ಮಾಧ್ಯಮಗಳು ಮತ್ತು ಸಾಮಾಜಿಕ ನ್ಯಾಯವೆಂಬ ಭ್ರಮೆ

ಮಾಧ್ಯಮಗಳ ವಿರುದ್ಧ ಇತ್ತೀಚೆಗೆ ಪ್ರತಿರೋಧದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣಗಳು ಅನೇಕ. ಈಚಿನ ದಿನಗಳಲ್ಲಿ ಮಾಧ್ಯಮಗಳು ಸಮಾಕಾಲೀನ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ವಿದ್ಯಮಾನಗಳ ಬಗೆಗೆ ತಳೆಯುತ್ತಿರುವ ‘ಚರ್ಚಾರ್ಹ ನಿಲುವುಗಳು ಇದಕ್ಕೆ ಕಾರಣವಾಗಿವೆ. ಅಲ್ಲದೆ ಅವುಗಳ ಮಾಲೀಕತ್ವದ ಸ್ವರೂಪ ಹಾಗೂ ಅವುಗಳಲ್ಲಿ ತೊಡಗಿಸುತ್ತಿರುವ ಬಂಡವಾಳವು ಇದಕ್ಕೆ ಕಾರಣವಾಗಿದೆ. ಸಮೂಹ ಮಾಧ್ಯಮಗಳು ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಬೇಕು; ಸಾಮಾಜಿಕ ಬದ್ಧತೆಯನ್ನಿಟ್ಟುಕೊಂಡು ‘ಜನಪರವಾಗಿ ಕೆಲಸ ಮಾಡಬೇಕೆಂಬ ಬಯಕೆ ಇರುವುದು ಇಂತಹ ಪ್ರತಿರೋಧಕ್ಕೆ ಕಾರಣ. ಹಾಗೂ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಇದುವರೆಗೂ ನಂಬಿಕೊಂಡು ಬರಲಾಗಿತ್ತು. ಅಂತಹ ನಂಬಿಕೆಗಳು ಇಂದು ಹುಸಿಯಾಗಿರುವುದೂ ಪ್ರತಿರೋಧಕ್ಕೆ, ಅಸಹನೆಗೆ ಅವಕಾಶ ಕಲ್ಪಿಸಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಅಸ್ತಿತ್ವದ ಬಗೆಗೆ, ಅವುಗಳ ಕಾರ್ಯಸ್ವರೂಪದ ಬಗೆಗೆ ಮರುಚಿಂತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

-ರಂಗನಾಥ ಕಂಟನಕುಂಟೆ

[ಗಮನಿಸಿ: ಈ ಲೇಖನದಲ್ಲಿ ಶ ಮತ್ತು ಷ ಗಳನ್ನು ಪೂರಕವಾಗಿ ಒಂದಕ್ಕೆ ಮತ್ತೊಂದು ಬದಲಿಯಾಗಿ ಬಳಸಲಾಗಿದೆ; ಇವು ಮುದ್ರಣ ದೋಷಗಳಲ್ಲ. ಲಿಪಿಗೆ ಸಂಬಂಧಿಸಿದಂತೆ ಲೇಖಕರಿಗೆ ಬೇರೆಯದೇ ಅಭಿಪ್ರಾಯವಿರುವುದು ಇದಕ್ಕೆ ಕಾರಣ]

ಮಾಧ್ಯಮಗಳ ವಿರುದ್ಧದ ಅಸಹನೆ ಮತ್ತು ಪ್ರತಿರೋಧ ಎನ್ನುವುದು ಕೇವಲ ಮೇಲ್ಮಟ್ಟದ ಟೀಕೆ ಮಾತ್ರವಾಗಿದ್ದರೆ ಅದರಿಂದ ಮಾಧ್ಯಮಗಳ ನಿಜರೂಪದ ದರ್ಶನವಾಗುವುದಿಲ್ಲ. ಅವುಗಳ ವರ್ತನೆಯಲ್ಲಿನ ನಕಾರಾತ್ಮಕ ಬದಲಾವಣೆಯೂ ತಿಳಿಯುವುದಿಲ್ಲ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ವ್ಯಾಪಾರಿ ಸಂಬಂಧಗಳಲ್ಲಿ ಆಗಿರುವ ಸಂಕೀರ್ಣ ಬದಲಾವಣೆಯನ್ನು ಗಮನಿಸದಿದ್ದರೆ ಮಾಧ್ಯಮಗಳ ಇಂದಿನ ವರ್ತನೆಯ ಸಂಕೀರ್ಣತೆ ಮತ್ತು ಅವುಗಳು ಸೃಶ್ಟಿಸಲಿರುವ ದುರಂತ ತಿಳಿಯುವುದಿಲ್ಲ. ಹಾಗಾಗಿ ಇಂದಿನ ಮಾಧ್ಯಮಗಳ ಧೋರಣೆ, ವರ್ತನೆ ಮತ್ತು ಅವುಗಳ ನಿಲುವುಗಳಲ್ಲಿ ಪಲ್ಲಟವಾಗಲು ಅವುಗಳ ಮೂಲರಚನೆಯಲ್ಲಿ ನಡೆದಿರುವ ಬದಲಾವಣೆಯನ್ನು ಗಮನಿಸಬೇಕಿದೆ.

ಮುದ್ರಣ ಮಾಧ್ಯಮವು (ಪತ್ರಿಕೆಗಳು) ಆರಂಭ ಕಾಲದಲ್ಲಿ ಪ್ರಭುತ್ವದ ಮತ್ತು ಉಳ್ಳವರ್ಗಗಳ ಪ್ರತಿರೋಧಿ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದ್ದ ಉದಾಹರಣೆಗಳಿವೆ. ನಮ್ಮ ದೇಶದಲ್ಲಿ ಮಿಶನರಿಗಳು ಮತ ಪ್ರಚಾರಕ್ಕೆ ಪತ್ರಿಕೆಗಳನ್ನು ಆರಂಭಿಸಿದವು. ನಂತರ ಅದೇ ಪತ್ರಿಕೆಗಳು ವಸಾಹತುಶಾಹಿಯ ವಿರುದ್ಧ ಜನರನ್ನು ಎಚ್ಚರಗೊಳಿಸಲು ಬಳಕೆಯಾದವು.

ಬಾಲಗಂಗಾಧರನಾಥ ತಿಲಕ್, ಗಾಂಧಿ, ಅಂಬೇಡ್ಕರ್ ಅಂತಹವರು ಪತ್ರಿಕೆಗಳನ್ನು ನಡೆಸಿದರು. ಸ್ವಾತಂತ್ರ್ಯಾನಂತರದ ಕೆಲವು ದಶಕಗಳ ಕಾಲದಲ್ಲಿಯೂ ಪತ್ರಿಕೆಗಳು ಇದೇ ಜಾಡಿನಲ್ಲಿ ನಡೆದವು. ನಾಡಿನ ಸಾಹಿತ್ಯ ಸಂಸ್ಕøತಿ, ಆರ್ಥಿಕತೆ ಮತ್ತು ರಾಜಕಾರಣವನ್ನು ಜನರ ನೆಲೆಯಿಂದ ನೋಡುವ ಧೋರಣೆ ಪತ್ರಿಕೆಗಳಲ್ಲಿತ್ತು. ಪ್ರಭುತ್ವವನ್ನು ವಿರೋಧಿ ನೆಲೆಯಲ್ಲಿ ನಿಲ್ಲಿಸಿ ಪ್ರತಿಪಕ್ಶದಂತೆ ಕೆಲಸ ಮಾಡುತ್ತಿದ್ದವು. ಆ ಮೂಲಕ ಓದುಗರ ಪ್ರಜ್ಞೆಯನ್ನು ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದವು. ಸಾಮಾಜಿಕ ಕಾಳಜಿಯುಳ್ಳ ಪ್ರಜ್ಞಾವಂತರು ಪತ್ರಕರ್ತರಾಗಿ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರಲ್ಲಿಯೂ ಜಾತಿ ಧರ್ಮಗಳ ಬಗೆಗೆ ಪೂರ್ವಗ್ರಹ ಪೀಡಿತ ಬುದ್ಧಿಯಿದ್ದರೂ ಇಂದಿನ ಬಹುತೇಕ ‘ಅಜ್ಞಾನಿ’ ‘ಅನಕ್ಶರಸ್ಥ’ ಪತ್ರಕ್ರರ್ತರಿಗಿಂತ ಉತ್ತಮವಾದವರಾಗಿದ್ದರು. ಪತ್ರಕರ್ತರಾದವರಿಗೆ ಒಂದು ಲಜ್ಜೆಯಿತ್ತು. ಅಂತಹ ಲಜ್ಜೆ ಮತ್ತು ಸಾಮಾಜಿಕ ಕಾಳಜಿಗಳು ಇಂದು ಕಣ್ಮರೆಯಾಗಿವೆ. ಪತ್ರಕರ್ತರು ಬಂಡವಾಳಿಗರ, ರಾಜಕೀಯ ಪಕ್ಶಗಳ ಬಾಲಬುಡಕರಂತೆ, ಪ್ರಚಾರಕರಂತೆ, ಸೇವಕರಂತೆ ಬದಲಾಗಿದ್ದಾರೆ.

ಅಂದರೆ ಈಚಿನ ದಶಕಗಳಲ್ಲಿ ಪತ್ರಕರ್ತರಾಗಿ ಕೆಲಸಕ್ಕೆ ಸೇರಿಕೊಂಡವರಿಗೆ ಯಾವುದೇ ಕಾಳಜಿ ಬದ್ಧತೆಗಳಿಲ್ಲ. ತೊಂಬತ್ತರ ದಶಕದ ನಂತರ ಹುಟ್ಟಿ ಬೆಳೆದವರಿಗೆ ಪ್ರಬಲವಾಗಿ ಅವರನ್ನು ಪ್ರಭಾವಿಸಿರುವುದು ಬಲಪಂಥೀಯ ವಿಚಾರಧಾರೆಗಳೇ. ಶಾಲೆ ಕಾಲೇಜು, ಮನೆಗಳು, ಮಾಧ್ಯಮಗಳು, ಹೊರಗಿನ ರಾಜಕೀಯ ಪರಿಸರ ಎಲ್ಲ ಕಡೆ ಅವರ ಮೇಲೆ ಪ್ರಭಾವ ಬೀರಿರುವುದು ಬಲಪಂಥೀಯ ವಿಚಾರಧಾರೆಗಳು ಮತ್ತು ಮುಕ್ತ ಮಾರುಕಟ್ಟೆ ತೆರೆದಿಟ್ಟ ಅಭಿವೃದ್ಧಿಯ ಪರಿಕಲ್ಪನೆ, ಅನುಭೋಗಿ ಜೀವನ ಸಂಸ್ಕøತಿಗಳೇ. ಶಾಲಾ ಕಾಲೇಜುಗಳು ಕಲಿಸುತ್ತಿರುವುದು ಅದೇ ವಿಚಾರಗಳನ್ನೇ. ಅದಕ್ಕಿಂತ ಭಿನ್ನವಾದ ವಿಚಾರಧಾರೆ ಹೊಸತಲೆಮಾರಿನಲ್ಲಿ ಹರಿಯುವಂತಹ ಪ್ರಬಲವಾದ ಚಳವಳಿಗಳು ವೈಚಾರಿಕ ಕ್ರಾಂತಿ ನಡೆದಿಲ್ಲ. ಆ ದಿಸೆಯಲ್ಲಿ ಮಾಧ್ಯಮಗಳು ಕೆಲಸ ಮಾಡದಿರುವುದು ಕಾರಣ.

ಇದೇ ಕಾಲದಲ್ಲಿಯೇ ಶಿಕ್ಷಣ ಜ್ಞಾನದ ನೆಲೆಯಿಂದ ಕೇವಲ ಮಾಹಿತಿಯ ನೆಲೆಯಾಗಿ ಬದಲಾಗಿದೆ. ವೈಚಾರಿಕತೆ ಬೌದ್ಧಿಕತೆಗಳು ಗೇಲಿಗೆ ಒಳಗಾಗಿದ್ದು ಇದೇ ಕಾಲದಲ್ಲಿ. ಇದೇ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ರಂಗ ಪ್ರವೇಶಿಸಿ ಯುವ ಮನಸ್ಸುಗಳನ್ನು ಬಲಪಂಥೀಯ ಮತ್ತು ಪುರೋಹಿತಶಾಹಿ ಮೌಲ್ಯಗಳ ಕಡೆಗೆ ಗುಪ್ತವಾಗಿ ಸೆಳೆಯಲು ಕಾರಣವಾದದ್ದನ್ನು ಗಮನಿಸಬಹುದು. ವೈಚಾರಿಕತೆಗೆ ಬದಲಾಗಿ ಅನಗತ್ಯ ಅವಕಾಶಗಳು ಯುವಕರಿಗೆ ದೊರೆಯತೊಡಗಿ ಅವರು ಗಂಭೀರವಾದ ಸಾಹಿತ್ಯ, ವೈಚಾರಿಕತೆ, ಜ್ಞಾನಗಳಿಂದಲೇ ವಿಮುಖರಾದ ಕಾಲವಿದು.

ಇದೆಲ್ಲದರ ಪರಿಣಾಮವಾಗಿ ಇಡೀ ಒಂದು ತಲೆಮಾರಿನ ಆಲೋಚನೆಯ ನೆಲೆಯೇ ಪ್ರತಿಗಾಮಿ ಚಿಂತನೆಗಳಿಂದ ಪೋಶಣೆಗೊಂಡು ಬೆಳೆದಿದೆ. ಇದರ ಕರಾಳ ಪರಿಣಾಮವನ್ನು ಇಂದು ವಿಶ್ವವಿದ್ಯಾಲಯಗಳಲ್ಲಿ ಶಾಲಾ ಕಾಲೇಜುಗಳಲ್ಲಿ, ಆಡಳಿತದಲ್ಲಿ ನ್ಯಾಯಾಲಯಗಳಲ್ಲಿ ರಾಜಕೀಯದಲ್ಲಿ ಎಲ್ಲೆಡೆ ಕಾಣಬಹುದು. ಇದರ ಹಸಿ ಹಸಿ ಪರಿಣಾಮವನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ಉಳಿದವು ಅಶ್ಟು ನೇರವಾಗಿ ಕಣ್ಣಿಗೆ ರಾಚದಿರುವುದರಿಂದ ಅವುಗಳ ಬಗೆಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬಂಡವಾಳಶಾಹಿಗಳ ಮುಕ್ತಮಾರುಕಟ್ಟೆ ವ್ಯವಸ್ಥೆ ಮತ್ತು ಬಲಪಂಥೀಯ ರಾಜಕಾರಣ ಜೊತೆಗೆ ಬೆಳೆದ ಪರಿಣಾಮ ಇಂದು ನಮ್ಮ ಸಮಾಜದ ಎಲ್ಲ ವಲಯಗಳಲ್ಲಿ ಅದರ ಕರಾಳ ಛಾಯೆಯನ್ನು ಬೀರುತ್ತಿದೆ.

ಇದೇ ಸಂದರ್ಭದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ದೇಶೀಯ ಮತ್ತು ಅಂತಾರಾಶ್ಟ್ರೀಯ ಉದ್ಯಮಗಳ ಅಂಗಸಂಸ್ಥೆಗಳಾಗಿ ಬದಲಾಗಿವೆ. ದೇಶೀ ಮತ್ತು ವಿದೇಶಿ ಬಂಡವಾಳಿಗರು ವಿಪರೀತ ಹಣವನ್ನು ಮಾಧ್ಯಮ ಕ್ಶೇತ್ರದಲ್ಲಿ ತೊಡಗಿಸಿದ್ದಾರೆ. ರಿಲಯನ್ಸ್‍ನಂತಹ ಉದ್ಯಮ ಸಂಸ್ಥೆ ದೇಶದ ಅನೇಕ ವಾಹಿನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇತರೆಲ್ಲ ಉದ್ದಿಮೆಗಳು ಆ ಸಂಸ್ಥೆಯ ಅಧೀನದಲ್ಲಿರುವಂತೆ ಮಾಧ್ಯಮವೂ ಅದರ ಅಧೀನಕ್ಕೆ ಸಿಕ್ಕಿದೆ.

ಸ್ಟಾರ್ ಗ್ರೂಪ್‍ನ ರೂಪರ್ಟ್ ಮರ್ಡಾಕ್‍ನಂತಹ ದೈತ್ಯರು ಜಾಗತಿಕವಾಗಿ ಮಾಧ್ಯಮಗಳ ಮೇಲೆ ಏಕಸ್ವಾಮ್ಯವನ್ನು ಸಾಧಿಸಿದ್ದಾರೆ. ಇವರಿಗೆ ಮಾಧ್ಯಮ ಕ್ಶೇತ್ರ ಹೂಡಿಕೆಗೆ ಮತ್ತು ಲಾಭ ಗಳಿಕೆಗೆ ಫಲವತ್ತಾದ ಕ್ಶೇತ್ರ. ಇಂತಹ ಉದ್ದಿಮೆದಾರರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೆಂದೇ ವಿವಿಧ ವಾಹಿನಿಗಳನ್ನು ಆರಂಭಿಸುತ್ತಿದ್ದಾರೆ. ತಮ್ಮ ಮಾರುಕಟ್ಟೆಯ ವಿಸ್ತರಣೆಗೆ ಪೂರಕವಾಗಿ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಚಿನ ದಶಕಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಉಳ್ಳವರ ಮತ್ತು ಬಂಡವಾಳಿಗರ ಹಿಡಿತಕ್ಕೆ ಸಿಕ್ಕಿಕೊಂಡಿವೆ. ಇದು ಒಂದು ಜಾಗತಿಕವಾದ ಏಕಸ್ವಾಮ್ಯ ವ್ಯವಸ್ಥೆಯಾಗಿ ಬೆಳೆದಿದೆ. ಯಾರೋ ಕೆಲವರು ಭಿನ್ನಮತ ತೋರಿದರೆ ಅಂತಹವರನ್ನು ಮಟ್ಟಹಾಕುವ ಪ್ರಯತ್ನಗಳು ನಡೆಯುತ್ತಿವೆ. ಭಿನ್ನಮತವನ್ನು ಹತ್ತಿಕ್ಕಲಾಗುತ್ತಿದೆ. ಯಾಕೆಂದರೆ ಇಂತಹ ಭಿನ್ನಮತೀಯ ಶಕ್ತಿಗಳು, ಜಗತ್ತಿನಲ್ಲಿ ಬೆಳೆಯುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು, ಏಕಸ್ವಾಮ್ಯ ಮಾರುಕಟ್ಟೆಯನ್ನು, ಬಂಡವಾಳಿಗರ ಹುನ್ನಾರಗಳನ್ನು ಬಯಲಿಗೆಳೆದು ಮುಜುಗರ ಸೃಶ್ಟಿಸುತ್ತಾರೆ!

ಇದೇ ಭಿನ್ನಮತೀಯರು ಬಲಪಂಥೀಯ ಪೊಳ್ಳುತನವನ್ನು ಬಯಲಿಗೆಳೆಯುತ್ತಾರೆ. ಹಾಗಾಗಿ ಅಂತಹ ಭಿನ್ನಮತೀಯರನ್ನು ನಗರ ನಕ್ಸಲರೆಂದೋ, ದೇಶದ್ರೋಹಿಗಳೆಂದೋ, ಅಭಿವೃದ್ಧಿ ವಿರೋಧಿಗಳೆಂದೋ ಕರೆದು ಅವರ ಧ್ವನಿಯಡಗಿಸುವ ಪ್ರಯತ್ನ ಮಾಡಲಾಗುತ್ತಿದೆ.  ಆ ಮೂಲಕ ಪ್ರಜಾಪ್ರಭುತ್ವದ ಹೆಸರಿನಲ್ಲಿ ಭಿನ್ನಮತ ವ್ಯಕ್ತಪಡಿಸುವವರ ಧ್ವನಿಗಳಿಗೆ ಜಾಗವೇ ಇಲ್ಲದಂತೆ ಮಾಡಲಾಗುತ್ತಿದೆ. ಮತ್ತು ಭಿನ್ನಮತ ವ್ಯಕ್ತಮಾಡುವ ಮಾಧ್ಯಮಗಳನ್ನೇ ಸ್ವಾಧೀನಪಡಿಸಿಕೊಂಡು ಅವುಗಳನ್ನು ನಾಶಮಾಡಲಾಗುತ್ತಿದೆ. ಅಂತಹ ಮಾಧ್ಯಮಗಳಲ್ಲಿದ್ದ ಪ್ರಜ್ಞಾವಂತರನ್ನು ಬಲವಂತವಾಗಿ ಹೊರ ಹಾಕಲಾಗುತ್ತಿದೆ. ಹಾಗಾಗಿಯೇ ಜನರ ದನಿಯಾಗಿ ಕೆಲಸ ಮಾಡುವ ಸಂಸ್ಥೆಗಳು, ಪತ್ರಿಕೆಗಳು ಉಳಿಯಲಾಗದ ಸ್ಥಿತಿಗೆ ತಲುಪಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ನೀಡುವ ಮುಕ್ತ ಅವಕಾಶಗಳನ್ನು ಬಳಸಿಕೊಂಡೇ ಪ್ರಜಾಪ್ರಭುತ್ವ ವಿರೋಧಿಯಾದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ದೇಶ ಯಾವ ಸ್ವಾಯತ್ತ ಸಾರ್ವಜನಿಕ ಸಂಸ್ಥೆಗಳೂ ಕೂಡ ಸ್ವತಂತ್ರವಾಗಿ ಉಳಿದಿಲ್ಲ. ಎಲ್ಲ ಪ್ರಭುತ್ವ ಅಡಿಗೆ ಸಿಕ್ಕಿ ಅವಸಾನದ ಹಂಚಿನಲ್ಲಿವೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಈ ಮೊದಲು ಮಾಧ್ಯಮಗಳ ಮಾಲೀಕರು ಬೇರೆ; ಸರಕುಗಳ ತಯಾರಕರು ಬೇರೆ ಎಂಬ ಒಂದು ಸಣ್ಣ ವ್ಯತ್ಯಾಸವಿತ್ತು. ಆದರೆ ಇಂದು ಸರಕುಗಳ ತಯಾರಕರು ಮತ್ತು ಮಾಧ್ಯಮಗಳ ಮಾಲೀಕರು ಒಬ್ಬರೇ ಆಗಿರುವುದು ಹೊಸ ಬೆಳವಣಿಗೆ. ಮಾಲೀಕರ ಸರಕುಗಳ ಮಾರಾಟದ ಹೆಚ್ಚಳಕ್ಕೆ ಅನುಕೂಲವಾಗುವಂತೆ ಮಾಧ್ಯಮಗಳು ಪ್ರಚಾರವಾಹಿನಿಗಳಾಗಿ ಇಂದು ಕೆಲಸ ಮಾಡಬೇಕಿದೆ. ಮಾಧ್ಯಮಗಳು ಬಂಡವಾಳಿಗರ ವಶವಾಗಿ ಉದ್ಯಮಿಗಳ ಪರವಾದ ಪ್ರಚಾರವಾಹಿನಿಗಳಾಗಿ ಬದಲಾಗಿವೆ. ಹೀಗಿರುವಾಗ ಅವು ‘ಸಾಮಾಜಿಕ ಬದ್ಧತೆ’ಯನ್ನು ಹೊಂದಿರಲು ಹೇಗೆ ಸಾಧ್ಯ?

ಅದರಲ್ಲಿಯೂ ವಿದ್ಯುನ್ಮಾನ ಮಾಧ್ಯಮಗಳು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿಕೆಯಿಂದ ಸ್ಥಾಪನೆಗೊಂಡಿವೆ.  ಅಂತಹ ಬಂಡವಾಳವನ್ನು ದಮನಿತ ಜಾತಿಗಳ ಜನರು ಮಾಧ್ಯಮಗಳಲ್ಲಿ ತೊಡಗಿಸಲು ಸಾಧ್ಯವೇ ಇಲ್ಲ. ಹಾಗಾಗಿ ಬಂಡವಾಳಿಗರಿಂದ ಬಂಡವಾಳಿಗರಿಗಾಗಿ ಮಾಧ್ಯಮಗಳು ಆರಂಭವಾಗಿವೆ. ಇಂತಹ ಮಾಧ್ಯಮಗಳು ಬಂಡವಾಳ ಹೂಡಿರುವ ಮಾಲೀಕ ವರ್ಗಕ್ಕೆ ವಿರುದ್ಧವಾಗಿ ಜನರಪರ ಕಾಳಜಿಯಿಂದ ಕೆಲಸ ಮಾಡಲು ಹೇಗೆ ಸಾಧ್ಯ?

ಹಾಗಾಗಿ ಈ ಮೊದಲಿಗಿಂತ ಇಂದಿನ ಮಾಧ್ಯಮಗಳ ಸ್ಥಾಪನೆ ಮತ್ತು ಅವುಗಳ ನಿರ್ವಹಣೆಯ ಮೂಲ ಆಶಯವೇ ಸಮಸ್ಯೆಯಿಂದ ವಂಚನೆಯಿಂದ ಕೂಡಿದೆ. ವಿವಿಧ ವಾಹಿನಿಗಳು ಪತ್ರಿಕೆಗಳು ಬಂಡವಾಳಿಗರ ಮತ್ತು ಬಲಪಂಥೀಯ ರಾಜಕೀಯ ಪಕ್ಶಗಳ ಕರಪತ್ರಗಳಂತೆ ಬದಲಾಗಿವೆ. ಅವುಗಳ ಭಾಶೆ ಸಂಪೂರ್ಣವಾಗಿ ಬದಲಾಗಿದೆ. ಅಲ್ಲಿ ಜನರ ಭಾಶೆ ದನಿಗಳಿಲ್ಲ. ಬಂಡವಾಳಿಗರ, ಮತೀಯವಾದಿಗಳ ದನಿಗಳೇ ಅಲ್ಲಿ ಅಬ್ಬರಿಸುತ್ತಿರುವುದು. ಜನರ ನೆಲೆಯಿಂದ ಒಂದು ಸಮಾಜವನ್ನು ಇಡಿಯಾಗಿ ನೋಡುವ ಬಗೆಯನ್ನು ಬದಲಿಸಿ ಉದ್ಯಮದ ಮತ್ತು ಮಾರುಕಟ್ಟೆಯ ನೆಲೆಯಿಂದ ಉಳ್ಳವರ ಪಟ್ಟಭದ್ರ ಹಿತಾಸಕ್ತಿಯ ನೆಲೆಯಿಂದ ನೋಡುವ ವಿಧಾನ ಪ್ರಬಲವಾಗಿ ಬೆಳೆದಿದೆ. ಅದನ್ನು ಉದ್ದೇಶಪೂರ್ವಕವಾಗಿಯೇ ಮಾರುಕಟ್ಟೆಯ ಜಗತ್ತು ದೇಶೀಯವಾಗಿ ಮತ್ತು ಜಾಗತಿಕವಾಗಿ ಬೆಳೆಸಿದೆ. ಇಂತಹ ವಿಧಾನದ ಮೂಲಕ ಒಟ್ಟು ದೇಶದ ಜನರ ಮನಸ್ಸನ್ನು, ಪ್ರಜ್ಞೆಯನ್ನು ಜೇಡಿ ಮಣ್ಣಿನಂತೆ ತಿದ್ದಿ ತಯಾರಿಸುವ ಬೊಂಬೆಗಳಂತೆ ಜನರನ್ನು ಮಾನಸಿಕವಾಗಿ ತಯಾರಿಸಲಾಗುತ್ತಿದೆ.

ಯಾಕೆ ಹೀಗೆ ತಯಾರಿಸಲಾಗುತ್ತಿದೆ? ನಿಡುಗಾಲದಲ್ಲಿ ಇದರ ಸಾಮಾಜಿಕ ಪರಿಣಾಮಗಳೇನು? ಎಂಬುದನ್ನು ಅರಿಯುವ ಅಗತ್ಯ ಇಂದು ಎಂದಿಗಿಂತ ಹೆಚ್ಚಾಗಿದೆ. ಯಾಕೆಂದರೆ ಇಲ್ಲಿಯವರೆಗೂ ಜನಸಮುದಾಯಗಳು ಕಟ್ಟಿಕೊಂಡು ಬಂದಿದ್ದ ಭಾಶೆ, ಸಂಸ್ಕೃತಿ, ಲೋಕದೃಶ್ಟಿ ಮತ್ತು ಲೋಕಾನುಸಂಧಾನದ ಬಗೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ ಆ ಜಾಗದಲ್ಲಿ ತಮಗೆ ಬೇಕಾದ ಲೋಕದೃಶ್ಟಿಯನ್ನು ಸ್ಥಾಪಿಸುತ್ತದೆ. ಅಂದರೆ ಮಾರುಕಟ್ಟೆಯ ವ್ಯಾಪಾರಿ ದೃಶ್ಟಿಯನ್ನು, ಅದಕ್ಕೆ ಅನುಕೂಲವಾಗುವಂತಹ ಭಾಶೆ, ಸಂಸ್ಕೃತಿ, ಧರ್ಮ ಮತ್ತು ಲೋಕದೃಶ್ಟಿಗಳನ್ನು ಬೆಳೆಸುತ್ತದೆ. ಇದರ ಮೇಲಿನ ಸಂಪೂರ್ಣ ಹಿಡಿತವನ್ನು ಸಾಧಿಸಿರುತ್ತದೆ.

ಇಲ್ಲಿ ಭಾಶೆ, ಸಂಸ್ಕøತಿ ಎಲ್ಲವೂ ಸರಕಾಗಿರುವುದರಿಂದ ಅವುಗಳನ್ನು ಮಾರುವ ವಾಹಿನಿಗಳಾಗಿ ಮಾಧ್ಯಮಗಳಿವೆ. ಹಾಗಾಗಿ ಅವುಗಳ ಮೇಲೆ ಹಿಡಿತ ಸಾಧಿಸುವುದು ಬಂಡವಾಳಿಗ ವರ್ಗದ ಉದ್ದೇಶ. ಇದನ್ನು ಹಾಗೆ ಒಮ್ಮೆ ಬೆಳೆಸಿದ ನಂತರ ಮತ್ತೆ ಜನರನ್ನು ಮತ್ತೆ ಜನಪರ ಲೋಕದೃಶ್ಟಿಯ ಕಡೆಗೆ ಮರಳಿ ತರುವುದು ಬಹುದೊಡ್ಡ ಸವಾಲು. ಉದಾಹರಣೆಗೆ ಅವೈದಿಕ ನೆಲೆಯಿಂದ ವೈದಿಕದ ನೆಲೆಗೆ ರೂಪಾಂತರಗೊಂಡ ಸಮುದಾಯಗಳನ್ನು ಮತ್ತೆ ಅವೈದಿಕದ ನೆಲೆಗೆ ತರುವುದು ಎಶ್ಟ್ಟು ಅಸಾಧ್ಯವೋ ಇದೂ ಕೂಡ ಅಶ್ಟೇ ಕಶ್ಟಸಾಧ್ಯ.

ವಾಸ್ತವವಾಗಿ ನೋಡಿದರೆ ಮಾಧ್ಯಮಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ. ಅವು ‘ಹೊಸ ವೈಚಾರಿಕತೆ’ಯ ಆಧಾರದ ಮೇಲೆಯೇ ರೂಪುಗೊಂಡಿರುವುದು. ಅಂದರೆ ಅದು ಹೊಸಕಾಲಕ್ಕೆ ಹೊಸ ವಿಚಾರಗಳನ್ನು ಪ್ರಸಾರ ಮಾಡುವ ಸಾಧನವಾಗಿ ಮಾಧ್ಯಮಗಳು ಕೆಲಸ ಮಾಡಬೇಕು. ಮೌಢ್ಯಗಳನ್ನು ಪ್ರಸಾರ ಮಾಡಬಾರದು. ಆದರೆ ಇಂದಿನ ವಿದ್ಯುನ್ಮಾನ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಹೆಚ್ಚು ಕಾರ್ಯಕ್ರಮಗಳು ‘ಭೂತ’ವನ್ನು ಆಧರಿಸಿವೆ ಮತ್ತು ಮೌಢ್ಯ ಪ್ರಸಾರ ಮಾಡುತ್ತಿವೆ. ಉದಾಹರಣೆಗೆ, ಪೌರಾಣಿಕ ಮತ್ತು ಐತಿಹಾಸಿಕ ಧಾರಾವಾಹಿಗಳು, ಜೋತಿಷ್ಯ ಕಾರ್ಯಕ್ರಮಗಳು ಮತ್ತು ದೇವರ ಬಗೆಗೆ ಸಲ್ಲದ ಮೌಢ್ಯ ಬೆಳೆಸುವ ಕಾರ್ಯಕ್ರಮಗಳೇ ಹೇರಳವಾಗಿವೆ. ನಂತರದಲ್ಲಿ ಕ್ರಿಕೆಟ್ ನೇರಪ್ರಸಾರ, ರಾಜಕೀಯ ಸುದ್ದಿಗಳ ವರದಿ ಮತ್ತು ವಿಶ್ಲೇಶಣೆಗಳು, ಕ್ರೈಮ್ ಸ್ಟೋರಿಗಳು, ಸಾಮಾಜಿಕವೆಂದು ತೋರಿಸಲಾಗುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ವಸ್ತುಗಳುಳ್ಳ ಧಾರಾವಾಹಿಗಳು ಮುಂತಾದ ‘ವರ್ತಮಾನ’ದ ಬಗೆಗಿನ ಕಾರ್ಯಕ್ರಮಗಳನ್ನು ಭೂತಾಕಾರವಾಗಿ ದಿನವಿಡೀ ಪ್ರಸಾರ ಮಾಡುತ್ತಿವೆ.

ಇವೆರಡೂ ಬೇರೆ ಬೇರೆಯಂತೆ ಕಂಡರೂ ಮೂಲದಲ್ಲಿ ಒಂದೇ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಕಾರ್ಯಕ್ರಮಗಳು. ಅಲ್ಲದೆ ಅಲ್ಪಸಂಖ್ಯಾತರಾದ ಮೇಲ್ವರ್ಗ-ಜಾತಿ ಮತ್ತು ಮಧ್ಯಮ ವರ್ಗಗಳ ಹಿತಾಸಕ್ತಿಗೆ ಬಂಡವಾಳಶಾಹಿ ಸಂಸ್ಕೃತಿ ರೂಪಿಸುವ ಯೋಜನೆಗೆ ಅನುಗುಣವಾಗಿ ರೂಪುಗೊಂಡವು. ಆದರೆ ಅವುಗಳನ್ನು ಕೆಳ ಮತ್ತು ದಮನಿತ ವರ್ಗದ ಬಹುಸಂಖ್ಯಾತ ಜನರು ನೋಡಿ ಅದನ್ನು ತಮ್ಮದೇ ಸಂಸ್ಕøತಿ ಎಂದು ಭಾವಿಸಿಕೊಳ್ಳುವಂತೆ ಹೇರಲಾಗುತ್ತಿದೆ. ಇದನ್ನೇ ಜರ್ಮನ್ ಕವಿ ಮತ್ತು ನಾಟಕಕಾರ ಬೆರ್ಟೋಲ್ಟ್ ಬ್ರೆಕ್ಟ್ ‘ಹೊಸ ಆಂಟೇನಾಗಳು ಭಿತ್ತರಿಸಿದ್ದು ಹಳೆಯ ಮೂರ್ಖತನಗಳನ್ನೇ’ ಎಂದು ಸರಿಯಾಗಿಯೇ ಹೇಳಿದ್ದಾನೆ. ಜರ್ಮನಿಯಲ್ಲಿ ಹಿಟ್ಲರ್‍ನ ಫ್ಯಾಸಿಸ್ಟ್ ಆಡಳಿತ ಕಾಲದಲ್ಲಿ ಮಾಧ್ಯಮಗಳು ಆಡಳಿತ ವ್ಯವಸ್ಥೆ ಹೀಗೆ ಕೆಲಸ ಮಾಡಿದ್ದವು ಎಂಬುದು ನೆನಪಿಡಬೇಕಾದ ಸಂಗತಿ. 

ಮೇಲೆ ಹೇಳಿದಂತೆ ಟಿವಿ ವಾಹಿನಿಗಳ ಕಾರ್ಯಕ್ರಮಗಳು ಮೇಲ್ಜಾತಿ- ಮೇಲ್ವರ್ಗ, ಬಂಡವಾಳಶಾಹಿ ಹಿತಾಸಕ್ತಿಗೆ ಮತ್ತು ಆಳುವ ವರ್ಗಗಳ ಅನುಕೂಲಕ್ಕೆ ತಕ್ಕಂತೆ ರೂಪುಗೊಂಡು ಪ್ರಸಾರವಾಗುತ್ತಿವೆ. ಆದರೆ ಅವನ್ನು ಮನರಂಜನೆಯ, ಸುದ್ದಿಯ ಹೆಸರಿನಲ್ಲಿ ವ್ಯಾಪಕವಾಗಿ ಮಾರಲಾಗುತ್ತಿದೆ.

ಉದಾಹಣೆಗೆ, ಈಚೆಗೆ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷ್ಣುವಿನ ದಶಾವತಾರ, ಜೈ ಹನುಮಾನ್, ಶನಿಮಹಾತ್ಮೆ, ಸೀತೆ, ರಾಮಾಯಣ, ಮಹಾಭಾರತ, ಶ್ರೀಕೃಶ್ಣ ಮುಂತಾದ ಪುರಾಣ ಆಧಾರಿತ ಮೆಗಾ ಧಾರಾವಾಹಿಗಳು; ಹಾಗೆಯೇ ಸಾಮ್ರಾಟ ಅಶೋಕ, ಚಾಣಕ್ಯ ಮುಂತಾದ ‘ಐತಿಹಾಸಿಕ’ ಧಾರಾವಾಹಿಗಳು ಪ್ರಸಾರವಾಗಿವೆ. ಇದರಂತೆ ಬೇರೆ ಬೇರೆ ಭಾಷೆಗಳ ವಾಹಿನಿಗಳಲ್ಲಿಯೂ ಇಂತಹದೇ ಸಾವಿರಾರು ಧಾರಾವಾಹಿಗಳು ವರ್ಷವಿಡಿ ಪ್ರಸಾರಗೊಳ್ಳುತ್ತಿವೆ.

ಹಾಗೆಯೇ ಎಳೆಯ ಮಕ್ಕಳು ನೋಡುವ ಕಾರ್ಟೂನ್ ವಾಹಿನಿಗಳಲ್ಲಿಯೂ ಇದೇ ಬಗೆಯ ಪುರಾಣ ಕಥೆಗಳನ್ನು ಆಧರಿಸಿದ ಕಾರ್ಟೂನುಗಳು ಪ್ರಸಾರಗೊಳ್ಳುತ್ತಿವೆ. ಮಕ್ಕಳ ಮನಸ್ಸು ಅರಳುವ ಮೊದಲೇ ಅವುಗಳ ಮನಸ್ಸಿನಲ್ಲಿ ಪುರಾಣದ ಬಗೆಗಿನ ಸಲ್ಲದ ವಿಚಾರಗಳನ್ನು ತುರುಕಲಾಗುತ್ತಿದೆ. ಮತ್ತು ದೊಡ್ಡವರು ನೋಡುವ ಧಾರಾವಾಹಿಗಳು ಪುರಾಣ ಕೇಂದ್ರಿತವಾಗಿದ್ದು ಜನಪ್ರಿಯವಾಗಿವೆ. ಪ್ರತಿದಿನ ಕೋಟ್ಯಂತರ ಜನ ಇವುಗಳನ್ನು ನೋಡುತ್ತಿದ್ದಾರೆ. ಈ ಧಾರಾವಾಹಿಗಳನ್ನು ನೋಡುವ ಜನರ ಮನಸ್ಸು ಹೇಗೆ ರೂಪುಗೊಳ್ಳುತ್ತಿದೆ? ಆಲೋಚಿಸುತ್ತದೆ? ಮತ್ತು ಬದಲಾಗುತ್ತಿದೆ? ಎಂಬುದು ಗಮನಿಸಬೇಕಾದ ಸಂಗತಿ. ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಮದರಸಾಗಳಂತೆ ಕೆಲಸ ಮಾಡತೊಡಗಿರುವುದು ಬಹುದೊಡ್ಡ ದುರಂತ. ಇದಕ್ಕೆ ದೇಶ ಸಮಾಜ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ.

ಈ ಕಾರ್ಯಕ್ರಮಗಳ ನಿರ್ಮಾಪಕರಿಗೆ ಮತ್ತು ಪ್ರಸಾರಕರಿಗೆ ಇಂತಹ ಧಾರಾವಾಹಿಗಳನ್ನು ನೋಡುವ ಜನರಲ್ಲಿ ಈಗಾಗಲೇ ದತ್ತವಾಗಿ ಬಂದಿರುವ ಧಾರ್ಮಿಕ ಶ್ರದ್ಧೆ, ನಂಬಿಕೆಗಳನ್ನು ಬಂಡವಾಳವಾಗಿಸುವ ಉದ್ದೇಶವಿದೆ. ಆ ಮೂಲಕ ಎಂದಿಗೂ ಯಾವುದನ್ನೂ ಪ್ರಶ್ನೆ ಮಾಡದಂತಹ, ‘ಕರುಣಾಳು ರಾಘವನಲ್ಲಿ ತಪ್ಪಿಲ್ಲ’ ಎಂದು ಒಪ್ಪಿಕೊಳ್ಳುವ ವರ್ಗಾತೀತ ಮತ್ತು ಲಿಂಗಾತೀತ ಸೀತೆಯರನ್ನು ರೂಪಿಸುವ ಉದ್ದೇಶವನ್ನು ಹೊಂದಿವೆ. ಅಲ್ಲದೆ ವೈದಿಕ ಪುರೋಹಿತಶಾಹಿ ಮತ್ತು ಊಳಿಗಮಾನ್ಯಶಾಹಿ ಪರಂಪರೆಗಳ ಮೌಲ್ಯವನ್ನು ಜನರ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಸಲು, ಆ ಮೂಲಕ ಮೇಲ್ಜಾತಿಯ ಮೇಲ್ವರ್ಗದ ಮೌಲ್ಯಗಳನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ರೀತಿಯಲ್ಲಿ ಜನಸಮುದಾಯಗಳ ವಿರುದ್ಧ ಮಾಧ್ಯಮಗಳು ಬಂಡವಾಳಿಗರು ರಾಜಕೀಯ ಪಕ್ಶಗಳು ನಡೆಸುತ್ತಿರುವ ಪ್ರತಿಕ್ರಾಂತಿಯ ದಾಳಿಯಾಗಿದೆ.

ಮತ್ತೊಂದು ಮುಖ್ಯ ಸಂಗತಿಯೆಂದರೆ ಮೇಲ್ಜಾತಿಗಳ ಬಂಡವಾಳದಿಂದ ಸ್ಥಾಪನೆಯಾಗಿರುವ ಬಹುತೇಕ ಮಾಧ್ಯಮಗಳ ಮುಖ್ಯ ಹುದ್ದೆಗಳಲ್ಲಿ ಪಟ್ಟಭದ್ರವಾಗಿ ಕೂತಿರುವವರು ಮೇಲ್ಜಾತಿಯ ಜನರೇ ಆಗಿರುವುದು ಕಾಕತಾಳೀಯವಲ್ಲ. ಅಂದರೆ ಮೇಲ್ಜಾತಿಗಳು ಬಹಳ ವ್ಯವಸ್ಥಿತವಾಗಿ ಸಾಂಸ್ಕೃತಿಕ ಯಜಮಾನಿಕೆಯನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಜನರನ್ನು ಅಂಧಕಾರದಲ್ಲಿಡುತ್ತಿವೆ. ಇದರಿಂದ ಮೇಲ್ಜಾತಿ ಮತ್ತು ಮೇಲ್ಜಾತಿಯ ಬಂಡವಾಳಿಗರಿಗೆ ಅನುಕೂಲವಾಗುವುದು ಸಹಜ ತಾನೇ? ಮಾಧ್ಯಮಗಳ ಅನೈತಿಕ ರಚನೆ ಮತ್ತು ಮೈತ್ರಿಯು ದೇಶದಲ್ಲಿ ಬೆಳೆಯುತ್ತಿರುವ ಬಲಪಂಥೀಯ ಮೂಲಭೂತವಾದ ಮತ್ತು ಮತೀಯವಾದಗಳಿಗೆ ಸಾಮಾಜಿಕ ಮತ್ತು ಸಾಂಸ್ಕøತಿಕ ಭೂಮಿಕೆಯನ್ನು ಸಿದ್ಧಪಡಿಸಿಕೊಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾಕೆ ಇಂತಹ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ? ಎಂಬುದು ಮುಖ್ಯಪ್ರಶ್ನೆ.

ಸಾಮಾನ್ಯವಾಗಿ ಪುರಾಣ ಕೇಂದ್ರಿತವಾದ ಯಾವುದೇ ಧಾರಾವಾಹಿಗಳನ್ನು ನೋಡುವ ನೋಡುಗರು ಅವುಗಳನ್ನು ಪ್ರಶ್ನಾತೀತವಾಗಿ ‘ಭಕ್ತಿ’ಯಿಂದ ನೋಡುತ್ತಾರೆ. ಇಂತಹ ಭಕ್ತಿ ಜನರಲ್ಲಿ ಮೂಡಬಹುದಾದ ಯಾವುದೇ ಪ್ರಶ್ನೆಗಳನ್ನು ಹತ್ತಿಕ್ಕುತ್ತದೆ. ಇಂತಹ ಪುರಾಣ ಮತ್ತು ಭಕ್ತಿಕೇಂದ್ರಿತ ಧಾರಾವಾಹಿಗಳ ಬದಲಿಗೆ ವರ್ತಮಾನದ ಸುಡು ವಿಷಯಗಳನ್ನು ಧಾರಾವಾಹಿಯಾಗಿ ಪ್ರಸಾರ ಮಾಡಿದರೆ ಜನರಲ್ಲಿ ಪ್ರಶ್ನಿಸುವ ಗುಣ ಹೆಚ್ಚುತ್ತದೆ. ಅವರು ಸಹಜವಾಗಿಯೇ ಎಲ್ಲವನ್ನೂ ಪ್ರಶ್ನಿಸುತ್ತಾರೆ. ಅಂತಿಮವಾಗಿ ಇಂದಿನ ಯಾವುದೇ ಸಮಸ್ಯೆಯನ್ನು ಬಿಡಿಸಲು ಮುಂದಾದರೂ ಅದು ಪ್ರಭುತ್ವ, ಬಂಡವಾಳಶಾಹಿ ವರ್ಗ ಹಾಗೂ ಮೇಲ್ಜಾತಿಗಳ ಮೂಲಕ್ಕೆ ಹೋಗುತ್ತದೆ. ಅವರ ಬುಡ ಅಲುಗಾಡುತ್ತದೆ. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಜನರು ಕಲ್ಪಿತ ವಿಶಯಗಳಲ್ಲಿ ಸದಾ ಮುಳುಗಿರುವಂತೆ ಮಾಡುವುದೊಂದೇ ದಾರಿ. ಅದಕ್ಕೆ ಧರ್ಮ, ದೇಶಪ್ರೇಮ, ಮಂದಿರ ಮುಂತಾದ ವಿಶಯಗಳನ್ನು ಚರ್ಚೆಗೆ ಬಿಟ್ಟು ಜನರು ನೈಜ ವಿಶಯಗಳ ಸುತ್ತ ಚರ್ಚಿಸದಂತೆ ಮಾಡುವುದು ಇದರ ಉದ್ದೇಶ.

ಮಾಧ್ಯಮಗಳು ಇಂತಹ ನಕಲಿ ಸಂಗತಿಗಳಿಗೆ ಆದ್ಯತೆ ನೀಡಿದಶ್ಟು ನೈಜ ಸಮಸ್ಯೆಗಳ ಬಗೆಗೆ ನೀಡದೇ ಇರುವುದು ಯಾಕೆ? ಎಂಬುದನ್ನು ತಿಳಿದರೆ ಇದು ಅರ್ಥವಾಗುತ್ತದೆ. ಉಳ್ಳ ವರ್ಗಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವ್ಯವಸ್ಥಿತವಾಗಿ ಇಂತಹ ಸಂಚನ್ನು ನಡೆಸುತ್ತವೆ.

ಹಾಗಾಗಿಯೇ ಅಂತಹ ಯಾವುದೇ ಪ್ರಶ್ನೆಗಳನ್ನು ಜನರಲ್ಲಿ ಮೂಡದಂತೆ ಮಾಡುವ ಪುರಾಣ ಕೇಂದ್ರಿತ ಭಕ್ತಿ ಪ್ರಧಾನ ಧಾರಾವಾಹಿಗಳನ್ನು ಪ್ರಸಾರ ಮಾಡುವುದು. ಇದನ್ನು ಪರಂಪರೆ ಸಂಸ್ಕೃತಿ ಧಾರ್ಮಿಕತೆ ಇತ್ಯಾದಿ ಹೆಸರಿನಲ್ಲಿ ವೈಭವೀಕರಿಸಲಾಗುತ್ತದೆ. ಇದರಿಂದ ಮಾಧ್ಯಮಗಳಿಗೆ, ಅವುಗಳ ಮಾಲೀಕರಿಗೆ, ಪ್ರಭುತ್ವಕ್ಕೆ, ಆಳುವ ವರ್ಗಕ್ಕೆ ಹೆಚ್ಚು ಅನುಕೂಲಕರ. ಜನರು ನೈಜ ಸಮಸ್ಯೆಗಳ ಕುರಿತು ಯೋಚಿಸದಂತೆ, ಅವುಗಳಿಂದ ಜನರು ದೂರವಿರುವಂತೆ ಮಾಡಲು ‘ಭಕ್ತಿಭ್ರಮೆ’ಯಲ್ಲಿ ಮುಳುಗಿಸಲಾಗುತ್ತದೆ. ಹಾಗಾಗಿ ಇಂತಹ ಧಾರಾವಾಹಿಗಳಿಗೆ ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವ ಉದ್ದೇಶವಾಗಲಿ, ಅವರನ್ನು ರಂಜಿಸುವುದಾಗಲಿ, ಅವರಲ್ಲಿ ಪ್ರಶ್ನಿಸುವ ಸಾಮಥ್ರ್ಯವನ್ನು ಬೆಳೆಸುವುದಾಗಲಿ ಇಲ್ಲ. ಬದಲಿಗೆ ಧಾರಾವಾಹಿಗಳನ್ನು ಜಾಹೀರಾತುಗಳಂತೆ, ಜನರನ್ನು ನಂಬಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.

ಅಂದರೆ ಧಾರಾವಾಹಿಗಳು ಕಲಾಕೃತಿಗಳಾಗಿ ಉಳಿಯದೇ ಅವುಗಳು ಜಾಹೀರಾತುಗಳಾಗಿ ಬದಲಾಗಿವೆ. ಜಗತ್ತಿನ ಯಾವುದೇ ವಾಣಿಜ್ಯ ಜಾಹೀರಾತಿನ ಉದ್ದೇಶ ‘ಗ್ರಾಹಕ’ರಲ್ಲಿ ಪ್ರಶ್ನೆಗಳನ್ನು ಬಿತ್ತುವುದಲ್ಲ. ಗ್ರಾಹಕರನ್ನು ನಂಬಿಸುವುದು ಅವುಗಳ ಉದ್ದೇಶ. ಶೇ.98ರಷ್ಟು ಸುಳ್ಳನ್ನು ಶೇ 99ರಷ್ಟು ಸತ್ಯದಂತೆ ನಂಬಿಸುವುದು ಅವುಗಳ ಉದ್ದೇಶ. ಇದೇ ಕೆಲಸವನ್ನು ಧಾರಾವಾಹಿಗಳು ಕಳೆದ ಹಲವು ದಶಕಗಳಿಂದ ಮಾಡುತ್ತಲೇ ಬಂದಿವೆ. ಸದ್ಯ ಇವುಗಳ ಭರಾಟೆ ಮತ್ತಷ್ಟು ಹೆಚ್ಚಾಗಿದೆ. ಮಾರುಕಟ್ಟೆ ದೇಶೀಯವಾಗಿದ್ದದ್ದು ಈಗ ಮುಕ್ತವಾಗಿ ಜಾಗತಿಕ ಮಾರುಕಟ್ಟೆಯಾಗಿ ಬದಲಾಗಿರುವುದರಿಂದ ಇಲ್ಲಿ ಪೈಪೋಟಿಯೂ ಜೋರಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಾಧ್ಯಮಗಳು ಜಾಹೀರಾತಿನ ಮಟ್ಟಕ್ಕೆ ಇಳಿದಿರುವುದು. ಇಂದು ಯಾವುದೇ ವಾಹಿನಿಯು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಜಾಹೀರಾತನ್ನು ಪ್ರಕಟಿಸುವುದು ಅನಿವಾರ್ಯ ಎಂದು ನಂಬಿಸಲಾಗಿದೆ. ಹಾಗೆ ಪ್ರಕಟವಾಗುವ ಯಾವುದೇ ವಾಣಿಜ್ಯ ಜಾಹೀರಾತು ಕೊಳ್ಳುವವರನ್ನು ನಂಬಿಸಲು ಪ್ರಯತ್ನಿಸುತ್ತದೆ. ಅದರ ಉದ್ದೇಶವೇ ನಂಬಿಸುವುದು. ಅದು ಸುಳ್ಳಿದ್ದರೂ, ಕಳಪೆ ಗುಣಮಟ್ಟದ ಸರಕಿದ್ದರೂ ಅದನ್ನು ಅತ್ಯುತ್ತಮ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತದೆ. ಹಾಗೆ ನಂಬಿಸಲೆಂದೇ ಅಕ್ಷರವಾದ ನುಡಿಗಟ್ಟನ್ನು, ಜಾಹೀರಾತು ದೃಶ್ಯಾವಳಿಗಳನ್ನು ಸೃಶ್ಟಿಸಿ ಕೊಳ್ಳುವವರನ್ನು ಸಮ್ಮೋಹನಗೊಳಿಸಲು ಪ್ರಯತ್ನಿಸಲಾಗುತ್ತದೆ. ಇಂತಹ ಜಾಹಿರಾತುದಾರರಿಗೆ ಜನರು ಜನರಾಗಿ ಕಾಣುವುದಿಲ್ಲ. ಕೇವಲ ಕೊಳ್ಳುಬಾಕರು ಮಾತ್ರ.

ವಿವಿಧ ವರ್ಗಗಳ ಜನರ ಆರ್ಥಿಕ ಸಾಮಥ್ರ್ಯಕ್ಕೆ ಅನುಗುಣವಾಗಿ ಆಯಾ ವರ್ಗದ ಜನರನ್ನು ಆಕರ್ಶಿಸಿ ನಂಬಿಸಲು ಜಾಹೀರಾತುಗಳು; ಅವುಗಳ ಸೃಶ್ಟಿಕರ್ತರು ತಿಣುಕುತ್ತಿರುತ್ತಾರೆ. ಪ್ರತಿಯೊಂದು ಸರಕಿನ ತಯಾರಕರೂ ಕೂಡ ತಮ್ಮ ಒಟ್ಟು ಉತ್ಪಾದನೆಯ ವೆಚ್ಚದ ಶೇ 20ರಿಂದ 40ರಷ್ಟು ಹಣವನ್ನು ಜಾಹೀರಾತಿಗಾಗಿ ವ್ಯಯ ಮಾಡುತ್ತಾರೆ. ಇಂದು ಈ ವೆಚ್ಚವೇ ಉತ್ಪಾದಕರಿಗೆ ಮತ್ತು ಗ್ರಾಹಕರಿಬ್ಬರಿಗೂ ದುಬಾರಿಯಾಗಿರುವುದು. ಇದನ್ನು ಭರಿಸುವವರು ತಯಾರಕರಲ್ಲದೇ ಇರುವುದರಿಂದ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಚ್ಚು ಹಣವನ್ನು ಜಾಹೀರಾತಿಗೆ ವ್ಯಯ ಮಾಡಿ ತಮ್ಮ ಸರಕು ಜನರ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುವಂತೆ ಒತ್ತಾಯಿಸುತ್ತಾರೆ.

ಆದರೆ ಯಾವುದೇ ವಾಹಿನಿಗಳ ಸುದ್ದಿ ವಿಭಾಗಗಳು, ಮನರಂಜನೆಯ ವಿಭಾಗಗಳು ನೀಡುವ ಕಾರ್ಯಕ್ರಮಗಳೂ ಕೂಡ ವಾಣಿಜ್ಯ ಜಾಹೀರಾತಿನ ಮಟ್ಟಕ್ಕೆ ಇಳಿದುಬಿಟ್ಟಿವೆ. ಸುದ್ದಿ ವಿಭಾಗಗಳು ದೈನಂದಿನ ಘಟನೆಗಳನ್ನು ವರದಿ ಮಾಡುತ್ತ ಅವು ಜನಸಾಮಾನ್ಯರು ಇಲ್ಲವೇ ನಾಗರಿಕರಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಬೇಕು. ಅವರು ವರ್ತಮಾನದ ಘಟನೆಗಳನ್ನು ತಿಳಿದುಕೊಳ್ಳುತ್ತ ಅವುಗಳು ಸಮಾಜದ ಮೇಲೆ ಬೀರುವ ಪರಿಣಾಮಗಳು, ಅವುಗಳು ಸೃಶ್ಟಿಯಾಗಲು ಕಾರಣಕರ್ತರಾದವರ ಬಗೆಗೆ ಜನರು ಯೋಚಿಸುವಂತೆ ಮಾಡಿ ನಂತರ ಪ್ರಶ್ನಿಸುವಂತಾಗಬೇಕು. ಜನಜಾಗೃತಿಯ ಬೆಳಕು ಎಲ್ಲೆ ಪಸರಿಸಬೇಕು. ಆದರೆ ಇಂದಿನ ದಿನಗಳಲ್ಲಿ ಬಹುತೇಕ ವಾಹಿನಿಗಳು ಮತ್ತು ಪತ್ರಿಕೆಗಳು ಜನರಲ್ಲಿ ಪ್ರಶ್ನೆ ಮೂಡದಂತೆ ಕೆಲಸ ಮಾಡುತ್ತಿವೆ. ತಾವು ನೀಡುವ ಮಾಹಿತಿ ಇಲ್ಲವೇ ವರದಿ ವಿಶ್ಲೇಷಣೆಗಳ ಮೂಲಕ ಜನರನ್ನು ತಮಗೆ ಬೇಕಾದಂತೆ ನಂಬಿಸುವ ಕೆಲಸ ಮಾಡುತ್ತಿವೆ. ಇದು ಮಾಧ್ಯಮಗಳ ಸುದ್ದಿ ವಿಭಾಗಗಳಲ್ಲಿ ಆಗಿರುವ ಮಹತ್ವದ ಬದಲಾವಣೆ.

ಯಾಕೆಂದರೆ ಮಾಧ್ಯಮಗಳು ಸದಾಕಾಲ ಸಮಾಜವನ್ನು ಎಚ್ಚರವಾಗಿಡಬೇಕು ಎಂಬುದು ಬಯಕೆ. ಜನರು ಎಚ್ಚರವಾಗಿದ್ದಷ್ಟು ಕಾಲ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯವಾಗಿರಲು ಸಾಧ್ಯ ಎಂಬುದು ಆಶಯ. ಆದರೆ ಇಂದಿನ ಮಾಧ್ಯಮಗಳು ಜನರಲ್ಲಿ ಪ್ರಶ್ನೆ ಮೂಡುವಂತೆ ಮಾಡದೇ ಕೇವಲ ಒಂದೇ ವಿಚಾರ ಧಾರೆಯ ಕಲ್ಪಿತ ಸಂಗತಿಗಳನ್ನೇ ಪ್ರಸಾರ ಮಾಡುತ್ತವೆ. ತಮಗೆ ಬೇಕಾದವರ ಪರ ವಕಾಲತ್ತು ವಹಿಸಿ ಕೆಲಸ ಮಾಡುತ್ತಿವೆ. ಅದೂ ಉಳ್ಳವರ್ಗದ, ಪ್ರಭುತ್ವದ ಮತ್ತು ಮೇಲುಜಾತಿಗಳ ಹಿತಾಸಕ್ತಿಗೆ ತಕ್ಕಂತೆ ಇಡೀ ಸಮಾಜ ಯೋಚಿಸುವಂತೆ ಒತ್ತಾಯಿಸುವುದು ಹಿಂಸಾತ್ಮಕವಾದುದು. ಅಭಿವ್ಯಕ್ತಿ ಸ್ವಾತಂತ್ರ್ಯದ ನೀತಿಗೆ ವಿರುದ್ಧವಾದುದು. ಇದು ಸಮಾಜದಲ್ಲಿ ಯುದ್ಧಕ್ಕಿಂತ ಹೆಚ್ಚು ಭೀಕರವಾದ ಪರಿಣಾಮವನ್ನುಂಟು ಮಾಡುತ್ತದೆ.

ಪ್ರಭುತ್ವ ಮತ್ತು ಬಲಿತ ವರ್ಗಗಳಿಂದ ದೂರವನ್ನು ಕಾಯ್ದುಕೊಂಡು ಸಮಾಜದ ಅತ್ಯಂತ ಹಿಂದುಳಿದ ಜನರ ನೆಲೆಯಿಂದ ಮಾಧ್ಯಮಗಳು ಕೆಲಸ ಮಾಡಬೇಕಾಗಿರುತ್ತದೆ. ಹಾಗೆ ಕೆಲಸ ಮಾಡಿದಾಗ ಮಾತ್ರವೇ ಮಾಧ್ಯಮಗಳ ನೈತಿಕತೆ ಘನತೆ ಗೌರವಗಳು ಉಳಿಯುವುದು. ಆದರೆ ಇಂದು ಅದಕ್ಕೆ ವಿರುದ್ಧವಾಗಿ ಸಮಾಜದ ಅತ್ಯಂತ ಮೇಲುಸ್ತರದಲ್ಲಿರುವ ವರ್ಗದ ಹಿತಾಸಕ್ತಿಗೆ, ಪ್ರಭುತ್ವಕ್ಕೆ, ಬಂಡವಾಳಿಗರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತ ಜನರನ್ನು ನಂಬಿಸಲು ಯತ್ನಿಸುತ್ತಿವೆ. ಈ ಮೊದಲು ಜಾಹೀರಾತು ವಿಭಾಗಕ್ಕೂ ಸುದ್ದಿವಿಭಾಗಕ್ಕೂ ಕೊಂಚ ಅಂತರವಿತ್ತೇನೋ. ಆದರೆ ಇಂದು ಸುದ್ದಿವಿಭಾಗವೂ ಜಾಹೀರಾತು ವಿಭಾಗವಾಗಿ ಬದಲಾಗಿದೆ. ಜಾಹೀರಾತು ಪ್ರಸಾರಕ್ಕಾಗಿ ದಿನದ 24 ಗಂಟೆಗಳ ಸುದ್ದಿಪ್ರಸಾರದ ನೆಪ ಹೂಡಲಾಗಿದೆ. ಮತ್ತು ಬಹುತೇಕ ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಪ್ರಾಯೋಜಿತ ಸುದ್ದಿಗಳಾಗಿರುತ್ತ್ತವೆ.

ಅಂದರೆ ಸುದ್ದಿರೂಪದ ರಾಜಕೀಯ ಜಾಹೀರಾತುಗಳಾಗಿರುತ್ತವೆ. ಜನರಿಗೆ ಸುದ್ದಿರೂಪದ ಜಾಹೀರಾತು ಎಂದು ತಿಳಿಯದೆ ಅದನ್ನು ನಿಜವೆಂದು ನಂಬುತ್ತಾರೆ. ಅಲ್ಲದೆ ಸುದ್ದಿ ವಿಭಾಗಗಳು ಯಾವುದೋ ಒಂದು ರಾಜಕೀಯ ಪಕ್ಷದ ಪ್ರಚಾರ ಕೇಂದ್ರಗಳಂತೆ ಬದಲಾಗಿದ್ದು ಅವು ಒಂದು ಪಕ್ಶದ ಪರವಾಗಿ ಕೆಲಸ ಮಾಡುತ್ತಿವೆ. ಅಲ್ಲದೆ ಇಂದು ಉದ್ಯಮಗಳು, ರಾಜಕೀಯ ಪಕ್ಶಗಳು ಮತ್ತು ಮಾಧ್ಯಮಗಳ ಮುಖ್ಯಸ್ಥರ ನಡುವೆ ಅಂತರವೇ ಇಲ್ಲದಂತಾಗಿದೆ. ಉದ್ಯಮಿಗಳು ಮತ್ತು ರಾಜಕೀಯ ಪಕ್ಶಗಳ ಮುಖಂಡರೇ ಮಾಧ್ಯಮಗಳಲ್ಲಿ ಬಂಡವಾಳ ಹೂಡಿ ಅವುಗಳ ಮಾಲೀಕರಾಗಿದ್ದಾರೆ. ಅವರೇ ಸಂಪಾದಕ ಮಂಡಳಿಯ ಮಾಧ್ಯಮಗಳ ನಿರ್ದೇಶಕ ಮಂಡಳಿಯ ಉಸ್ತುವಾರಿಯನ್ನು ಹೊಂದಿರುತ್ತಾರೆ.

ಹೀಗಿರುವಾಗ ಅವರು ಎಂತಹ ತಿಳಿವಳಿಕೆಯಿರುವ ಪತ್ರಕರ್ತರನ್ನು ನೇಮಿಸಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಕಶ್ಟವೇನು ಅಲ್ಲ. ಯಾಕೆ ಕನ್ನಡ ಮಾಧ್ಯಮಗಳ ಸಂಪಾದಕರೆಲ್ಲರೂ ಒಂದೇ ಜಾತಿಗೆ ಸೇರಿದವರಾಗಿದ್ದಾರೆ ಎಂಬುದು ಇದರಿಂದ ತಿಳಿಯಬಹುದೆನಿಸುತ್ತದೆ. ಪ್ರಾಮಾಣಿಕ ಮತ್ತು ಜನಪರ ಕಾಳಜಿಯುಳ್ಳ ದಮನಿತ ಜಾತಿಯ ಪತ್ರಕರ್ತನಿದ್ದರೆ ಸಹಜವಾಗಿಯೇ ಆತ/ಆಕೆ ನೈಜ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಾರೆ. ಇದು ಇಂದಿನ ಮಾಧ್ಯಮಗಳ ಮಾಲೀಕರಿಗೆ ಬೇಡವಾಗಿದೆ. ಹಾಗಾಗಿಯೇ ಮೇಲ್ಜಾತಿಯ ಜನರನ್ನು ತಂದು ಮಾಧ್ಯಮಗಳಲ್ಲಿ ಪ್ರತಿಶ್ಟಾಪಿಸುತ್ತಾರೆ. ಅವರಿಗೆ ತಮ್ಮ ವೈದಿಕ ಪರಂಪರೆಯ ಪುರಾಣ ಕಥೆಗಳೇ ಸರ್ವಶ್ರೇಶ್ಟವಾಗಿ ಕಾಣಿಸುವುದು ಆಶ್ಚರ್ಯದ ಸಂಗತಿಯೇನಲ್ಲ. ಉಡುಪಿ ಪರ್ಯಾಯ ಮಠದ ಕಾರ್ಯಕ್ರಮಗಳಿಗೆ ಸಿಗುವ ಆದ್ಯತೆ ಯಾವುದೇ ತಳ ಸಮುದಾಯಗಳ ಕಾರ್ಯಕ್ರಮಗಳಿಗೆ ಸಿಗದೇ ಹೋಗುವುದು ಈ ಕಾರಣಕ್ಕಾಗಿಯೇ ಆಗಿರುವುದನ್ನು ಗಮನಿಸಬೇಕಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಮಾಧ್ಯಮಗಳು ತಮ್ಮ ಹೊಣೆಯನ್ನು ಮರೆತಿರುವ ಇಲ್ಲವೇ ಅವು ಬಂಡವಾಳಿಗರ ಪಾಲಾಗಿರುವ ಹೊತ್ತಿನಲ್ಲಿಯೇ ಮತೀಯವಾದಿ ಶಕ್ತಿಗಳು ಪ್ರಬಲವಾಗಿ ಬೆಳೆಯುತ್ತಿವೆ. ಹೀಗೆ ಬೆಳೆಯುವಲ್ಲಿ ಮಾಧ್ಯಮಗಳು, ಅಲ್ಲಿ ಕೆಲಸ ಮಾಡುವ ಮೇಲ್ಜಾತಿಯ ಪತ್ರಕರ್ತರು, ಬಂಡವಾಳಿಗರು ಮತ್ತು ಬಲಪಂಥೀಯ ರಾಜಕೀಯ ಪಕ್ಶಗಳು ಒಗ್ಗೂಡಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಇದೇ ಹೊತ್ತಿನಲ್ಲಿ ಶಿಕ್ಷಣವು ಜ್ಞಾನ ಮೂಲಸಾಧನವಾಗದೆ ಮಾಹಿತಿ ಮೂಲವಾಗಿ ಬದಲಾಗಿರುವ ಕಾಲದಲ್ಲಿ ಮಾಧ್ಯಮಗಳು ಬಿತ್ತುವ ಸುಳ್ಳು ಸುದ್ದಿಗಳೇ ಸತ್ಯಗಳಾಗಿ ಕಾಣಿಸುತ್ತವೆ. ಇದು ಕಳೆದ ಕೆಲವು ದಶಕಗಳಿಂದ ತಳಸಮುದಾಯಗಳು ಸಂವಿಧಾನ ದತ್ತವಾಗಿ ಪಡೆದಿದ್ದ ಅವಕಾಶಗಳು ಮತ್ತು ಅರಿವನ್ನು ನಾಶ ಮಾಡಿ ಅವುಗಳ ಮೇಲೆ ಹೂಡಿರುವ ಪ್ರತಿಯುದ್ಧವಾಗಿದೆ. ಬಲಪಂಥೀಯ ವಿಚಾರ ಧಾರೆ ಬೆಳೆದಶ್ಟು ಮೇಲ್ಜಾತಿಗೆ, ಅದರ ಬಂಡವಾಳಿಗರಿಗೆ ಲಾಭವೇ ಆಗುತ್ತದೆ. ಹಾಗಾಗಿ ಪ್ರಬಲ ವರ್ಗಗಳು ಕೂಡಿ ನಡೆಸುತ್ತಿರುವ ಸಂಚು ಇದಾಗಿದ್ದು ಇಲ್ಲಿ ಸಾಮಾಜಿಕ ನ್ಯಾಯವನ್ನು ಅರಸುವುದು ಹೇಗೆ?

ಹಾಗಾಗಿ ಇಂದು ಸುದ್ದಿ ವಿಭಾಗಗಳು ರಾಜಕೀಯ ಪಕ್ಶಗಳ ಜೊತೆಗೆ ಅಂತರವನ್ನು, ಮಾನಸಿಕ ದೂರವನ್ನು ಕಾಯ್ದುಕೊಳ್ಳುವುದಕ್ಕೆ ಬದಲಾಗಿ ಉದ್ಯಮಿಗಳಿಗೆ ರಾಜಕೀಯ ಪಕ್ಶಗಳಿಗೆ ಅನುಕೂಲವಾಗುವಂತೆ ವರದಿ ಮಾಡುವುದು ಸಹಜವಾಗಿಬಿಟ್ಟಿದೆ. ಮಾಧ್ಯಮಗಳ ಈ ಅನೈತಿಕ ನಡೆ ಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿ ಅವರಲ್ಲಿ ಅರಿವು ಎಚ್ಚರಗಳನ್ನು ಮೂಡಿಸುವುದಿಲ್ಲ. ಬದಲಿಗೆ ಒಂದು ಪಕ್ಶವನ್ನು ಜನರು ನಂಬುವಂತೆ ಮಾಡಲು ಬೇಕಾದ ರೀತಿಯಲ್ಲಿ ಸುದ್ದಿಗಳನ್ನು ಹೆಣೆದು ಪ್ರಸಾರ ಮಾಡಲಾಗುತ್ತದೆ. ಹಾಗಾಗಿಯೇ ಇಂದಿನ ರಾಜಕೀಯ ಸುದ್ದಿ ಪ್ರಸಾರ ಮತ್ತು ವಿಶ್ಲೇಷಣೆಗಳು ಜನರಲ್ಲಿ ಆಲೋಚನೆಯ ಮನೋಭಾವ ಬೆಳೆಸುವ ಬದಲಿಗೆ ಒಬ್ಬನೇ ವ್ಯಕ್ತಿಯ ಬಗೆಗೆ ಭಕ್ತಿ ಮತ್ತು ಆರಾಧನೆಯ ಭಾವವನ್ನು ಬೆಳೆಸುತ್ತಿವೆ. ಇದು ಇಂದಿನ ದುರಂತ.

ಇದೇ ಕೆಲಸವನ್ನು ಪುರಾಣಕೇಂದ್ರಿತ ಧಾರವಾಹಿಗಳು ಮಾಡಿದವು. ಅಂದರೆ ಮಾಧ್ಯಮದ ಸುದ್ದಿ ವಿಭಾಗಗಳು ಪ್ರಸಾರ ಮಾಡುವ ಸುದ್ದಿಗಳು ಮತ್ತು ಪುರಾಣಾಧಾರಿತ ಧಾರವಾಹಿಗಳು ಒಂದೇ ಉದ್ದೇಶಕ್ಕೆ ಜನರನ್ನು ಸಜ್ಜುಪಡಿಸುತ್ತಿವೆ. ಈ ಮಾಧ್ಯಮಗಳ ವ್ಯಾಪ್ತಿ ಮತ್ತು ಪರಿಣಾಮ ಹೆಚ್ಚಿರುವುದರಿಂದ ಜನರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಜಾಹೀರಾತು ಮತ್ತು ಸುದ್ದಿ ವಿಭಾಗದಂತೆಯೇ ಮನರಂಜನೆಯ ವಿಭಾಗವು ಕೂಡ ಜಾಹೀರಾತು ವಿಭಾಗಗಳಾಗಿ ಬದಲಾಗಿದೆ. ಈ ವಿಭಾಗ ಪ್ರಸಾರ ಮಾಡುವ ರಿಯಾಲಿಟಿ ಶೋಗಳು, ಧಾರಾವಾಹಿಗಳು ಜಾಹೀರಾತಿನಂತೆಯೇ ಇರುತ್ತವೆ. ಇವಕ್ಕೆ ಯಾವುದೇ ಕಲಾತ್ಮಕ ನೆಲೆ ಮತ್ತು ಬದುಕನ್ನು ಸಮಾಜದ ಅಂತರಂಗವನ್ನು ಕೆದಕಿ ನೋಡುವ ಮೂಲಕ ನೋಡುಗರಲ್ಲಿ ಬದುಕಿನ ಬಗೆಗೆ ಯೋಚಿಸುವಂತೆ ಮಾಡುವುದಿಲ್ಲ. ಅವರಲ್ಲಿ ಅರಿವು ಬೆಳೆಯುವಂತೆ ಮಾಡುವುದಿಲ್ಲ. ಬದಲಿಗೆ ಅಲ್ಲಿಯೂ ಕೂಡ ಜನರನ್ನು ನಂಬಿಸುವುದೇ ಉದ್ದೇಶವಾಗಿರುತ್ತದೆ.

ಇದಕ್ಕೆ ಎರಡು ಉದಾಹರಣೆಗಳನ್ನು ನೀಡಬಹುದು. ಒಂದು, ಮೇಲೆ ಹೆಸರಿಸಿದ ಪುರಾಣ ಕೇಂದ್ರಿತ ವಸ್ತುಗಳುಳ್ಳ ಭಕ್ತಿ ಪ್ರಧಾನ ಧಾರವಾಹಿಗಳನ್ನು ಪ್ರಸಾರ ಮಾಡುವುದು. ಇದು ನೋಡುಗರಲ್ಲಿ ಅಕ್ಶರಶಃ ಭಯ-ಭಕ್ತಿ ಮೂಡಿಸುತ್ತದೆಯೇ ಹೊರತು ಅಲ್ಲಿ ಪ್ರಶ್ನಿಸುವ ಮತ್ತು ಹೊಸ ಬಗೆಯಲ್ಲಿ ಆಲೋಚಿಸುವಂತೆ ಮಾಡುವ ಉದ್ದೇಶವಿಲ್ಲ. ಬದಲಿಗೆ ಈಗಾಗಲೇ ಬೃಹದಾಕಾರವಾಗಿ ಬೆಳೆದಿರುವ ಮೌಢ್ಯವನ್ನು ಮತ್ತು ಸ್ಥಿರೀಕರಿಸುವುದು ಮತ್ತು ಪುರೋಹಿತಶಾಹಿ ಮೌಲ್ಯಗಳನ್ನು ಬೆಳೆಸುವುದು ಇವುಗಳ ಉದ್ದೇಶವಾಗಿರುತ್ತದೆ. ಆ ಮೂಲಕ ಮೌಢ್ಯವನ್ನು ಸಮಾಜದಲ್ಲಿ ಬೆಳೆಸುವ ಕೆಲಸಮಾಡಲಾಗುತ್ತಿದೆ. ಕೊನೆಗೆ ಜನರಿಂದ ಬೇಡಿಕೆಯಿದೆ ಎಂಬ ಸಿದ್ದ ಸಮರ್ಥನೆ ನೀಡಲಾಗುತ್ತದೆ.

ಬಹುಶ ಯಾವ ಪ್ರೇಕ್ಷಕರು ಕೂಡ ಇಂತಹದೇ ಧಾರಾವಾಹಿ ಬೇಕು ಎಂದು ವಾಹಿನಿಗಳಿಗೆ ಅರ್ಜಿ ಸಲ್ಲಿಸಿರುವುದಿಲ್ಲ. ಎರಡು. ರಿಯಾಲಿಟಿ ಶೋಗಳು ಕೂಡ ನಂಬಿಸುವ ಕೆಲಸವನ್ನೇ ಮಾಡುತ್ತದೆ. ಬಹಳ ಪ್ರಸಿದ್ಧವಾಗಿರುವ ಬಿಗ್‍ಬಾಸ್ ಎಂಬ ನಕಲಿ ಕಾರ್ಯಕ್ರಮ ಜನರನ್ನು ನಂಬಿಸುವುದಕ್ಕಾಗಿಯೇ ಆಯೋಜನೆಗೊಳ್ಳುತ್ತದೆ. ವಿವಿಧ ಕಂಪನಿಗಳ ವಿವಿಧ ಸರಕುಗಳ ಸುಲಭ ಪ್ರಚಾರಕ್ಕಾಗಿಯೇ ರೂಪಿತವಾಗಿರುವ ಕಾರ್ಯಕ್ರಮವದು. ಅದನ್ನು ಜಾಹೀರಾತುಗಳಿಂದ ಹೊರತುಪಡಿಸಿದರೆ ಅದಕ್ಕೆ ಅಸ್ತಿತ್ವವೇ ಇಲ್ಲ. ಅಂದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಯಾವುದೇ ಮನರಂಜನೆಯ ಕಲೆಯು ಪೊಳ್ಳು ರಂಜನೆಯಿಂದ ಕೂಡಿರುವುದಿಲ್ಲ. ಇವು ಬಿತ್ತರಿಸುವ ಮನರಂಜನೆಯ ಕಾರ್ಯಕ್ರಮಗಳು ಪೊಳ್ಳು ರಂಜನೆಯಿಂದ ಕೂಡಿರುತ್ತವೆ.

ನಿಜವಾದ ಮನೋರಂಜನೆಯು ತನ್ನ ಸ್ವರೂಪದಲ್ಲಿ ಹಾಸ್ಯಮಯವಾಗಿ ಇರುವಂತೆ ಕಂಡರೂ ಆಳದಲ್ಲಿ ಗಾಢವಾಗಿ ಮನಸ್ಸನ್ನು ಕಲಕುತ್ತಿರುತ್ತವೆ. ನಮ್ಮ ಜನಪದರು ಕಟ್ಟಿದ್ದ ವಿವಿಧ ಬಗೆಯ ಜನಪದ ಕಲಾಪ್ರಕಾರಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಹಾಗೆಯೇ ಜಗದ್ವಿಖ್ಯಾತ ನಟ ಚಾರ್ಲಿ ಚಾಪ್ಲಿನ್ ಚಿತ್ರಗಳು ಹಾಸ್ಯದಂತೆ ಕಂಡರು ಬದುಕಿನ ದುರಂತಗಳನ್ನು ನೋಡುಗರ ಎದೆಗಿಳಿಸಿ ಯೋಚಿಸುವಂತೆ ಮಾಡುತ್ತವೆ. ಆದರೆ ವಾಹಿನಿಗಳು ಬಿತ್ತರಿಸುವ ಬಹುತೇಕ ಕಾರ್ಯಕ್ರಮಗಳು ಪೊಳ್ಳು ರಂಜನೆಯಿಂದ ಕೂಡಿರುತ್ತವೆ. ಜನರನ್ನು ಯೋಚಿಸುಂತೆ ಮಾಡುವ ಬದಲಿಗೆ ಜಾಹೀರಾತುದಾರರ ಪರವಾಗಿ ಜನರು ಯೋಚಿಸುವಂತೆ ನಂಬುವಂತೆ ಒತ್ತಾಯಿಸುತ್ತಿರುತ್ತವೆ.

ರಾಜಕೀಯ ಪಕ್ಶಗಳ ಬಗೆಗೆ ಎಚ್ಚರದಿಂದ ಇರುವಂತೆ ಮಾಡಬೇಕಾದ ಮಾಧ್ಯಮಗಳು ರಾಜಕೀಯ ಪಕ್ಶಗಳ ಅಭಿಮಾನಿಗಳು ಅನುಯಾಯಿಗಳಾಗಿರುವಂತೆ ಮಾಡುತ್ತಿವೆ. ಆದರೆ ಇದು ಜನರ ಗಮನಕ್ಕೆ ಬರುವುದೇ ಇಲ್ಲ. ಬದಲಿಗೆ ತಮ್ಮ ಆಯ್ಕೆಯ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ತಮಗೆ ಬೇಕಾದ ಕಾರ್ಯಕ್ರಮವನ್ನು ನಾವು ನೋಡುತ್ತಿರುತ್ತೇವೆ ಎಂಬ ಭ್ರಮೆಯಲ್ಲಿ ಜನರಿದ್ದಾರೆ. ವಾಸ್ತವದಲ್ಲಿ ಜನರ ಆಯ್ಕೆಯ ಹಕ್ಕನ್ನು ಸ್ವತಂತ್ರವಾಗಿ ಆಲೋಚಿಸುವ ಸಾಮಥ್ರ್ಯವನ್ನು ನಾಶಮಾಡಲಾಗಿರುತ್ತದೆ. ಹಾಗೆ ಸ್ವತಂತ್ರವಾಗಿ ಆಲೋಚಿಸುವ ಮನಸ್ಸುಗಳನ್ನು ನಾಶಮಾಡಿ ಪ್ರಶ್ನಾತೀತವಾಗಿ ನಂಬುವ ‘ಮೌನ ಜನವರ್ಗ’ವನ್ನು ಸೃಶ್ಟಿಸುವುದೇ ಈ ಮಾಧ್ಯಮಗಳ ಉದ್ದೇಶವಾಗಿದೆ.

ಹಾಗಾಗಿ ಇಂದಿನ ಮುಖ್ಯವಾಹಿನಿಯ ಮಾಧ್ಯಮಗಳಿಂದ ಸಾಮಾಜಿಕ ನ್ಯಾಯ ನಿರೀಕ್ಶಿಸುವುದು ಭ್ರಮೆಯೇ ಸರಿ. ಅದೃಶ್ಟವಶಾತ್ ಭಾರತ ಒಂದು ಬೃಹತ್ತಾದ ಮತ್ತು ಬಹುಭಾಶಿಕ ರಾಶ್ಟ್ರವಾಗಿರುವುದರಿಂದ ಯಾವುದೋ ಒಂದು ಉದ್ಯಮ ಇಡೀ ದೇಶದ ಮಾಧ್ಯಮಗಳನ್ನು ಥಟ್ಟಂತ ತನ್ನ ವಶಕ್ಕೆ ಏಕಸ್ವಾಮ್ಯಕ್ಕೆ ಇನ್ನೂ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿ ನೂರಾರು ದೇಶ ಭಾಷೆಗಳು ಇರುವುದರಿಂದ ಸ್ಥಳೀಯ ಮಟ್ಟದಲ್ಲಿ ಪ್ರಜಾವಾಣಿಯಂತಹ ಪ್ರಭಾವಿಯಾದ ಕೆಲವು ಪತ್ರಿಕೆಗಳಿದ್ದು ಅವು ಕಶ್ಟದಲ್ಲಿ ನಡೆಯುತ್ತ ಒಂದಶ್ಟು ಜನರ ಪರವಾದ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಇದು ಭಾರತೀಯ ಮಾಧ್ಯಮಗಳನ್ನು ಇನ್ನೂ ಜೀವಂತವಾಗಿಟ್ಟಿದೆ. ಇವು ಆಗಾಗ ಸಾಮಾಜಿಕ ನ್ಯಾಯ ಪರ ದನಿಯನ್ನು ಎತ್ತುತ್ತಿವೆ. ಉಳಿದಂತೆ ಎಲ್ಲ ಮಾಧ್ಯಮಗಳು ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಟ್ಟು ಬಂಡವಾಳಿಗರ ಮೇಲುಜಾತಿಗಳ ಸೇವೆ ಮಾಡುತ್ತಬಿದ್ದಿವೆ.

ಸಾಮಾಜಿಕ ಮಾಧ್ಯಮಗಳು ಪ್ರತಿಗಾಮಿಯಾಗಿರುವಂತೆ ಕಂಡರೂ ಅಲ್ಲಿ ಅದಕ್ಕೆ ಬದಲಿಯಾದ ಮತ್ತೊಂದು ವಿಚಾರಧಾರೆಯನ್ನು ಪ್ರಸಾರ ಮಾಡಲು ಅವಕಾಶ ಇರುವುದರಿಂದ ಇನ್ನೂ ಒಂದಶ್ಟು ಉಸಿರಾಡಬಹುದಾದ ಅವಕಾಶವಿದೆ. ಈ ಅವಕಾಶವನ್ನೂ ಈಚೆಗೆ ಕಸಿದುಕೊಳ್ಳುವ ಪ್ರಯತ್ನಗಳು ನಡೆದಿವೆ. ಸದ್ಯಕ್ಕೆ ಇರುವ ಚಿಕ್ಕಪುಟ್ಟ ಅವಕಾಶಗಳನ್ನು ಬಳಸಿಕೊಂಡೇ ಸಾಮಾಜಿಕ ನ್ಯಾಯ ಜಾರಿಗೆ ತರುವ ಕೆಲಸವನ್ನು ಮಾಡಬೇಕಿದೆ. ಅದಕ್ಕೆ ಪೂರಕವಾದ ವಿಚಾರಧಾರೆಯನ್ನು ಪ್ರಸಾರ ಮಾಡಬೇಕಿದೆ. ಅರಿವಿನ ದೀಪವನ್ನು ಆರದಂತೆ ಕಾಪಾಡಿಕೊಳ್ಳಬೇಕಿದೆ.

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಮೈಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.