ಮಾಧ್ಯಮ ರಂಗದ ಭ್ರಷ್ಟಾಚಾರ ಪಾಪ ತೊಳೆಯಲು ಸಕಾಲ

ಮಾಧ್ಯಮ ಲೋಕದಲ್ಲಿನ ಭ್ರಷ್ಟಾಚಾರ ಧುತ್ತೆಂದು ಉದ್ಭವಿಸಿದ ಸಮಸ್ಯೆಯಿಲ್ಲ. ಈ ಹಿಂದೆ ಕೂಡ ಪತ್ರಕರ್ತರು ಹಲವೊಮ್ಮೆ ಭಾರಿ ಪ್ರಭಾವಗಳಿಗೆ ಒಳಗಾಗುತ್ತಿದ್ದರು ಮತ್ತು ಸಣ್ಣ-ಪುಟ್ಟ ಆಮಿಷಗಳಿಗೆ ಒಳಗಾಗುತ್ತಿದ್ದರು. ನನ್ನದೇ ಅನುಭವವೊಂದನ್ನು ನಿಮ್ಮ ಮುಂದಿಡುತ್ತೇನೆ.

ದಿನೈದು ವರ್ಷಗಳ ಹಿಂದಿನ ಮಾತು. ‘ಪ್ರಜಾವಾಣಿ’ ದಾವಣಗೆರೆ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದೆ. ರಾಜ್ಯದ ಅತ್ಯಂತ ಪ್ರಭಾವಿ ಜಾತಿಗೆ ಸೇರಿದ ಅತ್ಯಂತ ಶಕ್ತಿಶಾಲಿ ಹಾಗೂ ಹಿರಿಯ ಸ್ವಾಮಿಯೊಬ್ಬರ ಚಾತುರ್ಮಾಸ ಕಾರ್ಯಕ್ರಮ ವರದಿ ಮಾಡಲು ಹೋಗಿದ್ದೆ. ಸುಮಾರು ಹತ್ತರಿಂದ ಹದಿನೈದು ಪತ್ರಕರ್ತರು ನಮಗೆ ಮೀಸಲಾಗಿರಿಸಿದ್ದ ಜಾಗದಲ್ಲಿ ಕೂತಿದ್ದೇವು. ಕಾರ್ಯಕ್ರಮದ ಒಂದು ಹಂತದಲ್ಲಿ ಪತ್ರಕರ್ತರ ಸನ್ಮಾನ ಶುರುವಾಯಿತು. ಪ್ರತಿಯೊಂದು ಪತ್ರಿಕೆಯ ಹೆಸರು ಹಿಡಿದು ಕರೆಯಲಾರಂಭಿಸಿದರು. ನಮ್ಮ ಸರದಿಯೂ ಬಂತು.

‘ಪ್ರಜಾವಾಣಿ… ಪ್ರಜಾವಾಣಿ… ಪ್ರಜಾವಾಣಿ…’
ಹಲವು ಬಾರಿ ಹೆಸರು ಕರೆದರೂ ನಾನು ಅಲುಗಾಡಲಿಲ್ಲ. ಕೊನೆಗೆ ಯಾರೋ ನಾನೇ ‘ಪ್ರಜಾವಾಣಿ’ ಪ್ರತಿನಿಧಿ ಎಂದು ಗುರುತು ಹಿಡಿದು ವೇದಿಕೆಯ ಮೇಲೆ ಎಳೆದುಕೊಂಡು ಹೋಗುವ ಯತ್ನ ನಡೆಯಿತು. ಸಾವಿರಾರು ಜನರು ಸೇರಿದ್ದ ಧಾರ್ಮಿಕ ಸಭೆ. ಹತ್ತು ನಿಮಿಷಗಳ ಜಗ್ಗಾಟದಲ್ಲಿ ನಾನು ಬಗ್ಗಲೇ ಇಲ್ಲ. ವೇದಿಕೆಯ ಮೇಲಿದ್ದ ಸ್ವಾಮೀಜಿಗೆ ‘ನನ್ನಿಂದ ಅವಮಾನವಾಯಿತು’.

ಕಚೇರಿ ತಲುಪುವುದಕ್ಕಿಂತ ಮೊದಲೇ ಬೆಂಗಳೂರಿನಲ್ಲಿ ಕೂತಿದ್ದ ಹಿರಿಯ ಸಂಪಾದಕರೊಬ್ಬರ ಕರೆ ಬಂತು. ‘ಸ್ವಾಮೀಜಿ ಎಷ್ಟೇ ಕರೆದರೂ ನೀವು ವೇದಿಕೆಗೆ ಹೋಗದೇ ಅವರಿಗೆ ಅವಮಾನ ಮಾಡಿದಿರಂತೆ. ಪ್ರಜಾವಾಣಿ ಮರ್ಯಾದೆ ಕಳೆದಿದ್ದಕ್ಕೆ ನಿಮಗೆ ನೋಟಿಸ್ ಕಳುಹಿಸುತ್ತೇನೆ’ ಎಂದು ಅದೇ ಜಾತಿಯವರೇ ಆಗಿದ್ದ, ಪ್ರಭಾವಿ ಹಿರಿಯ ಸಂಪಾದಕ ಮಿತ್ರರು ನನಗೆ ಅಕ್ಷರಶಃ ಧಮಕಿ ಹಾಕಿದರು.

‘ನಾನು ಅಲ್ಲಿಗೆ ಹೋಗಿದ್ದು ಸಮಾರಂಭದ ವರದಿಗೆ. ಸನ್ಮಾನ ಮಾಡಿಸಿಕೊಳ್ಳಲು ಅಲ್ಲ. ಅಲ್ಲಿ ವೇದಿಕೆಗೆ ಕರೆದು, ಶಾಲು-ಹಾರ-ಹಣ್ಣಿನ ಜೊತೆ ಕವರ್‍ನಲ್ಲಿ 500 ರೂಪಾಯಿ ಇಟ್ಟು ಕೊಡುತ್ತಿದ್ದರು. ವೇದಿಕೆಯೇರದೇ ನಾನು ಪ್ರಜಾವಾಣಿ ಮಾನ ಕಾಪಾಡಿದ್ದೇನೆ. ನೀವು ನೋಟಿಸ್ ಕಳುಹಿಸಿ. ಹಿಂದೆ ನೀವು ಕೂಡ ಅದೇ ಸ್ವಾಮೀಜಿಯಿಂದ ಸನ್ಮಾನ ಸ್ವೀಕರಿಸಿದ, ಕವರ್ ತೆಗೆದುಕೊಂಡ ಫೋಟೊ ಇದೆ. ಅದನ್ನೂ ಸೇರಿಸಿ ಆಡಳಿತ ಮಂಡಳಿಗೆ ಉತ್ತರ ನೀಡುತ್ತೇನೆ’ ಎಂದು ನಾನು ಅತ್ಯಂತ ಮರ್ಯಾದೆಯಿಂದಲೇ ಹಿರಿಯರ ಬಾಯಿ ಮುಚ್ಚಿಸಿದೆ.

ಇನ್ನೊಮ್ಮೆ ಟಿವಿ 9 ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ಈಗ ದೇಶ ಬಿಟ್ಟು ಓಡಿ ಹೋಗಿರುವ ಕುಖ್ಯಾತ ಉದ್ಯಮಿಯೊಬ್ಬರು ಮಾದಕ ದ್ರವ್ಯವನ್ನು ಬೆಂಗಳೂರಲ್ಲಿರುವ ಆಫ್ರಿಕಾ ಮೂಲದ ‘ಡ್ರಗ್ ಪೆಡ್ಲರ್’ ಒಬ್ಬನಿಂದ ಖರೀದಿಸುತ್ತಿದ್ದರು ಎಂಬ ಬ್ರೇಕಿಂಗ್ ನ್ಯೂಸ್ ಪ್ರಸಾರವನ್ನು ಬೆಳಿಗ್ಗೆ 9 ಗಂಟೆಗೆ ಆರಂಭಿಸಿದೆವು. ಹತ್ತು ಗಂಟೆಯ ಹೊತ್ತಿಗೆ ಮುಂಬೈನಿಂದ ನೇರವಾಗಿ ನನ್ನ ಮೊಬೈಲ್‍ಗೆ ಒಂದು ಕರೆ ಬಂತು. ‘ಈ ಸುದ್ದಿ ಪ್ರಸಾರವನ್ನು ತಕ್ಷಣ ನಿಲ್ಲಿಸಿ. ನಿಮಗೆ …ಲಕ್ಷ ಕೊಡುತ್ತೇವೆ’ ಎಂಬ ಸುಮಧುರವಾದ ಬೇಡಿಕೆ ಇಡಲಾಯಿತು. ನಾನು ‘ಥ್ಯಾಂಕ್ಸ್’ ಎಂದೆ. ಕೂಡಲೇ ಆ ಕಡೆಯಿಂದ, ‘ಎಲ್ಲಿಗೆ ಹಣ ಕಳುಹಿಸಬೇಕು?’ ದನಿ ಕೇಳಿಬಂತು. ಅದಕ್ಕೆ ನಾನು, ‘ಥ್ಯಾಂಕ್ಸ್ ಹೇಳಿದ್ದು ನೀವು ನಮ್ಮ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದಕ್ಕೆ. ನೀವು ಲಕ್ಷಗಟ್ಟಲೇ ಲಂಚ ಕೊಡಲು ಸಿದ್ಧರಿದ್ದೀರಿ ಎಂದರೆ, ನಿಮ್ಮ ಬಾಸ್ ಮಾದಕ ದ್ರವ್ಯ ವ್ಯಸನಿ ಮತ್ತು ನಾವು ಸುದ್ದಿ ಮಾಡಿದಂತೆಯೇ ಇದೇ ವ್ಯಕ್ತಿಯಿಂದ ಖರೀದಿ ಮಾಡುತ್ತಿದ್ದರು ಎನ್ನುವುದು ಖಚಿತವಾಯಿತು. ಥ್ಯಾಂಕ್ಸ್ ಫಾರ್ ಕನ್ಫರ್ಮೇಷನ್’ ಎಂದು ಕರೆ ಕಟ್ ಮಾಡಿದೆ.

ಸುಲಭವಾಗಿ ನಕಲಿ ಪತ್ರಕರ್ತರ ಅಬ್ಬರ ಜಾಸ್ತಿಯಾದ ಮೇಲೆ ‘ಈ ಬಚ್ಚಲು ಮನೆಯಲ್ಲಿ ಎಲ್ಲರೂ ನಗ್ನರೇ’ ಎಂಬಂತಾಗಿದೆ. ಟೆಲಿವಿಷನ್ ತಂತ್ರಜ್ಞಾನ, ಅವು ಪ್ರೇಕ್ಷಕರ ಮೇಲೆ ಬೀರುವ ಪರಿಣಾಮ, ಅಣಬೆಯಂತೆ ಹಬ್ಬುತ್ತಿರುವ ಸುದ್ದಿ ವಾಹಿನಿಗಳು… ಎಲ್ಲವೂ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದಕ್ಕೆ ಮೂಲ ಕಾರಣ.

ಇಂತಹ ಸನ್ನಿವೇಶಗಳು ಬಹುತೇಕ ಎಲ್ಲ ಪತ್ರಕರ್ತರ ಜೀವನದಲ್ಲಿ ಎದುರಾಗುತ್ತವೆ. ಆದರೆ, ನಾವು ಮಾಧ್ಯಮ ಲೋಕಕ್ಕೆ ಬಂದಿದ್ದು ಏಕೆ? ಎಂಬ ಸ್ಪಷ್ಟ ಅರಿವು ಇರುವ ಯಾವುದೇ ಮಾನವಂತ ಪತ್ರಕರ್ತ ಎಂಜಲು ತಿನ್ನಲು ಮುಂದಾಗುವುದಿಲ್ಲ. ಬದಲಾಗಿ ಸತ್ಯಕ್ಕೆ ಅಂಟಿಕೊಂಡು ತನ್ನ ಕರ್ತವ್ಯಕ್ಕೆ ಬದ್ಧನಾಗುತ್ತಾನೆ. ಅಂತಹವರ ಸಂಖ್ಯೆ ಕಾರಣಾಂತರಗಳಿಂದ ಈಗ ವಿರಳವಾಗುತ್ತಿರುವುದು ದುರದೃಷ್ಟಕರ. ಅದಕ್ಕೆ ಹಲವು ಕಾರಣಗಳಿವೆ. ಸಾಮಾಜಿಕ ನೆಲೆಯಲ್ಲಿ ಬದಲಾದ ಜೀವನ ಮೌಲ್ಯಗಳು ಕೂಡ ಮಾಧ್ಯಮದಲ್ಲಿನ ಭ್ರಷ್ಟಾಚಾರಕ್ಕೆ ಒಂದು ಕಾರಣ. ಒಬ್ಬ ಸರ್ಕಾರಿ ಅಧಿಕಾರಿಯಾಗಿ, ರಾಜಕಾರಣಿಯಾಗಿ ಭ್ರಷ್ಟಾಚಾರ ಮಾಡಿದರೆ ಸುಲಭವಾಗಿ ಸಿಕ್ಕಿ ಬೀಳಬಹುದು. ಆದರೆ, ಒಬ್ಬ ಪತ್ರಕರ್ತ ಭ್ರಷ್ಟ ಎಂದು ಗೊತ್ತಾದರೂ ಮಾಧ್ಯಮ ಸಂಸ್ಥೆಗಳು ಆ ಬಗ್ಗೆ ಮೌನ ವಹಿಸಿಬಿಡುತ್ತವೆ. ಮೊದಲು ಆಯಾ ವ್ಯಕ್ತಿಗಳಿಗೆ ಬುದ್ಧಿ ಭ್ರಮಣೆಯಾಗುತ್ತಿತ್ತು. ಈಗ ವ್ಯವಸ್ಥೆಗೇ ಬುದ್ಧಿ ಭ್ರಮಣೆಯಾಗಿದೆ.

ಇತ್ತೀಚೆಗೆ ಬೆಂಗಳೂರಿನ ಖ್ಯಾತ ವೈದ್ಯರೊಬ್ಬರನ್ನು ಬ್ಲಾಕ್‍ಮೇಲ್ ಮಾಡಲು ಹೋಗಿ ಪತ್ರಕರ್ತನೊಬ್ಬ ಸಿಕ್ಕಿಬಿದ್ದ ಸುದ್ದಿ ಮೊದಲ ದಿನ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಯಿತು. ಉಳಿದಂತೆ ಯಾವುದೇ ಮುದ್ರಣ, ಡಿಜಿಟಲ್ ಅಥವಾ ಸುದ್ದಿ ವಾಹಿನಿಗಳಲ್ಲಿ ಆ ಬಗ್ಗೆ ಚಕಾರ ಎತ್ತಲಿಲ್ಲ. ಎರಡನೇ ದಿನ ಬಹುತೇಕ ದಿನಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಆ ಸುದ್ದಿ ಪ್ರಕಟವಾಯಿತು. ಆದರೆ, ಸುದ್ದಿ ವಾಹಿನಿಗಳಲ್ಲಿ ಆ ಕುರಿತು ಯಾರೂ ಸೊಲ್ಲೆತ್ತಲಿಲ್ಲ. ಅದರರ್ಥ ಯಾವುದೇ ಸುದ್ದಿ ವಾಹಿನಿಗಳ ಮುಖ್ಯಸ್ಥರಿಗೆ, ಸಂಪಾದಕರಿಗೆ, ವರದಿಗಾರರಿಗೆ ಈ ವಿಷಯ ತಿಳಿದೇ ಇಲ್ಲ ಎಂದಲ್ಲ. ನಾನೇ ನಾಲ್ವರು ಹಿರಿಯ ಸಂಪಾದಕರಿಗೆ ಸಂದೇಶ ಕಳುಹಿಸಿ, ‘ಮಾಧ್ಯಮದಲ್ಲಿನ ಭ್ರಷ್ಟಾಚಾರದ ಕುರಿತು ಪ್ರೈಮ್ ಟೈಮ್‍ನಲ್ಲಿ ಚರ್ಚೆ ಮಾಡಿ. ಅದಕ್ಕೆ ಇದು ಸಕಾಲ’ ಎಂಬ ಸಲಹೆ ನೀಡಿದೆ. ಆ ಪೈಕಿ ಒಬ್ಬನೇ ಒಬ್ಬ ಸಂಪಾದಕ ನನ್ನ ಸಂದೇಶಕ್ಕೆ ಉತ್ತರ ಕೊಡುವ ನೈತಿಕತೆ ತೋರಲಿಲ್ಲ.

ಇಂದು ಮಾಧ್ಯಮ ಲೋಕದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಇದು ಜೀವಂತ ನಿದರ್ಶನ. ಹತ್ತು-ಹದಿನೈದು ವರ್ಷಗಳ ಹಿಂದೆ ಸುದ್ದಿ ವಾಹಿನಿಗಳ ಅಬ್ಬರ ಆರಂಭವಾಗುವುದಕ್ಕಿಂತ ಮುಂಚೆ ಎಂಜಲು ಕಾಸಿಗೆ, ಸರ್ಕಾರಿ ಸೈಟುಗಳಿಗೆ, ರಾಜಕಾರಣಿಗಳ ಬಳಿ ಹೋಗಿ ಪತ್ರಕರ್ತರ ಲೇಔಟ್ ಪರವಾನಗಿ ಪಡೆಯುವ ಪತ್ರಕರ್ತರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆದರೀಗ ಸುದ್ದಿ ವಾಹಿನಿಗಳ, ಜಾಲತಾಣಗಳಲ್ಲಿ ಸುಲಭವಾಗಿ ನಕಲಿ ಪತ್ರಕರ್ತರ ಅಬ್ಬರ ಜಾಸ್ತಿಯಾದ ಮೇಲೆ ‘ಈ ಬಚ್ಚಲು ಮನೆಯಲ್ಲಿ ಎಲ್ಲರೂ ನಗ್ನರೇ’ ಎಂಬಂತಾಗಿದೆ. ಟೆಲಿವಿಷನ್ ತಂತ್ರಜ್ಞಾನ, ಅವು ಪ್ರೇಕ್ಷಕರ ಮೇಲೆ ಬೀರುವ ಪರಿಣಾಮ, ಅಣಬೆಯಂತೆ ಹಬ್ಬುತ್ತಿರುವ ಸುದ್ದಿ ವಾಹಿನಿಗಳು… ಎಲ್ಲವೂ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದಕ್ಕೆ ಮೂಲ ಕಾರಣ. ಬದಲಾದ ಮಾಧ್ಯಮ ಸಂಸ್ಥೆಗಳ ಮ್ಯಾನೇಜ್‍ಮೆಂಟ್‍ಗಳ ನಿಲುವು ಕೂಡ ಈ ಬೆಂಕಿಗೆ ತುಪ್ಪ ಸುರಿಯುತ್ತಿದೆ.

ಎರಡು-ಮೂರು ದಶಕಗಳ ಹಿಂದೆ ಮಾಧ್ಯಮ ಸಂಸ್ಥೆಗಳನ್ನು ಹುಟ್ಟುಹಾಕಿ, ನಿಷ್ಠಾವಂತ ಪತ್ರಕರ್ತರನ್ನು ಜೊತೆಗೂಡಿಸಿ ನ್ಯಾಯಯುತವಾಗಿ ಎಲ್ಲವನ್ನೂ ನಡೆಸಿಕೊಂಡು ಹೋಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಮಾಲೀಕರು ಹಣ ಹೂಡುತ್ತಿದ್ದರು. ಆದರೀಗ ಅವರವರ ರಾಜಕೀಯ ತೀಟೆ-ತೆವಲು ತೀರಿಸಿಕೊಳ್ಳಲು ಒಂದಿಷ್ಟು ಉದ್ಯಮಿಗಳು ಮತ್ತು ರಾಜಕಾರಣಿಗಳು ಮಾಧ್ಯಮ ಸಂಸ್ಥೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅಂತಹ ನೈತಿಕವಾಗಿ ಭ್ರಷ್ಟರಾದವರ ಜೊತೆ ಒಂದಿಷ್ಟು ಭ್ರಷ್ಟ ಪತ್ರಕರ್ತರು ‘ಸಂ’ಪಾದಕರ ರೂಪದಲ್ಲಿ ಕೈಜೋಡಿಸುತ್ತಿದ್ದಾರೆ. ಅಂತಹ ‘ಸಂ’ಪಾದಕರಗೆ ಅವರ ವೈಯಕ್ತಿಕ ಕುರ್ಚಿ, ಲಕ್ಷಗಟ್ಟಲೇ ಸಂಬಳ, ಕಾರು, ಅಧಿಕಾರ ಮುಖ್ಯವಾಗುತ್ತದೆಯೇ ಹೊರತು ನ್ಯಾಯ-ನೀತಿ, ಸಾಮಾಜಿಕ ಬದ್ಧತೆ, ಸತ್ಯ ಮುಖ್ಯವಾಗುವುದಿಲ್ಲ. ಕೊನೆಯ ಪಕ್ಷ ಜೊತೆಗೆ ಸಂಸ್ಥೆ ಕಟ್ಟಿದ ಉಳಿದ ಸಹೋದ್ಯೋಗಿಗಳ ಹಿತಾಸಕ್ತಿ ಕೂಡ ಅವರಿಗೆ ಮುಖ್ಯವಾಗುವುದಿಲ್ಲ.

ಕಡಿವಾಣಕ್ಕೆ ಕೆಲವು ಸಲಹೆ

• ಮಾಧ್ಯಮದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದರೆ, ಮೊದಲು ಆ ಬಗ್ಗೆ ಪ್ರಾಮಾಣಿಕ ಪತ್ರಕರ್ತರು ಮುಕ್ತವಾಗಿ ಮತ್ತು ಜೋರಾಗಿ ಮಾತನಾಡಲು ಆರಂಭಿಸಬೇಕು. ಸ್ವಲ್ಪ ದಿನ ಬಾಯಿ ಮುಚ್ಚಿಸುವ ಯತ್ನ ನಡೆಯುತ್ತದೆ; ನಂತರ ಸತ್ಯದ ಕೈ ಮೇಲಾಗುತ್ತದೆ.

• ಮಾಧ್ಯಮ ಸಂಸ್ಥೆಗಳು, ವ್ಯವಸ್ಥಾಪಕ ಮಂಡಳಿ ಮತ್ತು ಪತ್ರಕರ್ತರನ್ನು ಕೂಡ ಕಟ್ಟುನಿಟ್ಟಾಗಿ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆಯಡಿ ಬರುವಂತೆ ಮಾಡಬೇಕು.

• ಈಗಾಗಲೇ ಮಾಧ್ಯಮ ಸಂಸ್ಥೆಗಳ ಆಯಕಟ್ಟಿನಲ್ಲಿ ದೊಡ್ಡ-ದೊಡ್ಡ ಸಂಪಾದಕೀಯ ಹುದ್ದೆಗಳಲ್ಲಿ ಇರುವ ಪ್ರತಿಯೊಬ್ಬ ಪತ್ರಕರ್ತರೂ ಅವರ ವೈಯಕ್ತಿಕ ಆಸ್ತಿ-ಪಾಸ್ತಿಯ ವಿವರಗಳನ್ನು ಪ್ರತಿವರ್ಷ ಕಡ್ಡಾಯವಾಗಿ ಬಹಿರಂಗ ಪಡಿಸಬೇಕು.

• ಮಾಧ್ಯಮದ ಘನತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಗಟ್ಟಿಯಾಗಿ ನೆಲೆ ನಿಂತಿರುವ ಮುದ್ರಣ, ಡಿಜಿಟಲ್ ಮತ್ತು ಸುದ್ದಿ ವಾಹಿನಿಗಳ ಮ್ಯಾನೇಜ್‍ಮೆಂಟ್ ಪ್ರತಿ ಎರಡು ವರ್ಷಗಳಿಗೆ ಒಮ್ಮೆಯಾದರೂ ಅವರವರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಆಸ್ತಿ-ಪಾಸ್ತಿಗಳ ವಿವರ ಸಂಗ್ರಹಿಸಬೇಕು. ಅದರ ಆಧಾರದ ಮೇಲೆ ಅನುಮಾನ ಬಂದಾಗ ವೈಯಕ್ತಿಕ ತನಿಖೆ ನಡೆಸಬೇಕು.

• ಮುದ್ರಣ, ಡಿಜಿಟಲ್ ಮತ್ತು ಸುದ್ದಿ ವಾಹಿನಿಗಳನ್ನು ಸೇರುವ ಪ್ರತಿ ಯುವ ಪತ್ರಕರ್ತರಿಗೆ ಘನತೆಯಿಂದ ಬಾಳಲು ಅಗತ್ಯವಾದಷ್ಟು ಕನಿಷ್ಠ ವೇತನವನ್ನು ಸರ್ಕಾರ ನಿಗದಿ ಪಡಿಸಬೇಕು. ಅದನ್ನು ಎಲ್ಲ ಮಾಧ್ಯಮ ಸಂಸ್ಥೆಗಳು ಕಡ್ಡಾಯವಾಗಿ ಜಾರಿಗೆ ತರಬೇಕು.

ಮೇಲೆ ತಿಳಿಸಿದ ಸುಧಾರಣಾ ಕ್ರಮಗಳು ಕೇವಲ ಸಲಹೆ ಮಾತ್ರ. ಈ ಕುರಿತು ವ್ಯಾಪಕ ಚರ್ಚೆ ಆರಂಭವಾಗಲಿ, ಮತ್ತಷ್ಟು ಪರಿಹಾರಗಳು ಒಡಮೂಡಲಿ, ಸೂಕ್ತ ಕ್ರಮಗಳು ಜಾರಿಯಾಗಲಿ.

 

ಮಾಧ್ಯಮಗಳ  ಭ್ರಷ್ಟಾಚಾರ!
ಇತ್ತೀಚೆಗೆ ಬೆಂಗಳೂರಿನ ಡಾ.ರಮಣರಾವ್ ಅವರನ್ನು ಬ್ಲಾಕ್‍ಮೇಲ್ ಮಾಡಲು ಹೋಗಿ ಪಬ್ಲಿಕ್ ಟಿ.ವಿ.ಯ ಹೇಮಂತ್ ಕಶ್ಯಪ್ ಎಂಬ ಪತ್ರಕರ್ತ ಸಿಕ್ಕಿಬಿದ್ದ ಸುದ್ದಿ ಈ ವೃತ್ತಿಯಲ್ಲಿರುವ ಎಲ್ಲರೂ ತಲೆತಗ್ಗಿಸುವಂತೆ ಮಾಡಿದೆ. ಇದು ಕೂಡ ಕೇವಲ ಒಂದು ಸುದ್ದಿಯಾಗಿ ತೇಲಿಹೋಗದಿರಲಿ ಎಂಬ ಕಳಕಳಿ ನಮ್ಮದು. ಈ ಕುರಿತು ವ್ಯಾಪಕ ಚರ್ಚೆ ನಡೆದು ಮಾಧ್ಯಮ ಕ್ಷೇತ್ರದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ ಎಂಬ ಆಶಯದಿಂದ ಈ ಕುರಿತ ವಿಚಾರವಿನಿಮಯಕ್ಕೆ ಸಮಾಜಮುಖಿ ಚಾಲನೆ ನೀಡಿದೆ; ವೇದಿಕೆ ಕಲ್ಪಿಸಿದೆ.
-ಸಂ.

ಅಂತಹ ‘ಸಂ’ಪಾದಕರ ವೈಯಕ್ತಿಕ ಲಾಭಕ್ಕೆ ಇಂದು ಉಳಿದ ಹಿರಿ-ಕಿರಿಯ ಪತ್ರಕರ್ತರು ಬಲಿಯಾಗುತ್ತಿದ್ದಾರೆ. ನನ್ನ ಅನುಭವದ ಮೂಲಕ ಹೇಳುವುದಾದರೆ ಮಾಧ್ಯಮ ಲೋಕಕ್ಕೆ ಕಾಲಿಡುವ ಹೊಸಬರ ಪೈಕಿ ಶೇಕಡಾ 90ರಷ್ಟು ಯುವಕ-ಯುವತಿಯರು ಪ್ರಾಮಾಣಿಕ ಮನೋಭಾವ ಇಟ್ಟುಕೊಂಡೇ ಬರುತ್ತಾರೆ. ಏನಾದರೂ ಸಾಧನೆ ಮಾಡಬೇಕು, ಸಮಾಜಕ್ಕೆ ಈ ಮೂಲಕ ಕಾಣಿಕೆ ನೀಡಬೇಕು ಎಂಬ ಸದುದ್ದೇಶ ಇಟ್ಟುಕೊಂಡೇ ಈ ಮಾಯಾಲೋಕವನ್ನು ಪ್ರವೇಶಿಸುತ್ತಾರೆ. ಆದರೆ, ಅವರು ಕಾಲಿಡುವ ಸಂಸ್ಥೆ ಮತ್ತು ಅದನ್ನು ನಡೆಸುತ್ತಿರುವ ‘ಸಂ’ಪಾದಕ ಭ್ರಷ್ಟನಾಗಿದ್ದರೆ, ಆ ಯುವಕ-ಯುವತಿಯರು ಕೂಡ ದಾರಿ ಕಾಣದೇ ತಪ್ಪು ಹಾದಿ ಹಿಡಿಯುತ್ತಾರೆ.

ಪತ್ರಕರ್ತ ವೃತ್ತಿಗೇ ಕಳಂಕ ಹಚ್ಚುತ್ತಿರುವ ಬೆಳೆವಣಿಗೆಗಳ ಬಗ್ಗೆ ಗಂಭೀರವಾಗಿ ಆಲೋಚಿಸಲು, ದನಿ ಎತ್ತಲು, ನಿರ್ದಾಕ್ಷಿಣ್ಯ ನಿರ್ಧಾರ ಕೈಗೊಳ್ಳಲು ಇದು ಸಕಾಲ ಎಂದು ನಾನು ನಂಬುತ್ತೇನೆ.

*ಲೇಖಕರು ಮೂಲತಃ ದಕ್ಷಿಣ ಕನ್ನಡದವರು, ಜೀವಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿದ್ದಾರೆ. ಮುದ್ರಣ, ದೃಶ್ಯ ಹಾಗೂ ಡಿಜಿಟಿಲ್ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ ರಂಗದಲ್ಲಿ ಅವರದು 25 ವರ್ಷಗಳ ಅನುಭವ. ‘ಥೇಮ್ಸ್ ತಟದ ತವಕ ತಲ್ಲಣ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

One Response to " ಮಾಧ್ಯಮ ರಂಗದ ಭ್ರಷ್ಟಾಚಾರ ಪಾಪ ತೊಳೆಯಲು ಸಕಾಲ

-ಸತೀಶ್ ಚಪ್ಪರಿಕೆ.

"

Leave a Reply

Your email address will not be published.