ಮಗಳನ್ನು ಶಾಲೆ ಬಿಡಿಸಿದರೆ ಹೇಗೆ?

– ಗುರುಪ್ರಸಾದ ಕುರ್ತಕೋಟಿ

ಕಳೆದ ವರ್ಷದಿಂದ ಮಗಳಿಗೆ ಶಾಲೆ ಬಿಡಿಸಿಬಿಡಲೇ ಎಂಬ ಯೋಚನೆ ಬಲವಾಗಿ ಮೂಡತೊಡಗಿದೆ. ಅದಕ್ಕೆ ಕಾರಣಗಳು ಒಂದೇ ಎರಡೇ…?

ಅಮೆರಿಕೆಯ ಶಾಲೆಯಲ್ಲಿ ಮಗಳು ಕಲಿಯುತ್ತಿದ್ದಾಗ ಯಾವಾಗಲೂ ಒಂದು ಆತಂಕವಿರುತ್ತಿತ್ತು. ಅವಳು ಅಲ್ಲಿ ಪಾಠಕ್ಕಿಂತ ಇನ್ನೂ ಏನೇನು ಕಲಿತುಬಿಡುವಳೋ ಅಂತ. ಅಲ್ಲಿನವರು ಬಳಸುವ ಕೆಟ್ಟ ಶಬ್ದಗಳು, ಅವರ ಸ್ವೇಚ್ಛೆ ನೋಡಿದ್ದೇ ಆ ಹೆದರಿಕೆಗೆ ಕಾರಣವಿದ್ದಿರಬಹುದು. ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗ ನಿರಾಳನಾಗಿದ್ದೆ. ಇಲ್ಲಿ ಶಾಲೆ ಶುರುವಾಗಿ ನಿಧಾನವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಮಗಳು ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಳು. ಅಲ್ಲಿ ಪರೀಕ್ಷೆಗಳೇ ಇರಲಿಲ್ಲ, ಇಲ್ಲಿ ವಾರಕ್ಕೊಂದು! ಅಲ್ಲಿ ಸಮವಸ್ತ್ರ ಇರಲಿಲ್ಲ… ಹೀಗೆ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಅವಳಿಗೆ.

 

ಎರಡು ತಿಂಗಳಲ್ಲಿ ಸುಮಾರು ಹೊಂದಿಕೊಂಡಿದ್ದಳು. ಆ ದರೆ ಮುಂದೊಂದು ದಿನ ಶಾಲೆ ಮುಗಿಸಿ ಮನೆಗೆ ಬಂದವಳು ಕೇಳಿದ ಪ್ರಶ್ನೆಗೆ ತತ್ತರಿಸಿದ್ದೆ. ಯಾವ ಶಬ್ದವನ್ನು ಅಮೆರಿಕೆಯಲ್ಲಿ ಕಲಿತಾಳು ಎಂಬ ಭಯದಿಂದ ಅವಳನ್ನು ಇಲ್ಲಿಗೆ ಕರೆತಂದಿ ದ್ದೆನೊ ಅದೇ ಶಬ್ದದ ಅರ್ಥ ಏನು ಅಂತ ಅವಳು ಕೇಳಿದ್ದಳು! ಶಾಲೆಯಲ್ಲಿ ಸಹಪಾಠಿಗಳು ಆ ಶಬ್ದ ಪ್ರಯೋಗ ಮಾಡಿದ್ದರಂತೆ! ಅಮೆರಿಕದಿಂದ ಏನೇ ಬಂದರು ಅದನ್ನು ಆದ ಷ್ಟು ಬೇಗ ಅಳವಡಿಸಿಕೊಳ್ಳುವುದರಲ್ಲಿ ನಾವು ನಿಸ್ಸೀಮರಲ್ಲವೇ? ಅದಕ್ಕೆ ಮಕ್ಕಳೂ ಹೊರತಲ್ಲ. ಬೆಂಕಿಯಿಂದ ಬಾಣಲೆಗೆ ಎಂಬ ಸ್ಥಿತಿ ನನ್ನದಾಗ.

ಇದೊಂದೇ ಕಾರಣವಲ್ಲ ನಾನು ಶಾಲೆ ಬಿಡಿಸಬೇಕೆನ್ನಲು. ಅಲ್ಲಿ ಮತ್ತೇನು ಕಲಿತಾಳು ಎಂಬ ಕುತೂಹಲದಿಂದ ಗಮನಿಸುತ್ತಲೇ ಇದ್ದೆ. ನಗೆಗೀಡು ಮಾಡುವ ಇನ್ನೊಂದು ಸಂಗತಿಯೆಂದರೆ ಸೈನ್ಸ್ ಎಗ್ಸಿಬಿಷನ್ ಎಂಬ ಪ್ರಹಸನ. ಶಾಲೆಯವರು ಮಾಡಲೇಬೇಕು ಅಂತ ಮಾಡುವ ಕೆಲವು ಅನಿಷ್ಟ ಪದ್ಧತಿಗಳಲ್ಲಿ ಇದು ತುಂಬಾ ಮುಖ್ಯವಾದದ್ದು. ಅಲ್ಲಿ ಮಕ್ಕಳಿಗಿಂತ ಅವರ ತಂದೆತಾಯಿಗೆ ಕಲಿಯಲು ತುಂಬಾ ಅವಕಾಶ. ಯಾಕಂದರೆ ಅವರೇ ಅಲ್ಲವೇ ಪ್ರಾಜೆಕ್ಟ್ ಮೇಲೆ ಕೆಲಸ ಮಾಡೋರು? ಒಂದು ಸಲ ಶಾಲೆಯಲ್ಲಿ ಈ ಪ್ರಹಸನ ಇದೆ ಅಂತಾದಾಗ ನಾನು ಮಗಳಿಗೆ ಹೇಳಿದೆ. ನಿನಗೆ ಏನು ತಲೆಯಲ್ಲಿ ಬರುತ್ತದೋ ಆ ಪ್ರಯೋಗ ಮಾಡು ಅಂತ. ಅವಳು ಒಂದು ತುಂಬಾ ಸರಳ ಪ್ರಯೋಗವನ್ನು ತಾನೇ ಆರಿಸಿಕೊಂಡಳು, ಅಲ್ಲದೆ ತಾನೇ ತಯಾರು ಮಾಡಿದಳು ಕೂಡ. ಆದರೆ ಆ ಪ್ರಯೋಗವನ್ನು ಶಾಲೆಯವರು ವಿಜ್ಞಾನ ಪ್ರದರ್ಶನಕ್ಕೆ ಆರಿಸಲಿಲ್ಲ. ಕಾರಣ ಅದು ತುಂಬಾ ಸರಳ ಇತ್ತಂತೆ! ಇದರಿಂದ, ‘ಸ್ವಂತವಾಗಿ ಏನೂ ಯೋಚಿಸಬಾರದು. ಎಲ್ಲವನ್ನೂ ಎರವಲು ಪಡೀಬೇಕು, ಇಲ್ಲವೇ ಪೋಷಕರ ಬಳಿ ಕೇಳಬೇಕು.’ ಅಂತ ಅವಳಿಗೆ ಅನಿಸಿರಬಹುದಲ್ಲವೇ?.

ನಾನು ದ್ವೇಷಿಸುವ ಇನ್ನೊಂದು ವಿಷಯವೆಂದರೆ ಹೋಂವರ್ಕ್ ಎಂಬ ಮಾರಿ. ಶಾಲೆಯಲ್ಲಿ ಕಲಿಸಿದ್ದನ್ನು ಮತ್ತೆ ಮನೆಯಲ್ಲಿ ಮಾಡಿಸುವ ಅಗತ್ಯ ಏನಿದೆ? ಎಂಬುದು ನನಗೆ ಯಾವಾಗಲೂ ಕಾಡುವ ಪ್ರಶ್ನೆ. ಹೋಂವರ್ಕ್ ಮಾಡಿಸಲು ಅಂತ ಮನೆಯಲ್ಲಿ ಮಕ್ಕಳ ಜೊತೆ ಕುಳಿತುಕೊಂಡು, ಮಹತ್ತರ ಸಾಮಾನ್ಯ ಅಪವರ್ತನ (ಅದೂ ಇಂಗ್ಲಿಷಿನಲ್ಲಿ ಇದ್ದದ್ದನ್ನ ಕನ್ನಡೀಕರಿಸಿ…) ಅಂದರೆ ಏನು ಅಂತ ಗೂಗಲ್ ನಲ್ಲಿ ಹುಡುಕಿ ಹಿಂದೆ ಯಾವಾಗಲೋ ಒಂದು ಸಲ ಓದಿದ್ದೆನಲ್ಲ ಅಂತ ತಲೆ ಕೆರೆದುಕೊಂಡು, ಅವರಿಗೆ ನಾವೇ ಹೇಳಿಕೊಡೋದಾದ್ರೆ ಅವರನ್ನು ಶಾಲೆಗೆ ಕಳಿಸಿ ಪ್ರಯೋಜನ ಏನು?

ಮತ್ತೊಂದು ಭಯಾನಕ ಸಂಗತಿ ಎಂದರೆ ಶಿಕ್ಷಕರು ಅವರಿಗರಿ ವಿಲ್ಲದಂತೆ ಮಕ್ಕಳ ಮನಸ್ಸಿಗೆ ನಾಟುವಂತೆ ನೀಡುವ ಸಂದೇಶಗಳು. ಇವಳ ತರಗತಿಯಲ್ಲಿ ಯಾವಾಗಲೂ ಒಂದೇ ಹುಡುಗಿ ಲೀಡರ್ ಆಗ್ತಿದ್ಲು. ಮಗಳು ತನಗೆ ಅವಕಾಶವೇ ಸಿಗುವುದಿಲ್ಲ ಅಂತ ಪುಕಾರು ಮಾಡಿದಳು. ನನಗೂ ಹೌದೆನ್ನಿಸಿ ಅವರ ಮಿಸ್ ಗೆ ಕೇಳಿದರೆ ಅವರು ಕೊಟ್ಟ ಉತ್ತರ ನನ್ನನ್ನು ತತ್ತರಿಸಿತ್ತು. ಆ ಮಿಸ್ಸಮ್ಮ ಹೇಳಿದರು, ‘ಅಯ್ಯೋ ಸರ್ ಇಲ್ಲಿರೋ ಪುಂಡರನ್ನು ಕಂಟ್ರೋಲ್ ಮಾಡೋಕೆ ಸ್ವಲ್ಪ ದಪ್ಪಕ್ಕೆ ಎತ್ತರ ಇರೋವರೆ ಬೇಕು, ಇಲ್ಲಾಂದ್ರೆ ಕಷ್ಟ!’. ಅಂದರೆ ತಾನು ದಪ್ಪಗೆ ಎತ್ತರಕ್ಕೆ ಇಲ್ಲ. ಹಾಗಾಗಿ ಒಬ್ಬ ಲೀಡರ್ ಆಗಲು ಸಾಧ್ಯವಿಲ್ಲ ಅನ್ನುವ ವಿಷಯವನ್ನು ಅವಳ ಮನಸ್ಸಿನಲ್ಲಿ ಈ ರೀತಿ ಬೇರೂರಿಸಿದ್ದು ತಪ್ಪಲ್ಲವೇ? ಇನ್ನೂ ಒಂದು ಸಲ ಒಬ್ಬ ಪುಂಡ ತಪ್ಪು ಮಾಡಿದ್ದಕ್ಕೆ ಎಲ್ಲರನ್ನೂ ಎದ್ದು ನಿಲ್ಲಿಸಿ ಘೋರ ಶಿಕ್ಷೆ ಕೊಟ್ಟರಂತೆ. ನಾನು ತಪ್ಪು ಮಾಡಿಲ್ಲ ನನಗ್ಯಾಕೆ ಶಿಕ್ಷೆ ಅಂತ ಅವಳು ಅತ್ತಾಗ ನನ್ನ ಬಳಿ ಏನುತ್ತರವಿತ್ತು?

ಇವೆಲ್ಲ ಕೆಲವೇ ಕೆಲವು ಸಂಗತಿಗಳು. ಇನ್ನೂ ತುಂಬಾ ಇವೆ. ಇಲ್ಲಿ ತಪ್ಪು ಯಾರದು ಎಂದು ಯೋಚನೆ ಮಾಡಿದಾಗ… ಶಾಲೆಯವರಿ ಗಿಂತ ಪೋಷಕರದೇ ಕೈವಾಡ ಜಾಸ್ತಿ ಅನಿಸುತ್ತದೆ. ಯಾಕಂದರೆ ಶಾಲೆಯವರು ಪೋಷಕರ ಹುಚ್ಚು ನಿರೀಕ್ಷೆಗಳನ್ನು ಕಾಯ್ದುಕೊಳ್ಳಲು ಕೆಲವೊಂದು ಪದ್ಧತಿಗಳನ್ನು ಶುರುಹಚ್ಚಿಕೊಳ್ಳುತ್ತಾರೆ. ಪೋಷಕ ರಿಗೆ ತುಂಬಾ ಹೊಮವರ್ಕ್ ಕೊಡೋ ಶಾಲೆಗಳೇ ಇಷ್ಟ. ಅವ ರಿಗೆ ಮಕ್ಕಳು ಎಷ್ಟು ಕಲಿತಾರು ಅನ್ನೋಕಿಂತ ಪ್ರತಿ ವಾರ ಎಷ್ಟು ಮಾಕ್ರ್ಸ್ ತೆಗಿತಾರೆ ಅನ್ನೋದು ಮುಖ್ಯ. ಎಷ್ಟು ಸರಿ ಮಾಡಿದ್ದಾರೆ ಅನ್ನೋಕಿಂತ ಏನೇನು ತಪ್ಪು ಮಾಡಿದ್ದಾರೆ ಅನ್ನೋದು ಅವರಿಗೆ ಬೇಕು.

ಮಕ್ಕಳಿಗೆ ಹೊಸಹೊಸ ವಿಚಾರ ಮಾಡಲು ಮನೆಯಲ್ಲಿಯೇ ಮುಕ್ತ ವೇದಿಕೆ ಸೃಷ್ಟಿಸಬೇಕು. ಆ ವಿಚಾರಗಳನ್ನು ಸಮಾಜಕ್ಕೆ ಒಳಿತಾಗುವಾಗುವಂತೆ ಆಚರಣೆಗೆ ತರಲು ಏನು ಮಾಡಬೇಕು ಎಂಬುದನ್ನು ಹೇಳಿಕೊಡಬೇಕು. ಬರಿ ದುಡ್ಡು ಮಾತ್ರ ಜೀವನ ಅಲ್ಲ, ನಿನಗೆ ಇಷ್ಟವಾಗಿದ್ದನ್ನು ಮಾಡು ಎಂಬುದನ್ನು ಆಚರಣೆ ಮೂಲಕ ಹೇಳಿಕೊಡಬೇಕು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು… ಇದನ್ನೆಲ್ಲಾ ಹೇಳಲು ಶಾಲೆ ಬಿಡಿಸಲೇಬೇಕು ಅಂತೇನಿಲ್ಲ. ಆದರೆ ಶಾಲೆಯನ್ನು ಬಿಟ್ಟರೆ ಅವರಿಗೆ ಒಳ್ಳೆಯದನ್ನು ಕಲಿಯಲು ಇನ್ನೂ ಹೆಚ್ಚಿನ ಸಮಯ ಸಿಕ್ಕೆತೇನೋ ಅಂತ. ಅದೂ ಅಲ್ಲದೆ ಮಹತ್ತರ ಸಾಮಾನ್ಯ ಅಪವರ್ತನದಂತಹ ಸಂಗತಿಗಳನ್ನು ಕಲಿತು ಅದರಿಂದ ಉಪಯೋಗ ಏನಾದೀತು? ಹಿಮಾಲಯದ ಎತ್ತರ ಎಷ್ಟು ಎನ್ನುವುದು ಬಾಯಿಪಾಠ ಮಾಡಿ ಪರೀಕ್ಷೆ ಬರಿಯಿವುದಕ್ಕಿಂತ ಆ ಎತ್ತರಕ್ಕೆ ಹೇಗೆ ಏರಬೇಕು, ಪ್ರಕೃತಿಯ ವಿಸ್ಮಯಗಳನ್ನು ಕಂಡು ಹೇಗೆ ಬೆರಗಾಗಬೇಕು ಎಂಬುದನ್ನು ಪ್ರತ್ಯಕ್ಷವಾಗಿ ತಿಳಿಸಿಕೊಡುವುದು ಒಳ್ಳೆಯದಲ್ಲವೇ? ಗಗನದೆತ್ತರಕ್ಕೆ ಮುಟ್ಟಿರುವ ಶಾಲೆಯ ಶುಲ್ಕ, ದೇಣಿಗೆಯ ಹಣದಲ್ಲಿಯೇ ಅವರಿಗೊಂದು ಬೇರೆಯ ಕಲಿಕೆಯ ವ್ಯವಸ್ಥೆ ಮಾಡಬಹುದಲ್ಲವೇ? …ಇವಿಷ್ಟು ಕಾರಣಗಳು ಸಾಕಲ್ಲವೇ ಶಾಲೆ ಬಿಡಿಸಲು?

Leave a Reply

Your email address will not be published.