ಮಲಯಾಳಂ ಸಿನಿಮಾಗಳ ಯಶಸ್ಸು ಕನ್ನಡ ಚಿತ್ರರಂಗದ ಬಿಕ್ಕಟ್ಟು

-ಯತಿರಾಜ್ ಬ್ಯಾಲಹಳ್ಳಿ

ಸಿನಿಮಾ ಎಂಬ ಜನಪ್ರಿಯ ಮಾಧ್ಯಮ ದೇಶ, ಭಾಷೆಗಳಾಚೆ ಚಲಿಸುವ ಗುಣವನ್ನು ಮಲಯಾಳಂ ಚಿತ್ರರಂಗ ಅಳವಡಿಸಿಕೊಂಡಿದೆ. ಒಂದು ಕಾಲದಲ್ಲಿ ‘ಎ’ ಸರ್ಟಿಫಿಕೇಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ಈಗ ಬ್ರಿಡ್ಜ್ ಸಿನಿಮಾಗಳನ್ನು ಬೆಳೆಯುವ ಭೂಮಿಯಾಗಿದ್ದು ಹೇಗೆ?

“ಮತ್ತೆ ಮತ್ತೆ ನೀವ್ಯಾಕೆ ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳತ್ತ ಬೆಟ್ಟು ತೋರಿಸುತ್ತಾ, ಕನ್ನಡ ಚಿತ್ರರಂಗವನ್ನು ದ್ವಿತೀಯ ದರ್ಜೆಯಲ್ಲಿ ನೋಡುತ್ತೀರಿ? ಕನ್ನಡದಲ್ಲಿ ಪ್ರತಿಭಾವಂತರು ಇಲ್ಲವಾ? ನೀವು ಕನ್ನಡ ವಿರೋಧಿಗಳು” ಎನ್ನುವ ಕನ್ನಡ ಸಿನಿಮಾ ಪ್ರೇಮಿಗಳಿಗೇನೂ ಕೊರತೆ ಇಲ್ಲ. ಕನ್ನಡ ಸಿನಿಮಾಗಳ ಮೇಲಿನ ಪ್ರೇಮವು ಭಾಷಾ ಪ್ರೇಮವೂ ಆಗಿರುತ್ತದೆ ಎಂಬುದು ಇಂಥವರ ವಾದ.

ಸಿನಿಮಾಕ್ಕೆ ಭಾಷೆಯ ಸೀಮಿತ ಚೌಕಟ್ಟು ಇರದಿದ್ದರೂ ಪ್ರಾದೇಶಿಕತೆಯ ಹಂಗು ಸಾಮಾನ್ಯವಾಗಿ ಇರುತ್ತದೆ. ಹೀಗಾಗಿ ಒಂದು ಪ್ರದೇಶದ ಭಾಷೆಯ ಸಿನಿಮಾಗಳನ್ನು ಆರಾಧಿಸುವುದರ ಹಿಂದೆ ಭಾಷಾಭಿಮಾನದ ಅಂಶವೂ ಸ್ಥಾನ ಪಡೆಯುತ್ತದೆ. ಆದರೆ ಸಿನಿಮಾವನ್ನು ಭಾಷಾಭಿಮಾನದ ಅಂಧಾನುಕರಣೆಯ ಭಾಗವಾಗಿಸುವುದು ಸರಿ ಕಾಣದು. ಕನ್ನಡ ಸಿನಿಮಾಗಳನ್ನು ಟೀಕಿಸುವ ಬಹುತೇಕರು, ಹಿಂದಿ ಹೇರಿಕೆಯ ಕಡು ವಿರೋಧಿಗಳೂ ಆಗಿದ್ದು, ಕನ್ನಡ ಸಾಹಿತ್ಯ ಪರಂಪರೆಯ ಆರಾಧಕರಾಗಿದ್ದಾರೆ. ತನ್ನ ಮನೆಯ ಮಗ ಹಾಳಾಗುವಾಗ, ಪಕ್ಕದ ಮನೆಯ ಮಗನನ್ನು ಹೊಗಳುವುದು, ನೆರೆಮನೆಯವನನ್ನು ನೋಡಿ ಮನೆಯ ಮಗ ಉದ್ಧಾರವಾಗಲೆಂದಷ್ಟೇ, ಅಲ್ಲಿ ಪ್ರೀತಿ ಮತ್ತು ಕಾಳಜಿಯೇ ಪ್ರಧಾನ. ಕನ್ನಡ ಚಿತ್ರರಂಗ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಲಿ ಎಂಬುದು ಟೀಕಾಕಾರರ ಆಶಯವೂ ಆಗಿದೆ.

ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಚಿತ್ರರಂಗ ಕೆಲಕಾಲ ಸ್ತಬ್ಧವಾಗಿ ಮತ್ತೆ ಕಾರ್ಯಾರಂಭ ಮಾಡುತ್ತಿದೆ. ಇತರ ಭಾಷೆಗಳ ಚಿತ್ರರಂಗವೂ ಕಾರ್ಯಶೀಲವಾಗಿವೆ. ಆದರೆ, ಕನ್ನಡ ಚಿತ್ರರಂಗ ಅಕ್ಕಪಕ್ಕದವರೊಂದಿಗೆ ಗುದ್ದಾಡಿ ಗೆಲ್ಲಬೇಕಾದ ಸವಾಲಿನ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವದ ಚರ್ಚೆಯತ್ತ ಗಂಭೀರವಾಗಿ ಯೋಚಿಸಿದಂತೆ ಕಾಣುತ್ತಿಲ್ಲ. ಆರ್ಥಿಕ ದುಸ್ಥಿತಿಯ ಚರ್ಚೆಯನ್ನು ಪಲ್ಲಟಿಸಲೆಂದೇ `ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ’ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ ಎಂಬ ರಾಜಕೀಯ ಗುಮಾನಿಗಳಲ್ಲಿ ಸತ್ಯಾಂಶವಿರಬಹುದು. “ಅವರು ಡ್ರಗ್ ಅಡಿಕ್ಟಾ? ಇವರು ಡ್ರಗ್ ಅಡಿಕ್ಟಾ?” ಎಂದು ಮಾಧ್ಯಮಗಳು ಸಿನಿಮಾ ತಾರೆಯರ ಹಿಂದೆ ಅಲೆಯುತ್ತಿರುವ ಉದ್ದೇಶ ಆರ್ಥಿಕ ಕುಸಿತದ ಚರ್ಚೆಯನ್ನು ಡೈವರ್ಟ್ ಮಾಡುವುದೂ ಆಗಿರಬಹುದು.

ಆದರೆ ಅಕ್ಕಪಕ್ಕದ ಚಿತ್ರರಂಗಗಳು ನಮ್ಮನ್ನು ಕಂಡು ಏನಂದುಕೊಂಡಾವು ಎಂಬ ನಾಚಿಕೆಯಾಗಲೀ, ಸ್ವಾಭಿಮಾನವಾಗಲೀ ನಮಗೆ ಇದೆಯೇ? ಹೀಗೆ ನಾವು ಕಾಲಹರಣ ಮಾಡುತ್ತಿರುವ ಸಂದರ್ಭದಲ್ಲಿ, ಕೋವಿಡ್ ಬಿಕ್ಕಟ್ಟಿನ ದಿನಗಳಲ್ಲೇ ಚಿತ್ರೀಕರಣಗೊಂಡು `ಮಲಯಾಳಂ’ನಲ್ಲಿ ಮೂಡಿಬಂದ `ಸೀ ಯೂ ಸೂನ್’ ಎಂಬ ಸಿನಿಮಾ ಸೃಜನಶೀಲತೆ ಹಾಗೂ ಪ್ರಯೋಗಶೀಲತೆಯ ಕಾರಣಕ್ಕೆ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಇತ್ತ ಥಿಯೇಟರ್‍ಗಳು ತೆರೆಯದೆ ಓಟಿಟಿಯಲ್ಲಿಯೂ ಸರಿಯಾದ ಸ್ಥಾನ ಸಿಗದೆ ಕನ್ನಡ ಸಿನಿಮಾಗಳು ಪರದಾಡುವಂತಾಗಿದೆ. ಥಿಯೇಟರ್ ನೀಡುವ ಅನುಭವವನ್ನು ಓಟಿಟಿ ನೀಡುವುದಿಲ್ಲ ಎಂದು ಕೆಲವು ಕನ್ನಡ ಸಿನಿಮಾ ತಜ್ಞರು ಅಭಿಪ್ರಾಯಪಡುತ್ತಾರೆ. ಅವರ ಹೇಳಿಕೆಯಲ್ಲಿ ಸತ್ಯಾಂಶವೂ ಇದೆ ಎನ್ನೋಣ. ಜೊತೆಗೆ ಪಕ್ಕದವರೊಂದಿಗೆ ಗುದ್ದಾಡಲು ಸಾಧ್ಯವಾಗದೆ ಸ್ಪರ್ಧಾ ಜಗತ್ತಿಗೆ ನಾವು ಬೆನ್ನು ತೋರಿಸುತ್ತಿದ್ದೇವೆಯೇ ಎಂಬುದೂ ಮುಖ್ಯವಲ್ಲವೆ?

ಲೂಸಿಯಾ, ಯೂಟರ್ನ್‍ನಂತಹ ವಿಶಿಷ್ಟ ಸಿನಿಮಾಗಳನ್ನು ನೀಡಿದ ನಿರ್ದೇಶಕ ಪವನ್ ಕುಮಾರ್ ಲಾಕ್ ಡೌನ್ ಸಂದರ್ಭದಲ್ಲಿ `ಫಿಲ್ಮ್ ಮೇಕರ್ಸ್ ಯೂನೈಟೆಡ್ ಕ್ಲಬ್’ (ಎಫ್.ಯು.ಸಿ.) ಎಂಬ ವೇದಿಕೆ ಸೃಷ್ಟಿಸಿದ್ದಾರೆ. ಕಾಲಮಾನಕ್ಕೆ ತಕ್ಕ ಸಿನಿಮಾಗಳನ್ನು ನಿರ್ಮಿಸಿ, ಅದಕ್ಕೊಂದು ಸೂಕ್ತ ನೆಲೆ ಕಲ್ಪಿಸಬೇಕೆಂಬುದು ಎಫ್.ಯು.ಸಿ.ಯ ಉದ್ದೇಶಗಳಲ್ಲೊಂದು. “ಕನ್ನಡ ಸಿನಿಮಾಗಳಿಗೆ ಈಗಿರುವ ಓಟಿಟಿಗಳಲ್ಲಿ ಸೂಕ್ತ ವೇದಿಕೆ ಸಿಗುತ್ತಿಲ್ಲ, ಹೀಗಾಗಿ ತನ್ನದೇ ಆದ ಓಟಿಟಿಯನ್ನು ನಿರ್ಮಿಸಿಕೊಳ್ಳುವುದು ಅಗತ್ಯ” ಎಂಬ ಅಭಿಪ್ರಾಯವನ್ನೂ ಪವನ್ ಕುಮಾರ್ ತಾಳುತ್ತಾರೆ. ಆದರೆ ಹೀಗಾದಾಗ ಪಕ್ಕದವರೊಂದಿಗೆ ಸ್ಪರ್ಧೆ ಸಾಧ್ಯವೇ?

`ಅರಿಷಡ್ವರ್ಗ’ ಎಂಬ ಕನ್ನಡ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಬಿಕ್ಕಟ್ಟಿನಿಂದ ಸಾಧ್ಯವಾಗಲಿಲ್ಲ. ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ, ನಮ್ಮಲ್ಲೇಕೆ ಇಂತಹ ಸಿನಿಮಾ ಮೂಡಿಬರುತ್ತಿಲ್ಲ ಎಂದು ಪ್ರಶ್ನಿಸುವವರಿಗೆ `ಅರಿಷಡ್ವರ್ಗ’ ಬಾಯಿ ಮುಚ್ಚಿಸಬಲ್ಲದು. ರಿಲೀಸ್ ಗೂ ಮುಂಚೆ ಈ ಸಿನಿಮಾ ನೋಡುವ ಅವಕಾಶ ದೊರೆತ ಕಾರಣ, ಈ ಮಾತುಗಳನ್ನು ಹೇಳುತ್ತಿದ್ದೇನೆ. ಆದರೆ ಈ ಸಿನಿಮಾದಲ್ಲಿ ಸ್ಟಾರ್ ನಟರು ಇಲ್ಲ ಎಂಬ ಕಾರಣಕ್ಕೆ ಓಟಿಟಿ ವೇದಿಕೆಗಳು ಬಿಡುಗಡೆಗೆ ನಿರಾಕರಿಸುತ್ತಿವೆ” ಎಂದು ಸಿನಿಮಾ ವಿಮರ್ಶಕ ಎಲ್.ಎಂ.ಸಂತೋಷ್ ಕುಮಾರ್ ಈಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದರು. ಒಂದು ಸೃಜನಶೀಲಪ್ರಯೋಗಗಕ್ಕೆ, ಹೊಸಬರೇ ನಿರ್ಮಿಸಿದ ಸಿನಿಮಾವೊಂದಕ್ಕೆ ಸೂಕ್ತ ವೇದಿಕೆ ದೊರಕುತ್ತಿಲ್ಲ ಎಂಬುದು ದುರಾದೃಷ್ಟವಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಅಸಂಘಟನೆಯ ಕುರಿತೂ ಯೋಚಿಸಲು ಅವಕಾಶ ನೀಡುತ್ತದೆ.

ಈಗಾಗಲೇ ಓಟಿಟಿ ವೇದಿಕೆಗಳಲ್ಲಿ ಲಭ್ಯವಿರುವ ಕನ್ನಡ ಸಿನಿಮಾಗಳನ್ನು ಅದೇ ಓಟಿಟಿಯಲ್ಲಿ ಲಭ್ಯವಿರುವ ಮಲಯಾಳಂ ಚಿತ್ರಗಳೊಂದಿಗೆ ತುಲನೆ ಮಾಡಿಕೊಳ್ಳುವುದು ಅಗತ್ಯ. ಓಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳನ್ನು ಕೊಳ್ಳುವಾಗ ಸ್ಟಾರ್ ನಟರನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಅಂದರೆ ಕನ್ನಡ ಪ್ರೇಕ್ಷಕರು ಸ್ಟಾರ್ ನಟರಿಗೆ ನೀಡುವ ಆದ್ಯತೆಯನ್ನು ಇದು ಎತ್ತಿ ಹಿಡಿಯುತ್ತದೆ. (ಎಲ್ಲ ಭಾಷೆಗಳ ಸ್ಟಾರ್ ನಟರಿಗೆ ಅವರದ್ದೇ ಆದ ಪ್ರೇಕ್ಷಕ ವರ್ಗವಿರುವುದು ಬೇರೊಂದು ಚರ್ಚೆಯ ವಿಷಯ. ಸ್ಟಾರ್ ನಟರಿಂದ ಹೊಸ ಪ್ರೇಕ್ಷಕ ವರ್ಗ ಬಯಸುತ್ತಿರುವ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸುವೆ.)

ಇನ್ನು ಓಟಿಟಿಯವರು ಮತ್ತೆರಡು ವಿಧಾನದಲ್ಲಿಯೂ ಸಿನಿಮಾಗಳನ್ನು ಕೊಂಡುಕೊಳ್ಳುತ್ತಾರೆ. ಒಂದು: ಕಂತುಗಳ ಲೆಕ್ಕದಲ್ಲಿ ಹಣ ಪಾವತಿ ಮಾಡುವುದು, ಮತ್ತೊಂದು ಸಿನಿಮಾ ವೀಕ್ಷಣೆಯ ಸಮಯಾಧಾರದಲ್ಲಿ ಹಣ ಪಾವತಿ ಮಾಡುವುದು. ಅಂದರೆ ನೇರವಾಗಿ ಪೂರ್ಣ ಮೊತ್ತವನ್ನು ಪಾವತಿಸಿ ಓಟಿಟಿಯವರು ಕನ್ನಡ ಚಿತ್ರಗಳನ್ನು ಖರೀದಿಸಿದ್ದು ಕಡಿಮೆ. ಈಚೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆದ `ಲಾ’ ಮತ್ತು `ಫ್ರೆಂಚ್ ಬಿರಿಯಾನಿ’ ಸಿನಿಮಾಗಳನ್ನು ಪೂರ್ಣ ಮೊತ್ತವನ್ನು ಪಾವತಿಸಿ ಖರೀದಿಸಲಾಗಿದೆ. ಕಾರಣ- ಆ ಸಿನಿಮಾಗಳು ಪುನೀತ್ ರಾಜಮಾರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿವೆ. ಅಂದರೆ ಈ ಸಿನಿಮಾಗಳಿಗೆ ಸ್ಟಾರ್ ವ್ಯಾಲ್ಯೂ ಇದೆ. ಇರಲಿ, ಸ್ಟಾರ್ ವ್ಯಾಲ್ಯೂ ಪಕ್ಕಕ್ಕಿಟ್ಟು ನೋಡುವುದಾದರೆ `ಲಾ’ ಮತ್ತು `ಫ್ರೆಂಚ್ ಬಿರಿಯಾನಿ’ ಕುರಿತು ಬಂದ ವಿಮರ್ಶೆಗಳೇನೂ ಆಶಾದಾಯಕವಾಗಿಲ್ಲ. ಅದರಲ್ಲೂ `ಲಾ’ ಸಿನಿಮಾ ಕುರಿತು ಕನ್ನಡ ಪ್ರೇಕ್ಷಕರೇ ಲಘುವಾಗಿ ಮಾತನಾಡಿದ್ದಾರೆ. ಈ ಥರದ ಧೋರಣೆ ಕನ್ನಡಿಗರಲ್ಲೇ ಬರಲು ಕಾರಣ- ಸಿನಿಮಾ ಸೌಂದರ್ಯದ ಕುರಿತ ಗ್ರಹಿಕೆಗಳು ಜಾಗತಿಕವಾಗುತ್ತಿರುವುದನ್ನು ನಾವು ನಿರ್ಲಕ್ಷಿಸುತ್ತಿರುವುದೇ ಆಗಿದೆ.

ಇಲ್ಲಿಯೇ ಕನ್ನಡ ಪ್ರೇಕ್ಷಕನ `ಜನಪ್ರಿಯ ಗ್ರಹೀತ’ಗಳ ಬಗ್ಗೆ ಹೇಳುವುದು ಸೂಕ್ತ. ಮಲಯಾಳಂ ಸಿನಿಮಾಗಳನ್ನು ನೋಡುವಾಗ ಕನ್ನಡ ಸಿನಿಮಾ ಪ್ರೇಕ್ಷಕನೊಬ್ಬನ ಗ್ರಹೀತಗಳು ಹೇಗಿರುತ್ತವೆ?- `ನಾರ್ತ್ 24 ಕಾದಂ’ ಸಿನಿಮಾದ ಒಂದು ದೃಶ್ಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಹರತಾಳದ ದಿನ ಯಾವುದೇ ವಾಹನಗಳಿಲ್ಲದೆ ಅನಿರೀಕ್ಷಿತವಾಗಿ ಸಮಸ್ಯೆಗೆ ಸಿಲುಕುವ ನಾಯಕ ನಟ, ನಾಯಕಿ ನಟಿ ಮತ್ತು ಪ್ರಧಾನ ಪೋಷಕ ನಟನಿಗೆ ನಾಲ್ಕಾರು ಪಡ್ಡೆ ಹುಡುಗರು ಸಹಾಯ ಮಾಡಲು ಒಪ್ಪುತ್ತಾರೆ. ಇನ್ನು ಸುಮಾರು 12 `ಕಾದಂ’ (ಒಂದು ಕಾದಂ ಎಂದರೆ ಹದಿನಾರು ಕಿ.ಮೀ.) ಪಯಣಿಸಬೇಕಾದ ಅನಿವಾರ್ಯತೆ ಇರುವಾಗ ಸಹಜವಾಗಿ ಆ ಹುಡುಗರ ಬೈಕ್ ನಲ್ಲಿ ಮೂವರು ಪಯಣಿಸುತ್ತಾರೆ.

ನಾಯಕ ನಟನಿಗೆ ಗುಮಾನಿಗಳಿವೆ. ಆತ ಯಾರೊಂದಿಗೂ ಬೆರೆಯದ ಸ್ವಭಾವದವ. ಆ ಹುಡುಗರ ವರ್ತನೆ ಅವನಿಗೆ ಸಹಿಸಲಾಗುತ್ತಿಲ್ಲ. ಹುಡುಗಿಯೊಬ್ಬಳು ಜೊತೆಗಿರುವಾಗ ಕೀಟಲೆ ತೋರುವ ಹುಡುಗರಿಗೆ ನಾಯಕ ನಟ ಇನ್ನೇನು ನಾಲ್ಕು ಬಾರಿಸುತ್ತಾನೆ ಎಂದು ಭಾವಿಸುವುದು ಸಾಮಾನ್ಯವಾಗಿ ಕನ್ನಡ ಪ್ರೇಕ್ಷಕನ `ಜನಪ್ರಿಯ ಗ್ರಹೀತ’. ಪ್ರೇಕ್ಷಕನ ನಿರೀಕ್ಷೆಗೆ ವಿರುದ್ಧವಾಗಿ ನಡೆಯದಿದ್ದರೆ ಆತನಿಗೆ ಮಾಡುವ ದ್ರೋಹವಾಗುತ್ತದೆ ಎಂಬುದೂ ಜನಪ್ರಿಯ ಗ್ರಹೀತ. ಅದನ್ನು ಮುರಿಯಬೇಕು. ಮಲಯಾಳಂ ಸಿನಿಮಾಗಳು ಈ ಗ್ರಹೀತವನ್ನು ಮುರಿದು ಹಾಕುವುದರಿಂದ ಪ್ರೇಕ್ಷಕ ಮುಂದಾಗುವ ಕಥೆಯನ್ನು ಬೆರಗು ಗಣ್ಣಿನಿಂದ ನೋಡುತ್ತಾನೆ.

ಕನ್ನಡ ಚಿತ್ರಗಳಲ್ಲಿ ಜನಪ್ರಿಯ ಗ್ರಹೀತಗಳನ್ನು ಒಡೆದು ಹಾಕಿಲ್ಲವೆಂದಲ್ಲ. ಮಲಯಾಳಂ ಸಿನಿಮಾಗಳನ್ನು ತೌಲನಿಕವಾಗಿ ನೋಡಿದಾಗ ಗ್ರಹೀತಗಳ ಮುರಿವ ಪ್ರಕ್ರಿಯೆಯಲ್ಲಿ ನಾವು ಹಿಂದುಳಿದಿದ್ದೇವೆ. ಅಂದರೆ ಸಿದ್ಧ ಮಾದರಿ ಕೂಡ ಕನ್ನಡ ಚಿತ್ರರಂಗದ ಒಂದು ಬಿಕ್ಕಟ್ಟು. ಓಟಿಟಿಯಲ್ಲಿ ಇತರ ಭಾಷೆಗಳ ಸಿನಿಮಾಗಳೂ ಸಿಗುವುದರಿಂದ ಬಹಳ ಸುಲಭವಾಗಿ ತುಲನೆ ಸಾಧ್ಯವಾಗುತ್ತದೆ. ಕನ್ನಡ ಪ್ರೇಕ್ಷಕನ ನಿಲುವುಗಳು ಬದಲಾಗಿದ್ದು ಓಟಿಟಿಯವರಿಗೂ ಅರ್ಥವಾಗಿದೆಯೇನೋ? ಇನ್ನು `ಸ್ವೀಕಾರಾರ್ಹ ಗ್ರಹೀತ’ಗಳ ಕುರಿತು ತಕರಾರು ಮಾಡುವುದು ಸಿನಿಕತನವಾದೀತು. `ನಾರ್ತ್ 24 ಕಾದಂ’ ಸಿನಿಮಾವನ್ನೇ ಉದಾಹರಣೆಯಾಗಿ ಹೇಳುವುದಾದರೆ, ನಾಯಕ ನಟ ಹಾಗೂ ನಾಯಕ ನಟಿ ಮತ್ತೆ ಮುಖಾಮುಖಿಯಾಗಬೇಕೆಂದು ಬಯಸುವುದು ‘ಸ್ವೀಕಾರಾರ್ಹ ಗ್ರಹೀತ’.

ಮಲಯಾಳಂ ಸಿನಿಮಾಗಳನ್ನೇ ಚರ್ಚೆಯ ವಸ್ತುಗಳನ್ನಾಗಿಸಿಕೊಂಡು ಚರ್ಚೆಯನ್ನು ಮುಂದುವರಿಸೋಣ. ಸ್ಟಾರ್ ವ್ಯಾಲ್ಯೂ ಕುರಿತು ನಾವು ಗಂಭೀರವಾಗಿ ಚಿಂತಿಸುವುದು ಅಗತ್ಯ. ಮಲಯಾಳಂನಲ್ಲಿ ಸ್ಟಾರ್ ವ್ಯಾಲ್ಯೂ ಮಾಪನ ವಿಧಾನ ಬದಲಾಗಿದೆ. ಅಲ್ಲಿ ಹೊಸ ತಲೆಮಾರಿನ ನಟರನ್ನು ಗುರುತಿಸುವುದು ಅವರ ಅಭಿನಯದ ವಿಶಿಷ್ಟ ಪಾತ್ರಗಳ ಮೂಲಕ. ಇಲ್ಲಿನ ಖಳನಾಯಕ, ನಾಯಕ, ನಾಯಕಿ ಎಲ್ಲರೂ ಅತಿಮಾನುಷರಂತೆ ಚಿತ್ರಿತವಾಗುವುದು ಅಪರೂಪವೇ ಸರಿ. ಇತ್ತೀಚಿನ ಪ್ರಯೋಗಗಳನ್ನು ಗಂಭೀರವಾಗಿ ನೋಡಿದರೆ ಕತೆ, ಚಿತ್ರಕತೆ, ಅಶ್ಲೀಲವೆನಿಸದ ಸಂಭಾಷಣೆಯೇ ಮಲಯಾಳಂ ಸಿನಿಮಾಗಳ ನಿಜವಾದ ಹೀರೋಗಳು. ಅವುಗಳಿಗೆ ನಟರ ವಿನೂತನ ಪ್ರತಿಭೆ ರೂಪ ನೀಡುತ್ತಿದೆ ಅಷ್ಟೇ.

ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ ಮಲಯಾಳಂ ಸಿನಿಮಾಗಳಲ್ಲಿನ ಹೊಡೆದಾಟದ ಮಾದರಿಗಳೇ ಬೇರೆ, ಹಾಡುಗಳ ಅಳವಡಿಕೆಯ ವಿಧಾನವೇ ಬೇರೆ, ರಾಜಕಾರಣವನ್ನು, ಸಂಸ್ಕೃತಿಯನ್ನು, ಮನುಷ್ಯನ ಸಣ್ಣತನ, ಪ್ರೀತಿ, ನೋವು, ಅಸೂಯೆ, ಕೊಂಕು, ಸಲುಗೆ ಎಲ್ಲವನ್ನು ನೋಡುವ ವಿಧಾನವೂ ಬೇರೆ. ಬೇರೆ ಅಂದರೆ ಬದುಕಿನಿಂದ ಬೇರೆಯಲ್ಲ. ಸಿನಿಮಾ, ಮನುಷ್ಯನ ಎಲ್ಲ ಚಟುವಟಿಕೆಗಳ ಭಾಗವೆನಿಸುವುದೇ ಮಲಯಾಳಂ ಸಿನಿಮಾಗಳ ಹೆಚ್ಚುಗಾರಿಕೆ.

ಅತಿಮಾನುಷ ನಿರೂಪಣೆಗೆ ಬಹುತೇಕ ಇಲ್ಲಿ ತಿಲಾಂಜಲಿ ಇಡಲಾಗಿದೆ. ಅಂದರೆ ಸಿನಿಮಾ ಎಂಬ ಜನಪ್ರಿಯ ಮಾಧ್ಯಮ ದೇಶ, ಭಾಷೆಗಳಾಚೆ ಚಲಿಸುವ ಗುಣವನ್ನು ಮಲಯಾಳಂ ಚಿತ್ರರಂಗ ಅಳವಡಿಸಿಕೊಂಡಿದೆ. ಒಂದು ಕಾಲದಲ್ಲಿ `ಎ’ ಸರ್ಟಿಫಿಕೇಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ಈಗ ಬ್ರಿಡ್ಜ್ ಸಿನಿಮಾಗಳನ್ನು ಬೆಳೆಯುವ ಭೂಮಿಯಾಗಿದ್ದು ಹೇಗೆ?

ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಸಾಮಾನ್ಯವಾಗಿ ತಮ್ಮ ನಾಡಿನ ಸಂಸ್ಕೃತಿಯನ್ನು ನಿರ್ಭೀತಿಯಿಂದ ನಿರೂಪಿಸುವುದನ್ನು ಕಾಣಬಹುದು. ಪ್ರೀತಿ, ಪ್ರೇಮ, ಕೌಟುಂಬಿಕ ಕಲಹ, ಮೇಲು ಪದರದ ರಾಜಕೀಯ ವಿಶ್ಲೇಷಣೆಗಷ್ಟೇ ಹೆಚ್ಚು ಒತ್ತುಕೊಡುತ್ತಿರುವ ಕನ್ನಡ ಚಿತ್ರರಂಗ `ಸಾಂಸ್ಕೃತಿಕ ದೃಶ್ಯೀಕರಣ’ದಲ್ಲಿ ಹಿಂಜರಿದಂತೆ ಕಾಣುತ್ತಿದೆ. ಕರಾವಳಿ ಭಾಗದ ಸಾಂಸ್ಕೃತಿಕ ಪರಿಸರವನ್ನು ಚಿತ್ರಿಸಿದ `ರಂಗಿತರಂಗ’, `ಸರ್ಕಾರಿ ಹಿ.ಪ್ರಾ.ಪಾ.ಶಾಲೆ- ಕಾಸರಗೋಡು’, ಶೂದ್ರ ಕಲ್ಚರ್ ತೆರೆದಿಟ್ಟ `ತಿಥಿ’, `ಜಟ್ಟ’- ಇಂತಹ ಕೆಲವು ಸಿನಿಮಾಗಳಲ್ಲಿ ಸಾಂಸ್ಕೃತಿಕ, ಪ್ರಾದೇಶಿಕ ಹಾಗೂ ಭಾಷಾ ಅಸ್ಮಿತೆಯನ್ನು ಗುರುತಿಸುತ್ತೇವೆ. ಸ್ಟಾರ್ ನಟರ ಚಿತ್ರಗಳಲ್ಲಂತೂ ಈ ಥರದ ಅಸ್ಮಿತೆಗಳು ಮರೀಚಿಕೆಯೇ ಸರಿ.

ಓಟಿಟಿಯಲ್ಲಿ ಲಭ್ಯವಿರುವ ಮಲಯಾಳಂ ಸಿನಿಮಾಗಳನ್ನು ನೋಡಿದರೆ ಸಾಕು, ಅವರು ತಮ್ಮ ಪ್ರಾದೇಶಿಕತೆಗೆ ನೀಡುವ ಆದ್ಯತೆಯನ್ನು ಗಮನಿಸಲು ಮೂರನೇ ಕಣ್ಣುಗಳೇನೂ ಬೇಕಾಗಿಲ್ಲ. ‘ಆಯಂಡ್ರಾಯ್ಡ್ ಕುಂಜಪ್ಪನ್ ವರ್ಷನ್ 5.25’ ಸಿನಿಮಾವನ್ನೇ ಉದಾಹರಣೆಯಾಗಿ ನೋಡುವುದಾದರೆ, – ತಂತ್ರಜ್ಞಾನ ಹೇಗೆ ಮನುಷ್ಯನ ಭಾವಕೋಶಕ್ಕೆ ನುಸುಳಿ ಅವಾಂತರ ಮಾಡಬಲ್ಲದು ಎಂಬುದನ್ನು ಹಳ್ಳಿಯೊಂದಕ್ಕೆ ತಂದ ರೋಬೋಟ್ ಮೂಲಕ ನಿರೂಪಿಸಲಾಗಿದೆ. ತಂತ್ರಜ್ಞಾನ ಮನುಷ್ಯನ ಭಾವಲೋಕಕ್ಕೆ ಹೆಜ್ಜೆ ಇಟ್ಟು ಮಾಡುವ ಅವಾಂತರಗಳು ಜಾಗತಿಕ ಭಾಷೆಯದ್ದಾದರೆ, ಆ ಜಾಗತಿಕ ವಿಚಾರಗಳೊಂದಿಗೇ, ತಮ್ಮ ದೇಸಿತನವನ್ನು ಮಲಯಾಳಿಗರು ದಾಟಿಸುವ ಪರಿಯನ್ನು ಗಮನಿಸಬೇಕು.

ಈ ರೋಬೋಟ್‍ಗೆ `ಕುಂಜಪ್ಪನ್’ ಎಂದು ಹೆಸರಿಟ್ಟಿರುವುದು ಮತ್ತು ಆ ಕುಂಜಪ್ಪನ್‍ಗೆ ಬಿಳಿ ಪಂಚೆ ತೊಡಿಸಿ, ಹಳ್ಳಿಯ ಬೀದಿಯಲ್ಲಿ ತಿರುಗಾಡಿಸುವುದು ಮಲಯಾಳಿಗರ ಸಾಂಸ್ಕೃತಿಕ ಪ್ರಜ್ಞೆಗೆ ಹಿಡಿದ ಕನ್ನಡಿ. ಇದೇ ಥರದ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಿಸಿದ್ದರೆ, ಆ ರೋಬೋಟ್‍ಗೆ `ಮಾದಪ್ಪ’ ಅಂತಲೋ, `ಮಂಟೆಸ್ವಾಮಿ’ ಅಂತಲೋ, `ಸಣ್ಣಯ್ಯ, ಚಿಕ್ಕಯ್ಯ’ ಅಂತಲೋ ಹೆಸರಿಸುತ್ತಿದ್ದರೋ ಅಥವಾ `ರೋಬೋ’ ಎಂದು ಕರೆದು ಸುಮ್ಮನಾಗುತ್ತಿದ್ದರೋ ಎಂಬಲ್ಲಿ ನಮ್ಮ ಸಾಂಸ್ಕೃತಿಕ ಪ್ರಜ್ಞೆ ಕೆಲಸ ಮಾಡುತ್ತದೆ.

ಮತ್ತೊಂದು ಸಿನಿಮಾ- `ಜಲ್ಲಿಕಟ್ಟು’ ನೀಡುವ ಚಿರಂತನ ಅಥವಾ ಜಾಗತಿಕ ಪ್ರಜ್ಞೆ ಹಾಗೂ ದೇಸಿಯತೆಯನ್ನು ಗಮನಿಸೋಣ. ಮನುಷ್ಯನ ಆಂತರ್ಯದಲ್ಲಿ ಆದಿಮ ಕ್ರೂರತ್ವ ಸುಪ್ತವಾಗಿದ್ದು, ಸಮಯ ಸಂದರ್ಭ ಬಂದಾಗ ನಿರ್ಲಜ್ಜೆಯಿಂದ ಹೊರಬರುತ್ತದೆ ಎಂಬುದನ್ನು ಹೇಳುವುದು ಈ ಸಿನಿಮಾದ ಉದ್ದೇಶ. ಒಂದು ಪಶುವನ್ನು ಹಿಡಿಯಲು ಓಡುತ್ತಿರುವ ಜನರೊಳಗಿನ ಪಶುತ್ವ ‘ಆದಿಮ ಕ್ರೂರತ್ವ’ದ ರೂಪಕ. ಇದು ಚಿರಂತನ ಸತ್ಯವೂ ಕೂಡ.

ಆದರೆ `ಜಲ್ಲಿಕಟ್ಟು’ ಢಾಳಾಗಿ ಚಿತ್ರಿಸುವ `ಮಾಂಸ ಮಾರಾಟ’ವು ಕೇರಳ ಪರಿಸರದ ನಿತ್ಯದ ಭಾಗ. ಮಾಂಸವನ್ನು ಇಷ್ಟು ಢಾಳಾಗಿ ಚಿತ್ರಿಸಲು ಕನ್ನಡ ಸಿನಿಮಾಗಳಿಗೆ ಸಾಧ್ಯವೇ ಇಲ್ಲ. ಅದಕ್ಕೆ ಮಡಿವಂತಿಕೆಯೂ ಕಾರಣ. ಇಲ್ಲಿಯೇ ಒಂದು ವಿಚಾರವನ್ನು ಹೇಳಿಬಿಡಬೇಕು. ಇಂದಿನ ಮಲಯಾಳಂ ಸಿನಿಮಾಗಳನ್ನು ರಿಮೇಕ್ ಮಾಡಬೇಕಾದಾಗ ಮಲಯಾಳಂ ಸಂಸ್ಕೃತಿಯನ್ನು ಹೇಗೆ ಕೈಬಿಡಬೇಕೆಂಬುದು ಬಹುಮುಖ್ಯ ಸವಾಲಾಗುವುದು ಖಚಿತ. ಅಷ್ಟರ ಮಟ್ಟಿಗೆ ಮಲಯಾಳಂ ತನ್ನ ದೇಸಿಯತೆಯನ್ನು ಜಾಗತಿಕಗೊಳಿಸಿದೆ. ಸಾಮಾಜಿಕ ಮಾಧ್ಯಮ ಹಾಗೂ ಓಟಿಟಿಯ ಈ ಯುಗದಲ್ಲಿ ರಿಮೇಕ್ ಬಹುತೇಕ ಲಾಭದಾಯಕವಲ್ಲ. ಮೂಲದಲ್ಲೇ ಜನ ನೋಡಿರುತ್ತಾರೆ. ಯಥಾವತ್ತು ಅನುಕರಣೆಯಾದರೆ ಕ್ಷಣದಲ್ಲೇ ಮಾನ ಮೂರಾಬಟ್ಟೆಯಾಗುವುದು ಖಚಿತ.

ಮಲಯಾಳಂ ಸಿನಿಮಾಗಳೊಂದಿಗೆ ನಡೆಸಿದ ತೌಲನಿಕ ಚರ್ಚೆಯನ್ನು ತಮಿಳು ಸಿನಿಮಾಗಳೊಂದಿಗೂ ನಡೆಸಲು ಸಾಕಷ್ಟು ಅವಕಾಶಗಳಿವೆ. ಲೇಖನದ ಮಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಒಂದು ವಿಚಾರವನ್ನಷ್ಟೇ ಇಲ್ಲಿ ಪ್ರಸ್ತಾಪಿಸುವೆ. ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಗುರುತಿಸಬಹುದಾದ ಸಮಾನಾಂತರ ಸಂಗತಿಗಳು ಸಾಕಷ್ಟಿವೆ. ಮಲಯಾಳಂನಲ್ಲಿ ಆಗುವ ಪ್ರಯೋಗಗಳು, ತಮಿಳಿನಲ್ಲಿಯೂ ತಮಿಳಿನಲ್ಲಾಗುವ ಪ್ರಯೋಗಗಳು ಮಲಯಾಳಂನಲ್ಲಿಯೂ ಆಗುತ್ತಿರುವುದನ್ನು ಗಮನಿಸಬಹುದು.

ಕನ್ನಡ ಚಿತ್ರರಂಗ ಮದರಾಸಿನಿಂದ ಬೆಂಗಳೂರಿಗೆ ಸ್ಥಳಾಂತರವಾದಾಗಿನಿಂದ ಇವತ್ತಿನವರೆಗೂ ಅನ್ಯ ಭಾಷೆಯವರ ಹಿಡಿತ ಸಿನಿಮಾ ನಿರ್ಮಾಣ, ಹಂಚಿಕೆ, ಪ್ರದರ್ಶನ ಮಾಡುವಲ್ಲಿದೆ. ಇದಕ್ಕೆ ಕಾರಣ ಎಲ್ಲಾ ವಲಯಗಳಲ್ಲಿರುವಂತೆ ಕನ್ನಡಿಗರ ಉದ್ಯಮಶೀಲತೆಯಡೆಗಿನ ನಿರ್ಲಕ್ಷ್ಯ ಧೋರಣೆ. ಇದು ಮುಂಚಿನಿಂದಲೂ ಇದೆ. ಮತ್ತೆ ಚಿತ್ರರಂಗ ಕಳೆದ 10-15 ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಹಲವು ಗುಂಪುಗಳಾಗಿವೆ. 

ಸಿನಿಮಾಗೆ ಮುಖ್ಯವಾಗಿ ಬೇಕಾದ ಸೃಜನಶೀಲತೆ ಹೊರತಾಗಿ ಬೇರೆಲ್ಲಾ ವಿಷಯಗಳು ಅವರಿಗೆ ಮುಖ್ಯ. ದುಡ್ಡು ಮಾಡೋದೇ ಪ್ರಮುಖ ನಟ-ನಟಿಯರ ಉದ್ದೇಶವಾಗಿದೆ. ಅದು ಸಿನಿಮಾ, ಟಿವಿ ಶೋ, ಜಾಹೀರಾತು, ಬ್ರಾಂಡ್ ಎಂಡೋರ್ಸಿಂಗ್ ಆಗಿರಲಿ, ಎಲ್ಲದಕ್ಕೂ ಜೈ. ಮತ್ತೆ ಒಟ್ಟು ಚಿತ್ರರಂಗದ ಹಲವು ವಲಯಗಳಲ್ಲಿ ಒಂದಕ್ಕೊಂದು ಹೊಂದಾಣಿಕೆ ಇಲ್ಲ. ಇದರ ನಡುವೆ ಇಂಥವರು ಸೃಜನಶೀಲತೆ ಬೆಳೆಸಿಕೊಂಡು ಚಿತ್ರರಂಗಕ್ಕೆ ಒಂದು ಹೊಸ ರೂಪ ಕೊಡುವುದು ಕನಸಿನ ಮಾತು. ಚಿತ್ರರಂಗವನ್ನು ಅಭ್ಯಾಸ ಮಾಡುವವರು, ಆಸಕ್ತಿಯಿಂದ ಗಮನಿಸುವವರು ಭ್ರಮನಿರಸನ ಆಗುವುದು ಖಚಿತ. ಇದರ ಹೊರತಾಗಿ ಕೆಲವರು, ಎಫ್.ಯು.ಸಿ.ಯಲ್ಲಿರುವ ಎಲ್ಲರೂ ಮತ್ತು ಆರ್ಟ್, ಬ್ರಿಡ್ಜ್ ಸಿನಿಮಾ ಮಾಡುವವರು, ಕಾಸರವಳ್ಳಿ, ಬರಗೂರು, ಶೇಷಾದ್ರಿ ಥರದವರು, ರಾಜ್ಯ, ರಾಷ್ಟ್ರ ಪ್ರಶಸ್ತಿ ಸಿನಿಮಾಗಳವರು, ಇವರೆಲ್ಲ ಸೇರಿ ಒಂದು ವರ್ಷಕ್ಕೆ 10 ಒಳ್ಳೆಯ ಕನ್ನಡ ಸಿನಿಮಾಗಳನ್ನು ಕೊಡಬಹುದು ಅಷ್ಟೇ. ಇನ್ನು ಉಳಿದಂತೆ ಜನಪ್ರಿಯ, ಕಮರ್ಷಿಯಲ್ ಎಂದುಕೊಳ್ಳುವ ಸಿನಿಮಾಗಳು ಸೆನ್ಸಿಬಲ್, ಪ್ರಾದೇಶಿಕತೆಯ ಕಥೆ ಆಧಾರಿಸಿ ನಿರ್ಮಿತವಾಗುವುದು ಯಾವಾಗ?

*ಲೇಖಕರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಸ್ನಾತಕ ಪದವಿ, ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹವ್ಯಾಸಿ ಪತ್ರಕರ್ತ.

 

Leave a Reply

Your email address will not be published.