ಮಲೆನಾಡ ಮಡಿಲಲ್ಲಿ ಸಮಾಜಮುಖಿ ನಡಿಗೆ

ವಿಜಯಲಕ್ಷ್ಮಿ ಡಿ.

‘ಸಮಾಜಮುಖಿ’ಯ ಸಾಗರ ನಡಿಗೆಯ ನೆನಪಿನ್ನೂ ಗರಿಗರಿಯಾಗಿದೆ. ಆಗಲೇ ಓಡೋಡಿ ಬಂತು ತರೀಕೆರೆಗೆ ಸಮಾಜಮುಖಿ ನಡಿಗೆ ಬಳಗ! ಏಪ್ರಿಲ್ 9, 10 ಮತ್ತು 11ರ ನಡಿಗೆಗೆ ತಂಡದವರೆಲ್ಲ ಕೆಮ್ಮಣ್ಣುಗುಂಡಿಯ ಪದತಲದ ವಸತಿ ಸ್ಥಳಕ್ಕೆ ಮೊದಲ ದಿನ ಬೆಳಗ್ಗೆಯೇ ಬಂದು ಸೇರಿದ್ದರು. ಈ ಬಾರಿಯ ವಿಶೇಷವೆಂದರೆ ಕುಟುಂಬದ ಸದಸ್ಯರು, ಯುವಕರ ದಂಡು ಅದರಲ್ಲೂ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು.

ಸಹ್ಯಾದ್ರಿಯ ಗಿರಿಶ್ರೇಣಿ ಮಡಿಲ ನಮ್ಮ ತಂಗುದಾಣದ ಪರಿಸರ, ಅದಕ್ಕೆ ಮೆರುಗು ನೀಡುವಂತಿದ್ದ ನಡಿಗೆಯ ಸ್ನೇಹಿತರ ನಲಿವು, ಆಯೋಜಕರ ಹುಮ್ಮಸ್ಸು ಮೇಳೈಸಿ ಆ ಪರಿಸರದಲ್ಲಿ ಸಂಭ್ರಮ ತೊನೆದಾಡುತ್ತಿತ್ತು. ಡಾ.ಹರ್ಷ ಅವರ ತಾಯಿ ಶ್ರೀಮತಿ ಶಾಂತಾ ಅವರು ನಡಿಗೆಗೆ ಚಾಲನೆ ನೀಡಿದರು.

ಸುಮಾರು ಆರು ಜೀಪುಗಳಲ್ಲಿ ಭದ್ರಾ ಅಭಯಾರಣ್ಯಕ್ಕೆ ಹೊರಟೆವು. ಗುಡ್ಡಬೆಟ್ಟಗಳ ಹಾದಿ ದಾಟಿ ಕೆಮ್ಮಣ್ಣುಗುಂಡಿ ಗೆಸ್ಟ್ ಹೌಸ್ ಮುಂದಿನ ತಿರುವಿನಲ್ಲಿಯ ‘ಫಾರೆಸ್ಟ್ ಚೆಕ್ ಪಾಯಿಂಟ್’ ದಾಟಿ ಕಾಡಿನೊಳಗೆ ಪ್ರವೇಶಿಸಿದೆವು. ಕಬ್ಬಿಣ ಸಮೃದ್ಧಿಯ ಕೆಂಪುಮಣ್ಣು, ಆಕಾಶದೆತ್ತರಕ್ಕೆ ಚಾಚಿದ ಮರಗಳು, ನೂರು ಬಗೆಯ ಬಣ್ಣ ಆಕಾರದ ಹಚ್ಚ ಹಸುರಿನ ಕಾನನದಿ ದಿವ್ಯಮೌನವನ್ನು ಕದಡಲು ಹೊರಟವರಂತೆ ನಮ್ಮ ಜೀಪುಗಳು ಆ ದಾರಿಯಲ್ಲದ ದಾರಿಯಲ್ಲಿ ಏದುಸಿರು ಬಿಡುತ್ತಾ ಗುಂಡಿಯಲ್ಲಿ ಮುಳುಗೆದ್ದು ತೇಲುತ್ತಾ ಹತ್ತು ನಿಮಿಷದ ಹಾದಿಯನ್ನು ಒಂದು ಗಂಟೆಯಲ್ಲಿ ಕ್ರಮಿಸಿ ಆ ಕಡೆ ತುದಿಯನ್ನು ತಲುಪಿಕೊಂಡೆವು.

ಸ್ಥಳೀಯರಾದ ಮಂಜುನಾಥ್ ಆ ಸ್ಥಳದ ವಿಶೇಷತೆ ತಿಳಿಸಿಕೊಟ್ಟ ಮೇಲೆ ಆ ದಟ್ಟ ಕಾನನದ ಸೊಬಗು ಸವಿಯುತ್ತ ಬಾಬಾಬುಡನ್ ಗಿರಿಯೊಳಗೆ ನೆಲೆಯಾದೆವು. ಜೀಪುಗಳು ಮಾಣಿಕ್ಯಧಾರಾದೆಡೆಗೆ ಧೂಳೆಬ್ಬಿಸುತ್ತಾ ಒಂದರ ಹಿಂದೊಂದು ಮೆರವಣಿಗೆ ಹೊರಟವು. ಬೆಟ್ಟದ ಒಡಲ ಸೀಳಿ ನಮ್ಮನ್ನು ತನ್ನ ತಂಪು ಸಿಂಚನದಿಂದ ಉಲ್ಲಾಸಗೊಳಿಸಲು ಪಣತೊಟ್ಟು ಇಳಿದಿಳಿದು ಹನಿಯುತ್ತಿತ್ತು ಆ ತೊರೆ. ಪ್ರವಾಸಿಗರು, ಭಕ್ತರು, ಅಲ್ಲಿ ಎಸೆದಿದ್ದ ಬಟ್ಟೆ, ಖಾಲಿ ಸೀಸೆ, ಪೇಪರು, ಪ್ಲಾಸ್ಟಿಕ್, ಕಸ-ಮುಸುರೆಗಳಿಂದ ಕಿಕ್ಕಿರಿದು ಹೊಲಸು ನಾರುತ್ತಿದ್ದ ಅದರ ಸುತ್ತಲ ಪರಿಸರ ರೇಜಿಗೆ ಹುಟ್ಟಿಸುತ್ತಿತ್ತು. ಸರಕಾರವೇ ಗಟ್ಟಿಯಾಗಿ ನಿಯಮಗಳನ್ನು ಜಾರಿಗೊಳಿಸದಿದ್ದರೆ ಆ ಪರಿಸರ ಮತ್ತೊಂದು ವೈತರಣಿಯಾಗುವುದರಲ್ಲಿ ಸಂದೇಹವೇ ಇಲ್ಲ. ಈ ದೆಶೆಯಲ್ಲಿ ನಮ್ಮ ಪ್ರಯತ್ನವೇನು ಎಂದು ಚರ್ಚೆ ಮಾಡುತ್ತಾ ಮೇಲತ್ತಿ ಬಂದೆವು.

ಕೈಚಾಚಿದರೆ ಸಿಗುವುದೇನೋ ಅನ್ನಿಸುವಂತಿದ್ದ ಬಿಂಡಿಗೆಯ ದೇವಿರಮ್ಮನ ಬೆಟ್ಟದ ಮೊನಚಾದ ಕಲ್ಲು ಕೊರಕಲು, ಕಿರಿದಾದ ಮೆಟ್ಟಿಲುಗಳನ್ನು ಆ ದೇವಾಲಯವನ್ನು ದೂರದಿಂದಲೆ ಕಣ್ತುಂಬಿಕೊಂಡೆವು. ಬಾಬಾಬುಡನ್ ಗವಿಯ ದಾರಿಯಲ್ಲಿ ಒಂದೆರಡು ಕಡೆ ‘ಪ್ರಿ-ವೆಡ್ಡಿಂಗ್ ಫೋಟೋ ಶೂಟ್’ ನಡೆಯುತ್ತಿತ್ತು. ನಾಗರಿಕರು ಅಂಟಿಸಿಕೊಳ್ಳುವ ಕೊರೊನಾಕ್ಕಿಂತ ಭೀಕರವಾದ ಇಂಥಾ ರೋಗಗಳಿಗೆ ಮದ್ದು ಅರೆಯುವವರು ಯಾರೆಂಬ ಪ್ರಶ್ನೆ ಹಾಗೆ ಉಳಿದುಬಿಟ್ಟಿತು.

ಅಲ್ಲಿಂದ ಮುಂದೆ ಬಾಬಾ ಬುಡನ್ ಸಮಾಧಿ ಮತ್ತು ದತ್ತಪೀಠದ ಗವಿ ಪ್ರವೇಶಿಸಿದೆವು. ಅಕ್ಕಪಕ್ಕದಲ್ಲಿ ಹಿಂದೂ ಮುಸ್ಲಿಮರ ಪವಿತ್ರ ಸ್ಥಳಗಳು ಭಾರತದ ಬಹುತ್ವವನ್ನು ಪ್ರತಿನಿಧಿಸುತ್ತಿದ್ದವು. ಆ ತಣ್ಣನೆಯ ತಾಣದಲ್ಲಿ ಮನಸ್ಸು ಕೂಡ ಪ್ರಫುಲ್ಲಿತವಾಗಿತ್ತು. ಆ ಸುಂದರ ಪ್ರದೇಶ ನಮ್ಮೆಲ್ಲಾ ಸಂಕೇತಗಳಿಂದ, ಆಚರಣೆಗಳಿಂದ ಮುಕ್ತವಾಗಿದ್ದರೆ ಎಷ್ಟು ಸೊಗಸಿರುತ್ತಿತ್ತೆಂದು ಗೊಣಗುಟ್ಟುತ್ತ ಗುಹೆಯಿಂದ ಹೊರಬಿದ್ದು ಸೀದಾ ಮುಳ್ಳಯ್ಯನ ಗಿರಿಯ ಕಡೆ ಸಾಗಿದೆವು. ಈಗಾಗಲೇ ಹೊಟ್ಟೆ ಚುರುಗುಟ್ಟುತ್ತಿದ್ದುದರಿಂದಾಗಿ ಹಾದಿಯಲ್ಲಿಯೇ ಮರದ ನೆರಳಿನಲ್ಲಿ ಜೀಪುಗಳನ್ನು ನಿಲ್ಲಿಸಿ ಆ ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ರುಚಿಯಾದ ಭೋಜನ ಸವಿದೆವು.

ಮುಳ್ಳಯನಗಿರಿಯ ತಡಿಯವರೆಗೂ ಜೀಪಿನಲ್ಲಿ ಸಾಗಿದೆವು. ಸಂಜೆಗಣ್ಣು ತೆರೆಯುತ್ತ ಬಿಸಿಲು ತಂಪಾಗುತ್ತಿದ್ದ ಸಮಯವದು. ಕಡಿದಾದ ಮೆಟ್ಟಿಲುಗಳನ್ನು ಏರುತ್ತಾ ಸುತ್ತಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತಾ, ಅಲ್ಲಲ್ಲಿ ನಿಂತು ಕ್ಯಾಮೆರಾಕ್ಕೆ ಕೆಲಸ ಕೊಡುತ್ತಾ ನಮ್ಮ ತಂಡ ಕರ್ನಾಟಕದ ಅತಿ ಎತ್ತರದ ಶಿಖರವನ್ನು ತಲುಪಿತು. “ಹಚ್ಚ ಹಸುರಲ್ಲ ಇದು, ಹುಚ್ಚು ಹಸುರಿನ ಬುಗ್ಗೆ ಲಗ್ಗೆ ನುಗ್ಗಿಹುದಿಲ್ಲಿ ಎತ್ತೆತ್ತಲು!” ಅನ್ನುವಂತೆ ಹಸಿರು ಮೆತ್ತಿದ ಗಿರಿಶ್ರೇಣಿಗಳು ಒಂದನ್ನೊಂದು ಮೀರಿಸಿ ಮುಖ ಚಾಚುತ್ತಿದ್ದವು. ಸ್ವರ್ಗೀಯ ಸೌಂದರ್ಯದ ಅನುಭೂತಿ ನಮ್ಮೆಲ್ಲರದಾಗಿತ್ತು. ಅಂತೂ ಶಿಖರದ ನೆತ್ತಿಯ ಮೇಲೆ ಪಾದವೂರಿ ಧನ್ಯತೆಯಲಿ ಮುಳುಗಿದೆವು.

ಶಿವಮಂದಿರಕ್ಕೆ ಸಮವಾದ ಸುಮ ಶೃಂಗಾರದ ಗಿರಿಶೃಂಗ ಸಮಸ್ತವನ್ನು ಕೂಡಿಸಿಕೊಂಡು ತಲೆ ಎತ್ತಿ ನಿಂತಿದೆ. ಈ ಅದಮ್ಯ ಚೈತನ್ಯದ ಪ್ರಕೃತಿಯ ಮುಂದೆ ಮನುಷ್ಯ ನಿರ್ಮಿತ ಧರ್ಮ, ಆಚರಣೆಗಳ ರಣರಣ ಸದ್ದು ಅಡಗುವುದೆಂತು? ಉತ್ತರವಿಲ್ಲದ ಪ್ರಶ್ನೆಗಳ ಹೊತ್ತುಕೊಂಡವರ ಮಧ್ಯೆ ಒಂದು ಸಣ್ಣ ಚರ್ಚೆಯೂ ನಡೆಯಿತಲ್ಲಿ. ಗುಂಡಿಗೆ ಗಟ್ಟಿ ಇದ್ದವರು ಕಡಿದಾದ ಕೊರಕಲು ಇಳಿದು ಮುಳ್ಳಯ್ಯನವರ ಗವಿ ನೋಡಿದ್ದಾಯ್ತು. ಸಂಜೆ ಆವರಿಸುತ್ತಿದ್ದಂತೆ ಕೆಳಗಿಳಿದು ತಂಗುದಾಣದೆಡೆಗೆ ಪಯಣಿಸಿದೆವು. ಅರ್ಧಗಂಟೆಯ ವಿರಾಮ ಪಡೆದು ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅಣಿಯಾದೆವು.

ಆ ದಿನ ಸ್ಥಳೀಯ ಮಹಿಳಾ ಕಲಾವಿದರು ನಮಗಾಗಿ ಬಹು ಸುಂದರವಾದ ವೀರಗಾಸೆ ನೃತ್ಯವನ್ನು ಪ್ರದರ್ಶಿಸಿದರು. ಆ ತಂಡದ ಯುವತಿಯರ ಕೌಶಲ್ಯಭರಿತ, ಕಲಾತ್ಮಕ ಪಾದಗತಿಯ ತೀವ್ರತೆ ಬೆರಗು ಮೂಡಿಸಿತು. ಕೊನೆಯಲ್ಲಿ ಅವರ ವೀರ ತಾಳಕ್ಕೆ ಸಮಾಜಮುಖಿ ಬಳಗ ಹೆಜ್ಜೆ ಹಾಕಿ ಸಂತಸಪಟ್ಟಿತು.

ಮರುದಿನದ ನಡಿಗೆಯ ಮಾಹಿತಿಯನ್ನು ಪಡೆಯುತ್ತಲೇ ಭೂರಿಭೋಜನ ಸವಿದೆವು. ಬೆಳಿಗ್ಗೆಯಿಂದ ಒಂದಲ್ಲಾ ಒಂದು ಸ್ಥಳದ ಭೇಟಿ, ಮಾತು, ಪ್ರಯಾಣದಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದರೂ ಯಾರಿಗೂ ನಿದ್ದೆ ಮಾಡುವ ಮನಸ್ಸು ಇರಲಿಲ್ಲ. ಅಲ್ಲಲ್ಲೇ ಗುಂಪಾಗಿ ಇಚ್ಛಾನುಸಾರ ಕವಿಗೋಷ್ಠಿ, ಗಾಯನಗೋಷ್ಠಿಯಲ್ಲಿ ತೇಲಿಹೋದವರೆಷ್ಟೋ.

ಎರಡನೆಯ ದಿನದ ನಡಿಗೆ ಅಪೂರ್ವ ಅನುಭವಗಳ ಆಗರ. ಬೆಳಿಗ್ಗೆ ಏಳು ಗಂಟೆಗೇ ಹೊರಟು ‘ರಾಜಗಿರಿ ಎಸ್ಟೇಟ್’ ಗೇಟ್ ಮುಂದೆ ಜಮಾಯಿಸಿದೆವು. ಅದು ‘ಕಾಫೀ ಡೇ’ ಯನ್ನು ಕಟ್ಟಿ ಬೆಳೆಸಿದ ದಿವಂಗತ ಸಿದ್ಧಾರ್ಥರ ಸಾವಿರಾರು ಎಕರೆ ವ್ಯಾಪ್ತಿಯಲ್ಲಿದ್ದ ಕಾಫೀ ತೋಟ. ದಟ್ಟವಾದ ಆ ಕಾಫೀ ಕಾಡಿನ ಏರು ತಗ್ಗುಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ನಡೆಯುವ ಅಪರೂಪದ ಅವಕಾಶ ನಮ್ಮದಾಗಿತ್ತು. ದಟ್ಟವಾದ ತೋಟ, ವಿವಿಧ ಪಕ್ಷಿಗಳ ಇನಿದನಿ, ಬಗೆ ಬಗೆಯ ಸಸ್ಯ ಸಂಕುಲದ ಜೀವರಸದ ಘಮಲು, ಆಕಾಶಮುಟ್ಟಬಲ್ಲೆವೆಂಬ ಎತ್ತರದ ಮರಗಳು, ಮಡಿಲು ಬರಿದಾಗಿಸಿಕೊಂಡು ಹೂ ಮಳೆಗಾಗಿ ರೆಕ್ಕೆ ಚಾಚಿ ನಿಂತ ಅರೆಬಿಕಾ ಕಾಫಿ ಗಿಡಗಳು, ಬಸುರಿ, ಹೊನ್ನೆ, ಆಲುವಾನ, ಸಿಲ್ವರ್‍ಓಕ್, ಅತ್ತಿ, ಅಂಟುವಾಳ, ಸೀಗೆ, ಕಾಡುಬೇವು ಹೀಗೆ ಹಲವು ಗಿಡ ಮರಗಳು. ಎಲ್ಲೆಲ್ಲೂ ಹಸಿರು. ಒಣಗಿ ಬಿದ್ದ ರಾಶಿ ರಾಶಿ ವಿಧವಿಧ ಬಣ್ಣ ವಿನ್ಯಾಸದ ಎಲೆಗಳು. ಕಣ್ಣು ಮನಸ್ಸಿಗೆ ಹಬ್ಬವಾಗಿದ್ದ ರಸ ಸ್ಥಳವದು. ಒಣ ಎಲೆಗಳ ಮೇಲೆ ಕಾಲೂರಿ ನಡೆಯುತ್ತಾ, ಅಲ್ಲಲ್ಲಿ ಸಿಕ್ಕ ಆಳುಮಕ್ಕಳ ಮಾತಾಡಿಸಿದೆವು.

ಅಲ್ಲಿ ತಂಡದ ಜಯರಾಮ್ ರಾಯಪುರ ಅವರು ಕಾಫಿ ತೋಟದ ಒಂದಿಷ್ಟು ಸಿಹಿಕಹಿಗಳನ್ನು ತೆರೆದಿಟ್ಟರು. ಅದನ್ನು ಆಲಿಸಿ, ಅದೇ ತೋಟದ ಮಧ್ಯದಲ್ಲಿ ಹಾದು ಹೋಗಿದ್ದ ಮುಖ್ಯರಸ್ತೆ ತಲುಪಿದೆವು. ಅದಕ್ಕೂ ಮುಂಚೆ ಆ ತೋಟದ ಮೂಲಕ ಹಾದು ಹೋಗಿದ್ದ ‘ರೋಪ್ ವೇ’ ಪಳೆಯುಳಿಕೆಗಳನ್ನು ತೊರಿಸಿ ಕಬ್ಬಿಣದ ಕಾರ್ಖಾನೆಯ ಕತೆಯನ್ನು ಅದರ ಜೊತೆಗೆ ಜಲಮೇಲಗಿರಿಯಾದ ಉಪ ಕಥೆಯನ್ನು ಸ್ಥಳೀಯರಾದ ಮಂಜುನಾಥ್ ಸ್ವಾರಸ್ಯಕರವಾಗಿ ಬಣ್ಣಿಸಿದ್ದರು. ಅಲ್ಲಿ ನಮಗಾಗಿ ಕಾಯುತ್ತಿದ್ದ ‘ಕರಬೂಜ ಕಲ್ಲುಸಕ್ಕರೆ ಪಾನಕ’ ಸೇವಿಸಿ ಆ ತೋಟದಲ್ಲಿ ಮತ್ತೊಂದು ಸವಾಲಿನ ಚಾರಣಕ್ಕೆ ಸಜ್ಜುಗೊಂಡೆವು. ಅದು ಬಹುತೇಕ ತೊಂಬತ್ತು ಡಿಗ್ರಿಯಲ್ಲಿ ನಿಂತ ಕಾಡುಬೆಟ್ಟಕ್ಕೆ ಹೊದಿಸಿದ ಕಾಫೀಸಾಲು. ಅದನ್ನು ಏರುವುದು ನಿಜಕ್ಕೂ ಸವಾಲು. ಕಡಿದಾಗಿ ನೇರಕ್ಕೆ ಚಾಚಿಕೊಂಡ ಬೆಟ್ಟ. ಅದರ ಮೇಲೆ ಹರಡಿಕೊಂಡ ಒಣ ಎಲೆಗಳು. ಒಂದಿಷ್ಟು ಜಾರಿದರೂ ನಿರಾತಂಕವಾಗಿ ಕಾಫಿ ಪ್ರಪಾತಕ್ಕೆ ಬೀಳುವ ಯೋಗ! ಬಹಳ ಎಚ್ಚರಿಕೆಯಿಂದ, ಎಣಿಸಿ ಗುಣಿಸಿ ಅಡಿಯಿಡುತ್ತಿದ್ದೆವು.

ಪರಸ್ಪರ ಕೈ ಹಿಡಿದುಕೊಂಡು ಆ ಕಡಿದಾದ ಬೆಟ್ಟ ಏರಿ ಅಪರೂಪದ ಸಾಧನೆ ಮಾಡಿದಂತೆ ಬೀಗಿದವರೆಷ್ಟೋ! ಕಾಫೀ ತೋಟದಲ್ಲಿದ್ದಷ್ಟೂ ಸಮಯವೂ ಆ ತೋಟ ನಮ್ಮದೇ ಆಗಿತ್ತು. ಅಷ್ಟರ ಮಟ್ಟಿಗೆ ಅದನ್ನು ಅಂತರಂಗಕ್ಕೆ ಇಳಿಸಿಕೊಂಡಿದ್ದೆವು. ಬಿಸಿಲು, ಸೆಕೆ, ಬೆವರುಗರೆಯುತ್ತಿದ್ದರೂ ಎಲ್ಲರ ಮುಖ ಥಳಥಳನೇ ಹೊಳೆಯುತ್ತಿತ್ತು. ಮೂರು ದಿನದ ನಡಿಗೆಯಲ್ಲಿ ಅತ್ಯಂತ ಖುಷಿ ಕೊಟ್ಟ, ಸಂಭ್ರಮ ಪಟ್ಟ ಸಮಯವದು. ಆ ಚಾರಣದಗೊಡವೆಗೆ ಬಾರದೆ ಜೀಪಿನಲ್ಲಿ ಕುಳಿತವರೂ ಇದ್ದರು. ಅವರ ಜೊತೆ ಸೇರಿ ಕೆಮ್ಮಣ್ಣುಗುಂಡಿ ಪ್ರವಾಸಿ ಮಂದಿರದ ಕಡೆ ಹೊರೆಟೆವು. ಅಲ್ಲಿ ಉಪಾಹಾರಕ್ಕೆಂದು ಸಿದ್ಧಗೊಂಡಿದ್ದ ತಣ್ಣನೆಯ ಸವಿಯಾದ ರಾಗಿ ಕಿಲ್ಸಾ, ಮಾವಿನಕಾಯಿ ಚಿತ್ರಾನ್ನ, ಉಪ್ಪಿಟ್ಟು ಸವಿದು ‘ಹೆಬ್ಬೆ ಫಾಲ್ಸ್’ ಕಡೆ ಹೊರಟೆವು.

ಕಾಡಿನ ಹಾದಿ ಅದು. ವನ್ಯಜೀವಿ ಸಂರಕ್ಷಣಾ ವಲಯದೊಳಗೆ ಧೂಳೆಬ್ಬಿಸಿ ಹೊರಟ ನಮ್ಮ ವಾಹನಗಳು, ಕಣ್ಣು ತೊಳೆದುಕೊಂಡು ನೋಡಿದರೂ ಸಾಲದು. ಅಂತಹ ಸೊಬಗಿನ ಜಲಧಾರೆಯದು. ದಾರಿಯಲ್ಲಿ ಸಿಕ್ಕ ಅದರ ಕಿರು ತೊರೆಯ ತಂಪನ್ನು, ಚೆಲುವನ್ನು ನೋಡಿ ಖುಷಿಗೊಳ್ಳುತ್ತಲೇ ಮುಂದೆ ಸಾಗಿದರೆ ಸಗ್ಗದಿಂದ ಸುರಿವ ಹಾಲು ಹೊಳೆಯಂತೆ ಸುರಿದು ಹರಿವ ನೀರೆ, ಹಚ್ಚ ಹಸುರಿನ ತಲೆಯಿಂದ ಇಳಿದು ಬಂದಂತೆ. ಮಧ್ಯಾಹ್ನದ ಬಿರು ಬಿಸಿಲು, ಶೀತಲ ನೀರ ತೀರವನ್ನು ಬಿಟ್ಟು ಬರಲು ಯಾರಿಗೂ ಮನಸ್ಸಿರಲಿಲ್ಲ. ಮತ್ತೊಮ್ಮೆ ಜೀಪುಗಳ ಹತ್ತಿ ಕೆಮ್ಮಣ್ಣುಗುಂಡಿಯ ಕೃಷ್ಣರಾಜ ವಿಶ್ರಾಂತಿ ಧಾಮ, ಗುಲಾಬಿ ತೋಟದೆಡೆಗೆ ಸಾಗಿದೆವು.

ಬಿಸಿಲು ಚುರುಗುಟ್ಟುತ್ತಿತ್ತು. ಅಲ್ಲಿ ‘ವಿವ್ ಪಾಯಿಂಟ್’ ನಿಂದ ಚಿತ್ರ ಬರೆದಿಟ್ಟಂತಿದ್ದ ಅನುಪಮ ದೃಶ್ಯಗಳನ್ನು ನೋಡಿದೆವು. ಮಂಜುನಾಥ್ ಅವರು ವಿಶ್ವೇಶ್ವರಯ್ಯನವರು ತಣಿಗೆಬೈಲಿನಿಂದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಕಬ್ಬಿಣದ ಅದಿರು ಸಾಗಿಸಲು ಮಾಡಿದ್ದ ‘ರೋಪ್‍ವೇ’, ಅದಿರು ನಿಕ್ಷೇಪ ಕಳಚಿಕೊಂಡು ಬರಿದಾಗಿದ್ದ ಬೆಟ್ಟ, ಆ ಕಾಲದ ಪರಿಸರಸ್ನೇಹಿಯಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಭಿವೃದ್ಧಿ ನಾಗರಿಕತೆಯ ಪರಿಭಾಷೆಗಳು ಬದಲಾಗುತ್ತಿರುವ ಈ ಕಾಲಮಾನದ ಪ್ರತ್ಯಕ್ಷ ಸಾಕ್ಷಿಗಳು ಬಹುಶಃ ನಮ್ಮ ತಲೆಮಾರಿನವರೇ ಇರಬೇಕು. ಮನುಷ್ಯನ ತೀರದ ದಾಹ ಇನ್ನೆಂಥ ಅನಾಹುತಗಳನ್ನು ಸೃಷ್ಟಿಸಲಿದೆಯೋ?

ರಕ್ಷಿತಾರಣ್ಯವೆಂದು ಘೋಷಣೆ ಆಗಿರುವುದರಿಂದ ಸದ್ಯಕ್ಕೆ ಒಂದಿಷ್ಟು ನಿರಾಳ. ಅಲ್ಲಿ ಸುತ್ತ ಬಳಸಿ ಮತ್ತೆ ದಾರಿಗೆ ಬಂದು ಪ್ರವಾಸಿ ಮಂದಿರ ತಲುಪಿ ಹೋಳಿಗೆ ಊಟ ಮಾಡಿದೆವು. ಆಗಾಗಲೇ ಗಂಟೆ ಮೂರುವರೆ. ಗಡಬಡಿಸಿ ನಮ್ಮನ್ನು ಅಲ್ಲಿಯೇ ಅನತಿ ದೂರದಲ್ಲಿ ಕಾಣುತ್ತಿದ್ದೆ ‘ಝಡ್ ಪಾಯಿಂಟ್’ ಚಾರಣಕ್ಕೆ ಹೊರಡಿಸಿದರು.

‘ಝಡ್ ಪಾಯಿಂಟ್’ಗೆ ಹೊರಡುವ ಮೊದಲು ಆ ದುರ್ಗಮ ದಾರಿಯ ಬಗ್ಗೆ ತಿಳಿಸಿದ್ದರಿಂದಲೋ ಏನೋ ಕೆಲವರು ಹಿಂದೇಟು ಹಾಕಿದರು. “ಹಲವರು ಏನೇ ಬರಲಿ” ‘ಝಡ್ ಪಾಯಿಂಟ್’ ಏರಿಯೇ ಬಿಡುವೆವು ಎಂದು ಸಂಕಲ್ಪಿಸಿಕೊಂಡೆವು. ಕೆಲವರು ದಾರಿಯಲ್ಲಿ ಸಿಗುವ ಸಣ್ಣ ಒರತೆ ‘ಶಾಂತಿ ಫಾಲ್ಸ್’ ವರೆಗೆ ಬಂದು ವಾಪಾಸಾದರು. ಅಲ್ಲಿಂದ ಮುಂದಿನದು ಕಡಿದಾದ ಹಾದಿ. ಬಲಭಾಗದಲ್ಲಿ ಭುಜಕ್ಕೆ ತಗುಲುವ ಬೆಟ್ಟ ಸಾಲು, ಎಡಭಾಗದಲ್ಲಿ ಕಾಲು ಕೆಣಕುವ ನೆಲ ಕಾಣದ ಕಮರಿ. ಕಮರಿ ತುಂಬೆಲ್ಲಾ ಬಹುರೂಪಿ ಹಸಿರು ಮೊರೆತ. ನಮ್ಮ ಹೆಜ್ಜೆ ಮೇಲೆ ಕಣ್ಣು ನೆಟ್ಟು ಬೆನ್ನಿಗೆ ನಿಂತ ಸಹಾಯಕರ ಆಣತಿಯಂತೆ ಮೇಲ್ಮುಖವಾಗಿ ನಡೆದೆವು. ಎಷ್ಟು ನೋಡಿದರೂ ಸಾಲದು ಎಂಬ ರಮಣೀಯ ಚಿತ್ರಮಾಲೆ ಕಣ್ಣ ಮುಂದೆ ತೆರೆದುಕೊಳ್ಳುತ್ತಲೇ ಇತ್ತು. ಕೂರಲಾಗದು, ನಿಲ್ಲಲಾಗದು, ಗುರಿಮುಟ್ಟುವವರೆಗೂ ಕದಲದೇ ನಡೆದು ‘ಝಡ್ ಪಾಯಿಂಟ್’ನಲ್ಲಿ ಹಾಸಿಕೊಂಡಿದ್ದ ವಿಶಾಲವೂ ಭವ್ಯವು ಆದ ಸುಂದರ ತುದಿಯನ್ನು ತಲುಪಿದೆವು.

‘ಆನಂದಮಯ ಈ ಜಗ ಹೃದಯ’ವನ್ನು ಸ್ಪರ್ಶಿಸಿದ ಸಂತೃಪ್ತಿಯ ಧನ್ಯತೆ ನಮಗೆ. ನಮ್ಮ ಯುವಪಡೆಗಂತೂ ತೀರದ ಹುಮ್ಮಸ್ಸು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಂತ್ರ ಸಂಸ್ಕೃತಿಯ ಆಮಿಷ ಇದರ ಮುಂದೆ ಎಷ್ಟು ಕ್ಷುಲ್ಲಕವೆಂದು ಕೆಲವರಿಗಾದರೂ ಅನ್ನಿಸಿರಬಹುದು! ನಮ್ಮಲ್ಲಿ ಹಲವರಿಗೆ ಕೆಳಗಿಳಿದು ಬರಲು ಮನಸ್ಸೇ ಇರಲಿಲ್ಲ. ಊಟ ತಿಂಡಿ ಸಫ್ಲೈ ಮಾಡುವವರಿದ್ದರೆ ಬದುಕಿನ ಎಲ್ಲಾ ಜಂಜಾಟಗಳನ್ನು ಮರೆತು ಇಲ್ಲೇ ಇದ್ದುಬಿಡ್ತೀವಪ್ಪಾ ಅಂತ ಕಾಲುಚಾಚಿ ಅಂಟಿಕೊಳ್ಳುವವರಿದ್ದರು. ಕತ್ತಲು ಸುತ್ತಿಕೊಳ್ಳುವ ಮೊದಲು ಕೆಳಗಿಳಿಯದಿದ್ದರೆ ತೊಂದರೆ ಅನುಭವಿಸಬೇಕಾದವರು ನಾವೇ ಎಂಬ ಪ್ರಜ್ಞೆ ಜಾಗೃತಿಗೊಂಡು ಕೆಳಗಿಳಿದೆವು. ಸೀನಪ್ಪ ಮತ್ತು ಜಾರ್ಜ್ ಅವರು ಮಾರ್ಗದರ್ಶಕರಾಗಿ ನಮ್ಮ ಸಂರಕ್ಷಣೆಯ ಹೊಣೆ ಹೊತ್ತಿದ್ದರು. ಅವರ ಕಣ್ಣ ಕಾವಲಿನಲ್ಲಿ ನಾವೆಲ್ಲರೂ ಸುರಕ್ಷಿತವಾಗಿ ತಂಗುದಾಣದೆಡೆಗೆ ಪಯಣ ಬೆಳೆಸಿದೆವು.

ಆ ಸಂಜೆ ಸ್ಥಳೀಯ ಕಲಾವಿದರ ಡೊಳ್ಳು ಕುಣಿತ ಪ್ರದರ್ಶಿಸಿದರು. ಊಟದ ನಂತರದ ಹಾಡು ಕುಣಿತ ವಿಶ್ರಾಂತಿ. ಈ ಸಂದರ್ಭದಲ್ಲಿ ತಂಡದಲ್ಲಿದ್ದ ತೋಟಪ್ಪ ದಂಪತಿಯ ವಿವಾಹದ ಬೆಳ್ಳಿಹಬ್ಬವನ್ನು ಆಚರಿಸಿ ಹಾರೈಸಲಾಯಿತು.

ಎರಡು ದಿನ ಕಳೆದು ಹೋಗಿದ್ದೇ ತಿಳಿಯಲಿಲ್ಲ. ಇನ್ನೇನು ಇವತ್ತು ನಡಿಗೆ ಮುಕ್ತಾಯವಾಗುತ್ತಲ್ವಾ, ಮತ್ತೆ ಅದೇ ಅನುದಿನದ ಕಾಯಕ ಎಂಬ ಮಾತುಕಥೆಯೊಂದಿಗೆ ಕೊನೆಯ ದಿನದ ನಡಿಗೆ ಆರಂಭವಾಯಿತು. ಆ ದಿನ ಬಸ್ಸಿನಲ್ಲಿ ಅಮೃತಾಪುರದೆಡೆಗೆ ಹೊರಟೆವು. ಹೊಯ್ಸಳ ಕಾಲದ ಶಿಲ್ಪ ವೈಭವವನ್ನು ಸಾರುತ್ತಿದ್ದ ಅಮೃತೇಶ್ವರದೇವಾಲಯ ಧ್ಯಾನಶಾರದೆ, ರಾಜರ ಕಾಲದಿಂದಲೂ ಆರದೆ ಉರಿಯುತ್ತಿರುವ ‘ನಂದಾದೀಪ’, ಜನ್ನ ಬರೆಯಿಸಿದ ಶಾಸನ, ಚೌಕಾಕಾರದ ವಿಶಿಷ್ಟ ಪುರಾತನ ಬಾವಿ ಹೀಗೆ ಅಪರೂಪದ ಕಲಾಕೃತಿಗಳಿಂದ ಕಂಗೊಳಿಸುತ್ತಿತ್ತು.ಅಲ್ಲಿನ ಅರ್ಚಕರು ಅದರ ಚಾರಿತ್ರಿಕ ಮಹತ್ವವನ್ನು ತಿಳಿಸಿ ಕೊಟ್ಟರು. ಅಪೂರ್ವ ಕೆತ್ತನೆಯ ಹೊರಾಂಗಣ, ತಂಪುಣಿಸುವ ಕಂಬ ಸಾಲಿನ ಒಳಾಂಗಣದಲ್ಲಿ ಮನದಣಿಯುವವರೆಗೂ ಅಡ್ಡಾಡಿದೆವು. ಅಲ್ಲಿಂದ ಹೊರಟು ಜಂಬದ ಹೊಳೆ ಎಂಬ ಜಲಾಶಯವನ್ನು ನೋಡಿದೆವು. ತರೀಕೆರೆ ತಾಲ್ಲೂಕಿನ ಜೀವಜಲ ಪಾತ್ರೆಯದು.

ದಾರಿ ಮಧ್ಯೆ ಕಬ್ಬಿನಹಾಲು ಕುಡಿದು ಡಾ.ಹರ್ಷ ಅವರ ದೊಡ್ಡಪ್ಪನವರ ಅಡಿಕೆ ತೋಟದತ್ತ ಪ್ರಯಾಣ ಬೆಳೆಸಿದೆವು. ಅವರ ಕುಟುಂಬದವರ ಆತಿಥ್ಯ ಮಧ್ಯಾಹ್ನದ ಊಟದ ಸವಿ ಹೆಚ್ಚಿಸಿತ್ತು. ಅವರ ದೊಡ್ಡಪ್ಪ ಅಡಿಕೆ ಕೃಷಿ ಕುರಿತು ಮಾಹಿತಿ ನೀಡಿದರು. ತೋಟದ ಮಾಲೀಕರು, ಕಾರ್ಮಿಕರು ಸೌಹಾರ್ದದಿಂದ ನಡೆಸಿಕೊಂಡು ಹೋಗುತ್ತಿರುವ ಅಡಿಕೆ ಮತ್ತು ವೀಳ್ಯೆದೆಲೆಯ ‘ಸಿಂಬಾಯಟ್ಟಿಕ್ ಕೃಷಿ ಪದ್ಧತಿ’ ಆಸಕ್ತಿದಾಯಕವಾಗಿತ್ತು. ಅಲ್ಲಿಂದ ದೂರದೂರಿಗೆ ತೆರಳಲು ಅನುಕೂಲವಾಗುವಂತೆ ತರೀಕೆರೆಗೆ ಎಲ್ಲರನ್ನು ಮುಟ್ಟಿಸಲಾಯಿತು. ಮನಸು ಮತ್ತೊಂದು ನಡಿಗೆಗೆ ಕಾತರಿಸುವಂತೆ ಕಾಪಿಟ್ಟ ಮೆರು ನಡಿಗೆ!

ಸಂಚಾಲಕರಾದ ಡಾ.ಹರ್ಷ, ಪ್ರಕಾಶ್, ತಿಪ್ಪೇಸ್ವಾಮಿ ಮತ್ತು ಅವರ ಬಳಗ ಬಹಳ ಕಾಳಜಿಯಿಂದ ವ್ಯವಸ್ಥಿತ ನಡಿಗೆಗೆ ಏರ್ಪಾಡು ಮಾಡಿದ್ದರು.

-ವಿಜಯಲಕ್ಷ್ಮಿ ಡಿ.

Leave a Reply

Your email address will not be published.