ಮಾತು ಮುಂದೆ, ಸಾಧನೆ ಹಿಂದೆ!

ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ? ಎಂಬ ಪ್ರಶ್ನೆಗೆ ನನ್ನ ಸ್ಪಷ್ಟ ಮತ್ತು ನೇರ ಉತ್ತರ ‘ಇಲ್ಲ’ ಎಂಬುದಾಗಿದೆ.

ಈ ಲೇಖನ ತುಂಬಾ ದೀರ್ಘವಾಗಬಾರದು ಎಂಬ ಕಾರಣಕ್ಕೆ, ನಾಲ್ಕು ಅಂಶಗಳನ್ನು ಮಾತ್ರ ಇಟ್ಟುಕೊಂಡು ಚರ್ಚಿಸಿದ್ದೇನೆ. ಆ ನಾಲ್ಕು ಅಂಶಗಳೆಂದರೆ :

      1. ವಾಯುಮಾಲಿನ್ಯ 2. ಜಲಮಾಲಿನ್ಯ 3. ಶಬ್ದಮಾಲಿನ್ಯ 4. ಪ್ಲಾಸ್ಟಿಕ್ ಕಲ್ಮಶ

ವಾಯು ಮಾಲಿನ್ಯ

ವಾಯು ಮಾಲಿನ್ಯವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೇ ಅಲ್ಲದೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೂ ಗಣನೀಯವಾಗಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿದ ನಗರಗಳಾಗಿವೆ.

ವಾಯುಮಾಲಿನ್ಯವನ್ನು ಸರ್ಕಾರವಾಗಲೀ, ಜನರಾಗಲೀ ನಿಯಂತ್ರಿಸುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಕಟ್ಟಿಗೆ ಉರಿಸುವುದು ಅನಿವಾರ್ಯ. ವರ್ಷದಿಂದ ವರ್ಷಕ್ಕೆ ವಾಹನಗಳ ಓಡಾಟ ಹೆಚ್ಚುತ್ತಿದೆಯೇ ವಿನಾ ಕಡಿಮೆಯಾಗಿಲ್ಲ. ಕರ್ನಾಟಕ ಬಯಲು ಶೌಚ ಮುಕ್ತವಾಗಿಲ್ಲ. ಮುಷ್ಕರಗಳ ಸಂದರ್ಭದಲ್ಲಿ ಮುಷ್ಕರದ ಭಾಗವಾಗಿ ಟೈರುಗಳಿಗೆ, ಬಸ್ಸುಗಳಿಗೆ, ಲಾರಿಗಳಿಗೆ ಬೆಂಕಿ ಇಡುವುದು ಸಹಜ ಎನ್ನುವಂತಾಗಿದೆ. ಇನ್ನು ಕಾಡಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸುವುದುಂಟು, ಕೆಲವೊಮ್ಮೆ ಕಿಡಿಗೇಡಿಗಳು ಬೆಂಕಿ ಇಡುವುದುಂಟು. ಇದರಿಂದ ವಾಯುಮಾಲಿನ್ಯ ಉಂಟಾಗುತ್ತದೆ.

ವಾಯುಮಾಲಿನ್ಯದ ನಿಯಂತ್ರಣದ ಕ್ರಮಗಳೆಂದರೆ; ಹೆಚ್ಚುಹೆಚ್ಚು ಗಿಡಮರಗಳನ್ನು ಬೆಳೆಸುವುದು, ಆದಷ್ಟು ಕಡಿಮೆ ಇಂಧನವನ್ನು ಬಳಕೆ ಮಾಡುವ ಯಂತ್ರ ಆಧಾರಿತ ವಾಹನಗಳನ್ನು ತಯಾರಿಸುವುದು, ರಸ್ತೆಗಳನ್ನು ಉತ್ತಮ ಪಡಿಸುವುದು, ಸೈಕಲ್‌ಗಳ ಬಳಕೆಗೆ ಪ್ರೋತ್ಸಾಹಿಸುವದು, ಅರಣ್ಯ ಅಭಿವೃದ್ಧಿಪಡಿಸುವುದು ಮತ್ತು ಹಳೆಯ ವಾಹನಗಳನ್ನು ಓಡಿಸುವುದರ ಮೇಲೆ ನಿರ್ಬಂಧ ಹೇರುವುದು.

ಈ ಕ್ರಮಗಳಲ್ಲಿನ ಸಾಧನೆ ಏನೆಂದು ನೋಡುವುದಾದರೆ, ಇರುವ ಮರಗಳನ್ನು ರಸ್ತೆ ನಿರ್ಮಾಣಕ್ಕೊ, ರಸ್ತೆ ಅಗಲೀಕರಣಕ್ಕೊ, ಮೆಟ್ರೊ ಕಾಮಗಾರಿಗೊ ಕಡಿಯುತ್ತೇವೆಯೇ ವಿನಾ ಗಿಡ-ಮರಗಳನ್ನು ನೆಡುತ್ತಿಲ್ಲ. ಕಡಮೆ ಇಂಧನ ಬಳಸುವ ವಾಹನಗಳು ರಸ್ತೆಗೆ ಇಳಿದಿಲ್ಲ, ರಸ್ತೆಗಳ ದುಃಸ್ಥಿತಿಯ ಬಗ್ಗೆ ವಿವರಿಸುವ ಅಗತ್ಯವಿಲ್ಲ, ಸೈಕಲ್‌ಗಳಲ್ಲಿ ಯಾರೂ ಓಡಾಡುವುದಿಲ್ಲ. ಕಾರಣ ಇದು ಮರ್ಯಾದೆಯ ಪ್ರಶ್ನೆ. ಆದರೆ ಹಳೆಯ ವಾಹನ ಓಡಿಸುವುದರ ಮೇಲೆ ನಿರ್ಬಂಧ ಇದೆ, ಈ ಒಂದೇ ಒಂದು ಅಂಶದಿಂದ ವಾಯುಮಾಲಿನ್ಯ ನಿಯಂತ್ರಣವಾಗದು. ಇದು ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’.

ಜಲಮಾಲಿನ್ಯ

ಪ್ರಾಕ್ರೃತಿಕವಾಗಿ ದೊರೆತ ಶುದ್ಧ ನೀರನ್ನು ನಾವು ಅಶುದ್ಧಗೊಳಿಸಿದ್ದೇವೆ. ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕಗಳನ್ನು ಬಳಸಿ ಕೆರೆ-ಕಟ್ಟೆ, ನದಿ ನೀರನ್ನು ಅಶುದ್ಧಗೊಳಿಸಿದ್ದೇವೆ. ವಿವಿಧ ಬಗೆಯ ಕೈಗಾರಿಕಾ ತ್ಯಾಜ್ಯವನ್ನು ಹಾಗೂ ನಗರ-ಪಟ್ಟಣಗಳ ಕೊಳಚೆ ನೀರನ್ನು ಕೆರೆ, ನದಿ, ಸರೋವರಗಳಿಗೆ ಬಿಟ್ಟು ಮಲಿನಗೊಳಿಸಿದ್ದೇವೆ. ಪ್ರಾಣಿಗಳ ಮಲ-ಮೂತ್ರ ಮತ್ತು ಬಯಲು ಬಹಿರ್ದಸೆ ಕಾರಣದಿಂದ ಕಲ್ಮಶಗೊಳಿಸಿದ್ದೇವೆ.

2030ರ ವೇಳೆಗೆ ವಿಶ್ವದಲ್ಲಿ ಶೇ.40 ರಷ್ಟು ನೀರಿನ ಕೊರತೆ ಉಂಟಾಗಲಿದೆ ಎಂದು ವಿಶ್ವಸಂಸ್ಥೆಯ 2015ನೆಯ ಸಾಲಿನ ವರದಿ ಎಚ್ಚರಿಕೆ ನೀಡಿದೆ. 2025ರ ವೇಳೆಗೆ ಭಾರತದ ಶೇಕಡ 60ರಷ್ಟು ಅಂತರ್ಜಲ ಖಾಲಿಯಾಗಲಿದೆ ಎಂದು ವರದಿ ಎಚ್ಚರಿಸಿದೆ. ನೀರಿನ ಕೊರತೆಗೆ ಕಾರಣವೆಂದರೆ- ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿರುವುದು, ಎಲ್ಲೆಂದರಲ್ಲಿ ಭೂಮಿಯನ್ನು ಆಳಕ್ಕೆ ಕೊರೆದು ಅಂತರ್ಜಲವನ್ನು ಬಸಿದು ಹಾಕಿರುವುದು, ಅಂತರ್ಜಲವನ್ನು ಕಾಪಾಡುತ್ತಿದ್ದ ಮರಗಳನ್ನು ಬರಿದು ಮಾಡಿರುವುದು, ಇದರಿಂದ ಕೆರೆ-ಕಟ್ಟೆಗಳು, ನದಿಗಳು ಬತ್ತಿ ಹೋಗಿರುವುದು.

ನೀರಿನ ಕೊರತೆಯನ್ನು ತಗ್ಗಿಸಲು ಕೈಗೊಳ್ಳಬಹುದಾದ ಕ್ರಮಗಳೆಂದರೆ- ನದಿಗಳ ಜೋಡಣೆ, ಅಣೆಕಟ್ಟುಗಳ ನಿರ್ಮಾಣ, ನದಿಗಳ ಪುನರುಜ್ಜೀವನ, ಅಂತರ್ಜಲ ಪುನಶ್ಚೇತನ, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವುದು, ಬೋರ್ವೆಲ್‌ಗಳಿಗೆ ನಿಯಂತ್ರಣ ಹೇರುವುದು.

ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವುದು ಅನಿವಾರ್ಯವಾಗಿದೆ. ಏಕೆಂದರೆ ಭೂಮಿ ಮತ್ತು ಕೀಟಗಳು ಅವಕ್ಕೆ ಒಗ್ಗಿಬಿಟ್ಟಿವೆ. ಕೈಗಾರಿಕಾ ತ್ಯಾಜ್ಯ ಮತ್ತು ನಗರ-ಪಟ್ಟಣಗಳ ಕೊಳಚೆ ನೀರನ್ನು ಕೆರೆ-ಕಟ್ಟೆ, ನದಿ, ಸರೋವರಗಳಿಗೆ ಬಿಡುವುದನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಕಾರಣ ಇವು ಸಾರ್ವಜನಿಕವಾದವು. ಸಾರ್ವಜನಿಕವಾದವುಗಳನ್ನು ಬೇಕಾಬಿಟ್ಟಿ ಬಳಸುವುದನ್ನು ಜನರು ರೂಢಿಸಿಕೊಂಡಿರುವುದು. ನದಿ ಜೋಡಣೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ, ಬೋರ್‌ವೆಲ್ ಕೊರೆಯುವುದರ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಮರಳು ಗಣಿಗಾರಿಕೆ ಎಗ್ಗಿಲ್ಲದೆ ಮುಂದುವರಿದಿದೆ. ಹಿಗಾಗಿ ಜಲಮಾಲಿನ್ಯದ ವಿಷಯದಲ್ಲಿ ಸಾಧನೆ ಶೂನ್ಯ.

ಶಬ್ದಮಾಲಿನ್ಯ

ಶಬ್ದಮಾಲಿನ್ಯವನ್ನು ನಿವಾರಿಸಲು ಅಥವಾ ಕಡಮೆ ಮಾಡಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳೆಂದರೆ- ಗೃಹೋಪಯೋಗಿ ಯಂತ್ರಗಳು, ವಾಹನಗಳು, ಕಾರ್ಖಾನೆಗಳು ಮೊದಲಾದವುಗಳಿಗೆ ಶಬ್ದ ತಡೆಯುವ ಇಲ್ಲವೇ ಶಬ್ದ ಕಡಮೆ ಮಾಡುವ ಉಪಕರಣಗಳನ್ನು ಅಳವಡಿಸಬೇಕು. ಶಬ್ದವು ಪಸರಿಸದಂತೆ ಕೊಠಡಿಯ ಗೋಡೆಗಳಿಗೆ ಶಬ್ದ ಹೀರುವ ‘ಅಕಾಸ್ಟಿಕ್ ಹೆಂಚು’ ಅಥವಾ ಇಟ್ಟಿಗೆಗಳನ್ನು ಅಳವಡಿಸಬೇಕು. ಗಿಡ-ಮರಗಳಿಗೆ ಶಬ್ದ ಹೀರುವ ಸಾಮರ್ಥ್ಯವಿರುವುದರಿಂದ ಅವುಗಳನ್ನು ಕಾರ್ಖಾನೆಗಳ ಒಳ ಹಾಗೂ ಹೊರ ಆವರಣದಲ್ಲಿ ಬೆಳೆಸಬೇಕು. ಶಾಲಾ, ಕಾಲೇಜು, ಆಸ್ಪತ್ರೆ ಮೊದಲಾದ ನಿಶ್ಶಬ್ದ ವಲಯಗಳಲ್ಲಿ ಶಬ್ದ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮಕೈಗೊಳ್ಳಬೇಕು. ಧ್ವನಿವರ್ಧಕಗಳ ಬಳಕೆಯನ್ನು ಅಗತ್ಯವರಿತು ಹಿತ-ಮಿತವಾಗಿ ಉಪಯೋಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

ರಸ್ತೆಗಳಲ್ಲಿ ವಾಹನಗಳು ಚಲಿಸುವಾಗ ಉಂಟಾಗುತ್ತಿರುವ ಶಬ್ದವನ್ನು ಗಮನಿಸಿದರೆ, ಈ ಯಾವ ವಾಹನಗಳೂ ಶಬ್ದ ಕಡಿಮೆ ಮಾಡುವ ಉಪಕರಣಗಳನ್ನು ಅಳವಡಿಸಿಕೊಂಡಿಲ್ಲದಿರುವುದು ಸ್ಪಷ್ಟವಾಗುತ್ತದೆ. ಗಿಡ-ಮರಗಳನ್ನು ಬೆಳೆಸುವ ಕಡೆ ಯಾರಿಗೂ ಗಮನವಿಲ್ಲ. ಸಭೆ ಸಮಾರಂಭಗಳಲ್ಲಿ, ಜಯಂತಿ ಉತ್ಸವಗಳಲ್ಲಿ, ಧಾರ್ಮಿಕ ಸಮಾರಂಭಗಳಲ್ಲಿ, ಮದುವೆ-ಮುಂಜಿ ಸಂದರ್ಭದಲ್ಲಿ ಧ್ವನಿವರ್ಧಕಗಳ ಆರ್ಭಟ ಹೆಚ್ಚಾಗಿಯೇ ಇರುತ್ತದೆ. ಅಂದರೆ ಶಬ್ದಮಾಲಿನ್ಯ ಜನರಿಗೆ ಒಂದು ಅನಿವಾಂರ್ಯ ಪೀಡೆಯಾಗಿದೆ. ಹೀಗೆ ಈ ಸಂಬಂಧದ ಸಾಧನೆಯೂ ಶೂನ್ಯ.

ಪ್ಲಾಸ್ಟಿಕ್ ಕಲ್ಮಶ

ಮನುಷ್ಯ ತನ್ನ ಸೌಕರ್ಯಕ್ಕಾಗಿ ಸೃಷ್ಟಿಸಿಕೊಂಡ ಎಲ್ಲ ವಸ್ತುಗಳೂ ಸುಲಭದಲ್ಲಿ ಮಣ್ಣಲ್ಲಿ ಮಣ್ಣಾಗುವಂತಿರಬೇಕು. ಯಾವುದು ಮಣ್ಣಾಗುವುದಿಲ್ಲವೋ ಅದು ಕೊಳೆಯಾಗಿ, ತ್ಯಾಜ್ಯವಾಗಿ ಪರಿಣಮಿಸುತ್ತದೆ. ಸಕಲ ಜೀವಜಾತಿಗಳ ಬದುಕಿಗೆ ಕುತ್ತಾಗುತ್ತದೆ. ಪ್ಲಾಸ್ಟಿಕ್ ಮಣ್ಣಲ್ಲಿ ಮಣ್ಣಾಗದೆ ಸಮಸ್ತ ಜೀವ ಸಂಕುಲಕ್ಕೆ ಕುತ್ತಾಗಿ ಪರಿಣಮಿಸಿದೆ. ಒಂದು ಕಾಲದಲ್ಲಿ ಪ್ಲಾಸ್ಟಿಕ್ ಒಂದು ‘ವರ’ ಎಂದೇ ಭಾವಿಸಲಾಗಿತ್ತು. ಆದರೆ ಅದು ಈಗ ಒಂದು ‘ಶಾಪ’ವಾಗಿದೆ. ಶಾಪ ಏಕೆಂದರೆ ಅದರಿಂದ ಅನೇಕ ರೀತಿಯ ದುಷ್ಪರಿಣಾಮಗಳಾಗುತ್ತಿವೆ.

ಉದಾಹರಣೆಗೆ- ಪ್ಲಾಸ್ಟಿಕ್ ಲಕೋಟೆಗಳಲ್ಲಿ, ಜಾಡಿಗಳಲ್ಲಿ ಹಾಕಿಟ್ಟ ಪದಾರ್ಥ ನಿಧಾನವಾಗಿ ಆಹಾರವನ್ನು ವಿಷವಾಗಿ ರೂಪಾಂತರಿಸುತ್ತದೆ. ಪ್ಲಾಸ್ಟಿಕ್ ಇದ್ದ ಮಣ್ಣಲ್ಲಿ ಎರೆಹುಳು ಬೆಳೆಯಲಾರದು, ಸಸ್ಯಗಳ ಬೇರುಗಳು ಪಸರಿಸಿಕೊಳ್ಳಲು ಪ್ಲಾಸ್ಟಿಕ್ ಅಡ್ಡಿಪಡಿಸುತ್ತದೆ. ಪೇಟೆ-ಪಟ್ಟಣಗಳಲ್ಲಿ ಪೈಪು, ಚರಂಡಿಗಳಲ್ಲಿ ಸಿಕ್ಕಿಕೊಂಡ ಪ್ಲಾಸ್ಟಿಕ್, ಕೊಳಚೆ ನೀರಿನ ಸರಾಗ ಹರಿವಿಗೆ ತಡೆಯೊಡ್ಡುತ್ತದೆ. ಹುಲ್ಲು ಮೇವಿನ ಜೊತೆ ಪ್ಲಾಸ್ಟಿಕ್ ಬೆರೆತು ದನ-ಕರುಗಳ ಹೊಟ್ಟೆ ಸೇರಿ ಅವುಗಳ ಸಾವಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್‌ನ್ನು ಸುಟ್ಟು ನಾಶಗೊಳಿಸುವುದು ಅಪಾಯಕಾರಿ. ಏಕೆಂದರೆ ಸುಟ್ಟಾಗ ಹೊರಬರುವ ಕಾರ್ಬನ್ ಮೊನಾಕ್ಸೈಡ್, ಕ್ಲೋರಿನ್, ಸಲ್ಫರ್ ಡೈಆಕ್ಸೆöÊಡ್ ಮುಂತಾದ ವಿಷಾನಿಲಗಳು ವಾತಾವರಣ ಸೇರಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆರೋಗ್ಯ ಮತ್ತು ಪರಿಸರಕ್ಕೆ ಹಾನಿಕರವಾದ ಹಲವು ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸುವುದು ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ತಯಾರಿಕಾ ಘಟಕಗಳಿವೆ. ತೆರಿಗೆ ರೂಪದಲ್ಲೆ ಸರ್ಕಾರಕ್ಕೆ ಪ್ರತಿ ವರ್ಷ ಪ್ಲಾಸ್ಟಿಕ್ ಉದ್ಯಮದಿಂದ 150 ಕೋಟಿ ರೂಪಾಯಿ ವರಮಾನ ಲಭಿಸುತ್ತದೆ. ಪ್ಲಾಸ್ಟಿಕ್ ನಿಷೇಧಿಸಿದರೆ ತೆರಿಗೆ ಖೋತಾ ಆಗುತ್ತದೆ. ಸಾವಿರಾರು ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಪ್ಲಾಸ್ಟಿಕ್ ಘಟಕಗಳು ದಿವಾಳಿಯಾಗುತ್ತವೆ. ಒಟ್ಟಿನಲ್ಲಿ ಇದು ಬಗೆಹರಿಯದ ಸಮಸ್ಯೆಯಾಗಿದೆ.

ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಎಂದು ತಿಳಿಯದೆ, ಪ್ರತಿಯೊಬ್ಬರೂ, ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಒಪ್ಪಿಕೊಂಡು, ಕಾರ್ಯೋನ್ಮುಖರಾದರೆ, ಪರಿಸರ ಸಂರಕ್ಷಣೆ ಸಾಧ್ಯ.

 

 

 

 

Leave a Reply

Your email address will not be published.