ಮಾಧ್ಯಮ ಎಂಬ ರಾಜನರ್ತಕಿ!

ಮೋದಿ ಆಡಳಿತದ ಪ್ರಮುಖ ಲಕ್ಷಣವೆಂದರೆ ಜನತಾಂತ್ರಿಕ ಜೀವಕೋಶಗಳನ್ನು ಉಸಿರುಗಟ್ಟಿಸಿದ್ದು. ಇದಕ್ಕಿಂತಲೂ ಭಯಾನಕವಾದದ್ದೆಂದರೆ ಜನಸ್ತೋಮಕ್ಕೆ ಅದು ಆತಂಕದ ವಿಷಯವೇ ಅಲ್ಲ! ಅಂದರೆ ಜನ ಸ್ವತಃ ತಾವೇ ಪ್ರಜಾಪ್ರಭುತ್ವದ ಹೆಡೆಮುರಿ ಕಟ್ಟಿ ಮೋದಿಯ ಪದತಲಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ!

-ಎನ್.ಎಸ್.ಶಂಕರ್

‘ದೇಶದಲ್ಲಿ ಆಕ್ಸಿಜನ್‍ಗಾಗಿ ಹಾಹಾಕಾರ ಎದ್ದಿದ್ದಾಗ ಪ್ರಧಾನಿ ಮೋದಿಯವರು ಬಂಗಾಳದಲ್ಲಿ ದೀದಿ ಓ ದೀದಿ ಅಂತ ಹಾಡುತ್ತ ಅಡ್ಡಾಡುತ್ತಿದ್ದರು. ಈಗ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬರುತ್ತಿರುವಾಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ನಮ್ಮ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹಾಕಿದ ಟ್ವೀಟ್ ಸಂದೇಶ ನಿಮ್ಮಲ್ಲಿ ಕೆಲವರ ಗಮನಕ್ಕಾದರೂ ಬಂದಿರಬಹುದು. ಆ ಸಮಯದಲ್ಲಿ ಅಂದರೆ ಮೇ ಕಡೆ ವಾರದಲ್ಲಿ ‘ಹ್ಯಾಷ್‍ಟ್ಯಾಗ್ ಮೊಸಳೆ ಕಣ್ಣೀರು’ ಎರಡು ದಿನಗಳ ಕಾಲ ಟ್ವಿಟರ್‍ನಲ್ಲಿ ಸಾಕಷ್ಟು ಸದ್ದು ಮಾಡಿದ್ದೂ ನಿಮಗೆ ನೆನಪಿರಬಹುದು. ಆಗ ‘ಈ ಬಾರಿ ಶ್ರೇಷ್ಠ ನಟ ಆಸ್ಕರ್ ಪ್ರಶಸ್ತಿ ಮೋದಿಯವರಿಗೇ’ ಎಂಬ ಮೀಮ್‍ಗಳೂ ಹರಿದಾಡಿದ್ದವು.

ಆದರೆ ಈ ‘ಮೊಸಳೆ ಕಣ್ಣೀರಿ’ಗೆ ನಮ್ಮ ಕನ್ನಡ ಸುದ್ದಿ ವಾಹಿನಿಗಳ ಪ್ರತಿಕ್ರಿಯೆ ಹೇಗಿತ್ತು? ಹೇಗಿತ್ತೋ ಏನೋ ನಾನಂತೂ ನೋಡಿರಲಿಲ್ಲ. ಆದರೆ ಗೆಳೆಯರೊಬ್ಬರು ತಮಾಷೆಯಾಗಿ ಮೂರು ಹೆಡಿಂಗುಗಳನ್ನು ತೇಲಿಬಿಟ್ಟರು:

ಮೋದಿಯ ಕಣ್ಣೀರು; ಪಾಕಿಸ್ತಾನದ ಹೊಟ್ಟೆಗೆ ತಣ್ಣೀರು -ಸುವರ್ಣ ನ್ಯೂಸ್

ಕಣ್ಣೀರು ಹಾಕಿಸಿದ ಕರೊನಾ; ಮೋದಿ ಸುಮ್ನೆ ಬಿಡಲ್ಲ ಅದನ್ನ -ಪಬ್ಲಿಕ್ ಟಿವಿ

ಗಂಗಾ ಪುತ್ರನ ಕಣ್ಣಲ್ಲಿ ನೀರು; ಕ್ರೂರಿ ಕರೊನಾ ನೀನೆಷ್ಟು ಜೋರು? -ಟಿವಿ ನೈನ್

ಮೇಲ್ನೋಟಕ್ಕಿದು ತಮಾಷೆ. ಆದರೆ ತಿರುಗಿ ನೋಡಿದರೆ ಇದೇ ಘನ ಘೋರ ವಾಸ್ತವ! ಯಾಕೆಂದರೆ ನಮ್ಮ ಕನ್ನಡ ನ್ಯೂಸ್ ಚಾನಲ್ಲುಗಳ ಪಾಡು ಇದಕ್ಕಿಂತ ಆಶಾದಾಯಕವಾಗಿಯೇನೂ ಇಲ್ಲ. ಈ ನರೇಂದ್ರರನ್ನು (ಮೋದಿ), ಆ ನರೇಂದ್ರನ (ವಿವೇಕಾನಂದ) ಅವತಾರ ಎಂದು ಅರ್ಧ ಗಂಟೆ ನಗೆಪಾಟಲು ಕಾರ್ಯಕ್ರಮ ಮಾಡಿದ ಚಾನಲ್ ನಮ್ಮ ಕನ್ನಡದ್ದೇ ತಾನೇ?

ತಮಾಷೆ ನೋಡಿ, ಮಾತಾಡಹೊರಟಿದ್ದು ಪ್ರಜಾಪ್ರಭುತ್ವ ಮತ್ತು ಮಾಧ್ಯಮಗಳ ಬಗ್ಗೆ; ಆದರೆ ನಮ್ಮ ಗಮನ ಸೆಳೆದಿದ್ದು ‘ವಿಶ್ವಗುರು’ ನರೇಂದ್ರ ಮೋದಿ! ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಯಾಕೆಂದರೆ ನರೇಂದ್ರ ಮೋದಿ, ಭಾರತೀಯ ರಾಜಕಾರಣದ ನುಡಿಗಟ್ಟನ್ನು ಅಂದರೆ ಪ್ರಜಾಪ್ರಭುತ್ವದ ಲಕ್ಷಣವನ್ನು ಬದಲಿಸಿದ ನೇತಾರ.

ನಾವು ಮೊದಲು ಅರಿಯಬೇಕಾದ್ದು- ಪ್ರಜಾತಂತ್ರವೆಂಬುದು ನಮ್ಮ ಭವ್ಯ ಭಾರತ ಎಂಬ ದೇಶದ ರಕ್ತಕ್ಕೆ ಎಂದೆಂದೂ ಪರಕೀಯವಾದ ಸರಕು. ಸಾವಿರಾರು ವರ್ಷಗಳಿಂದ ಮನುಸ್ಮøತಿಯನ್ನೇ ರಕ್ತಗತ ಮಾಡಿಕೊಂಡು ಬಂದ ಭಾರತೀಯ ಮನಸ್ಸಿಗೆ ಜಾತಿ ಉಪಜಾತಿಗಳೇ ನಿತ್ಯ ವಾಸ್ತವ. ಜಾತಿಯ ಜೀವಾಳವೇ ಮೇಲು ಕೀಳು. ಅಂದ ಮೇಲೆ ಇಲ್ಲಿ ಜನತಂತ್ರದ ಆಧಾರ ಸ್ತಂಭಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಕಲ್ಪನೆಗಳು ಹುಟ್ಟುವುದಾದರೂ ಎಲ್ಲಿಂದ? ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ನಮ್ಮ ಸಂವಿಧಾನ ಈ ದೇಶದಲ್ಲಿ ಜನತಂತ್ರವನ್ನು ನೆಲೆಯೂರಿಸಲು ಬುನಾದಿ ಹಾಕಿ ಕೊಟ್ಟಿದ್ದೇನೋ ಹೌದು. ಆದರೆ ಅಂದಿನಿಂದ ಇಂದಿನವರೆಗೆ ನಮ್ಮ ಸನಾತನ ಮೌಲ್ಯಗಳಿಗೂ, ಸಂವಿಧಾನಕ್ಕೂ ಮುಗಿಯದ ಸಂಘರ್ಷ! ಸಂವಿಧಾನ ಸಮಾನತೆ ಅಂದರೆ, ಭಾರತೀಯ ಆತ್ಮ ಜಾತಿ ಅನ್ನುತ್ತದೆ. ಸಂವಿಧಾನ ನ್ಯಾಯ ಅಂದರೆ ಈ ಸಮಾಜ ಜಾತಿ ಅನ್ನುತ್ತದೆ. ಸ್ವಾತಂತ್ರ್ಯವೂ ಅಷ್ಟೇ, ಅದು ಕೂಡ ನಮ್ಮ ಸಾಮಾಜಿಕ ನಡೆವಳಿಕೆಯ ಕಟ್ಟುಪಾಡುಗಳಿಗೇ ಅಧೀನ.

ಅಷ್ಟಾದರೂ ಒಂದು ಹಂತದವರೆಗಾದರೂ ಒಂದು ದೇಶವಾಗಿ ನಾವು ಸಂವಿಧಾನಕ್ಕೆ ಬಾಯುಪಚಾರದ ಮರ್ಯಾದೆಯನ್ನಾದರೂ ಕೊಡುತ್ತ ಬಂದಿದ್ದೆವು. ಅತ್ತ ನ್ಯಾಯಾಂಗವೂ ಸಂವಿಧಾನದ ಕಾವಲಿಗೆ ನಿಂತಿತ್ತು.

ಆದರೆ ದೇಶದಲ್ಲಿ ಮೋದಿ ಶಕೆ ಆರಂಭವಾದಾಗಿನಿಂದ ನಾಡಿನಲ್ಲಿ ಪ್ರಜಾಪ್ರಭುತ್ವ ಕುರಿತ ನಮ್ಮ ಗ್ರಹಿಕೆಯೇ ಬುಡಮೇಲಾಯಿತು ಅನಿಸುತ್ತದೆ. ನಿರ್ದಿಷ್ಟವಾಗಿ ಗುರುತಿಸಿ ಹೇಳುವುದಾದರೆ ಗುಜರಾತಿನ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ದಾರುಣ ದುರಂತ ಮತ್ತು ಆ ಅನಾಹುತವನ್ನು ಅನುಸರಿಸಿ ನಡೆದ ಸರ್ಕಾರಿ ಪ್ರಾಯೋಜಿತ ಮುಸ್ಲಿಮರ ಮಾರಣಹೋಮ- ಇವು ಇಡೀ ದೇಶದ ಜನರ ವೈಚಾರಿಕ ಹರಿವಿನ ದಿಕ್ಕನ್ನು, ಮತ್ತು ಆ ಮೂಲಕ ಜನತಂತ್ರದ ಜೀವಾಳವನ್ನು ಕಲಕತೊಡಗಿದವು.

ಅಷ್ಟಕ್ಕೂ ನಡೆದಿದ್ದೇನು?

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದಣಿದಿತ್ತು. ಜೊತೆಗೆ ಭ್ರಷ್ಟಾಚಾರದ ಬೊಜ್ಜು ಬೆಳೆಸಿಕೊಂಡು ಓಲಾಡುತ್ತಿತ್ತು. ಯುಪಿಎ ಎರಡನೇ ಅವಧಿಯಲ್ಲಂತೂ ಹಲವು ಲಕ್ಷ ಕೋಟಿಗಳ ಹಗರಣಗಳ ದುರ್ನಾತ ಬಡಿಯತೊಡಗಿತ್ತು. ಜನಕ್ಕೆ ರೋಸಿಹೋಗಿತ್ತು. ಆ ಸಂದರ್ಭದಲ್ಲಿ ಯಾರೊಂದಿಗೂ ಏನನ್ನೂ ಹಂಚಿಕೊಳ್ಳಲು ತಯಾರಿರದಿದ್ದ ಹೊಸ ತಲೆಮಾರು ಬದಲಾವಣೆಗಾಗಿ ತಹತಹಿಸುತ್ತಿತ್ತು. ಈ ತಾಳ್ಮೆಗೇಡಿ ಪೀಳಿಗೆಯ ಪಾಲಿಗೆ ಸಾಮಾಜಿಕ ನ್ಯಾಯ, ಪ್ರಜಾತಾಂತ್ರಿಕ ಮೌಲ್ಯಗಳು, ಸಮಾನತೆ- ಇವೆಲ್ಲ ಯಾವುದೋ ಗೊಡ್ಡು ಬಡಬಡಿಕೆಗಳಂತಿದ್ದವು. ಆ ಸಮೂಹ, ಮುನ್ನುಗ್ಗುವ, ‘ಹೊಡಿ ಬಡಿ ಕಡಿ’ಗಳಿಗೆ ಹಿಂಜರಿಯದ ಆಕ್ರಮಣಶೀಲ ನಾಯಕನೊಬ್ಬನಿಗಾಗಿ ಕಾತರಿಸಿತ್ತು.

ಯಾವಾಗ ಗುಜರಾತಿನ ಮಾರಣಹೋಮ ಸಂಭವಿಸಿತೋ, ಆಗ ಇವರು ಕಾದಿದ್ದ ‘ಹೊಡಿ ಬಡಿ ಕಡಿ’ ನಾಯಕ ಉದ್ಭವಿಸಿಯೇಬಿಟ್ಟ! ಆ ನಾಯಕ ಪ್ರಖ್ಯಾತಿ ಪಡೆದಿದ್ದೇ ಅಕ್ಷರಶಃ ‘ಹೊಡೆಯಲು, ಬಡಿಯಲು, ಕಡಿಯಲು’ ಸಿದ್ಧವಿದ್ಧ ತನ್ನ ‘ಟ್ರಾಕ್ ರೆಕಾರ್ಡ್’ನಿಂದಾಗಿ. ಇದರ ಜೊತೆಗೆ ಆತ ಭ್ರಷ್ಟನಲ್ಲ ಎಂಬ ಪುಕಾರು ಇದ್ದಿದ್ದು ಕೂಡ ಸಹಾಯವಾಯಿತು.

ಆ ಆಕ್ರಮಣಶೀಲ ನಾಯಕ ನರೇಂದ್ರ ಮೋದಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಪ್ರಕಟಣೆ ಹೊರಟಿದ್ದೇ ತಡ, ಆಗಿನಿಂದ ಅವರು ಆ ಹುದ್ದೆಗೆ ಆರಿಸಿ ಬರುವವರೆಗೆ ಅವರ ಪರವಾಗಿ ಸಾಮಾಜಿಕ ಮಾಧ್ಯಮಗಳ ಸುನಾಮಿಯೇ ಎದ್ದಿದ್ದನ್ನು ನೋಡಿದೆವು. ನಮ್ಮ ಕರ್ನಾಟಕದಲ್ಲೇ ಬೇರೆ ಬೇರೆ ಪಕ್ಷಗಳ ಕೃಪಾಶ್ರಯದಲ್ಲಿ ಇದ್ದ ಬರಹಗಾರರು, ಕಲಾವಿದರೆಲ್ಲ ಇದ್ದಕ್ಕಿದ್ದಂತೆ ಮೋದಿ ಪರ ಬ್ಯಾಟ್ ಬೀಸತೊಡಗಿದ ಸೋಜಿಗವೂ ನಡೆಯಿತು! ಆನತಿ ಕಾಲದಲ್ಲೇ ಬಹುತೇಕ ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ನರೇಂದ್ರ ಮೋದಿ- ಯುಗಗಳಿಗೊಮ್ಮೆ ಅವತರಿಸುವ ಉದ್ಧಾರಕ ಎಂಬಂತೆ ಕಣ್ಣು ಮುಚ್ಚಿ ಪೂರ್ಣಾವಧಿ ಭಜನೆಯಲ್ಲಿ ತೊಡಗಿಬಿಟ್ಟವು…

ಇದೇನು? ಇಡೀ ದೇಶದ ಚಿಂತನಶೀಲ ಸಮುದಾಯಗಳಿಗೆ ಈ ಮಟ್ಟಿನ ಮಂಕು ಕವಿಯಿತೇ? ಪ್ರಶ್ನಿಸುವ, ಅನುಮಾನಿಸುವ, ವಿಮರ್ಶಿಸುವ ಶಕ್ತಿಯೇ ಇಂಗಿಹೋಯಿತೇ ಅಂದುಕೊಳ್ಳುವಾಗ ನಿಧಾನವಾಗಿ ಭಾರತೀಯ ಸಮಾಜದ ನಿಜ ಹೂರಣ ಬಯಲಾಗತೊಡಗಿತು. ಆ ಪ್ರಕಾರ-

  1. ಈ ದೇಶದ ಏಕೈಕ ಸಮಸ್ಯೆ ಮುಸ್ಲಿಮರು.
  2. ಆ ಸಮಸ್ಯೆಗೆ ಏಕೈಕ ಪರಿಹಾರ- ಹಿಂದೂ ಹೃದಯ ಸಾಮ್ರಾಟ ನರೇಂದ್ರ ಮೋದಿ…!

ಇಡೀ ದೇಶ ಇಂಥ ಮುಸ್ಲಿಂ ದ್ವೇಷದ ಪ್ರವಾಹದಲ್ಲಿ ಮಿಂದೇಳುವಾಗ ಆ ದ್ವೇಷವನ್ನೇ ಬಂಡವಾಳ ಮಾಡಿಕೊಂಡ ಮೋದಿ ರಾಜಕಾರಣ ಭಾರತವನ್ನು ಆವರಿಸಿತು. ಜನ ಸಂತೋಷದಿಂದ ‘ಮೋದಿಗುರುಡು’ ರೋಗಕ್ಕೆ ಬಲಿಯಾದರು. ಅಲ್ಲಿಂದಾಚೆಗೆ ಮೋದಿ ಇಟ್ಟ ಪ್ರತಿಯೊಂದು ಹೆಜ್ಜೆಯೂ- ನೋಟು ರದ್ದಿನಿಂದ ಹಿಡಿದು, ಮತಿಹೀನ ಲಾಕ್‍ಡೌನ್, ಸಾವಿರಾರು ವಲಸೆ ಕಾರ್ಮಿಕರು ದಿಕ್ಕೆಟ್ಟು ಸಾವಿರಾರು ಮೈಲಿ ನಡೆದು ಸಾವಿರಾರು ಸಾವುಗಳು ಸಂಭವಿಸಿದ್ದೂ ಸೇರಿ, ಕಾಶ್ಮೀರದಲ್ಲಿ 370ನೇ ವಿಧಿ ರದ್ದಿನವರೆಗೆ- ಈ ದೇಶವನ್ನು ಸರ್ವನಾಶದತ್ತ ಕರೆದೊಯ್ಯುತ್ತಲೇ ಇವೆ. ಪೆಟ್ರೋಲ್ ನೂರು ರೂಪಾಯಿ ದಾಟಿ ಮುನ್ನಡೆಯುತ್ತಿದೆ. ಕೋಟ್ಯಂತರ ಜನರ ಜೀವನೋಪಾಯಗಳು ಮಂಗಮಾಯವಾಗಿವೆ, ಅತ್ತ ಅಂಬಾನಿ, ಅದಾನಿಗಳ ಸಂಪತ್ತು ಹಲವು ಪಟ್ಟು ವೃದ್ಧಿಸಿದೆ. ಅಷ್ಟಾದರೂ ಮೋದಿ ಭಕ್ತರು, ಮತ್ತು ಭಕ್ತರ ಬಾಲ ಹಿಡಿದು ಮಾಧ್ಯಮಗಳು- ಮೋದಿಯವರ ರಾಜನರ್ತಕಿಯರಾಗಿ, ನಲ್ಲ ನಲ್ಲೆಯರಾಗಿ ಮುದ್ದುಗರೆಯುತ್ತ ಅದರಲ್ಲೇ ಜೀವನ ಸಾರ್ಥಕ

ಮಾಡಿಕೊಳ್ಳುತ್ತಿವೆ.

ಮೋದಿ ಆಡಳಿತದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಒಂದೊಂದಾಗಿ ಸಾಂವಿಧಾನಿಕ ಸಂಸ್ಥೆಗಳ ಮಗ್ಗಲು ಮುರಿಯುತ್ತ ಬಂದಿದ್ದು ಹಾಗೂ ಬಂಡಾಯದ ದನಿಗಳನ್ನು ಬಗ್ಗು ಬಡಿದಿದ್ದು. ಒಂದೇ ಮಾತಿನಲ್ಲಿ ಹೇಳುವುದಾದರೆ- ಜನತಾಂತ್ರಿಕ ಜೀವಕೋಶಗಳನ್ನು ಉಸಿರುಗಟ್ಟಿಸಿದ್ದು. ಇದಕ್ಕಿಂತಲೂ ಭಯಾನಕವಾದದ್ದೆಂದರೆ ಜನಸ್ತೋಮಕ್ಕೆ ಅದು ಆತಂಕದ ವಿಷಯವೇ ಅಲ್ಲ! ಅಂದರೆ ಜನ ಸ್ವತಃ ತಾವೇ ಪ್ರಜಾಪ್ರಭುತ್ವದ ಹೆಡೆಮುರಿ ಕಟ್ಟಿ ಮೋದಿಯ ಪದತಲಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ!

ಒಂದು ಉದಾಹರಣೆ: ತನ್ನ ಸ್ವಂತ ಬಲದಿಂದ ಉದ್ದಿಮೆ ಕಟ್ಟಿಕೊಂಡು ಯಶಸ್ವಿಯಾಗಿದ್ದ ಬುದ್ಧಿವಂತ ಗೆಳೆಯನನ್ನು ನಾನೊಮ್ಮೆ ‘ಮೋದಿ ಸರ್ವಾಧಿಕಾರಿಯಾಗುತ್ತಿಲ್ಲವೇ?’ ಎಂದು ಕೇಳಿದರೆ, ‘ಸ್ಟ್ರಾಂಗ್ ಲೀಡರ್ ಒಬ್ಬರು ಬೇಕಲ್ಲ?’ ಎಂದು ನನಗೇ ಪ್ರಶ್ನೆ ಹಾಕಿದರು! ಅಂದರೆ ‘ಬಲಿಷ್ಠ ನಾಯಕ’ ಅನ್ನುವುದಕ್ಕೂ ‘ಸರ್ವಾಧಿಕಾರಿ’ ಅನ್ನುವುದಕ್ಕೂ ವ್ಯತ್ಯಾಸ ಕಾಣದಷ್ಟು ಮಬ್ಬುಗಣ್ಣಾಗಿಹೋಗಿದೆ ನಮಗೆ! ನಾವು ಮರೆಯುತ್ತಿರುವುದು- ಇಂಥ ಮಬ್ಬುಗಣ್ಣೇ ಕ್ರಮೇಣ ಜನತಂತ್ರದ ಕತ್ತು ಹಿಸುಕಬಲ್ಲ ವಿಷಾನಿಲ.

ಮೋದಿ- ಪ್ರಜಾಪ್ರಭುತ್ವ- ಮಾಧ್ಯಮಗಳ ಚರ್ಚೆ ಮಾಡುವಾಗ ನಮಗೆ ಈ ಮೂಲಭೂತ ಸತ್ಯ ಗಮನದಲ್ಲಿರಬೇಕು: ಸಮಾಜಕ್ಕೇ ಪ್ರಜಾಪ್ರಭುತ್ವ ಬೇಡವಾಗಿರುವಾಗ ಅದೊಂದು ಮೌಲ್ಯವಾಗಿ ಕಾಣುವುದು ಹೇಗೆ ಮತ್ತು ಯಾರಿಗೆ? ಇಂದಿರಾ ಗಾಂಧಿ ತುರ್ತುಸ್ಥಿತಿ ಹೇರಿದಾಗ ಇಡೀ ದೇಶ ಅದರ ವಿರುದ್ಧ ಬಂಡೆದ್ದಿತ್ತು. ಪತ್ರಿಕೆಗಳು ಅನಿವಾರ್ಯವಾಗಿ ತಲೆ ಬಗ್ಗಿಸಬೇಕಾಗಿ ಬಂತೇ ಹೊರತು, ಅದು ಮನಃಪೂರ್ವಕ ಶರಣಾಗತಿ ಆಗಿರಲಿಲ್ಲ. ಈಗ ಹಾಗಲ್ಲ. ಈಗಿನದು ಮನಸಾರೆ ಜೀತ! ಸ್ವಯಂಸಂತೋಷದ ಕೀರ್ತನೆ!

ಮಾಧ್ಯಮಗಳು ಈಗ ನಿರ್ವಹಿಸುತ್ತಿರುವ ‘ಬಹುಪರಾಕ್’ ಪಾತ್ರ- ದಾಸ್ಯದ ಒಂದು ಮುಖ ಮಾತ್ರ. ಇದು ಮೋದಿಯವರ ಹಿಂದೂರಾಷ್ಟ್ರ ನಿರ್ಮಾಣದ ಅಜೆಂಡಾಗೆ ಹಿಮ್ಮೇಳ ಒದಗಿಸುವ ಗುಲಾಮಗಿರಿ. ಇದಲ್ಲದೆ ಮುದ್ರಣ ಮಾಧ್ಯಮಗಳನ್ನು ಒತ್ತರಿಸಿಕೊಂಡು ದೃಶ್ಯಮಾಧ್ಯಮಗಳು ಇಲ್ಲಿ ಕಾಲಿಟ್ಟ ಕೂಡಲೇ ಪತ್ರಿಕೋದ್ಯಮದ ವ್ಯಾಕರಣವೇ ಬದಲಾಗಿದ್ದನ್ನೂ ನಾವು ಗಮನಿಸಬೇಕು. ಇಂದು ದೇಶದಲ್ಲಿ ಬಿಜೆಪಿ ಹಾಗೂ ಆಡಳಿತಾರೂಢರ ಬೆಂಬಲಿಗರೇ ಭಾರತದ ಶೇಕಡಾ 90ರಷ್ಟು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ. ಅದಕ್ಕೇ ನಮ್ಮೆಲ್ಲರ ಮೆಚ್ಚಿನ ಪತ್ರಕರ್ತ ಪಿ.ಸಾಯಿನಾಥ್ ‘ಇನ್ನು ಐದು ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ಪತ್ರಕರ್ತ ಕೂಡ ಅಂಬಾನಿಯಿಂದ ಸಂಬಳ ಪಡೆಯುತ್ತಾನೆ’ ಎಂದು ಹೇಳಿದ್ದು. ಈಗ ಕನ್ನಡದಲ್ಲೇ ನೋಡಿ- ಕನ್ನಡಪ್ರಭ ಮತ್ತು ಸುವರ್ಣ ವಾಹಿನಿಗಳ ಒಡೆಯ ಯಾರು? ಬಿಜೆಪಿ ಮುಖಂಡ ರಾಜೀವ ಚಂದ್ರಶೇಖರ್! ವಿಜಯ ಕರ್ನಾಟಕ ಮತ್ತು ದಿಗ್ವಿಜಯ ವಾಹಿನಿ? ಮತ್ತೆ ಬಿಜೆಪಿ ಮುಖಂಡ ವಿಜಯ ಸಂಕೇಶ್ವರ್!

ಇಂಥ ಸ್ವಯಂ ದಾಸ್ಯ ಮತ್ತು ಮಾಲೀಕತ್ವದ ಮೂಲಕ ನಿಯಂತ್ರಣ, ಇವೆರಡಲ್ಲದೆ ಮೂರನೇ ಹಾದಿಯೂ ಒಂದಿದೆ. ಅದೇ- ತನ್ನ ಜಾಡು ತುಳಿಯಲು ಸಿದ್ಧವಿರದ ಮಾಧ್ಯಮಗಳನ್ನು ನೇರಾನೇರ ಸರ್ವವಿಧದಲ್ಲೂ ಬಗ್ಗು ಬಡಿಯುವುದು. ಅದಕ್ಕೆ ಎನ್‍ಡಿಟಿವಿ, ಎಬಿಪಿ ನ್ಯೂಸ್ ಮುಂತಾದವರ ವಿರುದ್ಧ ಕೇಂದ್ರ ಸರ್ಕಾರದ ಮುಖಂಡರು- ಅದರಲ್ಲೂ ಮುಖ್ಯವಾಗಿ ಅಮಿತ್ ಶಾ ಹೂಡಿದ ಯುದ್ಧಗಳ ಕತೆಯಿದೆ….

ಕಡೆಗೂ ಪ್ರಶ್ನೆ ಬಂದು ನಿಲ್ಲುವುದು ಎಲ್ಲಿಗೆಂದರೆ- ಸ್ವತಂತ್ರ ಮಾಧ್ಯಮ ಪ್ರಜಾಪ್ರಭುತ್ವಕ್ಕೆ ಅನಿವಾರ್ಯ ನಿಜ; ಆದರೆ ಸಮಾಜವೇ ಪ್ರಜಾಪ್ರಭುತ್ವವನ್ನು ಬಲಿಗೊಡಲು ತಯಾರಿರುವಾಗ, ನಮಗೆ ಸ್ವತಂತ್ರ ಮಾಧ್ಯಮ ಸಿಕ್ಕುವುದಾದರೂ ಎಲ್ಲಿಂದ? ಅದರ ಬೆಲೆ ಎಷ್ಟೆಂದು ಅರ್ಥವಾಗುವುದು ಹೇಗೆ?

*ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ; ತಂದೆ ಎನ್.ಎಸ್.ಹಾಲಪ್ಪ, ತಾಯಿ ಗೌರಮ್ಮ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ಪಾಂಡವಪುರ, ಮೈಸೂರು, ಬೆಂಗಳೂರುಗಳಲ್ಲಿ ವ್ಯಾಸಂಗ. ಎಂಎಸ್ಸಿ ನಂತರ ಬೆಂಗಳೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ.

Leave a Reply

Your email address will not be published.