ಮಲೆನಾಡಿನ ಆಲೇಮನೆ ಗಮ್ಮತ್ತೇ ಬೇರೆ!

ಮೈಸೂರು-ಮಂಡ್ಯ ಕಡೆಯ ಹಳ್ಳಿಗಳಲ್ಲಿ ವರ್ಷಪೂರ್ತಿ ನೂರಾರು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟನ್ನುಗಟ್ಟಲೇ ಕಬ್ಬಿನ ರಾಶಿಗಳ ಆಲೇಮನೆಗಳು ನಡೆಯುತ್ತಿದ್ದರೂ ಅವು ತುಂಬ ಯಾಂತ್ರಿಕ ಹಾಗೂ ವ್ಯಾವಹಾರಿಕ. ಆದರೆ ಮಲೆನಾಡಿನಲ್ಲಿ ಹಾಗಲ್ಲ…

ಶಿರಸಿಯ ಸಮೀಪದ ಹಳ್ಳಿಗೆ ನೆಂಟರ ಮನೆಯ ಸಮಾರಂಭಕ್ಕೆಂದು ಹೋಗಿದ್ದಾಗ ಹತ್ತಿರದ ಇನ್ನೊಂದು ಹಳ್ಳಿಯಲ್ಲಿ ಆಲೇಮನೆಯೊಂದು ನಡೆಯುತ್ತಿರುವ ಸುದ್ದಿ ತಿಳಿಯಿತು. ಅಡಿಕೆಸೋಗೆಯ ಚಪ್ಪರದ ತಣ್ಣನೆಯ ನೆರಳಿನಲ್ಲಿ, ನೆಂಟರಿಷ್ಟರೊಡನೆ ಕಥೆ ಹೊಡೆಯುತ್ತಾ ಕುಳಿತು ಚುಡುವಾ-ಅವಲಕ್ಕಿ ಮೆಲ್ಲುತ್ತ ಶುಂಠಿ-ಲಿಂಬು ಸೇರಿಸಿ ಅರೆದ ತಾಜಾ ಕಬ್ಬಿನ ಹಾಲನ್ನು ಚೊಂಬುಗಟ್ಟಲೆ ಹೊಟ್ಟೆಗಿಳಿಸುತ್ತಾ, ದೊನ್ನೆಯಾಕಾರದಲ್ಲಿ ಮಡಚಿದ ಬಾಳೆಲೆಯಲ್ಲಿ ಬಿಸಿಬಿಸಿ ಜೋನಿಬೆಲ್ಲವನ್ನು ಹಾಕಿ ಸವಿಯುತ್ತಾ ಆಹಾ… ಆ ಸೊಬಗಿನ ರಸಾಸ್ವಾದವನ್ನು ಮಾತಿನಲ್ಲಿ ಹಿಡಿದಿಡುವುದೇ ಕಷ್ಟ!

ಬಾಲ್ಯದಲ್ಲಿ ಪ್ರತಿ ವರ್ಷವೂ ತಂದೆಯ ಹುಟ್ಟೂರಾದ ಉಂಬಳೇಕೊಪ್ಪಕ್ಕೆ ಆಲೇಮನೆಗೆಂದು ಹೋಗಿ ಸಂಭ್ರಮಿಸುತ್ತಿದ್ದ ಆ ಸುಂದರ ಕ್ಷಣಗಳು ಒಮ್ಮೆಲೇ ಮನಸ್ಸಿನಲ್ಲಿ ಮೂಡಿ ‘ಆಲೇಮನೆಗೆ ಹೋಗಿ ಬರುವುದೇ ಸರಿ’ ಎಂದು ಹೊರಟೇ ಬಿಟ್ಟೆವು. ಸಿಟಿಯಲ್ಲೇ ಹುಟ್ಟಿ ಬೆಳೆದ ನನ್ನ ಮಕ್ಕಳಿಗೆ ಒಮ್ಮೆಯಾದರೂ ಮಲೆನಾಡಿನ ಆಲೇಮನೆಯ ಸೊಬಗನ್ನು ತೋರಿಸಬೇಕು ಅನ್ನುವ ಹಂಬಲವೂ ಇತ್ತು. ಹಾಗಾಗಿ ಸಮಾರಂಭಕ್ಕೆಂದು ದೂರದೂರಿನಲ್ಲಿದ್ದ ಮಕ್ಕಳೂ ನಮ್ಮೊಡನೆ ಬಂದಿದ್ದು, ಅವರಿಗೂ ಮಲೆನಾಡಿನ ಆಲೇಮನೆಯನ್ನು ದರ್ಶಿಸುವ ಸುಯೋಗ ಸಿಕ್ಕಿದ್ದು ನನ್ನ ದುಪ್ಪಟ್ಟುಸಂತಸಕ್ಕೆ ಕಾರಣವಾಯಿತು.

ಮೈಸೂರು-ಮಂಡ್ಯದ ಕಡೆಯ ಹಳ್ಳಿಗಳಲ್ಲಿ ವರ್ಷಪೂರ್ತಿ ನೂರಾರು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟನ್ನುಗಟ್ಟಲೇ ಕಬ್ಬಿನ ರಾಶಿಗಳ ಆಲೇಮನೆಗಳು ನಡೆಯುತ್ತಿದ್ದರೂ ಅವು ತುಂಬ ಯಾಂತ್ರಿಕ ಹಾಗೂ ವ್ಯಾವಹಾರಿಕ; ಅಲ್ಲಿ ತಯಾರಾಗುವುದೂ ನಾವು ಅಂಗಡಿಗಳಲ್ಲಿ ಕೊಳ್ಳುವ ಬೆಲ್ಲದ ಅಚ್ಚು-ಉಂಡೆಗಳು. ಮಲೆನಾಡಿನಲ್ಲಿ ಹಾಗಲ್ಲ; ತುಂಬ ಆತ್ಮೀಯ ಪರಿಸರ. ಆಲೇಮನೆ ನಡೆಯುತ್ತಿದ್ದಾಗ ಯಾರು ಬೇಕಾದರೂ ಎಷ್ಟು ಹೊತ್ತಿಗಾದರೂ ಬಂದು ಪರಿಚಯ ಮಾಡಿಕೊಂಡು ತಾಜಾ ಕಬ್ಬಿನ ಹಾಲನ್ನು ಕುಡಿದು, ಬಿಸಿಬೆಲ್ಲ-ಕಬ್ಬನ್ನು ತಿಂದು, ಮನೆಗೂ ಸ್ವಲ್ಪ ಕೊಂಡೊಯ್ಯಬಹುದಾಗಿತ್ತು.

ಅಲ್ಲಿ ತಮ್ಮ ಮನೆಯ ಖರ್ಚಿಗೆ ಬೇಕಾಗುವಷ್ಟು ಮಾತ್ರ ಡಬ್ಬಿಯ ಬೆಲ್ಲ, ಜೋನಿ ಬೆಲ್ಲಗಳನ್ನು ಮಾಡಿಕೊಳ್ಳುವವರೇ ಹೆಚ್ಚು. ಎಲ್ಲೋ ಕೆಲವರು ಮಾತ್ರ ಹತ್ತಾರು ಡಬ್ಬಿಗಳನ್ನು ತಮ್ಮ ನೆಂಟರಿಷ್ಟರಿಗೋ ಸ್ನೇಹಿತರಿಗೋ ಮಾರುತ್ತಾರೆ. ಹಾಗಾಗಿ ಕಾಡಿನ ನಡುವಿನ ಕೊಪ್ಪವೆಂಬ ಪುಟ್ಟಹಳ್ಳಿಯಲ್ಲಿ ಶಿವರಾಮ-ರಾಜಾರಾಮ ಹೆಗಡೆ ಸಹೋದರರ ಅಡಿಕೆ-ಬಾಳೆ-ಮೆಣಸು-ಕಬ್ಬಿನ ತೋಟಗಳ ಪಕ್ಕದಲ್ಲೇ ನಡೆಯುತ್ತಿದ್ದ ಅವರ ಆಲೇಕಣಕ್ಕೆ ನಡೆದೆವು.

ಸಾಮಾನ್ಯವಾಗಿ ಮಲೆನಾಡ ಹಳ್ಳಿಗಳಲ್ಲಿ ಡಿಸೆಂಬರ್‌ನಿAದ ಮಾರ್ಚ್ವರೆಗೆ ಆಲೇಮನೆ ಸೀಸನ್ನಿನ ಸಂಭ್ರಮ. ಸುತ್ತ ಹತ್ತಾರು ಹಳ್ಳಿಗಳಲ್ಲಿ ಯಾರಾದರೊಬ್ಬರ ಮನೆಯಲ್ಲಿರುವ ಆಲೇಕಣೆ (ಯಂತ್ರ) ಬಾಡಿಗೆಗೆ ತಂದು ಕಬ್ಬು ಅರೆಯುತ್ತಾರೆ. ಮೊದಲಾದರೆ ಘಟ್ಟದ ಕೆಳಗಿನಿಂದ ಆಲೇಕೋಣಗಳನ್ನು ತರಿಸಿ ಅವುಗಳನ್ನು ಸುತ್ತಿರುಗಿಸುತ್ತ ಕಬ್ಬು ಅರೆಯುತ್ತಿದ್ದರು. ಆಗ ಒಬ್ಬೊಬ್ಬರ ಮನೆಯಲ್ಲೂ ವಾರಗಟ್ಟಲೇ ಆಲೇಮನೆ ನಡೆಯುತ್ತಿತ್ತು. ಈಗ ಯಂತ್ರವಾಗಿದ್ದರಿಂದ ಒಂದೆರಡು-ಮೂರು ದಿನಗಳಲ್ಲೇ ಕೆಲಸ ಮುಗಿಯುತ್ತಿದೆ. ನಮ್ಮನ್ನು ಆತ್ಮೀಯವಾಗಿ ಆಲೇಚಪ್ಪರದಡಿ ಕುಳ್ಳರಿಸಿ, ವಿಚಾರಿಸಿ ತಾಜಾ ಕಬ್ಬಿನಹಾಲನ್ನು ನೀಡಿ ಸತ್ಕರಿಸಿದ ಶಿವರಾಮ ಹೆಗಡೆಯವರು ಅಲ್ಲಿ ದೊಡ್ಡ ಕೊಪ್ಪರಿಗೆಯಲ್ಲಿ ಕೊತಕೊತನೆ ಕುದಿಯುತ್ತ ಬೆಲ್ಲವಾಗುತ್ತಿದ್ದ ಕಬ್ಬಿನಹಾಲನ್ನು ಕುತೂಹಲದಿಂದ ವೀಕ್ಷಿಸುತ್ತಾ ನಿಂತಿದ್ದ ನನ್ನ ಮಕ್ಕಳಿಗೆ ಕಬ್ಬಿನ ಬೀಜದಿಂದ ಹಿಡಿದು ಅದು ಬೆಲ್ಲವಾಗುವ ಪರಿಯನ್ನು ವರ್ಣಿಸತೊಡಗಿದರು.

ಹೆಗಡೆಯವರ ಮಾತುಗಳಲ್ಲಿ ಸರಳವಾಗಿ ಹೇಳುವುದಾದರೆ, ಕಬ್ಬಿನ ಹಾಲಿನ ಸಿಹಿ ಹಾಗೂ ಬೆಲ್ಲದ ಮಧುರತೆಗಾಗಿ ಕನಿಷ್ಠ 11 ತಿಂಗಳುಗಳ ನಂತರವೇ ಕಬ್ಬನ್ನು ಕಟಾವು ಮಾಡಬೇಕು. ಬೀಜವನ್ನು ಬಿತ್ತಿ ತೇವಾಂಶವನ್ನು ಕಾಯ್ದುಕೊಂಡು ಕಬ್ಬನ್ನು ಬೆಳೆದಮೇಲೆ ಇಣಚಿ, ನರಿ, ಹಂದಿ ಇವುಗಳಿಂದ ಬೆಳೆಯನ್ನು ರಕ್ಷಿಸಿಕೊಂಡು ಬರಲು ಕಬ್ಬುಗಳ ಗರಿಗಳನ್ನೇ ಮಡಚಿ ಅವುಗಳಿಗೆ ಮುಡಿ ಸುತ್ತಬೇಕಾಗುವುದು. ಮೃದುವಾದ, ಹೆಚ್ಚು ರಸಭರಿತವಾದ, ಸಿಹಿ ಜಾಸ್ತಿಯಿರುವ ಕೋಣನಕಟ್ಟೆ, ರಸದಾಳೆ ಮೊದಲಾದ ತಳಿಗಳ ಬೀಜಗಳಿಂದ ಬೆಳೆಯುವ ಕಬ್ಬುಗಳು ಇವು.

ಹನ್ನೊಂದು ತಿಂಗಳ ನಂತರ ಬೆಳೆ ಕಟಾವಿಗೆ ಬಂದಾಗ, ಕಬ್ಬನ್ನು ಅರೆವ ಕಣೆಯನ್ನು ಕಬ್ಬಿನ ಗದ್ದೆ ಅಥವಾ ಮನೆಯಂಗಳಕ್ಕೆ ತರುತ್ತಾರೆ. ಹಗಲಿಡೀ ಕಬ್ಬನ್ನು ಕಡಿದು ಅದನ್ನು ಕಣೆಯ ಬಳಿ ತಂದು ಹಾಕುತ್ತಾರೆ. ನಂತರದ್ದು ದಿನದ 24 ಗಂಟೆಯೂ ಎಡೆಬಿಡದೇ ದುಡಿದು ಮುಗಿಸುವ ಕೆಲಸ; ಅಂದರೆ, ಕೊಯ್ದ ಕಬ್ಬು ತಾಜಾ ಇರುವಾಗಲೇ ಅದರ ರಸವನ್ನು ತೆಗೆದು ಬೆಲ್ಲವನ್ನು ಮಾಡುವ ಕೆಲಸ. ಎತ್ತರದ ಜಾಗದಲ್ಲಿ ಕಬ್ಬಿನ ಯಂತ್ರವನ್ನಿಟ್ಟು ಸರಾಗವಾಗಿ ಹಾಲು ಹರಿದು ಕೊಪ್ಪರಿಗೆಗೆ ಬಂದು ಬೀಳುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

ಅರೆದ ಕಬ್ಬಿನ ಹಾಲನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಮೊದಲು ಕಬ್ಬಿನ ಯಂತ್ರಕ್ಕೆ, ಕಬ್ಬಿನ ರಾಶಿಗೆ, ಕೊಪ್ಪರಿಗೆಗೆ, ಒಲೆಗೆ ಸಮರ್ಪಿಸುತ್ತಾರೆ. ನಂತರ, ಜೊಂಡು ಸೋಸಿ ತೆಗೆದ ಕಬ್ಬಿನಹಾಲನ್ನು ಕೊಪ್ಪರಿಗೆಗೆ ತುಂಬಿಸಿ ಅದಕ್ಕೆ ಯಾವುದೇ ರಾಸಾಯನಿಕವನ್ನೂ ಸೇರಿಸದೆ ಆರೆಂಟು ತಾಸುಗಳಷ್ಟು ಹೊತ್ತು ಕುದಿಸಿ ಬೆಲ್ಲವನ್ನಾಗಿಸುತ್ತಾರೆ. ಮೊದಲಾದರೆ, ಕುದಿಯುವಾಗ ಸೌಟಿನಿಂದ ಪಾಕವನ್ನು ನೀರಿಗೆ ಹಾಕಿ ಬೆಲ್ಲದ ಹದವನ್ನು ನೋಡುವ ಕ್ರಮವಿತ್ತು. ಈಗ ಒಂದು ಡಿಜಿಟಲ್ ಥರ್ಮಾಮೀಟರ್ ರೀತಿಯ ಉಪಕರಣದ ಸಹಾಯದಿಂದ 113-114ಡಿಗ್ರಿಗೆ ಬಂದಾಗ ಕೊಪ್ಪರಿಗೆಯನ್ನು ಇಳಿಸುತ್ತಾರೆ.

ಈ ರೀತಿಯಲ್ಲಿ ತಯಾರಾಗುವ ಬೆಲ್ಲ ವರ್ಷಾವಧಿ ಹುಳಿ ಬರದೆ, ಕೆಡದೆ ಚನ್ನಾಗಿ ಇರುತ್ತದೆ. ಬೆಲ್ಲ ಆರಿದ ಮೇಲೆ ತೆಳುವಾದ ಪಂಚೆಯಿAದ ಸೋಸಿ ಡಬ್ಬಿಗಳಿಗೆ ಶೇಖರಿಸಿಡುತ್ತಾರೆ. ಒಂದು ಕೊಪ್ಪರಿಗೆಗೆ ಒಂದು ಆಳು ಹೊರಬಲ್ಲ ಸುಮಾರು 20-25 ಕಬ್ಬಿನ ಹೊರೆಗಳ ಹಾಲು ಬೇಕಾಗುತ್ತದೆ. ಒಂದು ಕೊಪ್ಪರಿಗೆಯಿಂದ ಸುಮಾರು 25 ಕೆ.ಜಿಯ ಮೂರು-ನಾಲ್ಕು ಡಬ್ಬ ಬೆಲ್ಲವಾಗುತ್ತದೆ. ಹೀಗೆ ಹೆಗಡೆಯವರ ಮಾತನ್ನು ಕೇಳುತ್ತ ಕುದಿಯುತ್ತಿದ್ದ ಬೆಲ್ಲದ ಸುವಾಸನೆಯನ್ನು ಆಘ್ರಾಣಿಸುತ್ತಾ ಬಿಸಿಬೆಲ್ಲದ ರುಚಿಯನ್ನು ಸವಿಯುತ್ತಿದ್ದ ನಮಗೆ ಸಮಯ ಸರಿದಿದ್ದೆ ತಿಳಿಯಲಿಲ್ಲ. ಈ ಸಲದ ನಮ್ಮ ಊರಿನ ಪ್ರಯಾಣ ಬಹಳ ಸಾರ್ಥಕವಾಯಿತೆಂಬ ಭಾವದಲ್ಲಿ ಶಿವರಾಮ-ರಾಜಾರಾಮ ಹೆಗಡೆಯವರಿಗೆ ಧನ್ಯವಾದಗಳನ್ನರ್ಪಿಸಿ ಅವರು ಬೆಳೆದ ಕಬ್ಬಿನ ಕೆಲವು ಬೀಜಗಳನ್ನು ತೆಗೆದುಕೊಂಡು ನಾವು ಮರಳಿದೆವು.

ಮಲೆನಾಡಿನ ಆಲೇಮನೆ ನಡೆಯುವ ಮನೆಗಳಲ್ಲಿ ಆ ಸಮಯದಲ್ಲಿಯ ಇನ್ನೊಂದು ವಿಶೇಷತೆಯೆಂದರೆ ತೊಡದೇವು. ವಿಶೇಷರೀತಿಯಲ್ಲಿ ಕ್ಲಿಷ್ಟಕರ ವಿಧಾನದಿಂದ ತಯಾರಾಗುವ ಅಪರೂಪದ ಸಾಂಪ್ರದಾಯಿಕ ಭಕ್ಷö್ಯವಿದು. ಇದಕ್ಕೆ ಬೇಕಾಗುವ ಸಾಮಗ್ರಿಗಳು ಅಕ್ಕಿ, ಕಬ್ಬಿನಹಾಲು, ಬೆಲ್ಲ, ಸ್ವಲ್ಪ ಅರಿಶಿಣ, ಏಲಕ್ಕಿ, ಚಿಟುಕು ಉಪ್ಪು, ಅಡಿಗೆಯ ಎಣ್ಣೆ. ಮಣ್ಣಿನ ಮಡಿಕೆಯ ಮೇಲೆ ಮಾಡುವ ಕಜ್ಜಾಯವಿದು. ಇದನ್ನು ಹೊಸ ಮಡಿಕೆಯ ಮೇಲೆ ಮಾಡಲಾಗುವುದಿಲ್ಲ. ಮಡಿಕೆಗೆ ಕೆಲವು ದಿನ ಎಣ್ಣೆ ಹಚ್ಚಿ ಹದ ಬರಿಸಿಕೊಂಡಿರಬೇಕು. ಇಲ್ಲದಿದ್ದರೆ ತೊಡದೇವು ಏಳುವುದಿಲ್ಲ.

ತೊಡದೇವು ಮಾಡುವ ವಿಧಾನವೆಂದರೆ 8-10 ತಾಸು ಅಕ್ಕಿಯನ್ನು ನೆನಸಿಟ್ಟುಕೊಂಡು ನಂತರ ನೀರು ಸೋಸಿ ಅದನ್ನು ಕಬ್ಬಿನ ಹಾಲಿನಲ್ಲಿಯೇ ನುಣ್ಣಗೆ ಅರೆಯಬೇಕು. ಅರೆಯುವಾಗಲೇ ಬೇಕಷ್ಟು ಏಲಕ್ಕಿ, ಅರಿಶಿಣ, ಬೆಲ್ಲ, ಉಪ್ಪು ಸೇರಿಸಬೇಕು. ದೋಸೆ ಹಿಟ್ಟಿನ ಹದಕ್ಕಿಂತಲೂ ತುಸು ತೆಳ್ಳಗೆ ಇರಬೇಕು. ಮಗುಚಿದ ಮಡಕೆಯನ್ನು ಸೌದೆ ಒಲೆಯ ಮೇಲಿಟ್ಟು ಹದವಾದ ಬೆಂಕಿಯಲ್ಲಿ ಕಾಯಿಸಬೇಕು. ತೆಳುವಾದ ಪಂಚೆಯ ತುಂಡೊಂದನ್ನು ಕೋಲಿಗೆ ಕಟ್ಟಿಕೊಂಡಿರಬೇಕು. ಮಡಿಕೆ ಕಾದ ಮೇಲೆ ಎಣ್ಣೆಯನ್ನು ಸವರಿ ಪಂಚೆಯ ಅಗಲವಾದ ತುಂಡನ್ನು ಹಿಟ್ಟಿನಲ್ಲಿ ಅದ್ದಿ ಮಡಿಕೆಯ ಮೇಲೆ + ಆಕಾರದಲ್ಲಿ ಪೇಪರ್‌ನಷ್ಟು ತೆಳ್ಳಗೆ ಎರೆಯಬೇಕು. ನಂತರ ನಿಧಾನವಾಗಿ ಒಣಗಿದ ಅಡಿಕೆಯ ಹಾಳೆಯಿಂದ ತ್ರಿಕೋನಾಕಾರದಲ್ಲಿ ಗರಿಗರಿಯಾಗಿ ಮಡಚಿ ತೆಗೆಯಬೇಕು. ಅನುಭವಸ್ಥ ಹೆಂಗಸರು ಚಕಚಕನೆ ಈ ಕೆಲಸವನ್ನು ಮಾಡುತ್ತಿದ್ದರೆ ನೋಡುವುದೇ ಒಂದು ಚಂದ.  ತೊಡದೇವನ್ನು ಹಾಲು ಅಥವಾ ತುಪ್ಪ ಹಾಕಿ ಸವಿಯಬಹುದು.

 

Leave a Reply

Your email address will not be published.