ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಾಡು: ಓದಲು ತೊಡಗಿದವನ ಪಾಡು

ಕಾಡನ್ನು ಅರ್ಥ ಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಅರ್ಥಮಾಡಿಕೊಳ್ಳಿಯಾರೇ? ಮನುಷ್ಯರನ್ನು ಅರ್ಥಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಹೇಗೆ ಓದಬಲ್ಲರು..? ನಾವು ಬದುಕುತ್ತಿರುವ ಸಮಾಜವನ್ನು ಎಡ-ಬಲ ಎಂದು ಈಗಾಗಲೇ ವಿಭಜಿಸಿಕೊಂಡಿರುವವರು ಈ ಕಾದಂಬರಿಯನ್ನು ಓದುವ ಪರಿ ಹೇಗಿದ್ದೀತು..?

ಶ್ಚಿಮದ ಸಮಾಜಗಳಲ್ಲಿ ಬಹಳ ಮುಖ್ಯರಾದ ಸಾಹಿತಿ-ಕಲಾವಿದರನ್ನು, ರಾಜಕೀಯ ನಾಯಕರನ್ನು, ಆಟಗಾರರನ್ನು, ವಿಜ್ಞಾನಿಗಳನ್ನು, ಸಾಮಾಜಿಕ ಹೋರಾಟಗಾರರನ್ನು ಹಾಗೆಯೇ ಇನ್ನು ಕೆಲವು ಸಾಂಸ್ಕೃತಿಕ ವಿದ್ಯಮಾನಗಳನ್ನು ಸತತವಾಗಿ ಫಾಲೋ ಮಾಡುತ್ತ, ಆಳವಾಗಿ ಅಧ್ಯಯನ ಮಾಡಿದ, ಮಾಡುತ್ತಿರುವ ಅನೇಕ ಜನ ವಿದ್ವಾಂಸರು ಇದ್ದಾರೆ. ಆದರೆ ಅಂತಹ ಆಶಾದಾಯಕವಾದ ಪರಿಸ್ಥಿತಿ ಕನ್ನಡದಲ್ಲಿ ಇಲ್ಲ. ಕುಮಾರವ್ಯಾಸನ ಬಗ್ಗೆ ಕೀರ್ತಿನಾಥ ಕುರ್ತಕೋಟಿ, ಬೇಂದ್ರೆ ಬಗ್ಗೆ ಜಿ.ಎಸ್.ಆಮೂರ, ರಾಮಾಯಣ-ಮಹಾಭಾರತಗಳ ಬಗ್ಗೆ ಲಕ್ಷ್ಮೀಶ ತೋಳ್ಪಾಡಿ, ಇಂತಹ ಕೆಲವು ಕೈಬೆರಳೆಣಿಕೆಯ ಹೆಸರುಗಳನ್ನು ಹೊರತುಪಡಿಸಿದರೆ ಕನ್ನಡದ ಸಂದರ್ಭದಲ್ಲಿ ಇಲ್ಲಿಯ ಧೀಮಂತ ಚಿಂತಕರನ್ನು/ವಿದ್ಯಮಾನಗಳನ್ನು ಆಳವಾಗಿ ಅಧ್ಯಯನ ಮಾಡಿದವರ ಕೊರತೆ ಎದ್ದು ಕಾಣುತ್ತದೆ. ನಮ್ಮಲ್ಲಿ ಇವತ್ತಿಗೂ ‘ಇವರು ಮಾಸ್ತಿ ಸ್ಕಾಲರ್, ಇವರು ದೇವನೂರ ಮಹಾದೇವ ಸ್ಕಾಲರ್, ಇವರು ಪುತಿನ ಸ್ಕಾಲರ್’ ಎಂದು ಯಾರನ್ನೂ ಹೆಸರಿಸುವಂತಹ ಪರಿಸ್ಥಿತಿ ಇಲ್ಲ. ಹಾಗೆ ನೋಡಿದರೆ ಕನ್ನಡದಲ್ಲಿ ಇಂದಿಗೂ ಕುವೆಂಪು ಕುರಿತು ಒಂದೇ ಒಂದು ಒಳ್ಳೆಯ ಸಂಶೋಧನಾ ಕೃತಿ ಮೂಡಿಬಂದಿಲ್ಲ. ಆದರೆ ಜಿಎಸ್‍ಎಸ್ ಮತ್ತು ಸುಜನಾರ ನಂತರ ಕುವೆಂಪು ಅವರ ಬಗ್ಗೆ ಬಹಳ ಮುಖ್ಯವಾದ ಕೆಲಸಗಳನ್ನು ಮಾಡಿದವರು ಡಿ.ಎಸ್.ನಾಗಭೂಷಣ್ ಒಬ್ಬರೇ ಎಂಬುದು ನನ್ನ ಅಭಿಮತ. ಇದು ಯಾಕೆ ನನಗೆ ಬಹಳ ಮುಖ್ಯ ಅಂದರೆ, ನಾಗಭೂಷಣ್‍ರವರು ಉನ್ನತ ಶಿಕ್ಷಣ ಸಂಸ್ಥೆಯೆಂದು ನಾವು ಕರೆಯುವ ವಿಶ್ವವಿದ್ಯಾನಿಲಯಗಳ ಹೊರಗಿರುವವರು. ಅವರು ಮಾಡಿದ/ಮಾಡುತ್ತಿರುವ ಕೆಲಸವನ್ನು ನಿಜಕ್ಕೂ ಮಾಡಬೇಕಾದವರು ವಿಶ್ವವಿದ್ಯಾನಿಲಯದಲ್ಲಿರುವವರು. ಆದರೆ ವಿಶ್ವವಿದ್ಯಾನಿಲಯದ ಅಧ್ಯಾಪಕರು ‘ಉನ್ನತ’ ಮತ್ತು ‘ಜ್ಞಾನ’ ಎಂಬ ಪರಿಕಲ್ಪನೆಗಳಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಬದುಕಿದ್ದಾರೆ.

ಇದೇ ಸಂದರ್ಭದಲ್ಲಿ ಇನ್ನೊಂದು ಇಂತಹುದೇ ಪ್ರಸಂಗ ನೆನಪಾಗುತ್ತದೆ. ಕವಿರಾಜಮಾರ್ಗದ ಮತ್ತು ಆ ಕಾಲದ ಕನ್ನಡ ಸಾಹಿತ್ಯದ ಕುರಿತು ಆಳವಾದ ಸಂಶೋಧನೆ ನಡೆಸಿದವರು ಪ್ರೊ .ಎಂ.ಎಂ.ಕಲ್ಬುರ್ಗಿಯವರು. ಅವರು ವಿಶ್ವವಿದ್ಯಾನಿಲಯ ಎಂಬ ಉನ್ನತ ಶಿಕ್ಷಣ ಸಂಸ್ಥೆಯ ಒಳಗಿದ್ದವರು. ಆದರೆ ಕೆ.ವಿ.ಸುಬ್ಬಣ್ಣ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದವರಲ್ಲ. ಅಡಿಕೆ ಕೃಷಿ, ನಾಟಕ-ರಂಗಭೂಮಿ ಎಂದು ಹಳ್ಳಿಯೊಂದರಲ್ಲಿ ತಮ್ಮ ಬದುಕು ಕಟ್ಟಿಕೊಂಡವರು. ಆದರೆ ಇವತ್ತಿಗೂ ಕವಿರಾಜಮಾರ್ಗದ ಕುರಿತ ಒಳ್ಳೆಯ ಪುಸ್ತಕ ಯಾವುದೆಂದು ನನ್ನನ್ನು ಯಾರಾದರೂ ಕೇಳಿದರೆ ನನಗೆ ಕಲ್ಬುರ್ಗಿಯವರ ಥೀಸಿಸ್ ನೆನಪಾಗುವುದಿಲ್ಲ. ಸುಬ್ಬಣ್ಣ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಪುಸ್ತಕ ನೆನಪಾಗುತ್ತದೆ. ಅದು ಅಷ್ಟು ಒಳ್ಳೆಯ ಪುಸ್ತಕವಾದುದರಿಂದಲೇ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂತು. ಹಾಗಾದರೆ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಪುಸ್ತಕದಲ್ಲಿ ಅಂಥದ್ದೇನಿತ್ತು.? ನನ್ನ ಪ್ರಕಾರ ಅದರಲ್ಲಿ ಹೊಸ ಆಲೋಚನೆಗಳು ಇದ್ದವು. ಹೊಸಪ್ರಶ್ನೆಗಳು ಇದ್ದವು. ನಮ್ಮ ಗತಕಾಲದ ಪಠ್ಯಗಳನ್ನು ಹೇಗೆ ನೋಡಬಹುದು ಎಂಬ ಮಾದರಿಯೊಂದನ್ನು ಸುಬ್ಬಣ್ಣ ಆ ಕೃತಿಯ ಮೂಲಕ ತೋರಿಸಿಕೊಟ್ಟಿದ್ದರು. ಇಂತಹುದೇ ಕೆಲಸವನ್ನು ಕುವೆಂಪು ಅವರ ಬಗ್ಗೆ ಡಿಎಸ್‍ಎನ್ ಕೂಡ ಮಾಡಿದ್ದಾರೆ. ಅದನ್ನು ಇತ್ತೀಚಿಗಿನ ತಮ್ಮ ಲೇಖನದಲ್ಲಿ ದೇವನೂರ ಮಹಾದೇವ ಅವರೂ ಗುರುತಿಸಿದ್ದಾರೆ. ಕುವೆಂಪು ಓದಿನ ಸಂದರ್ಭದಲ್ಲಿ ಬಹಳ ಮುಖ್ಯವಾಗಿರುವ ಈ ಸಂಗತಿಯನ್ನು ನೆನಪಿಸಿಕೊಳ್ಳುತ್ತ ಓದುವುದೆಂದರೆ ಏನು..? ಎಂಬ ಮೂಲಭೂತ ಪ್ರಶ್ನೆಯೊಂದನ್ನು ಎತ್ತಿಕೊಂಡು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಾಡು ಎಂಬ ವಿಷಯವನ್ನು ವಿವರಿಸಬಯಸುತ್ತೇನೆ.

ವಿಶ್ವವಿದ್ಯಾನಿಲಯದ ಅಧ್ಯಾಪಕರು ‘ಉನ್ನತ’ ಮತ್ತು ‘ಜ್ಞಾನ’ ಎಂಬ ಪರಿಕಲ್ಪನೆಗಳಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಬದುಕಿದ್ದಾರೆ

ಭತ್ತದ ಪೈರು ನಾಟಿ ಮಾಡೋದು ಹೇಗೆ..? ಕುಪ್ಪಸ ಹೊಲಿಯುವುದು ಹೇಗೆ..? ಎಂಬ ಪ್ರಶ್ನೆಗಳತೆ ಓದು ಅಂದರೆ ಏನು..? ಓದು ನಡೆಸುವುದು ಹೇಗೆ..? ಎಂದು ಕೇಳುವುದು ಕಷ್ಟ. ಕೇಳಿದರೂ ಅದರ ಉತ್ತರ ಇನ್ನೂ ಕಡುಕಷ್ಟ. ಪೈರು ನಾಟಿ ಮಾಡುವ, ಕುಪ್ಪಸ ಹೊಲಿಯುವ, ಸೌದೆ ಸೀಳುವ ಕೆಲಸ ಮಾಡುವುದಕ್ಕೆ ನಮಗೆ ಇರಬೇಕಾದುದು ಕೌಶಲ್ಯ/ಸ್ಕಿಲ್. ಆ ಕೌಶಲ್ಯಕ್ಕೆ ಅನುಕೂಲವಾಗಿ ಒದಗಿಬರೋದು ನಮ್ಮ ಕರಣಗಳು. ಅಂದರೆ ನಮ್ಮ ಕೈ, ಬೆರಳು, ಕಾಲು ಕಣ್ಣು ಇತ್ಯಾದಿ ಅಂಗಗಳು. ಈ ಅಂಗಗಳಿಗೆ ಸಹಾಯ ಮಾಡುವುದಕ್ಕಾಗಿ ನಾವು ಇನ್ನೊಂದು ಸಾಧನವನ್ನು ಬಳಸಿದರೆ ಆಗ ನಾವು ಅದನ್ನು ಉಪ-ಕರಣ ಅಂತ ಕರೀತೀವಿ. ಆದರೆ ಓದುವ ಕ್ರಿಯೆಯಲ್ಲಿ ಕಣ್ಣು ಎಂಬ ಒಂದು ಅಂಗವಷ್ಟೇ ತೊಡಗಿಕೊಂಡಿದ್ದರೆ ಆಗ ಓದುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗದು. ಕಣ್ಣು ಎಂಬ ಕರಣದ ಜೊತೆಗೆ ಪ್ರಜ್ಞೆ ಎಂಬ ಇನ್ನೊಂದು ವಿಶೇಷವಾದ ಅಂಗ ಕೂಡ ಕೆಲಸ ಮಾಡುತ್ತಿರುತ್ತದೆ. ಅದು ದೇಹದ ಒಳಗಿನ ಕರಣವಾದುದರಿಂದ ಅದನ್ನು ಸದ್ಯಕ್ಕೆ ಅಂತಃಕರಣ ಎಂದು ಕರೆಯೋಣ. ಆದರೆ ಕನ್ನಡದಲ್ಲಿ ಅಂತಃಕರಣ ಎಂಬ ಪದಕ್ಕೆ ಈಗಾಗಲೇ ಜನಪ್ರಿಯ ಅರ್ಥ ಇರೋದರಿಂದ ಆ ಅರ್ಥವನ್ನು ಇಲ್ಲಿ ಅನ್ವಯಿಸಬಾರದು.

ಹೊಲಿಯಬಲ್ಲ ಎಲ್ಲರೂ ಟೈಲರ್‍ಗಳಾಗಲಾರರು. ಅಂತೆಯೇ ಓದುವವರೆಲ್ಲರೂ ಓದುಗರೂ ಆಗಲಾರರು.

ನಾಟಿ ಮಾಡೋದಕ್ಕೆ, ಹೊಲಿಯೋದಕ್ಕೆ ಬೇಕಾದ ತರಬೇತಿಯನ್ನು (ಟ್ರೈನಿಂಗ್) ನಾವು ನಮ್ಮ ಅಂಗಗಳಿಗೆ ಕೊಟ್ಟಿರುತ್ತೇವೆ. ಆದರೆ ನಮ್ಮ ಬಾಹ್ಯ ಕರಣಗಳಿಗೆ ಕೊಟ್ಟಂತಹ ಟ್ರೈನಿಂಗ್ ಅನ್ನು ನಾವು ನಮ್ಮ ಅಂತಃಕರಣಗಳಿಗೂ ಕೊಟ್ಟಿದ್ದೇವೆಯೇ? ಅಥವಾ ಕೊಡುವುದಕ್ಕೆ ಆಗ್ತದೆಯೋ..? ನಾಟಿ ಮಾಡೋದು ನಮ್ಮ ಬಾಹ್ಯ ಕರಣದ ಕೆಲಸ, ಓದೋದು, ಓದೋದನ್ನು ಅರ್ಥ(ಅಂಡರ್‍ಸ್ಟ್ಯಾಂಡಿಂಗ್) ಮಾಡಿಕೊಳ್ಳೋದು ಅಂತಃಕರಣದ ಕೆಲಸ. ಇದನ್ನು ದಯವಿಟ್ಟು ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ನಾನು ದೈಹಿಕ ಶ್ರಮದ ಕೆಲಸವನ್ನು ಮತ್ತು ಬೌದ್ಧಿಕ ಶ್ರಮದ ಕೆಲಸವನ್ನು ಪರಸ್ಪರ ತುಲನೆ ಮಾಡಿ ಮೌಲ್ಯಮಾಪನದ ಮಾತುಗಳನ್ನು ಆಡುತ್ತಿಲ್ಲ. ಇವೆರಡೂ ಮೂಲತಃ ಬೇರೆ ಬೇರೆ ಕ್ಷೇತ್ರದವು. ಇವುಗಳನ್ನು ಪರಸ್ಪರ ಹೋಲಿಸಬಾರದು. ಆದರೆ ಈ ಬಲು ಬಗೆಯ ಕೆಲಸಗಳಲ್ಲಿ ಓದುವ, ಅರ್ಥ ಮಾಡಿಕೊಳ್ಳುವ ಕೆಲಸಗಳು ಹೆಚ್ಚು ಸಂಕೀರ್ಣವಾದ ವಿಷಯಗಳು ಎಂಬುದನ್ನಷ್ಟೇ ಇಲ್ಲಿ ಹೇಳಬಯಸುತ್ತೇನೆ. ಹೊಲಿಯಬಲ್ಲ ಎಲ್ಲರೂ ಟೈಲರ್‍ಗಳಾಗಲಾರರು. ಅಂತೆಯೇ ಓದುವವರೆಲ್ಲರೂ ಓದುಗರೂ ಆಗಲಾರರು. ಈ ಸಣ್ಣ ವಾಗ್ವಾದದ ಹಿನ್ನೆಲೆಯಲ್ಲಿ ಕುವೆಂಪು ಅವರನ್ನು ಓದುವುದು ಹೇಗೆ.? ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ..? ಎಂಬ ಪ್ರಶ್ನೆಗಳನ್ನು ಎತ್ತಿಕೊಳ್ಳುವುದು ಸೂಕ್ತ.

ಕಾದಂಬರಿ ಎನ್ನುವ ಆಧುನಿಕ ಸಾಹಿತ್ಯ ಪ್ರಕಾರವೊಂದರ ಕುರಿತು ನಾವು ಕಟ್ಟಿಕೊಂಡಿರುವ ಮೀಮಾಂಸಾ ಕ್ರಮವನ್ನು ಮದುಮಗಳು ಕಾದಂಬರಿ ತಬ್ಬಿಬ್ಬುಗೊಳಿಸುತ್ತದೆ. ಮದುಮಗಳು ಕಾದಂಬರಿಯನ್ನು ನೀವು ಕಾದಂಬರಿ ಅಂತಿರೋ, ಕಾವ್ಯ ಅಂತಿರೋ, ಜೀವನದರ್ಶನ ಅಂತೀರೋ, ಅಧ್ಮಾತ್ಮಿಕ ಸಂಗತಿಯೊಂದರ ಸಾಹಿತ್ಯಿಕ ನಿರೂಪಣೆ ಅಂತೀರೋ ನೀವು ಅದನ್ನು ಯಾವ ಹೆಸರಿನಿಂದಲಾದರೂ ಕರೀರಿ. ಅದು ಆ ಸೀಮೆಯೊಳಗೆ ಬಹಳ ಹೊತ್ತು ಇರದೆ ನಿರಂತರ ಚಡಪಡಿಸುವ ಒಂದು ಜೀವವಿಶೇಷವಾಗಿದೆ. ಇಂತಹ ಸಜೀವ ಸಾವಯವ ಮಹಾಕಾಯವೊಂದನ್ನು ನಾವು ನಮ್ಮ ನಮ್ಮ ಅನುಕೂಲತೆಗೆ ತಕ್ಕಂತೆ, ನಮ್ಮನಮ್ಮ ಅಳತೆಗೆ ತಕ್ಕಂತೆ ಓದುವುದಕ್ಕೆ ತೊಡಗಿದರೆ ಅದು ಕುರುಡರು ಆನೆ ಮುಟ್ಟಿದ ಕತೆಯಂತೆಯೇ ಆಗ್ತದೆ. ಅಂದರೆ ಕುವೆಂಪು ಕಂಡರಿಸಿದ ದಾರ್ಶನಿಕತೆಯ ಅರಿವಿಲ್ಲದಿದ್ದರೆ, ಅಧ್ಯಾತ್ಮಕ್ಕೆ ಮಿಡಿಯುವ ಮನಸ್ಸಿಲ್ಲದಿದ್ದರೆ, ಈ ಲೋಕದ ಚಲನೆಯ ಬಗ್ಗೆ ನಮಗೆ ವಿಸ್ಮಯಾನುಭೂತಿಯ ಆನುಭಾವಿಕ ಪ್ರಜ್ಞೆ ಇಲ್ಲದಿದ್ದರೆ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ನಾವು ಓದಲಾರೆವು.

ಮದುಮಗಳು ಕಾದಂಬರಿಯನ್ನು ನೀವು ಕಾದಂಬರಿ ಅಂತಿರೋ, ಕಾವ್ಯ ಅಂತಿರೋ, ಜೀವನದರ್ಶನ ಅಂತೀರೋ, ಅಧ್ಮಾತ್ಮಿಕ ಸಂಗತಿಯೊಂದರ ಸಾಹಿತ್ಯಿಕ ನಿರೂಪಣೆ ಅಂತೀರೋ ನೀವು ಅದನ್ನು ಯಾವ ಹೆಸರಿನಿಂದಲಾದರೂ ಕರೀರಿ. ಅದು ಆ ಸೀಮೆಯೊಳಗೆ ಬಹಳ ಹೊತ್ತು ಇರದೆ ನಿರಂತರ ಚಡಪಡಿಸುವ ಒಂದು ಜೀವವಿಶೇಷವಾಗಿದೆ.

ಮದುಮಗಳು ಕಾದಂಬರಿಯನ್ನು ನಿಧಾನವಾಗಿ ಓದುತ್ತಾ ಒಳಗೆ ಹೊಗುವುದೂ ಒಂದೇ. ದಟ್ಟಕಾಡಿನೊಳಗೆ ಹೊಗುವುದೂ ಒಂದೇ. (ದಟ್ಟಕಾಡನ್ನು ಪ್ರವೇಶಿಸುವವರಿಗೂ ನಿಧಾನಗತಿಯೇ ಅತ್ಯಂತ ಸಮುಚಿತವಾದ ಗತಿ.) ಮದುಮಗಳು ಕಾದಂಬರಿಗೆ ಇರುವ ಬಹಳ ದೊಡ್ಡ ಹಿನ್ನೆಲೆಯೆಂದರೆ ಅದು ಅರಣ್ಯವೇ. ಕಾದಂಬರಿಯಲ್ಲಿ ಅರಣ್ಯದ ವಿವರಣೆಯೇ ಸಮೃದ್ಧವೂ, ಸಮಗ್ರವೂ ಆಗಿದೆ ಮತ್ತು ಅದು ಅಲ್ಲಿಯ ಜನಜೀವನವನ್ನು ಅದ್ವಯವಾದೀ ನೆಲೆಯಲ್ಲಿ ಬೆಸೆದುಕೊಂಡಿದೆ. ಅರಣ್ಯವಿಲ್ಲದಿದ್ದರೆ ಮದುಮಗಳು ಕಾದಂಬರಿಯೇ ಇಲ್ಲವೇನೋ ಎನ್ನುವಷ್ಟು ತೀವ್ರವಾಗಿ ಈ ಕಾದಂಬರಿಯಲ್ಲಿ ಅರಣ್ಯದ ಉಪಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಸಮೃದ್ಧ, ಸಮಗ್ರ ಮತ್ತು ಅದ್ವಯ ಎಂಬ ಮೂರು ಪರಿಕಲ್ಪನೆಗಳ ಮೂಲಕ ನೋಡಬಹುದು. ಕಾಡು ಎಷ್ಟು ದಟ್ಟವಾಗಿದೆ ಎನ್ನುವುದನ್ನು ಕುವೆಂಪು ಅವರ ಮಾತುಗಳ ಮೂಲಕವೇ ಕೇಳಬೇಕು.

“ಮುಕುಂದಯ್ಯನ ಶೈಶವಪ್ರಜ್ಞೆ ಬರ್ಹಿವಸ್ತುಗಳನ್ನು ಗ್ರಹಿಸಲೂ ಗುರುತಿಸಲೂ ಕಲಿತಂದಿನಿಂದಲೂ ಅವನ ಚಿತ್ತವನ್ನೆಲ್ಲ ಆಕ್ರಮಿಸಿ ತುಂಬಿಬಿಟ್ಟಿದ್ದ ಮಹದ್ ವಸ್ತುವೆಂದರೆ ಮಲೆ, ಕಾಡು. ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆಯ ಮೂಲೆಯಲ್ಲಿ ಹೆದರಿ ಹದುಗಿದಂತೆ ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣುಬಿಡುವ ಮಕ್ಕಳ ಪಾಲಿಗೆ ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೇ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಿರುತ್ತದೆ, ಪೃಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೋ ಒಂದಿನಿತಿನಿತೆ ಅಂಗೈಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ, ಅಷ್ಟೇ. ಅದೂ ಕೂಡ ಅವನು ನಿಚ್ಚವೂ ಜಾಗರೂಕನಾಗಿ ತಾನು ಗೆದ್ದುಕೊಂಡಿದ್ದನ್ನು ನಿರಂತರವೂ ರಕ್ಷಿಸಿಕೊಳ್ಳುತ್ತಾ ಹೋಗುವುದನ್ನು ಮರೆತನೆಂದರೆ, ಬಹುಬೇಗನೆ ಹಳು ಬೆಳೆದು ಮತ್ತೆ ಅದು ಕಾಡಿನ ವಶವಾಗಿ ಬಿಡುತ್ತದೆ. ಮುಕುಂದಯ್ಯನಿಗಂತೂ ಕಾಡು ಎಂದರೆ ದೇವರಿಗೆ ಸರಿಸಮಾನವಾಗಿತ್ತು. ಅಷ್ಟೊಂದು ಭಯಮಿಶ್ರಿತ ಭಕ್ತಿ ಅದರಲ್ಲಿ. ಅವನಿಗೆ ಅದರ ಮುಳ್ಳು, ಕಲ್ಲು ಕೊರಕಲು, ಏರು ಇಳಿತ, ಹುಲಿ-ಹಂದಿ, ಹಾವು ಚೇಳು ನುಸಿ ಇಂಬಳ ಇವೆಲ್ಲದರಿಂದ ಆಗುವ ತೊಂದರೆಯ ಅನುಭವವಿತ್ತು. ಹಾಗೇಯೆ ಹಕ್ಕಿ-ಹೂವು, ಹಣ್ಣು ಚಿಟ್ಟೆ ಜೇನು ಬೇಟೆ ಇತ್ಯಾದಿಗಳಿಂದ ಒದಗುವ ಆನಂದದ ಅರಿವೂ ಇತ್ತು. ಮಲೆಕಾಡಿನ ಭವ್ಯತೆಯ ಅವನ ಅನುಭವವನ್ನು ಹೆದರಿಕೆ ಎಂದು ವರ್ಣಿಸಲಾಗುತ್ತಿರಲಿಲ್ಲ.”

(ಮಲೆಗಳಲ್ಲಿ ಮದುಮಗಳು, ಪುಟ: 125)

ಆಕಾಶವೇ ಚಿಕ್ಕದಾಗಿ, ಕಾಡೇ ದೊಡ್ಡದಾಗಿ; ಕಾಡಿನ ಚೂರುಪಾರು ಜಾಗವನ್ನು ಸವರಿ ತನ್ನ ಬದುಕು ಕಟ್ಟಿಕೊಂಡ ಮನುಷ್ಯ ಕಾಡಿನ ಭವ್ಯತೆಯ ಮುಂದೆ ಕುಬ್ಜನಾಗಿ, ಕಾಡೇ ದೇವರಾಗಿ, ತೊಂದರೆಯನ್ನೂ ಆನಂದವನ್ನೂ ಏಕಕಾಲಕ್ಕೆ ಕೊಡುವ ದಿವ್ಯಾನುಭವವಾಗಿ; ಕಾಡು ಮದುಮಗಳು ಕಾದಂಬರಿಯಲ್ಲಿ ಮೂಡಿಬಂದಿದೆ. ಆ ಅರ್ಥದಲ್ಲಿ ಕುವೆಂಪುರವರ ಅದ್ವಯವಾದೀ ದಾರ್ಶನಿಕತೆಗೆ ಈ ಕಾಡೇ ಒಂದು ಭವ್ಯವಾದ ರೂಪಕ.

ಭರಮೈ ಹೆಗ್ಗಡೆಯವರಿಂದ ಹಿಡಿದು ನಾಯಿ ಗುತ್ತಿಯವರೆಗೆ ಐತ-ಪೀಂಚಲುವಿನಿಂದ ತೊಡಗಿ ಮುಕುಂದಯ್ಯ-ಚಿನ್ನಮ್ಮನವರೆಗೆ ಮತ್ತು ಕಿಲಸ್ತರಿಂದ ಹಿಡಿದು ಹೊನ್ನಾಳಿ ಸಾಬರವರೆಗೆ ಎಲ್ಲರೂ ಈ ಕಾಡಿನ ಮಕ್ಕಳೇ. ಈ ಕಾಡು ಇಲ್ಲದಿದ್ದರೆ ಇಲ್ಲಿಯ ಜನರ ಯಾವ ವ್ಯೂಹವೂ, ಅವರ ಯಾವ ಕನಸೂ, ಅವರ ಯಾವ ಬದುಕೂ ನೆರವೇರಲು ಸಾಧ್ಯವೇ ಇಲ್ಲ. ಹಾಗಾಗಿ ಕಾಡು ಇಲ್ಲಿಯ ಜನರನ್ನು ಪೆÇರೆಯುವ ಮತ್ತು ಆಗಿಂದಾಗ್ಗೆ ಅವರನ್ನೂ ತರಿದು ಮುಕ್ಕುವ ಕೆಲಸವನ್ನೂ ತಣ್ಣಗೆ ಮಾಡಿಕೊಂಡು ಬಂದಿದೆ. ಕೇವಲ ತನ್ನ ಅಸ್ತಿತ್ವ ಮಾತ್ರದಿಂದಲೇ ಮಾನುಷ ಜೀವನದ ಅನೇಕಾನೇಕ ಅಲ್ಲೋಲಕಲ್ಲೋಲಗಳಿಗೆ ಕಾರಣೀಭೂತವಾಗುವ ಈ ಕಾಡು ಮದುಮಗಳು ಕಾದಂಬರಿಯ ಜೀವದ್ರವ್ಯವೂ ಹೌದು. ಪೊಷಕ ದ್ರವ್ಯವೂ ಹೌದು.

ಈ ಕಾದಂಬರಿಯಲ್ಲಿ ಮರ್ಯಾದಾ ಪುರುಷೋತ್ತಮರಿಲ್ಲ. ಸಾಮಾನ್ಯ ಮನುಷ್ಯ ಬದುಕಿನ ಒಳಜಗತ್ತು ಎಷ್ಟು ವೈವಿಧ್ಯಮಯವೂ, ಜೀವಂತವೂ, ಕ್ರೂರವೂ ಆಗಿದೆ. ಎಷ್ಟೊಂದು ಬಗೆಯ ತಳಮಳಗಳ, ವಿರೋಧಾಭಾಸಗಳ, ದಿಗ್ಭ್ರಮೆಗಳ, ಪೀಕಲಾಟಗಳ ಸಂಕೀರ್ಣ ಸಂದರ್ಭ ಸೃಷ್ಟಿಯಾಗಿ ಮನುಷ್ಯ ಹೇಗೆ ಹತಪ್ರಭನಾಗುತ್ತಾನೆ. ಹತನಾಗುತ್ತಲೇ ಹೇಗೆ ಬೆಳಗುತ್ತಾನೆ ಅಥವಾ ಹೇಗೆ ಮುದುಡುತ್ತಾನೆ ಎನ್ನುವ ಅನೇಕಾನೇಕ ಮನುಷ್ಯ ಚೇತನಗಳ ಒಂದು ಮಹಾಒಕ್ಕೂಟವನ್ನು ಈ ಕಾದಂಬರಿ ನಮಗೆ ಕಾಣಿಸುತ್ತದೆ.

ಕಾಡು ಮತ್ತು ಬೇಟೆ ಇವರೆಡೂ ಪರಸ್ಪರ ಅನ್ಯೋನ್ಯವಾದ ಮತ್ತು ಪರಸ್ಪ್ಪರಾನ್ವಯಗೊಳ್ಳುವಂತಹ ಸಂಗತಿಗಳು. ಕಾದಂಬರಿಯ ಬೇರೆಬೇರೆ ಸನ್ನಿವೇಶಗಳಲ್ಲಿ ಈ ಬೇಟೆ ಒಂದು ರೂಪಕವಾಗಿಯೂ ಕಂಡು ಬರುತ್ತದೆ. ಹೊನ್ನಾಳಿ ಸಾಬರು ಗಬ್ಬದ ಆಡನ್ನು ಕಾಡಿನೊಳಗೆ ಕುಯ್ಕೊಂಡು ಹೆಂಗೆ ತಿಂದರೋ ಹಂಗೇನೇ ಅವರು ಕಾಡಿನೊಳಗೆ ಹಲಸಿನಹಣ್ಣನ್ನೂ ತಿನ್ನಬಲ್ಲರು. ಕಾವೇರಿಯೆಂಬ ಅಮಾಯಕ ಹುಡುಗಿಯನ್ನೂ ಉಂಗುರದ ಮಿಕವೊಡ್ಡಿ ಕೆಡಹಿ ತಮ್ಮ ಹಸಿವು ತೀರಿಸಬಲ್ಲವರು. ತನಗೆ ಬರಬೇಕಾದ ಹೆಣ್ಣು ಗುತ್ತಿಯ ಪಾಲಾದಳಲ್ಲ ಎಂದು ಬಚ್ಚ ಗುತ್ತಿಯನ್ನು ಬೇಟೆಯಾಡಲು ಹೊಂಚುವುದೂ ಇದೇ ಕಾಡಿನಲ್ಲಿ. ಅಂದರೆ ಮನುಷ್ಯರು ಮನುಷ್ಯರನ್ನೇ ಬೇಟೆಯಾಡುವ ಪ್ರವೃತ್ತಿಯನ್ನು ಕುವೆಂಪು ತೋರಿಸುತ್ತ ಕಾಡಿಗೂ ಊರಿಗೂ ವ್ಯತ್ಯಾಸವೇ ಇಲ್ಲದ ಒಂದು ಚಿತ್ರವನ್ನು ಕೆತ್ತುತ್ತಿದ್ದಾರೆ. ಈ ಅರ್ಥದಲ್ಲಿ ಕುವೆಂಪುರವರ ಮದುಮಗಳು ಕಾದಂಬರಿ ಕಾಡಿನ ಕಥೆಯೇ ಹೌದು. ಕಾಡು-ನಾಡು, ಮೃಗ-ಮನುಷ್ಯ, ಬೇಟೆ-ಬೇಟ ಇವು ಯಾವುವೂ ಕುವೆಂಪು ಅವರಿಗೆ ಪರಸ್ಪರ ಪ್ರತ್ಯ-ಪ್ರತ್ಯೇಕವಾದ ಸಂಗತಿಗಳಲ್ಲ. 1986ರಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಕುವೆಂಪು ಒಂದು ಮಾತನ್ನು ಹೇಳುತ್ತಾರೆ: I am not a mere artist, Predominantly and Primarily I am a Philosopher. ಈ ಮಾತು ಬಹಳ ಮುಖ್ಯ ಯಾಕೆಂದರೆ, ಒಬ್ಬ ಫಿಲಸಾಫರ್‍ಗೆ ಮಾತ್ರ ಎಲ್ಲವನ್ನೂ ಒಳಗೊಳ್ಳುವ ಸಮಗ್ರ ದೃಷ್ಟಿ ಸಿದ್ಧಿಸೋದು. ಹಾಗಾಗಿ ಮದುಮಗಳು ಕಾದಂಬರಿಯನ್ನು ನಾವು ಅಧ್ಯಾತ್ಮದ ಸ್ಪರ್ಶವಿಲ್ಲದೆ, ಅದ್ವಯವಾದೀ ತಾತ್ತ್ವಿಕ ಹಿನ್ನೆಲೆಯಿಲ್ಲದೆ ಅರ್ಥ ಮಾಡಿಕೊಳ್ಳಲಾರೆವು. ಓದಲಾರೆವು.

ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಪ್ರೀತಿ-ಪ್ರೇಮದ ಮರ್ಮವನ್ನು ಅರಿಯುತ್ತ, ಮನುಷ್ಯರನ್ನು ಗೋಳಾಡಿಸುವ ಮತ್ತು ಅಟ್ಟಾಡಿಸುವ ಬದುಕಿನ ಪ್ರಾಣಮೀಮಾಂಸೆಯನ್ನು ಅನ್ವೇಷಿಸುವ ಮಾರ್ಗದ ಪಯಣಿಗರಾದ ಕುವೆಂಪು ಸಹಜವಾಗಿಯೇ ಈ ಮಾರ್ಗದಲ್ಲಿರಬಹುದಾದ ಪ್ರಗತಿಪರ-ಸಾಂಪ್ರದಾಯಿಕ, ಆಧುನಿಕ-ಅನಾಧುನಿಕ, ಬ್ರಾಹ್ಮಣ-ಶೂದ್ರ ಇತ್ಯಾದಿ ದ್ವಂದ್ವಗಳನ್ನು ಹರಿದು ಹಾದು ಕೊನೆಗೆ ಸಜೀವ-ನಿರ್ಜೀವ ಎಂಬ ಭೇದವೂ ಇಲ್ಲದ ವಿಶ್ವದ ಸಮಗ್ರತೆಯ ರಹಸ್ಯವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಈ ಮದುಮಗಳು ಕಾದಂಬರಿಯನ್ನು ಬರೆದರೇನೋ ಎಂದು ಅನ್ನಿಸಿಬಿಡುತ್ತದೆ. ಹೀಗನ್ನಿಸುವುದಕ್ಕೆ ಮುಖ್ಯ ಕಾರಣವೊಂದು ಈ ಕಾದಂಬರಿಯಲ್ಲಿದೆ. ಅದೇನೆಂದರೆ, ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಹೂವಯ್ಯ ಓರ್ವ ಪುರುಷೋತ್ತಮ; ಶ್ರೀ ರಾಮಾಯಣ ದರ್ಶನಂನಲ್ಲಿ ರಾಮ ಓರ್ವ ಮರ್ಯಾದಾ ಪುರುಷೋತ್ತಮ. ಆದರೆ ಬಹಳ ದೊಡ್ಡ ವಿಕಾಸ ಅಂದರೆ; ಕಾನೂರು ಮತ್ತು ರಾಮಾಯಣ ಬರೆದಾದ ಮೇಲೆ ಮದುಮಗಳು ಕಾದಂಬರಿಯನ್ನು ಕುವೆಂಪು ಬರೆಯುವಾಗ ಅವರು ಇಲ್ಲಿ ಯಾವ ನಾಯಕನನ್ನಾಗಲೀ; ಯಾವ ಪುರುಷೋತ್ತಮನನ್ನಾಗಲೀ ಸೃಷ್ಟಿಸೋದಿಲ್ಲ. ಮನುಷ್ಯ ಬದುಕಿನಲ್ಲಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೇನೋ ಅನೇಕಾನೇಕ ಕ್ಷುದ್ರ ಮತ್ತು ಕ್ಷುಲ್ಲಕ ವಿಷಯಗಳಲ್ಲಿ ನಾವೆಲ್ಲ ಈಜಾಡಿ-ಕಾದಾಡಿ ಬಂದಿರೋದರಿಂದ ಶುದ್ಧ ಮರ್ಯಾದೆ ಅಂತ ಇರೋದಕ್ಕೆ ಸಾಧ್ಯ ಇಲ್ಲ ಎನ್ನುವುದನ್ನು ಕುವೆಂಪು ಮದುಮಗಳು ಕಾದಂಬರಿಯಲ್ಲಿ ನಿರೂಪಿಸುತ್ತಾ ಹೋಗ್ತಾರೆ. ಹಾಗಾಗಿ ಈ ಕಾದಂಬರಿಯಲ್ಲಿ ಮರ್ಯಾದಾ ಪುರುಷೋತ್ತಮರಿಲ್ಲ. ಸಾಮಾನ್ಯ ಮನುಷ್ಯ ಬದುಕಿನ ಒಳಜಗತ್ತು ಎಷ್ಟು ವೈವಿಧ್ಯಮಯವೂ, ಜೀವಂತವೂ, ಕ್ರೂರವೂ ಆಗಿದೆ. ಎಷ್ಟೊಂದು ಬಗೆಯ ತಳಮಳಗಳ, ವಿರೋಧಾಭಾಸಗಳ, ದಿಗ್ಭ್ರಮೆಗಳ, ಪೀಕಲಾಟಗಳ ಸಂಕೀರ್ಣ ಸಂದರ್ಭ ಸೃಷ್ಟಿಯಾಗಿ ಮನುಷ್ಯ ಹೇಗೆ ಹತಪ್ರಭನಾಗುತ್ತಾನೆ. ಹತನಾಗುತ್ತಲೇ ಹೇಗೆ ಬೆಳಗುತ್ತಾನೆ ಅಥವಾ ಹೇಗೆ ಮುದುಡುತ್ತಾನೆ ಎನ್ನುವ ಅನೇಕಾನೇಕ ಮನುಷ್ಯ ಚೇತನಗಳ ಒಂದು ಮಹಾಒಕ್ಕೂಟವನ್ನು ಈ ಕಾದಂಬರಿ ನಮಗೆ ಕಾಣಿಸುತ್ತದೆ. ಅದಕ್ಕೆ ಬಹಳ ಪ್ರಬಲವಾಗಿ ಒದಗಿಬಂದಿರುವ ಪರಿಪ್ರೇಕ್ಷ್ಯವೇ ದಟ್ಟಕಾಡು.

ಶ್ರೀ ಸಾಮಾನ್ಯವೇ ಭಗವದ್ ಮಾನ್ಯಂ ಎಂದು ಘೋಷಿಸಿದವರು ಕುವೆಂಪು. ಸಾಮಾನ್ಯ ಮನುಷ್ಯನೊಬ್ಬನ ಉಪಸ್ಥಿತಿಯನ್ನೂ ದಿವ್ಯಉಪಸ್ಥಿತಿಯನ್ನಾಗಿ ಕುವೆಂಪು ರೂಪಾಂತರಗೊಳಿಸಬಲ್ಲರು. ನಾನು ಈ ಮಾತನ್ನು ಕಾದಂಬರಿಯ ಗಡ್ಡದಯ್ಯನನ್ನು ನೆನಪು ಮಾಡಿಕೊಂಡು ಹೇಳುತ್ತಿದ್ದೇನೆ. ನಾವಿಂದು ಯಾವುದನ್ನು ಆಧುನಿಕ ಎಂದು ಹೇಳುತ್ತೇವೆಯೋ ಆ ಆಧುನಿಕದ ಅರ್ಥವನ್ನು ಆಧುನಿಕ ಎಂಬ ಪದ ಹುಟ್ಟಿಕೊಂಡ ಯುರೋಪ್‍ನ ಜ್ಞಾನಮೀಮಾಂಸೆಯೇ ಅವಾಕ್ಕಾಗುವಂತೆ ಕುವೆಂಪು ಇಲ್ಲಿ ಚಿತ್ರಿಸಿದ್ದಾರೆ ಮತ್ತು ವಿಸ್ತರಿಸಿದ್ದಾರೆ.

ಶ್ರೀ ರಾಮಾಯಣ ದರ್ಶನಂನ ಒಂದು ಮುಖ್ಯವಾದ ಸಂದರ್ಭವನ್ನು ಇಲ್ಲಿ ನೆನಪು ಮಾಡಿಕೊಳ್ಳುವುದು ಹೆಚ್ಚು ಸೂಕ್ತವಾಗಬಲ್ಲುದು. ಕಾಡಿನ-ಪಚ್ಚೆ-ಪೈರಿನ-ಹುಲ್ಲು-ಕಡ್ಡಿಯ ವಿವರಣೆ ಮಾಡುತ್ತ ಬರುವ ಸಂದರ್ಭದಲ್ಲಿ ಕುವೆಂಪು ಗರಿಕೆಯ ಹುಲ್ಲಿನ ಎಸಳಿನ ಮೇಲೆ ನಿಂತಿರುವ ನೀರಹನಿಗಳು ಶ್ರೀರಾಮನ ಕಿರೀಟದಲ್ಲಿ ಪೇಣಿಸುತ್ತಾ ಮುತ್ತುಗಳಂತೆ ಕಾಣುತ್ತಿದ್ದವು ಎಂದು ಬರೆಯುತ್ತಾರೆ. ಅಂದರೆ ಕುವೆಂಪುಗೆ ಪ್ರಾಕೃತಿಕವಾದ ಗರಿಕೆ ಹುಲ್ಲಿನ ಮೇಲಿನ ನೀರಹನಿಗೂ ಶ್ರೀರಾಮ ಕಿರೀಟದ ಮುತ್ತಿನ ಮಾಲೆಗೂ ವ್ಯತ್ಯಾಸವೇ ಇಲ್ಲ. ಅದ್ವಯವಾದೀ ಜೀವನದರ್ಶನವೆಂದರೆ ಇದೇ ಅಲ್ಲವೇ.? ಈ ಅದ್ವಯವಾದೀ ಚಿಂತನೆಯ ಮಹಾರೂಪಕವೇ ಕಾಡು. ಡಿಎಸ್‍ಎನ್ ಅವರು ‘ನಮ್ಮ ಪರಂಪರೆಯಲ್ಲಿ ವಿಷಮತೆಗಳು ಇವೆಯೇ ಹೊರತು ವಿಛ್ಛಿನ್ನತೆ ಇಲ್ಲ.’ ಎಂಬ ಮಾತನ್ನು ಹೇಳುತ್ತಾರೆ. ಇದು ಸಮ್ಯಕ್ ದೃಷ್ಟಿಯೂ ಹೌದು. ಇದು ಕುವೆಂಪು ಅವರಲ್ಲಿ ನಿಹಿತವಾಗಿತ್ತು. ಹಾಗಾಗಿ ಅವರಿಗೆ ಹೊಲೆಯನಾದ ಗುತ್ತಿ ಬೇರೆ ಅಲ್ಲ. ಬ್ರಾಹ್ಮಣನಾದ ಮಂಜಭಟ್ಟ ಬೇರೆ ಅಲ್ಲ. ಒಕ್ಕಲಿಗನಾದ ವೆಂಕಟಪ್ಪ ನಾಯಕ ಬೇರೆ ಅಲ್ಲ. ಸಮಾಜವಾದ ಬೇರೆ ಅಲ್ಲ. ಆಧ್ಯಾತ್ಮಿಕತೆ ಬೇರೆ ಅಲ್ಲ. ಇವೆಲ್ಲವನ್ನೂ ಕಥನ ಮಾರ್ಗದ ಮೂಲಕ ನಮಗೆ ಮನಗಾಣಿಸಿಕೊಟ್ಟದ್ದೇ ಕುವೆಂಪು.

ಈ ಕಾದಂಬರಿಯನ್ನು ಓದಬೇಕಾಗಿರುವುದು ಇದರ ಕಥೆಗಾಗಿ ಅಲ್ಲ. ಇದರ ವಿವರಗಳಿಗಾಗಿ. ಹಾಗಾಗಿ ವಿವರಗಳಿಂದ ಸೊಕ್ಕಿದೆ ಎನ್ನುವುದು ಇದರ ಅವಲಕ್ಷಣ ಅಲ್ಲ.

ಕುವೆಂಪುರವರ ಚಿಂತನೆಯನ್ನು ಅವರೇ ಪರಿಕಲ್ಪಿಸಿದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಎಂಬ ಐದು ಪರಿಕಲ್ಪನೆಗಳಲ್ಲಿ ನೋಡಬೇಕು ಎಂದು ಅನೇಕ ವಿದ್ವಾಂಸರು ಹೇಳುತ್ತಾರೆ. ಅವರ ಕೊನೆಯ ಪರಿಕಲ್ಪನೆಯಾಗಿರುವ ಪೂರ್ಣದೃಷ್ಟಿ ಎಂದರೆ ಏನು..? ಈ ಪೂರ್ಣದೃಷ್ಟಿ ನಮಗೆ ಸಿದ್ಧಿಯಾಗದೇ ಹೋದರೆ ನಾವು ಮನುಜಮತದಿಂದ ತೊಡಗಿ ಸಮನ್ವಯದವರೆಗೆ ಏನನ್ನಾದರೂ ಕಾಣಬಲ್ಲೆವೇ..? ಪೂರ್ಣದೃಷ್ಟಿಯೆಂದರೆ ಅದು ಅದ್ವಯವಾದೀ ತಾತ್ತ್ವಿಕತೆಯೇ ಆಗಿದೆ. ಈ ಅದ್ವಯವಾದೀ ತಾತ್ತ್ವಿಕತೆಯನ್ನು ಮೂರ್ತರೂಪಕ್ಕಿಳಿಸಿ ಪ್ರತಿಯೊಂದು ಸಣ್ಣಪುಟ್ಟ ವಿವರಗಳನ್ನೂ ರೂಪಕಗಳನ್ನಾಗಿ ಪರಿವರ್ತಿಸಿ ಕಟ್ಟಿದ ಮಹಾನ್ ರೂಪಕಾತ್ಮಕ ಕಾದಂಬರಿಯೇ ಮದುಮಗಳು. ಒಂದು ಹುಳು ಕೂಡ ದೇವರಲ್ಲಿ ಹೋಗಿ ಸೇರುತ್ತದೆ ಎಂಬ ವಿವೇಕಾನಂದರ ಮಾತನ್ನು ಉಲ್ಲೇಖಿಸುವ ಕುವೆಂಪುರವರಿಗೆ ಈ ಪೂರ್ಣಸಾಯುಜ್ಯದ ನಿಸರ್ಗಲೀಲೆಯಲ್ಲಿ ಅಪಾರ ವಿಶ್ವಾಸವಿತ್ತು. ಲೋಕದ ಚಲನೆ ಹೀಗಿರದೆ ಇನ್ನೊಂದು ರೀತಿಯಲ್ಲಿ ಇರಲು ಸಾಧ್ಯವಿಲ್ಲ ಎನ್ನುವುದು ಅವರ ನಂಬುಗೆಯಾಗಿತ್ತು.

ಒಂದು ಕೇಂದ್ರ ಮತ್ತು ಉಳಿದವುಗಳು ಪರಿಧಿ ಎಂಬ ಇಂದ್ರಿಯ ದೃಗ್ಗೋಚರ ಲೋಕಜ್ಞಾನವನ್ನು ಪಡೆದ ನಮಗೆ; ಇಂದ್ರಿಯ ದೃಗ್ಗೋಚರ ಲೋಕಜ್ಞಾನ ಮಾತ್ರವೇ ದೊಡ್ಡದು, ಬೆಲೆಕೊಡಬೇಕಾದದ್ದೂ ಅದಕ್ಕೆ ಮಾತ್ರ ಎಂದು ಭ್ರಮಿಸಿಕೊಂಡಿರುವ ನಮಗೆ; ಭೂಮವಾದ ಇನ್ನೊಂದು ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಇಲ್ಲ. ಅಮೂರ್ತದ ಸಂಗತಿಗಳಿಗೆ ಮೂರ್ತದ ಪ್ರಶ್ನೆಗಳನ್ನು ಕೇಳುವುದೇ ಮೂರ್ಖತನವಲ್ಲವೇ..? ಈ ಕಾದಂಬರಿಯಲ್ಲಿ ಕೇಂದ್ರ ಮತ್ತು ಪರಿಧಿಗಳ ಪ್ರಶ್ನೆಯನ್ನು ಎತ್ತುವವರು ಮನುಷ್ಯ ಬದುಕಿನ ಬಗೆಗೆನೇ ಬಹಳ ಅಸಮಂಜಸವಾದ ನಿಲುವನ್ನು ಹೊಂದಿದ್ದಾರೆ. ಈ ಕಾದಂಬರಿಯಲ್ಲಿ ಎಲ್ಲವೂ ಏಕಕಾಲಕ್ಕೆ ಕೇಂದ್ರವೂ ಹೌದು ಪರಿಧಿಯೂ ಹೌದು. ನಮಗೆ ಗೊತ್ತಿರುವ ಸೌರಮಂಡಲದ ಜ್ಞಾನದ ಹಿನ್ನೆಲೆಯಲ್ಲಿ ನಾವು ಸೂರ್ಯನನ್ನು ಕೇಂದ್ರ ಎಂದೂ ಉಳಿದವುಗಳನ್ನು ಪರಿಧಿ ಎಂದೂ ಗುರುತಿಸುತ್ತೇವೆ. ಆದರೆ ನಮಗೆ ದೃಗ್ಗೋಚರವಾಗದ, ನಮಗೆ ಊಹಿಸಲೂ ಸಾಧ್ಯವಾಗದ, ಈ ಅಗಾಧ ವಿಶ್ವದ ಸನ್ನಿವೇಶದಲ್ಲಿ ಕೇಂದ್ರ ಯಾವುದು..? ಪರಿಧಿ ಯಾವುದು..?

ನನ್ನ ಪ್ರಕಾರ ಈ ಕಾದಂಬರಿ, ಅದ್ವೈತ ದರ್ಶನದ ತತ್ತ್ವಜ್ಞಾನೀಯ ನಿಬಿಡತೆಯನ್ನು ಹೃದ್ಯ ನಿರೂಪಣೆಯಲ್ಲಿ ಕಥನವಾಗಿಸಿದ ಕೃತಿ. ಅತ್ತ ಮಹಾಸತಿಯನ್ನೂ ಚಿತ್ರಿಸದೆ, ಇತ್ತ ಮರ್ಯಾದಾ ಪುರುಷೋತ್ತಮನನ್ನೂ ಕೆತ್ತದೆ ಸಾಮಾನ್ಯ ಮನುಷ್ಯರ ದಿನನಿತ್ಯದ ದಂದುಗವನ್ನು ಸೂಕ್ಷ್ಮಾತಿಸೂಕ್ಷ್ಮ ವಿವರಗಳೊಂದಿಗೆ ಪೇಣಿಸುತ್ತಾ ನಮ್ಮ ದೇಹ ಹೇಗೆ ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಒಂದು ಅಖಂಡವಾದ ದೇಹವಾಗಿದೆಯೋ, ನಮ್ಮ ಜಗತ್ತು ಹೇಗೆ ಒಂದನ್ನೊಂದು ಬೆಸೆದುಕೊಂಡಿರುವುದರಿಂದ ಒಂದು ಸಮಗ್ರವಾದ ವಿಶ್ವವಾಗಿದೆಯೋ; ತದ್ವತ್ ಹಾಗೆಯೇ ಸಂದುಗಡಿಯದೆ ರೂಪುಗೊಂಡಿರುವ ಈ ಕಾದಂಬರಿಯನ್ನು ಓದಬೇಕಾಗಿರುವುದು ಇದರ ಕಥೆಗಾಗಿ ಅಲ್ಲ. ಇದರ ವಿವರಗಳಿಗಾಗಿ. ಹಾಗಾಗಿ ವಿವರಗಳಿಂದ ಸೊಕ್ಕಿದೆ ಎನ್ನುವುದು ಇದರ ಅವಲಕ್ಷಣ ಅಲ್ಲ. ವಿವರಗಳೇ ಇದರ ಸಲ್ಲಕ್ಷಣವೂ ಸಹಜಲಕ್ಷಣವೂ ಆಗಿದೆ.

ನಾವು ನಮಗೀಗ ಚೂರುಪಾರು ಉಳಿದಿರುವ ಕಾಡನ್ನೂ ಉಳಿಸಿಕೊಳ್ಳದಿದ್ದರೆ ಇನ್ನು ಐವತ್ತು ವರ್ಷಗಳಲ್ಲಿ ನಮ್ಮದೇ ಕನ್ನಡದ ಜನರಿಗೆ ಮದುಮಗಳು ಕಾದಂಬರಿ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್‍ನ ಪ್ರವಾಸೀ ಬರವಣಿಗೆ ಎಂದು ಅನ್ನಿಸಿದರೂ ಆಶ್ಚರ್ಯವಿಲ್ಲ

ನಿಬಿಡವಾಗಿರುವ ಮತ್ತು ಸಂಕೀರ್ಣವಾಗಿರುವ ಈ ಕೃತಿ, ಇಲ್ಲಿಯ ಮನುಷ್ಯ ಸಂಬಂಧಗಳು, ಅವರ ಭಾವೋದ್ವೇಗಗಳು, ಅವರ ಚಿತ್ತವಿಕಾರಗಳು, ಅವರು ಮಾಡಿಕೊಳ್ಳುವ ಸಂಬಂಧಗಳು – ಕೂಡಿಕೊಳ್ಳುವ ಜಾಗಗಳು, ಅನ್ಯಾನ್ಯ ಜಾತಿ-ಮತಗಳ ಜೊತೆಗೆ ಸಮಯ-ಸಂದರ್ಭಕ್ಕನುಗುಣವಾಗಿ ಮತ್ತು ಜಾಯಮಾನಕ್ಕನುಗುಣವಾಗಿ ನೆರವೇರಿಸುವ ನೆಂಟಸ್ತಿಕೆಗಳು, ಇಲ್ಲಿಯ ದಟ್ಟ ಅರಣ್ಯಗಳು, ದನಗೋಳು ಮಳೆಗಳು, ಭೋರ್ಗರೆದು ಹರಿವ ಹಳ್ಳ-ಕೊಳ್ಳಗಳು, ಮೃಗಯಾವ್ಯಾಜಗಳು ಇವು ಯಾವುವೂ ನೇರಾನೇರ ಕನ್ನಡ ಸಂಸ್ಕೃತಿಯದ್ದಷ್ಟೇ ಅಲ್ಲ. ಇಲ್ಲಿಯ ಮನುಷ್ಯರು ಕನ್ನಡ ಆಡುತ್ತಾರೆ ಎಂಬುದನ್ನು ಹೊರತುಪಡಿಸಿದರೆ ಇದು ಪ್ರಪಂಚದ ಯಾವುದೇ ಅರಣ್ಯಭಾಗದಲ್ಲಿ, ಮಲೆಯ ತಪ್ಪಲುಗಳಲ್ಲಿ ಸಂಭವಿಸಬಹುದಾದ ಮನುಷ್ಯ ದೈನಿಕದ ಉಪದ್ವ್ಯಾಪಗಳೇ ಸರಿ. ಕನ್ನಡದ್ದಾಗಿಯೂ ಕೇವಲ ಕನ್ನಡದ್ದಷ್ಟೇ ಆಗಿ ಉಳಿಯ ಬಯಸದ ಈ ಮಹಾಕೃತಿಯನ್ನು ಕಾಡು ಪೆÇರೆದಿರುವುದೂ ಅಷ್ಟೇ ಸಹಜವಾಗಿದೆ. ಕಾಡು ಇಲ್ಲದಿದ್ದರೆ ಈ ಕಾದಂಬರಿಗೆ ಅಸ್ತಿತ್ವವೇ ಇಲ್ಲ. ಕಾಡನ್ನು ಯಾವ ಭಾಷೆಯಲ್ಲಿ ನೀವು ಹೇಗೆ ಕರೆದರೇನು.? ಕಾಡು ಕಾಡೇ. ಅದರ ಅಗಮ್ಯದ ಅನುಭವ ಗಮಿಸುವವನ ಅನುಭವಕ್ಕೇ ಬರಬೇಕು. ನಾವು ನಮಗೀಗ ಚೂರುಪಾರು ಉಳಿದಿರುವ ಕಾಡನ್ನೂ ಉಳಿಸಿಕೊಳ್ಳದಿದ್ದರೆ ಇನ್ನು ಐವತ್ತು ವರ್ಷಗಳಲ್ಲಿ ನಮ್ಮದೇ ಕನ್ನಡದ ಜನರಿಗೆ ಮದುಮಗಳು ಕಾದಂಬರಿ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್‍ನ ಪ್ರವಾಸೀ ಬರವಣಿಗೆ ಎಂದು ಅನ್ನಿಸಿದರೂ ಆಶ್ಚರ್ಯವಿಲ್ಲ.

ವನಗಮನದ ಮತ್ತು ಅರಣ್ಯವಾಸದ ಎರಡು ಮುಖ್ಯ ನಿದರ್ಶನಗಳ ಮೂಲಕ ಈ ಚರ್ಚೆಯನ್ನು ಮುಗಿಸಬಹುದು. ನಮ್ಮ ಪರಂಪರೆಯ ಭಾಗವಾಗಿರುವ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕಾವ್ಯಗಳ ನಾಯಕರು ಕಾಡಿನಲ್ಲಿ ವಾಸವಾಗುವ ಪ್ರಕರಣವನ್ನು ಕಾಣುತ್ತೇವೆ. ಆದರೆ ಅಲ್ಲಿ ಬರುವ ಕಾಡು ನಾಡನ್ನಾಳುವ ದೊರೆಗೆ ಅಮೋಘವಾದ ಜೀವನಾನುಭವವನ್ನು ಕೊಡುವುದಕ್ಕಾಗಿ; ಆತ ಮಾಗುವುದಕ್ಕಾಗಿ, ಆತನ ವ್ಯಕ್ತಿತ್ವವನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವುದಕ್ಕಾಗಿ ಹೊಗಬೇಕಾದ ಕಾಡು ಆಗಿದೆ. ಆದರೆ ಪುಟ್ಟಪ್ಪನವರು ಮದುಮಗಳು ಕಾದಂಬರಿಯಲ್ಲಿ ಕಂಡರಿಸಿದ ಕಾಡು; ಹೊಗಬೇಕಾದ ಕಾಡಲ್ಲ, ಬದುಕುವುದಕ್ಕಾಗಿ ಹರಸಾಹಸ ಪಡುತ್ತಾ ಏಗಬೇಕಾದ ಕಾಡು. ಹೋರಾಟವಿಲ್ಲದೇ ಬಾಳ್ವೆಯೇ ದುಸ್ಸಾಧ್ಯ ಎಂಬಂತಹ ಕಾಡು. ಅಂತಹ ಕಾಡಿನಲ್ಲಿ ಮನುಷ್ಯರು ಮೃಗಗಳಂತೆಯೂ ಮೃಗಗಳು ಮನುಷ್ಯರಂತೆಯೂ ಮೃಗ-ಮನುಷ್ಯರಿಗೆ ಪರಸ್ಪರ ವ್ಯತ್ಯಾಸವೇ ಇಲ್ಲದಂತೆಯೂ ಬದುಕುವುದಕ್ಕೆ ಸಾಧ್ಯವಿದೆ.

ಕಾಡನ್ನು ಅರ್ಥ ಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಅರ್ಥಮಾಡಿಕೊಳ್ಳಿಯಾರೇ? ಮನುಷ್ಯರನ್ನು ಅರ್ಥಮಾಡಿಕೊಳ್ಳದವರು ಮದುಮಗಳು ಕಾದಂಬರಿಯನ್ನು ಹೇಗೆ ಓದಬಲ್ಲರು..? ನಾವು ಬದುಕುತ್ತಿರುವ ಸಮಾಜವನ್ನು ಎಡ-ಬಲ ಎಂದು ಈಗಾಗಲೇ ವಿಭಜಿಸಿಕೊಂಡಿರುವವರು ಈ ಕಾದಂಬರಿಯನ್ನು ಓದುವ ಪರಿ ಹೇಗಿದ್ದೀತು..? ಈ ಕಾದಂಬರಿಯನ್ನು ಓದಿದ ಮೇಲೆ, ಇದರ ಕುರಿತು ಇಷ್ಟು ಯೋಚನೆ ಮಾಡಿದ ಮೇಲೆ, ಈ ಕಾದಂಬರಿಯನ್ನು ಅರ್ಥ ಮಾಡಿಕೊಳ್ಳುವುದೆಂದರೆ ನಮ್ಮ ಜನರನ್ನು ಮತ್ತು ಅವರ ಬಾಳ್ವೆಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ನಮ್ಮ ನಮ್ಮ ಚೌಕಟ್ಟುಗಳನ್ನು ವಿಸರ್ಜಿಸುವುದು ಎಂದು ಹೇಳಿದ ಮೇಲೂ ಪರಿಹಾರವಾಗದೆ ಉಳಿದಿರುವ ಪ್ರಶ್ನೆ ಒಂದೇ.

ಓದುವುದು ಎಂದರೆ ಏನು..?

(ಧಾರವಾಡದ ರಂಗಾಯಣದಲ್ಲಿ ಡಿಸೆಂಬರ್ 9, 2018ರಂದು ನಡೆದ ‘ಮಲೆಗಳಲ್ಲಿ ಮದುಮಗಳು-50’ ವಿಚಾರಸಂಕಿರಣದಲ್ಲಿ ನೀಡಿದ ಉಪನ್ಯಾಸದ ಲೇಖನ ರೂಪ.)

*ಲೇಖಕರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.