನು ನೋಡಿ ತಾನೂ ನಗುತ್ತದೆ. ಕೆಲವೇ ವಾರದಲ್ಲಿ ತಾಯಿಗೆ ಮಗುವಿನ ಸಂತೋಷ, ನೋವು, ಹಸಿವಿನ ಅರಿವು ಆಗುತ್ತದೆ. ಇದೇ ರೀತಿ ಸ್ವರ ಮತ್ತು ಶಬ್ದದ ವ್ಯತ್ಯಾಸ ತಿಳಿಯುತ್ತದೆ. ಮಗುವಿನ ಈ ಎಲ್ಲಾ ವರ್ತನೆಗಳು ಅದು ಹೊರಗಿನ ಜಗತ್ತಿನ ಮತ್ತು ಪರಿಸರದ ಅರ್ಥ ತಿಳಿದುಕೊಂಡು ಅದಕ್ಕೆ ಸರಿಯಾಗಿ ಸ್ಪಂದಿಸುವ ಪ್ರಯತ್ನ ಆರಂಭಿಸಿದೆ ಎಂಬುದನ್ನು ಸೂಚಿಸುತ್ತದೆ. ಈ ಸಮಯದ ಬಹುಮುಖ ಬೆಳವಣಿಗೆ- ದೈಹಿಕ, ಬೌದ್ಧಿಕ, , ಭಾವನಾ, ಸಾಮಾಜಿಕ, ನೈತಿಕ ಮತ್ತು ಲೈಂಗಿಕ ಬೆಳವಣಿಗೆ ಜೊತೆಯಲ್ಲಿಯೇ ಸುರುವಾಗುತ್ತವೆ. ಆಯುರ್ವೇದದ ಕುಮಾರಭತ್ಯದಲ್ಲಿ, ಈ ಬೆಳವಣಿಗೆಗಳು ತಾಯಿಯ ಗರ್ಭದಲ್ಲಿ ಇರುವ ಶಿಶುವಿನಲ್ಲೇ ಸುರು ಆಗುತ್ತದೆ; ತಾಯಿ ಮತ್ತು ಮಗು ಒಂದೇ ಜೀವ (Symbiotic) ಎಂದು ಹೇಳಲಾಗುತ್ತದೆ.

ತಾಯಿಯ ಮಾತು, ಮುಖ ನೋಡುವುದು, ಹಾಲು ಕುಡಿಯುವುದು, ಆಟವಾಡುವುದು ಎಲ್ಲವೂ ಬಹಳ ಮುಖ್ಯ. ಕಾಣುವುದು, ಕೇಳುವುದು, ವಾಸನೆ, ಪರಿಮಳ, ಸ್ಪರ್ಶ, ರುಚಿ ನೋಡುವುದು… ಎಲ್ಲಾ ಮಿದುಳಿಗೆ ಅಗತ್ಯ.

ಬಹುಮುಖ ಬೆಳವಣಿಗೆಯ ಎಲ್ಲಾ ಮುಖಗಳಲ್ಲೂ 3 ವರ್ಷಗಳ ತನಕ ಬಹಳ ಬೆಳವಣಿಗೆಗಳು ಸಮನಾಗಿ ನಡೆಯುತ್ತವೆ. ಇದರ ಕಾರಣ ಮಗುವಿನ ಮಿದುಳು. ಹುಟ್ಟಿದಾಗ ಮಗುವಿನ ಮಿದುಳು 400 ಗ್ರಾಂ ಇರುತ್ತದೆ. ಇದು ವಯಸ್ಕರ ಮೆದುಳಿನ 25% ತೂಕ ಮಾತ್ರ; ಆರು ತಿಂಗಳಲ್ಲಿ 50% ಮತ್ತು ಎರಡು ವರ್ಷದಲ್ಲಿ 75% ಬೆಳವಣಿಗೆಯಾಗುತ್ತದೆ. ಈ ಸಮಯದಲ್ಲಿ, ಮಗುವಿಗೆ ತಾಯಿಯ ಸಾಮೀಪ್ಯ ಮತ್ತು ವಾತ್ಸಲ್ಯ ಎರಡೂ ಬಹಳ ಮುಖ್ಯ. ತಾಯಿಯ ಮಾತು, ಮುಖ ನೋಡುವುದು, ಹಾಲು ಕುಡಿಯುವುದು, ಆಟವಾಡುವುದು ಎಲ್ಲವೂ ಬಹಳ ಮುಖ್ಯ. ಕಾಣುವುದು, ಕೇಳುವುದು, ವಾಸನೆ, ಪರಿಮಳ, ಸ್ಪರ್ಶ, ರುಚಿ ನೋಡುವುದು… ಎಲ್ಲಾ ಮಿದುಳಿಗೆ ಅಗತ್ಯ.

ಸ್ವಭಾವ ಸಂಕೇತದ ಐದು ಬೆರಳುಗಳು

1. ವಿಶ್ಲೇಷಣಾ ಸಾಮಥ್ರ್ಯ, ಕಣ್ಣು-ಕೈ ಸಮನ್ವಯ, ತ್ವರಿತ ಪ್ರತಿಕ್ರಿಯೆ.

2. ಸಂವಹನ ಕೌಶಲಗಳು (ಮೌಖಿಕ ಮತ್ತು ಆಂಗಿಕ)

3. ತನ್ನ ಮತ್ತು ಇತರರ ಭಾವನೆಗಳ ಗುರುತಿಸುವಿಕೆ.

4. ಸಾಮಾಜಿಕ ಬಂಧ ಮತ್ತು ಕುಟುಂಬ.

5. ಸ್ವಯಂನಿಯಂತ್ರಣ.

ಇದು ಎಲ್ಲ ಪಾಲಕರಿಗೂ ಅರ್ಥವಾಗಬಲ್ಲ ಸರಳ, ಸಾಂಕೇತಿಕ ಪಾಠ. ಇಲ್ಲಿನ ಐದು ಬೆರಳುಗಳಲ್ಲಿ ಆರೋಗ್ಯವಂತ ಮಕ್ಕಳ ಐದು ಅಪೇಕ್ಷಣೀಯ ಗುಣಗಳನ್ನು ಸಾಂಕೇತಿಕವಾಗಿ ನಿರೂಪಿಸಲಾಗಿದೆ. ಐದೂ ಬೆರಳುಗಳು ವಿಭಿನ್ನ ರೀತಿ-ಅಳತೆಯಲ್ಲಿದ್ದರೂ ಸಮನ್ವಯದ ಮೂಲಕ ಕಾರ್ಯ ನಿರ್ವಹಿಸುತ್ತವೆ. ಯಾವ ಒಂದು ಬೆರಳು ಊನವಾದರೂ ಕ್ಷಮತೆಯಲ್ಲಿ ಕೊರತೆ ನಿಶ್ಚಿತ. (ಕೃಪೆ: ಡಾ.ಆಂಡ್ರೂ ಡೋನ್ ಅವರ ಅನಾಲಾಜಿ ಆಫ್ ಹ್ಯಾಂಡ್)

ಈ ಹಂತದಲ್ಲಿ ಮಗುವಿಗೆ ಮೊಬೈಲಿನ ‘ಪರದೆ ಸಮಯ’ (ಟಿವಿ, ಕಂಪ್ಯೂಟರು, ಮೊಬೈಲು ಮುಂತಾದ ಯಾವುದೇ ಪರದೆ ಮುಂದೆ ಕಳೆಯುವ ಸಮಯವನ್ನು ‘ಸ್ಕ್ರೀನ್ ಟೈಮ್’ ಎಂದು ಕರೆಯಲಾಗುತ್ತದೆ) ಕೊಟ್ಟು, ಊಟ ಮಾಡಿಸಿದರೆ ಏನಾಗುತ್ತದೆ? ಇದರಿಂದ ಮಗುವಿಗೆ ಬರೀ ಕಾಣುವ ಮತ್ತು ಕೇಳುವ ಅವಕಾಶ ಮಾತ್ರ ಸಿಗುತ್ತದೆ. ಅಲ್ಲದೆ ತಾಯಿಯ ಜೊತೆ ಕಳೆಯುವ ಸಮಯ ಕಡಿಮೆಯಾಗುತ್ತದೆ.

ಬೌದ್ಧಿಕ ಬೆಳವಣಿಗೆಗೆ ಪರಿಸರದ ಜೊತೆಗಿನ ಒಡನಾಟ ಮುಖ್ಯ. ಇದು ಸಾಧ್ಯವಾಗದಿದ್ದರೆ ಬುದ್ಧಿಶಕ್ತಿ, ಗಮನಶಕ್ತಿ, ಜ್ಞಾಪಕಶಕ್ತಿ ಎಲ್ಲವೂ ಕುಂಠಿತವಾಗಿ, ಸೃಜನಶೀಲತೆ ಹೊರಬರಲು ದಾರಿ ಇಲ್ಲದಾಗುತ್ತದೆ. ಭಾಷೆಗಳನ್ನು ಕಲಿಯುವ ಸಾಮಥ್ರ್ಯ ಗಮನಿಸುವುದಾದರೆ, ಮಕ್ಕಳು ಮೂರು ವರ್ಷದೊಳಗೆ 3-4 ಭಾಷೆಗಳನ್ನು ಕಲಿಯುತ್ತಾರೆ. ಏಕೆಂದರೆ ಮಕ್ಕಳ ಮೆದುಳಲ್ಲಿ ಭಾಷೆ ಕಲಿಯುವ ಶಕ್ತಿ ಹುಟ್ಟುವ ಮೊದಲೇ ಇರುತ್ತದೆ. ಪರಿಸರದಲ್ಲಿ ಕೇಳಿದ ಭಾಷೆ, ಸಂಗೀತ, ನಡವಳಿಕೆ ಎಲ್ಲವನ್ನೂ ಅವರ ಮೆದುಳುಗಳು ಬಹಳ ಬೇಗ ಕಲಿಯುತ್ತವೆ. ಹೀಗಿರುವಾಗ ನಾವು ಅವರನ್ನು ‘ಪರದೆ ಸಮಯ’ದಲ್ಲಿ ಬಿಟ್ಟುಬಿಟ್ಟರೆ, ಅವರ ಬಹುಮುಖ ಬೆಳವಣಿಗೆ ಹೇಗಾಗುತ್ತದೆ?

ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆ ಮೂಲಕ ಇದು ಸಾಧ್ಯವಾಗುವುದಿಲ್ಲ. ಇಲ್ಲಿ ಅವುಗಳಿಂದ ಬರುವ ನಿಯಮ, ಆಜ್ಞೆಗಳನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಕಲಿಯುವ, ಕಲಿಸುವ ಅವಕಾಶವಿಲ್ಲದೆ ಸೃಜನಶೀಲತೆ ಮರೆಯಾಗುತ್ತದೆ.

ನಾವು ಸಾವಿರಾರು ವರ್ಷಗಳಿಂದ ಮಕ್ಕಳನ್ನು ಹೇಗೆ ಬೆಳೆಸಿದ್ದೇವೆ? ಇದರ ಗುಟ್ಟು ಆಟ. ಮಕ್ಕಳು ಆಟದ ಮೂಲಕವೇ ಎಲ್ಲವನ್ನೂ ಕಲಿಯುತ್ತಾರೆ. ನೀವು ತಿಳಿದಿರುವಂತೆ ಆಟ ಬರೀ ಸಮಯ ಕಳೆಯಲು ಇರುವ ವಿಧಾನವಲ್ಲ. ನಾನು ಪ್ರಸ್ತಾಪಿಸುತ್ತಿರುವುದು ಮಕ್ಕಳ ಕೇಂದ್ರಿತ (child centric) ಆಟ. ಇದು ಅಧ್ಯಾಪಕರು, ದೊಡ್ಡವರು ಹೇಳಿಕೊಡುವ ಆಟವಲ್ಲ; ಮಕ್ಕಳು ತಾವಾಗಿ ಆಯ್ಕೆ ಮಾಡಿಕೊಂಡು ಆಡುವ ಆಟ

ನಮ್ಮ ದೇಶದ ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಅಥವಾ ನಾವು ಚಿಕ್ಕಂದಿನಲ್ಲಿ ಆಡಿದ ಆಟಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ದೈಹಿಕ, ಬೌದ್ಧಿಕ, ಭಾಷೆ , ಭಾವನಾ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಗಳ ಮೂಲವು ಈ ಆಟಗಳಲ್ಲಿ ಇದೆ. ಮಕ್ಕಳ ಕೇಂದ್ರಿತ ನಿಜವಾದ ಆಟಗಳು ಬಹುಮುಖ ಬೆಳವಣಿಗೆಗೆ ಕಾರಣವಾಗುತ್ತವೆ. ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆ ಮೂಲಕ ಇದು ಸಾಧ್ಯವಾಗುವುದಿಲ್ಲ. ಇಲ್ಲಿ ಅವುಗಳಿಂದ ಬರುವ ನಿಯಮ, ಆಜ್ಞೆಗಳನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಕಲಿಯುವ, ಕಲಿಸುವ ಅವಕಾಶವಿಲ್ಲದೆ ಸೃಜನಶೀಲತೆ ಮರೆಯಾಗುತ್ತದೆ.

ಇಲ್ಲಿ ನಿದರ್ಶನಕ್ಕಾಗಿ ಒಂದು ಮಗುವಿನ ಪ್ರಕರಣವನ್ನು ಗಮನಿಸಬಹುದು:

ಚೇತನ್ (ಇದು ಅವನ ನಿಜವಾದ ಹೆಸರಲ್ಲ) ಆರು ವರ್ಷದವನಿದ್ದಾಗ ಅವನ ತಂದೆ ತಾಯಿಯರು ನಮ್ಮ ಮಕ್ಕಳ ಕೇಂದ್ರಕ್ಕೆ ಕರೆದುಕೊಂಡು ಬಂದರು. ಅವನು ಕುಳಿತಲ್ಲಿ ಕುಳಿತಿರದೇ ವಿಪರೀತ ಓಡಾಟ ಮಾಡುತ್ತಿದ್ದಾನೆ, ಗಮನಶಕ್ತಿ ಬಹಳ ಕಡಿಮೆ, ಶಾಲೆಯಲ್ಲೂ ಇದೇ ರೀತಿ ಇದ್ದು ಎಲ್ಲರಿಗೂ ಬಹಳ ತೊಂದರೆ ಕೊಡುತ್ತಿದ್ದಾನೆ… ಇದು ಚೇತನ್ ವರ್ತನೆ ಬಗ್ಗೆ ತಿಳಿದುಬಂದಿದ್ದ ಪೂರ್ವಭಾವಿ ಮಾಹಿತಿ; ಅವನು ದಿನದ ಬಹಳ ಸಮಯ ಟಿವಿ ನೋಡುತ್ತಲೇ ಇರುತ್ತಿದ್ದ ಎಂದೂ ಗೊತ್ತಾಯಿತು.

ಸಂಭಾಷಣೆಯಲ್ಲಿ ಅವನ ಮಾತು ಅಸ್ಪಷ್ಟವಾಗಿತ್ತು. ಅವನ ಮಾತುಗಳು ಬೇರೆ ಮಕ್ಕಳಿಗೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಅವನಿಗೆ ಗೆಳೆಯರೇ ಇರಲಿಲ್ಲ. ವಿಪರೀತ ಕಾರ್ಟೂನುಗಳನ್ನು ನೋಡಿ ಅವನ ಉಚ್ಚಾರವೇ ಅಮೆರಿಕನ್ ಇಂಗ್ಲಿಷ್ ಉಚ್ಚಾರವಾಗಿತ್ತು. ‘ಅವನು ಟಿವಿ ನೋಡುವುದನ್ನು ಪೂರ್ತಿ ನಿಲ್ಲಿಸಿ; ಸಿಟ್ಟು, ಗಲಾಟೆ ಮಾಡಿದರು ಪರವಾಗಿಲ್ಲ. ಅದರ ಬದಲು ಅವನ ಜೊತೆ ಆಟವಾಡಿ. ಅವನನ್ನು ಹೊರಗೆ, ಪಾರ್ಕಿಗೆ ಇತ್ಯಾದಿ ಕರೆದುಕೊಂಡು ಹೋಗಿ’ ಎಂದು ಅವನ ತಂದೆತಾಯಿಯರಿಗೆ ಸಲಹೆ ನೀಡಿದೆವು.

ಪಾಲಕರಿಗೊಂದು ಕಿವಿಮಾತು

ಮಕ್ಕಳ ನಡವಳಿಕೆ ಬಗ್ಗೆ ಗಮನಹರಿಸಲು, ಪರಿಹಾರೋಪಾಯ ಕಂಡುಕೊಳ್ಳಲು ಸಮಯ ಮತ್ತು ಅವಕಾಶ ಎರಡೂ ಇಲ್ಲ ಎಂದು ಕೈಚೆಲ್ಲಬೇಡಿ. ನಮ್ಮ ತಂದೆ ಡಾ.ಶಿವರಾಮ ಕಾರಂತರು ತಮ್ಮ ಸಾವಿರ ಕೆಲಸಗಳ ನಡುವೆಯೂ ನಮಗೆ ಚಿಕ್ಕಂದಿನಲ್ಲಿ ಪ್ರತೀ ರಾತ್ರೆ ಒಂದು ಗಂಟೆ ಕಥೆ ಹೇಳುತ್ತಿದ್ದರು. ನಾವು ಹೇಳಿದಂತೆ ಕಥೆ ಕಟ್ಟುತ್ತಿದ್ದರು, ಚಿತ್ರ ಬರೆದು ಕೊಡುತ್ತಿದ್ದರು, ಆಟಿಕೆಗಳನ್ನು ಮಾಡಿ ತೋರಿಸುತ್ತಿದ್ದರು. ಎಲ್ಲದಕ್ಕೂ ಮುಖ್ಯವಾಗಿ ನಮ್ಮನ್ನು ಮನೆಯಲ್ಲಿ ಆಟ ಆಡಿಕೊಂಡು ಇರಲು ಬಿಟ್ಟಿದ್ದರು. ಅಧ್ಯಾಪಕ ಕೇಂದ್ರಿತ ಶಾಲೆಗಳೆಂದರೆ (ಅಂದರೆ ಎಲ್ಲಾ ಶಾಲೆಗಳು!) ಅವರಿಗೆ ತಿರಸ್ಕಾರ ಮತ್ತು ಕೋಪ. ಮಕ್ಕಳ ಕೇಂದ್ರಿತ ಆಟ ನನಗೆ ಅವರಿಂದ ಬಂದ ಬಳುವಳಿ.

 

ಅವನೊಂದಿಗೆ ತಮ್ಮ ಮಾತೃಭಾಷೆಯಾದ ತಮಿಳು ಅಥವಾ ಕನ್ನಡದಲ್ಲಿ ಮಾತನಾಡಲು ಹೇಳಿದೆವು. ಅವನನ್ನು ಬೇರೆಬೇರೆ ಚಟುವಟಿಕೆಗಳಲ್ಲಿ, ಆಟಗಳಲ್ಲಿ (ಮಣಿ ಫೋಣಿಸುವುದು, ಪಝಲ್ಸ್ ಮಾಡುವುದು ಇತ್ಯಾದಿ) ತೊಡಗಿಸಲು ಸೂಚಿಸಿದೆವು. ಅವನಿಗೆ ಇದೆಲ್ಲವೂ ಬಹಳ ಇಷ್ಟವಾಯಿತು. ಅವನನ್ನು ಐದು ಬಾರಿ ನೋಡಿ, ಸಮಾಲೋಚಿಸಿದ ಮೇಲೆ, ಅವನು ಶಾಲೆಯಲ್ಲಿ ಸ್ನೇಹದಿಂದ ಇರಲು ಸುರುಮಾಡಿದ. ಅವನ ಮಾತು ಬೇರೆಯವರಿಗೂ ಅರ್ಥವಾಗಲು ಸುರುವಾಯಿತು. ಗಮನ ಶಕ್ತಿ ಜಾಸ್ತಿಯಾಯಿತು. ಚಟುವಟಿಕೆಗಳೂ ಕಡಿಮೆಯಾದವು.

ಬಹಳಷ್ಟು ಮಕ್ಕಳಲ್ಲಿ ಇದ್ದ ಹಾಗೇ ಪಾಲಕರಲ್ಲೂ ‘ಪರದೆ ಸಮಯ’ ಜಾಸ್ತಿ ಇರುತ್ತದೆ. ಅದನ್ನು ತಿಳಿದುಕೊಂಡರೆ, ಅವರು ತಮ್ಮ ಮಕ್ಕಳ ತೊಂದರೆಗಳಿಗೆ ತಾವೇ ಕಾರಣ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ‘ನೀವೇ ಹೊಣೆ’ ಎಂದು ಹೇಳುವುದು ಸುಲಭ. ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಅಂತರ್ಜಾಲದಿಂದ ಧನ ಸಂಪತ್ತು ಬೆಳೆಸುವವರ ನೈತಿಕ ಸ್ಥಿತಿಯನ್ನು. ಇವರು ಈ ಚಟವನ್ನು ಯಾಕೆ ಬೆಳೆಸುತ್ತಾರೆ? ಮುಖ್ಯವಾಗಿ ಜಾಹೀರಾತು ಆದಾಯಕ್ಕೋಸ್ಕರ.

ನಾವು ಎಷ್ಟು ವಸ್ತುಗಳನ್ನು ಜಾಹೀರಾತುಗಳನ್ನು ನೋಡಿ ಖರೀದಿಸುತ್ತೇವೆ ಎಂದು ಯೋಚಿಸಿದರೆ ಇದರ ಅಂತರಾಳದಲ್ಲಿ ಏನಿದೆ ಎಂದು ತಿಳಿಯುತ್ತದೆ. ಅಂತರ್ಜಾಲದ ಚಟ ಮಾತ್ರವಲ್ಲದೇ ನಾವು ಜಾಹೀರಾತುಗಳಿಗೂ ಬಲಿಯಾದ ಕುರಿಗಳು. ಅದರಲ್ಲೂ ಮಕ್ಕಳ ಜಾಹೀರಾತುಗಳೂ ಬಹಳ ಇವೆ. ಇದು ತಿಂಡಿಗಳೇ ಇರಬಹುದು, ಆಟಿಕೆಗಳಿರಬಹುದು ಅಥವಾ ದೊಡ್ಡವರನ್ನು ಪುಸಲಾಯಿಸಿ ಪಡೆಯುವ ವಸ್ತುಗಳೇ ಇರಬಹುದು. ಇದರ ಹಿಂದಿನ ಮರ್ಮವನ್ನು ನಾವೂ ತಿಳಿಯಬೇಕು, ನಮ್ಮ ಮಕ್ಕಳಿಗೂ ತಿಳಿಸಬೇಕು.

ತಂತ್ರಜ್ಞಾನ ಅಷ್ಟು ಉಪಯುಕ್ತವಾಗಿದ್ದರೆ ಕಂಪ್ಯೂಟರ್ ಕ್ರಾಂತಿಯ ರೂವಾರಿ ಸ್ಟೀವ್ ಜಾಬ್ ಮತ್ತು ಸಿಲಿಕಾನ್ ವ್ಯಾಲಿಯ ಪಾಲಕರು ತಮ್ಮ ಮಕ್ಕಳನ್ನು ‘ಟೆಕ್’ ಇಲ್ಲದ ಶಾಲೆಗೆ ಯಾಕೆ ಕಳುಹಿಸಿದರು?

ಒಂದು ಉದಾಹರಣೆ, ಚಿಪ್ಸ್ ಮತ್ತು ನೂಡಲ್ಸ್. ‘ಮ್ಯಾಗಿ’ ರಾಗಿಯನ್ನು ಹಿನ್ನೆಲೆಗೆ ದೂಡಿದೆ; ಕೋಲಾ ಹಾಲನ್ನು ಪಕ್ಕಕ್ಕೆ ಸರಿಸಿದೆ. ಹೌದು, ಇದಕ್ಕೆ ದೊಡ್ಡ ಕಂಪನಿಗಳು ಹೊಣೆ. ಆದರೆ ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ. ನಮ್ಮ ಮನೆಯ ಅಡುಗೆಯೇ ರುಚಿ, ಶುಚಿ ಮತ್ತು ಆರೋಗ್ಯಕರ ಎಂಬುದು ನಮ್ಮ ಮಕ್ಕಳಿಗೆ ಯಾವಾಗ ತಿಳಿಯುತ್ತದೆಯೋ ಆವಾಗ ಎಲ್ಲ ಸರಿಹೋಗುತ್ತದೆ. ತಂತ್ರಜ್ಞಾನ ಅಷ್ಟು ಉಪಯುಕ್ತವಾಗಿದ್ದರೆ ಕಂಪ್ಯೂಟರ್ ಕ್ರಾಂತಿಯ ರೂವಾರಿ ಸ್ಟೀವ್ ಜಾಬ್ ಮತ್ತು ಸಿಲಿಕಾನ್ ವ್ಯಾಲಿಯ ಪಾಲಕರು ತಮ್ಮ ಮಕ್ಕಳನ್ನು ‘ಟೆಕ್’ ಇಲ್ಲದ ಶಾಲೆಗೆ ಯಾಕೆ ಕಳುಹಿಸಿದರು? ಅವರ ಮನೆಯಲ್ಲೂ ಟೆಕ್ ಬಳಕೆಯೇ ಇರಲಿಲ್ಲ. ಇದನ್ನು ಗಮನಿಸಿದಾಗ ಒಂದು ಪ್ರಶ್ನೆ ಉದ್ಭವಿಸುತ್ತದೆ; ಈ ಮಹಾನೀಯರ ಮಕ್ಕಳಿಗೆ ಯಾವುದು ಕೆಟ್ಟದ್ದೋ ಅದು ನಮ್ಮ ಮಕ್ಕಳಿಗೆ ಒಳ್ಳೆಯದೇ? ಉತ್ತರ ಸರಳ ಮತ್ತು ಸ್ಪಷ್ಟ: ಇವರಿಗೆ ಧನ ಸಂಪಾದನೆ ಮುಖ್ಯ, ಬೇರೆಯವರ ಮಕ್ಕಳಿಗೆ ಆಗುವ ಹಾನಿ ಲೆಕ್ಕಕ್ಕಿಲ್ಲ!

ಪರದೆ ಸಮಯ ಮತ್ತು ಚಿಕ್ಕ ಮಕ್ಕಳು

ಪರದೆ ಸಮಯದ ಲಕ್ಷಣಗಳು: ತನ್ನಷ್ಟಕ್ಕೆ ತಾನು ಇರುವುದು ಮತ್ತು ಸ್ವಂತ ಚಟುವಟಿಕೆಯಿಲ್ಲದಿರುವುದು. ಮಗುವಿನ ವಯಸ್ಸು ಮತ್ತು ಸ್ವಭಾವದ ಆಧರಿಸಿ ಬೇರೆ ಬೇರೆ ಪರಿಣಾಮಗಳಾಗುತ್ತವೆ. ಅವರಿಗೆ ಏನು ಗೊತ್ತು ಮತ್ತು ಏನು ಅನುಭವ ಇದೆ ಎಂಬುದು ಮುಖ್ಯ. ದೊಡ್ಡವರ ಜೊತೆ ಅವರು ನೋಡಿದ್ದನ್ನು ಚರ್ಚೆ ಮಾಡುವುದಿಲ್ಲ. ಶಾಲೆಯಲ್ಲಿ ಮತ್ತು ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ತಂದೆ, ತಾಯಿ, ಸಹೋದರ ಮತ್ತು ಸ್ನೇಹಿತರ ಜೊತೆ ಹೊಂದಾಣಿಕೆ ಕಡಿಮೆ ಆಗುತ್ತದೆ. ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.

ಇದಕ್ಕೆ ಏನು ಪರಿಹಾರ?: ಹೊರಗಿನ ಪರಿಸರದ ಅನುಭವ, ಮನೆಯ ಒಳಗಿನ ಆಟ, ಹೊರಗಿನ ಆಟ, ಓದುವುದು, ಓದುವುದನ್ನು ಕೇಳುವುದು. ಇವೆಲ್ಲಾ ಸ್ವಲ್ಪ ಬೋರ್ ಅನ್ನಿಸಿದರೂ ಅತ್ಯಂತ ಉಪಯುಕ್ತ. ಇದರಿಂದಾಗಿ ಕಲಿಯುವ ಶಕ್ತಿ, ಸೃಜನಶೀಲತೆ ಮತ್ತು ಕಲ್ಪನಾ ಶಕ್ತಿ ಜಾಸ್ತಿ ಆಗುತ್ತದೆ. ಆದರೆ ಯಾವುದೂ ಮಿತಿ ಮೀರಬಾರದು.

ಮಗುವಿನ 18 ತಿಂಗಳ ಮೊದಲು ‘ಪರದೆ ಸಮಯ’ ಇರಲೇಕೂಡದು. ಆಮೇಲೆ, ದಿನಕ್ಕೆ ಒಂದು ಗಂಟೆ, ಅದೂ ದೊಡ್ಡವರ ಜೊತೆ. ಭಯಾನಕ/ಉಗ್ರ ವಿಷಯ ಇರಬಾರದು. ಮಲಗುವ ಕೋಣೆಯಲ್ಲಿ ಬೇಡವೇಬೇಡ. ಆಮೇಲೂ ಸಮಯ ಜಾಸ್ತಿ ಆದರೆ ದೊಡ್ಡವರಿಗೆ ಮಕ್ಕಳು ಏನು ನೋಡುತ್ತಾರೆ ಎಂಬುದರತ್ತ ಗಮನವಿರಬೇಕು.

ಹದಿಹರೆಯ ಮತ್ತು ಪರದೆ ಸಮಯ

ಹದಿಹರೆಯದ ದುಡುಕುತನಕ್ಕೆ ಕಡಿವಾಣ ಬೇಕು. ಹದಿಹರೆಯದವರಿಗೆ ಜೊತೆಗಾರರ ಅಗತ್ಯ ಜಾಸ್ತಿ. ಆದರೆ ತಂದೆ ತಾಯಿಯರ ವಾತ್ಸಲ್ಯ, ಮಾರ್ಗದರ್ಶನ, ಅಂಕುಶ ಬಹಳ ಮುಖ್ಯ. ಹದಿಹರೆಯದವರ ಸಂಕಷ್ಟಗಳು ಜೊತೆಗಾರರೊಂದಿಗೆ ಜಾಸ್ತಿಯಾರೆ, ಸಹಾಯಕರಾದ ಪಾಲಕರಿಂದ ಕಡಿಮೆಯಾಗುತ್ತವೆ.

ಸಮಾಜಮುಖಿ ನಡವಳಿಕೆ (ProSocial Behaviour): ಅನುಕಂಪ, ನಂಬಿಕೆ, ನೈತಿಕತೆ, ಸಾಮಾಜಿಕ ಜೀವನ ಸಹವಾಸದಲ್ಲಿ ಸುಖವಾಗಿ ಇರುವುದು ಮತ್ತು ಪರೋಪಕಾರಿಯಾಗಿರುವುದು.

ಬೇಡವಾದ ನಡವಳಿಕೆ (Anti Social Behaviour): ಪರದೆಯಲ್ಲಿ ಕಂಡ ಸಿಟ್ಟು, ಭಯಾನಕತೆಯನ್ನು ನಿಜವಾದ ಜೀವನಕ್ಕೆ ತರುವುದು. ಪರದೆಯಲ್ಲಿ ಇವನ್ನು ಕಂಡು ಸಂತೋಷ ಪಡುವುದು. ಪರದೆಯ ಪ್ರಯತ್ನವೇ ನಮಗೆ ಚಟ ಹಿಡಿಸುವುದು ಮತ್ತು ಜಾಹೀರಾತಿನಿಂದ ಧನ ಸಂಪಾದನೆ ಮಾಡುವುದು.

*ಲೇಖಕರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ ಸ್ಟಡೀಸ್ (ನಿಯಾಸ್) ನಲ್ಲಿ ಸಂದರ್ಶಕ ಪ್ರಾಧ್ಯಾಪಕರು; ನಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಾಜಿ ವಿಭಾಗದ ಮುಖ್ಯಸ್ಥರಾಗಿದ್ದರು. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ವಿಷಯದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ. 15ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಡಾ.ಶಿವರಾಮ ಕಾರಂತರ ಮಗಳು.

Leave a Reply

Your email address will not be published.