ಮಳೆಯಾಶ್ರಿತ ರೈತನ ಬದುಕು

ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಕುರುಬರ ಓಣಿಯ ಈರಪ್ಪ ಬಸಪ್ಪ ಕುರಿ ಕುಟುಂಬ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿದೆ.

ಈರಪ್ಪನೂ ಒಳಗೊಂಡಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬದಲ್ಲಿ ಒಟ್ಟು 4 ಜನರಿದ್ದಾರೆ. ಈರಪ್ಪನ ತಂದೆ ಹೆಸರು: ಬಸಪ್ಪ, ತಾಯಿ: ಹನುಮವ್ವ. ತಂದೆ-ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಈ ಕುಟುಂಬವು ಕುರುಬರ (ಹಾಲುಮತ)ದ ಸಮುದಾಯಕ್ಕೆ ಸೇರಿದೆ.

ಕುಟುಂಬ ಮುಖ್ಯಸ್ಥನಾಗಿರುವ ಈರಪ್ಪ (36 ವರ್ಷ), ಹೆಂಡತಿ ನೀಲಮ್ಮ (30 ವರ್ಷ), ಮಗ ಮಹಾಂತೇಶ (10 ವರ್ಷ) ಹಾಗೂ ಮಗಳು ಶ್ರೀದೇವಿ (8 ವರ್ಷ) ಒಳಗೊಂಡ ಒಂದು ಪುಟ್ಟ ಕುಟುಂಬ. ಪುತ್ರ ಮಹಾಂತೇಶ 4ನೇ ತರಗತಿಯಲ್ಲಿ ಹಾಗೂ ಪುತ್ರಿ ಶ್ರೀದೇವಿ 2ನೇ ತರಗತಿಯಲ್ಲಿ ಓದುತ್ತಿದ್ದಾರೆ. ಈರಪ್ಪ ಮತ್ತು ನೀಲಮ್ಮ ಕ್ರಮವಾಗಿ 3ನೇ ಹಾಗೂ 2ನೇ ತರಗತಿ ತನಕ ಮಾತ್ರ ಓದಿದ್ದು, ಒಂದರ್ಥದಲ್ಲಿ ಅನಕ್ಷರಸ್ಥರಿದ್ದಂತೆಯೇ. ಓದು ಮತ್ತು ಬರಹದ ಜ್ಞಾನ-ಪರಿಕಲ್ಪನೆ ಕೇವಲ ಸಹಿಗೆ ಮಾತ್ರ ಸೀಮಿತವಾದ್ದು. ಅಲ್ಲಿ ವ್ಯಾಪಕತೆ ಇರುವದಿಲ್ಲ. ಮುಗ್ಧತೆಯೇ ಕೇಂದ್ರೀಕೃತವಾಗಿರುವ ಈರಪ್ಪನ ಕುಟುಂಬದಲ್ಲಿ ಯಾವುದೇ ದ್ವಂದ್ವ-ವೈರುಧ್ಯಗಳಿಲ್ಲದಿರುವುದು ವಿಶೇಷ.

ಸ್ವಂತ ಪುಟ್ಟ ವಾಸದ ಮನೆಯೊಂದಿಗೆ 3 ಎಕರೆ ಜಮೀನು ಹೊಂದಿರುವ ಈರಪ್ಪ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿರುವ ಅತಿ ಚಿಕ್ಕ ಹಿಡುವಳಿದಾರನಾಗಿದ್ದಾನೆ. ಇತರೇ ಚರಾಸ್ತಿಗಳು ಇವರಿಗಿಲ್ಲ. ಮುಂಗಾರಿ ಬೆಳೆಗಳಲ್ಲಿ ಉದ್ದು, ಹೆಸರುಕಾಳು ಹಾಗೂ ಶೇಂಗಾ ಬೆಳೆಯುವರು. ಹಿಂಗಾರಿಯಲ್ಲಿ ಗೋಧಿ, ಜೋಳ, ಕಡಲೆ, ಹತ್ತಿ ಹಾಗೂ ಉಳ್ಳಾಗಡ್ಡಿಯ ಬೆಳೆಗಳನ್ನು ಬೆಳೆಯುತ್ತಾರೆ. ಯಾವುದೇ ನೀರಾವರಿ ಸೌಲಭ್ಯಗಳಿಲ್ಲದೇ ಸಂಪೂರ್ಣ ಮಳೆಯಾಧಾರಿತ ಕೃಷಿ ಮಾಡಿಕೊಂಡಿದ್ದಾರೆ. ಮಳೆ ಸಕಾಲಕ್ಕೆ ಸುರಿಯದೇ ಹೋದರೆ ಎಲ್ಲವೂ ಕೃಷ್ಣಾರ್ಪಣ. ಬದುಕು ಅಯೋಮಯ. ಸರಿಯಾಗಿ ಮಳೆ ಬಂದರೆ 1 ಎಕರೆಗೆ ಸುಮಾರು 15 ಕ್ವಿಂಟಲ್ ತನಕ ಉಳ್ಳಾಗಡ್ಡಿ ಇಳುವರಿ ಬರುತ್ತದೆ. ಅದೇ ರೀತಿ 1 ಎಕರೆಗೆ 5 ಕ್ವಿಂಟಲ್ ಹತ್ತಿ, 5 ಕ್ವಿಂಟಲ್ ಗೋಧಿ, 5 ಕ್ವಿಂಟಲ್ ಕಡ್ಲಿ… ಹೀಗೆ ಚೆನ್ನಾದ ಇಳುವರಿ ಬಂದು ರೈತ ಇದ್ದುದರಲ್ಲಿಯೇ ನೆಮ್ಮದಿಯನ್ನು ಕಾಣಬಹುದು. ಆದರೆ ಇತ್ತೀಚೆಗೆ ಹದಮಳೆಯಾಗದೇ ರೈತರೆಲ್ಲರೂ ಸಾಲದ ಬಾಧೆಗೆ ಒಳಗಾಗಿದ್ದಾರೆ.

ಈರಪ್ಪನ ಕುಟುಂಬ ನಿರ್ವಹಣೆಗೆ ಜೋಳ, ಗೋಧಿ, ಅಕ್ಕಡಿಕಾಳು, ಕಾಯಪಲ್ಯ, ಕಿರಾಣಿ ಸಾಮಾನು, ಹಾಲು, ಮೊಸರು ಮುಂತಾದವುಗಳೆಲ್ಲ ಸೇರಿ ಒಂದು ವರುಷಕ್ಕೆ ಸುಮಾರು 1 ಲಕ್ಷ ರೂ.ಗಳ ವೆಚ್ಚವಿದೆ. ಜೊತೆಗೆ ಬಟ್ಟೆ ಖರೀದಿ ಖರ್ಚು ರೂ.10 ಸಾವಿರ. ವೈದ್ಯಕೀಯ ವೆಚ್ಚ, ಸಾರಿಗೆ ವೆಚ್ಚ, ಇತರೇ ಸಾಂದರ್ಭಿಕ ಜಾತ್ರೆ, ನಿಬ್ಬಣ, ಸಂಬಂಧಿಕರ ಮಂಗಲಕಾರ್ಯಗಳಿಗೆ ಹಾಜರಾಗುವುದು ಇತ್ಯಾದಿ ಖರ್ಚು-ವೆಚ್ಚಗಳನ್ನು ಇಂತಿಷ್ಟೇ ಎಂದು ಲೆಕ್ಕಹಾಕುವುದು ಕಷ್ಟಕರವಾಗುತ್ತದೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚು ಕೂಡ ಇರುತ್ತದೆ.

ರಾತ್ರಿ ಮನೆಗೆ ಬಂದು ಕೆಲವು ಗಂಟೆ ಮಾತ್ರ ಟಿ.ವಿ. ವೀಕ್ಷಣೆ. ಈರಪ್ಪ ಹಾಗೂ ಪತ್ನಿ ನೀಲಮ್ಮ ತಮ್ಮ 3 ಎಕರೆ ಜಮೀನಿನಲ್ಲಿ ದುಡಿಯುವುದರೊಂದಿಗೆ ಬೇರೆಯವರ ಜಮೀನುಗಳಲ್ಲಿಯೂ ಕೃಷಿ ಕಾರ್ಮಿಕರಾಗಿ ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಯನಿರ್ವಹಿಸುವರು.

ಸರಕಾರದಿಂದ ಈ ಕುಟುಂಬಕ್ಕೆ ಯಾವುದೇ ಸಹಾಯ-ಸೌಲಭ್ಯಗಳು ಬಂದಿಲ್ಲ. ಇವರ ಮನೆಯಲ್ಲಿ ಟಿ.ವಿ. ಇದೆ, ಈಗ ಕೆಟ್ಟಿದೆ. ಟಿ.ವಿ. ಚಾಲ್ತಿ ಇದ್ದಾಗ ಸುದ್ದಿ ಹಾಗೂ ಕೆಲವು ಧಾರಾವಾಹಿಗಳನ್ನು ಅತೀ ಕಡಿಮೆ ಅವಧಿಗೆ ನೋಡುತ್ತಿದ್ದರಂತೆ. ಏಕೆಂದರೆ ಹಿಂಗಾರಿ ಬೆಳೆಗಳ ಫಸಲು ಬಂದಾಗ ಬೆಳಗಿನ ಜಾವ 4 ಗಂಟೆಗೆ ಇವರು ಹೊಲಗಳಲ್ಲಿ ಗೋಧಿ-ಕಡ್ಲಿ ಕೀಳುವ ಕೆಲಸದಲ್ಲಿ ತೊಡಗಿಕೊಳ್ಳುವರು. ಬಿಸಿಲು ನೆತ್ತಿಗೇರುವವರೆಗೆ ಅಂದರೆ ಅಪರಾಹ್ನ 12 ಗಂಟೆಯ ತನಕ ಹೊಲಗಳಲ್ಲಿ ಬೆವರು ಹರಿಸುವರು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 3 ಗಂಟೆಗೇ ಎದ್ದು, ಎಲ್ಲ ಪ್ರಾತಃರ್ವಿಧಿಗಳನ್ನು ಪೂರೈಸಿಕೊಂಡು ಸಿದ್ಧರಾಗಿ ಹೊಲಗಳಿಗೆ ತೆರಳಬೇಕು. ಹೆಣ್ಣುಮಕ್ಕಳಂತೂ ಬೆಳಗಿನಜಾವ 4 ಗಂಟೆಯ ಒಳಗಾಗಿ ರೊಟ್ಟಿ, ಚಟ್ನಿ, ಪಲ್ಯ ಎಲ್ಲವನ್ನೂ ಸಿದ್ಧಪಡಿಸಿ ರೊಟ್ಟಿಗಂಟು ಕಟ್ಟಿಕೊಂಡು ಸಿದ್ದರಾಗಬೇಕು. ಇತರೇ ದಿನಗಳಲ್ಲಿ ಮುಂಜಾನೆ 8.30 ರಿಂದ ಸಂಜೆ 6 ಗಂಟೆಯ ತನಕ ಇವರು ಕೃಷಿ ಕೆಲಸಗಳಲ್ಲಿ ತೊಡಗಿಕೊಳ್ಳುವರು. ರಾತ್ರಿ ಮನೆಗೆ ಬಂದು ಕೆಲವು ಗಂಟೆ ಮಾತ್ರ ಟಿ.ವಿ. ವೀಕ್ಷಣೆ. ಈರಪ್ಪ ಹಾಗೂ ಪತ್ನಿ ನೀಲಮ್ಮ ತಮ್ಮ 3 ಎಕರೆ ಜಮೀನಿನಲ್ಲಿ ದುಡಿಯುವುದರೊಂದಿಗೆ ಬೇರೆಯವರ ಜಮೀನುಗಳಲ್ಲಿಯೂ ಕೃಷಿ ಕಾರ್ಮಿಕರಾಗಿ ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಯನಿರ್ವಹಿಸುವರು.

‘ಸರ.., ಮಳೆಗಾಲ ಸರಿ ಆದ್ರ ಏನೂ ಚಿಂತಿ ಇಲ್ರಿ, ಆದ್ರ ಈಗಿನ ಮಳಿಗಾಲ ಅಂದ್ರ ಲಾಟರಿ ಇದ್ಹಂಗ. ಆದ್ರ ಆಗೇ ಬಿಟ್ತು.. ಇಲ್ಲಾ ಅಂದ್ರ ಇಲ್ಲ. ಹಿಂಗಾಗಿ ನಾವು ನಮ್ಮ ಹೊಲದಾಗುನೂ ದುಡಿತೇವ್ರಿ, ಜೊತಿಗೆ ಬ್ಯಾರೇದವರ ಭೂಮ್ಯಾಗೂ ಕೆಲಸಾ ಮಾಡತೇವ್ರಿ… ಇಷ್ಟ ದುಡುದ್ರೂ ಈ ತುಟ್ಟಿ ಕಾಲದಾಗ ರೊಕ್ಕ ಎದುಕೂ ಸಾಲಂಗಿಲ್ರೀ. ಮತ್ತ ಹಂಗ ನಿಮ್ಮಂತವರ ಕಡೆಗೆ ಸಾಲ ಇದ್ದದ್ದ.. ಒಟ್ಟ ನಮಗ ದುಡಿಯೂದು ತಪ್ಪಂಗಿಲ್ಲ ನೋಡ್ರಿ’ ಎಂಬ ನೋವು ಈರಪ್ಪನದು.

ವಿಳಾಸ: ಈರಪ್ಪ ಬಸಪ್ಪ ಕುರಿ, ಕುರುಬರ ಓಣಿ, ಅಮ್ಮಿನಬಾವಿ-581201 (ಅಂಚೆ) ಧಾರವಾಡ ತಾಲೂಕು, ಧಾರವಾಡ ಜಿಲ್ಲೆ. ಮೊ: 7259782870

Leave a Reply

Your email address will not be published.