ಮನೆ ಕಟ್ಟುವ ಆಸೆ

ಹಾಸನದ ಈ ಕುಟುಂಬದ ಯಜಮಾನ 55 ವರ್ಷದ ನಾಗೇಶ್ ಎ.ಟಿ. ಪತ್ನಿ 48 ವರ್ಷದ ನಂಜಮ್ಮ ಹಾಗೂ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಕುಟುಂಬದ ಇತರ ಸದಸ್ಯರು.

ಮಗ 23 ವರ್ಷದ ಸಂಜಯ್ ಎ.ಎನ್. ಹಿರಿಯ ಮಗಳು 22 ವರ್ಷದ ಸಂಗೀತ ಎ.ಎನ್ ಮತ್ತು ಕೊನೆಯ ಮಗಳು 20 ವರ್ಷದ ಸುಷ್ಮ ಎ.ಎನ್. ಹಾಸನದ ಆಡುವಳ್ಳಿ, ಕೆ.ಎಸ್.ಆರ್.ಟಿ.ಸಿ ವಸತಿ ಸಮುಚ್ಚಯದ ಪಕ್ಕದಲ್ಲಿ ಇವರ ವಾಸ.

ಇವರ ಮೂಲ ಹಾಸನ ಪಟ್ಟಣವೇ ಆಗಿದ್ದು, ಜಾತಿ ಪರಿಶಿಷ್ಟ ಜಾತಿಗೆ (ಆದಿ ಕರ್ನಾಟಕ) ಸೇರಿದವರು. ವಾಸವಿರುವ ಮನೆ, ನಾಗೇಶ್‍ರವರ ಪಿತ್ರಾರ್ಜಿರ ಆಸ್ತಿಯಾಗಿದ್ದು, ಅವರ ಅಣ್ಣತಮ್ಮಂದಿರ ಜೊತೆಗೆ ಇನ್ನೂ ಆಸ್ತಿ ಬಟವಾಡೆ ಆಗಿಲ್ಲ. ವಾಸದ ಮನೆಯ ಇನ್ನೊಂದು ಭಾಗದಲ್ಲಿ ನಾಗೇಶ್‍ರ ತಮ್ಮನ ಕುಟುಂಬ ವಾಸಿಸುತ್ತಿದೆ. ಮನೆಯ ಮೌಲ್ಯ ಅಂದಾಜು 1.5 ಲಕ್ಷ. ಮನೆಗಿಂತ ಸೈಟ್‍ಗೆ ಬೆಲೆ ಜಾಸ್ತಿ ಇದೆ. ಹಾಸನ ನಗರದ ರೈಲ್ವೆ ಸ್ಟೇಷನ್‍ಗೆ ಹಾಗೂ ಮುಖ್ಯ ರಸ್ತೆಯಾದ ಬಿ.ಎಂ.ರಸ್ತೆಗೆ ಹತ್ತಿರವಿದೆ.

7ನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ನಾಗೇಶ್ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಇವರ ದುಡಿಮೆಯ ಬಹುತೇಕ ಹಣ ಕುಡಿತದ ಚಟಕ್ಕೆ ಸೋರಿಕೆಯಾಗುತ್ತಿದೆ. ಇವರ ವಾರ್ಷಿಕ ಆದಾಯ ರೂ.11000 ಯಾವುದೇ ರೀತಿಯ ಉಳಿತಾಯ, ಹೂಡಿಕೆ ಇಲ್ಲ. ಇವರ ಹೆಂಡತಿ ನಂಜಮ್ಮ, 3ನೇ ತರಗತಿ ಶಿಕ್ಷಣ ಪಡೆದಿದ್ದಾರೆ. ಮನೆಕೆಲಸ ಹಾಗೂ ಹಾಲು ಮಾರುವುದು ಇವರ ದುಡಿಮೆಯಾಗಿದೆ. ಇದರಿಂದಲೇ ವಾರ್ಷಿಕ ರೂ.50,000 ಆದಾಯ ಗಳಿಸುತ್ತಾರೆ.

ಹಿರಿಯ ಮಗ ಸಂಜಯ್ ಪಿ.ಯು.ಸಿ. ಪೂರ್ಣವಾಗದೆ, ಕೆ.ಎಸ್.ಆರ್.ಟಿ.ಸಿ. ವರ್ಕ್‍ಶಾಪ್‍ನಲ್ಲಿ ತಾತ್ಕಾಲಿಕ ಕೆಲಸ ಮಾಡುತ್ತಿದ್ದಾನೆ. ಇವನಿಗೆ ತಿಂಗಳಿಗೆ ರೂ.7000 ಆದಾಯವಿದೆ. ಇಬ್ಬರು ಹೆಣ್ಣುಮಕ್ಕಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಇಬ್ಬರಿಗೆ ವಾರ್ಷಿಕ ರೂ.12000 ಖರ್ಚಾಗುತ್ತದೆ.

ಈ ಕುಟುಂಬದ ಚರಾಸ್ತಿಯೆಂದರೆ, ಮನೆಯ ಸುತ್ತ ಇರುವ 19 ಗುಂಟೆ ಜಮೀನು. ಒಂದು ಸ್ಕೂಟಿ ಇದೆ. ಋಣವಾಗಿ ಈ ಗಾಡಿಯ ಮೇಲೆ ಹಾಗೂ ಹಸುವಿಗಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ರೂ.50000 ಸಾಲ ಪಡೆದಿದ್ದಾರೆ. ಸ್ತ್ರೀಶಕ್ತಿ ಸಂಘದಿಂದ ರೂ.10000 ಮತ್ತು ವೈಯಕ್ತಿಕವಾಗಿ ಇತರರಿಂದ ರೂ.11000 ಸಾಲ ತೆಗೆದುಕೊಂಡಿದ್ದಾರೆ; ಶೇ.12 ಬಡ್ಡಿ ತೆರುತ್ತಾರೆ.

ಕುಟುಂಬದ ಸದಸ್ಯರೆಲ್ಲರೂ ಆರೋಗ್ಯವಾಗಿದ್ದಾರೆ. ಕುಟುಂಬ ನಿರ್ವಹಿಸಲು ಪ್ರತಿ ತಿಂಗಳಿಗೆ ಸರಿಸುಮಾರು ರೂ.8000 ವೆಚ್ಚವಾಗುತ್ತದೆ. ಹಸುಗಳನ್ನು ಸಾಕುತ್ತಿರುವುದರಿಂದ ಹಾಲಿನ ವೆಚ್ಚವಿಲ್ಲ. ಇವರು ಮಾಂಸಾಹಾರಿಗಳಾಗಿದ್ದು, ವಾರದಲ್ಲಿ ಎರಡು ಬಾರಿ ಮೊಟ್ಟೆ ಹಾಗೂ ತಿಂಗಳಿಗೆ ಒಂದು ಬಾರಿ ಮಾಂಸಕ್ಕಾಗಿ ಒಟ್ಟು 300 ರೂ. ವೆಚ್ಚ ಮಾಡುತ್ತಾರೆ.

8 ಎಕರೆ ಪಿತ್ರಾರ್ಜಿತ ಜಮೀನು ನಿಟ್ಟೂರಿನ ಮುತ್ತತ್ತಿ ಗ್ರಾಮದಲ್ಲಿದೆ. ಅದು ನಾಗೇಶ್‍ರವರ ತಾಯಿಯ ಹೆಸರಿನಲ್ಲಿದೆ. ಇನ್ನೂ ಮಕ್ಕಳಿಗೆ ಭಾಗವಾಗಿಲ್ಲ. ಕೋರ್ಟ್‍ನಲ್ಲಿ ಕೇಸ್ ನಡೆಯುತ್ತಿರುವುದರಿಂದ ಯಾರೂ ಜಮೀನಿನಿಂದ ಬೆಳೆ ಬೆಳೆದು ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ.

ಸಂಜೆ ಕೆಲವು ಗಂಟೆ ಮನರಂಜನೆಗಾಗಿ ಟಿ.ವಿ. ವೀಕ್ಷಣೆ ಮಾಡುತ್ತಾರೆ. ಇದ್ದಕ್ಕಾಗಿ ತಿಂಗಳಿಗೆ ರೂ.250 ಖರ್ಚಾಗುತ್ತದೆ. ಕೊನೆಯ ಮಗಳು ಸುಷ್ಮ ಹಾಸನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮೂಹ ಮಾಧ್ಯಮದ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಅವಳ ಮೂಲಕವೂ ಕುಟುಂಬಕ್ಕೆ ಮಾಹಿತಿ ಒದಗುತ್ತದೆ.

ಸರ್ಕಾರದಿಂದ ಕುಟುಂಬಕ್ಕೆ ಯಾವುದೇ ಸವಲತ್ತು ದೊರಕಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಸವಲತ್ತುಗಳು ದೊರಕಿವೆ. ನಗರಸಭೆಯಿಂದ ರೂ.6000 ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ರೂ.3000 ನೀಡುತ್ತಾರೆ. ಹಿರಿಯ ಮಗಳಾದ ಸಂಗೀತಳಿಗೆ ರೂ.12000 ಹಾಗೂ ರೂ.4,500 ವಿದ್ಯಾರ್ಥಿವೇತನ ದೊರೆಯುತ್ತದೆ. ಕೊನೆಯ ಮಗಳು, ಸುಷ್ಮಳಿಗೂ ವಾರ್ಷಿಕ ರೂ.3,300 ವಿದ್ಯಾರ್ಥಿವೇತನ ದೊರೆಯುತ್ತಿದೆ. ಮೂವರು ಮಕ್ಕಳಿಗೂ ಹೈಸ್ಕೂಲು ಹಂತದಲ್ಲಿ ಸರ್ಕಾರದಿಂದ ಸೈಕಲ್‍ಗಳು ದೊರೆತಿವೆ.

ಈಗ ವಾಸಿಸುತ್ತಿರುವ ಮನೆ ಜೀರ್ಣಾವಸ್ಥೆಯಲ್ಲಿದ್ದು, ಹೊಸದಾಗಿ ಮನೆ ಕಟ್ಟುವ ಆಸೆ ಹೊಂದಿದ್ದರೂ, ಆಸ್ತಿ ವಿಭಾಗದ ವಿಷಯದಲ್ಲಿ ತಮ್ಮನ ಜಗಳದಿಂದಾಗಿ ಸಾಧ್ಯವಾಗುತ್ತಿಲ್ಲ. ಬೇಸಿಗೆ ದನಕರುಗಳ ಮೇವಿಗೆ ವಾರಕ್ಕೆ ರೂ.500 ವೆಚ್ಚದಲ್ಲಿ ಒಣಹುಲ್ಲನ್ನು ತರಲಾಗುತ್ತಿದೆ. ಇದು ಉದ್ದೇಶಿತ ಖರ್ಚು. ಅನಪೇಕ್ಷಿತ ಖರ್ಚಿನ ಲೆಕ್ಕದಲ್ಲಿ ಮನೆಯವರ ಅನಾರೋಗ್ಯಕ್ಕಾಗಿ, ದನಕರುಗಳ ಆರೋಗ್ಯ ಏರುಪೇರಾದಾಗ ಬರುತ್ತವೆ. ಸ್ಕೂಟಿ ರಿಪೇರಿಗಾಗಿಯೂ ಖರ್ಚಾಗುತ್ತದೆ. ಮಗ ಸಂಜಯ್‍ನ ಮೊ: 7483555085.

Leave a Reply

Your email address will not be published.