ಮಡದಿ ಕಳೆದುಕೊಂಡು ನಾನು ಉಳಿದೆ!

-ಡಾ.ತ್ರಿಯಂಬಕ ತಾಪಸ

ವಾಹಿನಿಗಳಲ್ಲಿ ವಾರ್ತೆಯಾಗಿ, ಸೋಂಕಿತರ-ಸತ್ತವರ ಸಂಖ್ಯೆಯಾಗಿ ಗೋಚರಿಸುತ್ತಿದ್ದ ಕೋವಿಡ್ ಒಂದು ದಿನ ನಮ್ಮ ಮನೆಯ ಬಾಗಿಲನ್ನೂ ತಟ್ಟಿ ಜೀವನ ಸಂಗಾತಿಯನ್ನು ಕರೆದೊಯ್ದಾಗ…!

ನಾನು ನನ್ನ ಹೆಂಡತಿಯೊಡನೆ ಉತ್ತರ ಕರ್ನಾಟಕದ ಬಿಸಿಲು ಹವೆಯಿಂದ ತಂಪು ಹವೆಯ ಬೆಂಗಳೂರಿಗೆ ಸಾಂದರ್ಭಿಕ ಅನಿವಾರ್ಯತೆಯಿಂದ ಬಂದು ನೆಲೆಸಿ ಹತ್ತು ವರ್ಷಗಳಾದವು. ಅಲ್ಲಿನ ಸಿಡಿಲು-ಗುಡುಗುಗಳ ಮಳೆಯ ನೆನಪು ಇಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳ.

ಆದರೆ ಈ ಜುಲೈ ತಿಂಗಳಿನಲ್ಲಿ ನಮ್ಮ ಮನೆಗೆ ಹೊಸ ರೂಪದ ಸಿಡಿಲೊಂದು ಬಡಿಯಿತು. ಸಿಡಿಲಿನ ಬಡಿತ ಎಷ್ಟು ಆಕಸ್ಮಿಕವೋ, ವಿಧ್ವಂಸಕವೋ ಅಷ್ಟೇ ಪ್ರಖರವಾದ ‘ಕೋವಿಡ್ ಸಿಡಿಲು’! ಇಷ್ಟು ದಿವಸ ದೂರದರ್ಶನದಲ್ಲಿ ಕೋವಿಡ್ ಬಗೆಗಿನ ಹೃದಯ ತಲ್ಲಣಿಸುವಂಥ ವಾರ್ತೆಗಳನ್ನು ನೋಡಿ, ಕೇಳಿ, ದಂಗು ಬಡಿದು, ದುಃಖ ಪಡುತ್ತಿದ್ದವರಿಗೆ ತಮಗೇ ಕೋವಿಡ್ ಬಂದಾಗ ಹೇಗಾಗಿರಬೇಡ!

ಬೆಂಗಳೂರಿನ ಇಂದಿರಾನಗರ ಮತ್ತು ಜೀವನಬಿಮಾ ನಗರದ ಮೂರು ಮನೆಗಳಲ್ಲಿ ನಾವು ಒಟ್ಟು ಆರು ಜೀವಗಳು. 83 ಮತ್ತು 81 ವರ್ಷ ವಯಸ್ಸಿನ ನಾವಿಬ್ಬರು, ನಮ್ಮ ಹಿರಿ ಮಗಳು-ಅಳಿಯರ ಜಾಗರೂಕ ನೆರಳಿನಾಶ್ರಯದಲ್ಲಿ ಪ್ರತ್ಯೇಕ ಸಂಸಾರ ಹೂಡಿ, ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳೊಡನೆ ಹೋರಾಡುತ್ತ, ಈ ಕಠಿಣ ಪರಿಸ್ಥಿತಿಯಲ್ಲೂ ಹಸನ್ಮುಖರಾಗಿ ಜೀವನ ನಡೆಸುತ್ತಿದ್ದೆವು. ನನಗೆ ಮಧುಮೇಹ ಮತ್ತು ಏರು ರಕ್ತದೊತ್ತಡ; ನನ್ನವಳಿಗೆ ತೀವ್ರ ಮಂಡಿ ನೋವು (ಆಥ್ರ್ರೈಟಿಸ್), ರಕ್ತದೊತ್ತಡ ಮತ್ತು ಮೂತ್ರಕೋಶದ ಸಮಸ್ಯೆ. ಇತ್ತೀಚೆಗೆ ಸ್ಟ್ರೋಕ್ ಆಗಿ ದೈಹಿಕವಾಗಿ ಬಹಳ ಕುಂದಿದ್ದಳು.  

ನನ್ನವಳು ನಾಗಪಂಚಮಿ ತಯಾರಿ ಮಾಡುವ ಹುಮ್ಮಸ್ಸಿನಲ್ಲಿ ಕೆಲಸ ಮಾಡಿ ಮೈಕೈ ನೋವೆಂದು ಮಲಗಿಬಿಟ್ಟಳು. ಮರುದಿನ ಸಣ್ಣ ನೆಗಡಿ ಮತ್ತು ಕೆಮ್ಮು ಶುರುವಾಯಿತು. ಜ್ವರವೇನೂ ಇರಲಿಲ್ಲ. ಹೊರಗಿನ ಯಾವುದೇ ಸಂಪರ್ಕವಿಲ್ಲದ ಕಾರಣ ಕೋವಿಡ್ ಆಗಿರಬಹುದೆಂದು ನಮಗೆ ಸಂಶಯ ಕೂಡ ಬರಲಿಲ್ಲ. ಮಾರ್ಚ್ 8ರ ನಂತರ ನಾವಿಬ್ಬರೂ ಮನೆಯ ಹೊಸ್ತಿಲು ಕೂಡ ದಾಟಿರಲಿಲ್ಲ. ಹೀಗಿರುವಾಗ ಅವಳಿಗೆ ವೃಥಾ ಕೋವಿಡ್ ಪರೀಕ್ಷೆ ಮಾಡಿಸಲು ಹೋಗಿ ತೊಂದರೆಯಾದೀತೆಂಬುದೂ ನಮ್ಮೆಲ್ಲರ ಮನಸ್ಸಲ್ಲಿತ್ತು. ಎರಡು ದಿನದಲ್ಲಿ ಜ್ವರ ಕಾಣಿಸಿಕೊಂಡಾಗ ಅವಳ ವೈದ್ಯರಲ್ಲಿ ವಿಮರ್ಶೆ ಮಾಡಿ ಕೋವಿಡ್ ಪರೀಕ್ಷೆ ಮಾಡಿಸಲು ನಿರ್ಣಯಿಸಿದೆವು. ಮನೆಗೇ ಬಂದು ಮೂಗಿನ ದ್ರವದ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾಯಿತು. ಕೋವಿಡ್ ವರದಿಗಾಗಿ ಕಾಯುತ್ತಿದ್ದೆವು. ತಾಯಿಯ ಅನಾರೋಗ್ಯ ಕಾರಣ ಕಿರಿ ಮಗಳು ನಮ್ಮಲ್ಲೇ ತಂಗಿದ್ದಳು.

ಜುಲೈ 27, ಸೋಮವಾರ – ಶ್ರಾವಣ ಶುಕ್ಲ ಸಪ್ತಮಿ. ಮಧ್ಯಾಹ್ನ ಊಟದ ವೇಳೆ ಬೇರೇನೂ ಸೇರದ ಕಾರಣ ನನ್ನ ಹೆಂಡತಿ ಒಂದು ಬಟ್ಟಲು ಪಾಯಸ ತಿಂದು ವಿಶ್ರಾಂತಿ ಮಾಡಿದ್ದಳು. ಮಗಳಿಗೆ ತಾಯಿ ನಿದ್ರಿಸಿಲ್ಲವೆಂದು ಗೊತ್ತಾಗಿ ಏನಾದರೂ ತೊಂದರೆ ಆಗುತ್ತಿದೆಯೇ ಎಂದು ಕೇಳಿದ್ದಾಳೆ. ಆಗ ನನ್ನವಳು ಉಸಿರು ಯಾಕೋ ಭಾರವಾಗಿದೆ ಎಂದು ತಿಳಿಸಿದ್ದಾಳೆ. ಇದು ತುರ್ತು ಪರಿಸ್ಥಿತಿ ಎಂದು ನನ್ನ ಮಗಳಿಗೆ ಕೂಡಲೇ ಅರಿವಾಗಿ ಹೊರಗೆ ಮಲಗಿದ್ದ ನನ್ನನ್ನು, ದೂರವಾಣಿಯ ಮೂಲಕ ಉಳಿದ ಮೂವರನ್ನು ಸಂಪರ್ಕಿಸಿ ಆಸ್ಪತ್ರೆಗೆ ಕರೆದೊಯ್ಯುವ ತಯಾರಿ ನಡೆಸಿದಳು. ಮುಂದರ್ಧ ಗಂಟೆಯಲ್ಲಿ ಹತ್ತಿರವಿದ್ದ ಆಸ್ಪತ್ರೆಗೆ ಎಲ್ಲರೂ ಹೋಗಿ ತಲುಪಿದ್ದರು. ಆಸ್ಪತ್ರೆ ಓಡಾಟ ನನಗೆ ಅಪಾಯವೆಂದು ನನ್ನನ್ನು ಕರೆದೊಯ್ಯಲಿಲ್ಲ.

ಕಪಾಟಿನ ತುಂಬಾ ಬಣ್ಣ ಬಣ್ಣದ ಸುಂದರವಾದ ಸೀರೆಗಳು ತುಂಬಿದ್ದರೂ ತೊಟ್ಟ ಹಳೆಯ ಮನೆಯುಡುಗೆಯಲ್ಲೇ ನನ್ನವಳು ನಡೆದಾಗ ಕಣ್ಣುಗಳು ತುಂಬಿ ಬಂದಿದ್ದವು. ಕಾರಿನಲ್ಲಿ ಮಗಳಿಗೆ ಆತುಕೊಂಡು, ಆಗಾಗ ಅವಳನ್ನು ತಲೆಯೆತ್ತಿ ತೀಕ್ಷ್ಣವಾಗಿ ದೃಷ್ಟಿಸುತ್ತಿದ್ದ ತಾಯಿಯ ಕಣ್ಣಲ್ಲಿ ಅಸಹಾಯಕತೆಯ ಪರಾಕಾಷ್ಠೆಯಿತ್ತಂತೆ. ‘ಇನ್ನು ನಾನು ಒಬ್ಬನೇ ಹೋಗುವದು ನಿಶ್ಚಿತವಾಗಿರುವಾಗ ಯಾರು ಹತ್ತಿರವಿದ್ದು ಏನು ಪ್ರಯೋಜನ?’ ಎಂಬ ಲಕ್ಷ್ಮಣನ ನಿರ್ಯಾಣದ ಮಾತು ಪುನರಾವರ್ತಿತವಾದಂತಿತ್ತು.

ಆಸ್ಪತ್ರೆ ಆವಾರದಲ್ಲಿ ನನ್ನ ಹೆಂಡತಿಯನ್ನು ಕಾರಿಗೇ ಬಂದು ಪರೀಕ್ಷಿಸಿದ ತುರ್ತು ವಿಭಾಗದ ದಾದಿ ಆಮ್ಲಜನಕದ ಕೊರತೆಯಾಗಿದೆ, ತಮ್ಮ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸೌಲಭ್ಯ ಇರುವ ಬೆಡ್ ಇಲ್ಲ, ತಕ್ಷಣ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಿರೆಂದು ಅವಸರಿಸಿದಳು. ಹತ್ತಿರದಲ್ಲೇ ಇದ್ದ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆಗೆ ಕಾರು ಓಡಿತು. ಅಲ್ಲಿಯೂ ಅದೇ ಆಯಿತು. ಪರಿಪರಿಯ ವಿನಂತಿಗಳ ನಂತರ ನನ್ನವಳು ಕೊನೆಯುಸಿರು ಎಳೆಯುತ್ತಿರುವಂತೆಯೇ ತುರ್ತು ಚಿಕಿತ್ಸಾ ವಿಭಾಗದಲ್ಲಿ ತಾತ್ಪೂರ್ತಿಕ ಚಿಕಿತ್ಸೆ ನೀಡಲಾಯಿತು. ಬೇರೆ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಿರೆಂದು ಒತ್ತಡ ಹೆಚ್ಚುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ನೂರಾರು ಫೋನ್ ಮಾಡಿದರೂ ಎಲ್ಲೂ ಬೆಡ್ ಖಾಲಿಯಿಲ್ಲ! 

ಹಿರಿ ಮಗಳ ಸತತ ಪ್ರಯತ್ನ ಫಲಿಸಿ ಅಂತೂ ಕನಕಪುರ ರಸ್ತೆಯ ಒಂದು ಆಸ್ಪತ್ರೆಯಲ್ಲಿ ಬೆಡ್ ಇದೆಯೆಂದು ಭರವಸೆಯ ಮಾತು ಕೇಳಿ ಬಂತು. ಇಷ್ಟರಲ್ಲಿ ನನ್ನವಳ ಕೋವಿಡ್ ವರದಿ ಪಾಸಿಟಿವ್ ಎಂದು ಬಂದಿತ್ತು. ಭರವಸೆಯಿತ್ತಂತೆ ಕನಕಪುರ ರಸ್ತೆಯ ಆಸ್ಪತ್ರೆಯ ಆಂಬ್ಯುಲೆನ್ಸ ಬಂದಿತು. ನನ್ನವಳನ್ನು ಆಂಬ್ಯುಲೆನ್ಸಿಗೆ ಹಸ್ತಾಂತರಿಸಲಾಯಿತು. ಉಳಿದವರಿಗ್ಯಾರಿಗೂ ಪ್ರವೇಶವಿಲ್ಲ. ಕಾರಿನಲ್ಲಿ ನಾವು ಹಿಂಬಾಲಿಸುತ್ತೇವೆಂದೂ, ಧೈರ್ಯದಿಂದಿರು ಎಂದೂ ಅವಳಿಗೆ ಹೇಳಿದ್ದೇ ಅವಳೊಂದಿಗೆ ನಮ್ಮ ಕೊನೆಯ ಮಾತಾಯಿತು. ಆಕ್ಸಿಜನ್ ಮಾಸ್ಕ್ ಇದ್ದಿದ್ದರಿಂದ ಅವಳಿಗೆ ಮಾತಿಗೆ ಅವಕಾಶವಿಲ್ಲ. ಆಸ್ಪತ್ರೆ ಸೇರಿದ ನಂತರ ಅವಳ ಜೊತೆಗೆ ನಮ್ಮೆಲ್ಲರ ಸಂಪರ್ಕ ಕಡಿದು ಹೋಯಿತು. ಆಸ್ಪತ್ರೆಯಿಂದ ಬರುವ ಮಾಹಿತಿಗಳೇ ನಮಗೆ ಆಧಾರವಾದವು.

ಮರುದಿನ ಮಂಗಳವಾರ ಆಕೆಯ ಆಕ್ಸಿಜನ್ ಮಟ್ಟ ಹಾಗೂ ರಕ್ತದೊತ್ತಡದಲ್ಲಿ ಸುಧಾರಣೆಯಾದರೂ ವೆಂಟಿಲೇಟರ್ ಮೇಲೇ ಇರಿಸಲಾಯಿತು. ಕುಟುಂಬದವರ ಪರವಾನಿಗೆ ತೆಗೆದುಕೊಂಡು ಅಲ್ಲಿಯ ವೈದ್ಯರು ಅವಳಿಗೆ ರೆಮ್ಡೆಸೆವಿರ್ ಮದ್ದನ್ನು ನೀಡಿದರು. ಆಕೆಯ ಸ್ಥಿತಿ ಕಳವಳಕಾರಕವಾಗಿದ್ದುದಾಗಿ ಅಲ್ಲಿಯ ವೈದ್ಯರು ತಿಳಿಸಿದ್ದರು. ಅಂದು ರಾತ್ರಿ ನನ್ನಾಕೆ ಆಸ್ಪತ್ರೆಯ ದಾದಿಯನ್ನು ಮನೆಗೆ ಯಾವಾಗ ಕಳಿಸುತ್ತೀರೆಂದು ಕೇಳಿದ್ದಳಂತೆ. ಕೋವಿಡ್ ಚಿಕಿತ್ಸೆಯನ್ನು ಅವಳ ದೇಹ ಮತ್ತು ಮನಸ್ಸು ಎಷ್ಟರ ಮಟ್ಟಿಗೆ ತಡೆದುಕೊಳ್ಳುತ್ತದೆ ಎಂಬುದರ ಮೇಲೆ ಅವಳು ಗುಣವಾಗುವದು ಅವಲಂಬಿಸಿದೆ ಎಂದು ವೈದ್ಯರು ತಿಳಿಸಿದ್ದರು. ಹಾಗೆಯೇ ಇನ್ನೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಅವಳಿಗೆ ಶ್ವಾಸಕೋಶದ ತೀವ್ರ ಇನ್ಫೆಕ್ಷನ್ ಆಗಿದ್ದಾಗಿಯೂ, ಅವಳಿಗೆ ಕೋವಿಡ್ ಅಲ್ಲದೆ ಇರಬಹುದು ಎಂಬುದಾಗಿಯೂ ಅವರ ಅಭಿಪ್ರಾಯವಿತ್ತು.

ನನ್ನ ಮನಃಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ನನಗೆ ಎಲ್ಲವನ್ನು ಸಂಕ್ಷಿಪ್ತವಾಗಿ ತಿಳಿಸಲಾಗುತ್ತಿತ್ತು. ಕೊನೆಗೆ ಮಂಗಳವಾರವೇ ಮಧ್ಯರಾತ್ರಿಯ ನಂತರ, ಬೆಳಗಿನ 1.29ಕ್ಕೆ ಹೃದಯಸ್ತಂಭನದಿಂದ ನನ್ನವಳು ತೀರಿಹೋದಳೆಂಬ ಸಮಾಚಾರ ತಿಳಿಯಿತು. ಎರಡು ದಿನದ ಆಗುಹೋಗುಗಳಿಂದ ಝರ್ಝರಿತಗೊಂಡ ನನಗೆ ಆಗ ತಾನೇ ನಿದ್ರೆ ಆವರಿಸಿತ್ತು. ಸ್ವಲ್ಪ ಸುಧಾರಿಸಿಕೊಂಡು ಎಚ್ಚರವಾದಮೇಲೆ ನನಗೆ ಸುದ್ದಿ ತಿಳಿಸುವದೆಂದು ಎಲ್ಲರೂ ಮಾತನಾಡಿಕೊಂಡಿದ್ದರು. ಬುಧವಾರ ಬೆಳಗಿನ ಜಾವ ನನಗೆ ವಿಷಯ ತಿಳಿಸಿದರು. ಕೋವಿಡ್ ನನ್ನ ಹೆಂಡತಿಯನ್ನು ಬಲಿ ಪಡೆದಿತ್ತು.

ಟಿವಿಯಲ್ಲಿ ಪ್ರತಿ ರಾತ್ರಿ ಕೋವಿಡ್ಗೆ ಆಹುತಿಯಾದವರ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದ ನಮ್ಮೀರ್ವರಲ್ಲಿ ಒಬ್ಬರು ಆ ಪಟ್ಟಿ ಸೇರಿದುದು ನಂಬಲಾರದ ಸತ್ಯವಾಗಿ ಹೋಯಿತು. ಎಲ್ಲ ಮುಗಿದ ಮೇಲೆ ನನ್ನವಳ ಎರಡನೇ ಬಾರಿಯ ಟೆಸ್ಟ್ ಕೂಡ ಪಾಸಿಟಿವ್ ಬಂದಿತು. ಎಂದಿಗೂ ಕೈಲಾದ ಸಾಧನೆ ಮಾಡಬೇಕೆನ್ನುವದೇ ನನ್ನ ಜೀವನದ ತತ್ವ. ಚಟುವಟಿಕೆಯಿಂದ ಓಡಾಡಿಕೊಂಡು, ಓದುವ ಬರೆಯುವ ಹವ್ಯಾಸ ಬೆಳೆಸಿಕೊಂಡು, ಇತ್ತೀಚೆಗೆ ಹೆಂಡತಿಯ ಶುಶ್ರೂಷೆಯೂ ಸೇರಿದಂತೆ, ಮನೆ ನಿರ್ವಹಣೆ ಸಾಗಿಸಿಕೊಂಡು ಬಂದವನಿಗೆ ಪ್ರಪಂಚವೇ ಮುಗಿಯಿತೆನ್ನುವ ಭಾಸವಾಯಿತು. ಹುಯಿಲಗೋಳ ಜಹಗೀರ್ದಾರರ ಮನೆಯಲ್ಲಿ ಜನಿಸಿ, ರಾಜಕುಮಾರಿಯಂತೆ ಬೆಳೆದು, ರಾಣಿಯಂತೆ ಬಾಳಿ, ನನ್ನನ್ನೊಬ್ಬ ಪರಿಪೂರ್ಣ ಮನುಷ್ಯನನ್ನಾಗಿ ಮಾಡಿದ ಕೋಮಲ ಸ್ವಭಾವದ ನನ್ನ ಮೌನಗೌರಿ ಚಿರವಾಗಿ ಮೌನವಾದಳು.

ನನ್ನವಳ ಅಂತಿಮ ದರ್ಶನದ ನಿರೀಕ್ಷೆಯಲ್ಲಿ ಆಸ್ಪತ್ರೆಗೆ ಧಾವಿಸಿದ ನಮಗೆ ಅವಳನ್ನಿರಿಸಿದ ದೇಹದ ಚೀಲದ ಝಿಪ್ ಸರಿಸಿ ದೂರದಿಂದ ಮುಖ ತೋರಿಸಲಾಯಿತು. ಚಿತಾಗಾರದವರೆಗೆ ಹೋಗಲು ಅನುಮತಿ ನೀಡಲಾಗಿತ್ತು. ವಿದ್ಯುತ್ ಸ್ಪರ್ಶಕ್ಕೆ ಕೊಂಡೊಯ್ಯುವಾಗ ದೇಹ ಗುರುತಿಸುವದೊಂದು ಬಿಟ್ಟು ಇತರ ಯಾವ ವಿಧಿ ವಿಧಾನಗಳಿಗೂ ಆಸ್ಪದವಿರಲಿಲ್ಲ. ತಾಯಿಯನ್ನು ಗುರುತಿಸಿ ವಿದ್ಯುತ್ ಸ್ಪರ್ಶಕ್ಕೆ ಅಣಿ ಮಾಡಿ ನನ್ನ ಹೆಣ್ಣುಮಕ್ಕಳು ಮಿಕ್ಕ ಔಪಚಾರಿಕತೆಗಳನ್ನು ಮುಗಿಸಿದರು. ಕೊಳವೆಯಿಂದೆದ್ದ ಹೊಗೆ ನನ್ನವಳು ಪಂಚಭೂತಗಳಲ್ಲಿ ಲೀನವಾಗಿ ಹೋದಳೆಂಬುದನ್ನು ಸೂಚಿಸಿತು. ಎಲ್ಲಕಿಂತ ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳುವದರೊಂದಿಗೆ ನನ್ನ ಜೀವನದ ಮಹತ್ವದ ಅಧ್ಯಾಯವೊಂದು ಸಮಾಪ್ತಿಯಾಯಿತು.

ಇಷ್ಟೆಲ್ಲಾ ಆದರೂ ನನಗೆ ಕೋವಿಡ್ ನ ಯಾವುದೇ ಲಕ್ಷಣಗಳಿರಲಿಲ್ಲ. ಮರುದಿನವೇ ನಾವೆಲ್ಲ ಕೋವಿಡ್ ಪರೀಕ್ಷೆಗೆ ಒಳಪಟ್ಟೆವು. ಅದು ರಾಪಿಡ್ ಟೆಸ್ಟ್ ಆಗಿತ್ತು. ನೆಂಟರಿಷ್ಟರ ಫೋನುಗಳು, ಸಾಂತ್ವನದ ಮಾತುಗಳ ಮಧ್ಯೆ ಸಂಜೆಯಾಯಿತು. ಉಳಿದೆಲ್ಲರಿಗೂ ಕೋವಿಡ್ ನೆಗೆಟಿವ್ ಬಂದು ನನ್ನದು ಪಾಸಿಟಿವ್ ಎಂದು ಟೆಸ್ಟ್ ವರದಿ ಬಂತು. ಆಯಿತಲ್ಲ! ನಾನೂ ಸಹ ಆಸ್ಪತ್ರೆಗೆ ಸೇರಬೇಕಾಯಿತು. ಮತ್ತೆ ಇನ್ನೊಂದು ಹೋರಾಟಕ್ಕೆ ಸಿದ್ಧತೆಗಳು ನಡೆದವು. ನನ್ನಾಕೆಯನ್ನು ನೆನೆಸಿಕೊಳ್ಳುತ್ತಾ ನನಗೆ ನಾನೇ ಧೈರ್ಯ ತಂದುಕೊಂಡೆ. ಯುದ್ಧಕ್ಕೆ ಹೊರಟ ಸೈನಿಕನಂತೆ ಮನಸ್ಸು ಗಟ್ಟಿ ಮಾಡಿಕೊಂಡೆ.

ನನ್ನ ಹಿರಿ ಅಳಿಯ-ಮಗಳ ನಿರಂತರ ಪ್ರಯತ್ನದಿಂದ ಒಂದು ಸುಸಜ್ಜಿತ, ಹೆಸರಾದ ಆಸ್ಪತ್ರೆಯಲ್ಲಿ ಬಿ.ಬಿ.ಎಂ.ಪಿ. ಮುಖಾಂತರ ಪ್ರವೇಶ ಸಿಕ್ಕಿತು. ಅಲ್ಲಿಯ ಸ್ಥಿತಿಗತಿ ನೋಡಿ ನಾನು ಹೌಹಾರಿಬಿಟ್ಟೆ. ನೆಲದ ಮೇಲಿನ ಅಸ್ತವ್ಯಸ್ತ ಅಶುಚಿಯ ಹಾಸಿಗೆಗಳು; ಅವುಗಳನ್ನು ಪ್ರತ್ಯೇಕಿಸುವ ಹೊಲಸು ಪರದೆಗಳು; ನಿರ್ಲಕ್ಷ್ಯದ ದಾದಿಯರ ಸೇವೆ ಇತ್ಯಾದಿಗಳಿಂದ ಕಳವಳವಾಯಿತು. ಅಂದು ಮಧ್ಯರಾತ್ರಿಯ ನಂತರವೂ ತ್ರಿಶಂಕುವಿನಂತೆ ಓಡಾಡುತ್ತಲಿದ್ದ ನನಗೆ ಇನ್ನೊಬ್ಬ ರೋಗಿಯೊಡನೆ ಕೋಣೆ ಹಂಚಿಕೊಂಡು ಇರುವ ವ್ಯವಸ್ಥೆ ಆಯಿತು. ಆಗಸ್ಟ್ 1 ರಿಂದ 9ರ ವರೆಗೆ ನನ್ನ ಚಿಕಿತ್ಸೆ ನಡೆಯಿತು. ನನಗೆ ಆವಾಗಾಲೂ ಕೋವಿಡ್ ಲಕ್ಷಣಗಳಿರಲಿಲ್ಲ. ಆದರೂ ಡಯಾಬಿಟಿಸ್ ಮತ್ತು ಬಿಪಿ ಇದ್ದಿದ್ದರಿಂದ ಬಹಳ ಕಾಳಜಿ ವಹಿಸುತ್ತಿದ್ದರು. ಸ್ಟೆರೊಯ್ಡ್ಸ್ ಕೊಡುತ್ತಿದ್ದರಿಂದ ಶುಗರ್ ಬಹಳ ಏರು ಪೇರಾಗುತ್ತಿತ್ತು. ಒಮ್ಮೆ 40ಕ್ಕೆ ಇಳಿದರೆ ಒಮ್ಮೊಮ್ಮೆ 500 ಆಗುತ್ತಿತ್ತು. ಅಲ್ಲಿನ ವೈದ್ಯರ ವೃತ್ತಿ ನೈಪುಣ್ಯ, ಔಷಧ ಪ್ರಯೋಗ, ಶುಶ್ರೂಷೆ, ಸಹಾನುಭೂತಿಪರ ನಿಲುವು ಪ್ರಶಂಸನೀಯವಾಗಿದ್ದವು.

ನನ್ನ ಕೋವಿಡ್ ಚಿಕಿತ್ಸೆ ನಡೆದಾಗ ನನ್ನ ಡಯಾಬಿಟಿಸ್ ವೈದ್ಯರಾದ ಡಾ.ಚೈತನ್ಯಮೂರ್ತಿಯವರಿಗೆ ನಡೆದದ್ದೆಲ್ಲವನ್ನು ತಿಳಿಸಿದೆವು. ನನ್ನ ಶ್ರೀಮತಿಯ ನಿಧನದ ವಾರ್ತೆಯಿಂದ ಬಹಳ ನೊಂದುಕೊಂಡ ಅವರು ನಮಗೆಲ್ಲ ಸಾಂತ್ವನ ತಿಳಿಸಿ ನನ್ನ ಆರೋಗ್ಯದ ವಿಚಾರವಾಗಿ ಭರವಸೆಯ ಮಾತುಗಳನ್ನಾಡಿದರು. ಆಸ್ಪತ್ರೆಯಿಂದ ಮರಳಿದ ನಂತರ ನನ್ನನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ತನ್ನದು ಎಂದು ತಿಳಿಸಿದರು.

ಇದೆಲ್ಲದರ ಮಧ್ಯೆಯೂ ಮನದಲ್ಲಿ ಹೆಂಡತಿಯ `ಆ’ ಕಡೇ ಗಳಿಗೆಯ ಪ್ರಥಃಕ್ಕರಣ ನಡೆದೇ ಇತ್ತು. ಮನೆಯವರೆಲ್ಲರೂ ಇದ್ದೂ ಯಾರ ಸ್ಪರ್ಶ-ಸಾಮೀಪ್ಯವೂ ಇಲ್ಲದಂತೆ ಗತಿಸಿದಳೆಂಬುದು ಮಾಯಲಾರದ ಗಾಯದಂತಾಗಿತ್ತು. ಕಡೆಯುಸಿರಿನ ಗಳಿಗೆಯಲ್ಲಿ ಅವಳಿಗೆ ಏನು ಹೇಳಬೇಕೆನಿಸಿತ್ತೋ, ಯಾರು ಹತ್ತಿರವಿರಬೇಕಿತ್ತೆಂದು ಚಡಪಡಿಸಿದಳೋ ತಿಳಿಯದೆ ಹೋಯಿತು. ಸತತವಾಗಿ ವೆಂಟಿಲೇಟರ್ ಮೇಲಿದ್ದ ಅವಳನ್ನು ಮಾತಾಡಿಸುವ ನಮ್ಮ ಪ್ರಯತ್ನ ವಿಫಲವಾಗಿದ್ದವು. ಅವಳ ಕೊನೆಯ ಮಾತು ಅವಳಲ್ಲಿಯೇ ಉಳಿದುಹೋಗುವದೆಂದು ವಿಧಿ ಬರೆದಾಗಿಬಿಟ್ಟಿತ್ತು.

ಹತ್ತು ದಿನದ ಆಸ್ಪತ್ರೆ ವಾಸದ ನಂತರ, ನಾನು ತೆಗೆದುಕೊಳ್ಳಬೇಕಾದ ಕಾಳಜಿ ಮತ್ತು ಔಷಧಿಗಳ ವಿವರಗಳೊಂದಿಗೆ ಮನೆಗೆ ಮರಳಲು ವೈದ್ಯರು ಅನುಮತಿ ಕೊಟ್ಟರು. ನನ್ನ ಮನೋಬಲವನ್ನು ಶ್ಲಾಘಿಸಿ ನಾನು ಸಂಪೂರ್ಣ ಗುಣ ಹೊಂದಿದ್ದೇನೆಂದು ತಿಳಿಸಿದರು. ನಾನು ಕೋವಿಡ್ ಯುದ್ಧ ಗೆದ್ದಿದ್ದೆ! ಅವರೆಲ್ಲರಿಗೂ ಶುಭ ಹಾರೈಸಿ, ಮನದಲ್ಲೇ ಆಶೀರ್ವದಿಸಿ ಮನೆ ಸೇರಿದೆ.

ನನ್ನ ಮೊದಲಿನ ಡಯಾಬಿಟಿಸ್ ಔಷಧಿಗಳೆಲ್ಲ ಬದಲಾಗಿಬಿಟ್ಟಿದ್ದವು. ಹೊಸ ಔಷಧಗಳು ಸೇರಿಕೊಂಡಿದ್ದವು. ಸಕ್ಕರೆ ತೀರಾ ಹೆಚ್ಚಿಗೆಯೇ ಇರುತ್ತಿತ್ತು. ಅದು ಸ್ಟೀರಾಯ್ಡ್ ಪರಿಣಾಮ ಎಂದು ಡಾ.ಚೈತನ್ಯಮೂರ್ತಿ ಖಚಿತಪಡಿಸಿ ಸೂಕ್ತ ಇನ್ಸುಲಿನ್ ನೀಡಿದರು. ಸತತವಾಗಿ ನಮ್ಮ ಸಂಪರ್ಕದಲ್ಲಿದ್ದ ಅವರು ಎಷ್ಟೇ ವ್ಯಸ್ತರಾಗಿದ್ದರೂ ನಮ್ಮ ದೂರವಾಣಿ ಕರೆಗಳಿಗೆ, ಸಂದೇಶಗಳಿಗೆ ತಕ್ಷಣವೇ ಉತ್ತರಿಸುತ್ತಿದ್ದರು. ನೊಂದ ನಮ್ಮಲ್ಲಿ ತಮ್ಮ ಹೆಸರಿಗನುಗುಣವಾಗಿ ಪುನಃ ಚೈತನ್ಯ ಮೂಡುವಂತೆ ಮಾಡಿದ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ವೈದ್ಯರ ಸೂಚನೆಯಂತೆ ಮನೆಗೆ ಬಂದ ನಂತರ ಹತ್ತು ದಿನ ಕ್ವಾರಂಟೈನ್ ಆಗಬೇಕಾಯಿತು. ಆಗ ನನ್ನನ್ನು ಏಕಾಂಗಿತನ ಬಹಳವಾಗಿ ಕಾಡಿತು. ಇದೊಂದು ರೋಗ, ಇದರಿಂದ ಪೀಡಿತರಾದವರಿಗೆ ಕೆಲವು ನಿರ್ಬಂಧನೆಗಳಿವೆ ಎಂದು ಮನಸ್ಸಿಗೆ ಗೊತ್ತಿದ್ದರೂ ಹೃದಯಕ್ಕೆ ತೀವ್ರ ಹಿಂಸೆಯಾಗುತ್ತದೆ. ಯಾವ ಮನೆಯಲ್ಲಿ ನಾನು ನನ್ನ ಹೆಂಡತಿ ಹೆಮ್ಮೆ-ನಲುಮೆಗಳಿಂದ ಜೀವಿಸಿದ್ದೆವೋ ಆ ಮನೆಯಲ್ಲಿಯೇ ನಾನೊಬ್ಬನೆ ಪಿಶಾಚಿಯಂತೆ ಓಡಾಡಿಕೊಂಡಿರಬೇಕಾದ ಅನಿವಾರ್ಯ ಪ್ರಸಂಗ! ಕೋವಿಡ್‍ನಿಂದ ನನ್ನ ಹಾಗೆ ಜೊತೆ ಕಳೆದುಕೊಂಡು ಜೀವಸಹಿತ ಉಳಿದುಕೊಂಡವರ ಮನೆಗಳಲ್ಲಿನ ವಾತಾವರಣ ನೆನೆಸಿಕೊಂಡು ಖಿನ್ನನಾದೆನು. ಕೋವಿಡ್‍ನ ಕ್ರೂರತೆ ಏನೆಂಬುದು ಅದು ಆದವರಿಗೆ ಮತ್ತು ಅವರ ಕುಟುಂಬದವರಿಗೆ ಮಾತ್ರ ತಿಳಿಯಲು ಸಾಧ್ಯ. ನನ್ನ ಮನೋಬಲ, ಧೈರ್ಯ, ಸ್ಥೈರ್ಯಗಳನ್ನು ನನ್ನ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹೆಮ್ಮೆಯಿಂದ ಕಾಣುತ್ತಾರೆ. ಅವರ ಹೆಮ್ಮೆಗೆ ಪಾತ್ರನಾಗಲು ನನಗೆ ಸಾಧ್ಯವಾದುದಕ್ಕೆ ದೇವರಲ್ಲಿ ಅನಂತಾನಂತ ನಮನಗಳು.

ಕ್ವಾರಂಟೈನ್ ಮುಗಿದ ಮೇಲೆ ಮತ್ತೆ ಕುಟುಂಬದಲ್ಲಿ ಒಂದಾಗಿ ಹೋದೆ. ದಿನಕ್ಕೆ ಏಳೆಂಟು ಸಲ ಶುಗರ್ ಟೆಸ್ಟ್ ಮಾಡಿಕೊಂಡು ವೈದ್ಯರಿಗೆ ತಿಳಿಸಬೇಕಾಗುತ್ತಿತ್ತು. ಕೋವಿಡ್ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಒಂದು ತಿಂಗಳವರೆಗೆ ಇನ್ಹೇಲರ್ ಮತ್ತು ಎರಡು ತಿಂಗಳ ಕಾಲ ಮಲ್ಟಿ ವಿಟಮಿನ್ ತೆಗೆದುಕೊಂಡೆ. ಕ್ರಮೇಣ ನನ್ನ ಸಕ್ಕರೆಯ ಮಟ್ಟ ತಹಬಂದಿಗೆ ಬಂದಿತು. ಆನಂತರ ನನ್ನ ಮೊದಲಿನ ಔಷಧಿಗಳನ್ನೇ ತೆಗೆದುಕೊಳ್ಳಲು ಡಾ.ಚೈತನ್ಯಮೂರ್ತಿ ಸೂಚಿಸಿದರು. ತಿಂಗಳಿಗೊಮ್ಮೆ, ಅವಶ್ಯವಿದ್ದಲ್ಲಿ ವಾರಕ್ಕೊಂದು ಬಾರಿ, ರಕ್ತ ಪರೀಕ್ಷೆಗಳು ನಡೆಯುತ್ತಲಿವೆ.

ನನ್ನವಳನ್ನು ಅಗಲಿದ ದುಃಖ ಕಿತ್ತು ತಿನ್ನುತ್ತಿದ್ದರೂ, ನನ್ನ ಮಕ್ಕಳು, ಅಳಿಯಂದಿರು ಹಾಗು ಮೊಮ್ಮಕ್ಕಳು ನನ್ನಲ್ಲಿ ನನ್ನವಳನ್ನೂ ಕಾಣಲು ಹಂಬಲಿಸುತ್ತಿರುವರೆಂದು ತಿಳಿದಿದೆ. ನನ್ನ ಹೆಂಡತಿಯ ಆತ್ಮವೂ ಇದನ್ನೇ ಬಯಸುವದಲ್ಲವೇ ಎಂದು ಮನಸ್ಸು ಸಾಂತ್ವನ ಹೇಳುತ್ತದೆ. ಸ್ವಯಂ ಪ್ರೇರಣೆ, ಮತ್ತೊಂದಷ್ಟು ಕುಟುಂಬದವರ ಆಗ್ರಹದ ಮೇರೆಗೆ ಮತ್ತೆ ಕೈಯಲ್ಲಿ ಲೇಖನಿ ಹಿಡಿದಿದ್ದೇನೆ. ಹೆಂಡತಿಯ ಭಾವಚಿತ್ರ ಎದುರಿಗಿಟ್ಟುಕೊಂಡು ಮುಂದಿನ ಜೀವನಕ್ಕೆ ಬೇಕಾದ ಮನೋಬಲವನ್ನು ಒಟ್ಟು ಮಾಡಿಕೊಳ್ಳುತ್ತೇನೆ. ನಾನು ಮಹಾಮಾರಿ ಕೋವಿಡ್ ಗೆದ್ದು ಬಂದೆನೆಂಬ ಸಮಾಧಾನದ ಬೆನ್ನಲ್ಲಿಯೇ ನನ್ನವಳನ್ನು ಕಳೆದುಕೊಂಡ ದುಗುಡವಿದೆ. ಬದುಕು ಜಟಕಾ ಬಂಡಿಯಂತೆ. ದೇವರ ದಯೆಯಿಂದ ನನ್ನ ಜೊತೆಗೆ ಬಂಡಿಯ ಇನ್ನೊಂದು ಚಕ್ರವಾಗಿ ನನ್ನ ಪ್ರೀತಿಯ ಕುಟುಂಬವಿದೆ.  

*ಲೇಖಕರು ಮೂಲತಃ ಗದಗದವರು; ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದಲ್ಲಿ ಎಂಎ, ಪಿ.ಎಚ್.ಡಿ., ಬಿಕಾಂ ಪದವೀಧರರು. ನಿವೃತ್ತ ಉಪನ್ಯಾಸಕರು. ವ್ಯಕ್ತಿತ್ವ ವಿಕಾಸ, ಸಂವಹನ ಕೌಶಲ, ಹಿಮಾಲಯ ಸಂಚಾರ, ಆರ್.ಕೆ.ನಾರಾಯಣರ ಮಾಲ್ಗುಡಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

Leave a Reply

Your email address will not be published.