ಮತ್ತೊಂದು ಅಂಗೋಲಾ ಆಗುವುದು ಬೇಡ!

-ಪ್ರಸಾದ್ ನಾಯ್ಕ್

2020 ನಿಸ್ಸಂದೇಹವಾಗಿ ಹಲವು ನಿರಾಶೆಗಳನ್ನು ಹೊತ್ತುತಂದ ವರ್ಷ. ತೀರಾ ಹಾಲಿವುಡ್ ಶೈಲಿಯಲ್ಲಿ ಬಂದಪ್ಪಳಿಸಿದ ಕೊರೊನಾ ಮಹಮ್ಮಾರಿ ಜಗತ್ತಿನಾದ್ಯಂತ ಎಲ್ಲರನ್ನೂ ಕಾಡಿತು. ಈಚೆಗೆ ಮಿತ್ರರೊಬ್ಬರೊಂದಿಗೆ ಮಾತನಾಡುತ್ತಾ ವಿಶ್ವಯುದ್ಧ-1 ಮತ್ತು 2 ರ ಅವಧಿಯಂತೆ ನಾವೂ ಕೂಡ ಕಾಲಚಕ್ರದ ಮಹಾಪಲ್ಲಟವೊಂದಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದು ಹೇಳಿಕೊಂಡೆ. ನಿಸ್ಸಂದೇಹವಾಗಿ ಹಲವು ವರ್ಷಗಳ ಕಾಲ ನೆನಪಿ ನಲ್ಲುಳಿಯುವ ಮಹತ್ವದ ಕಾಲ ಘಟ್ಟವಿದು.

2021ನ್ನು ಸ್ವಾಗತಿಸುವ ಭರದಲ್ಲಿ ಎಂದಿನಂತೆ ಈ ಬಾರಿಯೂ ನಿರೀಕ್ಷೆಗಳಿರುವುದು ಸ್ಪಷ್ಟ. ವೈಯಕ್ತಿಕ ನೆಲೆಯ ಅಂಶಗಳು ಏನೇ ಇರಲಿ. ಓರ್ವ ಬರಹಗಾರನಾಗಿ ನಮ್ಮ ಸುತ್ತಮುತ್ತಲ ವಿದ್ಯಮಾನಗಳ ಬಗ್ಗೆ ಬಹಳ ಕುತೂಹಲ ಮತ್ತು ಸಹಜ ಆಸಕ್ತಿಯಿಂದ ನೋಡುವವನು ನಾನು. ತಾನು ಅಪೊಲಿಟಿಕಲ್ ಎನ್ನುತ್ತಾ ಪ್ರಚಲಿತ ವಿದ್ಯಮಾನಗಳಿಂದ ದೂರವಿರುವಂತೆ ಕಾಣುವ ಯಾವ ಸೃಜನಶೀಲ ವ್ಯಕ್ತಿಯೂ ಪ್ರಚಲಿತ ವಿದ್ಯಮಾನಗಳ ಪರಿಣಾಮಗಳಿಂದ ದೂರವಿರುವುದು ಸಾಧ್ಯವೇ ಇಲ್ಲ. ಅರಿಸ್ಟಾಟಲ್ ಹೇಳಿದಂತೆ ಸಾಮಾಜಿಕ ಪ್ರಾಣಿಯಾಗಿರುವ ಮಾನವನಿಗೆ ಈ ಆಯ್ಕೆಯೂ ಇಲ್ಲ. ಬ್ರೆಕ್ಟ್ ಹೇಳುವಂತೆ ಅದು ಹಿತವೂ ಅಲ್ಲ.

ಕೆಲ ವರ್ಷಗಳ ಕಾಲ ಆಫ್ರಿಕಾದ ರಿಪಬ್ಲಿಕ್ ಆಫ್ ಅಂಗೋಲಾ ದೇಶದಲ್ಲಿದ್ದ ನಾನು ಪ್ರಭುತ್ವದ ಪ್ರೊಪಗಾಂಡಾ ಶಕ್ತಿಯನ್ನು ಹತ್ತಿರದಿಂದ ಕಂಡವನು. ಹೀಗಾಗಿ ನಮ್ಮ ನಡುವಿನ ವ್ಯಕ್ತಿಗಳು ಕೆಲ ದೇಶಗಳಲ್ಲಿರುವ ಸರ್ವಾಧಿಕಾರಿ ವ್ಯವಸ್ಥೆಯನ್ನು ಅದೊಂದು ಸೊಗಸೇನೋ ಎಂಬಂತೆ ಕಲ್ಪಿಸಿಕೊಳ್ಳುವುದನ್ನು ಕಂಡಾಗ ಸೋಜಿಗಕ್ಕೊಳಗಾದವನೂ ಹೌದು. ಸರ್ವಾಧಿಕಾರದ ಕಪಿಮುಷ್ಟಿಯಲ್ಲಿರುವ ಶಾಪಗ್ರಸ್ತ ಪ್ರದೇಶಗಳು ಹೆಸರಿಗಷ್ಟೇ ದೇಶಗಳು. ನೈಜಸ್ಥಿತಿಯೇನೆಂದರೆ ಅಲ್ಲಿಯ ಸಾಮಾನ್ಯನ ಪಾಲಿಗೆ ಅವು ತೆರೆದ ಜೈಲುಗಳಷ್ಟೇ.

ವಿಪರ್ಯಾಸವೆಂದರೆ ಸ್ವಾತಂತ್ರ್ಯವನ್ನು ಸವಿಯುತ್ತಿರುವವನಿಗೆ ಅದರ ಮೌಲ್ಯ ತಿಳಿದಿರುವುದಿಲ್ಲ. ಸ್ವಾತಂತ್ರ್ಯದ ನಿಜವಾದ ಮೌಲ್ಯವು ತಿಳಿಯುವುದು ಅದನ್ನು ಕಸಿದುಕೊಂಡಾಗ ಮಾತ್ರ. ಭಾರತದ ಸಂವಿಧಾನವು ಅಂತಹ ಅಮೂಲ್ಯ ಸ್ವಾತಂತ್ರ್ಯವನ್ನು ನಾಗರಿಕರಾದ ನಮಗೆ ನೀಡಿರುವುದು ನಮ್ಮ ಅದೃಷ್ಟ. ಹೀಗಾಗಿ ಅದರ ಅಡಿಪಾಯವು ಇಷ್ಟಿಷ್ಟೇ ಶಿಥಿಲವಾಗುತ್ತಿರುವುದನ್ನು ಕಂಡಾಗ ದಿಗಿಲಾಗುವುದು ಸಹಜ.

ವಿಶೇಷವಾಗಿ ಸಂವಿಧಾನದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮಗಳು ಭಾರತದಲ್ಲೂ ಇಂಚಿಂಚಾಗಿ ಪ್ರೊಪಗಾಂಡಾ ಶಕ್ತಿಗಳ ಬಿಲ್ಲಾಗಿ ಬಳಕೆಯಾಗುತ್ತಿರುವುದು ವಿಪರ್ಯಾಸವೇ ಸರಿ. ಹಲವು ಆಫ್ರಿಕನ್ ದೇಶಗಳಲ್ಲಿ ಈ ಪ್ರೊಪಗಾಂಡಾ ಮಷಿನರಿಯು ಅದೆಷ್ಟು ವ್ಯವಸ್ಥಿತವಾಗಿದೆಯೆಂದರೆ ಅದು ಅಲ್ಲಿಯ ಮಂದಿಗೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಸುದ್ದಿಯೊಂದು ಸುಳ್ಳೆಂದು ಗೊತ್ತಿದ್ದರೂ ನಾಗರಿಕರು ಅದನ್ನು ನಿರ್ಲಿಪ್ತರಂತೆ ವೀಕ್ಷಿಸುತ್ತಾರೆ. ಈ ಚಾನೆಲ್ಲು ಈ ರಾಜಕೀಯ ಪಕ್ಷದ್ದು ಎಂಬುದು ಆಗಲೇ ತಿಳಿದಿರುವುದರಿಂದ ಚಾನೆಲ್ಲಿನ ಕೆಲಸ ಪಕ್ಷದ ವಕ್ತಾರಿಕೆಯಷ್ಟೇ ಎಂಬ ಸತ್ಯವು ಅವರಿಗೆ ಗೊತ್ತಿದೆ. ಇಂತಹ ದೇಶಗಳಲ್ಲಿ ಪತ್ರಿಕೆಗಳು ರಾಜಕೀಯ ಪಕ್ಷಗಳ ಕರಪತ್ರಗಳಷ್ಟೇ. ಭವ್ಯಭಾರತವು ನಿಧಾನವಾಗಿ ಈ ಹಾದಿಯಲ್ಲಿ ಸಾಗುತ್ತಿದೆಯೇ ಎಂಬುದು ಈ ಕಾಲಘಟ್ಟದ ಆತಂಕ.

ಈಚೆಗೆ ರೆಸ್ಟೊರೆಂಟ್ ಒಂದಕ್ಕೆ ತೆರಳಿದ್ದ ನಾನು ರೈತರ ಚಳವಳಿಯ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಯೊಂದು ಬಿತ್ತರಿಸುತ್ತಿದ್ದ ಕಾರ್ಯಕ್ರಮವನ್ನು ಕಂಡು ದಂಗಾಗಿದ್ದೆ. ಅಲ್ಲಿ ರೈತ ಮುಖಂಡರಿಗೆ ನಿರೂಪಕನು ಹಾಕುತ್ತಿದ್ದ ಪ್ರಶ್ನೆಗಳು ಶತಾಯಗತಾಯ ಪ್ರಭುತ್ವದ ಬೆಂಬಲಕ್ಕೆ ನಿಂತ ಮಾಧ್ಯಮವೊಂದು ಈ ದೇಶದ ನಾಗರಿಕನೊಬ್ಬನನ್ನು ಸಾರ್ವಜನಿಕವಾಗಿ ಜರಿಯುವಂತಿದ್ದವು. ಈ ಸುದ್ದಿವಾಹಿನಿಯು ರೈತ ಚಳವಳಿಯು ಎಷ್ಟು ಪೊಳ್ಳು ಎಂದು ಹೇಳುತ್ತಿದ್ದ ಕೆಲ ಆಯ್ದ ಕೃಷಿಕರ ಮಾತುಗಳನ್ನು ನಿರಂತರವಾಗಿ ತೋರಿಸುತ್ತಿತ್ತೇ ಹೊರತು ರೈತ ಚಳವಳಿಯು ಇಷ್ಟು ದೊಡ್ಡ ರೂಪವನ್ನು ತಾಳಲು ಕಾರಣವಾದರೂ ಏನು ಎಂಬ ಬಗ್ಗೆ ಬೆಳಕು ಚೆಲ್ಲಲು ಆಸಕ್ತರಾಗಿರುವಂತೆ ಕಾಣಲಿಲ್ಲ. ಅರಚಾಡುವುದನ್ನೇ ಚರ್ಚೆ ಎಂಬಂತೆ ಬಿಂಬಿಸುತ್ತಿರುವ ನಮ್ಮ ಬಹುತೇಕ ಸುದ್ದಿವಾಹಿನಿಗಳು ಈ ಹಿಂದೆ ರೈತರ ಬೆಂಬಲಕ್ಕೆ ನಿಂತು ದನಿಯನ್ನು ಎತ್ತಿದ್ದೇ ಇಲ್ಲ. ಹೀಗಿರುವಾಗ ರೈತರ ಆಗ್ರಹಗಳನ್ನು ಪ್ರಭುತ್ವದವರೆಗೆ ಸಮರ್ಥವಾಗಿ ತಲುಪಿಸುವ ಬದಲು ಅವರ ಮಾನಸಿಕ ಶಕ್ತಿಯನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡುತ್ತಿರುವ ಮಾಧ್ಯಮಗಳ ಧಾಟಿಯೇ ಹಾಸ್ಯಾಸ್ಪದ ಮತ್ತು ದುರಾದೃಷ್ಟಕರ.

2021ರ ನನ್ನ ದೊಡ್ಡ ನಿರೀಕ್ಷೆಯೆಂದರೆ ರಾಜಕೀಯ ಶಕ್ತಿಗಳ ಹಿಡಿತದಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಮಾಧ್ಯಮಗಳು. ನಾಗರಿಕರ ದನಿಯನ್ನು ಪರಿಣಾಮಕಾರಿಯಾಗಿ ಪ್ರಭುತ್ವಕ್ಕೆ ತಲುಪಿಸಿ, ಅದರ ಕಿವಿ ಹಿಂಡಿ, ಹಾದಿ ತಪ್ಪಿದಾಗಲೆಲ್ಲಾ ಅವುಗಳನ್ನು ಮತ್ತೆ ಸರಿದಾರಿಗೆ ಕರೆತರಬಲ್ಲ ಜವಾಬ್ದಾರಿಯುತ ಮಾಧ್ಯಮಗಳು. ಹಿಂದೆ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗಿದ್ದ ಪ್ರೊಪಗಾಂಡಾ ಮಷೀನರಿಯು ತೀರಾ ಮುಖ್ಯ ವಾಹಿನಿಯ ಮಾಧ್ಯಮಗಳ ಅಂಗಳಕ್ಕೆ ಬಂದಾಗಲೇ ಅದಕ್ಕೆ ಕಡಿವಾಣವನ್ನು ಹಾಕಬೇಕಿತ್ತು. ಆದರೆ ಕಾಲ ಇನ್ನೂ ಮಿಂಚಿಲ್ಲ ಎಂಬ ಆಶಾಭಾವವು ಇನ್ನೂ ನನ್ನಲ್ಲಿದೆ.

ಭಾರತವು ಮತ್ತೊಂದು ಅಂಗೋಲಾವೋ, ಸೊಮಾಲಿಯಾವೋ ಆಗುವುದು ನಮಗೂ ಬೇಡ. ನಮ್ಮ ಮುಂದಿನ ಪೀಳಿಗೆಗೂ ಬೇಡ.

Leave a Reply

Your email address will not be published.