ಮನರಂಜನೆ ಉದ್ಯಮ: ಆಟ ಬದಲಿಸುತ್ತಿರುವ ಓಟಿಟಿ

ಚಲನಚಿತ್ರಗಳ ಬಗ್ಗೆ ಹಾಗೂ ಮೆಚ್ಚಿನ ತಾರೆಯರ ಮೇಲೆ ಅಭಿಮಾನಿಗಳಿಗಿರುವ ಹುಚ್ಚು ಕಡಿಮೆಯಾಗಿಲ್ಲ. ಆದರೆ ಚಲನಚಿತ್ರಗಳು, ಕಿರುಚಿತ್ರಗಳು, ಧಾರಾವಾಹಿಗಳು ಹಾಗೂ ಸಾಕ್ಷ್ಯ ಚಿತ್ರಗಳು ನಮ್ಮನ್ನು ತಲುಪುವ ಬಗೆ ಬದಲಾಗಿದೆ.

ಶುಭಾನಂದ

ತೊಂಬತ್ತರ ದಶಕದಲ್ಲಿ ಅವಿಭಾಜ್ಯ ಆಂಧ್ರ ಪ್ರದೇಶದ ಜನರ ಸಿನಿಮಾ ಹುಚ್ಚಿನ ಬಗ್ಗೆ ಹೀಗೊಂದು ಕಥೆ ಹರಿದಾಡುತಿತ್ತು. ಇದು ಎಷ್ಟು ನಿಜವೋ ಗೊತ್ತಿಲ್ಲ.

ಚಿರಂಜೀವಿ ತೆಲುಗು ಚಲನಚಿತ್ರೋದ್ಯಮದ ಚಕ್ರವರ್ತಿಯಾಗಿ ಮೆರೆಯುತಿದ್ದ ಕಾಲವದು. ಆಗೆಲ್ಲಾ ಅಲ್ಲಿನ ಕೆಲವು ಜನಪ್ರಿಯ ತಾರೆಯರ ಚಲನಚಿತ್ರಗಳ ಮೊದಲ ಶೋ ಬೆಳಿಗ್ಗೆ ಐದಕ್ಕೆ, ಆರಕ್ಕೆ ಶುರುವಾಗುತ್ತಿದ್ದ ಸಂದರ್ಭಗಳಿದ್ದವು. ಹೀಗೊಮ್ಮೆ ಆಂಧ್ರದ ಪುಟ್ಟ ಪಟ್ಟಣವೊಂದರಲ್ಲಿ ಚಿರಂಜೀವಿಯವರ ಹೊಸ ಚಿತ್ರವೊಂದನ್ನು ಬೆಳಿಗ್ಗೆ ಐದು ಗಂಟೆಗೆ ತೋರಿಸುವವರಿದ್ದರು. ಪ್ರೇಕ್ಷಕರು ಹಿಂದಿನ ದಿನದ ಸಾಯಂಕಾಲದಿಂದಲೇ ಮೈಲುದ್ದದ ಸಾಲಿನಲ್ಲಿ ನಿಂತು ಟಿಕೆಟ್ ಪಡೆದುಕೊಂಡಿದ್ದರು. ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದರು. ಬೆಳಗ್ಗೆ ಐದಕ್ಕೆ ಚಿತ್ರ ಶುರುವಾಗಬೇಕು. ಆದರೆ ಆ ಯಾವುದೇ ಲಕ್ಷಣಗಳು ಕಾಣಲಿಲ್ಲ. ಅಭಿಮಾನಿಗಳ ಸಹನೆ ಮೀರಿತ್ತು.

ಆಗೆಲ್ಲಾ ಡಿಜಿಟಲ್ ಮೀಡಿಯಾ ಇರಲಿಲ್ಲ. ಅದು ಫಿಲ್ಮ್ ರೀಲ್‌ಗಳ ಕಾಲ. ಪ್ರೇಕ್ಷಕರ ಗುಂಪಿನಲ್ಲಿದ್ದ ಒಬ್ಬಾತ ಫಿಲ್ಮ್ ರೀಲ್‌ಗಳು ಯಾವ ರೈಲಿನಲ್ಲಿ ಬರಬೇಕಿತ್ತೋ ಆ ರೈಲು ತಡವಾಗಿ ಬರುತ್ತಿದೆ ಎಂದು ಹೇಳುತ್ತಾನೆ. ಟಿಕೆಟ್ ಪಡೆದಿದ್ದ ಹಲವಾರು ಪ್ರೇಕ್ಷಕರು ಚಿತ್ರಮಂದಿರವನ್ನು ಬಿಟ್ಟು ರೈಲ್ವೆ ನಿಲ್ದಾಣದ ಕಡೆ ಓಡಲಾರಂಭಿಸಿದರು. ಆ ಚಿತ್ರದ ಫಿಲ್ಮ್ ರೀಲ್‌ಗಳನ್ನು ಆದಷ್ಟು ಬೇಗನೆ ರೈಲ್ವೆ ನಿಲ್ದಾಣದಿಂದ ಚಿತ್ರಮಂದಿರಕ್ಕೆ ತರುವುದು ಅಭಿಮಾನಿಗಳ ಉದ್ದೇಶವಾಗಿದ್ದಿರಬಹುದು.

ಈಗಿನ ಮಕ್ಕಳಿಗೆ ಈ ಕಥೆ ಹೇಳಿದರೇ ಅವರು ಹುಚ್ಚಾಪಟ್ಟೆ ನಗಬಹುದು. ಅಥವಾ ಹೀಗೂ ಒಂದು ಕಾಲವಿತ್ತೇ ಎಂದು ಅಚ್ಚರಿ ವ್ಯಕ್ತಪಡಿಸಬಹುದು. ಈ ಪೀಳಿಗೆಯವರು ತಮಗೆ ಬೇಕಾದ ಚಿತ್ರವನ್ನು ಕ್ಷಣಮಾತ್ರದಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋದಂತಹ ಓಟಿಟಿ ವೇದಿಕೆಯಲ್ಲಿ ನೋಡಬಹುದು. ತಮ್ಮ ಮೆಚ್ಚಿನ ತಾರೆಯರ ಹೊಸ ಚಿತ್ರ ಬಿಡುಗಡೆಯಾದರೆ ಅದನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ, ಸಾಲಿನಲ್ಲಿ ಗಂಟೆಗಟ್ಟಲೇ ಕಾಯುವ, ಟಿಕೆಟ್ ಪಡೆದ ನಂತರವೂ ಚಲನಚಿತ್ರ ಆರಂಭವಾಗುವವರೆಗೆ ಚಿತ್ರಮಂದಿರದೊಳಗೆ ಬೇಡದ ಜಾಹೀರಾತುಗಳನ್ನು ನೋಡುತ್ತಾ ಸಹನೆ ಕಳೆದುಕೊಳ್ಳುವ ಅಗತ್ಯವಿಲ್ಲ. `ಕಾಲ ಬದಲಾಯಿತು’ ಅಂದರೆ ಇದೇ ಅಲ್ಲವೇ?

ಚಲನಚಿತ್ರಗಳ ಬಗ್ಗೆ ಹಾಗೂ ಮೆಚ್ಚಿನ ತಾರೆಯರ ಮೇಲೆ ಅಭಿಮಾನಿಗಳಿಗಿರುವ ಹುಚ್ಚು ಕಡಿಮೆಯಾಗಿಲ್ಲ. ಆದರೆ ತಂತ್ರಜ್ಞಾನ ಬದಲಾಗಿದೆ. ಚಲನಚಿತ್ರಗಳು, ಕಿರುಚಿತ್ರಗಳು, ಧಾರಾವಾಹಿಗಳು ಹಾಗೂ ಸಾಕ್ಷ್ಯಚಿತ್ರಗಳು ನಮ್ಮನ್ನು ತಲುಪುವ ಬಗೆ ಬದಲಾಗಿದೆ. ಇದು ಮನರಂಜನೆ ಉದ್ಯಮದ ಹಾಗೂ ಪ್ರಾದೇಶಿಕ ಚಿತ್ರೋದ್ಯಮಗಳ ಬೆಳವಣಿಗೆಗೆ ಮಾರಕವೇ ಅಥವಾ ಪೂರಕವೇ ಎಂಬ ಚರ್ಚೆಗಳು ನಡೆಯುತ್ತಿವೆ.

ಓಟಿಟಿ ವೇದಿಕೆಗಳು

ನೆಟ್‌ಫ್ಲಿಕ್ಸ್ 2016ರ ಜನವರಿಯಲ್ಲಿ ಭಾರತಕ್ಕೆ ಲಗ್ಗೆಯಿಟ್ಟ ಮೊದಲ ಓಟಿಟಿ ವೇದಿಕೆ. `ಓವರ್ ದಿ ಟಾಪ್’ ಎಂಬ ಪದದ ಸಂಕ್ಷಿಪ್ತ ರೂಪ ಓಟಿಟಿ. ಇದು ಚಲನಚಿತ್ರಗಳು ಹಾಗೂ ಧಾರಾವಾಹಿಗಳನ್ನು ಅತೀ-ವೇಗದ ಇಂಟರ್‌ನೆಟ್ ಸಂಪರ್ಕದ ಮೂಲಕ ಗ್ರಾಹಕರಿಗೆ ಒದಗಿಸುವ ಸಂವಾದಾತ್ಮಕ ವ್ಯವಸ್ಥೆಯಾಗಿದೆ. ಇದಕ್ಕೂ ಮುನ್ನ ಡಿಟಿಹೆಚ್ (ಡೈರೆಕ್ಟ್ ಟು ಹೋಮ್) ಗ್ರಾಹಕರಿಗೆ ನೇರವಾಗಿ ಚಲನಚಿತ್ರಗಳು, ಸುದ್ಧಿ, ಟಿವಿ ಧಾರಾವಾಹಿಗಳು, ಇತ್ಯಾದಿ ಶ್ರವಣ-ದೃಶ್ಯ ಸರಕನ್ನು ಸ್ಯಾಟ್‌ಲೈಟ್-ಕೇಬಲ್ ಮೂಲಕ ಒದಗಿಸುವ ಸಾಧನವಾಗಿತ್ತು.

ಓಟಿಟಿ ಪ್ಲಾಟ್‌ಫಾರಂ ಸಂವಾದಾತ್ಮಕ ಮಾಧ್ಯಮವಾಗಿದ್ದು, ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಹೆಚ್ಚು ಪ್ರಯೋಜನಗಳನ್ನು ನೀಡುತ್ತಾ ಜನಪ್ರಿಯ ಮಾಧ್ಯಮವಾಗಿ ಬೆಳೆಯುತ್ತಿದೆ. ನೆಟ್‌ಫ್ಲಿಕ್ಸ್ ಬೆಳೆದ ವೇಗ ಮನರಂಜನೆ ಉದ್ಯಮಕ್ಕೆ ದಿಗ್ಭ್ರಮೆ ಮೂಡಿಸಿದೆ ನಿಜ. ಆದರೆ ಜೊತೆಯಲ್ಲೇ ಈ ಬೆಳವಣಿಗೆ ಉದ್ಯಮಕ್ಕೆ ಅವಕಾಶಗಳ ಬಾಗಿಲುಗಳನ್ನೂ ತೆರೆದಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ, ಹಾಟ್ ಸ್ಟಾರ್, ಝೀ 5, ಸನ್‌ನೆಕ್ಸ್ಟ್ ಸೇರಿದಂತೆ ಸುಮಾರು 40 ಓಟಿಟಿ ವೇದಿಕೆಗಳು ಭಾರತದಲ್ಲೀಗ ಮಾರುಕಟ್ಟೆಯಲ್ಲಿದ್ದು ಪ್ರೇಕ್ಷಕರನ್ನು ಸೆಳೆಯಲು ತೀವ್ರ ಪೈಪೋಟಿ ನಡೆಸುತ್ತಿವೆ.

ಓಟಿಟಿ ವೇದಿಕೆಗಳು ಚಲನಚಿತ್ರ ವೀಕ್ಷಣೆಯನ್ನು ಅನುಕೂಲಕರವಾಗಿಯೂ, ಕೈಗೆ ಸಿಗುವಂತೆಯೂ ಹಾಗೂ ಕೈಗೆಟುಕುವಂತೆಯೂ ಮಾಡಿವೆ. ಕೋವಿಡ್19ಗೂ ಮುನ್ನ ಒಬ್ಬ ಗ್ರಾಹಕ ಓಟಿಟಿ ವೇದಿಕೆಯ ಮೇಲೆ ಪ್ರತಿ ನಿತ್ಯ ಸರಾಸರಿ 35 ನಿಮಿಷಗಳನ್ನು ವ್ಯಯಿಸುತ್ತಿದ್ದ. ಪ್ರಸ್ತುತ ಆ ಸರಾಸರಿ ಸಮಯ ಒಂದು ಗಂಟೆಗೇರಿದೆ.

ಉದ್ಯಮ ಬೆಳೆಯಲಿದೆಯೇ?

ದೃಶ್ಯ ವಿಷಯವಸ್ತುವನ್ನು (ವಿಷ್ಯುಯಲ್ ಕಂಟೆಂಟ್) ಜನರಿಗೆ ತಲುಪಿಸುವ ರೀತಿಯನ್ನೇ ಬದಲಿಸಿರುವ ಓಟಿಟಿ ವೇದಿಕೆಗಳು ನಮ್ಮ ಚಿತ್ರೋದ್ಯಮದ ಬೆಳವಣಿಗೆಗೆ ಹೇಗೆ ನೆರವಾಗಲಿದೆ ಎಂಬ ಪ್ರಶ್ನೆಗಳು ಉದ್ಯಮದ ಎಲ್ಲರಲ್ಲೂ ಮೂಡುತ್ತಿವೆ. ಓಟಿಟಿ ವೇದಿಕೆಗಳು ಯಾವುದೇ ಔಪಚಾರಿಕ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹಾಗೂ ಪ್ರಚಾರದ ನೆರವಿಲ್ಲದೇ, ನೇರವಾಗಿ ಪ್ರಪಂಚಾದಾದ್ಯಂತ ಪ್ರೇಕ್ಷಕರಿಗೆ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಧಾರಾವಾಹಿಗಳು ಹಾಗೂ ಇತರೇ ಕಾರ್ಯಕ್ರಮಗಳನ್ನು ತಲುಪಿಸುತ್ತವೆ. ಈ ವೇದಿಕೆಗಳು ನಿರ್ಮಾಣಗಳ ಗುಣಮಟ್ಟವನ್ನು ಹೆಚ್ಚಿಸುತ್ತಿವೆ.

ಪ್ರಸ್ತುತ ಈ ವೇದಿಕೆಗಳ ಮೂಲಕ ಯಾವುದೇ ಪ್ರೇಕ್ಷಕ ತನ್ನ ಮನೆಯಲ್ಲೇ ಎಲ್ಲಾ ಬಗೆಯ ಚಲನಚಿತ್ರಗಳು ಹಾಗೂ ಇತರೇ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಿರುವುದರಿಂದ ಹಾಗೂ ಆತನಿಗೆ ಆಯ್ಕೆಗಳು ಸುಲಭವಾಗಿ ಲಭ್ಯವಿರುವುದರಿಂದ ಆತ ತನ್ನ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಉತ್ತಮ ಗುಣಮಟ್ಟದ ವಿಷಯವನ್ನು ನೋಡಲು ಬಯಸುತ್ತಾನೆ. ಇದು ಸಹಜವಾಗಿ ವಿಷಯವಸ್ತುವಿನ (ಕಂಟೆಂಟ್) ಗುಣಮಟ್ಟವನ್ನು ಹೆಚ್ಚಿಸುತ್ತವೆ. ಜೊತೆಗೆ ಕೆಲವು ಓಟಿಟಿ ವೇದಿಕೆಗಳು ಜಾಹೀರಾತುಗಳನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಾ ಹೋಗುತ್ತವೆ. ಇದರಿಂದ ಸಹಜವಾಗಿ ಇನ್ನೂ ಹೆಚ್ಚು ಅಗ್ಗದ ದರದಲ್ಲಿ ಉತ್ತಮ ಚಲನಚಿತ್ರಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ.

ಓಟಿಟಿ ವೇದಿಕೆಗಳಿಂದ ಮನರಂಜನೆ ಉದ್ಯಮಕ್ಕೆ ಲಾಭವೇ ಅಥವಾ ನಷ್ಟವೇ ಎಂಬ ಪ್ರಶ್ನೆ ಏಳುತ್ತದೆ. ಓಟಿಟಿ ವೇದಿಕೆಗಳು ಹೆಚ್ಚಾದಂತೆಲ್ಲಾ, ಹೆಚ್ಚು ಜನಸಂಖ್ಯೆಯನ್ನು ತಲುಪಿದಂತೆಲ್ಲಾ ಹಾಗೂ ಪ್ರೇಕ್ಷಕರು ಹೆಚ್ಚು ಸಮಯವನ್ನು ಓಟಿಟಿಗಳ ಮೇಲೆ ವ್ಯಯಿಸಿದಷ್ಟೂ ಉತ್ತಮ ಕಥಾವಸ್ತುವುಳ್ಳ ಚಲನಚಿತ್ರಗಳ ಮತ್ತು ಧಾರವಾಹಿಗಳ ನಿರ್ಮಾಣಗಳಿಗೆ ಗುಣಮಟ್ಟದ ದೃಷ್ಟಿಯಿಂದಲೂ ಹಾಗೂ ಪ್ರಮಾಣದ ದೃಷ್ಟಿಯಿಂದಲೂ ಬೇಡಿಕೆಯುಂಟಾಗುತ್ತದೆ. ಇದರಿಂದ ಉದ್ಯಮದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ.  ಪ್ರತಿಭಾವಂತರಿಗೆ ಬೆಲೆ ಸಿಗುತ್ತದೆ.

ಈ ದೃಷ್ಟಿಯಿಂದ ಓಟಿಟಿ ತಂತ್ರಜ್ಞಾನ ಹಾಗೂ ವ್ಯವಹಾರದ ಮಾದರಿಯೂ ಉದ್ಯಮಕ್ಕೆ ಪೂರಕವಾಗುತ್ತದೆ ಎಂದು ಹೇಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸಿನೆಮಾ ಮಂದಿರಗಳು ಪ್ರೇಕ್ಷಕರಿಗೆ ವಿಶೇಷ ಅಥವಾ ದುಬಾರಿಯ ಅನುಭವವಾಗಲಿದೆ ಹಾಗೂ ಈಗಾಗಲೇ ಇಂತಹದೊಂದು ಭಾವನೆ ನಮ್ಮಲ್ಲಿ ಮೂಡುತ್ತಿದೆ. ಜನಸಂಖ್ಯೆಯ ಹೆಚ್ಚಿನ ಭಾಗ ತಮ್ಮ ಮನೆಗಳಲ್ಲಿಯೇ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ಹಾಗೂ ಇತರೇ ದೃಶ್ಯ ಕಾರ್ಯಕ್ರಮಗಳನ್ನು ನೋಡಲು ಈಗ ಬಯಸುತ್ತಿದ್ದಾರೆ.

ಅಭಿರುಚಿಯ ನಿಖರ ಮಾಹಿತಿ

ಹಿಂದೆ ಚಲನಚಿತ್ರ ನಿರ್ಮಾಪಕರಿಗೆ ಅವರ ನಿರ್ಮಾಣಗಳು ಬಿಡುಗಡೆಯಾಗಿ ಜನ ಮೆಚ್ಚುವವರೆಗೂ ಅವು ಓಡುವುದೋ ಅಥವಾ ಹೂಡಿದ ಹಣ ಹಿಂತಿರುಗುತ್ತದೋ ಎಂಬ ಖಾತರಿಯಿರಲಿಲ್ಲ. ಜನ ಯಾವುದನ್ನು ಮೆಚ್ಚುತ್ತಾರೆ, ಯಾವುದನ್ನೂ ತಿರಸ್ಕರಿಸುತ್ತಾರೆ, ಅವರ ಮನಸ್ಸಿನಲ್ಲಿ ಏನಿರುತ್ತದೆ ಎಂಬ ಮಾಹಿತಿಯಿರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಓಟಿಟಿ ವೇದಿಕೆಗಳು ದತ್ತಾಂಶಗಳನ್ನು ಸಂಗ್ರಹಿಸುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರತಿಯೊಂದು ಚಲನಚಿತ್ರವನ್ನು ಯಾವ ವಯೋಮಾನದವರು, ಯಾವ ಭೌಗೋಳಿಕ ಪ್ರದೇಶದಲ್ಲಿ, ಯಾವ ಸಮಯದಲ್ಲಿ, ಯಾವ ನಗರದಲ್ಲಿ, ಯಾವ ಹಳ್ಳಿಯಲ್ಲಿ ನೋಡಿದರು, ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಪ್ರೇಕ್ಷಕರಿಗೆ ಇಷ್ಟವಾಗುವ ಕಥಾವಸ್ತುಗಳು ಯಾವುದು, ಯಾವುದಕ್ಕೆ ಬೇಡಿಕೆಯಿದೆ ಎಂಬ ನಿಖರ ಅಂಕಿ-ಅಂಶಗಳು ದೊರಕುತ್ತವೆ. ಈ ದತ್ತಾಂಶವನ್ನು ಉಪಯೋಗಿಸಿಕೊಂಡು ನಿರ್ಮಾಪಕರು ತಮಗೆ ತಟ್ಟಬಹುದಾದ ನಷ್ಟದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಉದ್ಯಮವೂ ಸಹ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ, ನಿರ್ಮಾಪಕರು ಓಟಿಟಿ ವೇದಿಕೆಗಳೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡು ತಮ್ಮ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವ ಹಾಗೂ ನಿರ್ಮಾಣವನ್ನು ಯಶಸ್ವಿಯಾಗುವಂತೆ ಮಾಡುವ ಮಾರ್ಗಗಳನ್ನು ಹುಡುಕಿಕೊಂಡು ನಷ್ಟದ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ಕಾರಣಗಳಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಗುಣಮಟ್ಟದ ಚಲನಚಿತ್ರಗಳನ್ನು ಹಾಗೂ ಧಾರವಾಹಿಗಳನ್ನು ನಿರೀಕ್ಷಿಸಲು ಸಾಧ್ಯವಿದೆ. ಅಲ್ಲದೇ ಎಲ್ಲಾ ನಿರ್ಮಾಣಗಳಿಗೂ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರು ಇರುವುದರಿಂದ ಗುಣಮಟ್ಟಕ್ಕೆ ಆದ್ಯತೆ ನೀಡುವ ನಿರ್ಮಾಣ ಸಂಸ್ಥೆಗಳು ಉತ್ಕೃಷ್ಟ ಮಟ್ಟದ ನಿರ್ಮಾಣಕ್ಕೆ ಕೈಹಾಕಲು ಹಿಂದೆ ಸರಿಯುವುದಿಲ್ಲ. ಈ ಅನುಕೂಲಗಳು ಉದ್ಯಮಕ್ಕೆ ಪೂರಕವಾಗಿ, ಉದ್ಯಮವು ಇನ್ನೂ ಬಲಿಷ್ಠವಾಗಿ ಬೆಳೆಯಲು ನೆರವಾಗಲಿವೆ.

ಪ್ರಾದೇಶಿಕ ಭಾಷೆಯ ಓಟಿಟಿ

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೋ, ಹಾಟ್‌ಸ್ಟಾರ್‌ನಂತಹ ಓಟಿಟಿ ವೇದಿಕೆಗಳು ಬಹುಭಾಷಿತ ಓಟಿಟಿ ವೇದಿಕೆಗಳಾಗಿ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಪ್ರಾದೇಶಿಕ ಭಾಷೆಯನ್ನೇ ಗುರಿ ಮಾಡಿಕೊಂಡಿರುವ ಹಲವಾರು ಓಟಿಟಿ ವೇದಿಕೆಗಳು ಜನಪ್ರಿಯವಾಗುತ್ತಿವೆ. ಅನಿವಾಸಿ ಭಾರತೀಯರನ್ನೇ ಗುರಿ ಮಾಡಿಕೊಂಡು ಅವರಿಗೆ ತಮಿಳು, ತೆಲಗು ಹಾಗೂ ಮಲಯಾಳಂ ಚಲನಚಿತ್ರಗಳನ್ನು ಒದಗಿಸುವ ಉದ್ದೇಶದಿಂದ ಸಿಂಪ್ಲಿ ಸೌಥ್ ಎಂಬ ಸ್ಟ್ರೀಮಿಂಗ್ ಆಪ್ ಆರಂಭವಾಗಿದೆ.

ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋಗಳಂತಹ ಬಲಾಢ್ಯರನ್ನು ಬಿಟ್ಟರೇ ಉಳಿದ ಪ್ರಾದೇಶಿಕ ಸ್ಟ್ರೀಮಿಂಗ್ ಸೇವೆಗಳು ಸದ್ಯದ ಪರಿಸ್ಥಿತಿಯಲ್ಲಿ ವಿಷಯವಸ್ತು (ಕಂಟೆಂಟ್) ಪ್ರಮಾಣ ಹಾಗೂ ಗಳಿಕೆಯಲ್ಲಿ ಪುಟ್ಟದಾಗಿವೆ. ಆದರೆ ಇವುಗಳ ಮಾರುಕಟ್ಟೆ ವ್ಯೂಹತಂತ್ರಗಳು ಇಲ್ಲಿ ಮಹತ್ವ ಪಡೆಯುತ್ತವೆ. ಉದಾಹರಣೆಗೆ  ಪ್ರೈಮ್ ವೀಡಿಯೋ ಹಾಗೂ ನೆಟ್‌ಫ್ಲಿಕ್ಸ್ನಂತಹ ಓಟಿಟಿ ವೇದಿಕೆಯಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ನಂತರ ಇತರೆ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆಯಿದೆ. ಬೆಂಗಾಲಿ ಭಾಷೆಯ ಹಾಯ್ಚೊಯ್ ಎಂಬ ಪ್ರಾದೇಶಿಕ ಓಟಿಟಿ ವೇದಿಕೆಯಲ್ಲಿ ಸುಮಾರು 500 ಬೆಂಗಾಲಿ ಚಲನಚಿತ್ರಗಳಿವೆ.

ಇಂತಹದೊಂದು ಸಾಧ್ಯತೆಯನ್ನು ಬಹುಭಾಷಿತ ಓಟಿಟಿ ವೇದಿಕೆಯಲ್ಲಿ ಕಾಣಲು ಸಾಧ್ಯವಾಗದಿರಬಹುದು. ಇದೇ ರೀತಿ ಸಿಂಪ್ಲಿ ಸೌಥ್ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಯ ಚಲನಚಿತ್ರಗಳಿಗೆ ಆದ್ಯತೆ ನೀಡುವುದರಿಂದ ಈ ಭಾಷೆಗಳ ಚಲನಚಿತ್ರಗಳ ಅಭಿಮಾನಿಗಳು ನೆಟ್‌ಫ್ಲಿಕ್ಸ್ ಅಥವಾ ಪ್ರೈಮ್ ವೀಡಿಯೋದಂತಹ ಬಹುಭಾಷಿತ ಅಂತಾರಾಷ್ಟ್ರೀಯ ವೇದಿಕೆಗಳಿಗೆ ನೀಡುವುದಕ್ಕಿಂತ ಹೆಚ್ಚಿನ ಆದ್ಯತೆಯನ್ನು ನಿಗದಿತ ಪ್ರದೇಶಕ್ಕೆ ಹಾಗೂ ಭಾಷೆಗಳಿಗೆ ಸೀಮಿತವಾಗಿರುವ ಸಿಂಪ್ಲಿ ಸೌಥ್‌ನಂತಹ ಓಟಿಟಿ ವೇದಿಕೆಗೆ ನೀಡಬಹುದು.

ನಮ್ಮ ದೇಶದಲ್ಲಿನ ಹೆಚ್ಚಿನ ಜನಸಂಖ್ಯೆ ಬಹುಭಾಷಿತರಾಗಿದ್ದರೂ, ಅವರು ವಿಷಯವಸ್ತುವನ್ನು ತಮ್ಮ ಮಾತೃಭಾಷೆಯಲ್ಲಿ ಪಡೆಯಲು ಇಚ್ಛಿಸುತ್ತಾರೆ. ಗೂಗಲ್ ಪ್ರಕಾರ ಯೂಟ್ಯೂಬ್‌ನಲ್ಲಿ ವೀಕ್ಷಿಸುವ ಶೇ.97ರಷ್ಟು ವಿಷಯ ಪ್ರಾದೇಶಿಕ ಭಾಷೆಗಳಲ್ಲಿರುತ್ತದೆ. ಅದೇ ರೀತಿ ದೇಶದಲ್ಲಿನ ವಿವಿಧ ಓಟಿಟಿ ವೇದಿಕೆಗಳಲ್ಲಿ ವೀಕ್ಷಿಸುವ ಶೇಕಡ 90ರಷ್ಟು ವಿಷಯ ಪ್ರಾದೇಶಿಕ ಭಾಷೆಗಳಲ್ಲಿರುತ್ತದೆ. ಭಾರತೀಯ ಭಾಷೆಗಳನ್ನು ಮಾತನಾಡುವ ಜನಸಂಖ್ಯೆಯಲ್ಲಿನ ಬಹುತೇಕ ಭಾಗ ತಮ್ಮ ಮಾತೃ ಭಾಷೆಯಲ್ಲಿ ಮಾತ್ರ ವಿಷಯವನ್ನು ವೀಕ್ಷಿಸಲಿಚ್ಛಿಸುವ ಸಾಧ್ಯತೆಯಿದೆ. ಇಂತಹ ಜನಸಂಖ್ಯೆ ಬಹುಭಾಷಾ ಓಟಿಟಿ ವೇದಿಕೆಗಿಂತ ಏಕಭಾಷೆಯ ಓಟಿಟಿ ವೇದಿಕೆಯ ಗ್ರಾಹಕರಾಗುವ ಸಾಧ್ಯತೆ ಹೆಚ್ಚಿದೆ.

ಬಜೆಟ್ ಚಲನಚಿತ್ರಗಳಿಗೆ ವೇದಿಕೆ

ಓಟಿಟಿ ವೇದಿಕೆಗಳ ಪ್ರವೇಶ ಸಣ್ಣ ಬಜೆಟ್‌ನ ಚಲನಚಿತ್ರಗಳಿಗೆ ದೊಡ್ಡ ವೇದಿಕೆಗಳನ್ನು ಸೃಷ್ಟಿ ಮಾಡಿಕೊಡುತ್ತಿದೆ. ಇಂತಹದೊಂದು ಬೆಳವಣಿಗೆಗೆ ಮುನ್ನ ಹಲವಾರು ಸಣ್ಣ ಬಜೆಟ್‌ನ ಚಲನಚಿತ್ರಗಳು ವಿಷಯವಸ್ತು ಚೆನ್ನಾಗಿದ್ದರೂ ಪ್ರಚಾರದ ವೆಚ್ಚವನ್ನೂ ಹಾಗೂ ಚಿತ್ರಮಂದಿರಗಳ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದ ಕಾರಣ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕೆಲವೂ ಚಿತ್ರಗಳಂತೂ ಬಿಡುಗಡೆಯ ಭಾಗ್ಯವನ್ನು ಪಡೆಯುತ್ತಿರಲಿಲ್ಲ. ಯಾವುದೋ ಒಂದೆರಡು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಮರೆಯಾಗುತ್ತಿದ್ದವು. ಈಗ ಹಾಗಲ್ಲ, ವಿಷಯವಸ್ತು ಚೆನ್ನಾಗಿರುವ ಚಿತ್ರಗಳಿಗೆ ಈಗ ಓಟಿಟಿ ವೇದಿಕೆಗಳು ದೊಡ್ಡ ವೇದಿಕೆಗಳನ್ನು ಸೃಷ್ಟಿ ಮಾಡಿಕೊಡುತ್ತಿರುವುದು ಆರೋಗ್ಯಕರ ಹಾಗೂ ಮಹತ್ತರ ಬೆಳವಣಿಗೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಪ್ರಭಾವ

ಮೊಬೈಲ್ ಬಳಕೆ ಹಾಗೂ ಅಂತರ್ಜಾಲ ಸಂಪರ್ಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿದೆ. ಗ್ರಾಮೀಣ ಜನಸಂಖ್ಯೆಯಲ್ಲಿ ಈಗ ವಿಷಯವಸ್ತುವಿನ ಬಳಕೆ (ಕಂಟೆಂಟ್ ಕನ್ಸಮ್ಷನ್) ನಗರ ಪ್ರದೇಶಗಳಿಗಿಂತ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಪ್ರಾದೇಶಿಕ ಅಥವಾ ಸ್ಥಳೀಯ ಭಾಷೆಯ ವಿಷಯವಸ್ತುವಿನ (ರೀಜನಲ್ ಲಾಂಗ್ವೇಜ್ ಕಂಟೆಂಟ್) ಬಳಕೆಯನ್ನು ಹೆಚ್ಚಿಸುತ್ತಿದೆ. ಇದು ನಿಗದಿತ ಪ್ರಾದೇಶಿಕ ಭಾಷೆಯ ಮೇಲೆ ಮಾತ್ರ ಕೇಂದ್ರೀಕರಿಸುತ್ತಿರುವ ಓಟಿಟಿ ವೇದಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ.

ರಿಲೈಯನ್ಸ್ ಜಿಯೋ ಅಂತರ್ಜಾಲ ಶುಲ್ಕವನ್ನು ಕಡಿಮೆ ಮಾಡಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಓಟಿಟಿ ವೇದಿಕೆಯ ಬಳಕೆಯನ್ನು ಹೆಚ್ಚು ಮಾಡಿದೆ. ಬ್ರಾಡ್‌ಬ್ಯಾಂಡ್ ಇಂಡಿಯಾ ಫೋರಮ್ ನ ಮುಖ್ಯಸ್ಥರಾಗಿರುವ ಟಿ ವಿ ರಾಮಚಂದ್ರನ್ ಅವರ ಪ್ರಕಾರ ಓಟಿಟಿ ವೇದಿಕೆಯ ವಿಷಯವಸ್ತುವಿನ (ಕಂಟೆಂಟ್) ಶೇ.65ರಷ್ಟು ಬಳಕೆ ಗ್ರಾಮೀಣ ಪ್ರದೇಶಗಳಿಂದ ಬರುತ್ತಿದೆ. ಈ ಮಾರುಕಟ್ಟೆಯನ್ನು, ಜೊತೆಗೆ ನಗರ ಪ್ರದೇಶಗಳ ಮಾರುಕಟ್ಟೆಯನ್ನು ತಮ್ಮದಾಗಿಸಲು ಓಟಿಟಿ ವೇದಿಕೆಗಳು ವಿನೂತನ ಪ್ರಯತ್ನಗಳನ್ನು ಮಾಡುತ್ತಿವೆ.

ಅಂಡ್ರೈಡ್ ಮೊಬೈಲ್ ಫೋನ್‌ಗಳು, ಮೊಬೈಲ್ ಫೋನ್ ಮಾರುಕಟ್ಟೆಯ ಸುಮಾರು ಶೇ.90ರಷ್ಟು ಪಾಲನ್ನು ಹೊಂದಿವೆ. ಈ ಮೊಬೈಲ್ ಫೋನ್‌ಗಳಲ್ಲಿ ಯೂಟ್ಯೂಬ್ ಅನ್ನು ಪ್ರೀಲೋಡ್ ಮಾಡಲಾಗಿರುತ್ತದೆ. ಅದೇ ರೀತಿ ಅಮೆಜ಼ಾನ್ ಸಹ ಫೋರಮ್ ವೀಡಿಯೋ ಆಪ್ ಅನ್ನು ಮೊಬೈಲ್ ಫೋನ್‌ಗಳಲ್ಲಿ ಪ್ರೀ-ಲೋಡ್ ಮಾಡುವಂತೆ ಹಲವಾರು ಮೊಬೈಲ್ ತಯಾರಕರೊಡನೇ ಒಪ್ಪಂದ ಮಾಡಿಕೊಂಡಿದೆ. ಹಾಟ್ ಸ್ಟಾರ್ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಕ್ರಿಕೆಟ್ ಮ್ಯಾಚ್‌ಗಳನ್ನು ಲೈವ್  ಸ್ಟ್ರೀಮ್ ಮಾಡಲಾರಂಭಿಸುತು. ಇವರೆಲ್ಲರೂ ಪಿರಮಿಡ್‌ನ ತಳ ಭಾಗದ ಗ್ರಾಹಕರನ್ನು ತಲುಪಲು ಸ್ಪರ್ಧಿಸುತ್ತಿದ್ದಾರೆ.

ಹೀಗೆ ಓಟಿಟಿ ವೇದಿಕೆಗಳು ಸ್ಪರ್ಧಾತ್ಮಕವಾಗಿಯೂ, ವೇಗವಾಗಿಯೂ ಬೆಳೆಯುತ್ತಿದ್ದು, ಇದು ಮನರಂಜನೆ ಉದ್ಯಮವನ್ನು ಹೆಚ್ಚು ಸೃಜನಾತ್ಮಕವಾಗಿಯೂ, ಸ್ಪರ್ಧಾತ್ಮಕವಾಗಿಯೂ ಬೆಳೆಸಲು ನೆರವಾಗಲಿದೆ. ಓಟಿಟಿ ವೇದಿಕೆಗಳು ಮನರಂಜನೆ ಉದ್ಯಮದ ಆಟ ಬದಲಿಸಿರುವುದು ನಿಜವಾದರೂ ಕಡೆಯಲ್ಲಿ ಈ ಬದಲಾವಣೆಯಿಂದ ಎಲ್ಲರಿಗಿಂತ ಹೆಚ್ಚು ಪ್ರಯೋಜನ ಪಡೆಯುವವನು ಗ್ರಾಹಕನಾಗಿರುತ್ತಾನೆ.

Leave a Reply

Your email address will not be published.