ಮನರಂಜನೆ ಉದ್ಯಮದಲ್ಲಿ ದತ್ತಾಂಶದ ಪರ್ವ

-ಎಂ.ಕೆ.ಆನಂದರಾಜೇ ಅರಸ್

ದತ್ತಾಂಶದ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದ ಮನರಂಜನೆ ಉದ್ಯಮದಲ್ಲಿ ಸಹ ಹೆಚ್ಚಾಗಲಿದ್ದು, ಮುಂಬರುವ ದಿನಗಳಲ್ಲಿ ಈ ಉದ್ಯಮದ ಸ್ವರೂಪ ಬೃಹತ್ ಮಟ್ಟದಲ್ಲಿ ಬದಲಾಗಲಿದೆ.

ಪ್ರಖ್ಯಾತ ಮಾರ್ಕೆಟಿಂಗ್ ಗುರು ಫಿಲಿಪ್ ಕೊಟ್ಲರ್ 2014ರಲ್ಲಿ ಬೆಂಗಳೂರಿಗೆ ಬಂದಿದ್ದರು. ಅವರ `ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್’ ಪುಸ್ತಕವನ್ನು ಈಗಲೂ ಎಂಬಿಎ ವಿದ್ಯಾರ್ಥಿಗಳು ಹಾಗೂ ಮಾರ್ಕೆಟಿಂಗ್ ವೃತ್ತಿಪರರು ಮಾರ್ಕೆಟಿಂಗ್ ಬೈಬಲ್ ಎಂದೇ ಪರಿಗಣಿಸುತ್ತಾರೆ. ಸಂವಾದವೊಂದರಲ್ಲಿ ಅವರ ಮುಂದೆ `ಮಾರ್ಕೆಟಿಂಗ್’ ಎಂದರೇನು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. `ವರ್ತನೆಯ ವಿಜ್ಞಾನದ ಅಧ್ಯಯನ’ ಎಂದು ಉತ್ತರಿಸುತ್ತಾರೆ.

ಯೇಲ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಪ್ರಾಧ್ಯಾಪಕರಾಗಿ ರುವ ರವಿ ಧರ್ ಉದ್ಯಮಗಳಲ್ಲಿ ವರ್ತನೆಯ ವಿಜ್ಞಾನದ ನಿಯಮಗಳನ್ನು ಸಂಯೋಜಿಸಿಕೊಳ್ಳಲು ಪ್ರತಿಷ್ಠಿತ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ರೊಂದಿಗೆ ಕೆಲಸ ಮಾಡುತ್ತಾರೆ. ಅಲ್ಲಿ ಅವರು ವರ್ತನೆಯ ವಿಜ್ಞಾನದ ಮೂಲ ವಿಷಯಗಳನ್ನು ಬೋಧಿಸುತ್ತಾರೆ. ಅವುಗಳೆಂದರೆ ದೊಡ್ಡ ದತ್ತಾಂಶಗಳನ್ನು ಉಪಯೋಗಿಸಿಕೊಳ್ಳುವುದು, ಉತ್ತಮ ಒಳನೋಟಗಳನ್ನು ಕಂಡುಕೊಳ್ಳುವುದು ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಗ್ರಾಹಕರನ್ನು ತೊಡಗಿಸಿಕೊಳ್ಳುವುದು.

ಫಿಲಿಪ್ ಕೊಟ್ಲರ್ ವರ್ತನೆಯ ಆರ್ಥಿಕ ಶಾಸ್ತ್ರ ಅಥವಾ ವರ್ತನೆಯ ವಿಜ್ಞಾನ ಎನ್ನುವುದು ಮಾರ್ಕೆಟಿಂಗ್‍ಗೆ ಕೇವಲ ಅಲಂಕಾರಿಕ ಪದವಷ್ಟೇ, ಮಾರ್ಕೆಟಿಂಗ್ ಯಾವಾಗಲೂ ಅರ್ಥಶಾಸ್ತ್ರದ ಭಾಗವಾಗಿತ್ತು ಎಂದು ಹೇಳುತ್ತಾರೆ.

ಗ್ರಾಹಕರ ವರ್ತನೆಯಲ್ಲಾಗುವ ಬದಲಾವಣೆ ಮಾರುಕಟ್ಟೆಯಲ್ಲಿ ಕೆಲವು ಬೃಹತ್ ಸಂಸ್ಥೆಗಳ ಅಳಿವು-ಉಳಿವುಗಳನ್ನು ನಿರ್ಧರಿಸುತ್ತದೆ. ಈ ಕಾರಣದಿಂದಲೇ ಮಾರ್ಕೆಟಿಂಗ್ ತಜ್ಞರು ಹಾಗೂ ಸಂಸ್ಥೆಗಳು ಗ್ರಾಹಕರ ವರ್ತನೆಯ ಮೇಲೆ ನಿರಂತರ ನಿಗಾ ಇಟ್ಟಿರುತ್ತಾರೆ. ನಿಯತಕಾಲಿಕವಾಗಿ ಗ್ರಾಹಕರ ವರ್ತನೆಗಳ ಬದಲಾವಣೆಗಳನ್ನು ಕುರಿತಂತೆ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಮನರಂಜನೆ ಉದ್ಯಮದಲ್ಲಿ, ಚಿತ್ರೋದ್ಯಮದಲ್ಲಿ ಈಗ ವರ್ತನೆಯ ವಿಜ್ಞಾನ ಹೆಚ್ಚುಹೆಚ್ಚಾಗಿ ಹಾಸುಹೊಕ್ಕಾಗುತ್ತಿರುವುದು ಕಳೆದೆರಡು ದಶಕಗಳಲ್ಲಿನ ಅತ್ಯಂತ ಮಹತ್ತರ ಬೆಳವಣಿಗೆಯಾಗಿದೆ.

ಒಂದು ದಶಕದ ಹಿಂದೆ ಮಲ್ಟಿಪ್ಲೆಕ್ಸ್‍ಗಳು ಅಣಬೆಗಳಂತೆ ಎಲ್ಲೆಡೆ ಹುಟ್ಟಿಕೊಳ್ಳಲು ಆರಂಭವಾದಾಗ ಜನ ಏಕ ಪರದೆ ಮಂದಿರಗಳಿಂದ ದೂರವಾಗಲು ಆರಂಭಿಸಿದರು. ಶಿಥಿಲಾವಸ್ಥೆಯಲ್ಲಿದ್ದ, ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ಹಾಗೂ ರಿಯಲ್ ಎಸ್ಟೇಟ್ ಹದ್ದುಗಳು ಕಣ್ಣು ಹಾಕಿದ್ದ ಹಲವಾರು ಚಿತ್ರಮಂದಿರಗಳು ನೆಲಸಮಗೊಂಡವು. ಆ ಜಾಗದಲ್ಲಿ ಮಲ್ಟಿಪ್ಲೆಕ್ಸ್‍ಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳು ತಲೆಯೆತ್ತಿದವು. ಆರ್ಥಿಕವಾಗಿ ಸಬಲರಾಗಿದ್ದ ಮಾಲೀಕರಡಿಯಲ್ಲಿದ್ದ ಕೆಲವು ಚಿತ್ರಮಂದಿರಗಳು ತಾಂತ್ರಿಕವಾಗಿ ಸುಧಾರಿಸಿಕೊಂಡು ಅಸ್ತಿತ್ವವನ್ನು ಕಾಯ್ದುಕೊಂಡಿದ್ದರೂ, ಅವುಗಳ ಗಳಿಕೆ ಮುಖ್ಯವಾಗಿ ದರ ವ್ಯತ್ಯಾಸದಿಂದ ಮಲ್ಟಿಪ್ಲೆಕ್ಸ್‍ಗಳಲ್ಲಿರುವ ಬಹುಪರದೆಗಳಷ್ಟಿರಲಿಲ್ಲ. ಮಲ್ಟಿಪ್ಲೆಕ್ಸ್ ಅನುಭವ ಬೇರೆಯೇ ಸ್ತರದಲ್ಲಿದ್ದು, ಸ್ಥಿತಿವಂತ ಗ್ರಾಹಕರು ಮಲ್ಟಿಪ್ಲೆಕ್ಸ್‍ಗಳಲ್ಲಿರುವ ಬಹುಪರದೆ ಚಿತ್ರಮಂದಿರಗಳನ್ನು ಬಯಸಲಾರಂಭಿಸಿದರು.

ಮಲ್ಟಿಪ್ಲೆಕ್ಸ್‍ಗಳಲ್ಲಿನ ಬಹುಪರದೆ ಮಾಲೀಕರ ಗಲ್ಲಾಪೆಟ್ಟಿಗೆಗಳು ಗುಣುಗುಣಿಸುತ್ತಿದ್ದಂತೆ ಪಿವಿಆರ್, ಐನಾಕ್ಸ್ ಲೀಷರ್ಸ್ ಕಂಪನಿಗಳ ಶೇರುಗಳಿಗೆ ಬೇಡಿಕೆ ಹೆಚ್ಚಾಯಿತು. ಈ ಸಂಸ್ಥೆಗಳ ಮಾಲೀಕರು ನಗುನಗುತ್ತಾ ಬ್ಯಾಂಕಿಗೆ ಹೋಗಲಾರಂಭಿsಸಿದರು. ಆದರೆ ನೆಟ್‍ಫ್ಲಿಕ್ಸ್‍ನಿಂದ ಆರಂಭವಾದ ಓಟಿಟಿ ಕ್ರಾಂತಿ ಬಹುಪರದೆಗಳ ಅಸ್ತಿತ್ವಕ್ಕೆ ಸವಾಲೊಡ್ಡಲು ಆರಂಭಿಸಿತು. ಬೃಹತ್ ಥಿಯೇಟರ್ ಸರಪಳಿಗಳು ವಿಶಿಷ್ಟ ಹಾಗೂ ವಿನೂತನ ಮಾರ್ಕೆಟಿಂಗ್ ವ್ಯೂಹತಂತ್ರಗಳನ್ನು ಹೆಣೆದುಕೊಂಡು ಓಟಿಟಿಗಳಿಗೆ ಸವಾಲೊಡ್ಡಲು ಸಿದ್ಧವಾಗುತ್ತಿರುವ ಸಂದರ್ಭದಲ್ಲೇ, ಅನೀರಿಕ್ಷಿತವಾಗಿ ಜಾಗತಿಕ ಸುನಾಮಿಯಾದ ಕೊವಿಡ್19, ಬಹುಪರದೆಗಳು ಹಾಗೂ ಏಕಪರದೆಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳ ಅಸ್ತಿತ್ವಕ್ಕೆ ತೆರೆ ಎಳೆಯಲಿದೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದವು.

ಓಟಿಟಿ ಆರಂಭವಾಗುತ್ತಿದ್ದಂತೆ ಸಿನಿಮಾ ಪ್ರೇಕ್ಷಕರ ವರ್ತನೆ ಯಲ್ಲಿ ಬದಲಾವಣೆಗಳು ಆರಂಭವಾಗಿದ್ದವು. ನೆಟ್‍ಫ್ಲಿಕ್ಸ್ ಓಟಿಟಿಯ ಓರಿಜಿನಲ್ ಧಾರಾವಾಹಿಗಳು ಪ್ರೇಕ್ಷಕರಿಗೆ ಉತ್ತಮ ಮಟ್ಟದ ವಿಷಯವಸ್ತುಗಳು ಹೇಗಿರಬೇಕೆಂಬ ಮಾನದಂಡವನ್ನು ಹಾಕಿದ್ದವು. ಜಾಗತಿಕ ವಿಷಯವಸ್ತುಗಳಿಂದ ಪ್ರಭಾವಿತರಾಗಿದ್ದ ಸ್ಥಳಿಯ ಚಿತ್ರೋದ್ಯಮಗಳು ನಾವೇನು ಕಡಿಮೇ ಎಂಬ ರೀತಿಯಲ್ಲಿ ಅತ್ಯುತ್ತಮ ವಿಷಯವಸ್ತುಗಳನ್ನಿಟ್ಟುಕೊಂಡು ಸ್ಥಳೀಯ ಪ್ರೇಕ್ಷಕರನ್ನು ಸೆಳೆಯಲಾರಂಭಿಸಿದವು. ಭಾರತದಲ್ಲಿ ನಿರ್ಮಾಣಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದ ಸೇಕ್ರೆಡ್ ಗೇಮ್ಸ್‍ನಂತಹ ನೆಟ್‍ಫ್ಲಿಕ್ಸ್ ಸೀಸನ್‍ಗಳು ನಮ್ಮ ಪ್ರತಿಭೆಗಳ ಗುಣಮಟ್ಟಕ್ಕೆ ಸಾಕ್ಷಿಯಾಗಿತ್ತು. ಅಲ್ಲದೆ ಮಾನದಂಡ ಎಂಬುದು ಯಾವ ಮಟ್ಟಿಗೆ ಗುಣಮಟ್ಟ ಸುಧಾರಣೆಯಲ್ಲಿ ಕೆಲಸ ಮಾಡುತ್ತದೆ ಎಂಬ ಪುರಾವೆ ಉದ್ಯಮಕ್ಕೆ ದೊರಕಿತ್ತು.

ಓಟಿಟಿ ವೇದಿಕೆಗಳು ತಾವು ಸೃಷ್ಟಿಸುವ ವಿಷಯವಸ್ತುಗಳನ್ನು ನಿರ್ಧರಿಸಲು ಹಾಗೂ ವೈಯಕ್ತಿಕ ವೀಕ್ಷಣೆ ಶಿಫಾರಸ್ಸುಗಳನ್ನು ಮಾಡಲು ದೊಡ್ಡ ದತ್ತಾಂಶಗಳಲ್ಲಿ ಮಾದರಿಗಳನ್ನು ವಿಶ್ಲೇಷಿಸುತ್ತಾರೆ. ಹೀಗೆ ದತ್ತಾಂಶ ಹಿಂದೆಂದೂ ಕಾಣದ ರೀತಿಯಲ್ಲಿ ಮನರಂಜನೆಯ ನಿರ್ಮಾಣ ಹಾಗೂ ಮಾರ್ಕೆಟಿಂಗ್‍ನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಹಿಂದೆಲ್ಲಾ ನಿರ್ಮಾಪಕರು ಹಾಗೂ ನಿರ್ದೇಶಕರು ತಮ್ಮ ಅನುಭವದ ಆಧಾರದ ಮೇಲೆ ಚಿತ್ರಕಥೆಯನ್ನು ಮಾಡಿಕೊಂಡು ನಿರ್ಮಾಣಕ್ಕೆ ತೊಡಗುತ್ತಿದ್ದರು. ಈಗ ಮನರಂಜನೆಯಲ್ಲಿ ವರ್ತನೆಯ ವಿಜ್ಞಾನದ ನಿಯಮಗಳು ಹಾಸುಹೊಕ್ಕಾಗುತ್ತಿದ್ದು, ಈ ಉದ್ಯಮದ ಸ್ವರೋಪವೇ ಬದಲಾಗುತ್ತಿದೆ. ಮುಂದಿನ ದಿನಗಳಲ್ಲಿ, ನಿರ್ಮಾಣ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ವೈಯಕ್ತಿಕ ವೀಕ್ಷಣೆ ಅಭ್ಯಾಸಗಳು ಹಾಗೂ ಆದ್ಯತೆಗಳನ್ನು ಅರ್ಥಮಾಡಿಕೊಂಡು ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಹೊಸ ಪ್ರಯೋಗದತ್ತ

ಚಂದಾ ಎಂಬ ಪದ ಬೃಹತ್ ಚಿತ್ರಮಂದಿರ ಸರಪಳಿಗಳ ಮಾಲೀಕರಿಗೆ ದಿಗಿಲು ಹುಟ್ಟಿಸಿರಬಹುದು. ಮಾಸಿಕ 499 ರೂಪಾಯಿಂತೆ ಚಂದಾ ನೀಡಿದರೆ ನೆಟ್‍ಫ್ಲಿಕ್ಸ್‍ನಲ್ಲಿ ಜಾಗತಿಕ ಮಟ್ಟದ ಅತ್ಯುತ್ತಮ ದೃಶ್ಯ ವಿಷಯವಸ್ತುಗಳು ಲಭ್ಯವಾಗುತ್ತದೆ. 150 ರೂಪಾಯಿಗಳು ಹೆಚ್ಚು ನೀಡಿದರೆ ಇಬ್ಬರು ನೆಟ್‍ಫ್ಲಿಕ್ ಅನ್ನು ಏಕಕಾಲದಲ್ಲಿ ಹಂಚಿಕೊಳ್ಳಬಹುದು. ಇನ್ನೂ 100 ರೂಪಾಯಿ ಹೆಚ್ಚು ನೀಡಿದರೆ ನಾಲ್ಕು ಜನ ನೆಟ್‍ಫ್ಲಿಕ್ಸ್‍ನ ಅಲ್ಟ್ರಾ ಹೆಚ್‍ಡಿ ಸೇವೆಯನ್ನು ಏಕಕಾಲದಲ್ಲಿ ಹಂಚಿಕೊಳ್ಳಬಹುದು. ನೂರಾರು ಸಿನೆಮಾಗಳು, ಅತ್ಯುತ್ತಮ ಸಾಕ್ಷಿಚಿತ್ರಗಳು, ವಿಶ್ವಮಟ್ಟದ ಧಾರವಾಹಿಗಳು… ಈ ಆಕರ್ಷಣೆಯಿಂದ ದೂರವಿರುವುದು ಅಷ್ಟು ಸುಲಭವಲ್ಲ. ಅಲ್ಲದೇ ಮೊಬೈಲ್‍ನಲ್ಲಾದರೇ, ಕೇವಲ 199 ರೂಪಾಯಿ ನೀಡಿ ನೆಟ್‍ಫ್ಲಿಕ್ಸ್ ಸೇವೆಯನ್ನು ಪಡೆಯಬಹುದು. ಅಮೆeóÁನ್‍ನ ಪ್ರೈಮ್ ವೀಡಿಯೋ ಇನ್ನೂ ಕಡಿಮೆ ದರದಲ್ಲಿ ಇದೇ ರೀತಿಯ ಸೇವೆಗಳನ್ನು ನೀಡುತ್ತದೆ. ಹುಲು, ಆಪಲ್ ಟಿವಿ+, ಡಿಸ್ನಿ ಪ್ಲಸ್, ಹೆಬಿಓ ಇತ್ಯಾದಿ ಓಟಿಟಿ ಸೇವೆಗಳು ಸಹ ಸ್ಪರ್ಧೆಯಲ್ಲಿದ್ದು ಚಿತ್ರಮಂದಿರಗಳ ಮಾಲೀಕರಿಗೆ ಗಳಿಕೆಗಳಲ್ಲಿ ದೊಡ್ಡ ಸವಾಲುಗಳು ಎದುರಾದವು.

ಚಿತ್ರಮಂದಿರಗಳಿಗಿರುವ ಒಂದು ದೊಡ್ದ ಅನುಕೂಲವೆಂದರೆ ಪರದೆಯ ಗಾತ್ರ. ದೊಡ್ಡ ಪರದೆಯಲ್ಲಿ ಚಿತ್ರ ನೋಡಿದರೆ ಸಿಗುವ ಅನುಭವವೇ ಬೇರೆಯದು. ಈ ಒಂದು ಸ್ಪರ್ಧಾತ್ಮಕ ಅನುಕೂಲ ಚಿತ್ರಮಂದಿರಗಳ ಉಳಿವಿಗೆ ಕಾರಣವಾಗಿದೆ. ಈಗಲೂ ಸಹ ಅನೇಕ ಪ್ರೇಕ್ಷಕರು ದೊಡ್ಡ ಪರದೆ ಅನುಭವವನ್ನು ಬಯಸುತ್ತಾರೆ ಹಾಗೂ ಕೆಲವು ಚಿತ್ರಗಳನ್ನು ದೊಡ್ಡ ಪರದೆಯಲ್ಲಿ ನೋಡಿದಾಗ ಮಾತ್ರ ಅನುಭವ ಚೆನ್ನಾಗಿರುತ್ತದೆ ಎಂದು ಬಹುತೇಕ ಚಿತ್ರ ನಿರ್ದೇಶಕರು ಅಭಿಪ್ರಾಯ ಪಡುತ್ತಾರೆ.

ಈ ಕಾರಣಗಳನ್ನು ಗ್ರಹಿಸಿಕೊಂಡೇ ಅಮೆರಿಕಾದ ಕೆಲವು ಚಿತ್ರಮಂದಿರಗಳ ಮಾಲೀಕರು ವಿವಿಧ ವ್ಯೂಹತಂತ್ರಗಳನ್ನು ಮಾರುಕಟ್ಟೆಯಲ್ಲಿ ಪ್ರಯೋಗಿಸುತ್ತಿದ್ದಾರೆ. ನೆಟ್‍ಫ್ಲಿಕ್ಸ್ ಅನ್ನು ಎದುರಿಸಬೇಕೆಂದರೆ ನಾವು ನೆಟ್‍ಫ್ಲಿಕ್ಸ್‍ನಂತಾಗಬೇಕು ಎಂಬುದು ಕೆಲವು ಚಿತ್ರಮಂದಿರಗಳ ಮಾಲೀಕರ ಅಭಿಪ್ರಾಯ. ಇದಕ್ಕಾಗಿ ಹಲವಾರು ಚಿತ್ರಮಂದಿರಗಳ ಮಾಲೀಕರು ಚಂದಾ ಸೇವೆಯನ್ನು ಆರಂಭಿಸಿದ್ದಾರೆ. ಈಗ ನಮ್ಮ ದೇಶದಲ್ಲಿ ನಾವು ತಿಂಗಳಿಗೆ ಪಿವಿಆರ್‍ಗೆ ಒಂದು ಸಾವಿರ ರೂಪಾಯಿ ಚಂದಾ ನೀಡಿ ಭಾರತದ ಯಾವುದೇ ಭಾಗದಲ್ಲಿ ತಿಂಗಳಿಗೆ ಹತ್ತು ಸಿನಿಮಾ ನೋಡಬಹುದೆಂದರೆ, ಇದಕ್ಕಿಂತ ಆಕರ್ಷಣೀಯವಾದದ್ದು ಯಾವುದಿರುತ್ತದೆ.

ರೀಗಲ್ ಸಿನೆಮಾ, ಎ.ಎಂ.ಸಿ ಹಾಗೂ ಸಿನೆಮಾರ್ಕ್ ಅಮೆರಿಕಾದ ಮೂರು ಅತ್ಯಂತ ದೊಡ್ಡ ಚಿತ್ರಮಂದಿರ ಸರಪಳಿಗಳು. ರೀಗಲ್ ಸಿನಿಮಾ ಅನಿಯಮಿತ ಚಿತ್ರ ಟಿಕೆಟ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಪ್ರಕಾರ ತಿಂಗಳಿಗೆ 18 ರಿಂದ 24 ಯು.ಎಸ್. ಡಾಲರ್‍ಗಳನ್ನು ನೀಡಿ ಎಷ್ಟು ಚಿತ್ರಗಳನ್ನು ಬೇಕಾದರೂ ನೋಡಬಹುದು. ಎ.ಎಂ.ಸಿ. ಸ್ಟಬ್ಸ್ ಎ ಲಿಸ್ಟ್ ಯೋಜನೆಯನ್ನು ಆರಂಭಿಸಿದೆ. ಈ ಚಂದಾ ಯೋಜನೆಯಡಿಯಲ್ಲಿ ಎಂ.ಎಂ.ಸಿ. 2019ರ ಜೂನ್‍ನಲ್ಲಿ 8,60,000 ಚಂದಾದಾರರನ್ನು ಹೊಂದಿತ್ತು. ಇದು ನಿರೀಕ್ಷಿತ ಐದು ಲಕ್ಷ ಸಂಖ್ಯೆಗಿಂತ ಹೆಚ್ಚಾಗಿತ್ತು. ಎ.ಎಂ.ಸಿ.ಯ ಸ್ಟಬ್ಸ್ ಎ ಲಿಸ್ಟ್ ಯೋಜನೆಯಲ್ಲಿ ವೀಕ್ಷಕರು ಪ್ರತಿ ವರ್ಷ ಮೂರು ಸಿನಿಮಾಗಳನ್ನು, ಐಮ್ಯಾಕ್ಸ್ ಅಥವಾ 3-ಡಿ ಫಾರ್ಮ್ಯಾಟ್‍ನಲ್ಲಿ ನೋಡಬಹುದು. ಈ ಯೋಜನೆಯ ಮಾಸಿಕ ಚಂದಾದರ ಮಾಸಿಕ 20 ರಿಂದ 24 ಡಾಲರ್‍ಗಳು. ಎ.ಎಂ.ಸಿ. ಅಭಿವೃದ್ಧಿ ಪಡಿಸಿರುವ ಆಪ್‍ನಲ್ಲಿ ಫೆÇೀನ್ ಮೂಲಕ ವೀಕ್ಷಕರು ತಮಗೆ ಬೇಕಾದ ಸಮಯ ಹಾಗೂ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಯು.ಎಸ್.ಎ.ನ ಮೂರನೇ ದೊಡ್ಡ ಸಿನಿಮಾ ಮಂದಿರ ಜಾಲವಾಗಿರುವ ಸಿನೆಮಾರ್ಕ್ ಕೇವಲ 8.99 ಡಾಲರ್‍ಗಳಿಗೆ ಪ್ರೇಕ್ಷಕನಿಗೆ ಒಂದು ಉಚಿತ ಸಿನೆಮಾ ಟಿಕೇಟನ್ನು ಹಾಗೂ ಇತರೆ ರಿಯಾತಿಗಳನ್ನು ನೀಡುತ್ತದೆ.

ಇವೆಲ್ಲವೂ ಗ್ರಾಹಕರ ವರ್ತನೆಯ ಮೇಲೆ ಕೇಂದ್ರೀಕೃತವಾಗಿರುವ ವ್ಯೂಹತಂತ್ರಗಳು. ಚಿತ್ರಮಂದಿರಗಳು ಸಹ ಚಂದಾ ಆಧಾರಿತ ಸೇವೆಗಳನ್ನು ಒದಗಿಸಲು ಆರಂಭಿಸಿದಾಗ ಅವರಿಗೆ ಸಹ ಅವರ ಗ್ರಾಹಕರ ದತ್ತಾಂಶಗಳು ಲಭ್ಯವಾಗಿ, ಅವರ ಆದ್ಯತೆಗಳು ಹಾಗೂ ವರ್ತನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಚಿತ್ರಮಂದಿರಗಳಲ್ಲಿ ಚಂದಾ ಯೋಜನೆಯನ್ನು ಇನ್ನೂ ಪರಿಚಯಿಸಿಲ್ಲವಾಗಿದ್ದರೂ ಆ ದಿನಗಳು ದೂರವಿಲ್ಲವೆನಿಸುತ್ತದೆ. ಸಿನೆಮಾ, ಸಾಕ್ಷ್ಯಚಿತ್ರಗಳು ಹಾಗೂ ಧಾರಾವಾಹಿಗಳು ಸೇರಿದಂತೆ ಎಲ್ಲಾ ದೃಶ್ಯ ವಿಷಯವಸ್ತುಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಿ ಚಂದಾ ಆಧಾರದ ಮೇಲೆ ಸೇವೆ ನೀಡುವ ಮೂಲಕ ನೆಟ್‍ಫ್ಲಿಕ್ಸ್ ಒಂದು ಬೃಹತ್ ಗ್ರಾಹಕ ವರ್ಗವನ್ನೇ ಹುಟ್ಟುಹಾಕಿಕೊಂಡಿದೆ. ಈ ವರ್ಷದ ತ್ರೈಮಾಸಿಕದಲ್ಲಿ ನೆಟ್‍ಫ್ಲಿಕ್ಸ್ 15.8 ಮಿಲಿಯನ್ ಹೊಸ ಚಂದಾದಾರರನ್ನು ಪಡೆಯಿತು. ಇದು ವಾಲ್‍ಸ್ಟ್ರೀಟ್ ಅಂದಾಜಿಸಿದ ಸಂಖ್ಯೆಗಿಂತ ದುಪ್ಪಟ್ಟಾಗಿತ್ತು.

ಇಲ್ಲಿ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಚಿತ್ರಮಂದಿರಗಳು ಚಂದಾ ಸೇವೆಯನ್ನು ಆರಂಭಿಸಿದ್ದರೂ ಸಹ ನೆಟ್‍ಫ್ಲಿಕ್ಸ್‍ನಂತೆ ಗ್ರಾಹಕರ ಸಂಖ್ಯೆಯನ್ನು ವಿಸ್ತಾರ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆಸನಗಳ ಸಂಖ್ಯೆಗೆ ಸಂಬಂಧಿಸಿದಂತೆ ಚಿತ್ರಮಂದಿರಗಳ ಇನ್ವೆಂಟರಿ ಸೀಮಿತ ವಾಗಿರುತ್ತದೆ. ಚಂದಾ ಮಾದರಿಯಲ್ಲಿ ಬೆಲೆ ಯುದ್ಧಕ್ಕೆ ಚಿತ್ರಮಂದಿರಗಳು ನೆಟ್‍ಫ್ಲಿಕ್ಸ್ ಹಾಗೂ ಇತರ ಓಟಿಟಿಗಳೊಂದಿಗಿಳಿದರೆ ಕಡೆಯ ಗೆಲುವು ಓಟಿಟಿಗಳದಾಗಿರುತ್ತದೆಯೇ ಹೊರತು ಚಿತ್ರಮಂದಿರಗಳದ್ದಾಗಿರುವುದಿಲ್ಲ.

ಸಂವಾದಾತ್ಮಕ ಅನುಭವದೆಡೆಗೆ

ಚಲನಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳ ವೀಕ್ಷಣೆ ಈಗ ರೇಖಿಯ ಸ್ವರೂಪದಿಂದ ಸಂವಾದಾತ್ಮಕ ಅನುಭವದ ಕಡೆ ಸಾಗುತ್ತಿದೆ. ವೀಡಿಯೋ ಸ್ಟ್ರೀಮಿಂಗ್ ಹಾಗೂ ಓಟಿಟಿ ಕಡೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ವಾಲುತ್ತಿದ್ದಾರೆ ಹಾಗೂ ಹಲವಾರು ಓಟಿಟಿ ವೇದಿಕೆಗಳು ಸ್ಪರ್ಧೆಯಲ್ಲಿರುವುದರಿಂದ ವೀಕ್ಷಕರು ತಮ್ಮ ಅಭಿರುಚಿಗೆ ಹೊಂದಿಕೊಳ್ಳುವ ಓಟಿಟಿ ವೇದಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸಂವಾದಾತ್ಮಕ ಅನುಭವದ ಕಡೆಗೆ ಪ್ರೇಕ್ಷಕರು ವಾಲುತ್ತಿರುವುದು ಸಹ ದತ್ತಾಂಶ ಆಧಾರಿತ ನಿರ್ಮಾಣದಲ್ಲಿ ನಿರ್ಮಾಣ ಸಂಸ್ಥೆಗಳು ತೊಡಗಿಸಿಕೊಳ್ಳಲು ಸಹಾಯಕವಾಗಿದೆ. ಒಂದೆಡೆ ದೊಡ್ಡ ದತ್ತಾಂಶಗಳು ಪ್ರಮುಖ ಪಾತ್ರ ವಹಿಸುತ್ತಿದ್ದರೆ, ಇತ್ತೀಚಿಗೆ ನಿರ್ಮಾಣ ಸಂಸ್ಥೆಗಳೂ ಸಣ್ಣ ದತ್ತಾಂಶಗಳಿಗೆ ಸಹ ಪ್ರಾಧಾನ್ಯ ನೀಡುತ್ತಿವೆ.

ಮುಂದಿನ ದಿನಗಳಲ್ಲಿ ಓಟಿಟಿ ವೇದಿಕೆಗಳು ದತ್ತಾಂಶ ಹಾಗೂ ವರ್ತನೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇನ್ನೂ ಮುಂದೆ ಸಾಗಲಿವೆ. ಮೂನ್ಸೂಚಕ ವಿಶ್ಲೇಷಣೆ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಿಗೆ ಆದ್ಯತೆ ಸಿಗಲಿದೆ. ವೀಕ್ಷಕರು ದುಬಾರಿ ಟಿವಿ ಪ್ಯಾಕೇಜ್‍ಗಳನ್ನು ಬಿಟ್ಟು, ಅಲ್ಗಾರಿದಮ್ ಚಾಲಿತ, ತಮಗಾಗಿಯೇ ಸಂಗ್ರಹಿದ, ವೈಯಕ್ತಿಕ ವೀಕ್ಷಣೆ ಅನುಭವವನ್ನು ನೀಡುವ ಕಾರ್ಯಕ್ರಮಗಳ ಚಂದಾದಾರರಾಗುತ್ತಾರೆ.

ಈಗಾಗಲೇ ದತ್ತಾಂಶವನ್ನು ತಮ್ಮ ಸಾಂಸ್ಥಿಕ ಹಾಗೂ ಮಾರ್ಕೆಟಿಂಗ್ ವ್ಯೂಹತಂತ್ರದ ಅಗತ್ಯ ಭಾಗವನ್ನಾಗಿ ಮಾಡಿಕೊಂಡಿರುವ ಬೃಹತ್ ಓಟಿಟಿ ವೇದಿಕೆಗಳು ಮುಂದಿನ ದಿನಗಳಲ್ಲಿ ತಾವು ಮೂಲ ಪ್ರೀಮಿಯಂ ವಿಷಯವಸ್ತುವನ್ನು ನೀಡಲು ಸಾಧ್ಯವಾಗಿಸುವ ಆಧುನಿಕ ಮುನ್ಸೂಚಕ ವಿಶ್ಲೇಷಣೆಗಳನ್ನು ಬಳಸಿಕೊಂಡು ಹೊಸ ಪ್ರವೃತ್ತಿಗಳನ್ನು ಹುಟ್ಟುಹಾಕುತ್ತಿದ್ದಾರೆ. ಉದಾಹರಣೆಗೆ ನೆಟ್‍ಫ್ಲಿಕ್ಸ್ ತನ್ನ ವಿಷಯವಸ್ತುವನ್ನು 70,000 ಸೂಕ್ಷ್ಮ-ಪ್ರಕಾರಗಳನ್ನಾಗಿ ವಿಂಗಡಿಸಿಕೊಂಡಿದೆ.

ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಹೋಲಿಸಿದರೆ ಈ ವಿಷಯದಲ್ಲಿ ನಮ್ಮಲ್ಲಿನ ನಿರ್ಮಾಣ ಸಂಸ್ಥೆಗಳು ಹಿಂದಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಟಿವಿಗಳಲ್ಲಿ ಚಲನಚಿತ್ರಗಳ ವೇಳಾಪಟ್ಟಿಯನ್ನು ವೀಕ್ಷಕತ್ವ ದತ್ತಾಂಶದ ಆಧಾರದ ಮೇಲೆ ಮಾಡಲಾಗುತ್ತದೆ. ಕೃತಕ ಬುದ್ಧಿಮತ್ತೆಯನ್ನು ನಿರ್ಮಾಣವು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ ವಿಷಯವಸ್ತುಗಳ ನಿರ್ಧರಿಸುವಿಕೆ, ಮೂನ್ಸೂಚಕ ವಿಶ್ಲೇಷಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಮ್ಮನ್ನು ಅಂತಾರಾಷ್ಟ್ರೀಯ ಓಟಿಟಿ ವೇದಿಕೆಗಳಿಗೆ ಹೋಲಿಸಲು ಸಾಧ್ಯವಿಲ್ಲ. ನೆಟ್‍ಫ್ಲಿಕ್ಸ್ ಈ ಮಟ್ಟಕ್ಕೆ ಬರಲು ಬಹಳ ವರ್ಷಗಳನ್ನು ತೆಗೆದುಕೊಂಡಿದೆ ಎಂದು ಹೇಳುತ್ತ ನಮ್ಮಲ್ಲಿನ ಉದ್ಯಮಿಗಳು ನಮ್ಮ ಸ್ಥಿತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

2017ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ `ಶಾದಿ ಮೆ ಜûರೂರ್ ಆನಾ’ ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸಲು ಇನ್ಫಿನಿಟ್ ಅನಾಲಿಟಿಕ್ಸ್ ನ್ಯೂಕ್ಲಿಯಸ್ ಎಂಬ ಸಂಸ್ಥೆಯೊಡನೆ ಕೆಲಸ ಮಾಡಿತ್ತು. ಈ ಸಂಸ್ಥೆಯೂ ಇನ್ಫಿನಿಟ್ ಆರ್ಟಿಫಿಷಿಯಲ್ ನ್ಯೂಕ್ಲಿಯಸ್ ಎಂಬ ಕೃತಕ ಬುದ್ಧಿಮತ್ತೆ ವೇದಿಕೆಯನ್ನು ಚಿತ್ರವನ್ನು ಹೆಚ್ಚು ಪ್ರೇಕ್ಷಕರಿಗೆ ತಲುಪಿಸಲು ಬಳಸಿಕೊಂಡಿತ್ತು. ಇಂತಹ ಹಲವಾರು ಉದಾಹರಣೆಗಳಿವೆ.

ದತ್ತಾಂಶದ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದ ಮನರಂಜನೆ ಉದ್ಯಮದಲ್ಲಿ ಸಹ ಹೆಚ್ಚಾಗಲಿದ್ದು, ಈ ಉದ್ಯಮದ ಸ್ವರೂಪ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಬದಲಾಗಲಿದೆ.

Leave a Reply

Your email address will not be published.