ಮಠಾಧೀಶರ ಮುಂದೆ ಮOಡಿಯೂರುವ ಸರ್ಕಾರ!

-ಶಿವಾಜಿ ಗಣೇಶನ್

ಸಣ್ಣಪುಟ್ಟ ಮತ್ತು ದನಿ ಇಲ್ಲದ ಜಾತಿಗಳು ಅನಾಥ ಪ್ರಜ್ಞೆಯಿಂದ ನರಳುವಂತಾಗಿವೆ. ಬಲಿಷ್ಠ ಜಾತಿಗಳ ಕೈ ಮೇಲಾಗಿರುವುದರಿಂದ ರಾಜಕಾರಣ ಉಳ್ಳವರ ಪರವಾಗಿದೆ. ಇದರಿಂದ ತಮಗೇನೂ ಪ್ರಯೋಜನವಾಗುವುದಿಲ್ಲ ಎನ್ನುವ ಹತಾಶ ಮನೋಭಾವ ಕೆಳವರ್ಗಗಳಲ್ಲಿ ಕಾಣುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ದೇಶದ ಇತರ ಕಡೆ ಇರುವಂತೆ ಕರ್ನಾಟಕದಲ್ಲಿಯೂ ಬಲಪಂಥೀಯ ಚಿಂತನೆ ಮತ್ತು ಅದರತ್ತ ಒಲವು ಹೆಚ್ಚಾಗಿ ಕಾಣುತ್ತಿದೆ. ಬಲಪಂಥೀಯ ಚಿಂತನೆ ಎಂದರೆ ಸಂಕುಚಿತ ಮನೋಭಾವ. ಅದರಲ್ಲಿ ಸ್ವಾರ್ಥ, ಜಾತಿ, ಸ್ವಜಾತಿ, ತನ್ನ ಧರ್ಮ ಅಷ್ಟೇ ಮುಖ್ಯ. ಇಂತಹವರ ದೃಷ್ಟಿಯಲ್ಲಿ ಬೇರೆಯವರು, ಬೇರೆ ಧರ್ಮ, ಬೇರೆ ಭಾಷೆ ನಗಣ್ಯ. ಬೇರೆಯವರನ್ನು ಕಂಡರೆ ಅಸಹನೆ. ಇದು ಈಗ ಬಹುತೇಕ ಜನರಲ್ಲಿ ಕಾಣಿಸಿಕೊಂಡಿರುವ ಸಮೂಹ ಸನ್ನಿ.

ಹೀಗಾಗಿ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು ಜನರ ನಾಡಿ ಮಿಡಿತಕ್ಕೆ ತಕ್ಕಂತೆ ರಾಜಕೀಯ ಆಟ ಆಡತೊಡಗಿವೆ. ಅಧಿಕಾರದಲ್ಲಿರುವÀ ಬಿಜೆಪಿ ಸರ್ಕಾರ ಜಾತಿವ್ಯವಸ್ಥೆಯನ್ನೇ ತನ್ನ ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದೆ.

ಅದೇ ಹಾದಿಯನ್ನು ಹೆಸರಿಗಷ್ಟೇ ಜನತಾದಳ (ಜಾತ್ಯತೀತ)ವು ಒಕ್ಕಲಿಗರಿಗಷ್ಟೇ ಈ ಪಕ್ಷ ಎನ್ನುವಂತೆ ನಡೆದುಕೊಂಡು ಬಂದಿದೆ. ಅದರ ಚಟುವಟಿಕೆ ಕೂಡ ಒಕ್ಕಲಿಗ ಜಾತಿ ಇರುವ ಕಡೆ ಮಾತ್ರ ಗಿರಕಿ ಹೊಡೆಯುತ್ತಿದೆ. ಉಳಿದ ಕಡೆ ಇದು ಜನರಿಗೆ ಬೇಡವಾದ ಪಕ್ಷವಾಗಿದೆ. ಇನ್ನು ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಬೇರೂರಿದ್ದು ವೀರಶೈವ/ಲಿಂಗಾಯಿತರಿAದ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಿಂಹಪಾಲು ಪಡೆಯುತ್ತಿರುವ ವೀರಶೈವ/ಲಿಂಗಾಯಿತರು ಆ ಪಕ್ಷ ತಮ್ಮದು ಎನ್ನುವಂತೆ ನಡೆದುಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಜಾತ್ಯತೀತ ಗುರಿಯನ್ನು ಇಟ್ಟುಕೊಂಡಿದ್ದು, ಈಗಿನ ಜಾತಿ ಪ್ರಭಾವಳಿಯಲ್ಲಿ ಅದೀಗ ಯಾರಿಗೂ ಬೇಡ ಎನ್ನುವಂತಾಗಿದೆ. ಹೀಗಾಗಿ ಈ ಪಕ್ಷಗಳು ತಮ್ಮ ರಾಜಕೀಯ ಬಂಡವಾಳದ ಮತಕ್ಕಾಗಿ ತನ್ನ ಬಗೆಗೆ ಒಲವಿರುವ ಜಾತಿಗಳ ಅಭಿವೃದ್ಧಿಗಷ್ಟೇ ಸೀಮಿತವಾಗಿವೆ.

ವಾಸ್ತವವಾಗಿ ರಾಜಕೀಯ ಪಕ್ಷಗಳ ಮೇಲೆ ಜಾತಿಗಳ ಪ್ರಭಾವ ಆಗುತ್ತಿರುವ ಕಾರಣ ರಾಜಕೀಯ ರಂಗವು ಅಸಹ್ಯಕರವಾಗುತ್ತಿವೆ. ಸಣ್ಣಪುಟ್ಟ ಮತ್ತು ದನಿ ಇಲ್ಲದ ಜಾತಿಗಳು ಮತ್ತೆ ಅನಾಥ ಪ್ರಜ್ಞೆಯಿಂದ ನರಳುವಂತಾಗಿವೆ. ಬಲಿಷ್ಠ ಜಾತಿಗಳ ಕೈ ಮೇಲಾಗಿರುವುದರಿಂದ ಮತ್ತೆ ರಾಜಕಾರಣ ಉಳ್ಳವರ ಪರವಾಗಿದೆ. ಇದರಿಂದ ತಮಗೇನೂ ಪ್ರಯೋಜನವಾಗುವುದಿಲ್ಲ ಎನ್ನುವ ಹತಾಶ ಮನೋಭಾವ ಕೆಳವರ್ಗಗಳಲ್ಲಿ ಕಾಣುವಂತಾಗಿದೆ.

ಈಗಿನ ಸಾಮಾಜಿಕ ಮತ್ತು ರಾಜಕೀಯ ರಂಗವನ್ನು ಗಮನಿಸಿದಾಗ ಜಾತೀಯತೆ ಮತ್ತು ಜಾತಿಪ್ರಜ್ಞೆ ಹೆಚ್ಚಾಗಿ ಜಾಗೃತವಾಗುತ್ತಿದೆ. ಮೇಲ್ನೋಟಕ್ಕಷ್ಟೆ ಜಾತ್ಯತೀತ ಎನ್ನುವುದು ಕೆಲವು ರಾಜಕೀಯ ಪಕ್ಷಗಳಿಗಷ್ಟೇ ಬೇಕಾಗಿದೆ. ಇದಕ್ಕೆ ತಕ್ಕಂತೆ ಒಂದೂವರೆ ದಶಕದಿಂದ ರಾಜ್ಯದ “ಪ್ರಗತಿಪರ” ಹಣೆಪಟ್ಟಿ ಹಾಕಿಕೊಂಡ ಮಠಾಧೀಶರೊಬ್ಬರು ಹಿಂದುಳಿದ ಜಾತಿಗಳ ವ್ಯಕ್ತಿಯೊಬ್ಬರಿಗೆ ಧರ್ಮಧೀಕ್ಷೆ ನೀಡಿ ಮಠಾಧೀಶರನ್ನಾಗಿ ಹೆಸರಿಸುವ ಸಂಪ್ರದಾಯ ಶುರುಮಾಡಿದರು. ದಿಕ್ಕು ದೆಸೆ ಇಲ್ಲದ ಕಾರಣ ಈ ಹಿಂದುಳಿದ ಸಣ್ಣ ಪುಟ್ಟ ಜಾತಿಗಳು ತನ್ನ ಮಠಾಧೀಶರಿಂದ ತಮಗೆ ವಿಮೋಚನೆ ದೊರೆಯಬಹುದೆಂಬ ಭ್ರಮೆಯಲ್ಲಿ ಬಿದ್ದವು. ಹೀಗೆ ಬೆಳೆದ ಮರಿ ಮಠಾಧೀಶರು ಈಗ ಆಯಾ ಜಾತಿಯ ಧಾರ್ಮಿಕ ಮತ್ತು ರಾಜಕೀಯ ನಾಯಕಸ್ಥಾನವನ್ನೂ ಆಕ್ರಮಿಸಿಕೊಂಡು ಆಡಳಿತ ನಡೆಸುವ ಪ್ರಭುತ್ವಕ್ಕೆ ಬೆದರಿಕೆ ಹಾಕುವಷ್ಟು ದಾಷ್ಟö್ರ್ಯತನವನ್ನು ಬೆಳೆಸಿಕೊಂಡಿದ್ದಾರೆ.

ತನ್ನ ಜಾತಿಗೆ ಚುನಾವಣೆಯಲ್ಲಿ ಇಂತಹವರಿಗೆ ಟಿಕೆಟ್ ನೀಡಬೇಕು. ಮಂತ್ರಿ ಸ್ಥಾನ ಮತ್ತಿತರ ಸ್ಥಾನಮಾನಗಳಿಗೆ ಹಕ್ಕೊತ್ತಾಯ ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಹಾಗಾಗಿಯೇ ಇಂದು ಮಠಾಧೀಶರೇ ತನ್ನ ಜಾತಿಗೆ ಇಂತಿಷ್ಟು ಶೇಕಡ ಮೀಸಲಾತಿ ನೀಡಬೇಕೆನ್ನುವ ಚಳವಳಿಯ ನಾಯಕತ್ವ ವಹಿಸಿದ್ದಾರೆ. ಸಂವಿಧಾನ, ರಾಜಕೀಯ ಸಿದ್ಧಾಂತ, ಸಾಮಾಜಿಕ ಸಮಾನತೆ ಇತ್ಯಾದಿಯ ಬಗೆಗೆ ಗಂಧಗಾಳಿಯೂ ಇಲ್ಲದ ಮಠಾಧೀಶರು ಜಾತಿಯೇ ಸರ್ವಸ್ವ ಎನ್ನುವತ್ತ ಸಾಗಿದ್ದಾರೆ. ಇದು ಇಂದಿಗೆ ಲಾಭವಾಗಬಹುದು. ಆದರೆ ಮುಂದೊAದು ದಿನ ಇಂತಹ ಬೆಳವಣಿಗೆ ನಮ್ಮ ವ್ಯವಸ್ಥೆಗೆ ಮಾರಕವಾಗುವುದನ್ನು ತಳ್ಳಿ ಹಾಕುವಂತಿಲ್ಲ.

ಮಠಾಧೀಶರ ಶಕ್ತಿ ಈಗ ರಾಜಕೀಯ ಪ್ರವೇಶಿಸಿರುವುದರಿಂದ ಸಹಜವಾಗಿಯೇ ದೇವರು, ಧರ್ಮ, ಹಿಂದುತ್ವದ ಭ್ರಮೆಯನ್ನು ಸೃಷ್ಟಿಸಿರುವ ಪಕ್ಷವು ಅಧಿಕಾರದಲ್ಲಿರುವುದರಿಂದ ಮಠಾಧೀಶರ ಮುಂದೆ ಸರ್ಕಾರವು ಮಂಡಿಯೂರಿ ಪ್ರತಿಷ್ಠಿತ ಮತ್ತು ಬಲಿಷ್ಠ ಜಾತಿಗಳಿಗೂ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲು ಹೊರಟಿದೆ. ಆದರೆ ಉಳಿದ ಸಣ್ಣಪುಟ್ಟ ಜಾತಿಗಳವರೆಗೆ ಇದರ ವಿಸ್ತರಣೆ ಅಸಾಧ್ಯ. ಅವರಿಗೇನಿದ್ದರೂ, ತುಟಿಗೆ ತುಪ್ಪ ಹಚ್ಚುವುದಷ್ಟೇ ಆಗಿದೆ. ಇದರ ಪ್ರಭಾವದಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಂತ್ರಿ ಮಂಡಲದಲ್ಲಿ 11 ಮಂದಿ ಲಿಂಗಾಯತರಿಗೆ ಮತ್ತು ಏಳು ಮಂದಿ ಒಕ್ಕಲಿಗರಿಗೆ ಅವಕಾಶ ನೀಡಿದ್ದಾರೆ.

ಇಡೀ ವಿಶ್ವವೇ ಆಧುನಿಕತೆಯತ್ತ ದಾಪುಗಾಲು ಹಾಕಿಕೊಂಡು ಮುನ್ನಡೆದಿದೆ. ಕಳೆದ ಕೆಲವು ದಶಕಗಳ ಹಿಂದೆ ಪ್ರಗತಿಪರ ಪ್ರಜ್ಞೆ ಬೆಳೆಸಿಕೊಳ್ಳುವುದು ಆದರ್ಶಪ್ರಾಯವಾಗಿತ್ತು. ಜಾತಿಯಲ್ಲಿ ಗುರುತಿಸಿಕೊಳ್ಳುವುದು ಕೆಲವರಿಗೆ ಅಸಹ್ಯ ಅನ್ನಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ತಮ್ಮ ಹೆಸರಿನ ಮುಂದೆ ಜಾತಿಯನ್ನು ಸೇರಿಸಿಕೊಳ್ಳುವಷ್ಟು ಜಾತಿ ಪ್ರಜ್ಞೆ ಹೆಚ್ಚಾಗುತ್ತಿದೆ. ಅಂದರೆ ಜಾತಿ ಈಗ ಎಲ್ಲ ಕ್ಷೇತ್ರಗಳಲ್ಲೂ ಬಂಡವಾಳವಾಗಿ ಲಾಭ ತಂದುಕೊಡುವುದಾಗಿದೆ. ಇದು ಬಲಿಷ್ಠ ಜಾತಿಗಳಿಗಷ್ಟೇ ಮೀಸಲು.

ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಹಳ್ಳಿಗೌಡ ಎಂದರೆ ನಾಗರಿಕತೆ ತಿಳಿಯದ ಹಳ್ಳಿಗ, ದಡ್ಡ ಎನ್ನುವ ಭಾವನೆ ನಗರದ ಜನರಲ್ಲಿತ್ತು. ಆದರೆ ಅದೀಗ ಅಧಿಕಾರ ಮತ್ತು ಹಣಗಳಿಕೆಗೆ ಅವಕಾಶಗಳನ್ನೇ ತೆರೆದುಕೊಂಡಿರುವುದರಿAದ ಬಹುತೇಕ ರಾಜಕಾರಣಿಗಳು ಮತ್ತು ಸಿನಿಮಾ ನಟನಟಿಯರು ತಮ್ಮ ಹೆಸರಿನ ಮುಂದೆ ಗೌಡ ಎನ್ನುವ ಜಾತಿ ಹೆಸರನ್ನು ಹಾಕಿಕೊಳ್ಳುತ್ತಿರುವುದನ್ನು ನಾವು ಕಾಣಬಹುದು. ಉದಾಹರಣೆಗೆ ಹದಿನೈದು ವರ್ಷಗಳ ಹಿಂದೆ ಬಿಜೆಪಿಯ ಶೋಭಾ ಕರಂದ್ಲಾಜೆಯವರನ್ನು ಒಕ್ಕಲಿಗರು ಹೆಚ್ಚಿರುವ ಯಶವಂತಪುರ ವಿಧಾನಸಭೆ ಚುನಾವಣೆಗೆ ನಿಲ್ಲಿಸಿತು. ಆಗ ಅವರು ಬೇರೆ ಜಿಲ್ಲೆಯವರು, ಅಪರಿಚಿತಳು ಎನ್ನುವುದನ್ನು ಅರಿತು ತಾನು ಒಕ್ಕಲಿಗ ಜಾತಿಗೆ ಸೇರಿದವರು ಎಂದು ಮತದಾರರಿಗೆ ಮನವರಿಕೆ ಮಾಡಿಕೊಡಲು ಶೋಭಾ ಮೋನಪ್ಪಗೌಡ ಕರಂದ್ಲಾಜೆ ಎಂದು ಪ್ರಚಾರ ನಡೆಸಿ ಗೆಲುವು ಸಾಧಿಸಿದರು.

ಇದೇ ದಾರಿ ಮುಂದೆ ಇದೇ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಈಗ ಮಂತ್ರಿ ಆಗಿರುವ ಚನ್ನಪಟ್ಟಣ ತಾಲ್ಲೂಕಿನ ಎಸ್.ಟಿ.ಸೋಮಶೇಖರ್ ಅವರಿಗೆ ಮಾರ್ಗದರ್ಶನವಾಯಿತು. ಈ ಕ್ಷೇತ್ರದಲ್ಲಿ ನಿರಂತರವಾಗಿ ಎರಡು ಬಾರಿ ಸೋತಿದ್ದ ಅವರು, ಕಳದೆರಡು ಚುನಾವಣೆಗಳಿಂದ ಎಸ್.ಟಿ.ಸೋಮಶೇಖರಗೌಡ ಎಂದು ಪ್ರಚಾರಕ್ಕೆ ಬಂದರು. ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಒಕ್ಕಲಿಗರಿಗೆ ತಾನು ಸಹಾ ನಿಮ್ಮ ಜಾತಿಯವನು ಎಂದು ತೋರಿಸಿಕೊಡಲು ಜಾತಿ ಇಲ್ಲಿ ಅವರಿಗೆ ಶಕ್ತಿ ನೀಡಿತು. ಹಳೇ ಮೈಸೂರು ಭಾಗದಲ್ಲಿ ಸುಮಾರು 40 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಭಾವ ಇರುವ ಕಾರಣ ದೇವೇಗೌಡರ ಕುಟುಂಬ ಈ ಭಾಗವನ್ನು ತಮ್ಮ ರಾಜಕೀಯ ಅಧಿಕಾರಗಳಿಸಿಕೊಡುವ ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡಿದೆ.

ಈ ಮಧ್ಯೆ ಸಾಮಾಜಿಕ ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುವ ಪೀಳಿಗೆಯಲ್ಲಿ ಅಂತರ್‌ಜಾತಿ ವಿವಾಹಗಳು ಕೂಡ ಸ್ವಜಾತಿ ವಿವಾಹಗಳಂತೆಯೇ ಕೆಲವು ಕಡೆ ನಡೆಯುತ್ತಿವೆ. ಇಂತಹವು ನಗರಗಳಿಗಷ್ಟೇ ಮೀಸಲು. ಹಳ್ಳಿಗಳಲ್ಲಿ ಅಂತರ್ ಜಾತಿ ವಿವಾಹ ಸಾಧ್ಯವಾಗದಂತಹ ಸಾಮಾಜಿಕ ಪರಿಸ್ಥಿತಿ ಬಲವಾಗಿ ಬೇರೂರಿದೆ. ಇಷ್ಟಾದರೂ ಜಾತಿಯ ಪ್ರಾಮುಖ್ಯ ಹೆಚ್ಚಿರುವುದು ರಾಜಕೀಯ ಅಧಿಕಾರ ತಂದುಕೊಡುವ ಶಕ್ತಿ ಇಂದಿನ ದಿನಗಳಲ್ಲಿ ಜಾತಿಗೆ ದೊರೆತಿರುವುದರಿಂದ ಈ ಜಾತಿ ವ್ಯವಸ್ಥೆಯ ಪ್ರಭಾವಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯೂ ಶರಣಾಗಿದೆ. ಸದ್ಯಕ್ಕೆ ಜಾತಿ ಮತ್ತು ಧರ್ಮ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೆಚ್ಚು ಪ್ರಭಾವ ಬೆಳೆಸಿಕೊಂಡಿರುವುದರಿAದ ರಾಜಕೀಯ ಪಕ್ಷಗಳು ಅವುಗಳಿಗೆ ಮಣೆ ಹಾಕಿವೆ. ಇದೇ ಇಂದಿನ ದುರಂತ!

*ಲೇಖಕರು ಹಿರಿಯ ಪತ್ರಕರ್ತರು, ಬೆಂಗಳೂರು.

Leave a Reply

Your email address will not be published.