ಮಲೆಗಳಲ್ಲಿ ಮದುಮಗಳು ವಿಮರ್ಶೆಯ ಅವಸರ ಸಾವಧಾನದ ಬೆನ್ನೇರಬೇಕು!

‘ಸಮಾಜಮುಖಿ’ ಏಪ್ರಿಲ್ ಸಂಚಿಕೆಯಲ್ಲಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ ಅವರು ಬರೆದ ‘ಕಾದಂಬರಿಯಲ್ಲಿ ಕಾಡು: ಓದಲು ತೊಡಗಿದವನ ಪಾಡು’ ಲೇಖನ ಪ್ರಕಟವಾಗಿತ್ತು. ಈ ಲೇಖನಕ್ಕೆ ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಎನ್.ಬೋರಲಿಂಗಯ್ಯ ಅವರ ಪ್ರತಿಕ್ರಿಯೆ ಇಲ್ಲಿದೆ.

ಕುವೆಂಪು ಅವರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯನ್ನು ಕುರಿತು ಸಾಕಷ್ಟು ಅಧ್ಯಯನ ಚರ್ಚೆ ನಡೆದಿದೆ, ನಡೆಯುತ್ತಿದೆ, ನಡೆಯುತ್ತಿರುತ್ತದೆ. ಅವರು ಬದುಕಿರುವ ಕಾಲದಲ್ಲಿಯೇ ಸ್ವತಃ ಅವರೇ ತಕ್ಕ ಮಟ್ಟಿಗಾದರೂ ತೃಪ್ತಿ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಅದು ಸಾಗುತ್ತಾ ಬಂದದ್ದು ನಿಜ. ಕುವೆಂಪು ಅವರ ವಿಪುಲವಾದ ಸಂದರ್ಶನ ಸಾಹಿತ್ಯದಲ್ಲಿ -ಮುಖ್ಯವಾಗಿ ದೇಜಗೌ ಮತ್ತು ಸಿ.ಪಿ.ಕೆ.- ಇದು ನಮಗೆ ತಿಳಿಯುತ್ತದೆ.

ಆದರೆ ಈ ದೂರದಲ್ಲಿ ನಿಂತು ನೋಡಿದಾಗ ಕುವೆಂಪು ಕುರಿ ತ ಸಾಹಿತ್ಯಾಧ್ಯಯನ ಚರ್ಚೆ ಅವರ ಸಂಸ್ಕೃತಿ ಚಿಂತನೆಯ ಎಲ್ಲ ಮಗ್ಗಲುಗಳನ್ನು ಎಲ್ಲ ಆಶಯಗಳನ್ನು ಬಯಲು ಮಾಡಿದೆ ಎಂದು ಹೇಳುವುದಕ್ಕಾಗುವುದಿಲ್ಲ. ಕುವೆಂಪು ತಮ್ಮ ವಿರುದ್ಧ ಬಂದ ಟೀಕೆಟಿಪ್ಪಣಿಗಳನ್ನು ಬಹಳ ಸಂಯಮದಿಂದ ಓದುತ್ತಿದ್ದರು. ದೇವಯ್ಯ ಹರವೆಯಂಥ ಚಿಕ್ಕ ಹುಡುಗರಿರಲಿ, ಬಿ.ಕೃಷ್ಣಪ್ಪನವರಂಥ ಪಂಡಿತರಿರಲಿ ತಾರತಮ್ಯ ಮಾಡದೆ ಓದಿ “ನನ್ನನ್ನು ಕೆಲವರು ಸರಿಯಾಗಿ ಓದದೆ, ಅರ್ಥ ಮಾಡಿಕೊಳ್ಳದೆ, ಕೆಲವು ಸಲ ಅರ್ಥವಾಗದೆ ಏನೇನೋ ಹೊಗಳಿ ಬರೆದವರಿಗಿಂತ ಓದಿ ತಿಳಿದುಕೊಳ್ಳಲು ಪ್ರಯತ್ನಿಸಿ ಬರೆದಿರುವ ಈ ಬಗೆಯ ನಕಾರಾತ್ಮಕ ವಿಮರ್ಶೆ ಕೂಡಾ ಪ್ರಯೋಜನಕಾರಿ” ಎಂದಿದ್ದರು. ಮಾತ್ರವಲ್ಲ ಮುಂದುವರಿದು, “ನನ್ನ ಸಾಹಿತ್ಯ ನವೋದಯ ವಿಮರ್ಶಕರಿಗಿಂತ ನವ್ಯರಿಗೆ ಹೆಚ್ಚು ಪ್ರಯೋಜನಕಾರಿ ಯಾಗಿ ಕಾಡಿತ್ತು. ಆ ಕಾರಣಕ್ಕಾಗಿಯೇ ನನ್ನನ್ನು ಕುರಿತ ಚರ್ಚೆ, ಅಧ್ಯಯನ ಚುರುಕುಗೊಂಡಿತು” ಎಂದು ಹೇಳಿದ್ದರು. ಈ ಎಲ್ಲಕ್ಕಿಂತ ಮುಖ್ಯವಾಗಿ “ನಾನು ಸರಿಯಾಗಿ ಅರ್ಥವಾಗಬೇಕಾದರೆ ಇನ್ನೂ ಐನೂರು ವರ್ಷಗಳಾದರೂ ಬೇಕಾಗುತ್ತದೆ’’ ಎಂದು ಹೇಳಿದ್ದು ನನ್ನ ಕಿವಿದೆರೆಗಳಲ್ಲಿ ನಿನ್ನೆ ಕೇಳಿದಂತೆ ಹಸಿರಾಗಿ ಮೊಳಗುತ್ತಿದೆ.

ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’ ಕಾದಂಬರಿ ಯನ್ನು ಕುರಿತ ನಿತ್ಯಾನಂದ ಶೆಟ್ಟಿಯವರ ಲೇಖನ ನಾನು ಈ ಮೇಲೆ ಹೇಳಿರುವ ಮಾತುಗಳಿಗೆ ಸಾಕ್ಷಿಯಾಗಿದೆ. ಶೆಟ್ಟಿಯವರು `ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಾಡು; ಓದಲು ತೊಡಗಿದವನ ಪಾಡು’ ಎಂಬುದನ್ನು ಮುಖ್ಯವಾಗಿಟ್ಟುಕೊಂಡು ಅದರ ಆಚೆಗೂ ಈಚೆಗೂ ಚಾಚಿಕೊಂಡಂತೆ ಮತ್ತೂ ಕೆಲವು ಮಾತುಗಳನ್ನು ಎಚ್ಚರಿಕೆ ಯಿಂದ ದಾಖಲಿಸಿದ್ದಾರೆ. ಶ್ರೀಯುತರ ಮುಖ್ಯ ವಿಚಾರ ‘ಮಲೆಗಳಲ್ಲಿ ಮದುಮಗಳು’ನಲ್ಲಿ ಕಾಡು ಮತ್ತು ಅದರೊಳಗೆ ಅವಿನಾಭಾವದಂತೆ ಹೆಣೆದುಕೊಂಡಿರುವ ಮಾನವ ಜೀವನದ ಅದ್ವಯ ಸ್ವರೂಪವನ್ನು ಅಂತಃಕರಣದಲ್ಲಿ ನಾಲ್ಕು ಕಾಲ ನಿಲ್ಲುವಂತೆ ಚಿತ್ರಿಸಿರುವ ಕ್ರಮ ಅವರ ಚಿಂತನೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ಆದರೆ ಆಚೆ-ಈಚೆ ಚಾಚಿಕೊಂಡಿರುವ ವಿಷಯಗಳಲ್ಲಿ ಅದೇ ಗಟ್ಟಿತನವನ್ನು ಕಾದುಕೊಂಡಿರುವಂತೆ ಕಾಣಿಸುವುದಿಲ್ಲ. ಉದಾಹರಣೆಗೆ:

‘ಹಾಗೆ ನೋಡಿದರೆ ಕನ್ನಡದಲ್ಲಿ ಇಂದಿಗೂ ಕುವೆಂಪು ಕುರಿತು ಒಂದೇ ಒಂದು ಒಳ್ಳೆಯ ಸಂಶೋಧನಾ ಕೃತಿ ಮೂಡಿ ಬಂದಿಲ್ಲ. ಆದರೆ ಜಿ.ಎಸ್. ಎಸ್. ಮತ್ತು ಸುಜನಾರ ನಂತರ ಕವಿ ಕುವೆಂಪು ಅವರ ಬಗ್ಗೆ ಬಹಳ ಮುಖ್ಯವಾದ ಕೆಲಸಗಳನ್ನು ಮಾಡಿದವರು ಡಿ.ಎಸ್.ನಾಗಭೂಷಣ ಒಬ್ಬರೇ ಎಂಬುದು ನನ್ನ ಅಭಿಮತ’. ಅನುಮಾನವಿಲ್ಲ ಡಿ.ಎಸ್.ಎನ್.ಲೋಹಿಯಾ ಮತ್ತು ಗಾಂಧೀಜಿ ಹಿನ್ನೆಲೆಯ ಗಟ್ಟಿ ಚಿಂತಕರು. ಹಾಗೆಯೇ ಜಿ.ಎಸ್.ಎಸ್. ಮತ್ತು ಸುಜನಾ ಕೂಡಾ ತಮ್ಮ ತಮ್ಮ ಮಾದರಿಗಳಲ್ಲಿ ಚೆನ್ನಾಗಿಯೇ ಬರೆದಿರುವವರು.

ಆದರೆ 1960-70ರ ದಶಕದಲ್ಲಿ ನವ್ಯ ವಿಮರ್ಶನ ಪರಿಕರಗಳನ್ನು ಬಳಸಿ ನವ್ಯ ವಿಮರ್ಶಕರು ಕುವೆಂಪು ಸಾಹಿತ್ಯ ಕುರಿತು ಮಾಡಿದ್ದ ಟೀಕೆ-ಟಿಪ್ಪಣಿಗಳಿಗೆ ನೇರವಾಗಿ ಪ್ರತಿಕ್ರಿಯಿಸಿದವರ ಪೈಕಿ ಈ ಮೂವರಲ್ಲಿ ಯಾರೂ ಇಲ್ಲ. ‘ಕಾನೂರು ಹೆಗ್ಗಡಿತಿ’ ಕಾದಂಬರಿಯನ್ನು ಕುರಿತು 1972ರಲ್ಲಿಯೇ 1700 ಪುಟಗಳ ಒಂದು ಸಂಶೋಧನಾತ್ಮಕ ಕೃತಿ `ಕಾನೂರು ಹೆಗ್ಗಡಿತಿ: ವಿವೇಚನೆ’ ಪ್ರಕಟವಾಗಿತ್ತು. ಕೆ.ಎಸ್.ಭಗವಾನ್ ಅವರು ಕುವೆಂಪು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಮುಖಾಮುಖಿಯಾಗಿ ಗಂಭೀರವಾಗಿ ಚರ್ಚಿಸಿ 300-400 ಪುಟಗಳಿಗೂ ಮಿಕ್ಕು ಬರೆದಿದ್ದಾರೆ. ಕಟ್ಟಾ ಕುವೆಂಪುವಾದಿ ಹರಿಹರಪ್ರಿಯ ಇದಕ್ಕಿಂತ ಕಡಿಮೆಯೇನೂ ಕೆಲಸ ಮಾಡಿಲ್ಲ. ಸಿ.ಪಿ.ಕೆ. ಭಾರತೀಯ ಕಾವ್ಯ ಮೀಮಾಂಸೆಯ ಪರಿಭಾಷೆಯನ್ನು ಬಳಸಿ ಮಾಡಿರುವ ವಿಮರ್ಶೆ ಕೂಡ ಗಮನಾರ್ಹ.

ಬೇಂದ್ರೆಯವರನ್ನು `ಭುವನದ ಭಾಗ್ಯ’ ಎಂದು ಬರೆದ ಜಿ.ಎಸ್.ಅಮೂರರು `ಕುವೆಂಪು-ಯುಗದ ಕವಿ’ ಎಂಬ ಕೃತಿಯನ್ನು ರಚಿಸಿದ್ದಾರೆ. ಓದಿ ನೋಡಿದರೆ ಅವರು ಯಾವ ಬಗೆಯ ಸ್ಕಾಲರ್ ಎನ್ನುವುದು ತಿಳಿದೀತು. ಒಟ್ಟಾರೆ ಕುವೆಂಪು ಸಾಹಿತ್ಯವನ್ನು ಕುರಿತ ವಿಮರ್ಶೆಯ ತೂಕದ ಬಗೆಗಿನ ಅಭಿಪ್ರಾಯ ಏನಾದರೂ ಇರಲಿ ಈ ಮೇಲಿನ ಮೂವರನ್ನುಳಿದು ಕುವೆಂಪು ಸ್ಕಾಲರ್ ಬೇರೆ ಯಾರೂ ಇಲ್ಲ ಎಂದು ಹೇಳುವುದು ಸಂಯಮದ ಬರವಣಿಗೆ ಎನಿಸುವುದಿಲ್ಲ ಎಂದು ನಮ್ರವಾಗಿಯೇ ಸೂಚಿಸಬಯಸುತ್ತೇನೆ.

`ಆ ಸಂಸ್ಕಾರ ಕೋಶದ ಖಜಾನೆಗೆ ಬೀಗದ ಕೈ ಮಾತ್ರವಾಗಿತ್ತು’. ಆವೊತ್ತಿನ ಸೂರ್ಯೋದಯ ಹಳೆ ಮನೆಯಾದರೇನಂತೆ?

* ಇನ್ನು ವಿಷಯ ಪ್ರವೇಶ ಮಾಡುತ್ತ ನಿತ್ಯಾನಂದ ಬಿ.ಶೆಟ್ಟಿಯವರು ಓದುವ ಸುಖದ ವಿಶೇಷತೆಯನ್ನು ಗೌರವಿಸುತ್ತ ಕರಣ ಮುಖ್ಯ ನಾಟಿ ಹಾಕುವ ಕುಪ್ಪಸ ಹೊಲೆಯುವ ಕಸುಬುಗಳ ಸ್ವರೂಪವನ್ನೂ ಪ್ರಸ್ತಾಪ ಮಾಡಿ, ‘ನಾಟಿ ಹಾಕೋದು ನಮ್ಮ ಬಾಹ್ಯಕರಣದ ಕೆಲಸ, ಓದೋದು, ಓದೋದನ್ನು ಅರ್ಥ ಮಾಡಿಕೊಳ್ಳೋದು ಅಂತಃಕರಣದ ಕೆಲಸ… ಆದರೆ ಈ ಬಲು ಬಗೆಯ ಕೆಲಸಗಳಲ್ಲಿ ಓದುವ ಅರ್ಥಮಾಡಿಕೊಳ್ಳುವ ಕೆಲಸಗಳು ಹೆಚ್ಚು ಸಂಕೀರ್ಣವಾದ ವಿಷಯಗಳು ಎಂಬುದನ್ನಷ್ಟೇ ಇಲ್ಲಿ ಹೇಳ ಬಯಸುತ್ತೇನೆ’ ಎನ್ನುತ್ತಾರೆ.

ಕರಣ ಮತ್ತು ಅಂತಃಕರಣಗಳನ್ನು ಪರಸ್ಪರ ಪೂರಕ ಮಾಡಿಕೊಂಡು ಮನಸ್ಸಿನ ಎಲ್ಲ ಮಗ್ಗಲುಗಳ ಏರಿಳಿತಗಳನ್ನು ಇನ್ನಿಲ್ಲದ ಪರಿಯಲ್ಲಿ ಶೋಧಿಸಿದ ಗಾಂಧೀಜಿಯ `ಚರಕ’ ರೂಪಕಕ್ಕೆ ಸರಿಸಾಟಿ ಜಗತ್ತಿನಲ್ಲಿ ಬೇರೆ ಯಾವುದಾದರೂ ಇರುವುದಾದರೆ ಅದು ಕುವೆಂಪು ಅವರ ಮದುಮಗಳುವಿನ ಈ ಉದಾಹರಣೆಯಲ್ಲಿದೆ.

ಗಮನಿಸಿ: “ಮಳೆ ತೊಯ್ದು ಮಲೆನಾಡಿನ ಮೇಲೆ ಮೂಡಿದೆಳೆ ಬಿಸಿಲಿಗೆ ಮೈಯೊಡ್ಡಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಭವಿಸಿದ ಸಂತೋಷಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು ಆ `ಅಸ್ಕೃತಿ’. ಯಾವ ಯಾವ ಕಾಲದಲ್ಲಿ ಯಾವ ಯಾವ ರೂಪದಲ್ಲಿ, ಯಾವ ಯಾವ ಸನ್ನಿವೇಶದಲ್ಲಿ, ಯಾವ ಸಾಗರ ತೀರದಲ್ಲಿ, ಯಾವ ಪರ್ವತ ಶಿಖರದಲ್ಲಿ, ಯಾವ ಅರಣ್ಯ ಕುಂಜ ಸೀಮೆಯಲ್ಲಿ ಅಂತಹ ಸೂರ್ಯೋದಯದ ಸೊಂಪನ್ನು ಹಿಂದೆ ಎನಿತು ಸಾರಿ ಅನುಭವಿಸಿದ್ದರೋ ಏನೋ! `ಆ ಸಂಸ್ಕಾರ ಕೋಶದ ಖಜಾನೆಗೆ ಬೀಗದ ಕೈ ಮಾತ್ರವಾಗಿತ್ತು’. ಆವೊತ್ತಿನ ಸೂರ್ಯೋದಯ ಹಳೆ ಮನೆಯಾದರೇನಂತೆ? ಹಂದಿಯೊಡ್ಡಿಯ ಬಳಿಯಾದರೇನಂತೆ? ಅಕ್ಷರ ಹೀನ ಅಸಂಸ್ಕೃತ ಒಕ್ಕಲಿಗರಾದರೇನಂತೆ? ಮುಪ್ಪಡಿಸಿದ್ದರೇನಂತೆ? ಸುಬ್ಬಣ್ಣ ಹೆಗ್ಗಡೆಯವರೂ ವಿಶ್ವಪ್ರಜೆ.

ಹಂದಿ, ಕುರಿ, ಕೋಳಿ, ಮರ, ಗಿಡ, ಆಕಾಶ, ಹಾಡುತ್ತಿದ್ದ ಕಾಡುಹಕ್ಕಿಗಳ ಹಿಂಡು, ನೆರೆಹೊರೆ ಎಲ್ಲದರ ಮೇಲೆಯೂ ಅಕ್ಕರೆವುಕ್ಕಿತು. ಹೆಗ್ಗಡೆಯವರ ಜೀವಮಾನ ಕಟ್ಟಡದಲ್ಲಿ ಆ ಒಂದು ಕ್ಷಣದ ಬಾಳು ಗೋಪುರದ ಕಳಶ ತುದಿಯ ಚಿನ್ನದ ಡೆಂಕಣಿಯಾಗಿ ಸ್ವರ್ಗದೊಡನೆ ಸರಸವಾಡಿತು.”

ಬೆನ್ನಿಗೆ ಬಿದ್ದ ಬಿಸಿಲು ನಾಲಿಗೆಗೆ ಬೀಳುವ ಜೇನಾಗಿತ್ತು. ಹೆಗ್ಗಡೆಯವರು ‘ಸ್ ಸ್ ಸ್ ಅಯ’ ಎನ್ನುತ್ತಾ ಮುಂಪಾಡುವ ರೀತಿಯಲ್ಲಿ ಬೆನ್ನು ನೀವಿಕೊಂಡರು. ಲೋಕವೆಲ್ಲ ಅಶೋಕವಾಗಿ ಸುಖಮಯವಾಯಿತು. ಮನದಲ್ಲಿ ವಿಶ್ವಮೈತ್ರಿ ಮೂಡಿತು. ಹಂದಿ, ಕುರಿ, ಕೋಳಿ, ಮರ, ಗಿಡ, ಆಕಾಶ, ಹಾಡುತ್ತಿದ್ದ ಕಾಡುಹಕ್ಕಿಗಳ ಹಿಂಡು, ನೆರೆಹೊರೆ ಎಲ್ಲದರ ಮೇಲೆಯೂ ಅಕ್ಕರೆವುಕ್ಕಿತು. ಹೆಗ್ಗಡೆಯವರ ಜೀವಮಾನ ಕಟ್ಟಡದಲ್ಲಿ ಆ ಒಂದು ಕ್ಷಣದ ಬಾಳು ಗೋಪುರದ ಕಳಶ ತುದಿಯ ಚಿನ್ನದ ಡೆಂಕಣಿಯಾಗಿ ಸ್ವರ್ಗದೊಡನೆ ಸರಸವಾಡಿತು.”

ಈ ಮೇಲಿನ ಸಾಲುಗಳ ಜತೆಗೆ ಹಿಂದಿನ ಒಂದು ಪುಟದಷ್ಟಿರುವ ದಿವ್ಯ ಸೂರ್ಯೋದಯದ ಅನುಭವವನ್ನು ಕೂಡಿಸಿಕೊಂಡು ಓದಿನೋಡಿ. ಇದಕ್ಕೆ ಸಮನಾದ ಅನುಭವ ವೇದಕಾಲೀನ ಋಷಿಗಳಿಗೂ ಆಗಿತ್ತೋ ಏನೋ! ಆದ್ದರಿಂದ ನಾಟಿ ಹಾಕುವ ಕ್ರಿಯೆಯ ಉದ್ದೇಶ ತನ್ನ ಅಂತಿಮ ಪರಿಣಾಮದಲ್ಲಿ ಭಗವತ್ ಶಕ್ತಿ ಸಾಕ್ಷಾತ್ಕಾರವಾಗುವುದರಲ್ಲಿ ಆಶ್ಚರ್ಯವಿಲ್ಲ. ಕರಣಗಳೇ ಅಂತಃಕರಣಕ್ಕೆ ದಾರಿದೀಪ.

*

ಮುಖ್ಯವಾದ ಮತ್ತೊಂದು ಸಂಗತಿ ಎಂದರೆ ಕಾದಂಬರಿಯಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಗಡ್ಡದಯ್ಯನ ಪ್ರಸಂಗ. “ಸಾಮಾನ್ಯ ಮನುಷ್ಯನೊಬ್ಬನ ಉಪಸ್ಥಿತಿಯನ್ನು ದಿವ್ಯ ಉಪಸ್ಥಿತಿಯನ್ನಾಗಿ ಕುವೆಂಪು ರೂಪಾಂತರಗೊಳಿಸಬಲ್ಲರು. ನಾನು ಈ ಮಾತನ್ನು ಕಾದಂಬರಿ ಯ ಗಡ್ಡದಯ್ಯನನ್ನು ನೆನಪು ಮಾಡಿಕೊಂಡು ಹೇಳುತ್ತಿದ್ದೇನೆ” (ಸಮಾಜಮುಖಿ ಪುಟ 67). ಮುಕುಂದಯ್ಯನ ಸಾಮಾನ್ಯ ಚೇತನವನ್ನೂ ಅಸಾಮಾನ್ಯ `ದಿವ್ಯ’ ಚೇತನವನ್ನಾಗಿ ಮಾರ್ಪಡಿಸಿದ್ದು, ಸಕಲಾದರ್ಶಕ್ಕೂ ಮೂಲ ಸೆಲೆ-ನೆಲೆಯೆನಿಸಿರುವ ರುದ್ರರಮಣೀಯ ಕಾಡೇ ಹೊರತು ಗಡ್ಡದಯ್ಯನ ಭವಿಷ್ಯ ನುಡಿಗಳಲ್ಲ. ಮುಕುಂದಯ್ಯನ ಸರ್ವಪ್ರಯತ್ನಕ್ಕೂ ನೆರವಾಗುವುದು ಕಾಡು.

ಚರ್ಚೆಗೆ ಕೈ ಹಚ್ಚದೆ ಒಂದೇ ಮಾತಿನಲ್ಲಿ ಹೇಳುವುದಾದರೆ ವಸ್ತು ಮತ್ತು ಪ್ರತಿಪಾದಿಸುವ ಮೌಲ್ಯಗಳ ದೃಷ್ಟಿಯಿಂದ `ಮಲೆಗಳಲ್ಲಿ ಮದುಮಗಳು’ ಮುಗಿದಲ್ಲಿಂದ ‘ಕಾನೂರು ಹೆಗ್ಗಡಿತಿ’ ಆರಂಭವಾಗುತ್ತದೆ.

ನನ್ನ ದೃಷ್ಟಿಯಿಂದ ಹೇಳುವುದಾದರೆ ಮದುಮಗಳುವಿನಿಂದ ಗಡ್ಡದಯ್ಯನನ್ನು ಅನಾಮತ್ ಎತ್ತಿ ಹೊರಗಿಟ್ಟರೆ ಕಾದಂಬರಿಗೂ ಕ್ಷೇಮ, ಓದುಗನಿಗೂ ಕ್ಷೇಮ. ಕಾದಂಬರಿಗೆ ಕ್ಷೇಮ ಯಾಕೆಂದರೆ ಕಾದಂಬರಿ ಯ ಉಳಿದ ಪಾತ್ರಗಳಂತೆ ಗಡ್ಡದಯ್ಯ ಕಾಡಿನ ಬದುಕಿನೊಂದಿಗೆ ಅದ್ವಯವಾಗುವುದಿಲ್ಲ. ಒಳನೇಯ್ಗೆಯಲ್ಲಿ ಬಾಳುವುದಿಲ್ಲ. ಓದುಗನಿಗೂ ಕ್ಷೇಮ ಯಾಕೆಂದರೆ ಗಡ್ಡದಯ್ಯನ ಮೂಲಕ ಮುಕುಂದಯ್ಯ ದೇವಯ್ಯರಿಗೆ ಕುವೆಂಪು ಹೇಳಿಸುವ ಭವಿಷ್ಯ ಕಥನ ಕಾದಂಬರಿಯ ಒಳಮನೆಯಲ್ಲಿ ಈಗಾಗಲೆ-ಚಿನ್ನಮ್ಮ- ಮುಕುಂದಯ್ಯರ ಬಾಲ್ಯ ಕಥನದಲ್ಲಿ, ದೊಡ್ಡಣ್ಣ ಹೆಗ್ಗಡೆಯ ಸಾವಿನ ವಿನ್ಯಾಸದಲ್ಲಿ, ಶಿಶು ಚೆಲುವಯ್ಯ ಸುಬ್ಬಣ್ಣ ಹೆಗ್ಗಡೆ ರಂಗಮ್ಮ ಹೆಗ್ಗಡಿತಿಯರು ಅನುಭವಿಸುವ ಅಲೌಕಿಕತೆಯಲ್ಲಿ ಹೆಚ್ಚು ಮಾರ್ಮಿಕವಾಗಿ ಸೂಚಿತವಾಗಿದೆ. ಹೇಗೆ ನೋಡಿದರೂ ಕಾದಂಬರಿಯಲ್ಲಿ ಕ್ಷೀರ ಸಾಗರದಲ್ಲಿನ ಇದ್ದಲಿನಂತೆ ಗಡ್ಡದಯ್ಯ ನನಗೆ ಕಾಣಿಸುತ್ತಾನೆ. ಮಕ್ಕಳಿಗೆ ಗಾಳಿಯಲ್ಲಿ ಹೆಕ್ಕಿ ಕೊಡುವ ಹಣ್ಣುಗಳಂತೂ ಓದುಗನನ್ನೂ ಹುಬ್ಬೇರಿಸುವಂತೆ ಮಾಡುತ್ತವೆ. ದ್ವಿರುಕ್ತಿ ದೋಷವೂ ಉಂಟಾಗುತ್ತದೆ.

ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ ಹುಟ್ಟಿದ 30 ವರ್ಷಗಳ ನಂತರ, ಶ್ರೀರಾಮಾಯಣದರ್ಶನಂ ಹುಟ್ಟಿದ 20 ವರ್ಷಗಳ ನಂತರ ಸಂಭವಿಸಿದ್ದು. ಆ ಎರಡಕ್ಕಿಂತಲೂ ಹೆಚ್ಚು ನಿರ್ದುಷ್ಟವಾಗಿ ಫಲಿಸಿದೆ ಎಂದು ಹೇಳುವ ಹುಮ್ಮಸ್ಸನ್ನು ಈ ಲೇಖನ ತೋರಿಸುತ್ತದೆ. ಇಲ್ಲಿ ಅಲ್ಲಿಯ ಪುರುಷೋತ್ತಮನಾಗಲಿ, ಮರ್ಯಾದಾ ಪುರುಷೋತ್ತಮನಾಗಲಿ, ಮಹಾಸತಿಯಾಗಲೀ ಇಲ್ಲ ಎನ್ನುವುದೇ ಈ ಕಾದಂಬರಿಯ ಹೆಗ್ಗಳಿಕೆ ಎಂಬಂತೆ ಪ್ರತಿಬಿಂಬಿಸುವ ಉತ್ಸಾಹದಲ್ಲಿ ಅಲ್ಲಿಯ ಆ ಮೌಲ್ಯಗಳನ್ನು ಕಡೆಗಣಿಸಿದಂತೆ ಶೆಟ್ಟಿಯವರು ಬರೆಯುತ್ತಾರೆ. ಚರ್ಚೆಗೆ ಕೈ ಹಚ್ಚದೆ ಒಂದೇ ಮಾತಿನಲ್ಲಿ ಹೇಳುವುದಾದರೆ ವಸ್ತು ಮತ್ತು ಪ್ರತಿಪಾದಿಸುವ ಮೌಲ್ಯಗಳ ದೃಷ್ಟಿಯಿಂದ `ಮಲೆಗಳಲ್ಲಿ ಮದುಮಗಳು’ ಮುಗಿದಲ್ಲಿಂದ ‘ಕಾನೂರು ಹೆಗ್ಗಡಿತಿ’ ಆರಂಭವಾಗುತ್ತದೆ.

ಸಹಜವಾಗಿಯೇ ಅಲ್ಲಿಯ ಮುಕುಂದಯ್ಯ ಇಲ್ಲಿಯ ಹೂವಯ್ಯನಾಗಿ ವಿಕಾಸ ಹೊಂದುವುದು ಪ್ರಕೃತಿ ಧರ್ಮ. ಅಲ್ಲಿಯ ಚಿನ್ನಮ್ಮ ಇಲ್ಲಿಯ ಸೀತೆಯಾಗಿ ಪರಿಣಾಮಗೊಳ್ಳುವುದೂ ಗಮನಾರ್ಹ. ಕಾನೂರು ಹೆಗ್ಗಡಿತಿಯ ಕಡೆಯ ಅಧ್ಯಾಯದಲ್ಲಿ ಗುಡ್ಡದ ಮೇಲೆ ನಡೆಯುತ್ತಿರುವುದು ಬುದ್ಧ ಜಯಂತಿಯೇ ಹೊರತು ಧರ್ಮಾಚರಣೆಯಲ್ಲ. ಹೂವಯ್ಯ ಮತ್ತು ಸೀತೆಯರು ಪರಮಹಂಸ- ಶಾರದಾ ಮಾತೆಯರ ಪ್ರತಿನಿಧಿಗಳಂತೆ ಜಯಂತಿ ಹಬ್ಬ ಆಚರಿಸುತ್ತಾರೆ. ವೆಂಕಪ್ಪ ಜೋಯಿಸರ ಮಗನೂ ಅಲ್ಲಿ ಸೇರಿರುವುದು ಅಲ್ಲಿಯ ವಿಶೇಷ. ಪರಮಹಂಸರಲ್ಲಿ ಭಗವಾನ್ ಬುದ್ಧ ಕೂಡಾ ಐಕ್ಯನಾಗಿದ್ದಾನಲ್ಲವೇ? ಇದರಲ್ಲಿ ಶುದ್ಧಾಶುದ್ಧ ಮರ್ಯಾದೆಯ ಪ್ರಶ್ನೆ ಉದ್ಭವಿಸುವುದಿಲ್ಲ.

ಇಷ್ಟಕ್ಕೂ ಪಾತಿವ್ರತ್ಯ ಎಂದರೇನು? ತನ್ನ ಪುರುಷ ವಿನಾ ಉಳಿದ ಪುರುಷರನ್ನು ಕಾಯಾ ವಾಚಾ ಮನಸಾ ಸೋದರಿಕೆಯ ಮಟ್ಟದಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳುವುದು. ಅದೇ ಪ್ರಕೃತಿ `ಹೆಣ್ಣಿಗೆ’ ದಯೆಗರೆದಿರುವ ಅದ್ವಯ ಸಿದ್ಧಾಂತ. ಮಾನವ ಜೀವನದ ಅದರ ಅವ್ಯವಸ್ಥೆಗೆ ಕಾರಣಗಳು ನೂರು.

`ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಸೀತೆಯ ಪಾತಿವ್ರತ್ಯದ ನಿಷ್ಠೆಯನ್ನು `ಮಹಾಸತಿ’ ಎಂದು ವ್ಯಂಗ್ಯ ಮಾಡುವುದು ಕುವೆಂಪು ಅವರ ಮೌಲಿಕ ಆಶಯಗಳನ್ನೇ ಅನಗತ್ಯ ಅಣಕ ಮಾಡಿದಂತಾಗುತ್ತದೆ. ಮದುಮಗಳು ನಾಲ್ಕು ಬಗೆಯ ಪಾತಿವ್ರತ್ಯ ಪರಿಕಲ್ಪನೆಗಳನ್ನು ಆಧ್ಯಾತ್ಮಿಕ ವಿಕಾಸವಾದದ ಹಿನ್ನೆಲೆಯಲ್ಲಿ ಮಂಡಿಸುತ್ತದೆ. ಪರಮಹಂಸರ ದೈವ ಸಾಕ್ಷಾತ್ಕಾರಕ್ಕೆ ಯಾವ ರೀತಿಯಿಂದಲೂ ಕಡಿಮೆಯಾದುದಲ್ಲ ಸೀತೆ ಮಂಡೋದರಿಯರ ಪಾತಿವ್ರತ್ಯದ ಸಾಕ್ಷಾತ್ಕಾರ. ಅದೊಂದು ಆದರ್ಶ. ಏರುವುದಕ್ಕಾಗಿಯೇ ಇರುವ ಬೆಟ್ಟ. ಇಷ್ಟಕ್ಕೂ ಪಾತಿವ್ರತ್ಯ ಎಂದರೇನು? ತನ್ನ ಪುರುಷ ವಿನಾ ಉಳಿದ ಪುರುಷರನ್ನು ಕಾಯಾ ವಾಚಾ ಮನಸಾ ಸೋದರಿಕೆಯ ಮಟ್ಟದಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳುವುದು. ಅದೇ ಪ್ರಕೃತಿ `ಹೆಣ್ಣಿಗೆ’ ದಯೆಗರೆದಿರುವ ಅದ್ವಯ ಸಿದ್ಧಾಂತ. ಮಾನವ ಜೀವನದ ಅದರ ಅವ್ಯವಸ್ಥೆಗೆ ಕಾರಣಗಳು ನೂರು.

*

ಇಲ್ಲಿ ಮತ್ತೊಂದು ಪರಿಗಣಿಸಬೇಕಾದ ಸಂಗತಿಯೆಂದರೆ ರಾಮಾಯಣ ದರ್ಶನಕ್ಕೂ ಮದುಮಗಳುವಿಗೂ ಗಂಟು ಹಾಕಿಕೊಂಡು ವಿಮರ್ಶೆ ಮಾಡುವ ವಿಧಾನ. ರಾಮಾಯಾಣ ದರ್ಶನದಂಥ ಮಹಾತ್ವಾಕಾಂಕ್ಷೆಯ ಕೃತಿಯನ್ನು ರಚಿಸಿದ ಮೇಲೂ ಕುವೆಂಪು ಮದುಮಗಳನ್ನು ಏಕೆ ಬರೆದರು? ಈ ಪ್ರಶ್ನೆ ಜಿ.ಎಸ್. ಎಸ್. ತೇಜಸ್ವಿ, ಡಿ.ಎಸ್.ಎನ್. ಮುಂತಾದವರನ್ನು ಕಾಡಿದೆ. ಇಲ್ಲಿ ಗಮನಿಸಬೇಕಾದ್ದೇನೆಂದರೆ ಮಲೆಗಳಲ್ಲಿ ಮದುಮಗಳು ರಾಮಾಯಣ ದರ್ಶನಕ್ಕಿಂತ ಮೊದಲೇ ಅದರೆಲ್ಲ ದಾರ್ಶನಿಕ ಆಶಯಗಳೊಡನೆ ರೂಪುಗೊಂಡಿತ್ತು.

ಬಾಲ್ಯದ ಭವಿಷ್ಯತ್ಕಥನ ಕೂಡ ಬಂದಿರುವುದು, ಇದಕ್ಕಿಂತ ನಾವು ಇನ್ನೂ ಯಾರೂ ಗುರುತಿಸದಿರುವ ಕಾದಂಬರಿಯ ಮಹಾಪಯಣದ ಪಾತ್ರಗಳಲ್ಲೊಂದಾದ ನಾಗಕ್ಕ-ವೆಂಕಟಪ್ಪ ನಾಯಕರ ಮನೆಯಲ್ಲಿ ಮನಸ್ವೀ ತಂಗಲು ಅಣಿಯಾಗುತ್ತಿರುವುದು ಇಲ್ಲಿಯ 81ನೆಯ ಪುಟದ ವಿಚಾರವಾಗಿರುವುದು ಗಣನೀಯ ಸಂಗತಿಯಾಗಿದೆ.

ಈ ಮಹತ್ವದ ಕಾದಂಬರಿಯ ಮೊದಲ 81 ಪುಟಗಳು ಬರೆದು ಪೂರೈಕೆಯಾಗಿದ್ದವು ಮಾತ್ರವಲ್ಲ 1936ರಲ್ಲೇ `ಅರ್ಥಸಾಧಕ’ ಎಂಬ ಪತ್ರಿಕೆಯಲ್ಲಿ ಆ 81 ಪುಟಗಳು ಅಚ್ಚಾಗಿದ್ದುದನ್ನು ತಾವು ಓದಿರುವುದಾಗಿ ಸುಜನಾ ಹೇಳಿದ್ದಾರೆ. ಅವರು ಬರೆಯುತ್ತಾರೆ, “ಅಂದು ಕಲ್ಪಿಸಿಕೊಂಡಿದ್ದ ನಾಯಿಗುತ್ತಿ, ಹುಲಿಯನಾಯಿ, ಸುಬ್ಬಣ್ಣ ಹೆಗ್ಗಡೆ-ಅವರ ಹಂದಿ ಕೋಳಿ ಹುರಿ ಹಾಡ್ಯ- ಅಂಕಕ್ಕ, ಕಾವೇರಿ, ಕಣ್ಣಾಪಂಡಿತರು, ಕರಿಮೀನುಸಾಬಿ ಇತ್ಯಾದಿ ಪಾತ್ರಗಳನ್ನೆಲ್ಲ ಊನಗೊಳಿಸಿದೆ ಅದೇ ಜೀವದ್ರವದಿಂದ ಕೂಡಿಕೊಂಡು ಬೆಳೆಸಿರುವುದು, ಕಾದಂಬರಿಯ ಉದ್ದಕ್ಕೂ ನಡೆಸಿರುವುದು ಅಸಾಧಾರಣ ಧಾರಣ ಶಕ್ತಿಯನ್ನಷ್ಟೆ ಅಲ್ಲದೆ ಸೃಜನಶೀಲತೆಯ ಪಕ್ವತಾರುಣ್ಯವನ್ನು ಸೂಚಿಸುತ್ತದೆ” (ಸುಜನಾ- ‘ಕುವೆಂಪು ಬೇಂದ್ರೆ ಕಾರಂತ’ ಪು.17). ಈ ಎಲ್ಲಕ್ಕಿಂತ ಹೆಚ್ಚಾಗಿ ಮುಕುಂದಯ್ಯ- ಚಿನ್ನಿಯರ ಬಾಲ್ಯದ ಭವಿಷ್ಯತ್ಕಥನ ಕೂಡ ಬಂದಿರುವುದು, ಇದಕ್ಕಿಂತ ನಾವು ಇನ್ನೂ ಯಾರೂ ಗುರುತಿಸದಿರುವ ಕಾದಂಬರಿಯ ಮಹಾಪಯಣದ ಪಾತ್ರಗಳಲ್ಲೊಂದಾದ ನಾಗಕ್ಕ-ವೆಂಕಟಪ್ಪ ನಾಯಕರ ಮನೆಯಲ್ಲಿ ಮನಸ್ವೀ ತಂಗಲು ಅಣಿಯಾಗುತ್ತಿರುವುದು ಇಲ್ಲಿಯ 81ನೆಯ ಪುಟದ ವಿಚಾರವಾಗಿರುವುದು ಗಣನೀಯ ಸಂಗತಿಯಾಗಿದೆ.

ಇದೆಲ್ಲದರ ಜತೆಗೆ ಮದುಮಗಳು ಕಾದಂಬರಿಯಲ್ಲಿ ಬರುವ ಪಾತ್ರಗಳ ಊರುಗಳ ಮನೆಗಳ ತೋಟ-ತುಡಿಕೆಗಳ ದಾರಿಯನ್ನು ಸೂಚಿಸುವ ಪ್ರಾದೇಶಿಕ ಭೂಪಟವನ್ನು ಕುವೆಂಪು ಕೃತಿ ರಚನೆಯ 30 ವರ್ಷ ಮೊದಲೇ ಸಿದ್ಧಪಡಿಸಿಕೊಂಡಿದ್ದರು. ವರ್ಷಗಳ ನಂತರ ಅದನ್ನು ಹುಡುಕಿ ಸಿಗದೆ ತಾರಿಣಿಗೆ ಹುಡುಕಲು ಹೇಳಿದ್ದರೆಂದೂ ಕೊನೆಗೆ ಆ ಭೂಪಟ ಕುವೆಂಪು ಅವರಿಗೇ ಸಿಕ್ಕಿ ಅದನ್ನು ತಾರಿಣಿಗೆ ತೋರಿಸಿದರೆಂದೂ, ಮುಂದೆ ಮದುಮಗಳನ್ನು ಅದನ್ನೇ ಆಧಾರ ವಾಗಿಟ್ಟುಕೊಂಡು ಬರೆದರೆಂದು ತಾರಿಣಿ ದಾಖಲಿಸಿದ್ದಾರೆ (ಮಗಳು ಕಂಡ ಕುವೆಂಪು, ಪು. 215-218, ಪುಸ್ತಕ ಪ್ರಕಾಶನ-2006). ಇತ್ತೀಚೆಗಿನ ರೇಡಿಯೋ ಸಂದರ್ಶನದಲ್ಲೂ ಅದನ್ನೂ ಪುನರುಚ್ಚರಿಸಿದರು.

ಈ ಹಿನ್ನೆಲೆಯಿಂದ ನೋಡಿದಾಗ ಮದುಮಗಳ ಪ್ರಭಾವವೇ ರಾ.ದರ್ಶನದ ಮೇಲೆ ಆಗಿದ್ದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇವೆರಡೂ ಪರಸ್ಪರ ಬಿಗಿಯಾಗಿ ಹೆಣೆದುಕೊಂಡಿರುವ ಕಲಾಕೃತಿಗಳು. ಇದರ ನಡುವೆ ಮಹಾಕಾವ್ಯದ ಜತೆ ಕಾದಂಬರಿಯನ್ನು ಹೋಲಿಸಬಾರದೆಂಬ ಮಾತೊಂದು ಕುವೆಂಪು ಅವರಲ್ಲಿದೆ.

ಈ ಕಾದಂಬರಿಯು ಎಬ್ಬಿಸುವ ಜೀವನಾವಶ್ಯಕ ಅಲೆಗಳು ಅಸಾಧಾರಣವಾದವು, ಕಾಲದೇಶಾತೀತವಾದವು.

Leave a Reply

Your email address will not be published.