ಮಲಯಾಳಂ ಚಿತ್ರರಂಗದ ಹೊಸ ಹೊಳಹುಗಳು

ಸಿನಿಮಾಗಳಲ್ಲಿ ಸಾಮಾಜಿಕ ವಸ್ತು ವಿಷಯಗಳನ್ನು ತರುವುದಕ್ಕೂ, ಚಿತ್ರರಂಗವೊಂದು ಸಮಾಜಕ್ಕೆ ತೆರೆದುಕೊಳ್ಳುವುದಕ್ಕೂ ವ್ಯತ್ಯಾಸಗಳಿವೆ. ಕೇರಳದ ಘಟನೆಗಳಿಗೆ ಅಲ್ಲಿನ ನಟರು, ನಿರ್ದೇಶಕರು ಸ್ಪಂದಿಸುವ ರೀತಿ, ಸಮಾಜಕ್ಕೂ ಸಿನಿಮಾರಂಗಕ್ಕೂ ಸಂಬಂಧವಿಲ್ಲ ಎಂದು ಭಾವಿಸಿ ದೂರ ನಿಲ್ಲುವ ಇತರ ಸಿನಿಮಾರಂಗದ ಕಲಾವಿದರಿಗೆ ಮಾದರಿಯೆನಿಸಬೇಕು.

ಶರೀಫ್ ಕಾಡುಮಠ

ಭಾರತೀಯ ಸಿನಿಮಾ ಜಗತ್ತಿನಲ್ಲಿ ಪ್ರತಿ ಬಾರಿಯೂ ಹೊಸ ಪ್ರಯೋಗಗಳಿಗೆ ಕೈ ಹಾಕಿ ಯಶಸ್ಸು ಕಾಣುವ ಚಿತ್ರರಂಗವಿದ್ದರೆ ಅದು ಮಲಯಾಳಂ ಚಿತ್ರರಂಗ ಎಂಬುದು ನಿಸ್ಸಂಶಯ. ಮಲಯಾಳಂ ಚಿತ್ರರಂಗಕ್ಕೆ ಕಾಲಿಡುವ ಬಹುತೇಕ ನಟ-ನಟಿಯರಿಗೆ ಸಹಜ ನಟನೆ ಎನ್ನುವುದು ಮಣ್ಣಿನ ಗುಣದ ಹಾಗೆ ಅಂಟಿಕೊಂಡಂತಿರುತ್ತದೆ. ಕಥಾವಸ್ತು, ವಿಷಯ, ಚಿತ್ರೀಕರಣ, ಸಂಗೀತ, ಸಾಹಿತ್ಯ, ತಾಂತ್ರಿಕತೆ ಹೀಗೆ ಇವೆಲ್ಲದರಲ್ಲಿಯೂ ವಿಶೇಷತೆಯನ್ನೊಳಗೊಂಡು ಪ್ರೇಕ್ಷಕರನ್ನು ಕಟ್ಟಿಹಾಕುವ ಸಕಲ ಪ್ರಯತ್ನಗಳನ್ನೂ ನಡೆಸಲಾಗುತ್ತದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪ್ರೇಕ್ಷಕರೂ ಮಲಯಾಳಂ ಸಿನಿಮಾಗಳನ್ನು ಇಷ್ಟಪಡುತ್ತಾರೆ.

ಇತ್ತೀಚೆಗಿನ ಕೆಲವು ವರ್ಷಗಳಿಂದ, ಮನಸ್ಸನ್ನಾವರಿಸುವ, ವರ್ಷ ಕಳೆದರೂ ಕಾಡುತ್ತಲೇ ಇರುವ ಸಿನಿಮಾಗಳು ಮಲಯಾಳಂ ಚಿತ್ರರಂಗದಲ್ಲಿ ಬರತೊಡಗಿವೆ. ಹಾಗೆನ್ನುವಾಗ ಥಟ್ಟೆಂದು ನೆನಪಾಗುವ ಚಿತ್ರ, ದುಲ್ಖರ್ ಸಲ್ಮಾನ್ ಅಭಿನಯದ ‘ಚಾರ್ಲಿ’. ಕಲಾತ್ಮಕ ಶೈಲಿಯ, ಹೊಸ ಚೈತನ್ಯವನ್ನೇ ತುಂಬಬಲ್ಲ ಶಕ್ತಿ ಈ ಚಿತ್ರಕ್ಕಿದೆ. ಪ್ರತ್ಯೇಕ ವಿಚಾರಗಳಿಗೆ ಮಾನಸಿಕವಾಗಿ ಸಮಸ್ಯೆ ಎದುರಿಸುವ ಟೆಸ್ಸಾ, ಕನಿ, ಕುಂಞಪ್ಪನ್ ಎಂಬ ಪಾತ್ರಗಳು ಚಾರ್ಲಿ(ದುಲ್ಖರ್ ಸಲ್ಮಾನ್)ಯ ಮುಂದೆ ಹಲವು ಸಂದರ್ಭಗಳಲ್ಲಿ ಸಿನಿಮಾಗಳಲ್ಲಿ ಸಾಮಾಜಿಕ ವಸ್ತು ವಿಷಯಗಳನ್ನು ತರುವುದಕ್ಕೂ, ಚಿತ್ರರಂಗವೊಂದು ಸಮಾಜಕ್ಕೆ ತೆರೆದುಕೊಳ್ಳುವುದಕ್ಕೂ ವ್ಯತ್ಯಾಸಗಳಿವೆ. ಕೇರಳದ ಘಟನೆಗಳಿಗೆ ಅಲ್ಲಿನ ನಟರು, ನಿರ್ದೇಶಕರು ಸ್ಪಂದಿಸುವ ರೀತಿ, ಸಮಾಜಕ್ಕೂ ಸಿನಿಮಾರಂಗಕ್ಕೂ ಸಂಬಂಧವಿಲ್ಲ ಎಂದು ಭಾವಿಸಿ ದೂರ ನಿಲ್ಲುವ ಇತರ ಸಿನಿಮಾರಂಗದ ಕಲಾವಿದರಿಗೆ ಮಾದರಿಯೆನಿಸಬೇಕು. ಕಾಣಸಿಗುತ್ತವೆ. ಅವರೆಲ್ಲರನ್ನು ಆವರಿಸುವ ಚಾರ್ಲಿ ಪ್ರೇಕ್ಷಕನ ಮನಸ್ಸನ್ನೂ ಆವರಿಸಿ, ಕಾಡದೆ ಬಿಡುವುದಿಲ್ಲ. ವಸ್ತ್ರವಿನ್ಯಾಸದಲ್ಲಿಯೂ ಗೆಲ್ಲುವ ಈ ಸಿನಿಮಾದ ದೃಶ್ಯಗಳು ಈಗಲೂ ಕಣ್ಣಮುಂದೆ ಬರುವಷ್ಟು ಸುಂದರ.

ದುಲ್ಖರ್ ಸಲ್ಮಾನ್, ವಿನೀದ್ ಶ್ರೀನಿವಾಸನ್, ನಿವಿನ್ ಪೌಲಿ, ಟೊವಿನೊ ಥೋಮಸ್, ಸೌಬಿನ್ ಶಾಹಿರ್, ಕಾಳಿದಾಸ್ ಜಯರಾಂ ಸದ್ಯಕ್ಕೆ ಮಲಯಾಳಂ ಸಿನಿಲೋಕವನ್ನು ಆಳುತ್ತಿರುವ ಹೊಸಮುಖಗಳು. ಕುಂಜಕ್ಕೊಬೋಬನ್, ಪೃಥ್ವಿರಾಜ್, ಜಯಸೂರ್ಯ, ರೆಹಮಾನ್, ಅನೂಪ್ ಮೆನನ್, ಬಿಜು ಮೆನನ್, ಲಾಲ್, ಮುಂತಾದ ಪ್ರಬುದ್ಧ ನಟರೂ ಜತೆಗಿದ್ದಾರೆ.

2013ರ ನಾರ್ತ್ 24 ಕಾದಂ, 2015ರಲ್ಲಿ ತೆರೆಕಂಡ ಚಾರ್ಲಿ, ಪತ್ತೆಮಾರಿ, ಪ್ರೇಮಂ, ನಂತರದ ಎನ್ನುಂ ನಿಂಡೆ ಮೊಯಿದಿನ್, ಕಮ್ಮಟ್ಟಿ ಪಾಡಂ, ಮಹೇಶಿಂಡೆ ಪ್ರತಿಕಾರಂ, ತೊಂಡಿಮುದಲುಂ ದೃಕ್‍ಸಾಕ್ಷಿಯುಂ, ಮಾಯಾನದಿ, ತೀವಂಡಿ, ಜೋ ಆಂಡ್ ದ ಬಾಯ್, ಸುಡಾನಿ ಫ್ರಂ ನೈಜೀರಿಯಾ, ಉಯರೆ,ವೈರಸ್, ಲೂಸಿಫರ್, ಕಟ್ಟಪ್ಪಣಯಿಲೆ ಹೃತಿಕ್ ರೋಷನ್, ಆಂಡ್ರಾಯ್ಡ್ ಕುಂಞಪ್ಪನ್ ವರ್ಷನ್ 5.25, ಅಂಬಿಳಿ, ಕೇಸ್ ಆಫ್ ಸಾಯಿರಬಾನು, ಟೇಕಾಫ್, ಪೂಮರಂ, ಜಲ್ಲಿಕಟ್ಟು, ವರತನ್, ಅತಿರನ್ ಹೀಗೆ ಹಲವಾರು ಸಿನಿಮಾಗಳು ಕಾಡುವಂಥವೇ ಆಗಿವೆ.

ವಸ್ತು ವಿಷಯಗಳು ಹೇಗೆ ಭಿನ್ನವಾಗಿರುತ್ತವೆ ಎನ್ನುವುದು ಇಲ್ಲಿ ಮುಖ್ಯ. ಮನೋವೈಜ್ಞಾನಿಕ ವಿಚಾರಗಳನ್ನೇ ಹೆಚ್ಚಾಗಿ ವಸ್ತುವಾಗಿಸಿರುವ ಸಿನಿಮಾಗಳು ಇಲ್ಲಿ ಹೆಚ್ಚು. ಅಲ್ಲದೆ ಸಾಮಾಜಿಕ ಪರಿಸ್ಥಿತಿಗೆ, ವರ್ತಮಾನದ ತಲ್ಲಣಗಳಿಗೆ ಸಿನಿಮಾ ಮೂಲಕ ಉತ್ತರ ನೀಡುವ, ಸವಾಲೆಸೆಯುವ ಪ್ರಯತ್ನಗಳು ಮಲಯಾಳಂನಲ್ಲಿ ನಡೆಯುತ್ತಲೇ ಇರುತ್ತವೆ. ಖ್ಯಾತ ನಟ ಫಹಾದ್ ಫಾಸಿಲ್ ನಟನೆಯ ‘ನಾರ್ತ್ 24 ಕಾದಂ’ ಹಾಸ್ಯದ ಜೊತೆಜೊತೆಗೆ ಸರಳತೆಯ ಸಂದೇಶವನ್ನು ಮುಂದಿರಿಸುವ ಪ್ರಯತ್ನ. ತಾನು ಶಿಸ್ತಿನ ಮನುಷ್ಯ ಎಂದುಕೊಂಡು, ಬ್ಯಾಗಿನಲ್ಲಿ ಟಿಶ್ಯೂ ಪೇಪರ್ ಇಟ್ಟುಕೊಂಡು, ಚೂರು ಧೂಳಿದ್ದರೂ ಅದನ್ನು ಟಿಶ್ಯೂನಲ್ಲಿ ಒರೆಸಿ ಕೂರುವ, ಕೈಗೇನಾದರೂ ತಾಗಿದರೂ ಟಿಶ್ಯೂ ಬಳಸಿ ಒರೆಸುವ ಅತಿ ಶಿಸ್ತಿನ ಆತನನ್ನು ಇದಿರುಗೊಳ್ಳುವವರೆಲ್ಲ ವಿಚಿತ್ರವಾಗಿ ನೋಡುತ್ತ ಸಾಗುತ್ತಾರೆ.

ಇದೇ ನಟನ ಇನ್ನೊಂದು ಅದ್ಭುತ ಸಿನಿಮಾ ‘ತೊಂಡಿಮುದಲುಂ ದೃಕ್‍ಸಾಕ್ಷಿಯುಂ’. ಈ ಸಿನಿಮಾದಲ್ಲಿ ಸರಳ ಕಥಾವಸ್ತುವೊಂದು ನಿರ್ದೇಶಕನ ಸೃಜನಶೀಲತೆಯಿಂದ ಅತ್ಯಂತ ಕುತೂಹಲಕಾರಿ ಎನಿಸುವ ರೀತಿಯಲ್ಲಿ ಪರದೆ ಮೇಲೆ ವ್ಯಕ್ತವಾಗಿದೆ. ಕ್ಯಾಮೆರಾ ಕೈಚಳಕ ಹಾಗೂ ಹಳ್ಳಿ ಅಥವಾ ಗ್ರಾಮೀಣ ಪ್ರದೇಶದ ಲೊಕೇಶನ್‍ಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ಸುಂದರವಾದ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ದಿಲೀಶ್ ಪೋತನ್ ನೀಡಿದ್ದಾರೆ. ಪೊಲೀಸ್ ಇಲಾಖೆ ಒಂದೇ ಕೇಸ್‍ಅನ್ನು ಎರಡು ಬಗೆಯಲ್ಲಿ- ಕಳ್ಳನ ವಿರುದ್ಧ ಮತ್ತು ಪರವಾಗಿ ಹೇಗೆ ಬದಲಿಸಬಲ್ಲದು ಎಂಬುವುದನ್ನು ಚಿತ್ರ ಸ್ಪಷ್ಟವಾಗಿ ತೋರಿಸುತ್ತದೆ. ಪೋತನ್ ಅವರ ‘ಮಹೇಶಿಂಡೆ ಪ್ರತಿಕಾರಂ’ ಎಂಬ ಸಿನಿಮಾ ಕೂಡಾ ರಾಷ್ಟ್ರಪ್ರಶಸ್ತಿ ಗಳಿಸಿದ್ದು, ಈ ಚಿತ್ರವೂ ರಾಷ್ಟ್ರಪ್ರಶಸ್ತಿ ಗೆದ್ದಿರುವುದು ವಿಶೇಷ. ನಟ ಫಹಾದ್ ಫಾಸಿಲ್, ಹಾಸ್ಯನಟ ಸೂರಜ್ ವೆಂಜಾರಮೋಡ್ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಫಹಾದ್, ಯಾವ ಪಾತ್ರಕ್ಕೂ ಸೈ ಎನ್ನುವುದು ಈ ಚಿತ್ರದ ಮೂಲಕ ತುಸು ಹೆಚ್ಚೇ ತಿಳಿಯುತ್ತದೆ.

ಮಲಯಾಳಂ ಚಿತ್ರರಂಗದ ವಿಶೇಷತೆಯೆಂದರೆ, ಪಾತ್ರಕ್ಕೆ ಸೂಕ್ತ ನಟರನ್ನು ಆಯ್ಕೆ ಮಾಡುವಲ್ಲಿ ನಿರ್ದೇಶಕ ವಹಿಸುವಷ್ಠೆ ಸೂಕ್ಷ್ಮತೆಯನ್ನು ತನ್ನ ಸಾಮಥ್ರ್ಯ, ಸಾಧ್ಯತೆಗೆ ತಕ್ಕಂತಹ ಕಥಾಪಾತ್ರವನ್ನು ಆಯ್ಕೆ ಮಾಡುವಲ್ಲಿ ನಟರು ಕೂಡಾ ವಹಿಸುವುದು. ತನಗಿದು ಒಪ್ಪುವುದಿಲ್ಲ ಎಂದಾಗ ನಟ, ತನಗೆ ಆ ಚಿತ್ರಕ್ಕೆ ಸಿಗಬಹುದಾದ ಸಂಭಾವನೆಯನ್ನೂ ಲೆಕ್ಕಿಸದೆ ಸಾರಾಸಗಟಾಗಿ ಪಾತ್ರವನ್ನು ತಿರಸ್ಕರಿಸುತ್ತಾನೆ. ಕೆಲವು ನಿರ್ದೇಶಕರು, ನಿರ್ದಿಷ್ಟ ನಟರನ್ನು ಮನಸ್ಸಿನಲ್ಲಿಟ್ಟುಕೊಂಡೇ ಅತ್ಯುತ್ತಮ ಕಥೆ ಕಟ್ಟುತ್ತಾರೆ. ತನಗೆ ಒಗ್ಗುವ ಪಾತ್ರಗಳಿಗೆ ಕಡಿಮೆ ಸಂಭಾವನೆಯಿದ್ದರೂ ನಟಿಸಲು ನಟ ಒಪ್ಪುತ್ತಾನೆ. ತನ್ನ ಕೆಲಸದ ಮೇಲೆ ನಟನೊಬ್ಬನಿಗೆ ಇರಬೇಕಾದ ಸಮರ್ಪಣಾಭಾವ ಇದು.

ಮಹಿಳಾ ದೌರ್ಜನ್ಯ, ಅತ್ಯಾಚಾರದಂತಹ ಸಮಾಜಘಾತಕ ಘಟನೆಗಳ ಕುರಿತಂತೆ ಅಮರ್ ಅಕ್ಬರ್ ಅಂಥೋನಿ, ಅತಿರನ್ ಸಿನಿಮಾಗಳಿದ್ದರೆ, ಎಲ್ಲ ವ್ಯಕ್ತಿಗಳನ್ನೂ ಅನುಮಾನಿಸುವುದು ಸಲ್ಲ ಎಂಬ ಸಂದೇಶವನ್ನು ‘ಅಂಕಲ್’ ಚಿತ್ರ ನೀಡುತ್ತದೆ. 2016ರಲ್ಲಿ ತೆರೆಕಂಡ ಮಮ್ಮುಟ್ಟಿ-ನಯನತಾರಾ ನಟನೆಯ ‘ಪುತಿಯ ನಿಮಯಂ’, ದೌರ್ಜನ್ಯಕ್ಕೆ ಎದುರಾಗಿ ಮಹಿಳೆಯೊಬ್ಬಳು ಸಿಡಿದೆದ್ದು, ಸೇಡು ತೀರಿಸುವ ಕತೆಯನ್ನು ಮುಂದಿಡುತ್ತದೆ.

ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಎತ್ತಿಹಿಡಿಯುವ ಚಿತ್ರಗಳಿಗೆ ಮಲಯಾಳಂನಲ್ಲಿ ಬರವಿಲ್ಲ. ಆದರೆ ಬುದ್ಧ, ಅಂಬೇಡ್ಕರ್ ಕುರಿತಂತೆ, ಅವರ ಚಿಂತನೆಗಳನ್ನಿಟ್ಟುಕೊಂಡ ಚಿತ್ರಗಳು ಇತ್ತೀಚೆಗಿನ ವಿಶೇಷ ಬೆಳವಣಿಗೆ. ‘ಪೂಮರಂ’ ಎಂಬ ಚಿತ್ರ, ಸಹಜವಾದ ಕಾಲೇಜು ಸ್ಪರ್ಧೆ, ಚಳವಳಿ, ಹೋರಾಟದ ಕಿಚ್ಚು ಮುಂತಾದವುಗಳ ಹೂರಣದ ಕಥೆಯಾಗಿ, ಹಿಂಸೆಯ ದಿಕ್ಕಿಗೆ ಚಲಿಸಬಹುದಾದ ವಾತಾವರಣವನ್ನು ಕಟ್ಟಿಕೊಡುತ್ತಲೇ, ಕ್ಲೈಮಾಕ್ಸ್‍ನಲ್ಲಿ ಶಾಂತಿಯನ್ನು ಸಾರುವ ನಿಟ್ಟಿನಲ್ಲಿ ಹಾಡಿನ ಮೂಲಕ ಬುದ್ಧನನ್ನು ತಂದಿಡುವ ಬಗೆ ಒಂದು ವಿಭಿನ್ನ ಪ್ರಯೋಗ.

ಪ್ರೀತಿ, ಪ್ರೇಮ, ಪ್ರಣಯದ ಕುರಿತ ಸಿನಿಮಾಗಳಂತೂ ಮಲಯಾಳಂನಲ್ಲಿ ಬಹಳಷ್ಟಿವೆ. ಕಾಲೇಜು ದಿನಗಳಿಂದಲೇ ಪ್ರೇಮಾಂಕುರವಾಗುವ ಕಥೆ, ಈಗೀಗಲಂತೂ ಹೈಸ್ಕೂಲ್, ಪ್ರೈಮರಿ ಮಕ್ಕಳನ್ನಿಟ್ಟುಕೊಂಡೂ ಇಂತಹ ಸಿನಿಮಾಗಳಿರುತ್ತವೆ (ಇವು ಆರೋಗ್ಯಕರ ಸಿನಿಮಾಗಳೇ ಆಗಿದ್ದರೂ ತೀರಾ ಎಳೆಯ ಮಕ್ಕಳ ಮನಸ್ಸನ್ನು ಬಾಧಿಸುವ ಸಾಧ್ಯತೆ ಹೆಚ್ಚು). ಅಲ್ಲದೆ ಸಹಜವಾಗಿ ಇತರ ಸನ್ನಿವೇಶಗಳಲ್ಲಿ ಹುಟ್ಟುವ ಪ್ರೇಮಕತೆಗಳೂ ಇಲ್ಲಿವೆ. 2015ರಲ್ಲಿ ತೆರೆಕಂಡ ‘ಪ್ರೇಮಂ’ ಮಲಯಾಳಂ ಚಿತ್ರರಂಗದಲ್ಲಿ ಹುಚ್ಚೆಬ್ಬಿಸಿದ ಸಿನಿಮಾ. ಅತ್ಯಂತ ಜನಪ್ರಿಯತೆ ಪಡೆದ ಈ ಸಿನಿಮಾದ ಹವಾ ವರ್ಷ ಕಳೆದರೂ ಮುಗಿಯಲೇ ಇಲ್ಲ. ಚಿತ್ರದ ಕಥೆ, ಚಿತ್ರಕತೆ, ಹಾಸ್ಯ, ಹಾಡುಗಳೆಲ್ಲವೂ ಬಹಳ ಪ್ರಸಿದ್ಧಿ ಪಡೆದಿದ್ದವು. ಈ ಚಿತ್ರ ತೆರೆಕಂಡ ಮೂರೇ ತಿಂಗಳಲ್ಲಿ ‘ಎನ್ನುಂ ನಿಂಡೆ ಮೊಯಿದಿನ್’ ಎಂಬ ಚಿತ್ರ ತೆರೆಕಂಡಿತು. ಅಂತರ್‍ಧರ್ಮೀಯ ಪ್ರೇಮಕಥೆಗಳನ್ನು ಊಹಿಸುವುದೂ ಕಷ್ಟವಾಗಿದ್ದ ಕೇರಳದಲ್ಲಿ ಇಂದು ಸಾಮಾನ್ಯವಾಗಿರುವ 1960- 70ರ ದಶಕದಲ್ಲಿ ಕೇರಳದಲ್ಲೇ ನಡೆದ ನೈಜಘಟನೆಯನ್ನು ಈ ಚಿತ್ರ ಆಧರಿಸಿದೆ. ಮನಕಲಕುವ ಸಂಗೀತ, ಹಾಡಿನ ಜತೆಗೆ ಹಳೆಕಾಲದ ವಾತಾವರಣವನ್ನೂ ಸುಂದರವಾಗಿ ಹೆಚ್ಚು ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರ ಕಟ್ಟಿಕೊಟ್ಟಿದೆ. ಪೃಥ್ವಿರಾಜ್-ಪಾರ್ವತಿ ಜೋಡಿ ಮೊಯಿದಿನ್- ಕಾಂಚನಮಾಲಾರನ್ನು ಸಮರ್ಥವಾಗಿ ತೆರೆಮೇಲೆ ತಂದಿಟ್ಟಿದೆ. ಟೊವಿನೊ ಥೋಮಸ್ ನಟನೆಯ ಮಾಯಾನದಿ(2017), ತೀವಂಡಿ(2018) ಚಿತ್ರಗಳು ಉತ್ಕಟ ಪ್ರೇಮದ ಕತೆಯನ್ನು ಹೊಂದಿವೆ.. ಕಾಲಕ್ಕೆ ತಕ್ಕಂತೆ ಮಾಗುವ ಮಾನಸಿಕ ತುಮುಲಗಳನ್ನು, ಸ್ಪಂದನೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತಲೇ ಹೊಸ ಸಿನಿಮಾಗಳು ಸಿದ್ಧಗೊಳ್ಳುತ್ತಿವೆ.

ಇಶ್ಕ್ (2019) ಎಂಬ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ, ಪ್ರಸ್ತುತ ಸಮಾಜಕ್ಕೆ ಕನ್ನಡಿ ಹಿಡಿದಂತಿದೆ. ಪ್ರೇಮಿಗಳನ್ನು ತಡೆದು ನಿಲ್ಲಿಸಿ ವಿಚಾರಿಸುವ, ವಿಡಿಯೊ ಮಾಡಿ ಬೆದರಿಸುವ, ಮಾನಸಿಕ, ದೈಹಿಕ ಹಿಂಸೆ ನೀಡುವ ನೈತಿಕ ಗೂಂಡಾಗಿರಿಯ ಕುರಿತ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು, ಚಿತ್ರದ ಕೊನೆಯಲ್ಲಿ, ಕೇರಳದಲ್ಲಿ ನಡೆದ ಇಂತಹ ಕೆಲವು ನೈಜಘಟನೆಗಳ ಸುದ್ದಿಗಳನ್ನೂ ನೀಡಲಾಗಿದೆ. ದೌರ್ಜನ್ಯಕ್ಕೊಳಗಾದ ಪ್ರೇಯಸಿಯನ್ನು ಅನುಮಾನಿಸುವ ಪ್ರಿಯಕರ, ಪತಿಯ ವಿಕೃತ ಕೃತ್ಯವನ್ನು ಪತ್ನಿ ಸಹಿಸಬೇಕಾದ ಸ್ಥಿತಿ, ಪುರುಷಪ್ರಧಾನ ಸಮಾಜದ ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ.

‘ಕುಂಬಳಾಂಗಿ ನೈಟ್ಸ್’ ಎನ್ನುವ ಸಿನಿಮಾ, ಮಲಯಾಳಂ ಚಿತ್ರರಂಗಕ್ಕೆ ಹೊಸ ಮಗ್ಗಲನ್ನು ಒದಗಿಸಿದೆ. ಶ್ಯಾಮ್ ಪುಷ್ಕರನ್ ಅವರ ಕಥೆಯ ಈ ಚಿತ್ರವನ್ನು ಮಧು ಸಿ.ನಾರಾಯಣನ್ ನಿರ್ದೇಶಿಸಿದ್ದಾರೆ. ಸಾಮಾನ್ಯ ಬದುಕಿನ ಚಿತ್ರಣವನ್ನು, ಮನುಷ್ಯನನ್ನು ಒಂದರ ಮೇಲೊಂದರಂತೆಕಾಡಿ ತಿನ್ನುವ, ಜೀವಹಿಂಡುವ ಸಂಕಟಗಳನ್ನು ಮನಮುಟ್ಟುವ ಹಾಗೆ ಚಿತ್ರಿಸಲಾಗಿದೆ. ತಂದೆ, ತಾಯಿಯಿಲ್ಲದೆ ಮೂರು ಸಹೋದರರು ಕುಟುಂಬ ಸಾಗಿಸುವ ಬಗೆ, ಅದರ ನಡುವಿನ ಒದ್ದಾಟವನ್ನು ಹಾಸ್ಯದ ಧಾಟಿಯಲ್ಲಿಯೇ ಚಿತ್ರಿಸಲಾಗಿದೆ. ಪ್ರತಿಯೊಂದು ಪಾತ್ರದ ಬದುಕೂ ರೂಪುಗೊಳ್ಳಲು ಹವಣಿಸುವ, ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನೇ ಅನುಭವಿಸುವ ರೀತಿ ವಾಸ್ತವಕ್ಕೆ ಬಲು ಹತ್ತಿರವಾದುದು.

ಚಿತ್ರದ ಎಲ್ಲ ಪಾತ್ರಗಳಿಗೂ ಸಮರ್ಥವಾಗಿ ನ್ಯಾಯ ಒದಗಿಸಿದ್ದಾರೆ ನಟ, ನಟಿಯರು. ಸೌಬಿನ್ ಶಾಹಿರ್ ಪಾತ್ರ ಮರುಕ ಹುಟ್ಟಿಸಿದರೆ, ಸಿನಿಮಾದ ಕೊನೆಯಲ್ಲಿ ತಾನು ಹೀರೋ ಎಂದು ಹೇಳಿಕೊಳ್ಳುವ ವಿಲನ್ ಫಹಾದ್ ಫಾಸಿಲ್ ಪಾತ್ರ ಕೆಟ್ಟ ಕೋಪ ತರಿಸುತ್ತದೆ- ಅಂದರೆ ಪಾತ್ರಕ್ಕೆ ಫಹಾದ್ ಜೀವ ತುಂಬಿದ ರೀತಿ ಅಷ್ಟು ಅದ್ಭುತವಾಗಿದೆ. ಶೇನ್ ನಿಗಮ್ ತನ್ನ ಸಹಜ ನಟನೆಯಿಂದ ಮನಗೆಲ್ಲುತ್ತಾರೆ. ಶೇನ್‍ಗೆ ನಾಯಕಿಯಾಗಿ ನಟಿಸಿರುವ ಅನ್ನಾ ಬೆನ್ ಎಂಬ ಹೊಸ ನಟಿ ತನ್ನ ನೋಟ, ನಗು, ಅಭಿವ್ಯಕ್ತಿಯಿಂದಲೇ ಪ್ರೇಕ್ಷಕನನ್ನು ಕಟ್ಟಿಹಾಕುತ್ತಾಳೆ. ಇಡೀ ಪಂಚಾಯಿತಿಯಲ್ಲಿಯೇ ಇಂತಹ ಬೇರೆ ಮನೆಯಿರಲಿಕ್ಕಿಲ್ಲ ಎಂಬ ಕಿರಿಯ ಹುಡುಗನ ಮಾತು ಕ್ಲೈಮಾಕ್ಸ್‍ನಲ್ಲಿ ಅರ್ಥ ಪಡೆಯುತ್ತದೆ. ಶಾಮ್ ಪುಷ್ಕರನ್ ಅವರ ಸಂಭಾಷಣೆಯೇ ಚಿತ್ರದ ಗೆಲುವಿನ ಮೂಲ ಅಂಶ ಎಂದರೂ ತಪ್ಪಾಗದು.

ಗಮನಿಸಬೇಕಾದ ಇನ್ನೊಂದು ಬೆಳವಣಿಗೆಯೆಂದರೆ, ಮಲಯಾಳಂನಲ್ಲಿ ಕ್ರೀಡಾ ಸ್ಫೂರ್ತಿ ತುಂಬುವ ಚಿತ್ರಗಳು ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಕ್ರೀಡೆಗೆ ಸಂಬಂಧಿಸಿ, ಅದರಲ್ಲೂ ಮಹಿಳಾ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಿನಿಮಾಗಳು ಕೂಡಾ ಇವೆ. ಟೊವಿನೊ ಥೋಮಸ್ ಹಾಗೂ ವಾಮಿಕಾ ಗಬ್ಬಿ ನಟನೆಯ ‘ಗೋಧಾ’ ಕುಸ್ತಿಯನ್ನು ಕೇಂದ್ರೀಕರಿಸಿದ ಸಿನಿಮಾ. ಸುಡಾನಿ ಫ್ರಂ ನೈಜೀರಿಯಾ, ಕಾಳಿದಾಸ್ ಜಯರಾಂ ನಟನೆಯ ‘ಅರ್ಜೆಂಟಿನಾ ಫ್ಯಾನ್ಸ್’, ಜಯಸೂರ್ಯ ಅಭಿನಯದ ಕ್ಯಾಪ್ಟನ್ ಎಂಬ ಚಿತ್ರಗಳು ಫುಟ್ಬಾಲ್ ಕೇಂದ್ರಿತವಾಗಿರುವಂಥವು. ಕೇರಳದಲ್ಲಿ ಫುಟ್ಬಾಲ್ ಹುಚ್ಚು ಅತ್ಯಂತ ಹೆಚ್ಚು. ‘ಕರಿಕ್ಕುನ್ನನ್ 6’ ಎಂಬ ಚಿತ್ರ ವಾಲಿಬಾಲ್ ಕುರಿತ ಕಥೆಯನ್ನು ಆಧರಿಸಿದೆ. ಅನೂಪ್ ಮೆನನ್ ಹಾಗೂ ಮಂಜು ವಾರಿಯರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ನಿವಿನ್ ಪೌಲಿ ನಟನೆಯ ‘1983’ ಕ್ರಿಕೆಟ್ ಕುರಿತಾಗಿದ್ದು, ಹಾಸ್ಯದ ಜತೆಗೆ ಕುತೂಹಲಕರವಾಗಿ ಸಿನಿಮಾ ಸಾಗುತ್ತದೆ. ಕ್ರೀಡಾಸ್ಫೂರ್ತಿಯ ಇದೇ ಮಾದರಿಯ ಚಿತ್ರಗಳು ಇತ್ತೀಚೆಗೆ ತಮಿಳಿನಲ್ಲೂ ಹೆಚ್ಚುತ್ತಿರುವುದನ್ನು ಗಮನಿಸಬಹುದು.

ಸಿನಿಮಾದಲ್ಲಿಯೂ, ನಿಜ ಜೀವನದಲ್ಲಿಯೂ ನಟರ ಹಾಗೆಯೇ ನಟಿಯರಿಗೂ ಸಮಾನ ಗೌರವ ಈಚಿತ್ರರಂಗದಲ್ಲಿ ದಕ್ಕುತ್ತದೆ. ‘ಲೇಡಿ ಮೋಹನ್‍ಲಾಲ್’ ಎಂದೇ ಹೆಸರು ಗಳಿಸಿದ ಪ್ರಸಿದ್ಧ ನಟಿ ಮಂಜು ವಾರಿಯರ್ ಎಂತಹ ಪಾತ್ರವಿದ್ದರೂ ಅದರ ಆಳಕ್ಕಿಳಿದು ಜೀವ ತುಂಬುವ ನಟಿ.ಜೋ ಆಂಡ್ ದಿ ಬಾಯ್, ಕೇಸ್ ಆಫ್ ಸಾಯಿರಬಾನು, ಲೂಸಿಫರ್, ಹೌ ಓಲ್ಡ್ ಆರ್ ಯು, ವೆಟ್ಟ, ಮೋಹನ್‍ಲಾಲ್, ಒಡಿಯನ್ ಮುಂತಾದ ಸಿನಿಮಾಗಳಲ್ಲಿ ಮಂಜು ನಟನೆಯ ಪ್ರತಿಭೆಯನ್ನು ಕಾಣಬಹುದು. 2020ರ ಬಹುನಿರೀಕ್ಷಿತ, ಇತಿಹಾಸ ಆಧಾರಿತ ಸಿನಿಮಾ, ‘ಮರಕ್ಕರ್:ಅರಬಿಕ್ಕಡಲಿಂಡೆ ಸಿಂಹಂ’ನ ಮುಖ್ಯಪಾತ್ರದಲ್ಲಿಯೂ ಮಂಜು ವಾರಿಯರ್ ನಟಿಸಿದ್ದಾರೆ. ಅದೇ ರೀತಿ, ಪಾರ್ವತಿ ಮೆನನ್, ಐಶ್ವರ್ಯ ಲಕ್ಷ್ಮಿ, ಲೆನಾ, ಅನುಶ್ರೀ, ಅನು ಸಿತಾರ, ನಿಮಿಷ ಸಜಯನ್ ಸದ್ಯ ಇಲ್ಲಿ ಬೇಡಿಕೆಯ ತಾರೆಗಳು.

ವಿಶೇಷ ಎಂದರೆ ಮಲಯಾಳಂ ಚಿತ್ರರಂಗ, ಕೇರಳದ ಹೊರತಾಗಿ, ಇತರ ರಾಜ್ಯಗಳ, ದೇಶಗಳ ಹೊಸ ಮುಖಗಳನ್ನು ಪರಿಚಯಿಸುತ್ತದೆ. ಸುಡಾನಿ ಫ್ರಂ ನೈಜೀರಿಯಾ ಸಿನಿಮಾದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ನೈಜೀರಿಯಾದ ಸ್ಯಾಮ್ಯುಯೆಲ್ ರಾಬಿನ್‍ಸನ್, ಕುಂಬಳಾಂಗಿ ನೈಟ್ಸ್‍ನಲ್ಲಿ ಫ್ರೆಂಚ್ ಮೂಲದ ಜಾಸ್ಮಿನ್, ಈ ಹಿಂದೆ ‘ನೀಲಾಗಾಶಂ ಪಚ್ಚಕ್ಕಡಲ್ ಚುವನ್ನಭೂಮಿ’ ಎಂಬ ಚಿತ್ರದಲ್ಲಿ ಇಂಫಾಲದ ನಟಿ ಬಾಲ ಹಿಜಾಂ, ಬಂಗಾಳಿ ಹಿರಿಯ ನಟ ದೃತಿಮನ್ ಚಟರ್ಜಿ, ಬಂಗಾಳಿ ನಟಿ ಎನಾ ಸಹಾ, ಮುಂಬೈ ನಟಿ ಪಾಲೊಮ ಮೊನ್ನಪ್ಪ, ಗೋದಾ ಸಿನಿಮಾದಲ್ಲಿ ಚಂಡೀಗಡ್‍ನ ವಾಮಿಕಾ ಗಬ್ಬಿ, ‘ಪ್ರೇಮಂ’ನಲ್ಲಿ ತಮಿಳಿನ ಸಾಯಿ ಪಲ್ಲವಿ… ಹೀಗೆ.

ಪರಭಾಷೆಗಳ, ಪರದೇಶಗಳ ಕಲಾವಿದರನ್ನು ಎಲ್ಲ ಚಿತ್ರರಂಗವೂ ಪರಿಚಯಿಸುತ್ತದೆ. ಆದರೆ ಮಲಯಾಳಂನಲ್ಲಿ ಇದು ಮುಖ್ಯವಾಗುವುದು, ಇವರು ಯಾರೂ ಸಿನಿಮಾದಲ್ಲಿ ಮಲಯಾಳಂ ಮಾತನಾಡುವುದಿಲ್ಲ. ಅವರವರದೇ ಭಾಷೆ ಮಾತನಾಡುತ್ತಾರೆ. ಅಥವಾ ಇಂಗ್ಲಿಷ್ ಮಾತನಾಡುತ್ತ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಭಾಷೆ ಗೊತ್ತಿಲ್ಲದ, ಇತರ ರಾಜ್ಯ, ದೇಶಗಳ ಕಲಾವಿದರನ್ನು ಕರೆತಂದು ನಮ್ಮ ಭಾಷೆಯನ್ನು ಮಾತನಾಡುವ ಸಂಕಷ್ಟವನ್ನು ಅವರಿಗೆ ಕೊಡುವ ಸನ್ನಿವೇಶ ತಪ್ಪಿದಂತೆಯೂ ಆಗುತ್ತದೆ. ಜತೆಗೆ ಚಿತ್ರದ ವಾಸ್ತವಿಕತೆಯೂ ಹೆಚ್ಚುತ್ತದೆ.

ನಿರೀಕ್ಷೆಗಳಾಚೆ ಬೆಳೆಯುತ್ತಿರುವ ಮಲಯಾಳಂ ಚಿತ್ರರಂಗದಿಂದ, ಸಿನಿಮಾ ಸಂಬಂಧಿತ, ಸಿನಿಮಾಕ್ಕೆ ಹೊರತಾದ ಸಾಕಷ್ಟು ಪಾಠಗಳನ್ನು ಕಲಿಯಲಿಕ್ಕಿದೆ. ಚಿತ್ರಗಳಲ್ಲಿ ಸಾಮಾಜಿಕ ವಸ್ತುಗಳನ್ನು ಕಥೆಯಾಗಿಸುವುದಕ್ಕೂ, ಚಿತ್ರರಂಗವೊಂದು ಸಮಾಜಕ್ಕೆ ತೆರೆದುಕೊಳ್ಳುವುದಕ್ಕೂ ವ್ಯತ್ಯಾಸಗಳಿವೆ. ಕೇರಳದ ಘಟನೆಗಳಿಗೆ ಅಲ್ಲಿನ ನಟರು, ನಿರ್ದೇಶಕರು ಸ್ಪಂದಿಸುವ ರೀತಿ, ಸಮಾಜಕ್ಕೂ ಸಿನಿಮಾರಂಗಕ್ಕೂ ಸಂಬಂಧವಿಲ್ಲ ಎಂದುಕೊಂಡು ದೂರ ನಿಲ್ಲುವ ಇತರ ಸಿನಿಮಾರಂಗದ ಕಲಾವಿದರಿಗೆ ಮಾದರಿಯೆನಿಸಬೇಕು.

ಮಮ್ಮುಟ್ಟಿ, ದುಲ್ಖರ್, ಟೊವಿನೊ, ಕುಂಜಕ್ಕೊಬೋಬನ್, ಜಯಸೂರ್ಯ, ಹಾಸ್ಯನಟ ಅಜು ವರ್ಗೀಸ್, ಹೀಗೆ ಹಲವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿರುತ್ತಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಎಲ್ಲಾ ನಟರೂ ಒಟ್ಟಾಗಿ ಬೀದಿಗಿಳಿದಿದ್ದರು. ‘ಸುಡಾನಿ ಫ್ರಂ ನೈಜೀರಿಯಾ’ ಸಿನಿಮಾ ತಂಡ ರಾಷ್ಟ್ರಪ್ರಶಸ್ತಿಯನ್ನು ತಿರಸ್ಕರಿಸಿತು. ಅಲ್ಲದೆ ಇದೇ ತಂಡ ತಿರುವನಂತಪುರದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಸಿಎಎ ವಿರೋಧಿ ಪೋಸ್ಟರ್‍ಗಳನ್ನು ಪ್ರದರ್ಶಿಸಿತ್ತು, ನಿರ್ದೇಶಕ ಝಕರಿಯಾ ಮೊಹಮ್ಮದ್ ಅವರ ಮುಂದಿನ ಚಿತ್ರ ‘ಹಲಾಲ್ ಲವ್ ಸ್ಟೋರಿ’ಯ ಚಿತ್ರೀಕರಣ ಮುಗಿಸಿದಂದೂ ಇದೇ ರೀತಿಯ ಪ್ರತಿಭಟನೆ ನಡೆಸಿರುವುದು, ಪ್ರತಿಭಟನೆಯ ಸ್ವರೂಪಗಳಿಗೂ ಕನ್ನಡಿ ಹಿಡಿದಂತಿದೆ. 

Leave a Reply

Your email address will not be published.