ಮನುಷ್ಯನ ವಿಕಾಸದ ಹಾದಿ ಎತ್ತ ಸಾಗಿದೆ?

ಮನುಷ್ಯ ಇನ್ನೂ ವಿಕಾಸವಾಗುತ್ತಿದ್ದಾನೆಯೆ ಅಥವಾ ವಿಕಾಸ ಬಂದ್ ಆಗಿದೆಯೆ? ವಿಜ್ಞಾನ ವಲಯದಲ್ಲಿ, ಅದರಲ್ಲೂ ಜೀವಿವಿಜ್ಞಾನ ಕ್ಷೇತ್ರದಲ್ಲಿ ಬಹು ದೀರ್ಘಕಾಲ ಅಧ್ಯಯನ ಮಾಡಿ ಅಂಕಿಅಂಶಗಳ ಮೂಲಕ ಪ್ರಸ್ತುತಪಡಿಸಬೇಕಾದ iಹಾ ಗೋಜಲಿನ ವಿಚಾರ ಇದು. ಹಾಗೆ ನೋಡಿದರೆ ಕಗ್ಗಂಟನ್ನು ಬಿಡಿಸುವಲ್ಲಿ ವಿಜ್ಞಾನಿಗಳು ಇನ್ನೂ ಹೋರಾಡುತ್ತಿದ್ದಾರೆ, ಒಂದರ್ಥದಲ್ಲಿ ಗೊಂದಲದಲ್ಲಿದ್ದಾರೆ. ಇಂಥ ವಿಷಯವನ್ನು ಕೈಗೆತ್ತಿಕೊಳ್ಳುವಾಗ ತಜ್ಞರು ಲಕ್ಷಾಂತರ ವರ್ಷಗಳ ಹಿಂದಿನ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಅದೇ ಹೊತ್ತಿನಲ್ಲಿ ಆಧುನಿಕ ಬದುಕು ಕೊಟ್ಟಿರುವ ಸವಾಲುಗಳನ್ನು, ಸಮಸ್ಯೆಗಳನ್ನು ಅತ್ತ ಸರಿಸಿ ಮುಂದೆ ಹೋಗುವಂತಿಲ್ಲ.

-ಟಿ.ಆರ್.ಅನಂತರಾಮು

ಹೋಮೋಸೇಪಿಯನ್ಮತಿವಂತ ಮಾನವ

ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ತುಂಬ ಹಿಂದೆ ರಾಯಲ್ ಸೊಸೈಟಿ 2020ರಲ್ಲಿ ಒಂದು ಗಂಭೀರ ಚರ್ಚಾಗೋಷ್ಠಿ ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಿದ್ದವರೆಲ್ಲ ವಿಜ್ಞಾನಿಗಳೇ, ಶ್ರೋತೃಗಳು ಕೂಡ ಹೆಚ್ಚಿನ ಪಾಲು ವಿಜ್ಞಾನದ ಹಿನ್ನೆಲೆ ಇದ್ದವರು.

ಸ್ಟೀವ್ ಜೋಟಿಜಿsಜಿ ಎಂಬ ಮಹಾ ಪ್ರತಿಭಾವಂತ ತಳಿವಿಜ್ಞಾನಿ `ವಿಕಾಸದ ಕಥೆ ಮುಗಿಯಿತೆ?’ ಎಂಬ ಗಹನ ಚರ್ಚೆಗೆ ಪೀಠಿಕೆ ಹಾಕುತ್ತ, `ಇನ್ನೆಲ್ಲಿಯ ವಿಕಾಸ, ಅದು ನಿಂತೇ ಹೋಗಿದೆ. ಈಗಿನ ಪರಿಭಾಷೆಯಲ್ಲಿ ವಿಕಾಸ ಎಂದರೆ ನಾವು ಬರಿ ಕಳಪೆ ಮಟ್ಟದ್ದು ಮಾತ್ರ ಮುಂದೆ ಕಾಣಿಸುತ್ತದೆ ಎಂದು ಭಾವಿಸಬೇಕು. ಡಾರ್ವಿನ್, ಸಂತಾನಾಭಿವೃದ್ಧಿ ಕುರಿತು ಹೇಳಿದ ಮಾತು ಇಂದು ಪ್ರಸ್ತುತವಲ್ಲ. ನೀವೇ ಬೇಕಾದರೆ ಕಣ್ಣಾರೆ ನೋಡಬಹುದು. ಬದುಕುಳಿಯಬೇಕಾದರೆ ಸಂತಾನ ಮುಂದುವರಿಯಬೇಕು, ತಾಕತ್ತಿದ್ದವರು ಮಾತ್ರ ಉಳಿಯುತ್ತಾರೆ. ಅದಕ್ಕೆ ತಕ್ಕ ಪರಿಸರಬೇಕು ಅಥವಾ ಹೊಂದಿಕೊಳ್ಳಬೇಕು. ಇದೇ ತಾನೇ ಡಾರ್ವಿನ್ ತತ್ತ್ವದ ಜೀವಾಳ. ಅಭಿವೃದ್ಧಿಯಾಗಿರುವ ಯಾವ ದೇಶವನ್ನೇ ನೋಡಿ ಅಲ್ಲಿ ಸಂತಾನಾಭಿವೃದ್ಧಿಗೆ ಹಾಗೂ ಬದುಕಿಗೆ ಏನು ತೊಂದರೆ? ಬಡವ-ಬಲ್ಲಿದ ಎಂಬ ಭೇದವೂ ಇಲ್ಲದೆ ಅಂಥ ದೇಶಗಳಲ್ಲಿ ಸಂತಾನಾಭಿವೃದ್ಧಿ ಧಾರಾಳವಾಗಿ ಮುಂದುವರಿಯುತ್ತದೆ. ಇಲ್ಲಿ ಬದುಕುಳಿಯುವ ಪ್ರಶ್ನೆ ಎಲ್ಲಿಂದ ಬಂತು? ಸಂತಾನ ಸೃಷ್ಟಿಸಲು ಎಲ್ಲರಿಗೂ ಅವಕಾಶವಿದೆ. ಅಂದಮೇಲೆ ಸಮರ್ಥರಷ್ಟೇ ಉಳಿಯುತ್ತಾರೆ ಎಂಬುದರಲ್ಲಿ ಏನರ್ಥ? ನಮ್ಮ ದೇಹದಲ್ಲಿ ಜೀನ್ ಏನು ಪರಿವರ್ತನೆ ತರುತ್ತದೆ ಎನ್ನುವುದಕ್ಕಿಂತ ಬದುಕುಳಿಯಲು ನಮಗೆ ದೊರೆತಿರುವ ಅವಕಾಶ, ಅನುಕೂಲಗಳೇನು ಎಂಬುದು ಮುಖ್ಯ’ ಎಂದಾಗ ಸಭಿಕರಷ್ಟೇ ಅಲ್ಲ, ಸಹ ವಿಜ್ಞಾನಿಗಳು ಕೂಡ ಒಂದರೆಕ್ಷಣ ತಬ್ಬಿಬ್ಬಾಗಿದ್ದರು. ಇದರರ್ಥ ಜೀವಿ ವಿಕಾಸ ನಿಂತುಹೋಗಿದೆ ಎಂದಲ್ಲ ಎಂಬುದನ್ನು ಅರಿಯಲು ಮುಂದಿನ ಭಾಷಣಕಾರರವರೆಗೆ ಕಾಯಬೇಕಾಯಿತು.

ತಲೆ ದಪ್ಪವಾಗುತ್ತದೆಯೆ?

ಸ್ಟೀಪನ್ ಜೆ. ಗೋಲ್ಡ್, ವಿಕಾಸ ಜೀವಿವಿಜ್ಞಾನದಲ್ಲಿ ಬಹು ದೊಡ್ಡ ಹೆಸರು. ಈತ ಕ್ರಿ.ಶ. 2000ದಲ್ಲಿ ಒಮ್ಮೆ ಒಂದು ವಿಚಾರಗೋಷ್ಠಿಯಲ್ಲಿ ರಾಜಾರೋಷವಾಗಿಯೇ ಘೋಷಿಸಿದ್ದ `ಕಳೆದ 50,000 ವರ್ಷಗಳಲ್ಲಿ ಅಂದರೆ ಮನುಷ್ಯ ಸೊಂಟ ಎತ್ತಿ ನೆಟ್ಟಗೆ ಎರಡು ಕಾಲಿನ ಮೇಲೆ ನಿಂತು ನಡೆಯಲು ಪ್ರಾರಂಭಿಸಿದಾಗಿನಿಂದ ಯಾವ ಮಹತ್ತರ ದೈಹಿಕ ಬದಲಾವಣೆಯಾಗಿದೆ ತೋರಿಸಿ. ನನ್ನ ದೃಷ್ಟಿಯಲ್ಲಿ ಮನುಷ್ಯನ ವಿಕಾಸ ನಿಧಾನಗತಿಯಲ್ಲಿ ಸಾಗಿದೆ ಎನ್ನುವ ಬದಲು ಈಗ ನಿಂತೇಹೋಗಿದೆ ಎಂದರೆ ಅದಕ್ಕೆ ಹೆಚ್ಚು ಅರ್ಥವಿದೆ’ ಎಂದಾಗಲೂ ಮನುಷ್ಯನ ವಿಕಾಸದ ಬಗ್ಗೆ ತಿಳಿಯಬಯಸುವವರಿಗೆ ಹಿಂದಿನ ಗೊಂದಲಕ್ಕೆ ಇನ್ನೂ ಒಂದು ಸಿಕ್ಕು ಸೇರಿಕೊಂಡಂತಾಯಿತು.

ಏಕೆಂದರೆ ಗೋಲ್ಡ್ ಸಾಧಾರಣ ಜೀವಿವಿಜ್ಞಾನಿಯಲ್ಲ, ಅವನು ನವಡಾರ್ವಿನ್ ವಾದದ ಹಿನ್ನೆಲೆಯಲ್ಲಿ ಬರೆದ ಎಲ್ಲ ಕೃತಿಗಳೂ `ಬೆಸ್ಟ್ ಸೆಲ್ಲರ್’ಗಳೇ. ಆತನ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ ಅವನ ಹೆಸರು ಕೇಳಿರದ ಜೀವಿವಿಜ್ಞಾನಿಗಳೇ ಇಲ್ಲ ಎನ್ನಬಹುದು. ಆದರೆ ಅವನ ಮೇಲಿನ ಹೇಳಿಕೆಯ ಬಗ್ಗೆ ಎಲ್ಲರಿಗೂ ಸಮಾಧಾನವಿರಲಿಲ್ಲ. ಇಷ್ಟೊಂದು ಬುದ್ಧಿವಂತ, ಯಾಕೆ ಇಂಥ ತೀರ್ಮಾನಕ್ಕೆ ಬಂದ? ಎಂದು ಕೈ ಕೈ ಹಿಸುಕಿಕೊಂಡವರೇ ಹೆಚ್ಚು.

ಜೆ.ಗೋಲ್ಡ್ ಅತ್ಯುತ್ತಮ ಪುಸ್ತಕ

ಬ್ರಿಟನ್ನಿನ ಪ್ರಕೃತಿ ವಿಜ್ಞಾನಿ ಬಿ.ಬಿ.ಸಿ.ಯಲ್ಲಿ, ಜೀವಿವಿಜ್ಞಾನ ಕುರಿತು, ವಿಶೇಷವಾಗಿ ಜೀವಿವಿಕಾಸ ಕುರಿತು ಅತ್ಯಂತ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದ ಸರ್ ಡೇವಿಡ್ ಅಟನ್‍ಬರೋನ ಅಭಿಪ್ರಾಯ ಕೂಡ ಗೋಲ್ಡ್‍ನ ಅಭಿಪ್ರಾಯದ ಅನುರಣನ ಎನ್ನಬಹುದು- `ಸಂತಾನಾಭಿವೃದ್ಧಿಯ ಮತ್ತು ಬದುಕುಳಿಯುವ ಮಾತು ಎಲ್ಲಿ ಬಂತು? ಸಂತಾನ ನಿಯಂತ್ರಣವೇ ನಮ್ಮ ಕೈಯ್ಯಲ್ಲಿದೆ ಎಂದರೆ ದೈಹಿಕ ವಿಕಾಸದ ನಿಯಂತ್ರಕರು ನಾವೇ ಅಲ್ಲವೆ? ವಿಕಾಸಕ್ಕೇನು ಕೆಲಸ? ನನ್ನ ಮಟ್ಟಿಗೆ ಅದು ಗೊಂದಲವಲ್ಲ, ನಿಂತೇ ಹೋಗಿದೆ ಎಂಬ ಪ್ರಶ್ನೆ ಕೇಳಬೇಕಾದ ಸಮಯ ಇದು’ ಎನ್ನುತ್ತಾನೆ ಅಟನ್‍ಬರೋ.

ಸಂತಾನ ಮುಂದುವರಿಯಬೇಕೆಂದರೆ ವಿಕಾಸದ ಪಥವನ್ನು ನಾವು ಗಮನಿಸಬೇಕಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಹೋಲಿಕೆ ಮಾಡಿಯೇ ಹೇಳಬೇಕು. ಇಡೀ ಜಗತ್ತೇ ಜನನ ನಿಯಂತ್ರಣಕ್ಕೆ ಮುಂದಾಗುವುದಿಲ್ಲ. ಹಾಗಿರದಿದ್ದರೆ ಈಗ ಭೂಮಿಯ ಮೇಲೆ ನಾವು 700 ಕೋಟಿ ದಾಟಲು ಹೇಗೆ ಸಾಧ್ಯವಾಗುತ್ತದೆ. ವಿಕಾಸ ಎನ್ನುವುದು ಡಾರ್ವಿನ್ ಹೇಳಿದಂತೆ ನಿಧಾನಗತಿಯ ಪ್ರಕ್ರಿಯೆ. ಅದು ನಿಲ್ಲುವುದಿಲ್ಲ ಎನ್ನುವುದನ್ನಂತೂ ನಾವು ನಿರಾಕರಿಸುವಂತಿಲ್ಲ. ಆದರೆ ಬದುಕುಳಿಯುವುದು ಎಂಬ ಪರಿಕಲ್ಪನೆಯನ್ನು ಸದ್ಯದಲ್ಲಿ ವಿಜ್ಞಾನಿಗಳು ನಮ್ಮ ಸಂಸ್ಕೃತಿಯ  ಹಿನ್ನೆಲೆಯಲ್ಲಿ ನೋಡಲು ಪ್ರಾರಂಭಿಸಿದ್ದಾರೆ. ಅಂದರೆ ಅದು ಮಾನವಮತಿಯ ನಿರ್ಧಾರ. ಪೂರ್ಣ ಸ್ವಾತಂತ್ರ್ಯ ಮತ್ತು ನಿರ್ಧಾರದ ಅನುಷ್ಠಾನ ನಮ್ಮದೇ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ. ಇಂದಿನ ತಾಂತ್ರಿಕ ಪ್ರಗತಿಯನ್ನು ತಂತ್ರಜ್ಞರಷ್ಟೇ ಅಲ್ಲ, ಜನಸಾಮಾನ್ಯರೂ ಗಮನಿಸುತ್ತಿದ್ದಾರೆ. ಅಷ್ಟೇ ಅಲ್ಲ, ನಾವೆಲ್ಲ ಅದರ ಫಲಾನುಭವಿಗಳು ಕೂಡ.

ದಪ್ಪ ತಲೆಪುಟ್ಟ ದೇಹ?

ಮುಂದಿನ ಜನಾಂಗ ಹೇಗಿರಬಹುದು ಎಂಬುದಕ್ಕೆ ಸರ್ವಸಾಮಾನ್ಯ ಉತ್ತರ ಮಿದುಳಿಗೆ ಕೆಲಸ ಜಾಸ್ತಿ, ಶರೀರಕ್ಕೆ ಕಡಿಮೆ. ಹೀಗಾಗಿ ಮುಂದಿನ ಪೀಳಿಗೆಗೆ ತಲೆ ದಪ್ಪವಾಗಬಹುದು, ಕೈಕಾಲು ಸಣ್ಣಗಾಗಬಹುದು. ಜನಸಾಮಾನ್ಯರಿಂದ ಈ ಬಗೆಯ ಉತ್ತರ ಬಂದರೆ ಅದೇನೂ ಅಚ್ಚರಿ ಹುಟ್ಟಿಸುವುದಿಲ್ಲ. ತಂತ್ರಜ್ಞಾನ ಈಗ ಡ್ರೈವರ್ ಸೀಟಿನಲ್ಲಿ ಕೂತಿದೆ. ನಾವೆಲ್ಲ ಪ್ರಯಾಣಿಕರು ಅಷ್ಟೇ.

ಮನುಷ್ಯನ ವಿಕಾಸದ ಪಥದ ಹಲವು ಹಂತಗಳನ್ನು ಮಾನವ ವಿಜ್ಞಾನ ಪರಿಣತರು ನಮ್ಮ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಬಹು ಮುಖ್ಯವಾಗಿ ನಮಗೆ ಲಭ್ಯವಾಗಿರುವ ಆದಿಮಾನವನ ತಲೆ ಬುರುಡೆಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಗಮನಿಸಿರುವ ಅಂಶವೆಂದರೆ ಸುಮಾರು ಎರಡು ಲಕ್ಷ ವರ್ಷಗಳ ವಿಕಾಸದ ಇತಿಹಾಸದಲ್ಲಿ ತಲೆ ಬುರುಡೆಯ ಗಾತ್ರ ಅಷ್ಟೇನೂ ದೊಡ್ಡ ಪ್ರಮಾಣದ ವ್ಯತ್ಯಯ ತೋರಿಲ್ಲ. ಶರೀರ ಹೊರಲಾಗದಷ್ಟು ತಲೆ ಬುರುಡೆ ಯಾವ ಹಂತದಲ್ಲೂ ಭಾರವಾಗಿಲ್ಲ ಅಥವಾ ದಪ್ಪವಾಗಿಲ್ಲ. ಅದೊಂದೆ ಅಂಗ ಉಳಿದವನ್ನೆಲ್ಲ ಸ್ಪರ್ಧೆಯಲ್ಲಿ ಹಿಂದಿಕ್ಕಿ ಬೆಳೆಯಲಾರದು.

ತಲೆಬುರುಡೆಗಳು

ಧರ್ಮಗ್ರಂಥಗಳು ಮನುಷ್ಯನ ಉಗಮವನ್ನು ತಮಗೆ ಬೇಕಾದ ಅಥವಾ ತಿಳಿದ ರೀತಿಯಲ್ಲಿ ಬಿಂಬಿಸುತ್ತ ಬಂದಿವೆ. `ಮಾನವಜನ್ಮ ದೊಡ್ಡದು’ ಎಂದು ನಮ್ಮ ಪುರಂದರದಾಸರೇ ಹೇಳಿದ್ದಾರಲ್ಲ. ಇಲ್ಲಿ ಉದ್ದೇಶ ವಿವೇಚನೆ ಮಾಡುವ ಶಕ್ತಿ ಇರುವಾಗ ಒಳಿತು ಕೆಡಕನ್ನು ತೂಗಿನೋಡು ಎಂಬ ಅರ್ಥವಷ್ಟೇ ಮುಖ್ಯವಾಗುತ್ತದೆ. ಮಾನವಜನ್ಮ ಈಗಿನ ಹಲವು ಹಂತಗಳನ್ನು ತಲಪುವ ಮುನ್ನ ಏನಾಗಿತ್ತು ಎಂದು ಕೇಳಿದರೆ ಅದಕ್ಕೆ ಉತ್ತರ ಈಗಾಗಲೇ ಡಾರ್ವಿನ್ನಿಂದಲೇ ಬಂದಿದೆ.

ಕಪಿಯಂಥ ಒಂದು ಜೀವಿ ಚಿಂಪಾಂಜಿಗೂ ಮನುಷ್ಯನಿಗೂ ಮೂಲವಾಗಿರಬಹುದು. ಅನಂತರ ಚಿಂಪಾಂಜಿ ಮತ್ತು ಮನುಷ್ಯ ವಿಕಾಸದ ಬೇರೆ ಹಾದಿ ಹಿಡಿದಿರಬಹುದು ಎಂಬುದು ಈಗಲೂ ಒಪ್ಪಿರುವ ಸಿದ್ಧಾಂತ. `ಮಿಸ್ಸಿಂಗ್ ಲಿಂಕ್ಸ್’ ಇನ್ನೂ ಸಿಕ್ಕಿಲ್ಲ. ಅದೇ ಮಾನವ ಇತಿಹಾಸದ ಬಹು ದೊಡ್ಡ ಅಣಕ ಕೂಡ. ನಾವೆಲ್ಲರೂ ಆಫ್ರಿಕದ ಮೂಲದವರು ಎಂಬ ಸಂಗತಿಯನ್ನು ಸಾಕ್ಷಿ ಸಮೇತ ವಿಜ್ಞಾನ ಒಪ್ಪುವ ರೀತಿಯಲ್ಲಿ ನಮ್ಮ ಮುಂದಿಟ್ಟಿದೆ. ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕದಲ್ಲಿ ಕಾಣಿಸಿಕೊಂಡ ಹೋಮೋಸೇಪಿಯನ್ ಎಂದು ನಾವು ಕರೆದಿರುವ ಮೂಲಪುರುಷ ಬಹುಶಃ 50000ದಿಂದ 70000 ವರ್ಷಗಳ ಹಿಂದೆ ಆಫ್ರಿಕ ತೊರೆದು ವಲಸೆಹೊರಟು ಬೇರೆ ಬೇರೆ ಖಂಡಗಳಲ್ಲಿ ನೆಲೆಯೂರಲು ಸಹಸ್ರ ಸಹಸ್ರ ವರ್ಷಗಳೇ ಬೇಕಾದವು. ಅದೊಂದು ಮಹಾಯಾನ. ತಡೆದು ತಡೆದು ಮುಂದೆ ಹೋದ ಯಾನ.

ವಿಕಾಸದಲ್ಲಿ ಕವಲು

ಬೇಟೆಯಿಂದ ಸಿಕ್ಕಿದ, ಹಸಿಮಾಂಸದಿಂದ ಪ್ರಾರಂಭವಾದ ಆಹಾರ ಪದ್ಧತಿಗೆ ನೆರವಾದ್ದು ಕಲ್ಲುಗಳನ್ನು ಉಜ್ಜಿದರೆ ಬೆಂಕಿ ಬರುತ್ತದೆಂಬ ತಿಳಿವು. ಅದು ಮೊದಲ ತಂತ್ರಜ್ಞಾನ; ಮನುಷ್ಯನಿಗೆ ವಶವಾದ ಸುಮುಹೂರ್ತ ಎನ್ನಬಹುದು. ಉಳಿದ ಜ್ಞಾನವೆಲ್ಲ ಅದರ ಹಿಂಬಾಲಕ ಜ್ಞಾನ ಅಷ್ಟೇ. ಉಳಿದ ಜೀವಿಗಳಿಗಿಂತ ಮನುಷ್ಯ ಅತಿ ಸಂಕೀರ್ಣ ಪರಿಸರಕ್ಕೆ ಹೊಂದಿಕೊಳ್ಳಲು ಬಯಸಿದಾಗ ಆಹಾರ ಮತ್ತು ಬಳಸುವ ಪರಿ ಅವನಿಗೆ ನೆರವಾಯಿತು. ಇದನ್ನು ಡಾರ್ವಿನ್ ಪರಿಕಲ್ಪನೆಯಲ್ಲಿ `ಉಳಿವಿಗಾಗಿ ಹೋರಾಟ’ಎನ್ನಲೇಬೇಕು. ಈ ಹೋರಾಟದಲ್ಲಿ ಉಳಿದ ಜೀವಿಗಳಿಗಿಂತ ಹೆಚ್ಚು ಯಶ ಸಿಕ್ಕಿದ್ದು ಮನುಷ್ಯನಿಗೇ.

ಸುಮಾರು 10ರಿಂದ 12 ಸಾವಿರ ವರ್ಷಗಳ ಹಿಂದೆ ನೆಲೆನಿಂತು ಕೃಷಿಗೆ ಕೈಹಚ್ಚಿದ ಮೇಲೆ ಬೇಟೆಯಿಂದಲೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಇಲ್ಲವಾಯಿತು. ಆಹಾರವಿಲ್ಲದೆ ಸಾಯಬೇಕಾದ ಶೋಚನೀಯ ಸ್ಥಿತಿಯನ್ನೂ ಗೆದ್ದ. ಬದುಕುಳಿಯಲು ಇದೊಂದು ಮಹಾ ತಂತ್ರಗಾರಿಕೆ. ಇದರಲ್ಲಿ ನೈಸರ್ಗಿಕ ಆಯ್ಕೆಯ ಕೈವಾಡವಿಲ್ಲ. ಈ ಆಯ್ಕೆ ನಿಸ್ಸಂಶಯವಾಗಿ ಮತಿವಂತ ಮನುಷ್ಯನದೇ.

ಕೃಷಿಯಿಂದಾಗಿ ನೆಲೆನಿಂತ ಅಲೆಮಾರಿ

ಆಫ್ರಿಕದಿಂದ ವಲಸೆ ಹೊರಟ ಆದಿಮಾನವನಿಗೆ ಬೇರೆ ಬೇರೆ ಖಂಡಗಳ ಹವಾಮಾನ ಸ್ಥಿತಿಗೆ ಹೊಂದಿಕೊಳ್ಳಬೇಕಾದರೆ ಅನೇಕ ಬಗೆಯ ಬದಲಾವಣೆಗಳು ಅನಿವಾರ್ಯವಾದವು. ಆಫ್ರಿಕ ಖಂಡದ ಕಡುಬಿಸಿಲಿಗೆ ಹೊಂದಿಕೊಳ್ಳುವಾಗ ಶರೀರದ ಚರ್ಮದಲ್ಲಿ ಮೆಲನಿನ್ ಎಂಬ ವರ್ಣಕದ ಉತ್ಪತ್ತಿ ಜಾಸಿಯಾಯಿತು. ಪರಿಣಾಮ ಚರ್ಮ ಕಪ್ಪಗಾಯಿತು. ಸೂರ್ಯನಿಂದ ಹೊರಬರುವ ಅತಿ ನೇರಿಳೆ ಕಿರಣಗಳನ್ನು (Ultraviolet rays) ದೇಹಕ್ಕೆ ಹೆಚ್ಚು ತೂರಲು ಬಿಡದಂತೆ ಇದು ನಿವಾರಿಸಿತು.

ಇದಕ್ಕೆ ತದ್ವಿರುದ್ಧವಾಗಿ ಯೂರೋಪಿನ ಅತಿ ಶೀತಲ ಭಾಗದತ್ತ ವಲಸೆ ಹೋದ ಸಮುದಾಯಕ್ಕೆ ಹೆಚ್ಚು ಸೂರ್ಯನ ಬೆಳಕು ಬೀಳುವುದಿಲ್ಲ, ಆದ್ದರಿಂದ ಹೆಚ್ಚು ನೇರಿಳೆ ಕಿರಣವೂ ಶರೀರಕ್ಕೆ ಬೀಳದು. ಅಂಥವರಲ್ಲಿ ಫಿನೋಮೆಲನಿನ್ ಎಂಬ ವರ್ಣಕ ಚರ್ಮದಲ್ಲಿ ನಿಂತಿತು. ಅದರ ಕಾರಣ ಅಂಥವರ ಚರ್ಮವು ಕೂಡ ಶ್ವೇತವರ್ಣ ತಳೆಯಿತು. ಇನ್ನೂ ಒಂದು ವಿಸ್ಮಯಕಾರಿ ಅಂಶವೆಂದರೆ ಈಗ್ಗೆ ಸುಮಾರು 8000 ವರ್ಷಗಳ ಹಿಂದೆ ಇಂಗ್ಲೆಂಡ್ ಮತ್ತು ಸ್ಪೇನ್ ಸೇರಿದಂತೆ ಯೂರೋಪಿನ ನಾನಾ ಭಾಗಗಳಲ್ಲಿ ನೆಲೆಸಿದ್ದ ಜನರ ವರ್ಣ ಕಪ್ಪು ಆಗಿತ್ತು. ಅನಂತರ ಅತಿ ಶೀತಲ ಪ್ರದೇಶದಿಂದ ಅಲ್ಲಿಗೆ ವಲಸೆ ಬಂದ, ಚರ್ಮದಲ್ಲಿ ಫಿನೋಮೆಲನಿನ್ ವರ್ಣಕವಿದ್ದ ಜನರ ಬೇರೆ ಬೇರೆ ಗುಂಪು ವಲಸೆ ಬಂದಾಗ ಒಂದರ್ಥದಲ್ಲಿ ವಿವಿಧ ಜನಾಂಗದ ಕೂಡಿಕೆ ಅಲ್ಲಾಯಿತು. ಈ ಕಾರಣವಾಗಿ ಯೂರೋಪಿನ ಜನರ ಚಹರೆಗಳು ಬದಲಾವಣೆಗೆ ಅವಕಾಶ ಕೊಟ್ಟು ಅವರನ್ನು ಬಿಳಿಯರನ್ನಾಗಿಸಿತು.

ನಿಜವಾದ ಅರ್ಥದಲ್ಲಿ ವರ್ಣಸಂಕರ ಆಗಿರುವುದು ಸ್ಪಷ್ಟವಾಗಿ ನಮ್ಮ ಗಮನಕ್ಕೆ ಬರುವುದು ಯೂರೋಪಿನಲ್ಲೇ. ಈಗ `ರೇಸ್’ ಅಂದರೆ ಜನಾಂಗ ಎಂಬ ವಿಶಿಷ್ಟ ಅರ್ಥಕ್ಕಿಂತ ಹಣೆಪಟ್ಟಿ ಮನುಕುಲಕ್ಕೆ ಅಂಟಿಕೊಂಡುಬಿಟ್ಟಿದೆ. ಚರ್ಮವೊಂದರಿಂದಲೇ ಮೇಲು-ಕೀಳು ಎಂಬ ವಿಭಜನೆ ಪ್ರಾರಂಭವಾಗಿ ಸಾವಿರಾರು ವರ್ಷಗಳೇ ಸಂದಿವೆ.

ಆಫ್ರಿಕದಿಂದ ಹೊರಕ್ಕೆ

ಅಂತಿಮವಾಗಿ ಇಂದಿನ ವಂಶವಾಹಿ-ಜೀನ್ ಅಧ್ಯಯನ ಹೇಳುವುದು ಒಂದೇ. ಆಫ್ರಿಕವಿರಲಿ, ಅಮೆರಿಕವಿರಲಿ, ಏಷ್ಯವಿರಲಿ-ಎಲ್ಲ ಜನಾಂಗದ ನಿಯಂತ್ರಕ ನಮ್ಮ ಜೀವಕೋಶದಲ್ಲಿರುವ ಜೀನ್‍ಗಳು. ಇವುಗಳ ಒಟ್ಟು ಸಂಖ್ಯೆ 28,000 ದಿಂದ 30,000 ಎಂದು ಜೀನೋಮ್ ಅಧ್ಯಯನ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ನಮ್ಮ ದೇಹದ ಒಳಾಂಗಗಳ ರಚನೆಯಲ್ಲಿ ಏನೂ ಬದಲಾವಣೆ ಇಲ್ಲ. ಸೃಷ್ಟಿ ಮೊದಲು ತಯಾರಿಸಿದ ಮಾಡೆಲ್ ಈಗಲೂ ಪ್ರಸ್ತುತ, ಇಡೀ ಮನುಕುಲವನ್ನು ಅದೊಂದೇ ಪ್ರತಿನಿಧಿಸುತ್ತದೆ.

ಆದರೆ ಪ್ರಶ್ನೆ ಇರುವುದು ಈ ಜೀನ್‍ಗಳು ಏನೂ ಬದಲಾವಣೆ ತಂದಿಲ್ಲವೆ? ಅರ್ಥಾತ್ ನಮ್ಮ ಈಗಿನ ವಿಕಾಸದಲ್ಲಿ ಅವುಗಳ ಪಾತ್ರ ಏನೂ ಇಲ್ಲವೆ? ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಮ್ಮ ವಿಕಾಸ ಪರಾಕಾಷ್ಠೆ ತಲುಪಿ ನಿಂತುಬಿಟ್ಟಿದೆಯೆ? ದಿಢೀರ್ ಎಂದು ಈ ತೀರ್ಮಾನಕ್ಕೆ ಬರಬೇಡಿ ಎಂಬ ಎಚ್ಚರಿಕೆ ಜೀವಿ ವಿಜ್ಞಾನಿಗಳಿಂದ ಈಗ ಕೇಳಿಬರುತ್ತಿದೆ.

ಸೂಕ್ಷ್ಮ ಅವಲೋಕನ

ವಿಜ್ಞಾನಕ್ಕೆ ಒಂದು ವಿಶಿಷ್ಟ ಗರಿಮೆ ಇದೆ. ಅದೆಂದರೆ ಹಿಂದಿನ ತಪ್ಪು ಗಳನ್ನು ಸರಿಪಡಿಸಿಕೊಳ್ಳುವುದು, ಮುಂದೆ ಸಾಗುವುದು. ಇಲ್ಲಿ ಅಹಂ ಕೆಲಸ ಮಾಡುವುದಿಲ್ಲ. ಲಿಂಗಭೇದ ಕೆಲಸ ಮಾಡುವುದಿಲ್ಲ. ನೀವು ಈಗಲೂ ನ್ಯೂಟನ್, ಐನ್‍ಸ್ಟೈನ್ ಅವರ ಸಿದ್ಧಾಂತಗಳನ್ನು ಪ್ರಶ್ನಿಸಬಹುದು. ಹೊಸ ಸಿದ್ಧಾಂತವನ್ನು ಪ್ರತಿಪಾದಿಸಬಹುದು. ಆದರೆ ಅದಕ್ಕೆ ಸಾರ್ವಜನಿಕ ಮನ್ನಣೆ ಸಿಗಬೇಕಾದರೆ ಎಲ್ಲ ಪರೀಕ್ಷೆಗಳಲ್ಲೂ ಅದು ಪಾಸಾಗಬೇಕು. ಮರುಪರೀಕ್ಷೆಗೆ ಒಳಪಡಿಸಿದರೂ ಫಲಿತಾಂಶ ಮಾತ್ರ ಒಂದೇ ಆಗಿರಬೇಕು. ನಿಕಷಕ್ಕೊಡ್ಡಿದಾಗಲೆಲ್ಲ ಅಲ್ಲಿ ಗೆಲ್ಲಲೇಬೇಕು.

ಈ ಸ್ವಾತಂತ್ರ್ಯಕ್ಕೆ ಧರ್ಮದಲ್ಲಿ ಅವಕಾಶವಿಲ್ಲ. ಹಿಂದಂತೂ ಇರಲೇಇಲ್ಲ, ಈಗಲೂ ಸಮಾಜ ಧರ್ಮದ ಹಿಡಿತದಲ್ಲಿಯೇ ಇದೆ. ಸಂಪೂರ್ಣವಾಗಿ ಮುಕ್ತವಾಗುವುದು ಎಂದು ಎಂಬುದು ಊಹೆಗೆ ಬಿಟ್ಟದ್ದು. ಅಷ್ಟರಮಟ್ಟಿದೆ ಮನುಷ್ಯನ ಬೌದ್ಧಿಕ ಪ್ರಗತಿಗೆ ಧಾರ್ಮಿಕ ನಂಬುಗೆಗಳು ಅಡ್ಡಬಂದಿವೆ. ಇದು ಮನುಷ್ಯನ ಬಹು ದೊಡ್ಡ ದೌರ್ಬಲ್ಯ. ಈ ಸಂಗತಿ ಇಲ್ಲಿ ಹೇಗೆ ಪ್ರಸ್ತುತ ಎಂದು ಒಂದರಘಳಿಗೆ ನಿಮಗೆ ಅನ್ನಿಸಬಹುದು. ಕಾರಣವಿದೆ, ಮನುಷ್ಯ ಕಳೆದ ಸುಮಾರು 50,000 ವರ್ಷಗಳಿಂದ ಮನುಷ್ಯನ ವಿಕಾಸ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ; ಹಳೆಯ ಮಾಡೆಲ್ ಹಾಗೆಯೇ ಇದೆ ಎಂದು ವಾದಿಸುವವರು ಒಂದೆಡೆಯಾದರೆ, ಎಲ್ಲ ವಿಜ್ಞಾನಿಗಳು ಇದಕ್ಕೆ ಹ್ಞೂಂಗುಟ್ಟುತ್ತಿಲ್ಲ, ಸಹಜವಾಗಿ ತಮಗಿರುವ ತರ್ಕ ಸ್ವಾತಂತ್ರ್ಯವನ್ನು ಬಳಸುತ್ತಿದ್ದಾರೆ. ನಾವು ವಿಕಾಸವಾಗುತ್ತಿರುವುದು ಡಾಳಾಗಿ ಕಾಣದಿರಬಹುದು, ಆದರೆ ವಿಕಾಸ ನಿಂತುಹೋಗಿದೆ ಎಂದು ಘೋಷಿಸುವಂತಿಲ್ಲ ಎಂದು ಸಾಕ್ಷಿಸಮೇತ ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ಆಗಲೇ ಹೇಳಿದ ಒಂದು ಮಾತನ್ನು ನೀವು ಗಮನಿಸಿರುತ್ತೀರಿ. ಮನುಷ್ಯ ಕೃಷಿ ಪ್ರಾರಂಭಿಸಿ ಜಲಮೂಲದ ಆಜುಬಾಜು ನೆಲೆ ನಿಂತಮೇಲೆ ಪಶು ಸಂಗೋಪನೆ ಅನಿವಾರ್ಯವಾಯಿತು. ಆ ಹೊತ್ತಿಗೆ ಅನೇಕ ಕಾಡುಪ್ರಾಣಿಗಳನ್ನು ಪಳಗಿಸಿದ್ದ ಕೂಡ. ದನಗಳು ಕೂಡ ಪಳಗಿಸಿದ ಜೀವಿಗಳೇ. ವಿಶೇಷವಾಗಿ ಹಸುಗಳಿಂದ ಸಮೃದ್ಧ ಹಾಲು ದೊರೆಯಿತು. ಅಷ್ಟನ್ನೂ ಕರುಗಳು ಕುಡಿಯುವುದಿಲ್ಲ. ಮನುಷ್ಯ ಹಾಲಿನ ರುಚಿ ನೋಡಿದ. ಸ್ವಾದ ಅನ್ನಿಸಿತು, ಕುಡಿಯಲು ಪ್ರಾರಂಭಿಸಿದ. ಆದರೆ ಪಾಪ ಜೀರ್ಣವಾಗಬೇಕಲ್ಲ. ಹಾಲು ಕುಡಿದ ಮೇಲೆ ಈ ಪ್ರಾಣಿ ಒದ್ದಾಡಿದ.

ಅದರಲ್ಲೂ ಐರೋಪ್ಯ ದೇಶಗಳಲ್ಲಿ ಪಶುಸಂಗೋಪನೆಯಲ್ಲಿ ಕೈಪಳಗಿಸಿಕೊಂಡ ಮೇಲೆ ಹಾಲಿನ ಕಡೆಗೆ ಹೆಚ್ಚು ಹೆಚ್ಚು ಮುಖಮಾಡಿದ. ಆದರೆ ಹಾಲಿನ ಲ್ಯಾಕ್ಟೋಸ್ ಎಂಬ ಕಾರ್ಬೋ ಹೈಡ್ರೇಟನ್ನು ಜೀರ್ಣಿಸಿಕೊಳ್ಳಲು ಲ್ಯಾಕ್ಟೇಸ್ ಎಂಬ ಕಿಣ್ವ ಬೇಕು. ಅದನ್ನು ಉತ್ಪಾದಿಸುವ ಜೀನ್ ಮನುಷ್ಯನ ಜೀವಕೋಶದಲ್ಲಿ ಇರಲಿಲ್ಲ. ಆದರೆ ಹೊಟ್ಟೆ ನೋವು ಬರಲಿ, ಬೇಧಿಯಾಗಲಿ, ಹಾಲು ಕುಡಿಯುವುದನ್ನು ನಿಲ್ಲಿಸಲಿಲ್ಲ. ನಿಸರ್ಗ `ತಗೋ ಮಗುವೇ’ ಎಂದು ದೇಹದಲ್ಲಿ ಲ್ಯಾಕ್ಟೇಸ್ ಎಂಬ ಕಿಣ್ವವನ್ನು ಸೃಷ್ಟಿಸಿತು ಅಂದರೆ ಒಂದು ಜೀನ್ ಇದಕ್ಕಾಗಿ ಸಕ್ರಿಯವಾಯಿತು ಅಥವಾ ಪರಿವರ್ತನೆಯಾಯಿತು. ಅಂದಿನಿಂದ ಹಾಲು ಮನುಷ್ಯನ ಹೊಟ್ಟೆಯಲ್ಲಿ ಸಲೀಸಾಗಿ ಜೀರ್ಣವಾಗಲು ಪ್ರಾರಂಭವಾಯಿತು. ಇದು ವಿಕಾಸದ ಪಥದಲ್ಲಿ ಒಂದು ಮುಂದಣ ಹೆಜ್ಜೆ ಅಲ್ಲವೆ? ಯಾವ ಜೀವಿ ವಿಜ್ಞಾನಿ ತಾನೇ ಇದನ್ನು ಅಲ್ಲಗಳೆಯಬಲ್ಲ?

ಮಲೇಷ್ಯ, ಫಿಲಿಪೀನ್ಸ್, ಇಂಡೋನೇಷ್ಯ ದ್ವೀಪಗಳಲ್ಲಿ ಬಜೋವ್ ಎಂಬ ಬೆಸ್ತರ ಸಂತತಿ ಇದೆ. ಅವರ ನಿತ್ಯದ ಬದುಕಿನಲ್ಲಿ ಈಗಲೂ ಕೊನೆಯ ಪಕ್ಷ ಎಂಟು ಗಂಟೆ ಸಮುದ್ರದಲ್ಲೇ ಇರುತ್ತಾರೆ. ಅಂದರೆ ಈಜುವುದು, ಮುಳುಗುವುದು ಅವರ ಬದುಕಿನ ಅವಿಭಾಜ್ಯ ಅಂಗ. ಇವರನ್ನು ಸಮುದ್ರದ ಅಲೆಮಾರಿಗಳು ಎಂದು ಕರೆಯುವುದುಂಟು. ಕಳೆದ ಒಂದು ಸಾವಿರ ವರ್ಷಗಳಿಂದ ಇವರು ಸಮುದ್ರದ ಬದುಕನ್ನು ಗಾಢವಾಗಿ ಅಪ್ಪಿಕೊಂಡಿದ್ದಾರೆ ಎಂದು ಮಾನವ ಅಧ್ಯಯನ ತಜ್ಞರು ಹೇಳುತ್ತಾರೆ.

ಮುಳುಗುವಾಗ ಉಸಿರುಕಟ್ಟಬೇಕು ತಾನೇ. ಆಗ ಅವರ ರಕ್ತಕೋಶಗಳಿಗೆ ಆಕ್ಸಿಜನ್ ಬೇಕಲ್ಲ. ಹೀಗಾಗಿಯೇ ಅವರ ಗುಲ್ಮ (ಸ್ಪೀನ್) ಇತರರಿಗಿಂತ ಹೆಚ್ಚು ದೊಡ್ಡದಾಗುವಂತೆ ಮಾರ್ಪಾಟಾಯಿತು. ಅದು ಮುಂದೆ ಹುಟ್ಟುವ ಮಕ್ಕಳಿಗೂ ವರ್ಗಾವಣೆಯಾಗುತ್ತ ಹೋಯಿತು. ವಿಕಾಸ ಇವರನ್ನು ಸಮರ್ಥರನ್ನಾಗಿ ಮಾಡುತ್ತ ಹೋಯಿತು. ಬದುಕಲು ಹೋರಾಡಿದರೋ ಅಥವಾ ಹೋರಾಟ ಅಗತ್ಯವಾಗಿತ್ತೋ ಒಟ್ಟಿನಲ್ಲಿ ಈ ಬದಲಾವಣೆ ನಿಸರ್ಗದ ಕೃಪೆ ಎನ್ನಬೇಕು. ಅಂತಿಮವಾಗಿ ಅದು ಹೇಳುವುದಿಷ್ಟು; ಹೊಂದಾಣಿಕೆ ಎಂಬುದೇ ಅಂತಿಮವಾಗಿ ಅಳಿವು ಉಳಿವನ್ನು ನಿರ್ಧರಿಸುವ ಅಂಶ.

ಹಿಗ್ಗಿದ ಗುಲ್ಮ

ಟಿಬೆಟ್, ಅ್ಯಂಡಿಸ್, ಇಥಿಯೋಫಿಯದ ಉನ್ನತ ಭಾಗದಲ್ಲಿ ಜನ ನೆಲೆಸಿದ್ದಾರೆ. ಸರ್ವಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ವಿಶೇಷವಾಗಿ ಟಿಬೆಟ್ ಪ್ರಸ್ಥಭೂಮಿ ಸಮುದ್ರ ಮಟ್ಟದಿಂದ 4,000 ಮೀಟರ್ ಎತ್ತರವಿದೆ. ಅಲ್ಲಿ ಸರ್ವ ಋತುವಿನಲ್ಲೂ ಆಕ್ಸಿಜನ್ ಕೊರತೆ ಇದ್ದೇ ಇರುತ್ತದೆ (ಎವರೆಸ್ಟ್ ಆರೋಹಿಗಳು ಆಕ್ಸಿಜನ್ ಬಾಟಲ್ ಒಯ್ಯುವುದನ್ನು ನೀವು ಗಮನಿಸಿರುತ್ತೀರಿ). ಆಕ್ಸಿಜನ್ ಕೊರತೆಯಾದರೆ ಬದುಕುವುದು ಹೇಗೆ? ನಿಸರ್ಗ ಅದಕ್ಕೂ ಒಂದು ವ್ಯವಸ್ಥೆ ಮಾಡಿದೆ. ಅಲ್ಲಿನ ನೆಲೆಸಿಗರಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಕಡಿಮೆ ಮಾಡಿದೆ. ಅದೇ ಸಮಯದಲ್ಲಿ ಆಕ್ಸಿಜನ್ ಬೂಸ್ಟ್ ಮಾಡುವ ಅಂಶಕ್ಕೂ ನಿಗಾ ಕೊಟ್ಟಿದೆ. ಈ ನಿಯಂತ್ರಕ ಯಾರು ಎಂದು ಇಣುಕು ನೋಡಿದಾಗ ತಿಳಿಯಿತು. ಇದಕ್ಕಾಗಿಯೇ ಇ.ಪಿ.ಎಸ್.ಎ.-1, ಇ.ಎಲ್.ಜಿ.ಎನ್.-2 ಎಂಬ ಎರಡು ಜೀನ್‍ಗಳು ಕೆಲಸಮಾಡಿವೆ. 4,725 ವರ್ಷಗಳ ಹಿಂದೆಯೇ ಟಿಬೆಟಿಯನ್ನರು ಚೀನದ ಹ್ಯಾನ್ ಸಮುದಾಯದಿಂದ ಬೇರ್ಪಟ್ಟಿದ್ದಾರೆ. ಅವರು ಟಿಬೆಟ್‍ನಲ್ಲಿ ನೆಲೆನಿಲ್ಲಲು ಸಾಧ್ಯವಾಗಿದ್ದು ಜೀನ್‍ಗಳ ಈ ಮಾರ್ಪಾಟಿನಿಂದ.

ಆಯ್ಕೆ ಮನುಷ್ಯನ ಕೈಯಲ್ಲಿ

ನಾವು ಸಾಮಾನ್ಯವಾಗಿ ಹೆಚ್ಚು ಗಮನಕೊಡದ ವಿಚಾರದ ಬಗ್ಗೆ ವಿಜ್ಞಾನಿಗಳ ಗಂಭೀರವಾಗಿಯೇ ಯೋಚಿಸುತ್ತಾರೆ. ಜಗತ್ತಿನಲ್ಲಿ ಯಾವ ಜನ ಅತಿ ಎತ್ತರ ಎಂದು ಪ್ರಶ್ನಿಸಿದರೆ, ಉತ್ತರಕ್ಕಾಗಿ ತಿಣುಕಬೇಕಾಗಿಲ್ಲ. ನಿಸ್ಸಂಶಯವಾಗಿ ಹೇಳಬಹುದು-ಅದು ಡಚ್ಚರು ಅಂದರೆ ನೆದರ್‍ಲ್ಯಾಂಡ್ ವಾಸಿಗರು. ಅಲ್ಲಿನ ಜನರ ಸರಾಸರಿ ಎತ್ತರ 182.5 ಸೆಂ.ಮೀ., ಹೆಂಗಸರೂ ಅಷ್ಟೇ 168.8 ಸೆಂ. ಮೀ. ಅಮೆರಿಕನ್ನರು ಇವರ ಮುಂದೆ ಕುಬ್ಜರು. ಇಲ್ಲಿ ಗಂಡಸರ ಸರಾಸರಿ ಎತ್ತರ 177.1 ಸೆಂ. ಮೀ. ಹೆಂಗಸರು 163.5 ಸೆಂ.ಮೀ.

ಇಲ್ಲೊಂದು ಕುತೂಹಲಕಾರಿ ವಿಚಾರವಿದೆ. ಲಂಡನ್ನಿನ ರಾಯಲ್ ಸೊಸೈಟಿ ಸಂಸ್ಥೆ ಇಟ್ಟಿರುವ ಮಿಲಿಟರಿ ರಿಜಿಸ್ಟರಿನಲ್ಲಿ ಸೈನಿಕರ ಎತ್ತರದ ಅಳತೆಯು ನಮೂದಾಗಿದೆ. 1860ರಲ್ಲಿ ಡಚ್ಚರು 165 ಸೆಂ. ಮೀ. ಎತ್ತರವಿದ್ದರು. ಅದೇ ಕಾಲಕ್ಕೆ ಅಮೆರಿಕನ್ನರು 170 ಸೆಂ. ಮೀ. ಎತ್ತರವಿರುವುದು ದಾಖಲಾಗಿದೆ. ಏಕೆ ಇಲ್ಲಿ ಉಲ್ಟಾ ಆಯಿತು. ಅದು ಆಹಾರದ ಮೇಲೆ ನಿರ್ಧರಿತವಾಗಿದೆ. ಡಚ್ಚರು ಡೈರಿ ಉತ್ಪನ್ನಗಳನ್ನು ಮೆಲ್ಲುವುದರಲ್ಲಿ ನಿಸ್ಸೀಮರು. ಹೊಟ್ಟೆಯಲ್ಲಿ ಕ್ಯಾಲ್ಸಿಯಂ ಹೆಚ್ಚು ಸಂಗ್ರಹವಾಗುತ್ತ ಹೋಯಿತು. ಮೂಳೆಗಳು ಬರಿ ಗಟ್ಟಿಯಾದ್ದಷ್ಟೇ ಅಲ್ಲ, ಎತ್ತರಕ್ಕೆ ಬೆಳೆದವು ಕೂಡ. ಈ ಗುಣ ಜೀನ್‍ಗಳ ಮೂಲಕ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತ ಹೋಯಿತು. ಇಷ್ಟೊಂದು ಕಡಿಮೆ ಅವಧಿಯಲ್ಲಿ ವಿಕಾಸ ತನ್ನ ಇರವನ್ನು ಪ್ರಕಟಿಸಿದೆ ಎಂದರೆ ಅದು ನಂಬಲೇಬೇಕಾದ ಸತ್ಯ.

ಈಗಿನ ಸಣ್ಣ ಪುಟ್ಟ ಬದಲಾವಣೆ ಎಂದರೆ ಲಕ್ಷಾಂತರ ವರ್ಷ ಕಾಯಬೇಕಾಗಿಲ್ಲ. ಡಚ್ಚರ ವಿಚಾರದಲ್ಲೂ ಅಷ್ಟೇ. ಎತ್ತರವಿರುವ ಪುರುಷರು ಎತ್ತರವಿರುವ ಸಂಗಾತಿಯನ್ನೇ ಆರಿಸುತ್ತ ಹೋದರು. ಇಡೀ ಒಂದು ಜನಾಂಗವೇ ಎತ್ತರದ ಸಂತತಿಯನ್ನು ಬೆಳೆಸಿತು. ಡಚ್ಚರೆಂದರೆ ನಮ್ಮ ಮಹಾಭಾರತದ ಸೈಂಧವನ ಹಾಗೆ. ಇನ್ನೂ ಒಂದು ಸಣ್ಣ ಅಂಶವನ್ನು ಇಲ್ಲಿ ಗಮನಿಸಬೇಕು. ಅವರ ಎತ್ತರಕ್ಕೆ ಕಾರಣವಾಗಿರುವುದು ಇಡೀ ಜೀನ್ ಅಲ್ಲ. ಜೀನ್‍ನಲ್ಲಿ ನ್ಯೂಕ್ಲಿಯೋಟೈಡ್ ಎಂಬ ಜೋಡಿ ಇರುತ್ತದೆ. ಇಡೀ ಮನುಷ್ಯನ ಜೀವಿ ಕೋಶದಲ್ಲಿ ಸುಮಾರು 320 ಕೋಟಿ ಇಂಥ ಜೋಡಿಗಳಿವೆ ಎಂದು ಲೆಕ್ಕಹಾಕಲಾಗಿದೆ. ಇದರಲ್ಲಿ ಯಾವುದಾದರೂ ಒಂದರ ಬದಲಾವಣೆಯಾದರೆ ಅದು ತರುವ ಫಲಿತಾಂಶ ಊಹೆಗೂ ಮೀರಿದ್ದು. ಇದನ್ನು ಪತ್ತೆ ಮಾಡಿದ್ದು ಕೂಡ ಒಂದು ಮಹಾ ಸಾಧನೆ ಅಲ್ಲವೆ?

ಡಚ್ ಲಂಬೂಗಳು   

ನ್ಯೂಕ್ಲಿಯೋಟೈಡ್ ಜೋಡಿಯಲ್ಲಿ ಬದಲಾವಣೆ

ಈಗ ಅಸಲಿ ಪ್ರಶ್ನೆ. ಪರಿಸರ ಮತ್ತು ಹೊಂದಾಣಿಕೆಯನ್ನು ಇಂದಿನ ಯಂತ್ರ ಯುಗದಲ್ಲಿ ಹೇಗೆ ಅರ್ಥೈಸಬೇಕು? ನಮ್ಮ ಉಳಿವಿಗೆ ಅಥವಾ ಬದುಕಿಗೆ ಪರಿಸರ ಹೊಂದದಿದ್ದರೆ ಆ ಜಾಗವನ್ನೇ ಖಾಲಿ ಮಾಡಬಹುದಲ್ಲ. ಅಲ್ಲೇ ಇದ್ದು ಹೋರಾಟ ಏಕೆ? ಈ ಕಾರಣದಿಂದಾಗಿಯೇ ಸುಮಾರು 50,000 ವರ್ಷಗಳ ಹಿಂದೆ ಮಹಾ ವಲಸೆ ಆದದ್ದು. ಎಲ್ಲಿ ಹಿತಕರ ಹವಾಮಾನವಿತ್ತೋ, ಎಲ್ಲಿ ನೀರಿತ್ತೋ, ಎಲ್ಲಿ ನೆರಳಿತ್ತೋ, ಎಲ್ಲಿ ನೆಲ ಹುಲುಸಾಗಿತ್ತೋ ಅಲ್ಲೇ ನೆಲೆನಿಂತ. ಆಧುನಿಕ ಯುಗದಲ್ಲಿ ಮನುಷ್ಯ ಬದುಕಲು ನಿಸರ್ಗವನ್ನು ಬಹುವಾಗಿ ಅವಲಂಬಿಸಿದ. ಆಯ್ಕೆಗಳು ಬಹಳವಿವೆ.

ಈ ಮಹಾ ಮೇಧಾವಿ ಪರಿಸರವನ್ನೇ ಬದಲಿಸಬಲ್ಲ, ಆದರೂ ರೋಗರುಜಿನಗಳು ಕಾಡುತ್ತಲೇ ಇವೆಯಲ್ಲ. ಏಡ್ಸ್, ಕ್ಷಯ ಇಂಥವು ಕಣ್ಮೆರೆಯಾಗಿಲ್ಲ. ಪ್ಲೇಗ್ ಮತ್ತು ಪೋಲಿಯೋವನ್ನು ನಿಯಂತ್ರಿಸುವಲ್ಲಿ ಮತಿವಂತ ಮಾನವ ಯಶಸ್ಸು ಸಾಧಿಸಿದ್ದಾನೆ. ಹೀಗೆಂದು ಎದೆತಟ್ಟಿ ಹೇಳಿಕೊಳ್ಳುವ ಅದೇ ಘಳಿಗೆಯಲ್ಲಿ ಕರೋನ್ ವೈರಸ್

ದಾಳಿಮಾಡಿ ಜಗತ್ತಿನ ಜಂಘಾಬಲವನ್ನೇ ಉಡುಗಿಸಿದೆ. ಮತ್ತೆ ಅದರ ಮೇಲೆ ಮನುಷ್ಯ ಯುದ್ಧ ಸಾರಿದ್ದಾನೆ. ಮುಂದಿನ ದಿನಗಳಲ್ಲೂ ಸೂಕ್ಷ್ಮಜೀವಿಗಳು ಮತ್ತೊಂದು ಬಗೆಯಲ್ಲಿ ಎರಗಬಹುದು. ಆಗಲೂ ಯುದ್ಧ ಸಾರಲೇಬೇಕು. ಜೊತೆಗೆ ವೈದ್ಯಕೀಯದಲ್ಲಿ ನೈಸರ್ಗಿಕ ಆಯ್ಕೆಗೆ ಸೆಡ್ಡುಹೊಡೆದು ನಿಲ್ಲುವ ತಾಕತ್ತು ಸಿಕ್ಕುತ್ತಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭ್ರೂಣದ ಹಂತದಲ್ಲೇ, ಕಾಯಿಲೆ ತರುವ ವಂಶವಾಹಿಯನ್ನು ಕಿತ್ತು ಬಿಸುಡುವುದೋ, ತಿದ್ದುವುದೋ ಆದರೆ ನಿಜಕ್ಕೂ ಒಂದರ್ಥದಲ್ಲಿ ಅದು ಹಣೆಬರಹವನ್ನು ಬದಲಿಸುವ ತಂತ್ರ. ಕ್ಯಾನ್ಸರ್ ಕಾಡುವ ಮುನ್ನವೇ ಅಂಥ ಜೀನನ್ನು ಗುರುತಿಸಿ ಕಿತ್ತು ಬಿಸುಟರೆ ಮುಂದೆ ಅದು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುವುದು ಸಾಧ್ಯವಿಲ್ಲ. ಇಂಥ ಜೀನ್ ರಿಪೇರಿ ಕೆಲಸಕ್ಕೆ ಈಗಾಗಲೇ ವೈದ್ಯಕೀಯ ಕ್ಷೇತ್ರ ಮುನ್ನುಡಿ ಬರೆಯುತ್ತಿದೆ. ಇದನ್ನು ಹಿಟ್ಲರನ ಜನಾಂಗೀಯ ಶ್ರೇಷ್ಠತೆಯ ವ್ಯಸನ ಎಂದು ಕರೆಯಬಾರದು. ಅವನು ಬಯಸಿದ್ದು ಯುಜೆನಿಕ್ಸ್ ಅಂದರೆ ಶ್ರೇಷ್ಠ ಜನಾಂಗದ ಪರಂಪರೆಗೆ ನಾಂದಿ ಹಾಕುವುದು. ಈಗಿನ ಪರಿಕಲ್ಪನೆಯಲ್ಲಿ ಶ್ರೇಷ್ಠ ಜನಾಂಗ ಎನ್ನುವುದು ಮನುಕುಲಕ್ಕೆ ಎಸಗುವ ಅಪಚಾರವೇ ಸರಿ. ನಮಗೆ ಬೇಕಾಗಿರುವುದು ಸುಖೀಸಮಾಜ. ಆ ನಿಟ್ಟಿನಲ್ಲಿ ನಡೆದರೆ ನೈಸರ್ಗಿಕ ಆಯ್ಕೆ ಎಂಬುದನ್ನು ಪಕ್ಕಕ್ಕೆ ಸರಿಸಬಹುದು.

Leave a Reply

Your email address will not be published.