ಮಾತಲ್ಲೂ ಗೂಗ್ಲಿ ಎಸೆದ ಸುನಿಲ್ ಜೋಶಿ! ಹುಬ್ಬಳ್ಳಿಯಾಂವ ಈಗ ಪ್ರತಿಭೆ ಶೋಧಕ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ, ಹುಬ್ಬಳ್ಳಿಯಾಂವ, ಸುನಿಲ್ ಜೋಶಿ ಅವರನ್ನು ಆಯ್ಕೆ ಮಾಡಿದೆ. ಬಹಳ ವರ್ಷಗಳ ಬಳಿಕ ಮತ್ತೊಮ್ಮೆ ಕನ್ನಡಿಗರೊಬ್ಬರಿಗೆ ಆಯಕಟ್ಟಿನ ಹುದ್ದೆ ಸಿಕ್ಕಿದೆ. ಇದು ಕನ್ನಡದ ಉದಯೋನ್ಮುಖ ಪ್ರತಿಭೆಗಳು ದೇಶದ ಪರ ಆಡಲು ಅನುಕೂಲ ಆಗಬಹುದು ಎಂಬ ಮಹದಾಸೆ ಚಿಗುರಿಸಿದೆ. ಆದರೆ ಸೀಮಿತ ಚೌಕಟ್ಟು, ಪ್ರಭಾವ, ಲಾಬಿ ಇದಕ್ಕೆ ಅವಕಾಶ ಮಾಡಿಕೊಡಲಿದೆಯಾ ಎನ್ನುವುದು ಯಕ್ಷಪ್ರಶ್ನೆ.

ಸಂಬಂಧ ಜೋಶಿ ಅವರನ್ನು ‘ಸಮಾಜಮುಖಿ’ ಪರವಾಗಿ ಮಾತಿಗೆಳೆದಾಗ ಅವರು ತಮ್ಮ ವೃತ್ತಿಬದುಕಿನ ಸ್ಪಿನ್ ಬೌಲಿಂಗ್ ಪ್ರಯೋಗವನ್ನು ಗೂಗ್ಲಿಯಾಗಿಸಿ ಉತ್ತರಿಸಿದ್ದಾರೆ! ಚುಟುಕು ಪ್ರಶ್ನೆ, ಅಷ್ಟೇ ಚುರುಕು ಉತ್ತರ…

ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ನಿರೀಕ್ಷೆ ಮಾಡಿದ್ರಾ?

ಖಂಡಿತಾ ಇಲ್ಲ. ಆದರೆ ಅಚ್ಚರಿಯೆಂಬಂತೆ ಅದೃಷ್ಟ ನನಗೆ ಒಲಿದಿದೆ. ದೊಡ್ಡ ಹುದ್ದೆ, ಭಾರೀ ಹೊಣೆಗಾರಿಕೆ.

ನಿಮಗೆ ಸ್ಪರ್ಧಿಗಳಿದ್ರಾ?

ನಮ್ಮವರೇ ಆದ ಗೆಳೆಯ ವೆಂಕಟೇಶ್‌ಪ್ರಸಾದ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಆಯ್ಕೆದಾರರ ಮನಸಲ್ಲಿ ನಾನಿದ್ದೆ.

ಆಯ್ಕೆ ಸಮಿತಿ ಅಧ್ಯಕ್ಷ ಅಂದ್ರೆ ವಿವಾದದ ಆಹ್ವಾನ ಅಲ್ಲವೆ?

ಹಾಗೆಂದುಕೊಳ್ಳುವುದು ತಪ್ಪು. ಇದು ನನ್ನೊಬ್ಬನ ನಿರ್ಧಾರ ಆಗಲ್ಲ. ಸಮಿತಿಯ ಇತರ ಸದಸ್ಯರ ಪಾತ್ರವೂ ಇರುತ್ತೆ. ಅಷ್ಟೇ ಅಲ್ಲ, ಟೀಂ ಕ್ಯಾಪ್ಟನ್ ಕೂಡಾ ಮುಖ್ಯ.

ಪ್ರಸ್ತುತ ಭಾರತ ಪ್ರತಿಭೆಗಳ ಆಗರವಾಗಿದೆ ಅನಿಸುತ್ತದೆಯಾ?

ಹೌದು. ನಮ್ಮಲ್ಲಿ ಆರಿಸಲು ಕಷ್ಟಕರವಾಗುವಷ್ಟು ಅದ್ಭುತ ಆಟಗಾರರಿದ್ದಾರೆ. ಆದರೆ ಆಟಗಾರನ ಪರ್ಫಾರ್ಮೆನ್ಸ್, ಕನ್ಸಿಸ್ಟೆನ್ಸಿ ಎಲ್ಲವೂ ಗಣನೆಗೆ ಬರುತ್ತದೆ.

ಆಯಾ ರಾಜ್ಯದವರು ಅಧ್ಯಕ್ಷರಾದಾಗ ರಾಜ್ಯಕ್ಕೆ ಆದ್ಯತೆ ಸಾಧ್ಯವಾ?

ಹಾಗಾಗುವುದು ಕಷ್ಟ. ಆಗಲೇ ಹೇಳಿದ ಹಾಗೆ ಆಟಗಾರನ ಕಠಿಣ ಪರಿಶ್ರಮದ ಜತೆಗೆ ಅನುಭವ, ಅದೃಷ್ಟ ಎಲ್ಲವೂ ಸೇರಿರುತ್ತವೆ.

ನೀವು ಒಂದು ರೀತಿ ಆಲ್‌ರೌಂಡರ್ ಅಲ್ವಾ?

ಅರ್ಥವಾಗಲಿಲ್ಲಾ… ನೀವೇ ಬಿಡಿಸಿ ಹೇಳಿ.

ನೀವು ಕ್ರಿಕೆಟ್ ಆಟಗಾರ, ಬಳಿಕ ಕೋಚ್, ಆನಂತರ ವೀಕ್ಷಕ ವಿವರಣೆಕಾರ, ಇದೀಗ ಆಯ್ಕೆ ಸಮಿತಿ ಅಧ್ಯಕ್ಷ.

(ಜೋರಾಗಿ ನಗುತ್ತಾ) …ಓ ಹೌದಲ್ವಾ!

ಕರ್ನಾಟಕದ ಆಟಗಾರರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಅದ್ಭುತ ಆಟಗಾರರ ಕಣಜ. ಹೆಸರು ಬಹಳ ಇವೆ. ರಾಹುಲ್, ಕರುಣ್, ಮಾಯಾಂಕ್, ಪಾಂಡೆ, ಪ್ರಸಿದ್ಧ್, ಗೌತಮ್, ಸಮರ್ಥ….

ದೇಶದ ಪರ ಆಡುವ ಅವಕಾಶ ಯಾರಿಗಿದೆ?

ಇದನ್ನು ನಾನು ಈ ಸ್ಥಾನದಲ್ಲಿದ್ದು ಹೇಳುವುದು ಕಷ್ಟ. ಆದರೆ ಪ್ರತಿಭೆ ಇದ್ದವರಿಗೆ ಅವಕಾಶ ಖಚಿತ. ಇಷ್ಟು ಮಾತ್ರ ಹೇಳಬಲ್ಲೆ.

ರಾಷ್ಟ್ರೀಯ ತಂಡದಲ್ಲಿ ಕನ್ನಡಿಗರ ಬಗ್ಗೆ ಅಸಡ್ಡೆ ಎಂಬ ಮಾತಿದೆಯಲ್ವಾ?

ನೋ.. ನಾನು ಇದನ್ನು ಒಪ್ಪಲ್ಲ. ಕಿರ್ಮಾನಿ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರಗೆ ಎಲ್ಲರೂ ಆಡಿದ್ದಾರೆ. ಇನ್ನೂ ಕೆಲವರು ಆಡುತ್ತಿದ್ದಾರೆ. ನಾನೂ ಆಡಿದ್ದೆ. ಇವೆಲ್ಲವೂ ನಿದರ್ಶನಗಳು.

ನೀವು ಆಡುವಾಗ ಒಮ್ಮೆ ಏಕಕಾಲಕ್ಕೆ 6 ಮಂದಿ ಆಟಗಾರರು ಕನ್ನಡಿಗರಿದ್ರು. ಮತ್ತೆ ಇತಿಹಾಸ ಮರುಕಳಿಸಬಹುದಾ?

ಹೌದು… ನಾನು, ಶ್ರೀನಾಥ್, ವೆಂಕಿ, ಭಾರಧ್ವಾಜ್, ಶಿರಗುಪ್ಪಿ, ಡೇವಿಡ್ ಜಾನ್ಸನ್ ಟೀಂನಲ್ಲಿ ಇದ್ದೆವು. ಅದು ಕನ್ನಡಿಗರ ಸುವರ್ಣಯುಗ. ಕಾಲಾಯ ತಸ್ಮೈ ನಮಃ

ವೀಕ್ಷಕ ವಿವರಣೆ ಮಿಸ್ ಮಾಡ್ಕೋತೀರಾ?

ಖಂಡಿತಾ.. ಅದೂ ಕೂಡ ಅದ್ಭುತ ಅನುಭವ. ‘ಸ್ಟಾರ್‌ಸ್ಪೋರ್ಟ್ಸ್ ಕನ್ನಡ’ ಒಳ್ಳೆಯ ಅವಕಾಶ ಕೊಟ್ಟಿತು. ನಮಗೆ ಮಾತ್ರ ಅಲ್ಲ. ಕ್ರಿಕೆಟ್‌ಗೂ ಕನ್ನಡಕ್ಕೂ ಸಂಬಂಧದ ಕೊಂಡಿ ಬೆಸೆದಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಉತ್ತಮ ಗೆಳೆಯ. ಕಠಿಣ ಪರಿಶ್ರಮಿ ಆಟಗಾರ. ಆಡಳಿತಗಾರ ಕೂಡಾ. ಬಹಳ ದೊಡ್ಡ ಕನಸು ಹೊತ್ತು ಆ ಹುದ್ದೆಗೆ ಬಂದಿದ್ದಾರೆ. ಅವರಿಂದಲೇ ನನಗೂ ಒಳ್ಳೆಯ ಅವಕಾಶ ಸಿಕ್ಕಿದೆ. ನಾವೆಲ್ಲರೂ ಸೇರಿ ಭಾರತೀಯ ಕ್ರಿಕೆಟ್ ಏಳಿಗೆಗೆ ಶ್ರಮಿಸುತ್ತೇವೆ.

Leave a Reply

Your email address will not be published.