ಮಠ-ಮೀಸಲಾತಿ-ರಾಜಕಾರಣ

-ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮಠಾಧೀಶರ ವರ್ತನೆಯ ಬಗ್ಗೆ ಮಾತನಾಡುವವರು ತುಂಬಾ ವಿರಳ. ಗಟ್ಟಿ ಧ್ವನಿಯಲ್ಲಿ ಹೇಳಿ ಏಕೆ ಸ್ವಾಮಿಗಳ ಮತ್ತು ಅವರ ಶಿಷ್ಯರ ಕೋಪ ಶಾಪಕ್ಕೆ ತುತ್ತಾಗಬೇಕು ಎನ್ನುವ ಅಂಜಿಕೆ ಬಹುತೇಕರನ್ನು ಕಾಡುತ್ತಿದೆ. ದೃಶ್ಯ ಮತ್ತು ಅಕ್ಷರ ಮಾಧ್ಯಮದವರು, ವಿಚಾರವಂತರು, ರಾಜಕಾರಣಿಗಳು ಸಹ ಅವರ ಸುತ್ತ ಗಿರಕಿ ಹೊಡೆಯುವುದನ್ನು ಕಾಣುತ್ತಿದ್ದೇವೆ.

ಬಸವಾದಿ ಪ್ರಮಥರು ಇವನಾರವ, ಇವನಾರವ ಎನ್ನದೆ ಎಲ್ಲರನ್ನೂ ತಮ್ಮವರೆಂದು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಸತ್ಯಪಕ್ಷಪಾತಿಗಳಾಗಿ, ನ್ಯಾಯನಿಷ್ಠುರಿಗಳಾಗಿ ಬಾಳಿದವರು. ದಯೆ, ದಾಕ್ಷಿಣ್ಯಕ್ಕೆ ಒಳಗಾಗಿ ಆದರ್ಶಗಳನ್ನು ಗಾಳಿಗೆ ತೂರಿದವರÀಲ್ಲ. ಅಂಥ ಶರಣರ ಪರಂಪರೆ ನಮ್ಮದು ಎಂದುಕೊಳ್ಳುವವರೇ ಗೋಸುಂಬೆಯಂತೆ ವರ್ತಿಸುವುದನ್ನು ಕಾಣುತ್ತಿದ್ದೇವೆ. ಮೀಸಲಾತಿ ಕುರಿತಂತೆ ಈಗ ಎಲ್ಲೆಡೆ ಪಾದಯಾತ್ರೆ, ಚರ್ಚೆ, ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ತಂತ್ರಗಳು ನಡೆಯುತ್ತಿವೆ.

ಈ ಬಗ್ಗೆ ವಿಚಾರವಂತರು ಬಹಿರಂಗವಾಗಿ ಚರ್ಚಿಸಲು ಭಯಪಡುವ ವಾತಾವರಣ ಇದೆ. ಕಾರಣ ಅಲ್ಪಸಂಖ್ಯಾತರಂತೆ ಬಹುಸಂಖ್ಯಾತರೂ ಹೋರಾಟಕ್ಕಿಳಿದಿರುವುದು. ಅಂಥವರ ವಿರುದ್ಧ ಮಾತನಾಡಿದರೆ ಮುಂದೆ ಏನಾಗುವುದೋ ಎನ್ನುವ ಭಯ. ಮೀಸಲಾತಿಗಾಗಿ ಮಠಾಧೀಶರೇ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಬೆದರಿಕೆ ಒಡ್ಡುವ, ಉಪವಾಸ ಸತ್ಯಾಗ್ರಹ ಮಾಡುವ, ಆತ್ಮಹತ್ಯೆಗೆ ಮುಂದಾಗುವ ಮೂಲಕ ತಮ್ಮ ಜನಾಂಗದ ಮಂತ್ರಿ, ಶಾಸಕರನ್ನು ಜೊತೆಯಲ್ಲಿಟ್ಟುಕೊಂಡು ಶಕ್ತಿಪ್ರದರ್ಶನ ಮಾಡುವಂತಾಗಿರುವುದು ವಿಷಾದನೀಯ. ಸರ್ಕಾರ, ಮುಖ್ಯಮಂತ್ರಿ ಯಾವುದೋ ಒಂದು ಜನಾಂಗದ ಪ್ರಾಬಲ್ಯದಿಂದ ಆಗುವುದಿಲ್ಲ. ವ್ಯಕ್ತಿಗತ ಹೋರಾಟ, ಹಿಂದಿನ ಸರ್ಕಾರದ ದುರ್ಬಲ ಆಡಳಿತ ಇನ್ನೇನೇನೋ ಅಂಶಗಳು ಕಾರಣವಾಗಿರುತ್ತವೆ. ಈ ಸತ್ಯವನ್ನರಿಯದೆ ನಾವೇ ಸರ್ಕಾರ ಉಳಿಸುವವರು, ಉರುಳಿಸುವವರು ಎಂದು ಹೇಳುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೇ ಚ್ಯುತಿ ತಂದಂತೆ.

ಇವತ್ತು ಜಾತಿಯ ಸಂಘಟನೆಗಳು ಹೆಚ್ಚಿ ಮಾನವ ಕುಲ ಒಂದು ಎನ್ನುವ ಭಾವೈಕ್ಯತೆಗೆ ಪೆಟ್ಟು ಬೀಳುತ್ತಿದೆ. ಬುದ್ಧ, ಏಸು, ಪೈಗಂಬರ್, ವಾಲ್ಮೀಕಿ, ಬಸವ, ಕನಕ ಇಂಥ ಸಂತರು ಜಾತಿಯ ಗೋಡೆ ಕೆಡವಿ ಎಲ್ಲರೊಂದಿಗೆ ಒಂದಾಗಿ ಬಾಳಿದವರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತರಿಗೆ, ದಮನಿತರಿಗೆ, ಶೋಷಿತರಿಗೆ ಸೀಮಿತ ಅವಧಿಯವರೆಗೆ ಮಾತ್ರ ಮೀಸಲಾತಿ ಬೇಕು ಎಂದಿದ್ದರು. ಆದರೆ ಈಗ ಎಲ್ಲ ಜನಾಂಗದವರೂ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಯಾರಿಗೆ, ಯಾಕೆ, ಎಲ್ಲಿಯವರೆಗೆ ಮೀಸಲಾತಿ ಇರಬೇಕು ಎನ್ನುವ ಗಂಭೀರ ಚಿಂತನೆ ಇಲ್ಲವಾಗಿದೆ. ಮುಂದುವರಿಯುವ ಬದಲು ಹಿಂದುಳಿದವರ ಪಟ್ಟಿಗೆ ಸೇರಲು ಸ್ಪರ್ಧೆ ನಡೆಯುತ್ತಿದೆ.

ಮುಂದುವರಿಯಲು ಬೇಕಾದಷ್ಟು ಮಾರ್ಗಗಳಿವೆ. ಪ್ರತಿಯೊಬ್ಬರೂ ಬಸವಾದಿ ಶಿವಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ಜಾರಿಯಲ್ಲಿ ತಂದರೆ ಮೀಸಲಾತಿ ಇಲ್ಲದೆಯೂ ಸಮಸಮಾಜವನ್ನು ಕಾಣಲು ಸಾಧ್ಯ. 12ನೆಯ ಶತಮಾನದಲ್ಲಿ ಅತ್ಯಂತ ತಳಸಮುದಾಯದಿಂದ ಬಂದ ಕಾಯಕ ಜೀವಿಗಳು ಅನುಭವ ಮಂಟಪದ ಸದಸ್ಯರಾಗಿದ್ದರು. ಅದು ವಿಶ್ವದ ಮೊಟ್ಟಮೊದಲ ಪಾರ್ಲಿಮೆಂಟ್. ಹಾಗಂತ ಇಂದಿನ ಪಾರ್ಲಿಮೆಂಟ್‍ಗೆ ಅನುಭವ ಮಂಟಪವನ್ನು ಹೋಲಿಸಲು ಖಂಡಿತ ಸಾಧ್ಯವಿಲ್ಲ.

ಅನುಭವ ಮಂಟಪದಲ್ಲಿ 770 ಜನ ಅಮರಗಣಂಗಳಿದ್ದರು. ಅವರೇ ಅದರ ಸದಸ್ಯರು. ಅವರು ಇಂದಿನ ವಿಧಾನಸಭೆ, ಲೋಕಸಭೆಯ ಅನೇಕ ಸದಸ್ಯರಂತೆ ನೀತಿಭ್ರಷ್ಠರು, ವಚನಭ್ರಷ್ಠರು, ಕಾನೂನುಬಾಹಿರ ಚಟುವಟಿಕೆಯುಳ್ಳವರು ಆಗಿರಲಿಲ್ಲ. ಜೀವಪರ, ಜನಪರÀ ಕಾಳಜಿಯುಳ್ಳ ಕಾಯಕ ಜೀವಿಗಳಾಗಿ ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು. `ಕಂಡವರ ಗಂಟಿಗೆ ನೀರುಳ್ಳಿ ಸುಲಿಯುವ’ ದುರ್ಬುದ್ಧಿ ಅವರಿಗೆ ಇರಲಿಲ್ಲ. ಲಂಚಕ್ಕೆ ಕೈಚಾಚದ ಭಾಷೆ ಅವರದಾಗಿತ್ತು. ಇವತ್ತು ಬಹುತೇಕ ಜನಪ್ರತಿನಿಧಿಗಳು ಹೇಗಿದ್ದಾರೆ? ಲಂಚಕ್ಕೆ ಕೈ ಚಾಚದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧÀ್ಯವಿಲ್ಲ ಎನ್ನುವವರಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು ಕಾರಣರೋ? ಪ್ರಜಾಪ್ರತಿನಿಧಿಗಳು ಕಾರಣರೋ? ಅವರು ಇವರ ಮೇಲೆ, ಇವರು ಅವರ ಮೇಲೆ ದೂರುವರು. ಪ್ರಜಾಪ್ರಭುಗಳ ಆಮಿಷ ಪೂರೈಸದಿದ್ದರೆ ನಮಗೆ ಮತ ಹಾಕುವುದಿಲ್ಲ ಎನ್ನುವ ವಾದ ಸ್ಪರ್ಧಿಗಳದು. ಅವರಾಗಿ ಕೊಡುವುದರಿಂದ ನಾವು ತೆಗೆದುಕೊಳ್ಳುತ್ತೇವೆ ಎನ್ನುವ ವಾದ ಮತದಾರರದು. ಇಬ್ಬರೂ ಭ್ರಷ್ಟತೆಯ ಬೀಜ ಬಿತ್ತುವಲ್ಲಿ ಪಾಲುದಾರರಾಗಿದ್ದಾರೆ.

ಮತದಾರರಿಗೆ ಯಾವುದೇ ಆಮಿಷ ಒಡ್ಡುವುದಿಲ್ಲ ಎನ್ನುವ ನಿಷ್ಠೆ ಸ್ಪರ್ಧಿಗಳಲ್ಲಿ, ಆಮಿಷವೊಡ್ಡಿ ಮತ ಕೊಳ್ಳಲು ಬಂದವರನ್ನು ಕಂಬಕ್ಕೆ ಕಟ್ಟುತ್ತೇವೆ ಎನ್ನುವ ಛಲ ಮತದಾರರಲ್ಲಿ ಬರಬೇಕು. ಅವರು ಮತವನ್ನು ಕೊಳ್ಳಬಾರದು, ಇವರು ಮಾರಬಾರದು. ಆಗ ಅನಾಚಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇತ್ಯಾದಿ ದುರಾಚಾರಗಳಿಗೆ ಆಸ್ಪದವಿರುವುದಿಲ್ಲ. ಸಭೆಯೊಂದರಲ್ಲಿ ಹುಣಸಘಟ್ಟದ ಓಂಕಾರಪ್ಪನವರು ಭ್ರಷ್ಟಾಚಾರ ಮತ್ತು ಮದ್ಯಪಾನ ಸಂಪೂರ್ಣ ತೊಲಗಬೇಕು ಎಂದು ಕರೆಕೊಟ್ಟರು. ಆದರೆ ಸಭಿಕರಿಂದ ಚಪ್ಪಾಳೆ ಬರಲಿಲ್ಲ. ಅದರ ಅರ್ಥ ಭ್ರಷ್ಟಾಚಾರವೂ ಇರಲಿ, ಮದ್ಯಪಾನವೂ ಇರಲಿ ಎಂದಲ್ಲವೇ? ಹೀಗಿದ್ದರೆ ಸುಧಾರಣೆ ತರುವುದು ಹೇಗೆ? ಅದಕ್ಕಾಗಿಯೇ ಬಸವಣ್ಣನವರು ಲೋಕದ ಡೊಂಕನ್ನು ತಿದ್ದುವ ಮುನ್ನ ನಿಮ್ಮ ನಿಮ್ಮ ತನು, ಮನವನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದರು. ವ್ಯಕ್ತಿ ತನ್ನ ದೋಷವನ್ನು ತಾನು ಸರಿಪಡಿಸಿಕೊಂಡರೆ ಸಮಾಜದಲ್ಲಿ ಒಬ್ಬ ಮೂರ್ಖ ಕಡಿಮೆ ಆಗುವನು. ನಾವು ಸರಿಯಾದರೆ ನಮ್ಮ ಅಕ್ಕ-ಪಕ್ಕದವರು, ನಮ್ಮ ಊರು, ದೇಶ ಸರಿಯಾಗುವುದು.

ಇವತ್ತು ವ್ಯಕ್ತಿಗತ ದೋಷಗಳನ್ನು ತಿದ್ದಿಕೊಳ್ಳದೆ ಪರದೂಷಣೆ ಮಾಡುವಲ್ಲೇ ಅನೇಕರು ನಿರತರಾಗಿದ್ದಾರೆ. ತಂದೆ-ಮಗ, ಗಂಡ-ಹೆಂಡತಿ, ಅಣ್ಣ-ತಮ್ಮಂದಿರಲ್ಲೇ ಪರಸ್ಪರರನ್ನು ನಂಬದ ಸ್ಥಿತಿ ಇದೆ. ರಾಜಕೀಯ ವಿಷಗಾಳಿ ಕುಟುಂಬಗಳನ್ನು ಛಿದ್ರಗೊಳಿಸುತ್ತಲಿದೆ. ಈಗ ಅದಕ್ಕೆ ಧರ್ಮದ ವಿಷಗಾಳಿಯೂ ಸೇರುತ್ತಿರುವುದು ಬಹುದೊಡ್ಡ ದುರಂತ. ಧರ್ಮವಾಗಲಿ, ರಾಜಕೀಯವಾಗಲಿ ವಿಷಗಾಳಿ ಅಲ್ಲ. ತಾತ್ವಿಕರು ಆಡಳಿತದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಗ್ರೀಕ್ ತತ್ವಜ್ಞ ಪ್ಲೇಟೋ ಅವರ ಅಭಿಪ್ರಾಯವಾಗಿತ್ತು. ಧರ್ಮ ಆಚಾರ-ವಿಚಾರ ಪ್ರಧಾನವಾದುದು, ಅಜ್ಞಾನ ನಿವಾರಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗಿಸುವಂತಹುದು, ಎಚ್ಚರದಪ್ಪಿ ನಡೆಯುವವರಿಗೆ ಬುದ್ಧಿ ಹೇಳಿ ಸರಿದಾರಿಯಲ್ಲಿ ಕರೆದೊಯ್ಯುವಂತಹುದು. ಆದರೆ ಧರ್ಮದ ಕಟ್ಟೆಯ ಮೇಲೆ ಕೂತವರು ತ್ಯಾಗದ ಸಂಕೇತವಾದ ಕಾವಿ ಧರಿಸಿದ್ದರೂ ಕೆಲವರಲ್ಲಿ ಖಾದಿ ಕೆಲಸ ಮಾಡುತ್ತಿದೆಯೇನೋ ಎಂದು ಮಾತನಾಡಿಕೊಳ್ಳುವಂತಾಗಿದೆ. ಕಾವಿ ಧರಿಸಿದವರು ಅರಿಷಡ್ವರ್ಗಗಳನ್ನು ತ್ಯಾಗ ಮಾಡಬೇಕು. ಸತ್ಯ, ಪ್ರೀತಿ, ನೀತಿ, ಅಹಿಂಸೆ, ಸಹಿಷ್ಣುತೆ, ಸಕಲ ಜೀವಾತ್ಮರ ಲೇಸ ಬಯಸುವ ತತ್ವಗಳನ್ನು ಅಪ್ಪಿಕೊಳ್ಳಬೇಕು.

ಬಸವಣ್ಣನವರು ಕಾವಿಧರಿಸದೆಯೂ ಇಂಥ ಕೆಲಸ ಮಾಡಿದ್ದರು. ಶರಣರಂತೆ ಬಾಳಬೇಕಾಗಿದ್ದ ಕಾವಿಧಾರಿಗಳೇ ಇಂದು ಜಾತಿಯ ಬೇಲಿಯನ್ನು ಹಾಕಿಕೊಂಡರೆ ಸಮಾಜಕ್ಕೆ ಮಾರ್ಗದರ್ಶನ ಮಾಡುವವರು ಯಾರು? ಈ ನಿಟ್ಟಿನಲ್ಲಿ ನಮ್ಮ ನೇತೃತ್ವದಲ್ಲಿ ಮೀಸಲಾತಿ ಬಗ್ಗೆ ಸಂವಾದ ನಡೆಯಬೇಕೆಂದು ಬಿ.ಎಲ್.ಶಂಕರ್ ಅವರು ಪ್ರಸ್ತಾಪಿಸಿದ್ದರು. ನಾವೇನೋ ಸಂವಾದಕ್ಕೆ ಸಿದ್ಧರಿದ್ದೇವೆ. ಆದರೆ ಸಂವಾದಕ್ಕೆ ಬರಬೇಕಾದವರೇ ಬರದೆ ನಮ್ಮಮೇಲೆ ತಿರುಗಿ ಬೀಳಬಹುದು. ನಮ್ಮ ನೋವುಗಳು ಇವರಿಗೆ ಅರ್ಥವಾಗುವುದಿಲ್ಲ ಎನ್ನುವ ಟೀಕೆಗಳೂ ಬರಬಹುದು. ನಾವು ಅಂತಹ ಟೀಕೆಗಳನ್ನು ಸ್ವಾಗತಿಸುತ್ತ ಸಾರ್ವಜನಿಕರಲ್ಲಿ ಅರಿವು-ಆಚಾರ ಒಂದಾಗುವಂತಹ ವಿಚಾರ ಮಂಥನ ನಡೆಯಲಿ ಎಂದು ಬಯಸುತ್ತೇವೆ. ಜನರನ್ನು ವಿಚಾರವಂತರನ್ನಾಗಿ, ನೀತಿವಂತರನ್ನಾಗಿ ಮಾಡದೆ ಹುಂಬರನ್ನಾಗಿಸಿಕೊಂಡು ನಾವು ಹೇಳಿದಂತೆ ಸರ್ಕಾರ, ಮುಖ್ಯಮಂತ್ರಿ ಕೇಳಬೇಕು ಎಂದು ಹಠ ಹಿಡಿದರೆ ಯಾರೇ ಅಧಿಕಾರಕ್ಕೆ ಬಂದರೂ ಸುಗಮ ಆಡಳಿತ ನಡೆಸಲು ಸಾಧ್ಯವಿಲ್ಲ.

ಮೀಸಲಾತಿ ಘೋಷಿಸದಿದ್ದರೆ ಮುಖ್ಯಮಂತ್ರಿಗಳು ಅಧಿಕಾರ ತ್ಯಜಿಸಬೇಕು. ಅವರಿಗೆ ವಯಸ್ಸಾಗಿದೆ ಎಂದು ಅವರ ಪ್ರತಿಕೃತಿ ಸುಡುವರು. ನಮ್ಮ ಸಮಾಜದಿಂದಲೇ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ನಿಗದಿತ ಅವಧಿಯೊಳಗೆ ಮೀಸಲಾತಿ ಪ್ರಕಟಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ನೀವೇ ಕಾರಣ ಎಂದು ಬೆದರಿಕೆ ಒಡ್ಡುವರು. ಇದೆಲ್ಲ ಏನು ಸೂಚಿಸುತ್ತದೆ? ಮಠಾಧೀಶರು ಬೇಡುವವರಾಗದೆ ಮಾರ್ಗದರ್ಶಕರಾಗಿರಬೇಕು. ರಾಜಕೀಯ ಮಾಡದೆ ರಾಜಕೀಯ ಮಾರ್ಗದರ್ಶನ ಮಾಡಬೇಕು. ಆದರೆ ಇಂದು ಅಂತಹ ವಾತಾವರಣ ಕಾಣುತ್ತಿಲ್ಲ. ಹಿಂದುಳಿದವರು, ಮುಂದುವರಿದವರು ಎನ್ನದೆ ನಮ್ಮನ್ನು ಎಸ್‍ಸಿ, ಎಸ್‍ಟಿ, 2 ಎ, 3 ಬಿ ಹೀಗೆ ವಿಶೇಷ ಮೀಸಲಾತಿಗೆ ಸೇರಿಸಬೇಕು, ಮೀಸಲಾತಿ ಪರ್ಸೆಂಟೇಜ್ ಹೆಚ್ಚಿಸಬೇಕು ಎಂದೆಲ್ಲ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯವನ್ನು ಮಠಾಧೀಶರೇ ಮಾಡಿದರೆ ಶರಣರ ತತ್ವಾದರ್ಶಗಳಿಗೆ ಮಸಿ ಬಳಿದಂತೆ. ಇಂಥದಕ್ಕೆ ಸರ್ಕಾರ ಒಪ್ಪಿದಲ್ಲಿ ಹಿಂದುಳಿದವರು ಮತ್ತೂ ಅಲ್ಲೇ ಉಳಿಯುವರು.

ನಾವು ಮೀಸಲಾತಿಯ ವಿರೋಧಿಗಳಲ್ಲ. ಎಲ್ಲ ಜನಾಂಗದಲ್ಲೂ ಶೋಷಿತರು, ಆರ್ಥಿಕ ದುರ್ಬಲರು, ಬಡವರು ಇದ್ದಾರೆ. ಅಂಥವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯ ಅಗತ್ಯ ಇದೆ. ಹಾಗಂತ ಭಡ್ತಿಯಲ್ಲೂ ಮೀಸಲಾತಿ ಬೇಕೇ ಎಂದು ಯೋಚಿಸಬೇಕು. ಒಬ್ಬರು ಮೀಸಲಾತಿ ಸೌಲಭ್ಯದಿಂದ ಆರ್ಥಿಕ ಸುಸ್ಥಿತಿ ಪಡೆದಮೇಲೆ ತಮ್ಮ ಮಕ್ಕಳಿಗೆ ಮೀಸಲಾತಿ ಬೇಡವೆಂದು ತಮ್ಮ ಜನಾಂಗದ ದುರ್ಬಲರಿಗೆ ಮೀಸಲಾತಿ ಕೊಡಿಸಬೇಕು. ಆದರೆ ಇಂದು ಅದು ಅಸಾಧ್ಯವಾಗಿದೆ. ಹೊಟ್ಟೆ ತುಂಬಿದವರಿಗೇ ಮತ್ತೆ ಮತ್ತೆ ಮೃಷ್ಟಾನ್ನ ನೀಡುವಂತೆ ಮೀಸಲಾತಿಯ ಪರಿಸ್ಥಿತಿಯೂ ಆಗುತ್ತಿದೆ.

ಒಂದು ಜನಾಂಗದಿಂದ ನಾವು ಮಠಾಧೀಶರಾಗಿದ್ದರೂ ಆ ಜಾತಿಯನ್ನು ಮೀರಿ ಸರ್ವಜನಾಂಗದ ನೈತಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕøತಿಕ ಉನ್ನತಿಗಾಗಿ ಶ್ರಮಿಸಬೇಕು. ಜಾತಿ ಕತ್ತರಿಯ ಕೆಲಸ ಮಾಡಿದರೆ ಸೂಜಿ ಒಂದುಗೂಡಿಸುವ ಕೆಲಸ ಮಾಡುತ್ತದೆ. ಧರ್ಮದ ಕಟ್ಟೆಯ ಮೇಲೆ ಕೂತವರು ಕತ್ತರಿಯ ಕೆಲಸ ಮಾಡದೆ ಸೂಜಿಯ ಕೆಲಸ ಮಾಡುತ್ತ ಜನರಲ್ಲಿ ಭಾವೈಕ್ಯತೆಯನ್ನು ಬೆಳೆಸಬೇಕು. ಆದರೆ ಸರ್ಕಾರವೇ ಜಾತಿಯ ಆಧಾರದ ಮೇಲೆ ಮಠಗಳಿಗೆ ಆರ್ಥಿಕ ನೆರವು ನೀಡಿ ಆ ಮಠದಿಂದ ಎಷ್ಟು ಮತಗಳು ನಮ್ಮ ಪಕ್ಷಕ್ಕೆ ಬರಬಹುದು ಎಂದು ಲೆಕ್ಕಾಚಾರ ಮಾಡುವುದು. ಇದೇ ಏನೆಲ್ಲ ಅನರ್ಥಗಳ ಮೂಲ.

ಸರ್ವಜನೋಪಯೋಗಿ ಕೆಲಸಗಳಿಗೆ ಯಾವುದೇ ಮಠದಿಂದ ಆರ್ಥಿಕ ನೆರವು ಬಯಸಿ ಅರ್ಜಿ ಬಂದರೂ ಅದರ ಸಾಧಕ-ಬಾಧಕಗಳನ್ನು ಗಮನಿಸಿ ಆರ್ಥಿಕ ನೆರವು ನೀಡಬೇಕು. ಅದಕ್ಕೆ ನಿಯಮಾನುಸಾರ ಲೆಕ್ಕಪತ್ರವನ್ನೂ ಅವರು ಒಪ್ಪಿಸಬೇಕು. ಯಾವ ಕಾರಣಕ್ಕೆ ಆರ್ಥಿಕ ನೆರವು ಪಡೆದಿರುತ್ತಾರೋ ಅದಕ್ಕೇ ಹಣ ಸದ್ವಿನಿಯೋಗ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಿಗದಿತ ಯೋಜನೆ ಬಿಟ್ಟು ಬೇರಾವುದಕ್ಕೋ ಹಣದ ಬಳಕೆ ಆಗಿದ್ದರೆ ಅವರಿಂದ ಎಲ್ಲ ಹಣವನ್ನು ವಾಪಾಸ್ ಪಡೆಯಬೇಕು. ಆದರೆ ಅಂಥ ಧೈರ್ಯವನ್ನು ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಮಾಡುವುದು ಅಷ್ಟಕ್ಕಷ್ಟೆÀ. ಹೀಗಾಗಿ ರಾಜಕೀಯ ಮಾರ್ಗದರ್ಶನ ಮಾಡಬೇಕಾದ ಮಠಾಧೀಶರು ಪ್ರತ್ಯಕ್ಷ ಇಲ್ಲವೇ ಪರೋಕ್ಷ ರಾಜಕೀಯ ಮಾಡುತ್ತ ಸರ್ಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ, ತಾವು ಹೇಳಿದವರನ್ನೇ ಮಂತ್ರಿ ಮಾಡಬೇಕೆನ್ನುವ ಧಮಕಿ ಹಾಕುವರು. ನಮ್ಮನ್ನು ಸಾಧು ಜನಾಂಗದ ಸ್ವಾಮಿಗಳೆಂದು ಗುರುತಿಸುತ್ತಿದ್ದರೂ ನಾವು ಬಸವಾದಿ ಶಿವಶರಣರ ತತ್ವಾದರ್ಶಗಳ ಮೇಲೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮತ್ತು ಭಕ್ತರನ್ನು ಆ ಮಾರ್ಗದಲ್ಲಿ ಕರೆದೊಯ್ಯುವ ಪ್ರಯತ್ನ ಮಾಡುತ್ತಲಿದ್ದೇವೆ.

ನಾವು ಪ್ರತಿನಿಧಿಸುವ ಸಾಧು ಸಮಾಜದವರೇನು ಮುಂದುವರಿದವರಲ್ಲ. ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠಾಧ್ಯಕ್ಷರಾಗುವ ಮುನ್ನ ಇವರು ಲಿಂಗವಂತರಲ್ಲೇ ಕಡೆಗಣಿಸಲ್ಪಟ್ಟವರು. ವಿದ್ಯಾವಂತರು, ವ್ಯಾಪಾರಸ್ಥರು, ವೈದ್ಯರು, ಎಂಜನಿಯರ್, ಉದ್ಯಮಿಗಳು ಸಹ ಬೆರಳೆಣಿಕೆಯಷ್ಟು. ವ್ಯವಸಾಯ ಪ್ರಧಾನವಾಗಿತ್ತು. ಅಲ್ಲೂ ದೊಡ್ಡ ಜಮೀನ್ದಾರರು ಇರಲಿಲ್ಲ. ಕೆಲವರಿಗೆ ಗೇಣು ಭೂಮಿ ಇಲ್ಲದೆ ಕೂಲಿ ಮಾಡುತ್ತಿದ್ದರು. ಜೋಳ, ರಾಗಿ ಇಂಥ ಬೆಳೆ ಬೆಳೆದು ಹೇಗೋ ಜೀವನ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೂಜ್ಯರು ಈ ಸಮಾಜವನ್ನು ಮೇಲೆತ್ತುವ ಸಂಕಲ್ಪ ಮಾಡಿದರು. ಅದಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ-ಕಾಲೇಜು, ಉಚಿತ ಪ್ರಸಾದನಿಲಯಗಳನ್ನು ತೆರೆದರು. ಏಕೆಂದರೆ ನಗರಗಳಿಗೆ ಕಳಿಸಿ ತಮ್ಮ ಮಕ್ಕಳನ್ನು ಓದಿಸುವ ಶಕ್ತಿ ಸಮಾಜಬಾಂಧವರಿಗೆ ಇರಲಿಲ್ಲ.

ಪೂಜ್ಯರ ದೂರದೃಷ್ಟಿಯ ಫಲವಾಗಿ ಅನೇಕರು ವಿದ್ಯಾವಂತರಾದರು. ಬಾಳೆ, ತೆಂಗು, ಮಾವು, ಅಡಕೆಯ ತೋಟ ಮಾಡಲು ಪ್ರೋತ್ಸಾಹಿಸಿದರು. ಉದ್ಯೋಗ, ವ್ಯಾಪಾರ, ರಾಜಕೀಯ ಇತ್ಯಾದಿ ಕ್ಷೇತ್ರದಲ್ಲೂ ಮುಂದುವರಿಯಲು ಬೇಕಾದ ಶಕ್ತಿಯನ್ನು ತುಂಬಿದರು. ಪೂಜ್ಯರ ಮಾಗದರ್ಶನದಿಂದ ಇಂದು ಸಾಧು ಜನಾಂಗದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಪ್ರಗತಿ ಸಾದಿಸುತ್ತಿದ್ದಾರೆ. ಹೀಗೆ ಒಂದು ಜನಾಂಗವನ್ನು ಮೇಲೆತ್ತಿ ಬೆಳೆಸಿದ ಕೀರ್ತಿ ಸಿರಿಗೆರೆ ಮಠಕ್ಕೆ, ಪೂಜ್ಯರಿಗೆ ಸಲ್ಲುತ್ತದೆ.

ಶರಣರ ಆಶಯದಂತೆ ಪ್ರತಿಯೊಬ್ಬರೂ ಶ್ರದ್ಧೆಯಿಂದ ದುಡಿದರೆ ನಾವೇ ಮತ್ತೊಬ್ಬರಿಗೆ ಕೊಡಬಹುದು. ಮೀಸಲಾತಿಗಾಗಿ ಎಲ್ಲರೂ ದುಂಬಾಲು ಬಿದ್ದರೆ ಸರ್ಕಾರ ಯಾರನ್ನು ತೃಪ್ತಿಪಡಿಸಬೇಕು? ಯಾರಿಗೆ ಅನ್ಯಾಯ ಮಾಡಬೇಕು? ಈಗ ಜಂಗಮರೂ ಮೀಸಲಾತಿ ಕೇಳುತ್ತಿದ್ದಾರೆ. ಭಕ್ತರಿಂದ ಗೌರವ ಪಡೆಯುವ ಜಂಗಮರೇ `ಬೇಡಜಂಗಮ’ರೆಂಬ ಮೀಸಲಾತಿ ಬಯಸಿದರೆ ಗತಿ ಏನು? ದುಡಿಯುವ ವರ್ಗ ಹೆಚ್ಚಾಗಬೇಕೇ ಹೊರತು ಬೇಡುವ ವರ್ಗವಲ್ಲ. ಅನುಭವ ಮಂಟಪದ ಮೂಲಕ ಶರಣರು ಎಲ್ಲ ಜನರಲ್ಲೂ ಕಾಯಕ ಶ್ರದ್ಧೆಯನ್ನು ಬೆಳೆಸಿದರು. ಹಾಗಾಗಿ `ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ’ ಎಂದು ಬಸವಣ್ಣನವರು ಹೇಳಬೇಕಾಯಿತು. ಅಂದು ಪ್ರತಿಯೊಬ್ಬರೂ ಕಾಯಕ ಜೀವಿಗಳಾಗಿದ್ದರಿಂದ ಬೇಡುವ ಅಗತ್ಯ ಯಾರಿಗೂ ಇರಲಿಲ್ಲ. ಈ ನಿಟ್ಟಿನಲ್ಲಿ ಇರುವ ಮೀಸಲಾತಿಯನ್ನೇ ಬಳಸಿಕೊಂಡು ದೇಹ, ಮನಸ್ಸು, ಬುದ್ಧಿಯ ಬಳಕೆಯ ಮೂಲಕ ಕಾಯಕಶ್ರದ್ಧೆಯನ್ನು ಮೈಗೂಡಿಸಿಕೊಂಡರೆ ನಾವೂ ಬೆಳೆಯಬಹುದು, ಸಮಾಜವನ್ನೂ ಬೆಳೆಸಬಹುದು. ಲಿಂಗವಂತರು ಸಂಘಟಿತರಾಗಿ `ಲಿಂಗಾಯತ ಸ್ವತಂತ್ರ ಧರ್ಮ’ ಎನ್ನುವ ಮಾನ್ಯತೆ ಪಡೆಯಲು ಹೋರಾಡಬೇಕಾಗಿದೆ.

ಇವತ್ತು ಎಲ್ಲ ವರ್ಗದ ಜನರು ಆರ್ಥಿಕ ದುಸ್ಥಿತಿ ಅನುಭವಿಸಲು, ದುಡಿಯುವ ಶಕ್ತಿ ಕಳೆದುಕೊಳ್ಳಲು, ಆರೋಗ್ಯಭಾಗ್ಯದಿಂದ ವಂಚಿತರಾಗಲು ಮುಖ್ಯ ಕಾರಣ ಮದ್ಯ ವ್ಯಸನÀ. ಆದುದರಿಂದ ಮಠಾಧೀಶರೆಲ್ಲರೂ ಸಂಘಟಿತರಾಗಿ ಮದ್ಯಮುಕ್ತ ಕರ್ನಾಟಕ ಮಾಡಲು ಹೋರಾಡಬೇಕಾಗಿದೆ. ಮದ್ಯದ ಹಾವಳಿಯಿಂದ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿವೆ. ಮಠಾಧೀಶರು ಸಮಷ್ಟಿಯ ಹಿತ ಬಯಸುವತ್ತ ಗಮನ ಹರಿಸಬೇಕಾಗಿದೆ. ಅವರ ಹೋರಾಟ ಮಾನವೀಯ ನೆಲೆಗಟ್ಟಿನ ಮೇಲೆ ಇರಬೇಕೇ ಹೊರತು ಜಾತಿಯ ಆಧಾರದ ಮೇಲೆ ಅಲ್ಲ.

ನಾವು ಕೆಲವು ರಾಜಕಾರಣಿಗಳಂತೆ ಬ್ಲಾಕ್‍ಮೇಲ್ ತಂತ್ರ ಅನುಸರಿಸಬೇಕಾಗಿಲ್ಲ. ಪ್ರತಿಕೃತಿ ಸುಡುವುದು, ಸರ್ಕಾರದ ಮೇಲೆ ಮೀಸಲಾತಿಗಾಗಿ ದಿಗ್ಬಂಧನ ವಿಧಿಸುವುದು, ಧರಣಿ ಕೂರುವುದು ಧನಾತ್ಮಕ ಯೋಚನೆಯಲ್ಲ. ರಾಜಕಾರಣಿಗಳು ಭ್ರಷ್ಟರಾದಾಗ, ಜನಪರ ಕೆಲಸಗಳನ್ನು ಮಾಡದಿದ್ದಾಗ, ದಿಕ್ಕುತಪ್ಪಿದಾಗ ಅವರನ್ನು ಎಚ್ಚರಿಸಿ ಸರಿಯಾದ ದಿಕ್ಕಿನತ್ತ ಮುನ್ನಡೆಸುವ ಕಾರ್ಯವನ್ನು ಮಾಡಬೇಕಾದವರು ಮಠಾಧೀಶರು. ಈ ನಿಟ್ಟಿನಲ್ಲಿ ಎಲ್ಲ ಮಠಾಧೀಶರೂ ಜನರಲ್ಲಿ ನೈತಿಕ ಮೌಲ್ಯಗಳು ಕುಸಿಯದಂತೆ, ಸಾಂಸ್ಕøತಿಕ ಶ್ರೀಮಂತಿಕೆ ಹೆಚ್ಚಿಸುವ ಕಾರ್ಯ ಮಾಡಿದರೆ ಕಲ್ಯಾಣ ರಾಜ್ಯದ ಕನಸನ್ನು ನನಸು ಮಾಡಬಹುದು.

ಶೋಷಿತರಿಗೆ ಸೌಲಭ್ಯ ಬಯಸುವುದು ತಪ್ಪಲ್ಲ. ಅದು ಕೇವಲ ಒಂದು ಜಾತಿಗೆ ಮೀಸಲಾಗದೆ ಎಲ್ಲರನ್ನೂ ಒಳಗೊಳ್ಳುವಂತೆ ಆಗಬೇಕು. ಕೇವಲ ನಮ್ಮ ಜಾತಿಯವರಿಗೆ ಮಂತ್ರಿಸ್ಥಾನ ನೀಡಬೇಕು, ಟಿಕೆಟ್ ಕೊಡಬೇಕು ಎಂದು ಧಮಕಿ ಹಾಕುವುದು ಒಂದು ರೀತಿಯಲ್ಲಿ ಭಯೋತ್ಪಾದಕರ ಧ್ವನಿಯಾಗಿ ಕೇಳಿಸಬಹುದು. ಇಂದಂತೂ ಮಠಾಧೀಶರ ವರ್ತನೆಯ ಬಗ್ಗೆ ಮಾತನಾಡುವವರು ತುಂಬಾ ವಿರಳ. ಮಾತನಾಡಿದರೂ ಅವರ ಧ್ವನಿ ತುಂಬಾ ಕ್ಷೀಣವಾದುದು. ಗಟ್ಟಿ ಧ್ವನಿಯಲ್ಲಿ ಹೇಳಿ ಏಕೆ ಸ್ವಾಮಿಗಳ ಮತ್ತು ಅವರ ಶಿಷ್ಯರ ಕೋಪ ಶಾಪಕ್ಕೆ ತುತ್ತಾಗಬೇಕು ಎನ್ನುವ ಅಂಜಿಕೆ ಬಹುತೇಕರನ್ನು ಕಾಡುತ್ತಿದೆ. ಹಾಗಾಗಿ ದೃಶ್ಯ ಮತ್ತು ಅಕ್ಷರ ಮಾಧ್ಯಮದವರು, ವಿಚಾರವಂತರು, ರಾಜಕಾರಣಿಗಳು ಸಹ ಅವರ ಸುತ್ತ ಗಿರಕಿ ಹೊಡೆಯುವುದನ್ನು ಕಾಣುತ್ತಿದ್ದೇವೆ. ರಾಜಕಾರಣಿಗಳಿಗೆ ಮಠಾಧೀಶರ ಬೆಂಬಲ. ಮಠಾಧೀಶರಿಗೆ ರಾಜಕಾರಣಿಗಳ ಬೆಂಬಲ. ಒಬ್ಬರು ಮತ್ತೊಬ್ಬರನ್ನು ರಕ್ಷಿಸುವ ಪರಿಸ್ಥಿತಿ. ಹೀಗಾಗದೆ ಮಠಾಧೀಶರು ಕೇವಲ ಜಾತ್ರೆ, ಪಾದಯಾತ್ರೆ, ಸತ್ಯಾಗ್ರಹ, ಆಮರಣ ಉಪವಾಸ, ಸಮಾವೇಶಗಳಲ್ಲಿ ಸಂತೃಪ್ತರಾಗದೆ ಧಾರ್ಮಿಕ, ಸಾಹಿತ್ಯಕ, ಸಾಂಸ್ಕøತಿಕ ಕಾರ್ಯಗಳನ್ನು ಮಾಡುವ ಕಾಯಕದಲ್ಲಿ ನಿರತರಾಗಬೇಕಾಗಿದೆ.

*ಲೇಖಕರು ಚಿತ್ರದುರ್ಗ ಜಿಲ್ಲೆ ಸಾಣೆಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಸ್ವಾಮೀಜಿ.

 

Leave a Reply

Your email address will not be published.