ಮಾಡಿದ್ದುಣ್ಣೋ ಮಹಾರಾಯ…

ಎ.ಸಿ.ಲಕ್ಷ್ಮಣ ಅವರು ನಿವೃತ್ತ ಐಎಫ್.ಎಸ್. ಅಧಿಕಾರಿ; ರಾಜ್ಯ ಸರ್ಕಾರದ ಅರಣ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು. ಮಾನವ-ವನ್ಯಜೀವಿ ಸಂಘರ್ಷದ ಇತಿಹಾಸ ವಿವರಿಸುತ್ತಾ ವರ್ತಮಾನದ ವಾಸ್ತವತೆ ತೆರೆದಿಟ್ಟಿದ್ದಾರೆ.

ಎ.ಸಿ. ಲಕ್ಷ್ಮಣ  

ಪ್ರಸ್ತುತ ಸಕಾಲದಲ್ಲಿ ಮಳೆ ಬರ್ತಿಲ್ಲ.. ಒಂದೆಡೆ ಅತಿವೃಷ್ಟಿ. ಮತ್ತೊಂದೆಡೆ ಅನಾವೃಷ್ಟಿ. ಪ್ರಕೃತಿಯಲ್ಲಿ ಅನಿರೀಕ್ಷಿತ ಏರುಪೇರು ಆಗುತ್ತಿವೆ. ಇವೆಲ್ಲಕ್ಕೂ ಕಾರಣ ಅರಣ್ಯ. ದುರಂತ ಅಂದರೆ ಅಮೂಲ್ಯ ಅರಣ್ಯ ಸಂಪತ್ತನ್ನು ಮನುಕುಲ ಮನಬಂದಂತೆ ಲೂಟಿ ಮಾಡುತ್ತಿದೆ. ಇದೆಲ್ಲದರ ಪರಿಣಾಮ ಮಾನವ-ವನ್ಯಜೀವಿ ಸಂಘರ್ಷಕ್ಕೆ ನಾಂದಿಯಾಗಿದೆ…

ಈ ಸಂಘರ್ಷ ಅನ್ನೋ ಪದವನ್ನೇ ನಾನು ಒಪ್ಪಲ್ಲ. ಏಕೆಂದರೆ ಇದು ಕ್ರೋಡೀಕೃತ ಮಾನವ ದೌರ್ಜನ್ಯ ದಬ್ಬಾಳಿಕೆಯ ಫಲ. ಹಾಗಾಗಿ ಮಾಡಿದ್ದುಣ್ಣೋ ಮಹಾರಾಯ ಅಂತೀವಲ್ಲ.. ಅದನ್ನೇ ಈಗ ಪ್ರಾಕ್ಟಿಕಲ್ ಆಗಿ ಅನುಭವಿಸ್ತಿದೀವಿ.

ಅರಣ್ಯ ಪ್ರದೇಶದೊಳಗೆ ಅವಾಸ್ತವಿಕ ವಿದ್ಯಮಾನಗಳು ದಶಕಗಳ ಹಿಂದೆ ಘಟಿಸಿವೆ. ಅಭಿವೃದ್ಧಿ ಹೆಸರಿನ ಹಲವು ಯೋಜನೆಗಳು ಈಹೊತ್ತು ಅರಣ್ಯ-ವನ್ಯಜೀವಿ ಮತ್ತು ಮನುಷ್ಯನ ನಡುವೆ ಘರ್ಷಣೆಗೆ ಎಡೆಮಾಡಿಕೊಟ್ಟಿವೆ.

ಹಾರಂಗಿ, ಹೇಮಾವತಿ, ನುಗು, ಕಬಿನಿ, ಭದ್ರಾ… ಹೀಗೆ ಹಲವು ಅಣೆಕಟ್ಟುಗಳ ನಿರ್ಮಾಣ ಅರಣ್ಯ ಪ್ರದೇಶಗನ್ನು ನುಂಗಿದ ಯೋಜನೆಗಳು; ಜತೆಗೆ ಪ್ರತಿರೋಧದ ಮಧ್ಯೆ ದಟ್ಟಾರಣ್ಯದೊಳಗೆ ಸ್ಥಾಪನೆಯಾದ ಜಲವಿದ್ಯುತ್ ಉತ್ಪಾದನಾ ಘಟಕಗಳು… ಈ ಎಲ್ಲದರ ಹೆಸರಿನಲ್ಲಿ ನಡೆಸಿದ ಅರಣ್ಯಹನನ ವನ್ಯಜೀವಿ ಇಂದು ನಾಡಿನತ್ತ ಮುಖ ಮಾಡಲು ಕಾರಣವಾಗಿದೆ.

ಇಲ್ಲಿ ತಪ್ಪು ಯಾರದ್ದೆಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ.

ಆಯಾ ಕಾಲಘಟ್ಟದಲ್ಲಿ ಕೆಲವು ಅಗತ್ಯ ಮತ್ತು ಅನಿವಾರ್ಯ. ಆದರೆ ಅದಕ್ಕೆ ಪರ್ಯಾಯವನ್ನು ಯೋಚಿಸಿ ಯೋಜಿಸಬೇಕಾದವರು ಮಾಡಿದ ಎಡವಟ್ಟು ಈಗ ಬಹುದೊಡ್ಡ ಸಮಸ್ಯೆ ಸೃಷ್ಟಿಸಿದೆ. ಶಾಶ್ವತವಾದ ಪರಿಹಾರವೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಈ ಸಂಘರ್ಷ ಎದ್ದು ನಿಂತಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ನಮ್ಮ ಜನಸಂಖ್ಯೆ ನಾಗಾಲೋಟದಲ್ಲಿ ವರ್ಧಿಸುತ್ತಿದೆ. ಸ್ವಾಮಿ, ನಮ್ಮ ಸಂಖ್ಯೆ ಬೆಳೀಬೇಕು ಅನ್ನೋ ನಾವು ದೈವಸೃಷ್ಟಿಯ ವನ್ಯಜೀವಿಗಳ ಸಂತತಿ ಬಗ್ಗೆ ಏಕೆ ಋಣಾತ್ಮಕ ಚಿಂತನೆ ಬೆಳೆಸಿಕೊಳ್ಳುತ್ತೇವೋ ನನಗೆ ಅರ್ಥವಾಗದು. ಸೃಷ್ಟಿ ಎಲ್ಲವನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ನಾವು ಸ್ವಾರ್ಥಕ್ಕೆ ಮಾಡಿಕೊಂಡ ಅಪರಾಧಗಳಿಗೆ ಮೂಕಪ್ರಾಣಿಗಳಿಗೆ ಏಕೆ ಸಂತಾನಹರಣ ಅಥವಾ ಇನ್ಯಾವ ನಿಯಂತ್ರಣ ಕ್ರಮದ ಕುರಿತು ಚಿಂತಿಸಬೇಕು.

1976ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೊಳಿಸಿದ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಅದಕ್ಕೂ ಮುನ್ನ 1972ರಲ್ಲಿ ಅನುಷ್ಠಾನಕ್ಕೆ ತಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳು ಪ್ರಸ್ತುತ ಸಮಯದಲ್ಲಿ ತಿದ್ದುಪಡಿ ಕಾಣಬೇಕಿದೆ.

ಆಗ ಇದ್ದ ನಮ್ಮ ಜನಸಂಖ್ಯೆ 33 ಕೋಟಿ ಈವಾಗ 133 ಕೋಟಿ ತಲುಪಿದೆ. ಅರಣ್ಯದೊಳಗೆ ಬಹಳ ಬದಲಾವಣೆ ಆಗಿದೆ. ಸರ್ಕಾರಗಳು ವಾಸ್ತವ ಚಿಂತನೆ ಅರಿತು ಕೆಲವು ಅನಿವಾರ್ಯ ಕ್ರಮಗಳಿಗೆ ಮುಂದಾಗದಿದ್ದಲ್ಲಿ ಭವಿಷ್ಯದಲ್ಲಿ ಕರಾಳ ದಿನಗಳನ್ನು ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಅರಣ್ಯದಂಚಿನಲ್ಲಿ ಬೆಳೆ ಬೆಳೆದು ಕಾಡಾನೆಗಳು ನಷ್ಟ ಮಾಡಿದವೆಂಬ ಆರೋಪ ಏಕೆ? ಇದು ಅವರ ಬದುಕಿನ ಅಂಗದ ಆಕ್ರಮಣ ಅಲ್ಲವೇ? ಎಲ್ಲವೂ ನಮ್ಮ ಮೂಗಿನ ನೇರಕ್ಕೆ ಯೋಚಿಸುವಂತಾಗಬಾರದು. ಪ್ರಕೃತಿ ಆಧಾರಿತ ನಮ್ಮ ಬದುಕಿನಲ್ಲಿ ಆಗುತ್ತಿರುವ ಎಲ್ಲಾ ರೀತಿಯ ಏರುಪೇರುಗಳಿಗೂ ನಾವೇ ಹೊಣೆಗಾರರು. ಜಾಗ-ಜೀವಿಗಳ ಅಧ್ಯಯನ ಅಂಕಿ ಸಂಖ್ಯೆಗಳ ಆಧಾರದಲ್ಲಿ ಆಗಬಾರದು. ಕಾಡಿನ ಅನುಭವ ವಾಸ್ತವಿಕ ಅರಿವಿಲ್ಲದೆ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಮಾಡುವ ವರದಿ ಇಲ್ಲವೇ ಅಧ್ಯಯನ ಮತ್ತಷ್ಟು ದುರಂತಗಳಿಗೆ ಅವಕಾಶ ಮಾಡಿಕೊಡುತ್ತದೆ. ಇದರ ಬಗ್ಗೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು.

ಅರಣ್ಯ ರಕ್ಷಕರಂತಿರುವ ಗಿರಿಜನರನ್ನು ದುರ್ಬಳಕೆ ಮಾಡಿಕೊಳ್ಳುವ ಎನ್.ಜಿ.ಒ. ಅಥವಾ ಸರ್ಕಾರಿ ವ್ಯವಸ್ಥೆಯನ್ನು ನಿಗ್ರಹಿಸಬೇಕಿದೆ. ಜನರಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಖಂಡಿತವಾಗಿ ಒಲವಿದೆ. ಆದರೆ ನಮ್ಮ ವ್ಯವಸ್ಥೆ ಹಾದಿತಪ್ಪಿಸುವ ಕೆಲಸ ಮಾಡುತ್ತಿರುವ ಅನುಮಾನ ಇದೆ. ಹಾಗಾಗಿಯೇ ನಾನು ಮೊದಲಿಗೆ ಉಲ್ಲೇಖಿಸಿದ್ದು ಇದು ಒಬ್ಬರ ತಪ್ಪಲ್ಲ; ಕ್ರೋಡೀಕೃತ ಪ್ರಮಾದ, ತಿದ್ದುವ ಕೆಲಸವೂ ಮತ್ತೊಮ್ಮೆ ಅಂತಹ ಮಹನೀಯರಿಂದಲೇ ಆಗಬೇಕಿದೆ.

ಅದು ತ್ವರಿತವಾಗಿ ರೂಪಿತವಾಗದಿದ್ದಲ್ಲಿ ಭವಿಷ್ಯದ ದುರಂತಕ್ಕೆ ನಾವೇ ಮುನ್ನುಡಿ ಬರೆದಂತಾಗುತ್ತದೆ. ಅರಣ್ಯ ಅಥವಾ ವನ್ಯಜೀವಿ ವಿಷಯ ಅಗಾಧವಾದುದು. ಮುಂದಿನ ತಲೆಮಾರಿಗೆ ಇದು ಅತ್ಯಗತ್ಯ. ಹಾಗಾಗಿ ನಾವು ನೀವೆಲ್ಲರೂ ಎಚ್ಚೆತ್ತು ನಿದ್ದೆಯಲ್ಲಿದ್ದಂತಿರುವ ಆಳುವವರನ್ನು ಬಡಿದೆಬ್ಬಿಸಬೇಕಿದೆ.

ನಿರೂಪಣೆ: ಕೆ.ವಿ.ಪರಮೇಶ್

Leave a Reply

Your email address will not be published.