ಮತ್ತೆ ಬಾರದ ಆ ದಿನಗಳು…

– ಶಿ.ಕಾ.ಬಡಿಗೇರ

‘ಐರಾವಣಮಹಿರಾವಣ’ ಎಂಬಬಯಲಾಟನನ್ನಮನದಆಳದಲ್ಲಿಇಂದಿಗೂಬೇರೂರಿದೆ. ಅದರಲ್ಲಿಯಒಂದುಪಾತ್ರಹನುಮಂತ. ಆಪಾತ್ರಧಾರಿ ಹುಲುಗಪ್ಪ ಆಟದಲ್ಲಿ ಮಂಗವೇ ಆಗಿಬಿಡುತ್ತಿದ್ದ. ಅವನಬಾಲ, ಮರದಲ್ಲಿನಹಣ್ಣು ಕಿತ್ತುವಪರಿ   ಹಾಗೂ ಜಿಗಿಯುವರೀತಿ ನನ್ನೊಳಗೆ ಸಂಚಲನ ಮೂಡಿಸುತ್ತಿತ್ತು. 

ನಮ್ಮೂರು ಕೊಪ್ಪಳ ನಗರದ ವಾಯವ್ಯ ದಿಕ್ಕಿಗೆ ಕೂಗಳತೆಯ ಅಂತರದಲ್ಲಿದೆ. ಮೊದಮೊದಲು ಎತ್ತಿನಹಟ್ಟಿ, ಯತ್ತಿನಹಟ್ಟಿ ಎಂದೇ ಜನಜನಿತ. ಈಗೀಗ ಎಲ್ಲರ       ಬಾಯಲ್ಲೂ ‘ಯತ್ನಟ್ಟಿ ‘ ಎಂಬ ಸಂಬೋಧನೆ.

 ಆರಕ್ಷರಗಳಿಂದ ಮೂರಕ್ಷರಕ್ಕೆ ತಂದ ಕೀರ್ತಿ ಈಗಿನ ಹೊಸ ಪೀಳಿಗೆಯದು. ಪ್ರಾಚೀನತೆಯ ಕುರುಹು ಊರ ಮುಂದಿನ ಹನುಮಪ್ಪನ ಗುಡಿ ಈಗಲೂ ಸುಭದ್ರವಾಗಿದೆ.

ನನ್ನ ಬಾಲ್ಯದ ದಿನಗಳಲ್ಲಿ ಕೇವಲ ಎಪ್ಪತ್ತರಿಂದ ಎಂಬತ್ತು ಮನೆಗಳು ಮಾತ್ರ ಇದ್ದದ್ದು ನನಗೆ ನೆನಪುಂಟು. ಈಗ ಹೊಸ ಹೊಸ ಲೇಔಟುಗಳು ತಲೆ ಎತ್ತಿ ನಿಂತಿವೆ. ಮೂರು ನೂರಕ್ಕೂ ಮಿಕ್ಕಿ ಮನೆಗಳಾಗಿವೆ.

ಅಪ್ಪಟ ಆಧುನಿಕತೆಯ ಗಾಳಿ ಎಲ್ಲರ ಮನೆಯಲ್ಲೂ ಬೀಸುತ್ತಿದೆ. ಊರ ಮುಂದೆ ಮಳೆಗಾಲದಲ್ಲಿ ಹರಿಯುತ್ತಿದ್ದ ಲಂಗಟ್ಯಾನ ಹಳ್ಳವನ್ನು ಇತ್ತೀಚೆಗೆ ಕಾಲಿಟ್ಟ ಡಾಂಬರು ರಸ್ತೆ ತನ್ನ ಬೆನ್ನ ಕೆಳಗೆ ಹಾಕಿ ಗಡದ್ದಾಗಿ ಮಲಗಿದೆ. ಊರ ಸುತ್ತ ಸೊಂಟಕ್ಕೆ ಸುತ್ತಿಕೊಳ್ಳುವ ಉಡುದಾರದಂತೆ, ಕಳ್ಳಿ ಸಾಲುಗಳ ಸೆರಗು ಭದ್ರ ಕೋಟೆಯಂತೆ ಕಾಣುತ್ತಿದ್ದವು. ಈಗ ಔಷಧಿಗೆ ಬೇಕೆಂದರೂ ಸಿಗವು. ಕಾಲ ಅದೆಲ್ಲವನ್ನು ತಿಂದು ಹಾಕಿದೆ.

ಸಂಜೆಯಾದರೆ ಗೌಡರ, ಶಾನುಭೋಗರ ಮನೆಗಳ ದನದ ಹಿಂಡು ನೋಡುವುದೊಂದು ಹಬ್ಬದ ಖುಷಿಯೇ ಸರಿ. ಮುಂಜಾನೆ ಮೇಯಲು ಹೋದ ದನಗಳು ಮರಳಿ ಮನೆಗೆ ಬರುವ ಹೊತ್ತು. ಗೋಧೂಳಿ ಅನ್ನುತ್ತೇವಲ್ಲ ಅದು.

ದನಗಳು ಊರ ಅಗಸಿಗೆ ಬರುವ ಮುಂಚೆಯೇ, ಅವರ ಮನೆಯ ಆಳು ಬಾರುಕೋಲು ನೆಲಕ್ಕೆ ಚಟ್ ಚಟ್ ಅಂತ ಜೋರಾಗಿ ಬಾರಿಸಿ, ‘ದನ ಬಂದ್ವು ಓಳಾಗ್ರಿ’ ಎಂದು ಜೋರು ದನಿಯಲ್ಲಿ ಕೂಗುತ್ತಿದ್ದ. ಅಬ್ಬಾ! ಯಾವ್ಯಾವ ತಳಿಯ ದನಗಳೋ  ಒಂದರಿಂದ ನೂರು ದಾಟುವತನಕ ನಮ್ಮ ಎಣಿಕೆ. ನಾಲ್ಕಾರು ಹಿಂಡುಗಳು. ಈಗ ನೋಡಲು ಹಿಂಡು ಬಿಡಿ, ಒಂದೂ ಸಿಗುತ್ತಿಲ್ಲ. ಊರ ಗೌಡರನ್ನು ನೋಡುವ ಪರಿಯೂ ನಮ್ಮಲ್ಲಿ ಕುತೂಹಲ ಹುಟ್ಟಿಸುತ್ತಿತ್ತು. ಮಹಿಳೆಯರಂತೂ ಗೌಡರ ಕುದುರೆ ಬರುವುದನ್ನು ಕಂಡು ತಲೆ ತುಂಬ ಸೀರೆ ಸೆರಗು ಹೊದ್ದು ಅವರು ಬರುವ ದಾರಿಯ ಎಡಕ್ಕೊ ಇಲ್ಲವೆ ಬಲಕ್ಕೊ ಅವರನ್ನು ಚೂರೂ ನೋಡದೆ ನಿಂತು ಗೌರವಿಸುತ್ತಿದ್ದರು.

ಊರ ಮುಂದಿನ ಹಿರೇಹಳ್ಳದ ಕಥೆ ಹೇಳದಿದ್ದರೆ ನಮ್ಮ ಊರಿನ ಇತಿಹಾಸ ಅಪೂರ್ಣವೇ ಸರಿ. ಪುರಾಣದ ಹೆಸರು ಋಷಾವತಿ. ನಮ್ಮ ಬಾಲ್ಯದ ಕಾಲಕ್ಕೆ ಬತ್ತಿದ ನೆನಪಂತೂ ನನಗಿಲ್ಲ. ಜಾತಿಗೊಂದು ಒರತೆ ಹಳ್ಳದಲ್ಲಿ ಅಲ್ಲಲ್ಲಿ ಬೆಳಕಿಂಡಿಯಂತೆ ಕಾಣುತ್ತಿದ್ದವು. ಇಡೀ ಜಿಲ್ಲೆಗೆ ಮರಳು ಮತ್ತು ಅದರ ದಡಕ್ಕೆ ಹೊಂದಿಕೊಂಡ ಎಲ್ಲಾ ಊರುಗಳಿಗೆ ನೀರುಣಿಸಿದ ಕೀರ್ತಿ ಅದಕ್ಕಿದೆ. ವರ್ತಮಾನದ ಅದರ ಜೀವನ ಶೈಲಿಯಂತೂ ಕರುಣಾಜನಕ ಸ್ಥಿತಿ ತಲುಪಿದೆ. ಅದರ ಒಡಲೊಳಗೆ ಒಂದು ಬೊಗಸೆಯಾದ್ರೂ ಮರಳು ಕಾಣುವುದು ಕನಸಿನ ಮಾತಾಗಿದೆ. ಬರೀ ಎರಿ ಮಣ್ಣು ತುಂಬಿಕೊಂಡಿದ್ದಕ್ಕೆ ಅಕ್ಕಪಕ್ಕದ ಹೊಲದ ಮಾಲೀಕರು ಹಳ್ಳದ ಅರ್ಧ ಭಾಗವನ್ನೇ ಆಕ್ರಮಿಸಿಕೊಂಡು, ಫಸಲು ತೆಗೆಯುತ್ತಿದ್ದಾರೆ. ಮತ್ತೆ ಕೆಲವರು ಇದ್ದಷ್ಟು ಮರಳನ್ನು ಗೆಬರಿ ಗೆಬರಿ ಗುಡ್ಡೆ ಹಾಕಿಕೊಂಡು ಮಾರಿಕೊಳ್ಳುವ ಹಾದಿ ಕಂಡುಕೊಂಡಿದ್ದಾರೆ. ಹಳ್ಳದ ಒಡಲೀಗ ಕಸ, ಕಡ್ಡಿಗಳ ಬೀಡಾಗಿದೆ. ಬೊಗಸೆ ನೀರೂ ಸಿಗದ ಅವಳ ಒಡಲೀಗ ಬಂಜರಾಗಿ, ಹಸಿರು ಪ್ರೀತಿಸುವವರ ಒಡಲಿಗೆ ಕಿಚ್ಚಿಟ್ಟಂತಾಗಿದೆ.

ಇಲ್ಲೀಗ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಕಾಲಿಡುತ್ತಿಲ್ಲ. ಇಡೀ ಊರಿನ ಜೀವನಾಡಿಯೇ ನಿರ್ಜೀವಗೊಂಡು ಪ್ರಕೃತಿಯ ಮೇಲಿನ ಮನುಷ್ಯನ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತುಕೊಂಡಿದೆ.

ಊರಲ್ಲಿದ್ದದ್ದು ಮತ್ತು ಈಗಿರುವದು ಎರಡೇ ಧರ್ಮದ ಜನ. ನಾಲ್ಕಾರು ಜಾತಿಗಳು. ಈಗಲೂ ಅವೇ ಇವೆ. ಧರ್ಮ ಇಲ್ಲವೆ ಜಾತಿಯ ಹೆಸರಿನಲ್ಲಿ ಒಂದಿನವೂ ತಕರಾರು, ಜಗಳ ಮತ್ತು ವೈಮನಸ್ಸುಗಳು ನಡೆದ ನೆನಪು ನನಗಿಲ್ಲ. ಮಸೀದಿ ಹಾಗೂ ಗುಡಿಗಳಿಗೆ ಭಿನ್ನತೆಗಳಿಲ್ಲ. ಸಮನ್ವಯತೆಗೆ ನನ್ನ ಊರು ಯಾವತ್ತೂ ಹೆಸರುವಾಸಿ. ಊರಿನ ಮುಖ್ಯ ಆರಾಧ್ಯದೈವ ಬಸವರಾಜೇಂದ್ರ ಸ್ವಾಮಿ. ವರುಷಕ್ಕೊಮ್ಮೆ ಜರಗುವ ಜಾತ್ರೆಯಲ್ಲಿ ಇಡೀ ಊರೇ ಮುಗಿಬಿದ್ದು ಯಶಸ್ವಿಗೊಳಿಸುವ ಪರಿ ಅಚ್ಚರಿಪಡುವಂತಹ ಸಂಗತಿ.

ಸರಕಾರಿ ಶಾಲೆ ಬಿಟ್ಟರೆ, ಖಾಸಗಿ ಶಾಲೆಗಳ ವಾಸನೆ ಈ ತನಕವೂ ಯಾರ ಮೂಗಿಗೂ ಬಡಿಯದಿರುವದು ಸೋಜಿಗದ ಸಂಗತಿಯೇ. ನಾಲ್ಕನೆಯ ತರಗತಿಯವರೆಗೆ ಮಾತ್ರ ಇದ್ದ ಶಾಲೆ, ಈಗೀಗ ಏಳನೆಯ ತರಗತಿಯವರೆಗೆ ವಿಸ್ತರಗೊಂಡಿದೆ. ‘ಕವಿರಾಜಮಾರ್ಗ’ ಕೃತಿಕಾರ ಶ್ರೀವಿಜಯ ಹೇಳುವಂತೆ ನಮ್ಮದು ತಿರುಳ್ಗನ್ನಡ ನಾಡು. ಅಚ್ಚ ಕನ್ನಡ ಹೊರತು ಯಾವ ಪದಗಳ ಎರವಲು ಇಲ್ಲಿಯ ಭಾಷೆ ಪಡೆದುಕೊಳ್ಳದಿರುವುದು ಹೆಮ್ಮೆಯ ಸಂಗತಿ. ಅಂದ ಮಾತ್ರಕ್ಕೆ ಆಂಗ್ಲ ಪದಗಳ ಪ್ರಯೋಗ ಇಲ್ಲವೆಂದು ನಾನು ಹೇಳಲಾರೆ.

ಹಳೆ ತಲೆಮಾರಿನ ಜನ ಆಡುನುಡಿಯನ್ನು ಯಾವತ್ತೂ ಬಿಟ್ಟಿಲ್ಲ. ಅದಕ್ಕೊಂದು ಸ್ಯಾಂಪಲ್ ಇಲ್ಲಿದೆ. ‘ಏಂಪಾ ಮಾವ, ಆರಾಮದಿ? ಅತ್ತಿ ಯಂಗದಾಳ? ಅಳಿಯಾ ಬರ್ಲಿಲ್ಲೇನು? ಮನ್ಯಾಗೆಲ್ಲಾರೂ ಬೇಸಿ ಅದರಿಲ್ಲೋ? ಬೇಸ್ಯಾತ್ಬುಡು, ಇರ್ಬೇಕ ಏನ್ ಮತ್ಯಾ ಒಂಡ್ಬೇಕಾ? ಔದಾ? ಅಂಗಾರ ಬೇಗ್ಸ್ಯಾರೆ ಮನಿಕಡೆ ಬಂದೋಗು, ಚೂರು ಮಾತಾಡದದ… ಬೇಸ್ತ್ಯಾರ ನಾನು ತಟಗು ಬರಾವ ಅದಿನಿ. ನಮ್ಕಾಕಾಗ ಒಂದ್ಮಾತೇಳಾದಿತ್ತು, ಅದ್ಕ ಬಂದಿದ್ರ ಬೇಸಿತ್ತು’. ಇಂಥ ಭಾಷೆ ಇನ್ನೂ ನಮ್ಮೂರ ಜನರ ಬಾಯೊಳಗ ಅದ ಅನ್ನೋ ಖುಷಿ ನನಗದ.

ನನ್ನೂರಿನ ವಿಶೇಷತೆ ಇನ್ನೊಂದಿದೆ. ಒಬ್ಬರಿಗೊಬ್ಬರು ಗೌರವಿಸುವ ಪರಿ, ಲೋಕರೂಢಿ ಅನ್ನುವುದು ಇಲ್ಲಿ ಹೆಜ್ಜೆಹೆಜ್ಜೆಗೂ ಕಾಣಬಹುದು. ತಂಗಿ, ಯಕ್ಕ, ಮಾವ, ಎತ್ತಿ, ಕಾಕ, ಚಿಗವ್ವ, ದೊಡ್ಡಪ್ಪ, ದೊಡ್ಡವ್ವ ಹಾಗೂ ಸೊಸಿ ಮುಂತಾದ ಸಂಬಂಧ ಸೂಚಕ ಪದ ಬಳಸಿ ಮಾತಾಡುತ್ತಾರೆ.

ನನ್ನ ಬಾಲ್ಯದ ದಿನಗಳಲ್ಲಿ ಕೇರಿಯಲ್ಲಿ ಪ್ರಯೋಗಿಸುತ್ತಿದ್ದ ಬಯಲಾಟ, ನನ್ನನ್ನು ಈಗಲೂ ಹಿಂದಕ್ಕೆ (ಬಾಲ್ಯಕ್ಕೆ) ಕರೆದೊಯ್ಯುತ್ತದೆ. ‘ಐರಾವಣ ಮಹಿರಾವಣ’ ಎಂಬ ಬಯಲಾಟ ನನ್ನ ಮನದ ಆಳದಲ್ಲಿ ಇಂದಿಗೂ ಬೇರೂರಿದೆ. ಅದರಲ್ಲಿಯ ಒಂದು ಪಾತ್ರ ಹನುಮಂತ. ಆ ಪಾತ್ರಧಾರಿ ಹುಲುಗಪ್ಪ ಆಟದಲ್ಲಿ ಮಂಗವೇ ಆಗಿ ಬಿಡುತ್ತಿದ್ದ. ಅವನ ಬಾಲ, ಮರದಲ್ಲಿನ ಹಣ್ಣು ಕಿತ್ತುವಪರಿ ಹಾಗೂ ಜಿಗಿಯುವ ರೀತಿ ನನ್ನೊಳಗೆ ಸಂಚಲನ ಮೂಡಿಸುತ್ತಿತ್ತು.

ಕೃಷಿ ಮತ್ತು ಹೈನುಗಾರಿಕೆ ಈ ಊರಿನ ಪ್ರಮುಖ ಕೆಲಸಗಳು. ಎತ್ತುಗಳ ಸಂಖ್ಯೆ ತುಂಬಾ ವಿರಳ. ಯಂತ್ರೋಪಕರಣಗಳ ಸಹಾಯದಿಂದ ಬೇಸಾಯ ಮಾಡುತ್ತಿದ್ದಾರೆ.

ಮೊದಮೊದಲು ಇಡೀ ಊರೇ ಅನಕ್ಷರತೆಯಿಂದ ಕೂಡಿತ್ತು. ಈಗೀಗ ಎಲ್ಲರ ಮನೆಯೊಳಗೂ ವಿದ್ಯಾವಂತರಿದ್ದಾರೆ. ಆದರೆ ಉನ್ನತ ಶಿಕ್ಷಣ ಪಡೆದವರು ಬಲು ಕಡಿಮೆ.

ಇಂಥ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ಸಾಮರಸ್ಯ ಹೊಂದಿದ್ದ ನನ್ನ ಊರು ಇವತ್ತು ತನ್ನ ಮೂಲ ಬೇರುಗಳನ್ನು ಕಳೆದುಕೊಂಡು, ಜಾಳಾದ ಆಧುನಿಕತೆಯ ಹಿಡಿತಕ್ಕೆ ಸಿಕ್ಕು ನಲುಗುತ್ತಿದೆ. ಟಿವಿ ಹಾಗೂ ಮೋಬೈಲ್ ಹಾವಳಿಯಲ್ಲಿ ಇವತ್ತಿನ ಯುವ ಪೀಳಿಗೆ ಸಿಕ್ಕಿ ನಲುಗುತ್ತಿರುವುದು ನನಗೆ ಸಂಕಟದ ಸಂಗತಿ.

*ಇಂಗ್ಲಿಷ್‍ನಲ್ಲಿ ಎಂಎ ಪದವಿ ಪಡೆದ ಲೇಖಕರು ಇಂಗ್ಲಿಷ್ ದಿನಪತ್ರಿಕೆಯಲ್ಲಿ 7 ವರ್ಷಗಳ ಕಾಲ ವರದಿಗಾರರಾಗಿದ್ದರು. ‘ಕವಿತೆ ಅಚ್ಚಾಗುವದಿಲ್ಲ’ ಕವನ ಸಂಕಲನ, ನಾಲ್ಕು ಹನಿಗವನ ಸಂಕಲನ, ‘ಕೊನೆ ಎಲೆ’ ಅನುವಾದಿತ ಕಥಾಸಂಕಲನ ಪ್ರಕಟಿಸಿದ್ದಾರೆ. ಪ್ರಸ್ತುತ ಕೊಪ್ಪಳದ ಖಾಸಗಿ ಸಂಸ್ಥೆಯ ಪದವಿ ಕಾಲೇಜಿಲ್ಲಿ ಉಪನ್ಯಾಸಕರು.

Leave a Reply

Your email address will not be published.